ಪಂಪ ಬಾರತ ಓದು – 9ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪ ಬಾರತದ ದ್ವಿತೀಯ ಆಶ್ವಾಸದ 16 ನೆಯ ಪದ್ಯದಿಂದ 29 ನೆಯ ಪದ್ಯದ ವರೆಗಿನ ಕಾವ್ಯ ಬಾಗ)

ಪಾತ್ರಗಳು

ಪಾಂಡುರಾಜ – ಹಸ್ತಿನಾವತಿಯಲ್ಲಿ ರಾಜನಾಗಿದ್ದವನು, ಈಗ ಕಾಡಿನಲ್ಲಿ ಆಶ್ರಮವಾಸಿಯಾಗಿದ್ದಾನೆ.
ಕುಂತಿ – ಪಾಂಡುರಾಜನ ಮೊದಲನೆಯ ಹೆಂಡತಿ
ಮಾದ್ರಿ – ಪಾಂಡುರಾಜನ ಎರಡನೆಯ ಹೆಂಡತಿ
ಮಕ್ಕಳು – ದರ‍್ಮರಾಯ-ಬೀಮ-ಅರ‍್ಜುನ-ನಕುಲ-ಸಹದೇವ
ಮುನಿಜನರು – ಶತಶ್ರುಂಗ ಪರ‍್ವತದ ಬಳಿಯ ಆಶ್ರಮವಾಸಿಗಳು
ಗಾಂಗೇಯ – ಶಂತನು ಮತ್ತು ಗಂಗಾದೇವಿಯ ಮಗ
ಧೃತರಾಷ್ಟ್ರ – ಹಸ್ತಿನಾವತಿಯ ರಾಜ
ವಿದುರ – ವ್ಯಾಸ ಮತ್ತು ಅಂಬಿಕೆಯ ದಾಸಿಯ ಮಗ.
ಅಂಬಾಲೆ – ಪಾಂಡುರಾಜನ ತಾಯಿ.

============================

ಪಾಂಡುರಾಜನ ಸಾವು

ಅಂತು ಬಂದ ಬಸಂತದೊಳ್ ಮಾದ್ರಿ ತಾನ್ ಗರ್ವವ್ಯಾಲೆಯುಮ್ ಕ್ರೀಡಾನುಶೀಲೆಯುಮ್ ಅಪ್ಪುದಱಿಮ್ ವನಕ್ರೀಡಾ ನಿಮಿತ್ತದಿನ್ ಪೋಗಿ, ಬಗೆಗೆ ವಂದುವನ್ ವನಕುಸುಮಂಗಳನ್ ಅಳ್ತಿಯೊಳ್ ಆಯ್ದು ಕೊಯ್ದು ಮೆಲ್ಲನೆ ವಕುಳ ಆಳವಾಳ ತಳದೊಳ್ ಸುರಿದು, ಮತ್ತನಿತಱೊಳಮ್ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮ್ ಎಂದು ಬೇಳ್ಪನಿತನೆ ಅಂಬುಜ ಸೂತ್ರದಿಂದೆ ಮಾಡಿ ತೊಟ್ಟು, ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ… ಆಕೆ ಬಸಂತ ಕಾಂತೆವೋಲ್ ಕರಮ್ ಒಪ್ಪಿದಳ್.

ಮಿಳಿರ್ವ ಕುರುಳ್ಗಳೊಳ್ ತೊಡರ್ದು , ದೇಸಿಯನ್ ಆವಗಮ್ ಈವ ಚೆನ್ನ ಪೂಗಳನ್ ಅವನ್ ಒಯ್ಯನೆ ಓಸರಿಸುತುಮ್, ವದನಾಬ್ಜದ ಕಂಪನ್ ಆಳ್ದು ಉಣಲ್ ಬಳಸುವ ತುಂಬಿಯನ್ ಪಿಡಿದ ನೆಯ್ದಲೊಳ್ ಒಯ್ಯನೆ ಸೋವುತುಮ್ ಇರೆ ಬೆಡಂಗೊಳಕೊಳೆ… ಸೊರ್ಕಿದ ಅಂಗಜ ಮತಂಗಜದಂತೆ ಬರ್ಪ ಮಾದ್ರಿಯನ್ ತಾಪಸ ಆಶ್ರಮದಿನ್ ಪೊಱಮಟ್ಟು ಅಂತೆ ಬನಮಮ್ ತೊಳಲ್ವ ಪಾಂಡುರಾಜನ್ ಕಂಡು…

ತೊಟ್ಟ ಪೂದುಡುಗೆ ಸೊಗಯಿಸೆ ಮೆಲ್ಲೆರ್ದೆಯೊಳ್ ಗಾಡಿ ತಡಮಾಡೆ, ದಿಟ್ಟಿಗಳೊಳ್ ಅನಂಗರಾಗರಸಮ್ ಉಣ್ಮುವಿನಮ್ ನಡೆ ನೋಡಿ ನೋಡಿ, ಆ ವಿಭು ತನ್ನ ಶಾಪಮನ್ ಬಗೆಯದೆ ಮಿಳ್ತುದೇವತೆಯನ್ ಅಳ್ಕಱ್ ಅಳುರ್ಕೆಯಿನ್ ಅಪ್ಪುವಂತೆವೋಲ್ ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ .

ಅಂತು ವಿಷಮ ವಿಷವಲ್ಲಿಯನ್ ಅಪ್ಪಿದಂತೆ ಅಪ್ಪುವುದುಮ್ , ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ ಬಿಗಿದು ಅಮರ್ದು ಇರ್ದ ತೋಳ್ ಸಡಿಲೆ…ಮೊಗಮ್ ಜೋಲೆ, ಮೊಗದಿಂದಮ್ ಒಯ್ಯಗೊಯ್ಯಗೆ ಮಗುಳ್ದಂತಿರೆ ನಗೆಗಣ್ಗಳಾಲಿ ಮುಚ್ಚಿರೆ,…ಸುಯ್ ಅಡಂಗೆ,.. ಮಱಸೊಂದಿದ ಅಂದದೊಳೆ ಮೆಲ್ಲಗೆ ಜೋಲ್ದ ನಿಜೇಶನನ್ ಆ ಲತಾಂಗಿ ತೊಟ್ಟಗೆ ಕೊಳೆ ನೋಡಿ

ಮಾದ್ರಿ: ಇನಿಯನ್ ಮಱಸೊಂದಿದನೋ ಬಳಲ್ದನೋ… ಕೆಟ್ಟೆನ್( ಎಂದು ಪಱಿಪಟ್ಟ ಸುಯ್ಯುಮನ್, ಕೋಡುವ ಮೆಯ್ಯುಮನ್ ಕಂಡು ಪರಲೋಕ ಪ್ರಾಪ್ತನ್ ಆದುದನ್ ಅಱಿತು…)

ಮಾದ್ರಿ: ಓಪನೆ, ತಾಪಸನ ಶಾಪಮೆಂಬುದು ಪಾಪದ ರೂಪ. ನೀನ್ ಅಱಿತುಮ್ ಅಱೆಯದಂತೆ ಮನಂಗಾಪಳಿದು ಬಂದು ಎನ್ನ ಪಾಪಕರ್ಮಿಯ ಮೆಯ್ಯನ್ ಏಕೆ ಮುಟ್ಟಿದೆ ….ನೀನ್ ನಿನ್ನ ಸಾವನ್ ಅದನ್ ಎನಸುನ್ ನೆನೆಯದೆ ನೆರೆವೆನ್ ಎಂಬ ಬಗೆಯೊಳ್ ಬಂದಯ್. ಅರಸ, ನಿನ್ನೊಡನೆ ವಂದು ದಿವದೊಳ್ ನಿನ್ನ ಮನೋರಥಮನ್ ನೆಱಪದೆ ಮಾಣೆನ್. ಇಂತು ಈ ಪಳುವಿನೊಳ್ ಎನ್ನ ಅರಸನನ್ ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನನ್ ಇಂದುಕುಳತಿಳಕನನ್ ಬಿದಿಯೆ ಅನ್ನೆಯದಿಂದ ಇಂತು ತಂದಿಕ್ಕುವುದೇ…

(ಎಂದು ವನದೇವತೆಗಳ್ಗೆಲ್ಲಮ್ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮನ್ ಕುಂತಿ ಕೇಳ್ದು ಭೋಂಕನೆ ಎರ್ದೆ ತೆಱೆದು…)

ಕುಂತಿ: ಆ ದೆಸೆಯೊಳ್ ಭೂಭುಜನೋ ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮ್… ಅಂತು ಆ ದೆಸೆಯೊಳ್ ಭೂಪತಿಗೆ ಏನಾದುದೊ… ಪೇಳ್, ಬಿದಿಯೆ ಕೆಟ್ಟೆನ್ ಅಳಿದನ್…

(ಎನುತ್ತುಮ್… ಭೋರ್ಗರೆದು ಅಳುತುಮ್ ಮುಡಿ ಬಿಟ್ಟೆಳಲೆ ನಡುನಡುಗೆ ಕಣ್ಣೀರ್ ಗಳಗಳನೆ ಒರ್ಮೊದಲೆ ಸುರಿಯೆ ಪರಿತರೆ, ಆಗಳ್ ಬಳಿಯನೆ ಮಕ್ಕಳ್ ಪೆಱ ಪೆಱಗನ್ ಅಂತೆ ಪರಿತಂದು… ಅಂತು ತನ್ನ ನಲ್ಲನ ಕಳೇವರಮನ್ ತಳ್ಕೈಸಿಕೊಂಡು ತನ್ನ ಸಾವನ್ ಪರಿಚ್ಛೇದಿಸಿ ಪಲ್ಲನ್ ಸುಲಿಯುತ್ತುಮ್ ಇರ್ದ ಮಾದ್ರಿಯನ್ ಕಂಡು ಕುಂತಿ ನೆಲದೊಳ್ ಮೆಯ್ಯನ್ ಈಡಾಡಿ ನಾಡಾಡಿಯಲ್ಲದೆ ಪಳಯಿಸಿ…)

ಕುಂತಿ: ಅರಸ, ಅಡವಿಯೊಳ್ ಎನ್ನುಮನ್ , ನಡಪಿದ ಈ ಎನ್ನ ಶಿಶುಗಳುಮನ್ ಇರಿಸಿ ನೀನ್ ಪೇಳದೆ ಪೋದಡಮ್ ಏನೋ … ನಿನ್ನ ಬಿಸುಟು ಎಂತಿರ್ಪೆನ್… ನಿನ್ನ ಬಳಿಯನೆ ನಡೆತರ್ಪೆನ್..

(ಮಾದ್ರಿಯನ್ನು ಕುರಿತು)

ನೀನ್ ಈ ಕೂಸುಗಳನ್ ಕೈಕೊಂಡು ನಡಪು… ನಲ್ಲನನ್ ಎನಗೆ ಒಪ್ಪಿಸು… ಆತನ್ ಆದುದನ್ ಆನ್ ಅಪ್ಪೆನ್.

(ಎನೆ ಮಾದ್ರಿ ಇಂತು ಎಂದಳ್…)

ಮಾದ್ರಿ: ಇಂದಿನ ಒಂದು ಸೂಳುಮನ್ ಇನಿಯನ್ ಎನಗೆ ದಯೆಗೆಯ್ದನ್… ಎನ್ನ ಸೂಳಮ್ ಆನ್ ಎನಿತಾದೊಡಮ್ ಈವೆನೆ. ಮತ್ತನಯರ್ ನಿನಗೆ ಕೆಯ್ಯೆಡೆ. ಪಲುಂಬದಿರ್ ಪೆಱಪೆಱವನ್…

(ಎಂದು ಮಾದ್ರಿ ತಪೋವನದ ಮುನಿಜನಮುಮ್ ವನದೇವತಾಜನಮುಮ್ ತನ್ನ ಅಣ್ಮಮ್ ಪೊಗಳೆ ಪಾಂಡುರಾಜನೊಡನೆ ದಾಹೋತ್ತರದಂತೆ ಕಿರ್ಚಿಂಗೆ ಕುಳದೊಳಮ್ ಚಲದೊಳಮ್ ಆವ ಕಂದುಮ್ ಕುಂದುಮ್ ಇಲ್ಲದೆ ತನ್ನ ಒರೆಗಮ್ ದೊರೆಗಮ್ ಆರುಮ್ ಇಲ್ಲ ಎನಿಸಿದಾಗಳ್, ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರ್ ಆ ಕಾಂತೆಯನ್ ಇಂತೆಂದು ಸಂತೈಸಿದರ್…)

ಮುನಿಜನ: ಅಳ್ತೊಡೆ ಅವರ್ ಏಳ್ವೊಡಮ್ ಅಂತು ಅವರಿಮ್ ಬಳಿಕ್ಕೆ ತಾಮ್ ಉಳಿವೊಡಮ್ ಕಳಿದವರ್ಗೆ ಅಳ್ವುದು. ಅಂತು ಅವರ್ ಏಳರ್. ತಮಗಮ್ ಅಣಮ್ ಬರ್ದುಕಿಲ್ಲ. ಧರ್ಮಮಮ್ ಗಳಿಸಯಿಸಿಕೊಳ್ವುದೊಂದೆ ಚದುರ್. ಇಂತುಟು ಸಂಸೃತಿ ಧರ್ಮಮ್. ಏಕೆ ಬಾಯಳಿವುದು. ಇದೇಕೆ ಚಿಂತಿಸುವುದು. ಇದೇಕೆ ಪಲುಂಬುವುದು. ಇದೇಕೆ ನೋವುದೋ… .ಅಂತುಮ್ ಅಲ್ಲದೆ… ಬಿಡದೆ ಅಳಲ್ವ ಬಂಧುಜನದ ಒಳ್ಕುಡಿಯದ ಕಣ್ಣೀರ ಪೂರಮ್ ಆ ಪ್ರೇತಮನ್ ಓಗಡಿಸದೆ ಸುಡುವುದು ಗಡ. ಸರೋಜದಳಾಕ್ಷೀ , ಈ ಶೋಕಮನ್ ಇನ್ನು ಉಡುಗುವುದು… .ಇಂತು ನೀನ್ ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನ್ ಅಱಿಯದ ಅಜ್ಞಾನಿಗಳಂತೆ ವಿಪ್ರಳಾಪಮ್ ಗೆಯ್ದೆ ಅಪ್ಪೊಡೆ, ಈ ಕೂಸುಗಳ್ ಮನಮ್ ಇಕ್ಕಿಯುಮ್ ಎರ್ದೆ ಇಕ್ಕಿಯುಮ್ ಕಿಡುವರ್

( ಎಂದು ಅನೇಕ ಉಪಶಾಂತವಚನಂಗಳಿಂದಮ್ ಆಕೆಯ ಉಬ್ಬೆಗಮನ್ ಆಱೆ ನುಡಿದುಮ್, ಅಲ್ಲಿಯ ಮುನಿಜನಮ್ ಎಲ್ಲಮ್ ಒಡಗೊಂಡು ಆ ಕೂಸುಗಳುಮನ್ ಕುಂತಿಯುಮನ್ ಮುಂದಿಟ್ಟು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮ್ ಅಂಬಾಲೆಗಮ್ ಪಾಂಡುರಾಜನ ವೃತ್ತಾಂತಮನ್ ಅಱಿಪಿದೊಡೆ…)

============================

ಪದ ವಿಂಗಡಣೆ ಮತ್ತು ತಿರುಳು

ಅಂತು = ಆ ರೀತಿಯಲ್ಲಿ; ಬಸಂತ+ಒಳ್; ಬಸಂತ = ವಸಂತ ಕಾಲ/ಮರಗಿಡಗಳಲ್ಲಿನ ಹಣ್ಣೆಲೆ ಉದುರಿ ಹೊಸ ಚಿಗುರು ಕಚ್ಚುವ ಕಾಲ; ಗರ್ವವ್ಯಾಲೆ+ಉಮ್; ಗರ್ವವ್ಯಾಲಿ = ಮದಿಸಿದ ಆನೆ; ಗರ್ವವ್ಯಾಲೆ = ಮದಿಸಿದ ಆನೆಯಂತಿರುವವಳು. ಮಾದ್ರಿಯ ಮಯ್ ಮನದ ಉತ್ಸಾಹದಿಂದ ಕೂಡಿದ ವರ‍್ತನೆಯನ್ನು ಸೂಚಿಸಲು ಈ ರೂಪಕವನ್ನು ಬಳಸಲಾಗಿದೆ; ಉಮ್ = ಊ; ಕ್ರೀಡಾ+ಅನುಶೀಲೆ+ಉಮ್; ಕ್ರೀಡಾ = ಆಟ/ವಿನೋದ; ಅನುಶೀಲೆ = ಆಸಕ್ತಿಯುಳ್ಳವಳು; ಅಪ್ಪುದಱಿಮ್ = ಆಗಿದ್ದುದರಿಂದ; ವನ = ಕಾಡು; ವನಕ್ರೀಡಾ = ಕಾಡಿನಲ್ಲಿ ವಿಹರಿಸುವುದು; ನಿಮಿತ್ತ+ಇನ್; ನಿಮಿತ್ತ = ಕಾರಣ/ಉದ್ದೇಶ; ಇನ್ = ಇಂದ; ಪೋಗಿ = ಹೋಗಿ;

ಅಂತು ಬಂದ ಬಸಂತದೊಳ್ ಮಾದ್ರಿ ತಾನ್ ಗರ್ವವ್ಯಾಲೆಯುಮ್ ಕ್ರೀಡಾನುಶೀಲೆಯುಮ್ ಅಪ್ಪುದಱಿಮ್ ವನಕ್ರೀಡಾ ನಿಮಿತ್ತದಿನ್ ಪೋಗಿ = ಆ ರೀತಿ ಬಂದ ವಸಂತಕಾಲದಲ್ಲಿ ಒಂದು ದಿನ ಮದಿಸಿದ ಆನೆಯಂತೆ ಉತ್ಸಾಹ ತುಂಬಿದವಳು ಮತ್ತು ಮಯ್ ಮನಕ್ಕೆ ಆನಂದವನ್ನು ನೀಡುವ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳವಳಾದ ಮಾದ್ರಿಯು ನಿಸರ‍್ಗದ ಚೆಲುವನ್ನು ಸವಿಯಬೇಕೆಂಬ ಉದ್ದೇಶದಿಂದ ಕಾಡಿಗೆ ಹೋಗಿ;

ಬಗೆ = ಮನಸ್ಸು; ವಂದುವನ್ = ಬಂದುದನ್ನು; ವನ+ಕುಸುಮಮ್+ಗಳ್+ಅನ್; ಕುಸುಮ = ಹೂವು; ಅನ್ = ಅನ್ನು; ಅಳ್ತಿ+ಒಳ್; ಅಳ್ತಿ = ಪ್ರೀತಿ; ಆಯ್ದು = ಆರಿಸಿ; ಕೊಯ್ದು = ಬಿಡಿಸಿ; ಮೆಲ್ಲನೆ = ನಯವಾಗಿ; ವಕುಲ = ಒಂದು ಬಗೆಯ ಮರದ ಹೆಸರು; ಆಳವಾಳ = ಮರದ ಬುಡ; ತಳ+ಒಳ್; ತಳ = ಕೆಳಗಡೆ; ಸುರಿ = ಹಾಕು;

ಬಗೆಗೆ ವಂದುವನ್ ವನಕುಸುಮಂಗಳನ್ ಅಳ್ತಿಯೊಳ್ ಆಯ್ದು ಕೊಯ್ದು ಮೆಲ್ಲನೆ ವಕುಳ ಆಳವಾಳ ತಳದೊಳ್ ಸುರಿದು = ಮಾದ್ರಿಯು ತನ್ನ ಮನಸ್ಸಿಗೆ ಮೆಚ್ಚುಗೆಯಾದ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆಯ್ದು ಬಿಡಿಸಿ ತಂದು ವಕುಲ ಮರದ ಬುಡದಲ್ಲಿ ಹೂವನ್ನೆಲ್ಲಾ ಸುರಿದು;

ಮತ್+ಅನಿತಱ್+ಒಳಮ್; ಅನಿತು = ಅಶ್ಟು; ಒಳಮ್ = ಒಳಗೆ; ಮತ್ತನಿತಱೊಳಮ್ = ಅವುಗಳಲ್ಲಿ; ಮುಗುಳ್+ಸರಿಗೆ; ಮುಗುಳ್ = ಮೊಗ್ಗು; ಸರಿಗೆ = ತೋಳಿಗೆ ಇಲ್ಲವೇ ಕಾಲಿಗೆ ತೊಡುವ ಒಂದು ಬಗೆಯ ಒಡವೆ; ಮುಗುಳ್ಸರಿಗೆ = ಮೊಗ್ಗಿನ ಸರಿಗೆ; ತೋಳ್+ಬಳೆ; ಕಂಕಣವಾರ = ಕಡಗ; ಅಂಬುಜ = ತಾವರೆ; ಸೂತ್ರ = ದಾರ/ನೂಲು; ಅಂಬುಜ ಸೂತ್ರ = ತಾವರೆಯ ದಂಟು; ಬೇಳ್ = ಮೋಹ; ಬೇಳ್ಪನಿತನೆ = ಆಶೆಪಟ್ಟಿದ್ದನ್ನೆ ;

ಮತ್ತನಿತಱೊಳಮ್ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮ್ ಎಂದು ಅಂಬುಜ ಸೂತ್ರದಿಂದೆ ಬೇಳ್ಪನಿತನೆ ಮಾಡಿ ತೊಟ್ಟು = ಹಾಗೆ ತಂದು ಸುರಿದ ಹೂವಿನ ರಾಶಿಯಲ್ಲಿ ತಾನು ಆಸೆಪಟ್ಟ ಒಡವೆಗಳಾದ ಮುಗುಳ್ಸರಿಗೆ, ತೋಳಿನ ಬಳೆ, ಕಡಗಗಳನ್ನು ತಾವರೆಯ ದಂಟಿನಿಂದ ಕಟ್ಟಿ ತೊಟ್ಟುಕೊಂಡು;

ಪೂ+ತುಡುಗೆ; ಪೂ = ಹೂವು; ತುಡುಗೆ = ಒಡವೆ; ಮದನ = ಕಾಮದೇವ. ಹೆಣ್ಣುಗಂಡಿನ ಕೂಟಕ್ಕೆ ಪ್ರೇರಣೆಯನ್ನು ನೀಡುವ ದೇವತೆಯನ್ನಾಗಿ ಕಾಮದೇವನನ್ನು ಜನಸಮುದಾಯ ಕಲ್ಪಿಸಿಕೊಂಡಿದೆ. ವ್ಯಕ್ತಿಗಳ ಮನದಲ್ಲಿ ಕಾಮವನ್ನು ಕೆರಳಿಸಲು ಮದನನು ಹೂವಿನ ಬಾಣವನ್ನು ಎದೆಗೆ ಬಿಡುತ್ತಾನೆ ಎಂಬ ಕಲ್ಪನೆಯಿದೆ; ಪೂ+ಕಣೆಗೆ+ಎಣೆ+ಆಗಿ+ಇರೆ; ಕಣೆ = ಬಾಣ; ಪೂಗಣೆ = ಹೂವಿನ ಬಾಣ; ಎಣೆ = ಸಮಾನ/ಸಾಟಿ;

ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ = ಆ ರೀತಿ ಮಾದ್ರಿಯು ಅಲಂಕರಿಸಿಕೊಂಡ ಹೂವಿನ ಒಡವೆಗಳು ಕಾಮದೇವನು ಗಂಡು ಹೆಣ್ಣಿನ ಮೇಲೆ ಬಿಡುವ ಹೂಬಾಣಕ್ಕೆ ಸಮಾನವಾಗಿರಲು;

ಕಾಂತೆ+ವೋಲ್; ಕಾಂತೆ = ಹೆಂಗಸು; ವೋಲ್ = ಅಂತೆ/ಹಾಗೆ; ಕರ = ಹೆಚ್ಚಾಗಿ; ಒಪ್ಪಿದಳ್ = ಕಂಗೊಳಿಸಿದಳು/ಚೆಲುವಾಗಿ ಕಂಡಳು;

ಆಕೆ ಬಸಂತ ಕಾಂತೆವೋಲ್ ಕರಮ್ ಒಪ್ಪಿದಳ್ = ಮಾದ್ರಿಯು ನಿಸರ‍್ಗದ ಚೆಲುವಿನ ವಸಂತಕಾಂತೆಯಂತೆ ಬಹಳ ಮೋಹಕವಾಗಿ ಕಂಗೊಳಿಸಿದಳು;

ಮಿಳಿರ್ = ಅತ್ತಿತ್ತ ಚಲಿಸು; ಕುರುಳ್+ಗಳ್+ಒಳ್; ಕುರುಳ್ = ಕೂದಲು; ಒಳ್ = ಅಲ್ಲಿ; ತೊಡರ್ = ಸಿಕ್ಕಿಕೊಳ್ಳು/ಸುತ್ತಿಕೊಳ್ಳು; ದೇಸಿ+ಅನ್; ದೇಸಿ = ಚೆಲುವು; ಆವಗಮ್ = ಯಾವಾಗಲೂ; ಈವ = ಕೊಡುವ; ಚೆನ್ನ = ಅಂದ/ಸೊಗಸು; ಪೂ+ಗಳ್+ಅನ್; ಒಯ್ಯನೆ = ಮೆಲ್ಲನೆ; ಓಸರಿಸು = ಪಕ್ಕಕ್ಕೆ ಸರಿಸು/ತಳ್ಳು;

ಮಿಳಿರ್ವ ಕುರುಳ್ಗಳೊಳ್ ತೊಡರ್ದು, ದೇಸಿಯನ್ ಆವಗಮ್ ಈವ ಚೆನ್ನ ಪೂಗಳನ್ ಅವನ್ ಒಯ್ಯನೆ ಓಸರಿಸುತುಮ್ = ಅತ್ತಿತ್ತ ಆಡುತ್ತಿರುವ ಮುಂಗುರುಳಿನಲ್ಲಿ ಸಿಕ್ಕಿಕೊಂಡು ಮನೋಹರವಾದ ಚೆಲುವನ್ನು ನೀಡುತ್ತಿರುವ ಹೂಗಳನ್ನು ಮೆಲ್ಲನೆ ಸರಿಸುತ್ತ;

ವದನ+ಅಬ್ಜದ; ವದನ = ಮೊಗ; ಅಬ್ಜ = ತಾವರೆ; ಕಂಪು+ಅನ್; ಕಂಪು = ಪರಿಮಳ; ಅನ್ = ಅನ್ನು; ಆಳ್ದು = ಪಡೆದು; ಉಣ್ = ಕುಡಿ; ಬಳಸು = ಸುತ್ತುಗಟ್ಟು; ತುಂಬಿ+ಅನ್; ಪಿಡಿ = ಹಿಡಿದುಕೊಳ್ಳು; ನೆಯ್ದಲ್+ಒಳ್; ನೆಯ್ದಲ್ = ತಾವರೆಯಲ್ಲಿ ಒಂದು ಬಗೆಯ ಹೂವು; ಸೋವುತ+ಉಮ್; ಸೋವು = ಅಟ್ಟು/ಓಡಿಸು; ಇರೆ = ಇರಲು ; ಬೆಡಂಗು+ಒಳಕೊಳೆ; ಬೆಡಂಗು = ಒನಪು/ಒಯ್ಯಾರ/ಸೊಗಸು; ಒಳಕೊಳೆ = ಒಳಗೊಂಡಿರಲು;

ವದನಾಬ್ಜದ ಕಂಪನ್ ಆಳ್ದು ಉಣಲ್ ಬಳಸುವ ತುಂಬಿಯನ್ ಪಿಡಿದ ನೆಯ್ದಲೊಳ್ ಒಯ್ಯನೆ ಸೋವುತುಮ್ ಇರೆ ಬೆಡಂಗೊಳಕೊಳೆ = ಹೂಗಳಿಂದ ಸಿಂಗಾರಗೊಂಡಿದ್ದ ಮಾದ್ರಿಯ ಮೊಗಕಮಲದ ಬಂಡನ್ನು ಹೀರಲೆಂದು ಮುತ್ತಿಕೊಂಡಿದ್ದ ತುಂಬಿಗಳನ್ನು ತಾವರೆಯ ಹೂವಿನ ದಂಟಿನಿಂದ ಮಾದ್ರಿಯು ಅಟ್ಟುತ್ತಿರಲು, ಮಾದ್ರಿಯ ಒನಪು ಒಯ್ಯಾರ ಇಮ್ಮಡಿಗೊಂಡಿತು;

ಸೊರ್ಕು = ಸೊಕ್ಕು/ಗರ‍್ವ; ಅಂಗಜ = ಮದನ/ಕಾಮದೇವ ; ಮತಂಗಜ+ಅಂತೆ; ಮತಂಗಜ = ಮದಿಸಿದ ಆನೆ; ಅಂತೆ = ಹಾಗೆ; ಬರ್ಪ = ಬರುತ್ತಿರುವ; ಮಾದ್ರಿ+ಅನ್;

ಸೊರ್ಕಿದ ಅಂಗಜ ಮತಂಗಜದಂತೆ ಬರ್ಪ ಮಾದ್ರಿಯನ್ = ಕಾಮದೇವನ ಮದಿಸಿದ ಆನೆಯಂತೆ ಬರುತ್ತಿರುವ ಮಾದ್ರಿಯನ್ನು; ಇದೊಂದು ರೂಪಕವಾಗಿ ಬಳಕೆಯಾಗಿದೆ. ಮಾದ್ರಿಯು ತೊಟ್ಟಿರುವ ಹೂವಿನ ತೊಡುಗೆಯು ಅವಳ ಚೆಲುವನ್ನು ಇಮ್ಮಡಿಗೊಳಿಸಿದೆ. ನೋಡುವವರ ಕಣ್ಮನದಲ್ಲಿ ಕಾಮದ ಒಳಮಿಡಿತವನ್ನು ಮೂಡಿಸುವಂತಿದ್ದಾಳೆ;

ತಾಪಸ = ತಪಸ್ಸನ್ನು ಮಾಡುವವನು/ಮುನಿ; ಆಶ್ರಮ+ಇನ್; ಆಶ್ರಮ = ರಿಸಿಗಳ ವಾಸದ ನೆಲೆ; ಪೊಱಮಡು = ಹೊರಡು; ಅಂತೆ = ಎಂದಿನ ರೀತಿಯಲ್ಲಿಯೇ; ಬನಮ್+ಅಮ್; ಬನ = ಕಾಡು; ತೊಳಲ್ = ಅಲೆದಾಡು;

ತಾಪಸ ಆಶ್ರಮದಿನ್ ಪೊಱಮಟ್ಟು ಅಂತೆ ಬನಮಮ್ ತೊಳಲ್ವ ಪಾಂಡುರಾಜನ್ ಕಂಡು = ಮುನಿಗಳ ಆಶ್ರಮದಿಂದ ಹೊರಬಂದು ಎಂದಿನಂತೆ ಕಾಡಿನಲ್ಲಿ ಸುತ್ತಾಡುತ್ತಿದ್ದ ಪಾಂಡುರಾಜನು ಮಾದ್ರಿಯನ್ನು ಕಂಡು;

ಸೊಗಯಿಸೆ = ಸುಂದರವಾಗಿ ಕಾಣಲು; ಮೆಲ್+ಎರ್ದೆ+ಒಳ್; ಮೆಲ್ = ಕೋಮಲ; ಎರ್ದೆ = ಎದೆ/ಮನಸ್ಸು; ಗಾಡಿ = ಚೆಲುವು ; ತಡಮ್+ಆಡೆ; ತಡ = ಸಾವಕಾಶ/ನಿದಾನ; ಆಡೆ = ಉಂಟಾಗಲು;

ತೊಟ್ಟ ಪೂದುಡುಗೆ ಸೊಗಯಿಸೆ ಮೆಲ್ಲೆರ್ದೆಯೊಳ್ ಗಾಡಿ ತಡಮಾಡೆ = ಹೂವಿನ ಒಡವೆಗಳ ಸಿಂಗಾರದಿಂದ ಕಂಗೊಳಿಸುತ್ತಿದ್ದ ಮಾದ್ರಿಯ ಚೆಲುವು ಪಾಂಡುರಾಜನ ಮನದಲ್ಲಿ ಕಾಮದ ಒಳಮಿಡಿತವನ್ನು ಮೂಡಿಸುತ್ತಿರಲು;

ನಡೆ = ಚೆನ್ನಾಗಿ; ದಿಟ್ಟಿ+ಗಳ್+ಒಳ್; ದಿಟ್ಟಿ = ನೋಟ ; ಅನಂಗ+ರಾಗ+ರಸಮ್; ಅನಂಗ = ಮದನ/ಕಾಮದೇವ; ರಾಗ = ಒಲುಮೆ; ರಸ = ಒಳಮಿಡಿತ; ಅನಂಗರಾಗರಸ = ಕಾಮದ ಒಳಮಿಡಿತ; ಉಣ್ಮು = ಹೊರಸೂಸು;

ನಡೆ ನೋಡಿ ನೋಡಿ ದಿಟ್ಟಿಗಳೊಳ್ ಅನಂಗರಾಗರಸಮ್ ಉಣ್ಮುವಿನಮ್ = ಮಾದ್ರಿಯನ್ನು ಚೆನ್ನಾಗಿ ನೋಡ ನೋಡುತ್ತಿದ್ದಂತೆಯೇ ಪಾಂಡುರಾಜನ ಕಣ್ಣುಗಳಲ್ಲಿ ಕಾಮದ ಒಳಮಿಡಿತಗಳು ಹೊರಸೂಸತೊಡಗಿದವು. ಅಂದರೆ ಪಾಂಡುರಾಜನು ಮಯ್ ಮನದಲ್ಲಿ ಕಾಮ ಉಕ್ಕೇರತೊಡಗಿತು;

ವಿಭು = ರಾಜ; ಶಾಪಮ್+ಅನ್; ಶಾಪ = ಕೆಡುಕಾಗಲಿ ಎಂಬ ನುಡಿ. ಕಿಂದಮ ಎಂಬ ರಿಸಿಯು ಪಾಂಡುರಾಜನಿಗೆ “ ಹೆಂಗಸಿನೊಡನೆ ಕಾಮದ ನಂಟನ್ನು ನೀನು ಪಡೆಯುವ ಸಮಯದಲ್ಲಿ ನಿನಗೆ ಸಾವು ತಟ್ಟಲಿ “ ಎಂಬ ಶಾಪವನ್ನು ನೀಡಿದ್ದನು; ಬಗೆ = ಎಣಿಸು/ಚಿಂತಿಸು; ಮಿಳ್ತು+ದೇವತೆ+ಅನ್; ಮಿಳ್ತು = ಸಾವು; ಮಿಳ್ತುದೇವತೆ = ಸಾವಿನ ದೇವತೆ/ಯಮ; ಅಳ್ಕಱ್ = ಅಕ್ಕರೆ; ಅಳುರ್ಕೆ+ಇನ್; ಅಳುರ್ಕೆ = ಅತಿಶಯ ; ಅಪ್ಪು+ಅಂತೆ+ವೋಲ್; ಅಪ್ಪು = ತಬ್ಬಿಕೊಳ್ಳುವುದು; ತೊಟ್ಟಗೆ = ಇದ್ದಕ್ಕಿದ್ದಂತೆಯೇ; ಕೊಳೆ = ಮುಟ್ಟು/ವಶಪಡಿಸಿಕೊಳ್ಳು ; ಪಾಯ್ = ಎರಗು/ಮೇಲೆ ಬೀಳು ;

ಆ ವಿಭು ತನ್ನ ಶಾಪಮನ್ ಬಗೆಯದೆ ಮಿಳ್ತುದೇವತೆಯನ್ ಅಳ್ಕಱ್ ಅಳುರ್ಕೆಯಿನ್ ಅಪ್ಪುವಂತೆವೋಲ್ ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ = ಪಾಂಡುರಾಜನು ರಿಸಿಯು ತನಗೆ ಕೊಟ್ಟಿದ್ದ ಶಾಪದ ಬಗ್ಗೆ ಚಿಂತಿಸದೆ ಸಾವಿನ ದೇವತೆಯನ್ನು ಅಪ್ಪಿಕೊಳ್ಳುವಂತೆ ಇದ್ದಕ್ಕಿದ್ದಂತೆಯೇ ಉಂಟಾದ ಅತಿಯಾದ ಕಾಮದ ಆವೇಶದಿಂದ ಮಾದ್ರಿಯ ಮೇಲೆ ಎರಗಿ ಅವಳನ್ನು ತಬ್ಬಿಕೊಂಡನು;

ವಿಷಮ = ಉಗ್ರವಾದ; ವಿಷ+ವಲ್ಲಿ+ಅನ್; ವಿಷ = ನಂಜು; ವಲ್ಲಿ = ಬಳ್ಳಿ;

ಅಂತು ವಿಷಮ ವಿಷವಲ್ಲಿಯನ್ ಅಪ್ಪಿದಂತೆ ಅಪ್ಪುವುದುಮ್ = ಆ ರೀತಿ ನಂಜಿನ ಬಳ್ಳಿಯನ್ನು ತಬ್ಬುವಂತೆ ಮಾದ್ರಿಯನ್ನು ತಬ್ಬಿಕೊಳ್ಳಲು ;

ತಳ್ = ಸೇರು/ಕೂಡು; ನಲ್ಲೆ = ಹೆಂಡತಿ; ಮೃದು = ಕೋಮಲವಾದ/ಮೆತುವಾದ; ಮೃಣಾಳ = ತಾವರೆಯ ದಂಟು; ಕೋಮಳ = ಸುಂದರವಾದ; ಬಾಹು+ಪಾಶಮ್+ಗಳೆ; ಬಾಹು = ತೋಳು; ಪಾಶ = ಹಗ್ಗ; ಯಮ+ಪಾಶಮ್+ಗಳ್+ಆಗೆ; ಯಮ = ಸಾವಿನ ದೇವತೆ; ಯಮಪಾಶ = ಸಾವಿನ ಉರುಳು/ಜೀರುಕುಣಿಕೆ; ಆಗೆ = ಆಗಲು ;

ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ = ತಬ್ಬಿಕೊಂಡಿರುವ ಮಾದ್ರಿಯ ಕೋಮಲವಾದ ತೋಳುಗಳ ಆಲಿಂಗನವೇ ಪಾಂಡುರಾಜನ ಪಾಲಿಗೆ ಸಾವಿನ ಜೀರುಕುಣಿಕೆಯಾಗಿರಲು; ಅಮರ್ = ಕೂಡಿಸು/ಜೋಡಿಸು; ಸಡಿಲ = ಬಿಗಿಯಿಲ್ಲದಿರುವುದು ; ಜೋಲು = ಕಳೆಗುಂದು/ಬಾಡುವುದು ;

ಬಿಗಿದು ಅಮರ್ದು ಇರ್ದ ತೋಳ್ ಸಡಿಲೆ… ಮೊಗಮ್ ಜೋಲೆ = ಮಾದ್ರಿಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳುಗಳ ಸಡಿಲಗೊಳ್ಳುತ್ತ, ಮೊಗವು ಬಾಡುತ್ತಿರಲು ; ಮೊಗ+ಇಂದಮ್; ಒಯ್ಯಗೆ+ಒಯ್ಯಗೆ; ಒಯ್ಯಗೆ = ಮೆಲ್ಲನೆ; ಮಗುಳ್ದ+ಅಂತು+ಇರೆ; ಮಗುಳ್ = ಅಡಿಮೇಲಾಗು ; ನಗೆ+ಕಣ್+ಗಳ್+ಆಲಿ; ಆಲಿ = ಕಣ್ಣು ಗುಡ್ಡೆ;

ಮೊಗದಿಂದಮ್ ಒಯ್ಯಗೊಯ್ಯಗೆ ಮಗುಳ್ದಂತಿರೆ ನಗೆಗಣ್ಗಳಾಲಿ ಮುಚ್ಚಿರೆ = ಪಾಂಡುರಾಜನ ನಗುಮೊಗದಲ್ಲಿದ್ದ ಕಣ್ಣಿನ ಗುಡ್ಡೆಗಳು ಕಾಂತಿಯನ್ನು ಕಳೆದುಕೊಂಡು ಕಣ್ಣಿನ ರೆಪ್ಪೆ ಮುಚ್ಚುತ್ತಿರಲು ;

ಸುಯ್ = ಉಸಿರು; ಅಡಂಗು = ಕೊನೆಗೊಳ್ಳು/ಮುಗಿ;

ಸುಯ್ ಅಡಂಗೆ = ಉಸಿರಾಟವು ನಿಲ್ಲಲು;

ಮಱಸೊಂದು = ಮಯ್ ಮರೆತು ಮಲಗು/ಅರಿವನ್ನು ಕಳೆದುಕೊಂಡು ಬೀಳು; ಅಂದ+ಒಳೆ; ಅಂದ = ರೀತಿ; ಅಂದದೊಳೆ = ರೀತಿಯಲ್ಲಿ; ನಿಜೇಶನ್+ಅನ್; ನಿಜೇಶ = ಗಂಡ;

ಮಱಸೊಂದಿದ ಅಂದದೊಳೆ ಮೆಲ್ಲಗೆ ಜೋಲ್ದ ನಿಜೇಶನನ್ = ಅರಿವಿಲ್ಲದೆ ಮಯ್ ಮರೆತು ಬೀಳುವಂತೆ ತನ್ನ ದೇಹದ ಮೇಲೆ ಮೆಲ್ಲಗೆ ಜೋತುಬಿದ್ದ ಪಾಂಡುರಾಜನನ್ನು; ಲತಾಂಗಿ = ಸುಂದರಿ; ಆ ಲತಾಂಗಿ ತೊಟ್ಟಗೆ ಕೊಳೆ ನೋಡಿ = ಮಾದ್ರಿಯು ಇದ್ದಕ್ಕಿದ್ದಂತೆಯೇ ನಡೆದ ಈ ಬಗೆಯ ಬದಲಾವಣೆಯನ್ನು ಕಂಡು;

ಇನಿಯ = ಗಂಡ; ಬಳಲ್ = ದಣಿ/ಆಯಾಸಗೊಳ್ಳು;

ಇನಿಯನ್ ಮಱಸೊಂದಿದನೋ ಬಳಲ್ದನೋ… ಕೆಟ್ಟೆನ್ ಎಂದು = ಗಂಡನು ಮಯ್ ಮೇಲೆ ಅರಿವಿಲ್ಲದೆ ಬಿದ್ದನೋ ಇಲ್ಲವೇ ಆಯಾಸಗೊಂಡು ಕುಸಿದನೋ… ನನಗೆ ಕೇಡು ತಟ್ಟಿತು;

ಪಱಿಪಟ್ಟ = ನಿಂತುಹೋದ ; ಸುಯ್ಯುಮ್+ಅನ್; ಸುಯ್ = ಉಸಿರು ; ಕೋಡು = ತಣ್ಣಗಾಗು ;

ಪಱಿಪಟ್ಟ ಸುಯ್ಯುಮನ್, ಕೋಡುವ ಮೆಯ್ಯುಮನ್ ಕಂಡು = ನಿಂತುಹೋದ ಉಸಿರನ್ನು ಮತ್ತು ತಣ್ಣಗಾದ ಮಯ್ಯನ್ನು ನೋಡಿ;

ಪರಲೋಕ ಪ್ರಾಪ್ತನ್ ಆದುದನ್ ಅಱಿತು = ಸತ್ತುಹೋಗಿರುವುದನ್ನು ತಿಳಿದು;

ಓಪ = ನಲ್ಲ/ಗಂಡ; ಶಾಪಮ್+ಎಂಬುದು; ಪಾಪ = ವ್ಯಕ್ತಿಯು ಮಾಡಿದ ಕೆಟ್ಟಕೆಲಸದಿಂದ ಬಂದಿರುವ ಕೇಡು; ರೂಪ = ಆಕಾರ;

ಓಪನೆ, ತಾಪಸನ ಶಾಪಮೆಂಬುದು ಪಾಪದ ರೂಪ = ನಲ್ಲನಾದ ಪಾಂಡುರಾಜನೇ, ಮುನಿಯ ಶಾಪವೆಂಬುದು ಪಾಪದ ರೂಪದಲ್ಲಿ ನಿನ್ನನ್ನು ಹಿಂಬಾಲಿಸುತ್ತಿತ್ತು;

ಮನಮ್+ಕಾಪು+ಅಳಿದು; ಮನ = ಮನಸ್ಸು ; ಕಾಪು = ಕಾಯುವಿಕೆ; ಮನಂಗಾಪು = ಮನಸ್ಸಿನ ಎಚ್ಚರ/ಮನದ ಸಂಯಮ; ಅಳಿ = ನಾಶವಾಗು/ಇಲ್ಲವಾಗು; ಎನ್ನ = ನನ್ನ; ಪಾಪಕರ್ಮಿ = ಮಾಡಿದ ಕೆಟ್ಟಕೆಲಸಕ್ಕಾಗಿ ಸಂಕಟವನ್ನು ಹೊಂದುತ್ತಿರುವ ವ್ಯಕ್ತಿ. ಗಂಡನ ಕಾಮದ ಆವೇಶಕ್ಕೆ ನಾನು ಕಾರಣಳಾದೆನು ಎಂಬ ಸಂಕಟದಿಂದ ಮಾದ್ರಿಯ ತನ್ನನ್ನು ತಾನೇ ‘ಪಾಪಕರ‍್ಮಿ‘ ಎಂದು ನಿಂದಿಸಿಕೊಳ್ಳುತ್ತಿದ್ದಾಳೆ ;

ನೀನ್ ಅಱಿತುಮ್ ಅಱೆಯದಂತೆ ಮನಂಗಾಪಳಿದು ಬಂದು ಎನ್ನ ಪಾಪಕರ್ಮಿಯ ಮೆಯ್ಯನ್ ಏಕೆ ಮುಟ್ಟಿದೆ = ನಿನಗೆ ಶಾಪವಿದೆ ಎಂಬುದನ್ನು ಅರಿತಿದ್ದರೂ ಅರಿಯದವನಂತೆ ಮನದ ಎಚ್ಚರವನ್ನು ಕಳೆದುಕೊಂಡು ಬಂದು ಪಾಪಕರ‍್ಮಿಯಾದ ನನ್ನನ್ನೇಕೆ ಬಂದು ತಬ್ಬಿಕೊಂಡೆ;

ಎನಸುನ್ = ಯಾವುದೊಂದನ್ನು; ನೆರೆ = ಕೂಡು; ಬಗೆ+ಒಳ್; ಬಗೆ = ಬಯಕೆ/ಆಸೆ;

ನೀನ್ ನಿನ್ನ ಸಾವನ್ ಅದನ್ ಎನಸುನ್ ನೆನೆಯದೆ ನೆರೆವೆನ್ ಎಂಬ ಬಗೆಯೊಳ್ ಬಂದಯ್ = ಸಾವು ಬರುವುದೆಂಬ ಶಾಪವನ್ನು ತುಸುವಾದರೂ ನೆನೆಸಿಕೊಳ್ಳದೆ ನನ್ನೊಡನೆ ಕೂಡಬೇಕೆಂಬ ಬಯಕೆಯಿಂದ ನೀನು ನನ್ನ ಬಳಿಸಾರಿ ಬಂದೆ;

ನಿನ್ನ+ಒಡನೆ; ವಂದು = ಬಂದು ; ದಿವ+ಒಳ್; ದಿವ = ದೇವಲೋಕ/ಸ್ವರ್ಗ; ಮನೋರಥಮ್+ಅನ್; ಮನೋರಥ = ಮನಸ್ಸಿನ ಬಯಕೆ/ಹಂಬಲ; ನೆಱಪು = ಈಡೇರಿಸು; ಮಾಣ್ = ಬಿಡು;

ಅರಸ, ನಿನ್ನೊಡನೆ ವಂದು ದಿವದೊಳ್ ನಿನ್ನ ಮನೋರಥಮನ್ ನೆಱಪದೆ ಮಾಣೆನ್ = ಅರಸನೇ, ನಿನ್ನ ಜತೆಯಲ್ಲಿಯೇ ನಾನು ಬಂದು ದೇವಲೋಕದಲ್ಲಿ ನಿನ್ನ ಬಯಕೆಯನ್ನು ಈಡೇರಿಸಿದೆ ಬಿಡುವುದಿಲ್ಲ. ಅಂದರೆ ಮಾದ್ರಿಯು ಸಾಯಲು ನಿಶ್ಚಯಿಸಿದ್ದಾಳೆ;

ಇಂತು = ಈ ರೀತಿ; ಪಳು+ಇನ್+ಒಳ್; ಪಳು = ಕಾಡು;

ಇಂತು ಈ ಪಳುವಿನೊಳ್ ಎನ್ನ ಅರಸನನ್ = ಈ ರೀತಿ ಈ ಕಾಡಿನಲ್ಲಿ ನನ್ನ ದೊರೆಯನ್ನು;

ಉನ್ನತ = ಎತ್ತರವಾದ; ಧವಳತ್+ಛತ್ರ+ಛನ್ನ; ದವಳ = ಬಿಳಿ; ಛತ್ರ = ಕೊಡೆ; ಛನ್ನ = ಹೊದಿಸಿದ; ವಿಯತ್ತಳನ್+ಅನ್; ವಿಯತ್ತಳ = ಆಕಾಶ;

ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನನ್ = ಗಗನ ಪ್ರದೇಶದಲ್ಲಿ ಎತ್ತರವಾದ ಬೆಳ್ಗೊಡೆಯ ನೆರಳಲ್ಲಿ ಕಂಗೊಳಿಸುತ್ತಿದ್ದವನನ್ನು; ಬೆಳ್ಗೊಡೆ ಎಂಬುದು ರಾಜನ ಗದ್ದುಗೆಯ ಒಂದು ಸೂಚಕವಾಗಿದೆ;

ಇಂದು+ಕುಳ+ತಿಳಕನ್+ಅನ್; ಇಂದು = ಚಂದ್ರ; ಕುಳ = ವಂಶ; ತಿಳಕ = ಹಣೆಯ ಮೇಲೆ ಇಟ್ಟುಕೊಳ್ಳುವ ಬೊಟ್ಟು/ಉತ್ತಮ;

ಇಂದುಕುಳತಿಳಕನನ್ = ಚಂದ್ರ ವಂಶಕ್ಕೆ ಕೀರ‍್ತಿಪ್ರಾಯನಾದವನು;

ಬಿದಿ = ವ್ಯಕ್ತಿಯ ಜೀವನದಲ್ಲಿ ಒಲವು ನಲಿವು ಸಾವು ನೋವಿನ ಪ್ರಸಂಗಗಳು ಇದೇ ರೀತಿ ನಡೆಯಬೇಕೆಂಬುದನ್ನು ಮೊದಲೇ ನಿಶ್ಚಯಿಸಿರುವ ಶಕ್ತಿಯೊಂದು ಇದೆಯೆಂಬ ನಂಬಿಕೆ ಜನಮನದಲ್ಲಿದೆ. ಅದನ್ನು ಬಿದಿ/ವಿದಿ ಎಂದು ಕರೆಯುತ್ತಾರೆ; ಅನ್ನೆಯ+ಇಂದ; ಅನ್ನೆಯ = ಅನ್ಯಾಯ; ತಂದು+ಇಕ್ಕುವುದೇ;

ಬಿದಿಯೆ, ಅನ್ನೆಯದಿಂದ ಇಂತು ತಂದಿಕ್ಕುವುದೇ = ಬಿದಿಯೇ, ಅನ್ಯಾಯವಾಗಿ ಇಂತಹ ಕಾಡಿನಲ್ಲಿ ತಂದು ಬಿಸುಡುವುದೇ;

ವನ+ದೇವತೆ+ಗಳ್ಗೆ+ಎಲ್ಲಮ್; ಕರುಣಮ್+ಆಗೆ; ಪಳಯಸು = ಗೋಳಾಡು; ಸರಮ್+ಅನ್; ಸರ = ದನಿ;

ವನದೇವತೆಗಳ್ಗೆಲ್ಲಮ್ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮನ್ ಕುಂತಿ ಕೇಳ್ದು = ವನದೇವತೆಗಳೆಲ್ಲರೂ ಕರುಣೆಗೊಳ್ಳುವಂತೆ ಗೋಳಿಡುತ್ತಿರುವ ಮಾದ್ರಿಯ ದನಿಯನ್ನು ಕುಂತಿಯು ಕೇಳಿಸಿಕೊಂಡು ; ಭೋಂಕನೆ = ತಟ್ಟನೆ/ಕೂಡಲೇ; ಎರ್ದೆ = ಎದೆ; ತೆಱೆ = ಬಿಚ್ಚು/ಬಿರಿ;

ಭೋಂಕನೆ ಎರ್ದೆ ತೆಱೆದು = ಆ ಕೂಡಲೇ ಕುಂತಿಯ ಎದೆ ಬಿರಿದಂತಾಗಿ ; ದೆಸೆ+ಒಳ್; ದೆಸೆ = ದಿಕ್ಕು; ಭೂಭುಜ = ರಾಜ; ನೆಗೆ = ತಲೆದೋರು; ಕರುಣಾ+ರವಮ್; ರವ = ಶಬ್ದ;

ಆ ದೆಸೆಯೊಳ್ ಭೂಭುಜನೋ ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮ್ = ಯಾವ ದಿಕ್ಕಿನಲ್ಲಿ ಪಾಂಡುರಾಜನು ಹೋದನೊ ಅದೇ ದಿಕ್ಕಿನಿಂದ ಮಾದ್ರಿಯ ಅಳುವಿನ ದನಿ ಕೇಳಿಬರುತ್ತಿದೆ ; ಭೂಪತಿ = ರಾಜ; ಏನ್+ಆದುದೊ;

ಅಂತು ಆ ದೆಸೆಯೊಳ್ ಭೂಪತಿಗೆ ಏನಾದುದೊ = ಆ ಕಡೆಯಲ್ಲಿ ಪಾಂಡುರಾಜನಿಗೆ ಯಾವ ಬಗೆಯ ಆಪತ್ತು ತಟ್ಟಿತೋ;

ಪೇಳ್… ಬಿದಿಯೆ, ಕೆಟ್ಟೆನ್ ಅಳಿದನ್ ಎನುತ್ತಮ್ = ಹೇಳು ವಿದಿಯೇ, ಕೆಟ್ಟೆನು ಹಾಳಾದೆನು ಎನ್ನುತ್ತಾ;

ಭೋರ್ಗರೆ = ದೊಡ್ಡ ದನಿಯಿಂದ ಕೂಡಿರುವುದು;

ಭೋರ್ಗರೆದು ಅಳುತುಮ್ = ದೊಡ್ಡ ದನಿಯಿಂದ ಅಳುತ್ತ;

ಮುಡಿ = ತಲೆಗೂದಲು; ಬಿಟ್ಟು+ಎಳಲೆ;ಎಳಲ್ = ನೇತಾಡು;

ಮುಡಿ ಬಿಟ್ಟೆಳಲೆ ನಡುನಡುಗೆ = ಮುಡಿಯು ಬಿಚ್ಚುಕೊಂಡು, ಹೆಚ್ಚಿನ ಸಂಕಟದಿಂದ ಮಯ್ ನಡುಗುತ್ತಿರಲು;

ಗಳಗಳನೆ = ಹರಿಯುವಿಕೆಯನ್ನು ಸೂಚಿಸುವ ಅನುಕರಣ ಪದ; ಒರ್ಮೊದಲೆ = ಒಂದೇ ಸಮನೆ/ಎಡೆಬಿಡದೆ; ಪರಿತರು = ಹರಿಯುತ್ತಿರುವುದು ;

ಕಣ್ಣೀರ್ ಗಳಗಳನೆ ಒರ್ಮೊದಲೆ ಸುರಿಯೆ ಪರಿತರೆ = ಕಣ್ಣೀರು ಒಂದೇ ಸಮನೆ ಹರಿಯುತ್ತಿರಲು;

ಬಳಿ = ಹತ್ತಿರ; ಪೆಱಗು = ಹಿಂದೆ; ಪೆಱಪೆಱಗು = ಹಿಂದೆಹಿಂದೆಯೇ; ಪಱಿತಂದು = ಓಡಿಬಂದು;

ಆಗಳ್ ಬಳಿಯನೆ ಮಕ್ಕಳ್ ಪೆಱ ಪೆಱಗನ್ ಅಂತೆ ಪರಿತಂದು = ಮಾದ್ರಿಯ ಗೋಳಿನ ದನಿ ಕೇಳಿ ಬಂದ ಕಡೆಗೆ ಕುಂತಿಯು ಓಡೋಡಿ ಬರುತ್ತಿರುವಾಗ ಅವಳನ್ನೇ ಹಿಂಬಾಳಿಸುತ್ತ ಮಕ್ಕಳು ಓಡಿಬಂದರು;

ಕಳೇವರಮ್+ಅನ್; ಕಳೇವರ = ಹೆಣ; ತಳ್ಕೈಸು = ಅಪ್ಪಿಕೊಳ್ಳುವುದು ;

ಅಂತು ತನ್ನ ನಲ್ಲನ ಕಳೇವರಮನ್ ತಳ್ಕೈಸಿಕೊಂಡು = ಕುಂತಿಯು ಪಾಂಡುರಾಜನ ಹೆಣವನ್ನು ತಬ್ಬಿಕೊಂಡು;

ಪರಿಚ್ಛೇದ = ನಿಶ್ಚಯಿಸಿಕೊಳ್ಳುವುದು; ಪಲ್ = ಹಲ್ಲು; ಸುಲಿ+ಉತ್ತ+ಉಮ್; ಸುಲಿ = ತಿಕ್ಕು/ಉಜ್ಜು;

ತನ್ನ ಸಾವನ್ ಪರಿಚ್ಛೇದಿಸಿ ಪಲ್ಲನ್ ಸುಲಿಯುತ್ತುಮ್ ಇರ್ದ ಮಾದ್ರಿಯನ್ ಕಂಡು = ತಾನು ಸಾಯಲು ನಿಶ್ಚಯಿಸಿಕೊಂಡು ಹಲ್ಲನ್ನು ಉಜ್ಜಿಕೊಳ್ಳುತ್ತಿದ್ದ ಮಾದ್ರಿಯನ್ನು ಕಂಡು; “ಹಲ್ಲನ್ನು ಉಜ್ಜಿಕೊಳ್ಳುವುದು” ಎಂಬ ಪದಕಂತೆಯು ಸಾವಿನ ನಿರ‍್ದಾರವನ್ನು ಸೂಚಿಸುವ ನುಡಿಗಟ್ಟಾಗಿ ಹತ್ತನೆಯ ಶತಮಾನದ ಆಡುನುಡಿಯಲ್ಲಿ ಬಳಕೆಯಲ್ಲಿದ್ದಿರಬಹುದು;

ಈಡಾಡು = ಚೆಲ್ಲಾಡು; ಕುಂತಿ ನೆಲದೊಳ್ ಮೆಯ್ಯನ್ ಈಡಾಡಿ = ಕುಂತಿಯು ನೆಲದ ಮೇಲೆ ಬಿದ್ದು ಹೊರಳಾಡುತ್ತ ; ನಾಡಾಡಿ+ಅಲ್ಲದೆ; ನಾಡಾಡಿ = ಸಾಮಾನ್ಯವಾದುದು; ನಾಡಾಡಿಯಲ್ಲದ = ಸಾಮಾನ್ಯವಲ್ಲದ ರೀತಿಯಲ್ಲಿ ಅಂದರೆ ಅತಿಶಯವಾದ ಬಗೆಯಲ್ಲಿ; ನಾಡಾಡಿಯಲ್ಲದೆ ಪಳಯಿಸಿ = ಅತಿ ಹೆಚ್ಚಾದ ಸಂಕಟದಿಂದ ಗೋಳಾಡುತ್ತ ; ಅಡವಿ+ಒಳ್; ಎನ್ನುಮನ್ = ನನ್ನನ್ನು; ನಡಪು = ಸಲಹು/ಕಾಪಾಡು; ಶಿಶು+ಗಳುಮ್+ಅನ್; ಪೋ = ಹೋಗು;

ಅರಸ, ಅಡವಿಯೊಳ್ ಎನ್ನುಮನ್, ನಡಪಿದ ಈ ಎನ್ನ ಶಿಶುಗಳುಮನ್ ಇರಿಸಿ ನೀನ್ ಪೇಳದೆ ಪೋದಡಮ್ ಏನೋ = ಅರಸನೇ, ಕಾಡಿನಲ್ಲಿ ನನ್ನನ್ನು, ಕಾಪಾಡಬೇಕಾದ ಈ ನನ್ನ ಮಕ್ಕಳನ್ನು ಬಿಟ್ಟು, ನೀನು ನಮಗೆ ಹೇಳದೆ ಹೋಗಿದ್ದರೆ ತಾನೆ ಏನೋ;

ಬಿಸುಟು = ತೊರೆ/ಬಿಡು; ಎಂತು+ಇರ್ಪೆನ್; ನಡೆತರು = ಆಗಮಿಸು;

ನಿನ್ನ ಬಿಸುಟು ಎಂತಿರ್ಪೆನ್… ನಿನ್ನ ಬಳಿಯನೆ ನಡೆತರ್ಪೆನ್ = ನಿನ್ನನ್ನು ಬಿಟ್ಟು ನಾನು ಹೇಗೆ ತಾನೆ ಇರುವೆನು… ನಿನ್ನನ್ನು ಹಿಂಬಾಲಿಸಿಯೇ ಬರುತ್ತೇನೆ. ಅಂದರೆ ನಾನೂ ಸಾಯುತ್ತೇನೆ;

ಕೈಕೊಳ್ = ಸ್ವೀಕರಿಸು; ಆನ್ = ನಾನು; ಅಪ್ಪೆನ್ = ಆಗುವೆನು;

ನೀನ್ ಈ ಕೂಸುಗಳಮ್ ಕೈಕೊಂಡು ನಡಪು… ನಲ್ಲನನ್ ಎನಗೆ ಒಪ್ಪಿಸು… ಆತನ್ ಆದುದನ್ ಆನ್ ಅಪ್ಪೆನ್ ಎನೆ = ಈಗ ಕುಂತಿಯು ಮಾದ್ರಿಯನ್ನು ಕುರಿತು ‘ ನೀನು ಈ ಅಯ್ದು ಮಂದಿ ಮಕ್ಕಳನ್ನು ಸಾಕಿ ಸಲಹು… ಪಾಂಡುರಾಜನನ್ನು ನನಗೆ ಒಪ್ಪಿಸು..ಅವನು ಸತ್ತಿರುವಂತೆಯೇ ನಾನು ಸಾಯುತ್ತೇನೆ;

ಮಾದ್ರಿ ಇಂತು ಎಂದಳ್ = ಮಾದ್ರಿಯು ಕುಂತಿಗೆ ಈ ರೀತಿ ಹೇಳಿದಳು;

ಸೂಳುಮ್+ಅನ್; ಸೂಳ್ = ಹೊತ್ತು/ಸರದಿ/ಸಮಯ; ಇನಿಯ = ಗಂಡ;

ಇಂದಿನ ಒಂದು ಸೂಳುಮನ್ ಇನಿಯನ್ ಎನಗೆ ದಯೆಗೆಯ್ದನ್ = ಈ ಒಂದು ದಿನ ತನ್ನೊಡನೆ ಕೂಡುವ ಸರದಿಯನ್ನು ಪಾಂಡುರಾಜನು ನನಗೆ ದಯಪಾಲಿಸಿದ್ದಾನೆ;

ಆನ್ = ನಾನು ; ಎನಿತು+ಆದೊಡಮ್; ಎನಿತು = ಎಶ್ಟು ; ಆದೊಡಮ್ = ಆದರೂ ; ಈ = ಕೊಡು; ಈವೆನೆ = ಕೊಡುವೆನೆ;

ಎನ್ನ ಸೂಳಮ್ ಆನ್ ಎನಿತಾದೊಡಮ್ ಈವೆನೆ = ಪಾಂಡುರಾಜನೊಡನೆ ಕೂಡುವ ನನ್ನ ಪಾಲಿನ ಸರದಿಯನ್ನು ಏನೇ ಆದರೂ ನಾನು ಬೇರೆಯವರಿಗೆ ಬಿಟ್ಟುಕೊಡುತ್ತೇನೆಯೇ;

ಮತ್ = ನನ್ನ ; ತನಯ = ಮಗ; ಕೆಯ್ಯೆಡೆ = ಇಡುವಿಕೆ/ಇರಿಸುವಿಕೆ/ಮತ್ತೊಬ್ಬರಲ್ಲಿ ನಂಬಿಕೆಯಿಟ್ಟು ತಮ್ಮ ಪಾಲಿನ ವಸ್ತುವನ್ನು ಇಲ್ಲವೇ ತಮ್ಮವರನ್ನು ಅವರ ಪಾಲಿಗೆ ಒಪ್ಪಿಸುವುದು;

ಮತ್ತನಯರ್ ನಿನಗೆ ಕೆಯ್ಯೆಡೆ = ಇಂದಿನಿಂದ ನನ್ನ ಮಕ್ಕಳಾದ ನಕುಲ ಮತ್ತು ಸಹದೇವರನ್ನು ಕಾಪಾಡುವ ಹೊಣೆಯನ್ನು ನಿನಗೆ ವಹಿಸುತ್ತಿದ್ದೇನೆ;

ಪೆಱ+ಪೆಱ+ಅನ್; ಪೆಱತು = ಬೇರೆಯದು/ಮತ್ತೊಂದು; ಪಲುಂಬು = ಅಳು/ಹಾತೊರೆ/ಹಂಬಲಿಸು;

ಪೆಱಪೆಱವನ್ ಪಲುಂಬದಿರ್ ಎಂದು ಮಾದ್ರಿ = ಬೇರೆ ಬೇರೆ ರೀತಿಗಳಲ್ಲಿ ಹಂಬಲಿಸಬೇಡ. ಅಂದರೆ ಪಾಂಡುರಾಜನೊಡನೆ ಸಾಯುವ ಚಿಂತೆಯನ್ನು ಮಾಡಬೇಡ ಎಂದು ಮಾದ್ರಿಯು ಕುಂತಿಯನ್ನು ಕೇಳಿಕೊಂಡಳು;

ತಪೋವನ = ಆಶ್ರಮ ಮುನಿಜನಮ್+ಉಮ್; ವನ+ದೇವತಾ+ಜನಮ್+ಉಮ್;

ತಪೋವನದ ಮುನಿಜನಮುಮ್ ವನದೇವತಾಜನಮುಮ್ = ಆಶ್ರಮವಾಸಿಗಳಾದ ಮುನಿಜನರು ಮತ್ತು ವನದೇವತೆಗಳು;

ಅಣ್ಮು = ಪರಾಕ್ರಮ/ದಿಟ್ಟತನದ ನಡವಳಿಕೆ ;

ತನ್ನ ಅಣ್ಮಮ್ ಪೊಗಳೆ = ಮಾದ್ರಿಯ ದಿಟ್ಟತನದ ನಡೆಯನ್ನು ಹೊಗಳಲು;

ದಾಹೋತ್ತರ(?) = ಈ ಪದಕ್ಕೆ ತಿರುಳು ಏನೆಂಬುದು ತಿಳಿದು ಬಂದಿಲ್ಲ; ಕಿರ್ಚು = ಬೆಂಕಿ ;

ಪಾಂಡುರಾಜನೊಡನೆ (ದಾಹೋತ್ತರದಂತೆ) ಕಿರ್ಚಿಂಗೆ = ಪಾಂಡುರಾಜನ ಚಿತೆಯನ್ನೇರಿ ದಗದಗನೆ ಉರಿಯುತ್ತಿರುವ ಬೆಂಕಿಯಲ್ಲಿ ಮಾದ್ರಿಯು ಸಾವನ್ನಪ್ಪಿದಳು;

ಕುಲ+ಒಳಮ್; ಕುಲ = ವಂಶ ; ಚಲ+ಒಳಮ್; ಚಲ = ಗಟ್ಟಿಯಾದ ನಿಶ್ಚಯ; ಆವ = ಯಾವ ; ಕುಂದು = ಬಣ್ಣಗೆಡು ;

ಕುಳದೊಳಮ್ ಚಲದೊಳಮ್ ಆವ ಕಂದುಮ್ ಕುಂದುಮ್ ಇಲ್ಲದೆ = ವಂಶದ ದೊಡ್ಡತನದಲ್ಲಿ ಮತ್ತು ಚಲದ ನಡೆನುಡಿಯಲ್ಲಿ ಯಾವುದೇ ಬಗೆಯ ಕುಂದುಕೊರತೆಗಳು ಇಲ್ಲದಂತೆ;

ಒರೆ = ಸಮಾನ/ಸಾಟಿ/ಬಳಿ ; ದೊರೆ = ಸಮಾನ/ಎಣೆ/ಹಿರಿಮೆ ; ಎನಿಸಿದ+ಆಗಳ್;

ತನ್ನ ಒರೆಗಮ್ ದೊರೆಗಮ್ ಆರುಮ್ ಇಲ್ಲ ಎನಿಸಿದಾಗಳ್ = ತನ್ನ ವ್ಯಕ್ತಿತ್ವಕ್ಕೆ ಸರಿದೊರೆಯಾದವರು ಯಾರೂ ಇಲ್ಲ ಎನಿಸುವಂತೆ ಮಾದ್ರಿಯು ಪಾಂಡುರಾಜನೊಡನೆ ಸಾವನ್ನಪ್ಪಿದಳು;

ಶೋಕ+ಆಕ್ರಾಂತೆ+ಆಗಿ+ಇರೆ; ಶೋಕ = ಸಂಕಟ ; ಆಕ್ರಾಂತೆ = ಕೂಡಿದವಳು;

ಕುಂತಿ ಶೋಕಾಕ್ರಾಂತೆಯಾಗಿರೆ = ಗಂಡನನ್ನು ಮತ್ತು ಓರಗಿತ್ತಿಯನ್ನು ಕಳೆದುಕೊಂಡು ಕುಂತಿಯು ಶೋಕದಿಂದ ಕಂಗೆಟ್ಟವಳಾಗಿರಲು;

ತಪೋವೃದ್ಧರ್ = ಹಿರಿಯರಾದ ಮುನಿಗಳು; ಕಾಂತೆ+ಅನ್; ಕಾಂತೆ = ಹೆಂಗಸು ; ಇಂತು+ಎಂದು; ಇಂತು = ಈ ರೀತಿ ; ಸಂತೈಸು = ಸಾಂತ್ವನಗೊಳಿಸು/ಸಂಕಟವನ್ನು ನಿವಾರಿಸು ;

ತಪೋವನದ ತಪೋವೃದ್ಧರ್ ಆ ಕಾಂತೆಯನ್ ಇಂತೆಂದು ಸಂತೈಸಿದರ್ = ಆಶ್ರಮವಾಸಿಗಳಾದ ಹಿರಿಯ ಮುನಿಗಳು ಕುಂತಿಯನ್ನು ಈ ರೀತಿಯಾಗಿ ಸಮಾದಾನಪಡಿಸಿದರು;

ಅಳ್ತೊಡೆ = ಅತ್ತರೆ ; ಏಳ್ = ಎದ್ದೇಳು ; ಏಳ್ವಡಮ್ = ಏಳುವುದಾದರೆ ;

ಅಳ್ತೊಡೆ ಅವರ್ ಏಳ್ವೊಡಮ್ = ಅಳುವುದರಿಂದ ಸತ್ತವರು ಮತ್ತೆ ಜೀವಂತಗೊಳ್ಳುವುದಾದರೆ;

ಬಳಿಕ್ಕೆ = ಅನಂತರ ; ತಾಮ್ = ಅತ್ತವರು ; ಉಳಿ = ಬದುಕಿರು ;

ಅಂತು ಅವರಿಮ್ ಬಳಿಕ್ಕೆ ತಾಮ್ ಉಳಿವೊಡಮ್ = ಅವರ ನಂತರ ನಾವು ಸಾವಿಲ್ಲದೇ ಜೀವಂತವಾಗಿಯೇ ಇಲ್ಲೇ ಉಳಿಯುವುದಾದರೆ;

ಕಳಿದವರ್ಗೆ = ಸತ್ತವರಿಗೆ ;

ಕಳಿದವರ್ಗೆ ಅಳ್ವುದು = ಸತ್ತವರಿಗಾಗಿ ಅಳಬೇಕು;

ಏಳರ್ = ಜೀವಂತವಾಗುವುದಿಲ್ಲ ;

ಅಂತು ಅವರ್ ಏಳರ್ = ಸತ್ತವರು ಮತ್ತೆ ಜೀವಂತಗೊಳ್ಳುವುದಿಲ್ಲ;

ಅಣಮ್ = ಬಹಳವಾಗಿ/ಹೆಚ್ಚಾಗಿ; ಬರ್ದುಕು+ಇಲ್ಲ; ಬರ್ದುಕು = ಜೀವನ ;

ತಮಗಮ್ ಅಣಮ್ ಬರ್ದುಕಿಲ್ಲ = ನಾವು ಹೆಚ್ಚು ಕಾಲ ಅಂದರೆ ಶಾಶ್ವತವಾಗಿ ಜೀವಂತವಾಗಿರುವುದಿಲ್ಲ. ನಮಗೂ ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ;

ಧರ್ಮಮ್+ಅಮ್; ಧರ್ಮ = ಒಳ್ಳೆಯ ನಡೆನುಡಿ ; ಗಳಿಯಿಸಿಕೊಳ್ವುದು+ಒಂದೆ; ಗಳಿಯಿಸು = ಪಡೆದುಕೊಳ್ಳುವುದು ; ಚದುರ್ = ಜಾಣತನ;

ಧರ್ಮಮಮ್ ಗಳಿಯಿಸಿಕೊಳ್ವುದೊಂದೆ ಚದುರ್ = ಹುಟ್ಟು ಸಾವಿನ ನಡುವೆ ಒಳ್ಳೆಯ ನಡೆನುಡಿಗಳನ್ನು ಪಡೆದುಕೊಂಡು ಬಾಳುವುದೇ ಜಾಣತನ;

ಇಂತುಟು = ಈ ರೀತಿಯಲ್ಲಿದೆ ; ಸಂಸೃತಿ = ಜೀವನದ ಆಗುಹೋಗು;

ಇಂತುಟು ಸಂಸೃತಿ ಧರ್ಮಮ್ = ಈ ರೀತಿಯಲ್ಲಿ ಮಾನವ ಜೀವನದ ಆಗುಹೋಗು ಮತ್ತು ದರ್ಮದ ನಡೆನುಡಿಗಳಿವೆ;

ಬಾಯ್+ಅಳಿವುದು; ಬಾಯಳಿ = ಗೋಳಾಡು ;

ಏಕೆ ಬಾಯಳಿವುದು = ಏತಕ್ಕಾಗಿ ಗೋಳಾಡಬೇಕು; ಇದೇಕೆ ಚಿಂತಿಸುವುದು = ಯಾವುದಕ್ಕಾಗಿ ಚಿಂತಿಸಬೇಕು; ಇದೇಕೆ ಪಲುಂಬುವುದು = ಇದೇಕೆ ಹಂಬಲಿಸಬೇಕು; ಇದೇಕೆ ನೋವುದೋ = ಇದೇಕೆ ನೋಯಬೇಕು;

ಅಂತುಮ್ ಅಲ್ಲದೆ = ಹಾಗಲ್ಲದೆ;

ಬಿಡದೆ = ನಿಲ್ಲಿಸದೆ; ಅಳಲ್ = ಶೋಕಿಸು/ಸಂಕಟಪಡು ; ಬಂಧುಜನ = ನೆಂಟರು ; ಒಳ್ಕುಡಿಯದ = ಎಡೆಬಿಡದೆ ಹರಿಯುವ ; ಪೂರ = ಪ್ರವಾಹ/ತುಂಬಿ ಹರಿಯುವುದು;

ಬಿಡದೆ ಅಳಲ್ವ ಬಂಧುಜನದ ಒಳ್ಕುಡಿಯದ ಕಣ್ಣೀರ ಪೂರಮ್ = ಅಳುವನ್ನು ನಿಲ್ಲಿಸದ ನೆಂಟರ ಕಣ್ಣೀರಿನ ಪ್ರವಾಹದ ಹರಿಯುವಿಕೆಯು;

ಪ್ರೇತ = ಸತ್ತವರ ಆತ್ಮ; ಓಗಡಿಸು = ಹಿಂಜರಿ; ಗಡ = ಅಲ್ಲವೇ;

ಆ ಪ್ರೇತಮನ್ ಓಗಡಿಸದೆ ಸುಡುವುದು ಗಡ = ಸತ್ತವರ ಆತ್ಮವನ್ನು ಹಿಂಜರಿಯದೆ ಅಂದರೆ ಸುಮ್ಮನೆ ಬಿಡದೆ ಸುಡುವುದಲ್ಲವೇ;

ಸರೋಜ+ದಳ+ಅಕ್ಷೀ; ಸರೋಜ = ತಾವರೆ ; ದಳ = ಹೂವಿನ ಎಸಳು ; ಅಕ್ಷಿ = ಕಣ್ಣು ; ಸರೋಜದಾಳಕ್ಷಿ = ತಾವರೆಯ ಎಸಳಿನಂತಹ ಕಣ್ಣುಳ್ಳವಳು; ಉಡುಗು = ಕುಗ್ಗು/ಅಡಗು ;

ಸರೋಜದಳಾಕ್ಷೀ , ಈ ಶೋಕಮನ್ ಇನ್ನು ಉಡುಗುವುದು = ಕುಂತಿಯೇ, ಶೋಕಿಸುವುದನ್ನು ಬಿಡು;

ಶೋಕ+ಆಕ್ರಾಂತೆ+ಆಗಿ;

ಇಂತು ನೀನ್ ಶೋಕಾಕ್ರಾಂತೆಯಾಗಿ = ಈ ರೀತಿ ನೀನು ಶೋಕದಿಂದ ಕೂಡಿದವಳಾಗಿ; ಸಂಸಾರ+ಸ್ಥಿತಿ+ಅನ್; ಸಂಸಾರ = ಜೀವನ ; ಸ್ಥಿತಿ = ಇರುವಿಕೆ ; ಅಱಿ = ತಿಳಿ ; ಅಜ್ಞಾನಿ+ಗಳ್+ಅಂತೆ; ಅಜ್ಞಾನಿ = ಅರಿವಿಲ್ಲದ ವ್ಯಕ್ತಿ ; ವಿಪ್ರಳಾಪ = ಅತಿ ಹೆಚ್ಚಾಗಿ ಗೋಳಾಡುವುದು ; ಗೆಯ್ = ಮಾಡು ; ಅಪ್ಪೊಡೆ = ಆದರೆ;

ಸಂಸಾರಸ್ಥಿತಿಯನ್ ಅಱಿಯದ ಅಜ್ಞಾನಿಗಳಂತೆ ವಿಪ್ರಳಾಪಮ್ ಗೆಯ್ದೆ ಅಪ್ಪೊಡೆ = ಸಂಸಾರದ ಸ್ವರೂಪವನ್ನು ಅರಿಯದ ತಿಳಿಗೇಡಿಗಳಂತೆ ಅತಿಯಾಗಿ ಗೋಳಾಡುತ್ತಿದ್ದರೆ;

ಇಕ್ಕಿ+ಉಮ್; ಇಕ್ಕು = ಬಡಿ/ಕೊಲ್ಲು; ಎರ್ದೆ = ಎದೆ/ಮನಸ್ಸು ; ಕೂಸು = ಮಗು ; ಕಿಡು = ಹಾಳಾಗು ;

ಮನಮ್ ಇಕ್ಕಿಯುಮ್ ಎರ್ದೆ ಇಕ್ಕಿಯುಮ್ ಈ ಕೂಸುಗಳ್ ಕಿಡುವರ್ = ಮನಸ್ಸು ಮುದುಡಿಹೋಗಿ ಎದೆಗುಂದಿ ಈ ಮಕ್ಕಳು ಹಾಳಾಗುವರು;

ಉಪಶಾಂತ+ವಚನಮ್+ಗಳ್+ಇಂದಮ್; ಉಪಶಾಂತ = ನೊಂದ ಮನಸ್ಸಿನ ಸಂಕಟವನ್ನು ನಿವಾರಿಸುವುದು; ವಚನ = ಮಾತು/ನುಡಿ ; ಉಬ್ಬೆಗಮ್+ಅನ್; ಉಬ್ಬೆಗ = ಚಿಂತೆ/ಸಂಕಟ/ದುಗುಡ ; ಆಱೆ = ನಂದುವಂತೆ;

ಎಂದು ಅನೇಕ ಉಪಶಾಂತವಚನಂಗಳಿಂದಮ್ ಆಕೆಯ ಉಬ್ಬೆಗಮನ್ ಆಱೆ ನುಡಿದುಮ್ = ಸಮಾದಾನಪಡಿಸುವಂತಹ ನುಡಿಗಳಿಂದ ಕುಂತಿಯ ಮನದ ದುಗುಡ ಕಡಿಮೆಯಾಗುವಂತೆ ನುಡಿದು;

ಒಡಗೊಂಡು = ಜತೆಗೂಡಿ ; ನಾಗಪುರ = ಹಸ್ತಿನಾವತಿ ;

ಅಲ್ಲಿಯ ಮುನಿಜನಮ್ ಎಲ್ಲಮ್ ಒಡಗೊಂಡು ಆ ಕೂಸುಗಳುಮನ್ ಕುಂತಿಯುಮನ್ ಮುಂದಿಟ್ಟು ನಾಗಪುರಕ್ಕೆ ವಂದು = ಆಶ್ರಮದ ಮುನಿಗಳೆಲ್ಲರೂ ಒಡಗೂಡಿ ಮಕ್ಕಳಾದ ದರ‍್ಮರಾಯ, ಬೀಮ, ಅರ‍್ಜುನ, ನಕುಲ ಸಹದೇವ ಮತ್ತು ಕುಂತಿಯನ್ನು ಮುಂದಿಟ್ಟುಕೊಂಡು ಹಸ್ತಿನಾವತಿಗೆ ಬಂದು;

ವಿದುರರ್+ಕಳ್+ಗಮ್; ವೃತ್ತಾಂತಮ್+ಅನ್; ವೃತ್ತಾಂತ = ಸುದ್ದಿ ; ಅಱಿಪು = ತಿಳಿಸುವುದು ;

ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮ್ ಅಂಬಾಲೆಗಮ್ ಪಾಂಡುರಾಜನ ವೃತ್ತಾಂತಮನ್ ಅಱಿಪಿದೊಡೆ = ಗಾಂಗೇಯ, ದ್ರುತರಾಶ್ಟ್ರ, ವಿದುರ , ಅಂಬಾಲೆಗೆ ಪಾಂಡುರಾಜನ ಸಾವಿನ ಸುದ್ದಿಯನ್ನು ತಿಳಿಸಿದಾಗ…)

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: