ಬೆರಳ ತುದಿಯನ್ನು ಕತ್ತರಿಸುವ ಹೀಗೊಂದು ವಿಚಿತ್ರ ಸಂಪ್ರದಾಯ!

– .

ಜಗತ್ತಿನಾದ್ಯಂತ ಸಾವಿರಾರು ಜನಾಂಗಗಳಿದ್ದು, ಅವರವರದೇ ಆದ ಸಾವಿರಾರು ರೀತಿಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿವೆ. ಯಾವುದೇ ಒಂದು ಸಂಪ್ರದಾಯವನ್ನು ಗಮನಿಸಿದರೆ ಅದು ತಲೆತಲಾಂತರದಿಂದ ನಡೆದು ಬಂದಿರುವುದು ಕಾಣುತ್ತದೆ. ಇಂತಹ ಹಲವಾರು ಸಂಪ್ರದಾಯಗಳ ಹಿಂದಿರುವ ಉದ್ದೇಶದ ಅರಿವು ಜನ ಮನಸ್ಸಿನಿಂದ ಮಾಸಿಹೋಗಿರುತ್ತದೆ. ಹಾಗಾಗಿ ಬಹಳಶ್ಟು ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳಾಗಿ ಇಂದಿನ ಪೀಳಿಗೆಯವರ ಅವಕ್ರುಪೆಗೆ ಪಾತ್ರವಾಗಿದೆ. ಡ್ಯಾನಿ ಬುಡಕಟ್ಟು ಜನಾಂಗದವರ ವಾಸ ಸ್ತಳ ಪಪುವಾದ ಸೆಂಟ್ರಲ್ ಹೈಲ್ಯಾಂಡಿನಲ್ಲಿರುವ ಬಿಲೆಯಮ್ ಕಣಿವೆ ಪ್ರದೇಶ. ಪಪುವಾ ಸೆಂಟ್ರಲ್ ಹೈಲ್ಯಾಂಡ್ ಇರುವುದು ಇಂಡೋನೇಶ್ಯಾದಲ್ಲಿ. ಡ್ಯಾನಿ ಜನಾಂಗದವರು ವಾಸಿಸುವ ಈ ಕಣಿವೆ, ಚಿನ್ನ, ಬೆಳ್ಳಿ ಮತ್ತು ತಾಮ್ರದ ನಿಕ್ಶೇಪ ಹೊಂದಿರುವ ಎಸ್ರ‍್ಬರ‍್ಗ್ ಮತ್ತು ಗ್ರಾಸ್ಬರ‍್ಗ್ ಬೆಟ್ಟಗಳ ನಡುವೆಯಿದೆ.

ಡ್ಯಾನಿ ಬುಡಕಟ್ಟಿನ ವಿಚಿತ್ರ ಆಚರಣೆ

ಡ್ಯಾನಿ ಸಂಪ್ರದಾಯದಲ್ಲಿ ಅವರದೇ ಆದ ಒಂದು ವಿಚಿತ್ರ ವಿಲಕ್ಶಣ ಆಚರಣೆಯಿದೆ. ಅದೇ “ಇಕಿ ಪಾಲೆಕ್’. ಈ ಬಯಂಕರ ಸಂಪ್ರದಾಯದ ಬಗ್ಗೆ ಯೋಚಿಸಿದರೂ, ಮೈಮೇಲಿನ ರೋಮಗಳು ನಿಮಿರಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಆ ಜನಾಂಗದಲ್ಲಿ ಹತ್ತಿರದ ಸಂಬಂದಿಕರು ಸತ್ತಾಗ, ಅವರ ಸಾವಿನಿಂದಾದ ದುಕ್ಕ ಹಾಗೂ ನೋವನ್ನು ತೋರ‍್ಪಡಿಸಲು ಕೈ ಬೆರಳ ತುದಿಯನ್ನು ಕತ್ತರಿಸಿಕೊಳ್ಳುತ್ತಾರೆ.

ಇಂತಹುದೊಂದು ಆಚರಣೆಯ ಹಿಂದಿರುವ ನಂಬಿಕೆ

ಇದಕ್ಕೆ ಮಹಿಳೆಯರನ್ನೇ ಏಕೆ ಆಯ್ಕೆ ಮಾಡಿಕೊಂಡರು? ಈ ಆಚರಣೆ ಪ್ರಾರಂಬವಾಗಿದ್ದಾದರೂ ಯಾವಾಗ ಎಂಬ ಬಗ್ಗೆ ನಿಕರ ಮಾಹಿತಿ ಇಲ್ಲ. ಈ ಸಂಪ್ರದಾಯವನ್ನು ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಿರಲು ಕಾರಣವೇನಿರಬಹುದು? ಇದು ಬಹುಶಹ ಕುಟುಂಬ ಸದಸ್ಯರ ಮಾನಸದಲ್ಲಿ ಸತ್ತ ವ್ಯಕ್ತಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ತೋರ‍್ಪಡಿಸುವ ಉದ್ದೇಶ ಇರಬಹುದೇ? ಈ ಅನಿವಾರ‍್ಯತೆ ಅವರಲ್ಲಿ ನುಸುಳಿದ್ದಾದರೂ ಹೇಗೆ? ಇವಾವುದಕ್ಕೂ ತರ‍್ಕಬದ್ದ ಉತ್ತರವಿಲ್ಲ. ಕುಟುಂಬ ಸದಸ್ಯರಲ್ಲಿ ಯಾರಾದರೂ ಸತ್ತಾಕ್ಶಣ, ಪಪುವಾದ ಡ್ಯಾನಿ ಜನಾಂಗದವರು ಮೊದಲು ಮಾಡುವ ಕೆಲಸ ‘ಯಾರ/ಯಾವ ಬೆರಳಿನ ಮೇಲ್ಬಾಗವನ್ನು ಕತ್ತರಿಸುವುದು?’ ಎಂಬುದರ ನಿರ‍್ಣಯ. ಈ ಸಂಪ್ರದಾಯ, ಬದುಕಿರುವವರಿಗೆ ಅನಾವಶ್ಯಕವಾಗಿ ನೋವುಂಟು ಮಾಡುತ್ತದೆ, ಎಂಬುದು ಆ ಜನಾಂಗದವರನ್ನು ಹೊರತು ಪಡಿಸಿ ಉಳಿದವರು ಚಿಂತಿಸುವ ಪರಿ. ‘ಸತ್ತವರನ್ನು ಕಳೆದುಕೊಂಡ ನೋವನ್ನು, ಬಾವವನ್ನು ವ್ಯಕ್ತಪಡಿಸಲು ಇದಕ್ಕಿಂತ ಉತ್ತಮ ಮಾರ‍್ಗವಿಲ್ಲ’ ಎನ್ನುವ ಅಬಿಮತ ಡ್ಯಾನಿ ಜನಾಂಗದವರಲ್ಲಿ ಬಲವಾಗಿ ಬೇರೂರಿದೆ. ಬೆರಳನ್ನು ಕತ್ತರಿಸಿದಾಗ ಆಗುವ ನೋವು, ಹ್ರುದಯಕ್ಕೆ ಮತ್ತು ಆತ್ಮಕ್ಕಾದ ನೋವಿಗಿಂತ ಹೆಚ್ಚೇನಲ್ಲ, ಅದು ಆ ನೋವನ್ನು ಸಂಕೇತಗೊಳಿಸುತ್ತದೆ ಎನ್ನುತ್ತಾರೆ ಅವರುಗಳು.

ಕುಟುಂಬದ ಸದಸ್ಯರಾದರೂ, ಸತ್ತಾಗ ಅವರ ಅಗಲಿಕೆಯಿಂದ ಮಡುಗಟ್ಟಿದ ನೋವನ್ನು ಸಂಕೇತಿಸುವುದೇ ಈ ಸಂಪ್ರದಾಯದ ಹಿಂದಿರುವ ಉದ್ದೇಶ. ಈ ಸಂಕೇತಕ್ಕೆ ಕೈ ಬೆರಳುಗಳೇ ಯಾಕಾಗಬೇಕು? ಎಂಬ ಪ್ರಶ್ನೆ ಸ್ವಾಬಾವಿಕವಾಗಿ ಏಳುವುದು ಸಹಜ. ಡ್ಯಾನಿ ಜನಾಂಗದವರ ನಂಬಿಕೆಯಂತೆ ಬೆರಳು ಮಾನವತ್ವದ ಹಾಗೂ ಕುಟುಂಬದ ಸಾಮರಸ್ಯ, ಏಕತೆ ಮತ್ತು ಶಕ್ತಿಯ ಪ್ರತೀಕವಂತೆ. ಇದರೊಂದಿಗೆ ಮತ್ತೊಂದು ಕಾರಣವೆಂದರೆ, ಬೆರಳುಗಳು ಒಂದು ಕುಟುಂಬ, ಒಂದು ಕುಲ, ಒಂದು ಮನೆ, ಒಂದು ಬುಡಕಟ್ಟು, ಒಂದು ಬಾಶೆ, ಒಂದು ಇತಿಹಾಸ ಹಾಗೂ ಪೂರ‍್ವಜರನ್ನು ಪ್ರತಿನಿದಿಸುತ್ತವಂತೆ. ಹಾಗಾಗಿ ಈ ಜನಾಂಗದವರಲ್ಲಿ ಬೆರಳಿಗೆ ಅತಿ ಹೆಚ್ಚು ಪ್ರಾಮುಕ್ಯತೆಯಿದೆ. ಅದನ್ನೇ ಕತ್ತರಿಸಿ ಸತ್ತವರಿಗೆ ಅರ‍್ಪಿಸುವುದರಿಂದ ಅವರ ಆತ್ಮಕ್ಕೆ ಕ್ರುತಜ್ನತೆಯನ್ನು ಸಲ್ಲಿಸಿದಂತಾಗುತ್ತದೆ ಎಂಬ ನಂಬಿಕೆ ಅವರದು. ಇದು ಸತ್ತವರ ಅಗಲಿಕೆಯ ನೋವಿನ ಪ್ರಮಾಣದ ದ್ಯೋತಕ.

ಈ ಆಚರಣೆ ಹೆಂಗಸರಿಗೆ ಮಾತ್ರ ಮೀಸಲು

ಬೆರಳು ಕತ್ತರಿಸುವ ಈ ಆಚರಣೆಯಿಂದ ಗಂಡಸರಿಗೆ ವಿನಾಯಿತಿಯಿದೆ. ಜನಾಂಗದ ಸ್ತ್ರೀಯರ ರಕ್ಶಣೆ ಮತ್ತು ಆಹಾರಕ್ಕಾಗಿ ಪ್ರಾಣಿಗಳ ಬೇಟೆ ಹಾಗೂ ಇನ್ನಿತರ ಕೆಲಸ ಕಾರ‍್ಯಗಳಿಗೆ ಬೆರಳುಗಳು ಊನವಾದಲ್ಲಿ ಕಶ್ಟವೆಂಬ ಕಾರಣ ಇದರ ಹಿಂದಿದೆ. ‘ಇಕೆ ಪಾಲೆಕ್’ ಸಂಸ್ಕಾರಕ್ಕಾಗಿ ಕುಟುಂಬದಲ್ಲಿನ ಅತಿ ಹಿರಿಯ ಹೆಂಗಸರನ್ನು ಗುರುತಿಸಲಾಗುತ್ತದೆ. ಗಂಡ, ಮಕ್ಕಳು ಅತವಾ ಒಡಹುಟ್ಟಿದವರು ಸತ್ತಾಗ ಕ್ರಮವಾಗಿ ಪತ್ನಿ, ತಾಯಿ ಅತವಾ ಅಕ್ಕ-ತಂಗಿಯರ ಬೆರಳನ್ನು ಕತ್ತರಿಸಲಾಗುತ್ತದೆ. ಇದರಿಂದಾಗಿ ಆ ಜನಾಂಗದಲ್ಲಿನ ಹಿರಿಯ ಹೆಂಗಸರು ಇಕೆ ಪಾಲೆಕ್ ಆಚರಣೆಯಲ್ಲಿ ಬೆರೆಳುಗಳನ್ನು ಕಳೆದುಕೊಂಡಿರುವುದನ್ನು ಗಮನಿಸಬಹುದು. ಇವರಲ್ಲಿ ಒಬ್ಬ ಹೆಂಗಸು ಒಂದು ಬಾರಿ ಮಾತ್ರ ಈ ಆಚರಣೆಗೆ ಒಳಗಾಗಬೇಕು ಎಂಬ ನಿಯಮವೇನು ಇಲ್ಲ. ಹಾಗಾಗಿ ಬಹಳಶ್ಟು ಹೆಂಗಸರು ಕೈಗಳ ನಾಲ್ಕೂ ಬೆರಳುಗಳನ್ನು ಇಕೆ ಪಾಲೆಕ್‍ಗೆ ಬಲಿ ಕೊಟ್ಟಿರುವುದು ಸಾಮಾನ್ಯ ದ್ರುಶ್ಯ. ಹಿರಿಯ ಹೆಂಗಸಿನ ಕೈ ಬೆರೆಳುಗಳನ್ನು ಗಮನಿಸಿದಲ್ಲಿ, ಆ ಕುಟುಂಬದ ಸದಸ್ಯರಲ್ಲಿ ಎಶ್ಟು ಜನ ಸತ್ತಿದ್ದಾರೆ ಎಂದು ನಿಕರವಾಗಿ ಹೇಳಬಹುದು.

ಬೆರಳ ತುದಿಯನ್ನು ಕತ್ತರಿಸುವ ವಿದಾನಗಳಲ್ಲಿ ಅಂತಹ ಗಮನಿಸುವಂತಹ ವಿಶೇಶತೆ ಏನಿಲ್ಲ. ಎಲ್ಲಾ ನೇರಾ ನೇರ. ಸಾಮಾನ್ಯವಾಗಿ ಸಾಂಪ್ರದಾಯಿಕ ಚಾಕು ಅತವಾ ಕಲ್ಲಿನಲ್ಲಿ ತಯಾರಿಸಿದ ಸಣ್ಣ ಕೊಡಲಿಯಂತಹ ಆಯುದವನ್ನು ಈ ಕಾರ‍್ಯಕ್ಕೆ ಬಳಸಲಾಗುತ್ತದೆ. ಮತ್ತೊಂದು ವಿದಾನದಲ್ಲಿ ಯಾವುದೇ ಆಯುದವನ್ನು ಬಳಸದೆ ಅಂಗುಲಿಚ್ಚೇದನ ಮಾಡುವ ಪದ್ದತಿಯಿದೆ. ಅದರಲ್ಲಿ ಬೆರಳಿನ ಗೆಣ್ಣನ್ನು ಹಲ್ಲಿನಿಂದ ಕಚ್ಚಿ ಆ ಜಾಗವನ್ನು ದುರ‍್ಬಲಗೊಳಿಸುತ್ತಾರೆ. ನಂತರ ಆ ಜಾಗದಲ್ಲಿ ಗಟ್ಟಿ ದಾರದಿಂದ ಬಲವಾಗಿ ಬಿಗಿಯುತ್ತಾರೆ, ಬಲವಾಗಿ ಬಿಗಿದಿರುವ ಜಾಗದಿಂದ ಮುಂದಕ್ಕೆ ರಕ್ತ ಪರಿಚಲನೆ ನಿಲ್ಲುತ್ತದೆ. ಇದರಿಂದ ಬೆರಳಿನ ಮೇಲ್ಬಾಗದ ಸ್ನಾಯುಗಳು ಮತ್ತು ನರಗಳು ಸಾಯುತ್ತವೆ. ಕ್ರಮೇಣ ಆ ಬಾಗ ಉದುರಿ ಹೋಗುತ್ತದೆ. ಈ ರೀತಿಯಲ್ಲಿ ಉದುರಿದ ಬೆರಳಿನ ಅವಶೇಶಕ್ಕೆ ಅವರದೇ ಆದ ರೀತಿಯಲ್ಲಿ, ಸುಡುವ ಇಲ್ಲವೇ ಬೂಮಿಯಲ್ಲಿ ಹೂಳುವ ಸಂಸ್ಕಾರವನ್ನು ಗೌರವಯುತವಾಗಿ ಮಾಡುತ್ತಾರೆ.

ಸತ್ತವರ ನೆನಪಿಗಾಗಿ ಹೆಂಗಸರು ಬೆರಳನ್ನು ಕತ್ತರಿಸಿಕೊಳ್ಳುವ ಸಂಪ್ರದಾಯವಿರುವ ಪಪುವಾದ ಡ್ಯಾನಿ ಜನಾಂಗದಲ್ಲಿ, ಅಣ್ಣ ಅತವಾ ತಮ್ಮ ಸತ್ತಲ್ಲಿ, ಸತ್ತವರ ಅಣ್ಣ ಅತವಾ ತಮ್ಮನ ಕಿವಿ ಕತ್ತರಿಸುವ ಸಂಪ್ರದಾಯ ಸಹ ಚಾಲ್ತಿಯಲ್ಲಿದೆ. ಬೆರಳನ್ನು ಕತ್ತರಿಸಲು ಉಪಯೋಗಿಸುವ ಸಾದನಗಳನ್ನೇ ಕಿವಿಯನ್ನು ಕತ್ತರಿಸಲು ಉಪಯೋಗ ಮಾಡಲಾಗುತ್ತದೆ. ಕೆಲವು ಬಾರಿ ಬಿದಿರಿನಿಂದ ತಯಾರಿಸಿದ ಬ್ಲೇಡ್ ಗಳ ಉಪಯೋಗ ಮಾಡಲಾಗುತ್ತದೆ, ಹಾಗಾಗಿ ಈ ಸಂಪ್ರದಾಯದಿಂದ ಗಂಡಸರು ಸಹ ಸಂಪೂರ‍್ಣ ವಿನಾಯತಿ ಹೊಂದಿಲ್ಲ.

( ಮಾಹಿತಿ ಮತ್ತು ಚಿತ್ರ  ಸೆಲೆ: factsofindonesia.com, news.com.au, asiamarvels.com, scholarblogs.emory.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications