ಆಲಸ್ಯವೇ ಅನಾರೋಗ್ಯಕ್ಕೆ ರಹದಾರಿ!
ಲಕ್ಶಾಂತರ ವರ್ಶಗಳ ಹಿಂದಿನಿಂದ ನಡೆಸಿಕೊಂಡು ಬಂದ ಚಟುವಟಿಕೆಗಳಾದ ಬೇಟೆ, ಕ್ರುಶಿ ಮತ್ತು ತೀವ್ರವಾದ ದೈಹಿಕ ಶ್ರಮ ಇವು ನಮ್ಮ ದೇಹವನ್ನು ಬಹು ಕಟ್ಟುಮಸ್ತಾಗಿ ಆರೋಗ್ಯಪೂರ್ಣವಾಗಿ ಇರಿಸಿದ್ದವು. ಆದರೆ ಬದಲಾದ ಆದುನಿಕ ಜೀವನಶೈಲಿ ಎಲ್ಲವನ್ನು ಕೂಡ ಬದಲಾಯಿಸಿಬಿಟ್ಟಿದೆ. ಬಹುತೇಕ ಕೆಲಸಗಳನ್ನು ಬೆರಳಂಚಿನಲ್ಲಿ ಮುಗಿಸಿಬಿಡಬಹುದು. ವಿಜ್ನಾನ ಮತ್ತು ತಂತ್ರಜ್ನಾನ ಬಹಳಶ್ಟು ಮುಂದುವರಿದುದರಿಂದ, ದೈಹಿಕ ಶ್ರಮವಿಲ್ಲದೆ ನಮ್ಮ ಜೀವನ ಅತ್ಯಂತ ಸುಲಬಗೊಂಡಿದೆ. ಆದ ಕಾರಣ ಎಲ್ಲಾ ಕೆಲಸಕಾರ್ಯಗಳನ್ನು ನಿಂತಲ್ಲಿಯೇ, ಕೂತಲ್ಲಿಯೇ ಮುಗಿಸಿಬಿಡಬಹುದು.
“ಸರಿಯಾದ ಪ್ರಮಾಣದ ಪೋಶಣೆ ಮತ್ತು ವ್ಯಾಯಾಮದ ಕ್ರಮ ಹೊಂದಿದ್ದರೆ, ನಾವು ಸುರಕ್ಶಿತ ಆರೋಗ್ಯವನ್ನು ಕಂಡುಕೊಳ್ಳುಬಹುದು”, ಇದು ಎರಡು ಸಾವಿರ ವರ್ಶಗಳ ಹಿಂದೆ, ಆದುನಿಕ ವೈದ್ಯಶಾಸ್ತ್ರದ ಪಿತಾಮಹ ಹಿಪೊಕ್ರೆಟಿಸ್ ಅವರು ಬಹಳ ಸ್ಪಶ್ಟವಾಗಿ ಹೇಳಿರುವ ಮಾತಾಗಿದೆ. ನಾವು ಸರಿಯಾದ ಪ್ರಮಾಣದಲ್ಲಿ ಆಹಾರದ ಮೂಲಕ ಪೋಶಕಾಂಶಗಳನ್ನು ತೆಗೆದುಕೊಳ್ಳುತ್ತಿಲ್ಲ ಅನ್ನುವುದಂತೂ ಸತ್ಯ. ಒಂದು ವೇಳೆ ಸರಿಯಾದ ಪ್ರಮಾಣದ ಪೋಶಕಾಂಶಗಳನ್ನು ಸೇವಿಸಿದ್ದೇ ಆದಲ್ಲಿ, ನಮ್ಮನ್ನು ಅನಾರೋಗ್ಯ ಕಾಡುವುದು ಏಕೆ? ಬಡವನಾದರೆ ಉತ್ತಮ ಆಹಾರ ಪೋಶಕಾಂಶಗಳು ದೊರೆಯುವುದಿಲ್ಲ ಎನ್ನಬಹುದು ಆದರೆ ಆಹಾರ ಪೋಶಕಾಂಶಗಳನ್ನು ಕೊಂಡುಕೊಳ್ಳುವ ಶಕ್ತಿ ಇರುವ ಮತ್ತು ಬಳಸುವ ವರ್ಗಗಳಲ್ಲಿಯೂ ಕೂಡ ಅತಿ ಹೆಚ್ಚು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಶಾದದ ಸಂಗತಿ. ಇದಕ್ಕೆಲ್ಲ ಮೂಲಬೂತ ಕಾರಣಗಳು ಏನು ಗೊತ್ತೆ? ನಮ್ಮಲ್ಲಿರುವ ಸೋಮಾರಿತನ ಮತ್ತು ಅಸಡ್ಡೆಯ ಗುಣಗಳು.
ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬುದು ಅಪ್ಪಟ ಸತ್ಯ. ಮನುಶ್ಯ ತಾನು ಮುಂದುವರಿದು ತನ್ನ ಅನುಕೂಲಕ್ಕೆ ತಕ್ಕಹಾಗೆ ಎಲ್ಲವನ್ನು ಮಾರ್ಪಾಡುಗೊಳಿಸಿ, ಸುಲಬಗೊಳಿಸುತ್ತ ಹೋದ, ಆದರೆ ಅದರ ಜೊತೆಜೊತೆಯಲ್ಲೇ ಮಾನವನಿಗೆ ಅನಾರೋಗ್ಯ ಎಂಬ ಕಡು ಶಾಪವನ್ನು ಕೂಡ ಬಗವಂತ ಕರುಣಿಸಿದ್ದಾನೆ! ಹೌದು ನಾವು ಹೆಚ್ಚಾಗಿ ನಮ್ಮ ಜೀವನ ಶೈಲಿಯನ್ನು ಜಡತ್ವದೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಸೋಮಾರಿತನ ಮತ್ತು ದೈಹಿಕ ನಿಶ್ಕ್ರಿಯತೆ ಇವು ನಮ್ಮನ್ನು ಕಾಡುವ ದೊಡ್ಡ ಶತ್ರುಗಳಾಗಿವೆ.
ವಿಶ್ವ ಆರೋಗ್ಯ ಸಂಸ್ತೆಯ ಸಂಶೋದನೆಯ ಸುತ್ತ
ವಿಶ್ವ ಆರೋಗ್ಯ ಸಂಸ್ತೆಯ ಪ್ರಕಾರ ದೈಹಿಕ ನಿಶ್ಕ್ರಿಯತೆ ವಿಶ್ವದ ನಾಲ್ಕನೇ ಅತಿ ದೊಡ್ಡ ಜಾಗತಿಕ ಕೊಲೆಗಾರನಾಗಿ ಬೆಳೆಯತೊಡಗಿದೆ. ದೂಮಪಾನ, ಮದುಮೇಹ ಮತ್ತು ಸ್ತೂಲಕಾಯ ನಂತರ ನಮ್ಮನ್ನು ಕಾಡುವುದೇ ಈ ದೈಹಿಕ ನಿಶ್ಕ್ರಿಯತೆ ಎಂಬ ಕಾಯಿಲೆ. ಸೋಮಾರಿತನವು ಮಾನಸಿಕ ಅಸ್ವಸ್ತತೆಗಳಿಗೆ ಕಾರಣವಾಗುವುದಲ್ಲದೆ ಅದು ನಮ್ಮ ದೇಹ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಅಬ್ಯಾಸದಿಂದಾಗಿ, ರಕ್ತವು ನಮ್ಮ ದೇಹದಲ್ಲಿ ಸರಿಯಾಗಿ ಸಂಚಲನೆಯಾಗುವುದಿಲ್ಲ. ಇದು ನಮ್ಮ ದೇಹದಲ್ಲಿನ ಶುದ್ದ ರಕ್ತದ ಪ್ರಮಾಣದ ಇಳಿಕೆಗೆ ಕಾರಣವಾಗುತ್ತದೆ. ದೇಹದ ಬಾಗಗಳು ಶುದ್ದ ರಕ್ತವನ್ನು ಪಡೆಯದಿದ್ದರೆ, ಅವು ದಕ್ಶತೆಯನ್ನು ಕಳೆದುಕೊಳ್ಳುತ್ತವೆ ಮತ್ತು ವ್ಯಕ್ತಿಯ ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಸರಿಯಾದ ರಕ್ತಪರಿಚಲನೆಗಾಗಿ ನಾವು ಸಕ್ರಿಯ ಮತ್ತು ಶಕ್ತಿಯುತ ದೇಹವನ್ನು ಹೊಂದಿರಬೇಕು. ಶುದ್ದ ಮತ್ತು ಚೆನ್ನಾಗಿ ಆಮ್ಲಜನಕ ಮಟ್ಟ ಹೊಂದಿರುವ ರಕ್ತವನ್ನು ಪಡೆಯುವುದರಿಂದ ದೇಹದ ಎಲ್ಲಾ ಬಾಗಗಳು ಆರೋಗ್ಯವಾಗಿರುತ್ತವೆ. ಸೋಮಾರಿಗಳ ಮಿದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅವರಿಗೆ ಮರೆವಿನ ಕಾಯಿಲೆ ಉಂಟಾಗುತ್ತದೆ.
ದೈಹಿಕ ನಿಶ್ಕ್ರಿಯತೆಯಿಂದ ಆಗುವ ಪರಿಣಾಮಗಳು
ದೈಹಿಕ ನಿಶ್ಕ್ರಿಯತೆಯಿಂದಾಗಿ ನಾವು ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದು ಹ್ರುದ್ರೋಗ, ಟೈಪ್ 2 ಮದುಮೇಹ, ಬೊಜ್ಜು, ಕಿನ್ನತೆ, ಬುದ್ದಿಮಾಂದ್ಯತೆ ಮತ್ತು ಕ್ಯಾನ್ಸರ್ ನಂತಹ ದೀರ್ಗಕಾಲದ ಆರೋಗ್ಯ ಸಮಸ್ಯೆಗಳ ಬೆಳವಣಿಗೆಗೆ ಸಂಬಂದಿಸಿದೆ. ಇದು ನಮಗೇ, ನಮ್ಮ ಬಗ್ಗೆ ಕೆಟ್ಟ ಬಾವನೆಯನ್ನು ಉಂಟುಮಾಡಬಹುದು. ತಪ್ಪಿತಸ್ತ ಮತ್ತು ಹತಾಶೆಯ ಮನೋಬಾವವನ್ನು ತರಬಹುದು. ಬಾರತದಲ್ಲಿ ಸರಿಸುಮಾರು 61% ಸಾವುಗಳು ಜೀವನಶೈಲಿಯ ಸಮಸ್ಯೆಗಳಿಂದಾಗಿವೆ. ಇತರ ವಿಶಯಗಳ ಜೊತೆಗೆ, ದೈಹಿಕ ಚಟುವಟಿಕೆಯ ಕೊರತೆಯು ಅಂತಹ ಕಾಯಿಲೆಗಳಿಗೆ ಪ್ರಮುಕ ಕಾರಣವೆಂದು ವಿಶ್ವ ಆರೋಗ್ಯ ಸಂಸ್ತೆ ಗುರುತಿಸಿದೆ. ದುರದ್ರುಶ್ಟವಶಾತ್, ಇಂದು ಹೆಚ್ಚಿನ ಉದ್ಯೋಗಗಳಲ್ಲಿ ದಿನಕ್ಕೆ ಸರಾಸರಿ 9 ಗಂಟೆಗಳ ಕಾಲ ಕುಳಿತು ಕೆಲಸ ಮಾಡಬೇಕಾಗುತ್ತದೆ ಮತ್ತು ಇದು ಬಹುತೇಕ ಅನಿವಾರ್ಯವಾಗಿದೆ. ಲಿವರ್ಪೂಲ್ ವಿಶ್ವವಿದ್ಯಾಲಯದ ಸಂಶೋದನೆಯು ಯುವ ಆರೋಗ್ಯವಂತ ಜನರಲ್ಲಿ ಎರಡು ವಾರಗಳ ನಿಶ್ಕ್ರಿಯತೆಯು ಸ್ನಾಯುವಿನ ದ್ರವ್ಯರಾಶಿಯನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಬದಲಾವಣೆಗಳನ್ನು ಉಂಟುಮಾಡಬಹುದು, ಇದು ಟೈಪ್ 2 ಡಯಾಬಿಟಿಸ್, ಹ್ರುದ್ರೋಗ ಮತ್ತು ಅಕಾಲಿಕ ಮರಣದಂತಹ ದೀರ್ಗಕಾಲದ ಕಾಯಿಲೆಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿಕೊಟ್ಟಿದೆ. ಈಗ, ಒಂಬತ್ತು ಗಂಟೆಗಳ ಡೆಸ್ಕ್ ಉದ್ಯೋಗಗಳ ಜೀವಿತಾವದಿಯು ಏನು ಮಾಡುತ್ತದೆ ಎಂದು ಊಹಿಸಿ!
ದೈಹಿಕ ಚಟುವಟಿಕೆಯನ್ನು ಅಳೆಯುವ ಮೂಲಕ ಆರೋಗ್ಯದ ಮಟ್ಟವನ್ನು ತಿಳಿದುಕೊಳ್ಳುತ್ತಿರುವ ಬೆಳವಣಿಗೆಯು, ನಾವು ತಲುಪಿರುವ ಬಯಾನಕ ಪರಿಸ್ತಿತಿಗೆ ಹಿಡಿದ ಕನ್ನಡಿಯಾಗಿದೆ. ನಾವು ಮೂಲಬೂತ ಆರೋಗ್ಯದ ಪ್ರಯೋಜನಗಳನ್ನು ಪಡೆಯುವ ಕೆಲಸವನ್ನು (ಕನಿಶ್ಟ 30 ನಿಮಿಶಗಳ ಮದ್ಯಮದಿಂದ ತೀವ್ರ ದೈಹಿಕ ಚಟುವಟಿಕೆಯನ್ನು ನೀಡಲು), ಕನಿಶ್ಟ ಶಿಪಾರಸು ಮಾಡಲಾದ ದೈಹಿಕ ಚಟುವಟಿಕೆಯನ್ನು ಸಹ ಮಾಡುತ್ತಿಲ್ಲ. ವಾರದಲ್ಲಿ ಕನಿಶ್ಟ ಐದು ದಿನಗಳಾದರೂ ಸಕ್ರಿಯವಾಗಿ ಇರಲೇಬೇಕು. ಅಂಕಿಅಂಶಗಳ ಪ್ರಕಾರ, ನಿಶ್ಕ್ರಿಯವಾಗಿ ಕಳೆದ ಪ್ರತಿ ವಾರವು 2 ಸಿಗರೇಟ್ ಪ್ಯಾಕೆಟ್ ಸೇದುವುದಕ್ಕೆ ಸಮನಾಗಿರುತ್ತದೆ. ದೂಮಪಾನಕ್ಕಿಂತ ಬಿನ್ನವಾಗಿ, ಜಡ ಜೀವನಶೈಲಿಯು 40ಕ್ಕೂ ಹೆಚ್ಚು ವೈದ್ಯಕೀಯ ಮಾನ್ಯತೆ ಪಡೆದ ದೀರ್ಗಕಾಲದ ಕಾಯಿಲೆಗಳಾದ ಹ್ರುದಯ ಸಂಬಂದಿ ಕಾಯಿಲೆ, ಟೈಪ್ 2 ಮದುಮೇಹ, ಸ್ತೂಲಕಾಯ, ಮಾನಸಿಕ ಅಸ್ವಸ್ತತೆ, ಬುದ್ದಿಮಾಂದ್ಯತೆ, ಕೆಲವು ಬಗೆಯ ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ. ಇದು ಜೀವನದ ಗುಣಮಟ್ಟವನ್ನು ಕಡಿಮೆ ಮಾಡಲು ಮತ್ತು ಬಹು ಮುಕ್ಯವಾಗಿ ಅತ್ರುಪ್ತಿಗೆ ಕಾರಣವಾಗುತ್ತದೆ.
ನಮ್ಮಲ್ಲಿರುವ ತಪ್ಪು ಕಲ್ಪನೆಗಳು
ನಾನು ತೆಳ್ಳಗಿರುವ ಕಾರಣ ನನಗೆ ದೈಹಿಕ ವ್ಯಾಯಾಮದ ಅವಶ್ಯಕತೆ ಇಲ್ಲ, ದೈಹಿಕ ವ್ಯಾಯಾಮ ಏನಿದ್ದರೂ ದಪ್ಪಗಿರುವವರಿಗೆ ಎಂದು ತಿಳಿದಿದ್ದರೆ ಅದು ಕಂಡಿತ ತಪ್ಪು. ತೆಳ್ಳಗಾಗಲಿ ಅತವಾ ದಪ್ಪವಾಗಲಿ, ಜಡ ಜೀವನಶೈಲಿ ಹೊಂದಿರುವ ವ್ಯಕ್ತಿಯು, ದೂಮಪಾನಿಗಳಿಗಿಂತಲೂ ಬೇಗನೆ ಸಾಯುವ ಸಾದ್ಯತೆಗಳನ್ನು ಹೊಂದಿರುತ್ತಾನೆ. ಮಕ್ಕಳಲ್ಲಿ ನಿಶ್ಕ್ರಿಯತೆಯು ಸ್ತೂಲಕಾಯಕ್ಕೆ ಕಾರಣವಾಗುತ್ತದೆ ಮತ್ತು ಎಲ್ಲಾ ಸಾಮಾಜಿಕ-ಆರ್ತಿಕ ವರ್ಗಗಳಲ್ಲಿ ಶೈಕ್ಶಣಿಕ ಕಾರ್ಯಕ್ಶಮತೆಯನ್ನು ಕಡಿಮೆ ಮಾಡುತ್ತದೆ. ಕೆಲಸ ಮಾಡುವ ವಯಸ್ಕರಲ್ಲಿ ನಿಶ್ಕ್ರಿಯತೆಯು ಕೆಲಸದ ರಜೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ವಯಸ್ಸಾದವರಲ್ಲಿ, ಜೀವನದ ಗುಣಮಟ್ಟ ಮತ್ತು ಸ್ವಾತಂತ್ರ್ಯವು ತೀವ್ರವಾಗಿ ಕಡಿಮೆಯಾಗುತ್ತದೆ, ಅಲ್ಲದೇ ಆರೋಗ್ಯದೆಡೆಗಿನ ವೆಚ್ಚಗಳು ಹೆಚ್ಚಾಗುತ್ತವೆ.
ಜಡತ್ವ ವ್ಯಕ್ತಿ ಮತ್ತು ಸಮಾಜದ ಮೇಲೆ ಹೊರೆಯಾಗಿದೆ. ಚಾಣಕ್ಯ ಹೇಳಲಾದ ವಿಶಯಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯ “ಚಾಣಕ್ಯ ನೀತಿ ಶಾಸ್ತ್ರ” ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಸೋಮಾರಿತನದ ಬಗ್ಗೆ ಬಹಳ ಸೂಕ್ಶ್ಮವಾಗಿ ಕೂಡ ಹೇಳಿದ್ದಾರೆ. ಸೋಮಾರಿತನವನ್ನು ಮರೆತು ಕಶ್ಟಪಟ್ಟು ಕೆಲಸ ಮಾಡಿ. “ಸೋಮಾರಿಯಾದ ಮನುಶ್ಯನಿಗೆ ವರ್ತಮಾನ ಮತ್ತು ಬವಿಶ್ಯವಿಲ್ಲ” ಎಂಬುದನ್ನು ನೆನಪಿಡಿ. ಸೋಮಾರಿತನವು ವ್ಯಕ್ತಿಯು ಜೀವನದಲ್ಲಿ ಸಂಪೂರ್ಣ ವೈಪಲ್ಯ ಹೊಂದಲು ಕಾರಣವಾಗಬಹುದು. ಸೋಮಾರಿತನವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ವಯಸ್ಸಿನಲ್ಲಿ ದೈಹಿಕವಾಗಿ ಸಕ್ರಿಯವಾಗುವುದರಿಂದ ಜಡ ಜೀವನಕ್ರಮ ಸಂಬಂದಿತ ಆರೋಗ್ಯದ ಅಪಾಯಗಳನ್ನು ಹಿಮ್ಮೆಟ್ಟಿಸಬಹುದು. ಹಾಗಾಗಿ ‘ಏಳಿ ಎದ್ದೇಳಿ ಇನ್ನಾದರೂ ಸಕ್ರಿಯಗೊಳ್ಳಿರಿ’.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು