ಬ್ರಹ್ಮಾಂಡದ ಕೇಂದ್ರ ಬಿಂದು

– .

ಯುನೈಟೆಡ್ ಸ್ಟೇಟ್ಸ್ ನ, ಓಕ್ಲಾಹೋಮಾ ರಾಜ್ಯದ ಎರಡನೇ ದೊಡ್ಡ ನಗರವಾದ ಟಲ್ಸಾ ಹ್ರುದಯ ಬಾಗದಲ್ಲಿರುವ ‘ಬ್ರಹ್ಮಾಂಡದ ಕೇಂದ್ರ ಬಿಂದು’ ಟಲ್ಸಾದ ಜನರಿಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬ್ರಹ್ಮಾಂಡದ ಕೇಂದ್ರ ಬಿಂದು? ಈ ಹೆಸರೇ ತಮಾಶೆಯಾಗಿ ಕಾಣುತ್ತಲ್ಲವೇ? ಇಂತಹದೊಂದು ಬಿಂದು ಇರಲು ಸಾದ್ಯವೇ ಎಂಬ ಪ್ರಶ್ನೆ ಸಾಮಾನ್ಯ ತಿಳುವಳಿಕೆದಾರನಿಗೆ ಬಂದಿರುತ್ತದೆ. ಮನುಶ್ಯನ ಕಲ್ಪನೆಗೂ ನಿಲುಕದಶ್ಟು ವಿಶಾಲವಾಗಿರುವ ಈ ಬ್ರಹ್ಮಾಂಡಕ್ಕೆ, ಒಂದು ಕೇಂದ್ರ ಬಿಂದು ಇದೆ ಎಂದರೆ ಅದರ ಸಾದ್ಯತೆಗಳ ಬಗ್ಗೆ ಅನುಮಾನಗಳು ಹುಟ್ಟುವುದು ಸಹಜ. ಏಕೆಂದರೆ ಬ್ರಹ್ಮಾಂಡದಲ್ಲಿ ಇಡೀ ಸೂರ‍್ಯಮಂಡಲವೇ ಅತ್ಯಂತ ಸಣ್ಣ ಬಿಂದು. ಬೂಮಿ ಅದರಲ್ಲಿ ಒಂದು ಚಿಕ್ಕ ಚುಕ್ಕೆ. ಆ ಬೂಮಿಯಲ್ಲಿ ಈ ಕೇಂದ್ರ ಬಿಂದು ಊಹೆಗೂ ನಿಲುಕದ್ದು. ಟಲ್ಸಾದಲ್ಲಿರುವ ಈ ಜಾಗ ಬೌತಿಕವಾಗಿ ಬ್ರಹ್ಮಾಂಡದ ಕೇಂದ್ರ ಬಿಂದುವಾಗಿರದಿದ್ದರೂ, ಮಾಂತ್ರಿಕ ಹಾಗೂ ಅತ್ಯಂತ ನಿಗೂಡ ಸ್ತಳವಂತೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಈ ಹೆಸರು.

ನೋಡಲು ಹೇಗಿದೆ ಈ ಕೇಂದ್ರ ಬಿಂದು?

ಟಲ್ಸಾದ ಹ್ರುದಯ ಬಾಗದಲ್ಲಿರುವ, ಸುಮಾರು ಮೂವತ್ತು ಇಂಚು ವ್ಯಾಸದ ಈ ಕಾಂಕ್ರೀಟ್ ವ್ರುತ್ತವೇ ಬ್ರಹ್ಮಾಂಡದ ಕೇಂದ್ರ ಬಿಂದು. ಇದು ಬಹಳ ಹಳೆಯದಾಗಿವುದರಿಂದ ಹಾಗೂ ಸಾಕಶ್ಟು ಜನರು ಅಲ್ಲಿ ನಿಂತು ಆ ಜಾಗದ ವಿಸ್ಮಯವನ್ನು ಸ್ವತ ಅನುಬವಿಸಿರುವ ಹಿನ್ನೆಲೆಯಲ್ಲಿ ಮೇಲ್ಮೈನಲ್ಲಿರುವ ಕಾಂಕ್ರೀಟ್ ಸಾಕಶ್ಟು ಸವೆದಿದೆ. ಈ ಮೂವತ್ತು ಇಂಚು ವ್ಯಾಸದ ಸುತ್ತಲೂ ಹದಿಮೂರು ಸುತ್ತು ಇಟ್ಟಿಗೆಗಳಿಂದ ರಚಿಸಲ್ಪಟ್ಟ ಮತ್ತೊಂದು ದೊಡ್ಡ ವ್ರುತ್ತವಿದೆ. ಈ ವ್ರುತ್ತ, ಆ ಅತೀಂದ್ರಿಯ ಬ್ರಹ್ಮಾಂಡ ಕೇಂದ್ರ ಬಿಂದುವನ್ನು ಗುರುತಿಸುವ ಸಲುವಾಗಿ ಮಾತ್ರ ರಚಿಸಲಾಗಿದೆಯೇ ಹೊರತು, ಇದಕ್ಕೆ ಬೇರಾವುದೇ ವಿಶೇಶತೆ ಇಲ್ಲ. ಈ ಹದಿಮೂರು ವ್ರುತ್ತಗಳ ವ್ಯಾಸ ಎಂಟು ಅಡಿಗಳಿಗಿಂತ ಸ್ವಲ್ಪ ಹೆಚ್ಚು.

ಏನಿದರ ವಿಶೇಶತೆ?

ಬ್ರಹ್ಮಾಂಡದ ಕೇಂದ್ರ ಬಿಂದುವಿನ ವಿಶೇಶತೆ ಏನಿರಬಹುದು ಎಂಬ ಅನುಮಾನ ಕಾಡುವುದು ಸಾಮಾನ್ಯ. ಮೂವತ್ತು ಇಂಚು ವ್ಯಾಸದ ಕಾಂಕ್ರೀಟ್ ವ್ರುತ್ತದ ಮದ್ಯದಲ್ಲಿ ನಿಂತು ಶಬ್ದ ಮಾಡಿದಾಗ, ಆ ಶಬ್ದವು ಮೂಲ ಶಬ್ದಕ್ಕಿಂತಾ ಹಲವಾರು ಪಟ್ಟು ಹೆಚ್ಚು ಜೋರಾಗಿ ಪ್ರತಿದ್ವನಿಸುತ್ತದೆ. ಸಾಮಾನ್ಯವಾಗಿ ಒಂದು ಸಣ್ಣ ಸೂಜಿಯನ್ನು ನೆಲಕ್ಕೆ ಹಾಕಿದರೆ, ಸುತ್ತಮುತ್ತಲಿನ ವಾತಾವರಣ ನಿಶ್ಯಬ್ದವಾಗಿದ್ದಲ್ಲಿ ಮಾತ್ರ, ಅದು ನೆಲಕ್ಕೆ ಬಿದ್ದ ಶಬ್ದ ಕೇಳಿಬರುತ್ತದೆ. ಅದೇ ಸೂಜಿಯನ್ನು, ಈ ಬ್ರಹ್ಮಾಂಡದ ಕೇಂದ್ರದಲ್ಲಿ ಬಿಟ್ಟಲ್ಲಿ, ಜಾಗಟೆಯ ಹೊಡೆತದ ಶಬ್ದಕ್ಕಿಂತಲೂ ಜೋರಾದ, ಬಯಂಕರ ಶಬ್ದ ಹೊರ ಹೊಮ್ಮುತ್ತದೆ. ಆ ಶಬ್ದ, ಆ ವ್ಯಾಸದಲ್ಲಿ ನಿಂತವರಿಗೆ ಮಾತ್ರ ಕೇಳಿ ಬರುತ್ತದೆ. ಆ ಮೂವತ್ತು ಇಂಚು ವ್ಯಾಸದಿಂದ ಹೊರ ಬಂದು, ಸೂಜಿಯನ್ನು ನೆಲಕ್ಕೆ ಹಾಕಿದರೆ, ಬೇರೆಲ್ಲೆಡೆ ಕೇಳಿ ಬರುವಂತೆ ಕ್ಶೀಣ ಶಬ್ದ ಕೇಳಿಸುತ್ತದೆ, ಅದೂ ನಿಶ್ಯಬ್ದ ವಾತಾವರಣವಿದ್ದಲ್ಲಿ ಮಾತ್ರ ಕೇಳಿಬರುತ್ತದೆ. ಇದಕ್ಕಿಂತ ವಿಸ್ಮಯಕಾರಿಯಾದ ಮತ್ತೊಂದು ವಿಶಯವೆಂದರೆ, ಆ ಬ್ರಹ್ಮಾಂಡದ ಕೇಂದ್ರ ಬಿಂದುವಿನಿಂದ ಹೊರಗೆ ನಿಂತಿರುವ ಯಾರಿಗೂ ಈ ಬಯಂಕರ ಶಬ್ದ ಕೇಳುವುದೇ ಇಲ್ಲ. ಇದು ನಿಜಕ್ಕೂ ಸೋಜಿಗವಲ್ಲದೆ ಮತ್ತೇನು?

ಇದರ ಹಿಂದಿರುವ ವೈಜ್ನಾನಿಕ ಕಾರಣವಾದರೂ ಏನು?

ಕಿವಿಗಡಚಿಕ್ಕುವ ಶಬ್ದ ಆ ವ್ರುತ್ತದೊಳಗಿನವರಿಗೆ ಮಾತ್ರ ಕೇಳಲು ಹೇಗೆ ಸಾದ್ಯ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಯಾವುದೇ ಸಮಂಜಸವಾದ ವೈಜ್ನಾನಿಕ ಉತ್ತರ ಇದುವರೆಗೂ ದೊರೆತಿಲ್ಲ. ಬ್ರಹ್ಮಾಂಡದ ವ್ರುತ್ತದಲ್ಲಿ ನಿಂತು, ವ್ರುತ್ತದ ಹೊರಗಿನವರೊಂದಿಗೆ ಸಂಬಾಶಣೆ ಮಾಡತೊಡಗಿದರೆ, ವ್ರುತ್ತದ ಹೊರಗಿನವರಿಗೆ ಒಳಗಿನಿಂದ ಮಾತನಾಡುವವರ ದ್ವನಿ ಅತ್ಯಂತ ವಿರೂಪಗೊಂಡಂತೆ ಕೇಳಿಸುತ್ತದೆ. ದ್ವನಿಯಲ್ಲಿ ಸ್ಪಶ್ಟತೆಯಾಗಲಿ, ಸ್ವಚ್ಚತೆಯಾಗಲಿ ಇರುವುದಿಲ್ಲ. ಆ ಒಂದು ಸ್ತಳದಿಂದ ಹೊರ ಬರುವ ದ್ವನಿ ವಿರೂಪಗೊಳ್ಳಲು, ಅಸ್ಪಶ್ಟವಾಗಲು ಕಾರಣವೇನಿರಬಹುದು ಎಂಬುದನ್ನು ತಿಳಿಯಲು, ಸಾಕಶ್ಟು ಸಂಶೋದನೆಗಳು, ಅದ್ಯಯನಗಳು ನಡೆದಿವೆಯಾದರೂ ಇದರ ನಿಗೂಡತೆಯ ಬಗ್ಗೆ ಸ್ಪಶ್ಟ ವೈಜ್ನಾನಿಕ ಕಾರಣ ಇನ್ನೂ ಮರೀಚಿಕೆಯೇ ಆಗಿದೆ. ಇದರ ಹಿಂದಿರುವ ನಿಗೂಡತೆಯನ್ನು ತಿಳಿಯಲು ಹಲವಾರು ಕಲ್ಪಿತ ಸಿದ್ದಾಂತಗಳು ಹೊರಬಿದ್ದಿವೆಯಶ್ಟೇ. ಕೆಲವರು ಇದು ಅತೀಂದ್ರಿಯ ಶಕ್ತಿಯ ಆಟವಿರಬಹುದೆಂದರೆ, ಮತ್ತೆ ಕೆಲವರು ಇದು ಕಾಸ್ಮಿಕ್ ಶಕ್ತಿಯು ಸುರುಳಿಯಾಗಿ ಅಲ್ಲೇ ಸುತ್ತುವ ಕಾರಣವಿರಬಹುದೆಂಬ ಅಬಿಪ್ರಾಯವನ್ನು ಮುಂದಿಟ್ಟಿದ್ದಾರೆ. ಇವೆಲ್ಲಾ ಕಲ್ಪನೆಗಳಶ್ಟೆ.

ಇಲ್ಲಿಗೆ ತಲುಪೋದು ಹೇಗೆ?

ಡಬ್ಲ್ಯೂ ಆರ‍್ಚರ್ ಸ್ಟ್ರೀಟ್ ಮತ್ತು ಎನ್ ಬೋಸ್ಟನ್ ಅವೆನ್ಯೂವಿನ ಮೂಲೆಯಿಂದ ಪಕ್ಕದಲ್ಲಿನ ರೈಲ್ವೇ ಹಳಿಗಳ ಮೇಲೆ ಹಾದು ಹೋಗುವ, ಇಟ್ಟಿಗೆಯಿಂದ ನಿರ‍್ಮಾಣವಾಗಿರುವ ಸೇತುವೆ ಮಾರ‍್ಗವು ಬ್ರಹ್ಮಾಂಡದ ಕೇಂದ್ರ ಬಿಂದುವಿನ ಬಳಿಗೆ ಕರೆದೊಯ್ಯುತ್ತದೆ.

ಬ್ರಹ್ಮಾಂಡದ ಕೇಂದ್ರ ಬಿಂದುವಿನಲ್ಲಿ ಹೊರ ಹೊಮ್ಮುವ ಅಪವರ‍್ತನ ಶಬ್ದದ ಹಿಂದಿರುವ, ಹಾಗೂ ಅದರ ಹೊರಗಿನವರಿಗೆ ವಿರೂಪದ ದ್ವನಿ ಕೇಳಿಬರುವ ನಿಗೂಡತೆಯ ಹಿಂದೆ ಏನೇ ಅಂತರ‍್ಗತ ವಿಶಯ ಅಡಗಿರಲಿ, ಈ ಸ್ತಳ ಮರ‍್ಮವರಿಯಲಾಗದ ಅತ್ಯಂತ ರಹಸ್ಯ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ ಅಲ್ಲವೇ?

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, tulsaworld.com, wanderwisdom.com, livesimplenow.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: