ಅಚ್ಚರಿ ಮೂಡಿಸುವ ಬೇಲಂ ಗುಹೆಗಳು
– ಕೆ.ವಿ.ಶಶಿದರ.
ಸಮುದ್ರದಾಳದ ರೀತಿ ಅವರ‍್ಣನೀಯ ಸ್ತಳ ಬೂಮಿಯ ಮೇಲೆ ಮತ್ತೊಂದು ಇದೆಯೆಂದಾದರೆ ಅದು ಮಾಂತ್ರಿಕ ಗುಣದ ಗುಹೆಗಳು ಮಾತ್ರ. ಗುಹೆಗಳಂತಹ ನೈಸರ‍್ಗಿಕ ರಚನೆಗಳು ಹುದುಗಿರುವ ಕತ್ತಲೆಯ ಅಜ್ನಾತ ಒಳಾಂಗಣವನ್ನು ಅನ್ವೇಶಿಸುವುದು ಕಂಡಿತವಾಗಿಯೂ ಮರೆಯಲಾಗದ ಅನುಬವ. ಇದು ಆಂದ್ರ ಪ್ರದೇಶದಲ್ಲಿರುವ ಬೇಲಂ ಗುಹೆಗಳಿಗೂ ಅನ್ವಯಿಸುತ್ತದೆ.
ಈ ಗುಹೆಗಳು ಹೇಗೆ ರೂಪುಗೊಂಡಿರಬಹುದು?
ಲಕ್ಶಾಂತರ ವರ‍್ಶದಿಂದ ಸುಣ್ಣದ ಕಲ್ಲಿನ ನಿಕ್ಶೇಪಗಳ ಮೇಲೆ ನೀರು ಹರಿಯುವ ಕ್ರಿಯೆಯಿಂದ ಬಹುಶಹ ಈ ಗುಹೆಗಳು ರೂಪುಗೊಂಡಿರಬೇಕು ಎನ್ನಲಾಗಿದೆ. ಈ ಗುಹೆಯಲ್ಲಿ ಸ್ಟಾಲಕ್ಟೈಟ್ಸ್, ಸ್ಟಾಲಗ್ಮೈಟ್ಸ್, ಸಿಂಕ್ ಹೋಲ್ ಮತ್ತು ವಾಟರ್ ಗ್ಯಾಲರಿಗಳು ಕಂಡು ಬರುತ್ತವೆ. ಬಾರತ ದೇಶದಲ್ಲಿ ಸನ್ಯಾಸಿಗಳು ದೇವರ ದ್ಯಾನಕ್ಕಾಗಿ ಮತ್ತು ಮನಸ್ಸನ್ನು ಲೌಕಿಕ ಬಂದನಗಳಿಂದ ದೂರವಿಡಲು ಇಂತಹ ಏಕಾಂತ ಸ್ತಳವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬೇಲಂ ಗುಹೆಯ ಉತ್ಕನನದ ಸಮಯದಲ್ಲಿ ಬೌದ್ದ ಹಾಗೂ ಜೈನ ದರ‍್ಮದ ಅನೇಕ ಅವಶೇಶಗಳು ಕಂಡು ಬಂದಿವೆ. ಈ ಅವಶೇಶಗಳಲ್ಲಿ 4,500 ವರ‍್ಶಗಳಿಗಿಂತ ಹಳತು ಎಂದು ಅಂದಾಜಿಸಲಾದ ಒಂದು ಪಾತ್ರೆಯೂ ಸಹ ಸೇರಿದೆ. ಹೀಗೆ ಶೇಕರಿಸಿದ ಅವಶೇಶಗಳನ್ನು ಹತ್ತಿರದ ಅನಂತಪುರದ ವಸ್ತು ಸಂಗ್ರಹಾಲಯದಲ್ಲಿ ಕಾಪಿಡಲಾಗಿದೆ. ನೂರಾರು ವರ‍್ಶಗಳ ಹಿಂದೆ ಅವರುಗಳು ಇಲ್ಲಿ ದ್ಯಾನಾಸಕ್ತರಾಗಿದ್ದರ ಹಿನ್ನೆಲೆಯಲ್ಲಿ, ನಲವತ್ತು ಅಡಿ ಎತ್ತರದ ಪ್ರಶಾಂತವಾದ ಬುದ್ದನ ವಿಗ್ರಹವನ್ನು ಆಂದ್ರ ಪ್ರದೇಶದ ಪ್ರವಾಸೋದ್ಯಮ ಅಬಿವ್ರುದ್ದಿ ನಿಗಮವು ಗುಹೆಯ ಬಳಿ ಸಂಕೇತವಾಗಿ ನಿರ‍್ಮಿಸಿದೆ. ಬೇಲಂ ಗುಹೆಗಳು ಇರುವ ಬಗ್ಗೆ ಮೊದಲ ಬಾರಿಗೆ ರಾಬರ‍್ಟ್ ಬ್ರೂಸ್ ಪೂಟೆ ಎಂಬಾತ 1884 ರಲ್ಲಿ ತನ್ನ ಪರ‍್ಯಟನೆಯ ಸಮಯದಲ್ಲಿ ದಾಕಲಿಸಿದ್ದಾನೆ. ತದನಂತರ ಸರಿಸುಮಾರು ಒಂದು ಶತಮಾನ, ಇದು ಅಜ್ನಾತವಾಗೇ ಉಳಿದಿತ್ತು. 1982 – 84 ರ ನಡುವೆ ಈ ಗುಹೆಗಳನ್ನು ಪರಿಶೋದಿಸಿದ ಮತ್ತು ನಕ್ಶೆ ತಯಾರಿಸಿದ ಕೀರ‍್ತಿ ಜರ‍್ಮನಿಯ ಗುಹೆ ವಿಜ್ನಾನಿ ಎಚ್. ಡೇನಿಯಲ್ ಗೆಬೌರ್ ಗೆ ಸಲ್ಲುತ್ತದೆ. ಅವರ ಗೌರವಾರ‍್ತ, ಪ್ರವೇಶ ಕೊಟಡಿಯ ಒಂದು ಬಾಗವನ್ನು ಗೆಬೌರ್ ಹಾಲ್ ಎಂದು ಕರೆಯಲಾಗುತ್ತದೆ.
ಹೇಗಿವೆ ಈ ಗುಹೆಗಳು?
ಪ್ರಾಕ್ರುತಿಕ ಗುಹೆಗಳಲ್ಲಿ ಬೇಲಂ ಗುಹೆಯು, ಮೇಗಾಲಯದ ಕ್ರೆಮ್ ಲಿಯಾಟ್ ಪ್ರಾ ಗುಹೆಗಳ ನಂತರದ ಎರಡನೇ ಸ್ತಾನದಲ್ಲಿದೆ. ಇದರ ಉದ್ದ 3,229 ಮೀಟರ್‌ಗಳಶ್ಟಿದೆ. ಬೇಲಂ ಗುಹೆಯು ಕಪ್ಪು ಸುಣ್ಣದ ಕಲ್ಲುಗಳಿಂದ ರಚಿತವಾಗಿದ್ದು, ಅನೇಕ ಜಟಿಲ ಸುತ್ತು ಬಳಸು ದಾರಿಗಳನ್ನು ಹೊಂದಿದೆ. ಅತ್ಯಂತ ಕನಿಶ್ಟ ವಾತಾಯನ ವ್ಯವಸ್ತೆ ಈ ಗುಹೆಯಲ್ಲಿದ್ದು, ಮೇಲ್ಮೈ ಸದಾ ಕಾಲ ನೀರಿನಿಂದ ಕೂಡಿರುತ್ತದೆ. ಬೇಲಂ ಗುಹೆಯ ಸಂಕೀರ‍್ಣ ರಚನೆಗಳು ಪ್ರಾಕ್ರುತಿಕವಾಗಿ ರೂಪುಗೊಂಡಿವೆ. ಹಾಗಾಗಿ ಇದು ಹೆಚ್ಚು ಆಕರ‍್ಶಣೀಯವಾಗಿದೆ. ಸಿಂಹದ್ವಾರಂ ಎಂದು ಕರೆಯಲ್ಪಡುವ, ಕಮಾನು ರೀತಿಯಲ್ಲಿ ರಚನೆಯಾಗಿರುವ ಸಿಂಹದ ತಲೆಯನ್ನೇ ಹೋಲುವ ಮುಂಬಾಗಿಲು, ಕೋಟಿಲಿಂಗಂ ಎನ್ನಲಾಗುವ ತಲೆಕೆಳಗಾದ ಲಿಂಗದಂತೆ ಕಾಣುವ ಸಾವಿರಾರು ಸ್ಟಾಲಕ್ಟೈಟ್ ರಚನೆಗಳು, ವೂಡಲಮರಿ ಎನ್ನುವ ಸ್ಟಾಲಕ್ಟೈಟ್‍ನಲ್ಲಿ ರಚನೆಯಾದ ಆಲದ ಮರ, ತೌಸಂಡ್ಸ್ ಹುಡ್ ಎಂದು ಗುರುತಿಸುವ ಸಾವಿರಾರು ನಾಗರಹಾವುಗಳ ಹೆಡೆಯನ್ನು ಹೋಲುವ ಸ್ಟಾಲಾಕ್ಕೈಟ್ ಸ್ವರೂಪಗಳು ಎಲ್ಲವೂ ಪ್ರಾಕ್ರುತಿಕವಾಗಿ ರೂಪುಗೊಂಡಿವೆ. ಇವುಗಳೊಂದಿಗೆ ಪ್ರವಾಸಿಗರನ್ನು ಆಕರ‍್ಶಿಸುವ ಮತ್ತೊಂದು ನೈಸರ‍್ಗಿಕ ರಚನೆಯೆಂದರೆ ‘ಸಪ್ತಸ್ವರಾಲ ಗುಹಾ’. ಇಲ್ಲಿ ಸ್ಟಾಲಕ್ಟೈಟ್ ನಿಂದ ರಚಿತವಾದ ಏಳು ಇಳಿ ಬಿದ್ದ ಕಂಬಗಳಿದ್ದು, ಇದನ್ನು ಮರದ ಕೋಲು ಅತವಾ ಬೆರಳಿನ ಗೆಣ್ಣುಗಳಿಂದ ಹೊಡೆದಾಗ ಸಂಗೀತದ ಶಬ್ದಗಳು ಹೊರಹೊಮ್ಮುತ್ತದೆ. ಇಲ್ಲಿ ಪಾತಾಳ ಗಂಗೆ ಎಂಬ ಬೂಗತ ತೊರೆಯಿದ್ದು, ಇದು ಗುಹೆಯ 150 ಅಡಿ ಕೆಳಗಿದೆ. ಈ ತೊರೆ ಇಳಿಜಾರಿನಲ್ಲಿ ಹರಿದು ಗುಪ್ತಗಾಮಿನಿಯಾಗುತ್ತದೆ. ಬೇಲಂ ಗುಹೆಯಲ್ಲಿ ದ್ಯಾನ ಮಂದಿರವೊಂದಿದ್ದು, ಅಲ್ಲಿ ನೈಸರ‍್ಗಿಕವಾಗಿ ರೂಪುಗೊಂಡಿರುವ ದಿಂಬಿನೊಂದಿಗೆ, ಹಾಸಿಗೆಯನ್ನೂ ಕಾಣಬಹುದು. ಅನೇಕ ಸನ್ಯಾಸಿಗಳಿಗೆ ಇದು ಒರಗು ದಿಂಬಾಗಿದೆ. ದಂತ ಕತೆಗಳ ಪ್ರಕಾರ, ಈ ಗುಹೆಯಲ್ಲಿ ದ್ಯಾನಾಸಕ್ತರಾಗಿದ್ದ ಅನೇಕ ರುಶಿ ಮುನಿಗಳಿಗೆ ಇದು ವಿರಮಿಸಿಕೊಳ್ಳುವ ಸ್ತಳವಾಗಿತ್ತು ಎನ್ನಲಾಗಿದೆ.
ಬೇಲಂ ಗುಹೆಯ ಈ ಎಲ್ಲಾ ವೈಶಿಶ್ಟ್ಯಗಳನ್ನು ಕಣ್ಣಾರೆ ನೋಡಿ ಅನುಬವಿಸಬೇಕಾದಲ್ಲಿ, ಚಳಿಗಾಲ ಅತ್ಯುತ್ತಮ ಸಮಯ. ಉಳಿದಂತೆ ಬೇಸಿಗೆಯ ಬಿಸಿಲು ಬಹಳವಾಗಿರುವ ಕಾರಣ ಅಶ್ಟು ಪ್ರಶಸ್ತವಲ್ಲ. ಬೇಸಿಗೆಯ ರಜೆಯಲ್ಲೇ ಇದನ್ನು ವೀಕ್ಶಿಸಬೇಕು ಎಂದಾದಲ್ಲಿ, ಮರೆಯದೆ ಕೊಂಡೊಯ್ಯಬೇಕಾದ್ದು, ಸಾಕಶ್ಟು ಕುಡಿಯುವ ನೀರು ಮತ್ತು ಬೆವರನ್ನು ಒರೆಸಿಕೊಳ್ಳಲು ಒಂದೆರೆಡು ಟವಲ್. ಬೇಲಂ ಗುಹೆಯನ್ನು ಕಾಲ್ನಡಿಗೆಯಲ್ಲೇ ಸುತ್ತಬೇಕಿರುವುದರಿಂದ ಅದಕ್ಕೆ ತಕ್ಕುದಾದ ಚಪ್ಪಲಿಗಳನ್ನು ಒಯ್ಯುವುದು ಒಳಿತು.
(ಮಾಹಿತಿ ಮತ್ತು ಚಿತ್ರ ಸೆಲೆ: timesofindia.indiatimes.com thebetterindia.com web.archive.org )
ಇತ್ತೀಚಿನ ಅನಿಸಿಕೆಗಳು