ನೀರೊಳಗೊಂದು ಶಿಲ್ಪಗಳ ಉದ್ಯಾನವನ!
– ಕೆ.ವಿ.ಶಶಿದರ.
ವಿಶ್ವದಲ್ಲಿ ಅನೇಕ ಮಾನವ ನಿರ‍್ಮಿತ ಅದ್ಬುತಗಳಿವೆ. ಅವುಗಳಲ್ಲಿ ನೀರೊಳಗಿನ ಶಿಲ್ಪೋದ್ಯಾನ ಸಹ ಒಂದು. ಈ ಅದ್ಬುತ ಉದ್ಯಾನವನದ ರೂವಾರಿ ಜೇಸನ್ ಡಿ ಕೈರ‍್ಸ್ ಟೇಲರ್. ಈತ ಬಹುಮುಕ ಪ್ರತಿಬಾವಂತ. ಚಾಯಾಗ್ರಾಹಕ, ಶಿಲ್ಪಿ ಮತ್ತು ಪ್ರಕ್ರುತಿ ಸಂರಕ್ಶಣಾ ಉತ್ಸಾಹಿ. ಈತನ ಅದ್ಬುತ ಕ್ರಿಯಾಶೀಲತೆಗೆ ಈ ಶಿಲ್ಪೋದ್ಯಾನವೇ ಸಾಕ್ಶಿ. ಗ್ರೆನಾಡಾದ ಸೇಂಟ್ ಜಾರ‍್ಜ್ ಬಂದರಿನ ಉತ್ತರದಲ್ಲಿರುವ ಮೊಲಿನಿಯರ್ ಕೊಲ್ಲಿಯಲ್ಲಿ ಈ ‘ನೀರೊಳಗಿನ ಶಿಲ್ಪೋದ್ಯಾನ’ವಿದೆ. ಇದರ ರಚನೆ 2006ರಲ್ಲಿ ಪೂರ‍್ಣವಾಯಿತು. ಕೆರಿಬಿಯನ್ ಸಮುದ್ರದ ಕೆಳಬಾಗದಲ್ಲಿ ಎಂಟುನೂರು ಚದರ ಮೀಟರ್ ವಿಸ್ತೀರ‍್ಣದಲ್ಲಿ ಹಬ್ಬಿರುವ ಈ ವಸ್ತು ಸಂಗ್ರಹಾಲಯ, ಅನೇಕ ಅತ್ಯದ್ಬುತ ಮೇರು ಕ್ರುತಿಗಳಿಗೆ ನೆಲೆಯಾಗಿದೆ. ಇಲ್ಲಿನ ಶಿಲ್ಪಗಳ ರಚನೆಯು, ದಿನ ನಿತ್ಯದ ಸಹಜ ಜೀವನಕ್ಕೆ ಅತ್ಯಂತ ಸನಿಹವಾಗಿದೆ. ಈ ದ್ರುಶ್ಟಿ ಕೋನದಲ್ಲಿ ಅವುಗಳನ್ನು ಗಮನಿಸುತ್ತಾ ಹೋದಲ್ಲಿ, ನಮಗೆ ಅನೇಕ ವಿಶಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಸೈಕಲ್ಲಿನಲ್ಲಿ ಹೋಗುತ್ತಿರುವಂತೆ ಬಿಡಿಸಿರುವ ಕಲಾಕ್ರುತಿ ಒಂದಾದರೆ, ಪತ್ರ ಬರೆಯುತ್ತಿರುವಂತಿರುವುದು ಮತ್ತೊಂದು, ಮಗದೊಂದರಲ್ಲಿ ಮಲಗಿರುವ, ಇನ್ನೊಂದರಲ್ಲಿ ಒಂದು ವ್ರುತ್ತದಲ್ಲಿ ನ್ರುತ್ಯ ಮಾಡುತ್ತಿರುವ ಬಂಗಿಗಳಿವೆ. ವಿವಿದ ಬಂಗಿಯ ಸುಮಾರು ಎಪ್ಪತ್ತು ಶಿಲ್ಪಗಳು ಈ ಉದ್ಯಾನವನವನ್ನು ಅಲಂಕರಿಸಿವೆ. ಈ ಎಲ್ಲಾ ಶಿಲ್ಪಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಎರಡರಿಂದ ಐದು ಮೀಟರ್ ಅಂತರದಲ್ಲಿ ಸ್ತಾಪನೆಗೊಂಡಿರುವುದು ವಿಶೇಶವಾಗಿದೆ.
ನೀರೊಳಗಿನ ಈ ಶಿಲ್ಪೋದ್ಯಾನ ನೀರಿನ ಮೇಲ್ಮೈನಿಂದ, ನಾಲ್ಕರಿಂದ ಆರು ಮೀಟರ್, ಆಳದಲ್ಲಿದೆ. ತಳ ಪಾರದರ‍್ಶಕವಾಗಿರುವ ದೋಣಿಯಲ್ಲಿ ಹೋದರೆ ಇವೆಲ್ಲವನ್ನೂ ವೀಕ್ಶಿಸಲು ಸಾದ್ಯ. ಉತ್ತಮ ಈಜುಗಾರರಾದಲ್ಲಿ ನೀರಿನೊಳಗೆ ಇಳಿದು ಇವುಗಳ ಸುತ್ತ, ಸುತ್ತು ಹಾಕಬಹುದು. 1974ರಲ್ಲಿ ಜನಿಸಿದ ಜೇಸನ್ ಡಿ ಕೈರ‍್ಸ್ ಟೇಲರ್, ತನ್ನ ಸಮಕಾಲೀನರಿಗಿಂತ ಶಿಲ್ಪಕಲೆ ಹಾಗೂ ಡೈವಿಂಗ್ನಲ್ಲಿ ಬಹಳ ಚತುರ. ನೀರೋಳಗಿನ ಶಿಲ್ಪೋದ್ಯಾನವನ್ನು ಸ್ತಾಪಿಸುವ ಮೂಲಕ ಕೆರಿಬಿಯನ್ ಸಮುದ್ರದ ಹವಳ ದಿಬ್ಬಗಳನ್ನು(Coral Reef) ಉಳಿಸುವ ಸಾಹಸಕ್ಕೆ ಈತ ಕೈ ಜೋಡಿಸಿದ.ಈ ಶಿಲ್ಪೋದ್ಯಾನದ ಸ್ತಾಪನೆಯು, ಪ್ರವಾಸೋದ್ಯಮದ ವ್ಯತಿರಿಕ್ತ ಪರಿಣಾಮದಿಂದ ಹಾಳಾಗುತ್ತಿದ್ದ ಹವಳದ ದಿಬ್ಬಗಳನ್ನು ಸಂರಕ್ಶಿಸುವ ನಿಟ್ಟಿನಲ್ಲಿ ಮಾಡಿದ ಅತ್ಯಂತ ಸುಲಬ ಉಪಾಯವಾಗಿತ್ತು. ಹಲವು ಸಮುದ್ರ ಜೀವಿಗಳಿಗೆ ಮತ್ತು ಮ್ರುದ್ವಂಗಿಗಳಿಗೆ ಈ ಕ್ರುತಕ ಉದ್ಯಾನವನ ವಾಸಸ್ತಾನವಾಗಿದೆ.
ನೀರೊಳಗಿನ ಶಿಲ್ಪೋದ್ಯಾನದಲ್ಲಿರುವ ಶಿಲ್ಪಗಳು, ನೀರಿನಡಿಯಲ್ಲಿರುವ ಕಾರಣ ದೊಡ್ಡದಾಗಿ ಕಂಡುಬರುತ್ತವೆ. ಇದಕ್ಕೆ ಸೂರ‍್ಯ ಕಿರಣಗಳು ನೀರಿನಲ್ಲಿ ಹಾದು ಹೋಗುವಾಗ ವಕ್ರೀಬವನಕ್ಕೆ(ಬೆಳಕಿನ ಕಿರಣಗಳ ಬಾಗುವಿಕೆ) ಒಳಗಾಗುವುದು ಮೂಲ ಕಾರಣ. ಇದರ ಪರಿಣಾಮ ಶಿಲ್ಪಗಳ ಮೇಲಾಗುತ್ತದೆ. ಕೆಲವೊಮ್ಮೆ ವಿವಿದ ಬಣ್ಣಗಳಲ್ಲಿ ಆ ಶಿಲ್ಪಗಳು ಕಾಣುವುದಕ್ಕೂ ಇದೇ ಕಾರಣ. ಈ ಶಿಲ್ಪೋದ್ಯಾನದಲ್ಲಿರುವ ಎಲ್ಲಾ ಶಿಲ್ಪಗಳನ್ನು ವಿಶೇಶ ಸಿಮೆಂಟಿನಿಂದ ಮೊದಲು ಬೂಮಿಯ ಮೇಲೆ ರಚಿಸಲಾಗುತ್ತದೆ. ಅದು ಸ್ತಿರವಾದ ನಂತರ ನ್ಯುಮ್ಯಾಟಿಕ್ ಲಿಪ್ಟ್ (ವಾಯುಚಾಲಿತ ಎತ್ತುಗ)ಗಳ ಸಹಾಯದಿಂದ ನೀರಿನಲ್ಲಿ, ಗುರುತಿಸಲಾದ ಸ್ತಳದಲ್ಲಿ, ಸ್ತಾಪಿಸಲಾಗುತ್ತದೆ.
ನೀರೊಳಗಿನ ಶಿಲ್ಪೋದ್ಯಾನದಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆದಿರುವ ಶಿಲ್ಪಗಳಲ್ಲಿ ‘ಕ್ರೈಸ್ಟ್ ಆಪ್ ದಿ ಡೆಪ್ತ್ಸ್’ ಒಂದು. ‘ಬಿನಾಕಾ’ ಎಂಬ ವಿಹಾರ ನೌಕೆ (ಕ್ರೂಸ್ ಲೈನರ್) 55 ವರ‍್ಶಗಳ ಹಿಂದೆ ಗ್ರೆನೆಡಾದ ತೀರದಲ್ಲಿ ಮುಳುಗಿತ್ತು. ಅದರ ಸವಿನೆನೆಪಿಗಾಗಿ ‘ಕ್ರೈಸ್ಟ್ ಆಪ್ ದಿ ಡೆಪ್ತ್ಸ್’ ತಲೆ ಎತ್ತಿದೆ. ಮತ್ತೊಂದು ಏಕತೆ ಮತ್ತು ಶಾಶ್ವತತೆಯ ಕಲ್ಪನೆಯನ್ನು ಸಾಕಾರಗೊಳಿಸುವಂತಿರುವ ದೊಡ್ಡ ಶಿಲ್ಪದ ಗುಂಪು. ಇನ್ನೊಂದು 15 ಟನ್ ತೂಕದ ಸಿಯೆನ್ನಾ ಎಂಬ ಕಾಲ್ಪನಿಕ ಪಾತ್ರದ ಹುಡುಗಿಯ ಶಿಲ್ಪ. ಇದು, ಇಂಗ್ಲೆಂಡಿನಲ್ಲಿ ನೆಲೆಸಿರುವ ಗ್ರೆನೆಡಾದ ಕವಿ, ಕಾದಂಬರಿಕಾರ, ನಾಟಕಕಾರ, ಪತ್ರಕರ‍್ತ ಜಾಕೋಬ್ ರಾಸ್ ಬರೆದ ಸುಪ್ರಸಿದ್ದ ಸಣ್ಣ ಕತೆ ”ಎ ಡಿಪೆರೆಂಟ್ ಓಶನ್”ನ ಹುಡುಗಿಯ ಪಾತ್ರವಾಗಿದೆ. ಇವುಗಳೊಂದಿಗೆ ವೀಕ್ಶಕರ ಪ್ರಮುಕ ಆಕರ‍್ಶಣೆಯೆಂದರೆ ದೊಡ್ಡ ಪಿಯಾನೋದ ಮಾದರಿ, 60 ಟನ್ ತೂಕದ, ಮುದುರಿ ಕುಳಿತ ಬಹಾಮಿಯನ್ ಹುಡುಗಿಯ ಶಿಲ್ಪ, ‘ದ ಸೈಲೆಂಟ್ ಎವಲ್ಯೂಶನ್’ ಎಂಬ ಗುಂಪು ಶಿಲ್ಪದಲ್ಲಿರುವ ನಾಲ್ಕು ನೂರು ಪೂರ‍್ಣ ಗಾತ್ರದ ಮಾನವನ ಪ್ರತಿಬಿಂಬ. ಇದರ ವಿಶೇಶತೆಯೆಂದರೆ ಅವುಗಳಲ್ಲಿ ಯಾವೆರೆಡು ಶಿಲ್ಪವೂ ಒಂದೇ ತೆರನಾಗಿಲ್ಲದೆ ಇರುವುದು. ನೀರೊಳಗಿನ ಈ ಶಿಲ್ಪೋದ್ಯಾನವು ನೋಡುಗರನ್ನು, ಪ್ರವಾಸಿಗರನ್ನೂ ವೀಕ್ಶಕರನ್ನು ತನ್ನದೇ ಆದ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.
(ಮಾಹಿತಿ ಮತ್ತು ಚಿತ್ರಸೆಲೆ: sandals.com, caribbeanandco.com, caribbeanandco.com/image )
ಇತ್ತೀಚಿನ ಅನಿಸಿಕೆಗಳು