ಬಸದಿ ಬೆಟ್ಟ
ಒಂದು ದಿನದ ಪ್ರವಾಸ ಮಾಡಲು ಬಯಸುವವರಿಗೆ, ಚಾರಣಿಗರಿಗೆ ಕುಶಿ ನೀಡುವಂತಹ ಒಂದು ವಿಶೇಶವಾದ ತಾಣ ತುಮಕೂರಿನ ‘ಬಸದಿ ಬೆಟ್ಟ’. ಈ ಬೆಟ್ಟ ತುಮಕೂರು ಜಿಲ್ಲೆಗೆ ಸೇರಿದ್ದು, ಬೆಂಗಳೂರಿನಿಂದ 62 ಕಿ. ಮೀ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರಿಗೆ ಬರುವ ಹೆದ್ದಾರಿಯಲ್ಲಿ ದಾಬಸ್ ಪೇಟೆಯ ನಂತರ ಸುಮಾರು 13 ರಿಂದ 14 ಕಿ. ಮೀ ಕ್ರಮಿಸಿದರೆ ಬಲಗಡೆಗೆ ಹೆಬ್ಬಾಗಿಲೊಂದು ಕಾಣುವುದು. ಅಲ್ಲಿಯೇ ಅನತಿ ದೂರದಲ್ಲಿರುವ ಈ ಬೆಟ್ಟವು ಗೋಚರಿಸುವುದು. ಈ ಹೆಬ್ಬಾಗಿಲಿನ ಒಳಗೆ 2 ಕಿಮೀ ಸಾಗಿದರೆ ಮಂದರಗಿರಿ ಬೆಟ್ಟವಿರುವ ಜಾಗ ಕಾಣಸಿಗುತ್ತದೆ. ಕ್ಯಾತ್ಸಂದ್ರದಿಂದ ಈ ಹೆಬ್ಬಾಗಿಲಿಗೆ 3 ಕಿ.ಮೀ ನಶ್ಟೇ ಅಂತರ. ತುಮಕೂರಿನಿಂದ ಸುಮಾರು 12 ಕಿಮೀ ಅಂತರದಲ್ಲಿದೆ ಬಸದಿ ಬೆಟ್ಟ .
‘ಮಂದರಗಿರಿ’ ಎಂದು ಕರೆಸಿಕೊಳ್ಳುವ ಈ ಬೆಟ್ಟವು ಬಾರತದ ಪ್ರಮುಕ ‘ಏಕಶಿಲಾ’ ಬೆಟ್ಟಗಳಲ್ಲಿ ಒಂದು. ನೋಡಲು ಬಹಳ ಅದ್ಬುತವಾಗಿದೆ. ಈ ಬೆಟ್ಟದ ಮೇಲೆ ಜೈನದೇವಾಲಯಗಳಿರುವುದರಿಂದ ‘ಬಸದಿ ಬೆಟ್ಟ’ ಎಂದೇ ಸುತ್ತ ಮುತ್ತಲಿನ ಜನರಿಗೆ ಚಿರಪರಿಚಿತ. ಸ್ತಳೀಯರು ಬಸ್ತಿ ಬೆಟ್ಟ ಎಂದು ಕರೆಯುವುದು ವಾಡಿಕೆ. ಈ ಏಕಶಿಲಾ ಬೆಟ್ಟದ ತುದಿಯನ್ನು ತಲುಪಲು ಬೆಟ್ಟದಲ್ಲಿಯೇ ಸುಮಾರು 435 ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಬೆಟ್ಟದ ಮದ್ಯದಲ್ಲಿ ಕುದುರೆ ಮೇಲೆ ಕುಳಿತಿರುವ ಬ್ರಹ್ಮದೇವನ ಗುಡಿಯಿದೆ. ಬೆಟ್ಟದ ಮೇಲೆ 12 ಹಾಗೂ 14ನೇ ಶತಮಾನದಲ್ಲಿ ಸ್ತಾಪಿಸಲಾದ ಜೈನ ತೀರ‍್ತಂಕರರ ಮಂದಿರಗಳಿವೆ. ಬಸದಿ ಬೆಟ್ಟದ ಮೇಲೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ, ಕಾಣುವಂತಹ ಪ್ರಕ್ರುತಿಯ ಸೊಬಗು ಎಂತಹವರ ಮನಸ್ಸನ್ನು ಮುದಗೊಳಿಸುತ್ತದೆ. ಮಂದರಗಿರಿ ಬೆಟ್ಟದ ಮೇಲೆಯೇ ಹಿಂಬದಿಯಲ್ಲಿ ಒಂದು ಪುಟ್ಟದಾದ ನೀರಿನ ಕೊಳವಿದೆ. ಹಾಗೆಯೇ ಬೆಟ್ಟದ ಹಿಂಬಾಗದಲ್ಲಿ ನಿಂತು ಕೆಳಗೆ ನೋಡಿದರೆ ‘ಮೈದಾಳ’ ಎಂಬ ಪುರಾತನ ಕಾಲದ ಕೆರೆ ಇದ್ದು ನೀರು ತುಂಬಿ ಹರಿಯುತ್ತಿರುತ್ತದೆ. ಈ ಕೆರೆಯನ್ನು ಹತ್ತಿರದಿಂದ ನೋಡಲಿಚ್ಚಿಸುವವರು ಬೆಟ್ಟದ ಹಿಂದೆಯೇ ಕಡಿದಾದ ಜಾಗದಲ್ಲಿ ಇಳಿದು ಹೋಗಬಹುದು. ಹೀಗೆ ಇಳಿದ ನಂತರ ಪುಟ್ಟದಾದ ಮಣ್ಣಿನ ದಾರಿಯಲ್ಲಿ ಸಾಗಿದರೆ ಮೈದಾಳ ಕೆರೆಯ ದಡ ಸಿಗುತ್ತದೆ. ಹೀಗೆ ಇಳಿಯಲು ಕೆಲವರಿಗೆ ತುಸು ಬಯವೆನಿಸಬಹುದು. ಈ ರೀತಿ ಬೆಟ್ಟದ ಕಡಿದಾದ ಗುಡ್ಡಗಳನ್ನಿಳಿದು ಹೋಗಲು ಕಶ್ಟವೆನಿಸುವವರಿಗೆ ಈ ಕೆರೆಯ ಬಳಿಗೆ ತಲುಪಲು ಇನ್ನೊಂದು ದಾರಿಯೂ ಇದೆ. ಬೆಟ್ಟವನ್ನು ಹತ್ತಿದ ಮೆಟ್ಟಿಲುಗಳ ಹಾದಿಯ ಮೂಲಕ ಇಳಿದ ನಂತರ, ಎಡ ಬಾಗದಲ್ಲಿಯೂ ಒಂದು ದಾರಿ ಇದ್ದು, ಈ ದಾರಿಯಲ್ಲಿ ನಡೆದು ಮುಂದೆ ಸಾಗಿದರೆ ಮೈದಾಳ ಕೆರೆಯ ಬಳಿ ಹೋಗಿ ಹತ್ತಿರದಿಂದ ನೋಡಬಹುದು. ಈ ಕೆರೆಯು ಆಳವಾಗಿದ್ದು, ವಿವಿದ ಬಗೆಯ ಮರಗಿಡಗಳು ಮತ್ತು ಹುಲ್ಲುಗಾವಲಿನಿಂದ ಸುತ್ತುವರೆದಿದೆ.
ಈ ಹಸಿರಿನ ಅದ್ಬುತ ದ್ರುಶ್ಯಕ್ಕೆ ಎಂತಹವರ ಮನಸ್ಸೂ ಸಹ ಸೂರೆಗೊಳ್ಳುತ್ತದೆ. ಮೊದಲಿಗೆ ಈ ಮೈದಾಳ ಕೆರೆಯ ನೀರನ್ನೇ ತುಮಕೂರಿನ ನಾನಾ ಬಾಗಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಮಂದರಗಿರಿ ಬೆಟ್ಟದ ಮುಂಬಾಗದಲ್ಲಿ ನವಿಲಿನ ಗರಿಯ ಬೀಸಣಿಗೆಯ ಮಾದರಿಯಲ್ಲಿ ನಿರ‍್ಮಿತವಾದ ಸುಮಾರು 81 ಅಡಿ ಎತ್ತರದ ಆಕರ‍್ಶಕವಾದ ಒಂದು ಗುರು ಮಂದಿರವಿದೆ. ಇದು 1855 ರಿಂದ 1955 ರವರೆಗೆ ಇದ್ದಂತಹ ಜೈನ ಗುರುಗಳೂ, ದಿಗಂಬರರೂ ಆದ ಶ್ರೀ ಶಾಂತಿನಾತ ಮಹಾರಾಜರ ಸ್ಮರಣೆಗಾಗಿ ನಿರ‍್ಮಿತವಾದ ಗುರುಮಂದಿರ. ಇತ್ತೀಚೆಗೆ ಬಾಹುಬಲಿ(ಗೊಮ್ಮಟೇಶ್ವರ) ಮಾದರಿಯಲ್ಲಿಯೇ ನಿರ‍್ಮಿತವಾದ ಚಂದ್ರನಾತ ತೀರ‍್ತಂಕರರ ಎತ್ತರವಾದ ಶಿಲಾಪ್ರತಿಮೆಯಿದೆ. ಈ ಸ್ತಳಕ್ಕೆ ಸಾರಿಗೆ ಸಂಚಾರದ ವ್ಯವಸ್ತೆಯಿದ್ದು, ಸ್ವಂತ ವಾಹನಗಳಲ್ಲಿಯೂ ಸಹ ಹೆಚ್ಚು ಮಂದಿ ಬರುತ್ತಾರೆ. ಎಲ್ಲಾ ದರ‍್ಮೀಯರು ಈ ಮಂದರಗಿರಿ ಬೆಟ್ಟಕ್ಕೆ ಬೇಟಿ ನೀಡುತ್ತಾ ಬಂದಿರುವುದು ಮತ್ತೊಂದು ವಿಶೇಶ. ಬೆಟ್ಟವಾದ್ದರಿಂದ ಚಾರಣಿಗರಿಗೆ ಇದು ಬಹಳ ಪ್ರಿಯವಾದ ಸ್ತಳ.
(ಚಿತ್ರ ಸೆಲೆ: tumakurulife.com )
ಇತ್ತೀಚಿನ ಅನಿಸಿಕೆಗಳು