ಕವಿತೆ: ನೀನೇಕೆ ಮರುಗುವೆ ಮನುಜ

– ವೆಂಕಟೇಶ ಚಾಗಿ.

ಬರುವಾಗ ಏನು ತಂದೆ
ಹೋಗುವಾಗ ಇಲ್ಲ ಮುಂದೆ
ಆಸೆಯಲ್ಲಿ ನೀನು ಬೆಂದೆ
ಏಕೆ ನೋಯುವೆ ಮನುಜ
ಏಕೆ ನೋಯುವೆ

ಮಣ್ಣು ಗೆದ್ದು ಮೆರೆವೆಯಲ್ಲ
ಕಲ್ಲು ಕೊರೆದು ನಿಂತೆಯಲ್ಲ
ಕ್ಶಣಿಕ ಸುಕವ ಕಂಡೆಯಲ್ಲ
ಏಕೆ ಬಾಡುವೆ ಮನುಜ
ಏಕೆ ಬಾಡುವೆ

ಗೆದ್ದು ಮೆರೆವ ರಾಜನಿಲ್ಲ
ಒದ್ದು ನುರಿವ ದನಿಕನಿಲ್ಲ
ಬೇಡುತಿರುವ ಬಡವರೆಲ್ಲ
ಏಕೆ ಹಸಿಯುವೆ ಮನುಜ
ಏಕೆ ಹಸಿಯುವೆ

ನಿನ್ನೆ ಕಂಡ ಕನಸಿಗಾಗಿ
ಮುಂದೆ ಬರುವ ನಾಳೆಗಾಗಿ
ಕರಗುತಿರುವ ವಯಸಿಗಾಗಿ
ಏಕೆ ಮರೆಯುವೆ ಇಂದು
ಏಕೆ ಮರೆಯುವೆ

ಮಣ್ಣಿನಲ್ಲಿ ಹೊನ್ನು ಬೆಳೆದೆ
ಹೊನ್ನು ತೊಟ್ಟು ಹುಣ್ಣು ಪಡೆದೆ
ಹೆಣ್ಣು ಹೊನ್ನು ಮಣ್ಣು ಬಿಡದೆ
ಏಕೆ ಬದುಕುವೆ ಮನುಜ
ಏಕೆ ಬದುಕುವೆ

ಮನುಜ ಮತವ ಸೇರಿಬಿಡು
ಶಾಂತಿ ಸ್ನೇಹ ದರಿಸಿಬಿಡು
ಇರುವ ತನಕ ನಗುವ ಹರಡು
ಏಕೆ ನಿಲ್ಲುವೆ ಮನುಜ
ಏಕೆ ನಿಲ್ಲುವೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: