ನಾವೇಕೆ ಬಯ್ಯುತ್ತೇವೆ? – 3ನೆಯ ಕಂತು

– ಸಿ.ಪಿ.ನಾಗರಾಜ.

 

ಕಂತು -1ಕಂತು -2

“ನಾವೇಕೆ ಬಯ್ಯುತ್ತೇವೆ?” ಎಂಬುದನ್ನು ತಿಳಿಯಲು ನಾವು ಎಲ್ಲಿಯೋ ಬೇರೊಂದು ಎಡೆಗೆ ಅರಸಿಕೊಂಡು ಹೋಗಬೇಕಾಗಿಲ್ಲ. ನಮ್ಮ ಜೀವನದ ಆಗುಹೋಗುಗಳಲ್ಲಿ ಬಯ್ಯುವ ಇಲ್ಲವೇ ಬಯ್ಯಿಸಿಕೊಳ್ಳುವ ಸನ್ನಿವೇಶದಲ್ಲಿ ನಮ್ಮ ಮಯ್ ಮನದಲ್ಲಿ ಉಂಟಾಗುವ ತುಡಿತಗಳನ್ನು ಗಮನಿಸಿದರೆ ಸಾಕು ಈ ಪ್ರಶ್ನೆಗೆ ಉತ್ತರ ತಾನಾಗಿಯೇ ದೊರೆಯುತ್ತದೆ.

ಬಯ್ಯುವಾಗ ನಮ್ಮ ದೇಹದಲ್ಲಿರುವ ಮಿದುಳಿನ ನರಮಂಡಲ, ನಮ್ಮ ಸಾಮಾಜಿಕ ವ್ಯಕ್ತಿತ್ವ ಮತ್ತು ನಾವು ಹುಟ್ಟಿ ಬೆಳೆದು ಬಾಳುತ್ತಿರುವ ಕುಟುಂಬ, ಸಮಾಜ ಮತ್ತು ಸಂಸ್ಕ್ರುತಿಯ ಸಂಗತಿಗಳೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಹಾಗೂ ಒಂದರ ಮೇಲೆ ಮತ್ತೊಂದು ಪರಿಣಾಮವನ್ನು ಬೀರುತ್ತಿರುತ್ತವೆ. ಆದ್ದರಿಂದ ಬಯ್ಯುವಿಕೆಗೆ ಕಾರಣಗಳು ಏನೆಂಬುದನ್ನು ತಿಳಿಯಬೇಕಾದರೆ ಇವುಗಳ ಪಾತ್ರವೇನೆಂಬುದನ್ನು ಹಂತಹಂತವಾಗಿ ಪರಿಶೀಲಿಸಬೇಕು.

ಮೊದಲು ನಮ್ಮ ಮೆದುಳಿನ ನರಮಂಡಲದಲ್ಲಿ ನಡೆಯುವ ಕ್ರಿಯೆಗಳು ಹೇಗಿರುತ್ತವೆ ಎಂಬುದನ್ನು ತಿಳಿಯೋಣ.

ಪ್ರಸಂಗ – 1

ಮನೆಯೊಂದರ ಮುಂದಿನ ಆವರಣದಲ್ಲಿ ವ್ಯಕ್ತಿಯೊಬ್ಬರು ಪತ್ರಿಕೆಯೊಂದನ್ನು ಓದುತ್ತ ಕುಳಿತಿದ್ದಾರೆ. ಕಾಲ ಮೇಲೆ ಏನೋ ಹರಿದಂತೆ ಆಗುತ್ತದೆ. ಮರುಗಳಿಗೆಯಲ್ಲಿಯೇ ಅವರ ಕಾಲು ತಾನಾಗಿಯೇ ಒದರುತ್ತದೆ. ಅದು ಏನೆಂದು ಅನಂತರ ನೋಡುತ್ತಾರೆ. ಅದು ನೂಲಿನ ಒಂದು ಎಳೆಯಾಗಿರುತ್ತದೆ. ಹಾವೋ ಇಲ್ಲವೇ ಮತ್ತಾವುದೋ ಹುಳುವೋ ಎಂದು ಬೆದರಿದ್ದ ಅವರು ನಕ್ಕು ಸುಮ್ಮನಾಗಿ ಮತ್ತೆ ಓದಿನಲ್ಲಿ ತೊಡಗುತ್ತಾರೆ. ಒಂದು ವೇಳೆ ಅದು ಹಾವು ಇಲ್ಲವೇ ಹುಳುವಾಗಿದ್ದರೆ ಅಲ್ಲಿಂದ ದೂರ ಸರಿದು ನಿಂತು ಅದನ್ನು ಕೊಲ್ಲುವ ಇಲ್ಲವೇ ಅದನ್ನು ದೂರ ಹೋಗುವಂತೆ ಮಾಡುವ ಕ್ರಿಯೆಯಲ್ಲಿ ತೊಡಗುತ್ತಿದ್ದರು.

ಈ ಪ್ರಸಂಗದಲ್ಲಿ ಎರಡು ಬಗೆಯ ವರ‍್ತನೆಗಳನ್ನು ನಾವು ಕಾಣುತ್ತಿದ್ದೇವೆ. ಕಾಲ ಮೇಲೆ ಹರಿದಿದ್ದು ಏನೆಂಬುದನ್ನು ನೋಡುವುದಕ್ಕೆ ಮುನ್ನವೇ ಕಾಲನ್ನು ಮೇಲಕ್ಕೆ ಎತ್ತಿ ಒದರಿದ್ದರು. ನೋಡಿದ ನಂತರ ಅಪಾಯವಿಲ್ಲದ್ದನ್ನು ಕಂಡು ಅಲ್ಲೇ ಕುಳಿತರು ಇಲ್ಲವೇ ಅಪಾಯವಿರುವುದನ್ನು ಮನಗಂಡು ಅದಕ್ಕೆ ತಕ್ಕಂತೆ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಮಾನವರಾದ ನಮ್ಮ ಮೆದುಳಿನ ನರ ಮಂಡಲದಲ್ಲಿ ಎರಡು ಬಗೆಯ ವ್ಯವಸ್ತೆಗಳಿರುವುದು ಈ ಎರಡು ಬಗೆಯ ವರ‍್ತನೆಗಳಿಗೆ ಕಾರಣವಾಗಿದೆ.

1. ತನಗೆ ತಾನಾಗಿಯೇ ಕ್ರಿಯೆಯಲ್ಲಿ ತೊಡಗಿರುವ ನರಮಂಡಲ ವ್ಯವಸ್ತೆ (Autonomic Nervous System)

ದೇಹದ ಎದೆಯ ಬಡಿತ, ಉಸಿರಾಟ, ಕಣ್ಣಿನ ರೆಪ್ಪೆಗಳ ಬಡಿಯುವಿಕೆ, ರಕ್ತ ಸಂಚಾರ ಮತ್ತು ನಾವು ಸೇವಿಸುವ ಆಹಾರವನ್ನು ಜೀರ‍್ಣಿಸಲು ನೆರವಾಗುವ ಕೆಲಸಗಳೆಲ್ಲವೂ ಈ ಬಗೆಯ ವ್ಯವಸ್ತೆಗೆ ಒಳಪಟ್ಟಿವೆ. ಈ ಕ್ರಿಯೆಗಳು ತಮ್ಮ ಪಾಡಿಗೆ ತಾವು ನಡೆಯುತ್ತಿರುವುದಕ್ಕೆ ನೆರವಾಗುವ ನರಕೋಶ ಮತ್ತು ನರತಂತುಗಳು ನಮ್ಮ ಮೆದುಳಿನ ನರಮಂಡಲದಲ್ಲಿವೆ. ಇದ್ದಕ್ಕಿದ್ದಂತೆಯೇ ನಾವು ಅಪಾಯಕ್ಕೆ ಇಲ್ಲವೇ ಆತಂಕಕ್ಕೆ ಒಳಗಾದಾಗ ಈ ಬಗೆಯ ನರಮಂಡಲ ವ್ಯವಸ್ತೆಯು ಕ್ರಿಯಾಶೀಲವಾಗುತ್ತದೆ. ಆದ್ದರಿಂದಲೇ ಕಾಲ ಮೇಲೆ ಹರಿದಿದ್ದು ಏನು ಎಂಬುದನ್ನು ವ್ಯಕ್ತಿಯು ನೋಡುವುದಕ್ಕೆ ಮುಂಚೆಯೇ ಆತನ ಕಾಲು ತಾನಾಗಿಯೇ ಒದರಿತು.

ಇದ್ದಕ್ಕಿದ್ದಂತೆಯೇ ಯಾವುದೇ ಒಂದು ಪ್ರಸಂಗ ಉಂಟಾದಾಗ ಮೆದುಳಿನ ನರಮಂಡಲದಲ್ಲಿ ನಡೆಯುವ ಈ ಬಗೆಯ ಕ್ರಿಯೆಯನ್ನು “ಓಡುವ ಮತ್ತು ಹೋರಾಡುವ (Flight and Fight)” ವರ‍್ತನೆಗಳೆಂದು ಗುರುತಿಸಿದ್ದಾರೆ.

2. ಉದ್ದೇಶಪೂರ‍್ವಕವಾಗಿಯೇ ಕ್ರಿಯೆಯಲ್ಲಿ ತೊಡಗುವ ಕೇಂದ್ರ ನರಮಂಡಲ ವ್ಯವಸ್ತೆ (Central Nervous System)

ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ತೊಗಲು ಎಂಬ ಈ ಐದು ಬಗೆಯ ಇಂದ್ರಿಯಗಳಿಂದ ಪಡೆಯುವ ಬಹುಬಗೆಯ ಸಂವೇದನೆಗಳನ್ನು ಒರೆಹಚ್ಚಿ ಯಾವ ಸನ್ನಿವೇಶದಲ್ಲಿ ಏನನ್ನು ಮಾಡಬೇಕು ಇಲ್ಲವೇ ಮಾಡಬಾರದು ಎಂಬುದನ್ನು ನಿಶ್ಚಯಿಸಿಕೊಂಡು ಮಾಡುವ ಕ್ರಿಯೆಗಳು ಮತ್ತು ಆಡುವ ಮಾತುಗಳೆಲ್ಲವೂ ಈ ಬಗೆಯ ನರಮಂಡಲ ವ್ಯವಸ್ತೆಗೆ ಒಳಪಟ್ಟಿವೆ.

ಅಪಾಯವಿಲ್ಲದ್ದನ್ನು ಕಂಡು ಸುಮ್ಮನೆ ಕುಳಿತುಕೊಳ್ಳುವುದು ಇಲ್ಲವೇ ಅಪಾಯವಿದೆ ಎಂಬುದನ್ನು ಅರಿತಾಗ ಅಲ್ಲಿಂದ ದೂರ ಸರಿಯುವುದು ಇಲ್ಲವೇ ಅದನ್ನು ಹೊಡೆಯಲು ವ್ಯಕ್ತಿಯು ಮುನ್ನುಗ್ಗುವುದು – ಈ ಬಗೆಯ ವರ‍್ತನೆಗಳಿಗೆ ಮೆದುಳಿನ ಕೇಂದ್ರ ನರಮಂಡಲದಲ್ಲಿ ಕೈಗೊಂಡ ತೀರ‍್ಮಾನಗಳು ಕಾರಣವಾಗುತ್ತವೆ.

ಈ ಎರಡು ಬಗೆಯ ನರಮಂಡಲ ವ್ಯವಸ್ತೆಯು ನಾವು ಆಡುವ ಎರಡು ಬಗೆಯ ಮಾತಿನ ರೀತಿಗಳಿಗೂ ಕಾರಣವಾಗಿದೆ.

1. ಉದ್ದೇಶಿತವಲ್ಲದ ಮಾತುಗಳು:

ಯಾವುದೇ ಒಂದು ಪ್ರಸಂಗದಲ್ಲಿ ಇದ್ದಕ್ಕಿದ್ದಂತೆಯೇ ಅಡ್ಡಿ, ಆತಂಕ, ಹತಾಶೆ, ಅಪಾಯ, ಅಚ್ಚರಿ ಉಂಟಾಗಿ ಕೋಪ, ಹೆದರಿಕೆ, ಆನಂದದ ತುಡಿತಗಳು ಮೈ ಮನದಲ್ಲಿ ಉಂಟಾದಾಗ ನಮಗೆ ಅರಿವಿಲ್ಲದಂತೆಯೇ ನಮ್ಮ ಬಾಯಿಂದ “ಆಹಾ, ಓಹೋ, ಅಬ್ಬಾ, ಅಯ್ಯೋ ದೇವರೇ, ಅಯ್ಯಯ್ಯಪ್ಪೋ, ತೂ ತೂ, ಚೇ ಚೇ” ಮುಂತಾದ ಉದ್ಗಾರಗಳು ಹೊರಹೊಮ್ಮುತ್ತವೆ. ಇಂತಹ ಮಾತುಗಳನ್ನು “ಉದ್ದೇಶಿತವಲ್ಲದ ಮಾತುಗಳು” ಎಂದು ನುಡಿವಿಜ್ನಾನಿಗಳು ಗುರುತಿಸಿದ್ದಾರೆ. ಏಕೆಂದರೆ ಈ ಬಗೆಯ ಮಾತುಗಳು ಮತ್ತೊಬ್ಬರೊಡನೆ ಯಾವುದೇ ಸಂಗತಿಯನ್ನು ವಿನಿಮಯ ಮಾಡಿಕೊಳ್ಳಲೆಂದು ಆಡಿದ ಮಾತುಗಳಲ್ಲ. ವ್ಯಕ್ತಿಯು ಆ ಸನ್ನಿವೇಶದಲ್ಲಿ ತನ್ನ ಮನದ ತುಡಿತವನ್ನು/ಬಾವನೆಯನ್ನು ಹೊರಹಾಕಲು ಆಡಿದ ಮಾತುಗಳಾಗಿವೆ. ಇದ್ದಕ್ಕಿದ್ದಂತೆಯೇ ಆಡುವ ಬಯ್ಗುಳದ ನುಡಿಗಳು ಈ ಬಗೆಯಲ್ಲಿರುತ್ತವೆ.

ಪ್ರಸಂಗ – 2

ಚಿತ್ರಪಟವೊಂದನ್ನು ಗೋಡೆಗೆ ನೇತು ಹಾಕಲೆಂದು ಒಬ್ಬಳು ಸುತ್ತಿಗೆಯಿಂದ ಮೊಳೆಯೊಂದನ್ನು ಹೊಡೆಯುತ್ತಿದ್ದಾಗ, ಗುರಿ ತಪ್ಪಿ ಸುತ್ತಿಗೆಯ ಏಟು ಆಕೆಯ ಬೆರಳಿಗೆ ಬಡಿದಾಗ “ಅಯೋ… ಹಾಳಾದ್ದೆ” ಎಂದು ಚೀತ್ಕರಿಸುತ್ತಾಳೆ. ಅವಳ ಚೀತ್ಕಾರದೊಡನೆ ಹೊರಹೊಮ್ಮಿದ ಈ ಬಯ್ಗುಳವು ಆಕೆಗೆ ಉಂಟಾಗಿರುವ ನೋವಿನ ಒಳಮಿಡಿತವನ್ನು ಹೊರಹಾಕುತ್ತಿದೆ. ಆಕೆಯ ಅಕ್ಕಪಕ್ಕದಲ್ಲಿ ಯಾರಾದರೂ ಇದ್ದಲ್ಲಿ ಅವರಿಗೆ ಅವಳ ಬಾಯಿಂದ ಹೊರಹೊಮ್ಮಿದ ಈ ಬಯ್ಗುಳದ ಪದ ಅವಳ ನೋವನ್ನು ತಿಳಿಯುವಂತೆ ಮಾಡುತ್ತದೆ.

ಇಂತಹ ಸನ್ನಿವೇಶದಲ್ಲಿ ವ್ಯಕ್ತಿಯ ಬಾಯಿಂದ ಹೊರಡುವ ಉದ್ಗಾರಗಳಾಗಲಿ ಇಲ್ಲವೇ ಇದ್ದಕ್ಕಿದ್ದಂತೆ ಆಡುವ ಬಯ್ಗುಳದ ನುಡಿಗಳಾಗಲಿ ಮಾತುಕತೆಯ ರೂಪದಲ್ಲಿ ಇರುವುದಿಲ್ಲ. ವ್ಯಕ್ತಿಯ ಮೈ ಮನದಲ್ಲಿ ಉಂಟಾದ ಬಾವನೆಯನ್ನು ಹೊರಹಾಕುತ್ತವೆ. ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಗೆ ಅಡ್ಡಿಯುಂಟಾದಾಗ ವಾಹನ ಚಾಲಕರಿಂದ ಹೊರಹೊಮ್ಮುವ ಬಗೆಬಗೆಯ ಉದ್ಗಾರಗಳನ್ನು/ಬಯ್ಗುಳಗಳನ್ನು ನಾವೆಲ್ಲರೂ ನಿತ್ಯವೂ ಕೇಳುತ್ತಿರುತ್ತೇವೆ ಇಲ್ಲವೇ ನಾವೇ ಚಾಲಕರಾಗಿದ್ದರೆ ನಮ್ಮ ಬಾಯಿಂದಲೇ ಬಯ್ಗುಳದ ಪದಗಳು ಹೊರಹೊಮ್ಮುತ್ತಿರುತ್ತವೆ. ನಮ್ಮೆಲ್ಲರ ನಿತ್ಯಜೀವನದ ನೂರಾರು ಬಗೆಯ ಪ್ರಸಂಗಗಳಲ್ಲಿ ಈ ರೀತಿ ಇದ್ದಕ್ಕಿದ್ದಂತೆಯೇ ಬಯ್ಗುಳಗಳನ್ನು ಬಳಸುವುದಕ್ಕೆ ನಮ್ಮ ಮೆದುಳಿನ ನರಮಂಡಲದಲ್ಲಿರುವ Autonomic Nervous System ಕಾರಣವಾಗಿದೆ. ಆದ್ದರಿಂದಲೇ ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ಬಗೆಯ ಬಯ್ಗುಳದ ನುಡಿಗಳನ್ನು ಆಡುತ್ತಾನೆ.

2. ಉದ್ದೇಶಿತ ಮಾತುಗಳು:

ಯಾವುದೇ ಒಂದು ಸಂಗತಿಯನ್ನು ಕುರಿತು ಇತರರೊಡನೆ ಪ್ರಸ್ತಾಪಿಸುವಾಗ ಇಲ್ಲವೇ ವ್ಯವಹರಿಸುವಾಗ ಮೊದಲೇ ಆಲೋಚಿಸಿ ಆಡುವ ಮಾತುಗಳನ್ನು ಉದ್ದೇಶಿತ ಮಾತುಗಳೆಂದು ಗುರುತಿಸಲಾಗಿದೆ. ಈ ರೀತಿಯಲ್ಲಿ ಉದ್ದೇಶಪೂರ‍್ವಕವಾಗಿ ಮಾತುಗಳನ್ನಾಡುವುದಕ್ಕೆ ನಮ್ಮ ಮೆದುಳಿನ ನರಮಂಡಲದಲ್ಲಿರುವ Central Nervous System ಕಾರಣವಾಗಿರುತ್ತದೆ.

ನಾವು ಮಾತನ್ನಾಡುತ್ತಿರುವ ಸಾಮಾಜಿಕ ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಕೆಲಸವನ್ನು ಇಲ್ಲವೇ ಮನಸ್ಸಿನ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಉದ್ದೇಶಿತ ಮಾತುಗಳನ್ನು ಇತರರೊಡನೆ ಆಡುತ್ತೇವೆ. ಉದ್ದೇಶಪೂರ‍್ವಕವಾಗಿ ಆಡುವ ಬಯ್ಯುವಿಕೆಯು ಈ ಗುಂಪಿಗೆ ಸೇರುತ್ತದೆ.

ಇತರ ವ್ಯಕ್ತಿಗಳನ್ನು ಅಪಮಾನಮಾಡಲೆಂದೋ, ಇತರರನ್ನು ಹೆದರಿಸಿ ಬೆದರಿಸಿ ನಮಗೆ ಅಗತ್ಯವಿರುವ ಕೆಲಸವನ್ನು ಮಾಡಿಸಿಕೊಳ್ಳಲೆಂದೋ, ಇತರರ ನಡೆನುಡಿಗಳಲ್ಲಿನ ಕುಂದುಕೊರತೆಗಳನ್ನು ಎತ್ತಿ ಆಡಲೆಂದೋ, ನಮಗೆ ಹಾನಿಯನ್ನುಂಟು ಮಾಡಿದ ವ್ಯಕ್ತಿಗಳ ಬಗ್ಗೆ ನಮ್ಮ ಸಂಕಟವನ್ನು ಕಾರಿಕೊಳ್ಳುತ್ತ ಶಪಿಸಲೆಂದೋ ಇಲ್ಲವೇ ಇತರರ ಮನಸ್ಸನ್ನು ಅಣಕದ ನುಡಿಗಳಿಂದ ಚುಚ್ಚಿ ಗಾಸಿಗೊಳಿಸಲೆಂದು ನಾವು ಬಳಸುವ ಬಯ್ಗುಳಗಳು ಉದ್ದೇಶಿತ ಮಾತಿನ ರೀತಿಗೆ ಸೇರುತ್ತವೆ. ಉದ್ದೇಶಿತ ಬಯ್ಗುವಿಕೆಯಲ್ಲಿ ಬಳಸುತ್ತಿರುವ ಬಯ್ಗುಳದ ಬಗೆಗೆ ನಮ್ಮಲ್ಲಿ ಅರಿವು ಮತ್ತು ಎಚ್ಚರವಿರುತ್ತದೆ. ಅಂದರೆ ಬಯ್ಯುವಾಗ ನಮ್ಮ ಮೈ ಮನ ನಮ್ಮ ಹತೋಟಿಯಲ್ಲಿರುತ್ತದೆ. ಏಕೆಂದರೆ ಈ ಬಗೆಯ ಬಯ್ಯುವಿಕೆಯಲ್ಲಿ ತೊಡಗಿದಾಗ ನಮ್ಮನ್ನು ಒಳಗೊಂಡಂತೆ ಇತರ ವ್ಯಕ್ತಿಗಳ ಮೇಲೆಯೂ ಬಹುಬಗೆಗಳಲ್ಲಿ ಬಯ್ಯುವಿಕೆಯು ಪರಿಣಾಮವನ್ನು ಬೀರುತ್ತಿರುತ್ತದೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications