ಪಂಪ ಬಾರತ ಓದು – 8ನೆಯ ಕಂತು

– ಸಿ.ಪಿ.ನಾಗರಾಜ.

ಪಾತ್ರಗಳು

ಗಾಂಧಾರಿ – ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರನ ಹೆಂಡತಿ. ಪಟ್ಟದ ರಾಣಿ
ಧೃತರಾಷ್ಟ್ರ – ಹಸ್ತಿನಾವತಿಯ ರಾಜ.
ವ್ಯಾಸ – ಒಬ್ಬ ಮುನಿ. ಪರಾಶರ ಮುನಿ ಮತ್ತು ಯೋಜನಗಂದಿಯ ಮಗ.
ವಿದುರ – ಅಂಬಿಕೆಯ ದಾಸಿ ಮತ್ತು ವ್ಯಾಸನ ಮಗ.
ದುರ್ಯೋಧನ  – ದ್ರುತರಾಶ್ಟ್ರ ಮತ್ತು ಗಾಂದಾರಿಯ ಹಿರಿಯ ಮಗ
ದುಶ್ಶಾಸನ – ದುರ‍್ಯೋದನನ ತಮ್ಮ

============================

ಗಾಂದಾರಿಯ ಆತಂಕ

ಭರತಕುಲತಿಲಕರಪ್ಪ ಇರ್ವರ್ ಮಕ್ಕಳನ್ ಪೆತ್ತು ಕೊಂತಿ ಸಂತಸದ ಅಂತಮನ್ ಎಯ್ದಿ ಇರ್ಪುದುಮ್, ಅತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಮ್ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ –

ಗಾಂಧಾರಿ: ( ತನ್ನಲ್ಲಿಯೇ) ಸಂತತಿಗೆ ಪಿರಿಯ ಮಕ್ಕಳನ್ ಆನ್ ತಡೆಯದೆ ಪಡೆವೆನ್ ಎಂದೊಡೆ, ಎನ್ನಿಮ್ ಮುನ್ನಮ್ ಕೊಂತಿಯೆ ಪಡೆದಳ್. ಗರ್ಭದ ಚಿಂತೆಯದು ಇನ್ನೇವುದು…

(ಎಂದು ಬಸಿಱಮ್ ಪೊಸೆದಳ್. ಅಸುರರ್ ಪಾಲ್ಗಡಲಮ್ ಮಗುಳ್ದು ಪೊಸೆದೊಡೆ, ಪೊಸೆದಲ್ಲಿ ಕಾಳಕೂಟ ಅಂಕುರಮ್ ಅಸದಳಮ್ ಒಗೆದಂತೆ ಬಸಿಱಿಮ್ ನೂಱೊಂದು ಅರುಣಾಕೀರ್ಣಮ್ ಪಿಂಡಮ್ ಅಂದು ಒಗೆದುವು. ಅವಮ್ ಕಂಡು ಕಿನಿಸಿ ಕಿರ್ಚೆಳ್ದು..)

ಗಾಂಧಾರಿ: ಅವೆಲ್ಲವಮ್ ಪೊಱಗೆ ಬಿಸುಟು ಬನ್ನಿಮ್

( ಎಂಬುದುಮ್ ವ್ಯಾಸಭಟ್ಟಾರಕನ್ ಬಂದು ಗಾಂಧಾರಿಯನ್ ಬಗ್ಗಿಸಿ..)

ವ್ಯಾಸ: ಒಂದೆ ಗರ್ಭದೊಳ್ ನಿನ್ನ ಸಂತತಿಗೆ ನೂರ್ವರ್ ಉದಗ್ರ ಸುತರ್ಕಳ್ ಒದವುಗೆ ಎನೆ, ಕೆಮ್ಮನೆ ಇಂತು ಪೊಸೆದು ಇಕ್ಕಿದೆ… ಪೊಲ್ಲದು ಗೆಯ್ದೆ.

(ಎಂದು ಮುನಿ ಮಾಣದೆ ಸೃಷ್ಟಿಗೆ ಚೋದ್ಯಮ್ ಅಪ್ಪಿನಮ್ ನೂಱು ಪಿಂಡಮುಮನ್ ಆಗಳೆ ತೀವಿದ ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿ ಇಟ್ಟೊಡೆ, ಅಂತು ನೂರ್ವರೊಳ್ ಒರ್ವನ ಅಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಮ್… ಪ್ರತಿಮೆಗಳ್ ಅಳ್ತುವು… ಧಾತ್ರಿ ಅತಿ ರಭಸದೆ ಮೊಳಗಿದುದು… ದೆಸೆಗಳ್ ಉರಿದುವು… ಭೂತ ಪ್ರತತಿಗಳ್ ಆಡಿದುವು… ಶಿವಾ ನಿವಹಂಗಳ್ ಅತಿ ರಮ್ಯಸ್ಥಾನದೊಳ್ ಒಳಱಿದುವು. ಅಂತು ಒಗೆದ ಅನೇಕ ಉತ್ಪಾತಂಗಳಮ್ ಕಂಡು ಮುಂದಱಿವ ಚದುರ ವಿದುರನ್ ಇಂತು ಎಂದನ್.

ವಿದುರ: ಆನ್ ಅಱಿವೆನ್. ದಲ್, ಈತನೆ ನಮ್ಮ ಕುಲಕ್ಕಮ್ ಕೇತು. ಅಲ್ಲದಂದು ಏಕೆ ಇನಿತು ಉತ್ಪಾತಮ್ ತೋರ್ಪುವು. ಈತನ ಪೆಱಗೆ ಬಿಸುಡುವುದು. ಉಳಿದ ಸುತರೆ ಸಂತತಿಗೆ ಅಪ್ಪರ್.

(ಎಂದೊಡಮ್ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಮ್ ಗಾಂಧಾರಿಯುಮ್ ಏಗೆಯ್ದುಮ್ ಒಡಂಬಡದೆ ಇರ್ದೊಡೆ, ಮಹಾ ಬ್ರಾಹ್ಮಣರಿಂದಮ್ ಉತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಮ್ ಬಳೆಯಿಸಿ. ಬದ್ದವಣಮಮ್ ಬಾಜಿಸಿ ಮಂಗಳಮಮ್ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನ್ ಇಟ್ಟು, ಮತ್ತಿನ ಕೂಸುಗಳ್ಗೆಲ್ಲಮ್ ದುಶ್ಶಾಸನ ಆದಿಯಾಗಿ ನಾಮಂಗಳನ್ ಇಟ್ಟು ಪರಕೆಯಮ್ ಕೊಟ್ಟು ಸುಕಮ್ ಇರ್ಪಿನೆಗಮ್…)

============================

ಪದ ವಿಂಗಡಣೆ ಮತ್ತು ತಿರುಳು

ಭರತ+ಕುಲ+ತಿಲಕರ್+ಅಪ್ಪ; ಕುಲ=ವಂಶ/ಮನೆತನ; ತಿಲಕ=ಹಣೆಯ ಮೇಲೆ ಇಟ್ಟುಕೊಳ್ಳುವ ಕುಂಕುಮ ಇಲ್ಲವೇ ಇನ್ನಿತರ ವಸ್ತುಗಳ ಬೊಟ್ಟು; ಕುಲತಿಲಕ=ತಾನು ಹುಟ್ಟಿರುವ ಮನೆತನಕ್ಕೆ ಒಳ್ಳೆಯ ಹೆಸರನ್ನು ತಂದಿರುವ/ತರುವ ವ್ಯಕ್ತಿ; ಅಪ್ಪ=ಆಗಿರುವ; ಇರ್ವರ್=ಇಬ್ಬರು; ಇರ್ವರ್ ಮಕ್ಕಳು=ದರ‍್ಮರಾಯ ಮತ್ತು ಬೀಮನೆಂಬ ಇಬ್ಬರು ಮಕ್ಕಳನ್ನು; ಪೆತ್ತು=ಹೆತ್ತು/ಹಡೆದು; ಸಂತಸ=ಹಿಗ್ಗು; ಅಂತಮ್+ಅನ್; ಅಂತ=ತುತ್ತುತುದಿ/ಕೊನೆ; ಎಯ್=ಪಡೆ/ಹೊಂದು; ಇರ್ಪುದುಮ್=ಇರಲು;

ಭರತಕುಲತಿಲಕರಪ್ಪ ಇರ್ವರ್ ಮಕ್ಕಳನ್ ಪೆತ್ತು ಕೊಂತಿ ಸಂತಸದ ಅಂತಮನ್ ಎಯ್ದಿ ಇರ್ಪುದುಮ್=ಬರತ ಕುಲಕ್ಕೆ ಕೀರ‍್ತಿಯನ್ನು ತರುವಂತಹ ದರ‍್ಮರಾಯ ಮತ್ತು ಬೀಮನೆಂಬ ಇಬ್ಬರು ಮಕ್ಕಳನ್ನು ಹಡೆದು ಕುಂತಿಯ ಆನಂದದ ತುತ್ತತುದಿಯಲ್ಲಿರಲು ಅಂದರೆ ಒಲವು ನಲಿವು ನೆಮ್ಮದಿಯಿಂದ ಕಾಡಿನಲ್ಲಿ ಬಾಳುತ್ತಿರಲು;

ಅತ್ತ=ಆ ಕಡೆ/ಹಸ್ತಿನಾವತಿಯಲ್ಲಿ; ಮಹಾದೇವಿ+ಅಪ್ಪ; ಮಹಾದೇವಿ=ಪಟ್ಟದ ರಾಣಿ; ಅಪ್ಪ=ಆಗಿರುವ; ಗರ್ಭ=ಬಸಿರು; ತಡೆ=ವಿಳಂಬವಾಗು/ತಡವಾಗು; ಗರ್ಭಮ್ ತಡೆದುದರ್ಕೆ=ಹೆರಿಗೆಯಾಗಲು ತಡವಾದುದಕ್ಕೆ; ಕಿನಿಸು=ಕೋಪ; ಕಿಂಕಿರಿ+ಪೋಗಿ; ಕಿಂಕಿರಿ=ಕಳವಳ/ತಳಮಳ; ಪೋಗು=ಹೋಗು;

ಅತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಮ್ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ=ಅತ್ತ ಹಸ್ತಿನಾವತಿಯಲ್ಲಿ ದ್ರುತರಾಶ್ಟ್ರನ ಮಡದಿಯೂ ಪಟ್ಟದ ರಾಣಿಯೂ ಆದ ಗಾಂದಾರಿಯು ಕುಂತಿಗೆ ಮಕ್ಕಳಾದ ಸುದ್ದಿಯನ್ನು ಕೇಳಿ, ಅವಳಿಗಿಂತ ಮುಂಚಿತವಾಗಿ ತನಗೆ ಹೆರಿಗೆಯಾಗಲಿಲ್ಲವೆಂಬ ಹತಾಶೆಯಿಂದ ಕೋಪಗೊಂಡು ತಳಮಳಕ್ಕೆ ಒಳಗಾಗಿ;

ಸಂತತಿ=ಮನೆತನ/ವಂಶ; ಪಿರಿಯ=ಹಿರಿಯ; ಆನ್=ನಾನು; ತಡೆಯದೆ=ತಡಮಾಡದೆ; ಪಡೆವೆನ್=ಹಡೆಯುತ್ತೇನೆ/ಹೆರುತ್ತೇನೆ; ಎಂದೊಡೆ=ಎಂದುಕೊಂಡಿದ್ದರೆ; ಎನ್ನಿಮ್=ನನಗಿಂತ; ಮುನ್ನಮ್=ಮೊದಲೇ; ಪಡೆದಳ್=ಹಡೆದಳು;

ಸಂತತಿಗೆ ಪಿರಿಯ ಮಕ್ಕಳನ್ ಆನ್ ತಡೆಯದೆ ಪಡೆವೆನ್ ಎಂದೊಡೆ, ಎನ್ನಿಮ್ ಮುನ್ನಮ್ ಕೊಂತಿಯೆ ಪಡೆದಳ್=ರಾಜ್ಯದ ಪಟ್ಟಕ್ಕೆ ಹಕ್ಕನ್ನು ಹೊಂದುವ ಹಿರಿಯ ಮಕ್ಕಳನ್ನು ಯಾವ ಅಡ್ಡಿಯೂ ಇಲ್ಲದೆ ನಾನೇ ಮೊದಲು ಹಡೆಯುತ್ತೇನೆ ಎಂದುಕೊಂಡಿದ್ದರೆ, ನನಗಿಂತ ಮೊದಲೇ ಕುಂತಿಯು ಮಕ್ಕಳನ್ನು ಹೆತ್ತಳು;

ಗರ್ಭ=ಬಸಿರು; ಚಿಂತೆ+ಅದು; ಚಿಂತೆ=ಯೋಚನೆ; ಇನ್ನು+ಏವುದು; ಏವುದು=ಯಾವುದು; ಬಸಿಱನ್/ಬಸಿರನ್=ತುಂಬು ಬಸರಿಯಾಗಿದ್ದ ಗಾಂದಾರಿಯು ತನ್ನ ಹೊಟ್ಟೆಯನ್ನು; ಪೊಸೆ=ಹಿಸುಕು/ಕಿವುಚು;

ಗರ್ಭದ ಚಿಂತೆಯದು ಇನ್ನೇವುದು ಎಂದು ಬಸಿಱಮ್ ಪೊಸೆದಳ್=ನನ್ನ ಬಸಿರಿನ ಬಗ್ಗೆ ಇನ್ನೇನು ತಾನೆ ಚಿಂತಿಸಲಿ. ಅಂದರೆ ಹುಟ್ಟಿನಲ್ಲಿ ಹಿರಿಯತನವನ್ನು ಕಳೆದುಕೊಳ್ಳುವ ನನ್ನ ಮಕ್ಕಳಿಗೆ ರಾಜ್ಯದ ಪಟ್ಟ ದೊರೆಯುವುದಿಲ್ಲ ಎಂಬ ಸಂಕಟದಿಂದ ತುಂಬು ಬಸರಿಯಾಗಿದ್ದ ಗಾಂದಾರಿಯು ತನ್ನ ಹೊಟ್ಟೆಯನ್ನು ಬಲವಾಗಿ ಹಿಸುಕಿದಳು;

ಅಸುರ+ಅರ್; ಅಸುರ=ರಕ್ಕಸ; ಪಾಲ್+ಕಡಲ್+ಅಮ್; ಪಾಲ್=ಹಾಲು; ಕಡಲ್=ಸಾಗರ; ಅಮ್=ಅನ್ನು; ಮಗುಳ್=ಮತ್ತೊಮ್ಮೆ; ಪೊಸೆ=ಕದಡು/ಕಲಕು/ಕಡೆ; ಪೊಸೆದೊಡೆ=ಕಡೆದರೆ;

ಅಸುರರ್ ಪಾಲ್ಗಡಲಮ್ ಮಗುಳ್ದು ಪೊಸೆದೊಡೆ=ರಕ್ಕಸರು ಹಾಲಿನ ಕಡಲನ್ನು ಮತ್ತೊಮ್ಮೆ ಕಡೆದಾಗ; ಇದೊಂದು ಪುರಾಣದಲ್ಲಿ ನಿರೂಪಣೆಗೊಂಡಿರುವ ಕಲ್ಪಿತ ಪ್ರಸಂಗ. ದೇವತೆಗಳು ಮತ್ತು ರಕ್ಕಸರು ಮಂದರ ಪರ‍್ವತವನ್ನು ಕಡೆಗೋಲನ್ನಾಗಿ ಮಾಡಿಕೊಂಡು ಹಾಲಿನ ಕಡಲನ್ನು ಕಡೆದಾಗ, ಅಮ್ರುತ ಮತ್ತು ನಂಜು ಹುಟ್ಟಿ ಬಂದವು. ಅಮ್ರುತವನ್ನು ದೇವತೆಗಳು ಅಪಹರಿಸಿದರು ಮತ್ತು ನಂಜನ್ನು ಶಿವನು ಕುಡಿದನು. ಅಮೃತವನ್ನು ಪಡೆಯುವುದಕ್ಕಾಗಿ ರಕ್ಕಸರು ಮತ್ತೊಮ್ಮೆ ಹಾಲಿನ ಕಡಲನ್ನು ಕಡೆದಾಗ;

ಪೊಸೆದ+ಅಲ್ಲಿ; ಕಾಳಕೂಟ=ಒಂದು ಬಗೆಯ ನಂಜಿನ/ವಿಶದ ಹೆಸರು; ಅಂಕುರ=ಮೊಳಕೆ; ಅಸದಳ=ಅತಿ ಹೆಚ್ಚಾಗಿ/ಅತಿಶಯವಾಗಿ; ಒಗೆದ+ಅಂತೆ; ಒಗೆ=ಹುಟ್ಟು/ಹೊರಹೊಮ್ಮು/ಕಾಣಿಸಿಕೊಳ್ಳು;

ಪೊಸೆದಲ್ಲಿ ಕಾಳಕೂಟ ಅಂಕುರಮ್ ಅಸದಳಮ್ ಒಗೆದಂತೆ=ಹಾಲಿನ ಕಡಲನ್ನು ಕಡೆದಾಗ ಕಾಳಕೂಟವೆಂಬ ನಂಜಿನ ಮೊಳಕೆಗಳು ದಟ್ಟವಾಗಿ ಹುಟ್ಟಿಬಂದಂತೆ;

ಬಸಿಱಿಮ್/ಬಸಿರಿಮ್=ಹೊಟ್ಟೆಯಿಂದ; ನೂಱ್+ಒಂದು; ಅರುಣ+ಆಕೀರ್ಣಮ್; ಅರುಣ=ಕೆಂಪು ಬಣ್ಣ; ಆಕೀರ್ಣ=ತುಂಬಿದುದು/ಕಿಕ್ಕಿರಿದುದು; ಪಿಂಡ=ತಾಯಿಯ ಹೊಟ್ಟೆಯಲ್ಲಿ ರೂಪುಗೊಳ್ಳುತ್ತಿರುವ ಮಗುವಿನ ದೇಹ; ಅರುಣಾಕೀರ್ಣ ಪಿಂಡ=ರಕ್ತದಿಂದ ತೊಯ್ದಿರುವ ಪಿಂಡ; ಅಂದು=ಆಗ; ಒಗೆದುವು=ಹೊರಬಿದ್ದವು;

ಬಸಿಱಿಮ್ ನೂಱೊಂದು ಅರುಣಾಕೀರ್ಣಮ್ ಪಿಂಡಮ್ ಅಂದು ಒಗೆದುವು=ತುಂಬು ಬಸರಿಯಾಗಿದ್ದ ಗಾಂದಾರಿಯ ಹೊಟ್ಟೆಯಿಂದ ರಕ್ತದಿಂದ ನೆನೆದು ಮುದ್ದೆಯಾಗಿರುವ ನೂರೊಂದು ಪಿಂಡಗಳು ಆಗ ಹೊರಬಿದ್ದವು;

ಅವಮ್=ಅವನ್ನು; ಕಿನಿಸು=ಕೋಪ; ಕಿರ್ಚು+ಎಳ್ದು; ಕಿರ್ಚು=ಬೆಂಕಿ; ಎಳ್ದು=ಎದ್ದು; ಕಿರ್ಚೆಳ್ದು=ಬೆಂಕಿಯು ದಗದಗನೆ ಉರಿಯುತ್ತ; ಇದು ಒಂದು ರೂಪಕವಾಗಿ ಗಾಂದಾರಿಯ ಮನದಲ್ಲಿ ಉಂಟಾದ ಅತಿಯಾದ ಸಂಕಟವನ್ನು ಸೂಚಿಸುತ್ತಿದೆ;

ಅವಮ್ ಕಂಡು ಕಿನಿಸಿ ಕಿರ್ಚೆಳ್ದು=ಆ ನೂರೊಂದು ಪಿಂಡಗಳನ್ನು ನೋಡಿ ಇನ್ನೂ ಹೆಚ್ಚಿನ ಹತಾಶೆಯಿಂದ ಕೆರಳಿ ಕೋಪದಿಂದ ಉರಿಯುತ್ತ;

ಅವು+ಎಲ್ಲವಮ್; ಪೊಱಗೆ/ಪೊರಗೆ=ಹೊರಕ್ಕೆ; ಬಿಸುಟು=ಎಸೆದು; ಬನ್ನಿಮ್=ಬನ್ನಿರಿ; ಎಂಬುದುಮ್=ಎಂದು ಹೇಳಲು;

ಅವೆಲ್ಲವಮ್ ಪೊಱಗೆ ಬಿಸುಟು ಬನ್ನಿಮ್ ಎಂಬುದುಮ್= ನೂರೊಂದು ಪಿಂಡಗಳೆಲ್ಲವನ್ನೂ ಹೊರಕ್ಕೆ ಎಸೆದು ಬನ್ನಿರಿ ಎಂದು ದಾಸಿಯರಿಗೆ ಹೇಳಲು;

ಭಟ್ಟಾರಕ=ರಾಜರ, ಗುರುಗಳ ,ಹಿರಿಯರ ಹೆಸರಿನ ಕೊನೆಯಲ್ಲಿ ಒಲವು ನಲಿವು ಆದರ ಸೂಚಕವಾಗಿ ಸೇರುವ ಪದ; ಬಗ್ಗು=ಗದರಿಸು;

ವ್ಯಾಸಭಟ್ಟಾರಕನ್ ಬಂದು ಗಾಂಧಾರಿಯನ್ ಬಗ್ಗಿಸಿ=ಆ ಸಮಯದಲ್ಲಿ ಅಲ್ಲಿಗೆ ಬಂದ ಪೂಜ್ಯರಾದ ವ್ಯಾಸರು ಗಾಂದಾರಿಯನ್ನು ಗದರಿ;

ಗರ್ಭ+ಒಳ್; ಒಂದೆ ಗರ್ಭದೊಳ್=ಒಮ್ಮೆ ಬಸುರಾಗಿದ್ದಾಗಲೇ; ಸಂತತಿ=ವಂಶ/ಮನೆತನ/ಪೀಳಿಗೆ; ನೂರ್ವರ್=ನೂರು ಮಂದಿ; ಉದಗ್ರ=ವೀರ/ಶೂರ; ಸುತರ್+ಕಳ್; ಸುತ=ಮಗ; ಕಳ್=ಗಳು; ಒದವು=ಉಂಟಾಗು; ಎನೆ=ಎಂದು;

ಒಂದೆ ಗರ್ಭದೊಳ್ ನಿನ್ನ ಸಂತತಿಗೆ ನೂರ್ವರ್ ಉದಗ್ರ ಸುತರ್ಕಳ್ ಒದವುಗೆ ಎನೆ=ನೀನು ಒಮ್ಮೆ ಬಸುರಾಗಿದ್ದಾಗಲೇ ವಂಶದ ಬೆಳವಣಿಗೆಗೆ ನೂರು ಮಂದಿ ಶೂರರಾದ ಗಂಡು ಮಕ್ಕಳು ಹಡೆಯಲೆಂಬ ಉದ್ದೇಶದಿಂದ ನಾನು ವರವನ್ನು ಕರುಣಿಸಿದ್ದರೆ;

ಕೆಮ್ಮನೆ=ಸುಮ್ಮನೆ/ಅನಗತ್ಯವಾಗಿ; ಇಂತು=ಈ ರೀತಿ; ಪೊಸೆದು=ಹೊಸೆದು/ಹಿಸುಕಿ; ಇಕ್ಕಿದೆ=ಹಾಕಿದೆ;

ಕೆಮ್ಮನೆ ಇಂತು ಪೊಸೆದು ಇಕ್ಕಿದೆ=ಅನಗತ್ಯವಾಗಿ ಈ ರೀತಿ ಹೊಸಕಿ ಹಾಕಿದೆ;

ಪೊಲ್ಲದು=ಕೆಟ್ಟದ್ದು/ಹೀನವಾದುದು/ಅನುಚಿತವಾದುದು; ಗೆಯ್=ಮಾಡು;

ಪೊಲ್ಲದು ಗೆಯ್ದೆ ಎಂದು=ಮಾಡಬಾರದಂತಹ ಕೆಟ್ಟ ಕೆಲಸವನ್ನು ಮಾಡಿದೆ ಎಂದು ಹೇಳಿ;

ಮಾಣ್=ಸುಮ್ಮನಿರು; ಸೃಷ್ಟಿ=ಜಗತ್ತು; ಚೋದ್ಯ=ಅಚ್ಚರಿ/ಸೋಜಿಗ; ಅಪ್ಪಿನಮ್=ಆಗುವಂತೆ;

ಮುನಿ ಮಾಣದೆ ಸೃಷ್ಟಿಗೆ ಚೋದ್ಯಮ್ ಅಪ್ಪಿನಮ್=ಗಾಂದಾರಿಯು ಮಾಡಿದ್ದನ್ನು ವ್ಯಾಸಮುನಿಯು ನೋಡಿಕೊಂಡು ಸುಮ್ಮನಾಗದೆ ಜಗತ್ತಿಗೆ ಸೋಜಿಗವುಂಟಾಗುವಂತಹ ರೀತಿಯಲ್ಲಿ;

ಆಗಳೆ=ಆ ಗಳಿಗೆಯಲ್ಲಿಯೇ; ಪಿಂಡಮುಮ್+ಅನ್; ತೀವು=ತುಂಬು; ಕಮ್ಮನೆ+ಅಪ್ಪ; ಕಮ್ಮನೆ=ಸುವಾಸನೆ/ಕಂಪು; ಅಪ್ಪ=ಆಗಿರುವ/ಆದ; ಕೊಡ+ಒಳ್; ಕೊಡ=ಮಣ್ಣಿನ ಮಡಕೆ; ತುಪ್ಪದ ಕೊಡ=ತುಪ್ಪದಿಂದ ತುಂಬಿರುವ ಮಣ್ಣಿನ ಮಡಕೆ; ಒಳ್=ಅಲ್ಲಿ; ಸಮಂತು=ಅಚ್ಚುಕಟ್ಟು/ಓರಣ/ಒಪ್ಪವಾಗಿ; ಮಡಗು=ಇಡು/ಇರಿಸು; ಇಟ್ಟೊಡೆ=ಇಡಲು;

ಆಗಳೆ ನೂಱು ಪಿಂಡಮುಮನ್ ತೀವಿದ ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿ ಇಟ್ಟೊಡೆ=ಆ ಗಳಿಗೆಯಲ್ಲಿಯೇ ನೆಲದ ಮೇಲೆ ಚೆಲ್ಲಾಡಿದ್ದ ನೂರು ಪಿಂಡಗಳನ್ನು ಗಮಗಮಿಸುತ್ತಿರುವ ತುಪ್ಪದಿಂದ ತುಂಬಿರುವ ನೂರು ಮಡಕೆಗಳಲ್ಲಿ ಒಪ್ಪವಾಗಿ ಇಡಿಸಲು;

ಅಂತು=ಆ ರೀತಿ ಇರಿಸಿದ ಮಡಕೆಗಳಲ್ಲಿ; ನೂರ್ವರ್+ಒಳ್; ನೂರ್ವರೊಳ್=ನೂರು ಪಿಂಡಗಳಲ್ಲಿ; ಒರ್ವನ=ಒಬ್ಬನ; ಅಗುರ್ಬು=ಅತಿಶಯ/ದೊಡ್ಡದು; ಪರ್ಬು=ಹಿಗ್ಗು/ಉಬ್ಬು; ಪರಿಕಲಿಸು=ಹರಡು/ಮೀರು;

ಅಂತು ನೂರ್ವರೊಳ್ ಒರ್ವನ ಅಗುರ್ಬು ಪರ್ಬಿ ಪರಕಲಿಸೆ=ಆ ರೀತಿ ಇಟ್ಟಿರುವ ನೂರು ಮಡಕೆಗಳಲ್ಲಿನ ಪಿಂಡಗಳಲ್ಲಿ ಒಂದು ಪಿಂಡವು ದೊಡ್ಡದಾಗಿ ಉಬ್ಬಿ ಮೀರಿ ಬೆಳೆಯಲು;

ಸಂಪೂರ್ಣ=ತುಂಬಿದ/ಪೂರ್ತಿಯಾಗಿ; ವಯಸ್ಕನ್+ಆಗಿ; ವಯಸ್ಕನ್=ಚೆನ್ನಾಗಿ ಬೆಳದವನು; ಘೃತ+ಘಟ+ವಿಘಟನ್+ಉಮ್+ಆಗೆ; ಘೃತ=ತುಪ್ಪ; ಘಟ=ಮಣ್ಣಿನ ಮಡಕೆ; ವಿಘಟನ=ಒಡೆಯುವುದು; ಉಮ್=ಊ; ಪುಟ್ಟುವುದು+ಉಮ್; ಪುಟ್ಟು=ಹುಟ್ಟು/ಜನಿಸು;

ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಮ್=ಪಿಂಡರೂಪದಲ್ಲಿದ್ದ ಮಗು ಈಗ ಚೆನ್ನಾಗಿ ಬೆಳೆದು ತುಪ್ಪದ ಮಡಕೆಯನ್ನು ಒಡೆದುಕೊಂಡು ಹುಟ್ಟಿಬರಲು;

ಪ್ರತಿಮೆ=ವಿಗ್ರಹ; ಅಳ್ತುವು=ಅಳತೊಡಗಿದವು;

ಪ್ರತಿಮೆಗಳ್ ಅಳ್ತುವು=ಹಸ್ತಿನಾವತಿಯ ಅರಮನೆಯಲ್ಲಿದ್ದ ವಿಗ್ರಹಗಳು ಅಳತೊಡಗಿದವು. ಇದು ಮತ್ತು ಇನ್ನು ಮುಂದೆ ಬರುವ ಕೆಲವು ಸಂಗತಿಗಳೆಲ್ಲವೂ ರೂಪಕಗಳಾಗಿ ಚಿತ್ರಣಗೊಂಡಿವೆ. ಜಡರೂಪಿಯಾದ ಪ್ರತಿಮೆಯು ಅಳುವುದಕ್ಕೆ ಸಾದ್ಯವಿಲ್ಲ. ಆದರೆ ಅಂತಹ ಜಡರೂಪಿಯ ಕಣ್ಣಿನಲ್ಲೂ ನೀರು ಬರುತ್ತಿದೆ ಎಂಬ ಕಲ್ಪಿತ ಸಂಗತಿಯ ಮೂಲಕ ಈ ಮಗುವಿನಿಂದ ಮುಂಬರಲಿರುವ ತಲೆಮಾರಿನ ಜನ ಜೀವನದಲ್ಲಿ ಬಹುಬಗೆಯ ದುರಂತಗಳು ಉಂಟಾಗುತ್ತವೆ ಎಂಬುದನ್ನು ಸೂಚಿಸಲಾಗಿದೆ;

ಧಾತ್ರಿ=ಭೂಮಂಡಲ; ಅತಿ=ಬಹಳ/ಹೆಚ್ಚಿನ; ರಭಸ=ವೇಗ/ಜೋರು; ಮೊಳಗು=ಅಬ್ಬರಿಸು/ಗಟ್ಟಿಯಾಗಿ ದನಿ ಮಾಡು;

ಧಾತ್ರಿ ಅತಿ ರಭಸದೆ ಮೊಳಗಿದುದು=ಬೂಮಂಡಲ ಜೋರಾಗಿ ಕಂಪಿಸತೊಡಗಿದ್ದರಿಂದ ದೊಡ್ಡ ದನಿಯು ಕೇಳತೊಡಗಿತು;

ದೆಸೆ=ದಿಕ್ಕು; ಉರಿ=ಬೆಂಕಿಯ ನಾಲಗೆ;

ದೆಸೆಗಳ್ ಉರಿದುವು=ಎಂಟು ದಿಕ್ಕುಗಳ ಕೊನೆಯಲ್ಲಿ ಬೆಂಕಿಯ ಕೆನ್ನಾಲಿಗೆಯು ಚಾಚಿ ಉರಿಯತೊಡಗಿತು;

ಭೂತ=ಪಿಶಾಚಿ/ದೆವ್ವ; ಪ್ರತತಿ=ಗುಂಪು; ಆಡು=ಕುಣಿ;

ಭೂತ ಪ್ರತತಿಗಳ್ ಆಡಿದುವು=ದೆವ್ವಗಳು ಕುಣಿಯತೊಡಗಿದವು;

ಶಿವಾ=ನರಿ; ನಿವಹಮ್+ಗಳ್; ನಿವಹ=ಗುಂಪು; ಒಳಱು/ಒಳರು=ಅರಚು/ಕೂಗು; ಅತಿ=ಬಹಳ; ರಮ್ಯಸ್ಥಾನ+ಒಳ್; ರಮ್ಯ=ಸುಂದರ/ಮನೋಹರ; ಸ್ಥಾನ=ಜಾಗ/ಎಡೆ; ಒಳ್=ಅಲ್ಲಿ

ಶಿವಾ ನಿವಹಂಗಳ್ ಅತಿ ರಮ್ಯಸ್ಥಾನದೊಳ್ ಒಳಱಿದುವು=ನರಿಗಳು ಬಹಳ ಸುಂದರವಾದ ಜಾಗಗಳಲ್ಲಿ ಅಂದರೆ ಜನರು ಪುಣ್ಯದ ನೆಲೆಗಳೆಂದು ನಂಬಿರುವ ಎಡೆಗಳಲ್ಲಿ ಊಳಿಡತೊಡಗಿದವು;

ಅಂತು=ಹಾಗೆ/ಆ ರೀತಿಯಲ್ಲಿ; ಒಗೆದ=ಕಾಣಿಸಿಕೊಂಡ/ಕಂಡುಬಂದ; ಉತ್ಪಾತಮ್+ಗಳ್+ಅಮ್; ಉತ್ಪಾತ=ನಿಸರ‍್ಗದಲ್ಲಿ ಕಂಡು ಬರುವ ಕೆಲವು ಬಗೆಯ ಕ್ರಿಯೆಗಳನ್ನು ಮತ್ತು ನೋಟಗಳನ್ನು ಕೇಡಿನ ಸಂಕೇತಗಳೆಂದು ಜನಸಮುದಾಯ ನಂಬಿದೆ. ಪ್ರತಿಮೆಗಳು ಅಳತೊಡಗಿದ್ದು/ಬೂಮಿಯು ದೊಡ್ಡ ದನಿಯಲ್ಲಿ ಕಂಪಿಸಿದ್ದು/ದಿಕ್ಕುಗಳಲ್ಲಿ ಕೆನ್ನಾಲಿಗೆಯ ಬೆಂಕಿ ಕಾಣಿಸಿಕೊಂಡಿದ್ದು/ದೆವ್ವಗಳು ಕುಣಿದಿದ್ದು/ನರಿಗಳು ಊಳಿಟ್ಟ ಕ್ರಿಯೆಗಳೆಲ್ಲವೂ ಕೇಡಿನ ಸೂಚಕಗಳಾಗಿ ಕಾಣಿಸಿಕೊಂಡಿವೆ;

ಅಂತು ಒಗೆದ ಅನೇಕ ಉತ್ಪಾತಂಗಳಮ್ ಕಂಡು= ಆ ರೀತಿ ಕಾಣಿಸಿಕೊಂಡ ಬಗೆ ಬಗೆಯ ಉತ್ಪಾತಗಳನ್ನು ನೋಡಿ;

ಮುನ್+ಅಱಿವ; ಮುನ್=ಮೊದಲು; ಅಱಿ=ತಿಳಿ; ಮುಂದಱಿವ=ಮುಂದಾಗುವುದನ್ನು ಮೊದಲೇ ಗ್ರಹಿಸಿಕೊಳ್ಳುವ; ಚದುರ=ಜಾಣ; ಇಂತು=ಈ ರೀತಿ;

ಮುಂದಱಿವ ಚದುರ ವಿದುರನ್=ಮುಂದೆ ಏನು ಆಗಬಹುದೆಂಬುದನ್ನು ಆಲೋಚನೆ ಮಾಡಿ ತಿಳಿದುಕೊಳ್ಳುವಂತಹ ಜಾಣತನವುಳ್ಳ ವಿದುರನು;

ಇಂತು ಎಂದನ್=ಈ ರೀತಿ ಹೇಳಿದನು;

ಆನ್=ನಾನು; ಅಱಿವೆನ್/ಅರಿವೆನ್=ತಿಳಿದಿರುವೆನು;

ಆನ್ ಅಱಿವೆನ್=ಈ ಬಗೆಯ ಉತ್ಪಾತಗಳು ಯಾವ ಬಗೆಯ ಕೇಡನ್ನು ಸೂಚಿಸುತ್ತಿವೆ ಎಂಬುದನ್ನು ನಾನು ತಿಳಿದಿರುವೆನು;

ದಲ್=ನಿಜವಾಗಿಯೂ/ಯಾವುದೇ ಅನುಮಾನವಿಲ್ಲದೆ; ಈತನೆ=ಇವನೇ; ಕುಲ=ವಂಶ/ಮನೆತನ; ಕೇತು=ಆಕಾಶದಲ್ಲಿ ಕೆಲವೊಮ್ಮೆ ಕಂಡುಬರುವ ಬೆಳಕಿನ ರಾಶಿ; ಇದು ಕಾಣಿಸಿಕೊಂಡಾಗ ಜನಸಮುದಾಯಕ್ಕೆ ಕೇಡು ತಟ್ಟುತ್ತದೆ ಎಂಬ ಹೆದರಿಕೆಯು ಜನಮನದಲ್ಲಿದೆ;

ದಲ್, ಈತನೆ ನಮ್ಮ ಕುಲಕ್ಕಮ್ ಕೇತು=ನಿಜವಾಗಿಯೂ ಈತನಿಂದ ನಮ್ಮ ಕುಲಕ್ಕೆ ಕೇಡಾಗುತ್ತದೆ;

ಅಲ್ಲದಂದು=ಹಾಗಲ್ಲದಿದ್ದರೆ; ಏಕೆ=ಯಾತಕ್ಕಾಗಿ; ಇನಿತು=ಈ ಪ್ರಮಾಣದಲ್ಲಿ; ತೋರ್=ಕಾಣು; ತೋರ್ಪುವು=ಕಂಡುಬಂದವು;

ಅಲ್ಲದಂದು ಏಕೆ ಇನಿತು ಉತ್ಪಾತಮ್ ತೋರ್ಪುವು=ಹಾಗಲ್ಲದಿದ್ದರೆ ಯಾತಕ್ಕಾಗಿ ಬಹುಬಗೆಗಳಲ್ಲಿ ಕೆಡುಕಿನ ಸೂಚನೆಗಳು ಕಾಣಿಸಿಕೊಳ್ಳುತ್ತಿದ್ದವು;

ಈತನ=ಇವನನ್ನು; ಪೆಱಗೆ=ಹೊರಕ್ಕೆ; ಬಿಸುಡು=ಎಸೆ/ತೊರೆ/ಬಿಡು;

ಈತನ ಪೆಱಗೆ ಬಿಸುಡುವುದು=ಈತನನ್ನು ಹೊರಕ್ಕೆ ಎಸೆಯುವುದು, ಅಂದರೆ ಈ ಮಗುವನ್ನು ತೊರೆಯುವುದು;

ಉಳಿ=ಹೊರತಾಗು/ಮಿಗು; ಸುತ=ಮಗ; ಅಪ್ಪರ್=ಆಗುವರು; ಎಂದೊಡಮ್=ಎಂದು ಹೇಳಿದರೂ

ಉಳಿದ ಸುತರೆ ಸಂತತಿಗೆ ಅಪ್ಪರ್ ಎಂದೊಡಮ್=ಇನ್ನುಳಿದ ಗಂಡು ಮಕ್ಕಳೇ ರಾಜನ ಸಂತತಿಯು ಉಳಿದು ಬೆಳೆದು ಬಾಳುವುದಕ್ಕೆ ಸಾಕಾಗುತ್ತಾರೆ ಎಂದು ಹೇಳಿದರೂ;

ಪುತ್ರ=ಮಗ; ಮೋಹ=ಅಕ್ಕರೆ/ಹೆಚ್ಚಿನ ಒಲವು ; ಕಾರಣಮ್+ಆಗಿ;

ಪುತ್ರಮೋಹ ಕಾರಣಮಾಗಿ=ಮಗನ ಮೇಲಣ ಮೋಹದಿಂದಾಗಿ;

ಏನ್+ಗೆಯ್ದುಮ್; ಏನ್=ಯಾವುದು; ಗೆಯ್ದುಮ್=ಮಾಡಿದರೂ; ಒಡಂಬಡು=ಒಪ್ಪು/ಸಮ್ಮತಿಸು; ಇರ್ದೊಡೆ=ಇದ್ದರೆ;

ಧೃತರಾಷ್ಟ್ರನುಮ್ ಗಾಂಧಾರಿಯುಮ್ ಏಗೆಯ್ದುಮ್ ಒಡಂಬಡದೆ ಇರ್ದೊಡೆ= ವಿದುರನು ಯಾವ ರೀತಿಯಲ್ಲಿ ಹೇಳಿದರೂ ತಂದೆಯಾದ ದ್ರುತರಾಶ್ಟ್ರನೂ ತಾಯಿಯಾದ ಗಾಂದಾರಿಯೂ ಮಗನನ್ನು ತೊರೆಯಲು ಒಪ್ಪದಿದ್ದಾಗ;

ಮಹಾ=ಹಿರಿಯ; ಬ್ರಾಹ್ಮಣರ್+ಇಂದಮ್;

ಮಹಾ ಬ್ರಾಹ್ಮಣರಿಂದಮ್=ಹಿರಿಯರಾದ ಬ್ರಾಹ್ಮಣರಿಂದ;

ಶಾಂತಿಕ=ವ್ಯಕ್ತಿಗೆ ಜೀವನದಲ್ಲಿ ಕೇಡು ತಟ್ಟದಿರಲೆಂದು ಮತ್ತು ಒಳ್ಳೆಯದಾಗಲೆಂದು ಬ್ರಾಹ್ಮಣರಿಂದ ಮಾಡಿಸುವ ಜಪ ತಪ ಹೋಮ ಮುಂತಾದ ಆಚರಣೆಗಳು; ಪೌಷ್ಟಿಕ=ಜನರು ದೇವತೆಗಳನ್ನು ಒಲಿಸಿಕೊಂಡು ಒಡವೆ ವಸ್ತುಗಳನ್ನು ಪಡೆದು ಒಲವು ನಲಿವು ನೆಮ್ಮದಿಯಿಂದ ಬಾಳಲೆಂದು ಬ್ರಾಹ್ಮಣರ ಮೂಲಕ ಮಾಡಿಸುವ ಆಚರಣೆಗಳು; ಕ್ರಿಯೆಗಳ್+ಅಮ್; ಕ್ರಿಯೆ=ಪೂಜೆಯ ಆಚರಣೆ; ಬಳೆ=ನೆರವೇರು/ನಡೆ; ಬಳೆಯಿಸಿ=ನೆರವೇರಿಸಿ;

ಉತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಮ್ ಬಳೆಯಿಸಿ=ಜೀವನದಲ್ಲಿ ಮುಂದೆ ಬರಲಿರುವ ಕೇಡನ್ನು ತಡೆಗಟ್ಟಿ ರಾಜನ ಸಂತತಿಯ ಎಲ್ಲರಿಗೂ ಒಳ್ಳೆಯದಾಗಲೆಂದು ಬಹುಬಗೆಯ ಆಚರಣೆಗಳನ್ನು ಮಾಡಿ;

ಬದ್ದವಣಮ್+ಅಮ್; ಬದ್ದವಣ=ಒಂದು ಬಗೆಯ ಮಂಗಳ ವಾದ್ಯ ; ಬಾಜಿಸು=ನುಡಿಸುವುದು/ವಾದ್ಯಗಳಿಂದ ದನಿಯು ಹೊರಹೊಮ್ಮುವಂತೆ ಮಾಡುವುದು; ಮಂಗಳಮ್+ಅಮ್; ಮಂಗಳ=ಒಳ್ಳೆಯದು/ಏಳಿಗೆ/ಶ್ರೇಯಸ್ಸು; ಪಾಡು=ಹಾಡು; ಪಾಡಿಸಿ=ಹಾಡಿಸಿ;

ಬದ್ದವಣಮಮ್ ಬಾಜಿಸಿ ಮಂಗಳಮಮ್ ಪಾಡಿಸಿ=ಬದ್ದವಣವೆಂಬ ವಾದ್ಯವನ್ನು ನುಡಿಸಿ, ಮಂಗಳಕರವಾದ ಗೀತೆಗಳನ್ನು ಹಾಡಿಸಿ; ಕೂಸು=ಮಗು; ದುರ್ಯೋಧನನ್+ಎಂದು; ಪೆಸರ್+ಅನ್;

ಕೂಸಿಂಗೆ ದುರ್ಯೋಧನನೆಂದು ಪೆಸರನ್ ಇಟ್ಟು=ಹುಟ್ಟಿದಾಗ ಅಪಶಕುನಗಳಾಗಿದ್ದ ಕೂಸಿಗೆ ದುರ್ಯೋದನ ಎಂಬ ಹೆಸರನ್ನು ಇಟ್ಟು;

ಮತ್ತಿನ=ಇನ್ನುಳಿದ; ಕೂಸುಗಳ್ಗೆ+ಎಲ್ಲಮ್;

ಮತ್ತಿನ ಕೂಸುಗಳ್ಗೆಲ್ಲಮ್=ಇನ್ನುಳಿದ ಮಕ್ಕಳೆಲ್ಲರಿಗೂ; ಆದಿ+ಆಗಿ; ಆದಿ=ಮೊದಲು; ನಾಮಂಗಳ್+ಅನ್; ನಾಮ=ಹೆಸರು;

ದುಶ್ಶಾಸನ ಆದಿಯಾಗಿ ನಾಮಂಗಳನ್ ಇಟ್ಟು=ದುಶ್ಶಾಸನ ಎಂಬ ಹೆಸರಿನಿಂದ ಮೊದಲಗೊಂಡು ಅನೇಕ ಬಗೆಯ ಹೆಸರುಗಳನ್ನು ಇಟ್ಟು; ಪರಕೆ+ಅಮ್; ಪರಕೆ=ಹರಕೆ/ಜೀವನದಲ್ಲಿ ಒಳಿತಾಗಲೆಂದು ದೇವರಿಗೆ ಸಲ್ಲಿಸುವ ಕಾಣಿಕೆ; ಸುಕ=ಜೀವನದಲ್ಲಿ ಒಲವು ನಲಿವು ನೆಮ್ಮದಿಯಿಂದ ಇರುವುದು; ಇರ್ಪ+ಅನ್ನೆಗಮ್; ಇರ್ಪ=ಇರುವ; ಅನ್ನೆಗಮ್=ತನಕ/ವರೆಗೆ;

ಪರಕೆಯಮ್ ಕೊಟ್ಟು ಸುಕಮ್ ಇರ್ಪಿನೆಗಮ್=ದೇವತೆಗಳಿಗೆ ಹರಕೆಯನ್ನು ಸಲ್ಲಿಸಿ ದ್ರುತರಾಶ್ಟ್ರ ಗಾಂದಾರಿಯ ರಾಜಕುಟುಂಬವು ಒಲವು ನಲಿವು ನೆಮ್ಮದಿಯಿಂದ ಇರಲು…

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *