ಕವಿತೆ: ಸೀರೆಗಳ ಅಳಲು

ಗೀತಾ ಜಿ ಹೆಗಡೆ

ಬೀರುವಿನ ತುಂಬ ತುಳುಕುತ್ತಿದೆ
ನೂರಾರು ತರಾವರಿ ಸೀರೆ
ಕೊರೋನಾ ಬಂದಾಗಿನಿಂದ
ಒಂದೂ ಉಡಲಾಗಲಿಲ್ಲ ನೋಡಿ!

ಕಟ್ಟು ಬಿಚ್ಚದೆ ಗಳಿಗೆ ಮುರಿಯದೆ
ಆಯಿತಾಗಲೇ ಒಂದೆರಡು ವರ‍್ಶ
ಸುಕಾಸುಮ್ಮನೆ ಮನೆಯಲ್ಲಿ ಉಡಲಾದೀತೆ
ಸಬೆ ಸಮಾರಂಬ ಒಂದೂ ಇರದೆ?

ಈಗಂತೂ ನೆಂಟರ ಮನೆಗಿರಲಿ
ಪಕ್ಕದ ಮನೆಗೂ ಹೋಗುವಂತಿಲ್ಲ
ಗುಡಿ ಗೋಪುರ ಎಲ್ಲಾ ಬಂದ್
ಇನ್ನು ಹೋಗುವುದಾದರೂ ಎಲ್ಲಿಗೆ?

ಬಿಸಿಲು ಮಜ್ಜನ ಮಾಡಲು
ಬಿಚ್ಚಿ ನೇತಾಕಿದೆ ಅದೊಂದು ದಿನ
ಕೇಳಿತು ಯಾವ ಪುರುಶಾರ‍್ತಕ್ಕೆ
ನಮ್ಮನ್ನು ಈ ಪರಿ ಪೇರಿಸಿಟ್ಟೆ?

ನಿಮ್ಮನ್ನೆಲ್ಲ ಕೊಂಡುಕೊಂಡಿದ್ದು ನಾನಲ್ಲ
ಕೊಡಿಸಿದ್ದು, ಪಡೆದಿದ್ದು, ದಕ್ಕಿದ್ದು
ಗಮನಿಸಲಿಲ್ಲ ಅಂಕಿ ಸಂಕ್ಯೆ
ಹೇಳಿದೆ ಹಲವಾರು ಕುಂಟು ನೆವ

ಸ್ವಲ್ಪ ತಡ್ಕಳಿ ಬಗೆಹರಿಸುವೆ ನಿಮ್ಮ ಸಮಸ್ಯೆ
ಹೇಳಿ ಕೇಳಿ ಇದು ಕೊರೋನಾ ಕಾಲ
ನೋಡಿ, ಒಮ್ಮೆ ಬಂದರೆ ತಡ್ಕಳ ದಂ ಮೊದಲೇ ಇಲ್ಲ
ಲಕ್ಶ ಲಕ್ಶ ಎಲ್ಲಿಂದ ತರೋದು?

ನಿನ್ನದೆಂತುದು ಈ ಪಾಟಿ ಪಿರಿ ಪಿರಿ
ನಮ್ಮನ್ನು ಸುತ್ತಿಕೊಳ್ಳುವುದು ಯಾವಾಗಾ?
ಕೂತಲ್ಲೇ ಕೂತು ಜಿಡ್ಡು ಹಿಡಿದಿದೆ ನಮಗೆ
ಬೊಬ್ಬಿರಿದು ಜಗಳಕ್ಕೆ ಬಿದ್ದವು

ಸತ್ಯ ಅವಕೂ ಗೊತ್ತಾಗಿರಬೇಕು
ಪಕ್ಕನೆ ವೈರಾಣು ಕಳಚಿಕೊಳ್ಳುವುದಿಲ್ಲ ಗೊತ್ತಾ?
ನೀ ಹೆದರ್‍‍‍‍ಪುಕ್ಕಲಿ ನಿಂದೇನಿದ್ರೂ ಗೀಚೋದು
ಗೇಟ್ ದಾಟಿ ಬಾರೆ ಈಚೆ ಸಾಕು!

ಗಳಿಗೆ ಮುರಿಯದ ಹತ್ತಾರು ಸೀರೆ
ತಕತೈ ತಕತೈ ನನ್ನುಡು ನನ್ನುಡು ಮೊದಲು
ಈಗೇನು ಲಾಕ್‍‍‍‍‍ಡೌನ್ ಇಲ್ಲ, ಸಿಕ್ಕಿದ್ದೇ ಚಾನ್ಸು
ನೋಡು ಬೀದಿಗೆ ಬಂದಿಲ್ವಾ ಜನ? ನೀನೂ ಹೊರಡು!

ಹೀಗೆ ಮುಗಿಬಿದ್ದು ಮಾತನಾಡುವಾಗ
ಪಾಪ ಅನಿಸಿತು ಕಣ್ಣೀರು ಜಿನುಗಿತು
ಚೆ! ತಪ್ಪಿತಸ್ತ ಬಾವನೆಯಿಂದ ಮುದ್ದಿಸಿ
ಮೈದಡವಿ ಮತ್ತೆ ಒಪ್ಪವಾಗಿ ಜೋಡಿಸಿಟ್ಟೆ

ಅಂದಹಾಗೆ ನಾನೂ ಕಾಯುತ್ತಿದ್ದೇನೆ
ಸಬೆ ಸಮಾರಂಬಕ್ಕೆ ಜಾತಕ ಪಕ್ಶಿಯಂತೆ
ಹೀಗೋಗಿ ಹಾಗೆ ಬಂದುಬಿಡಬೇಕು
ನನಗಾಗಿ ಅಲ್ಲ ಬಂದಿಯಾದ ಸೀರೆಗಾಗಿ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *