ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ

–  ಪ್ರಕಾಶ್ ಮಲೆಬೆಟ್ಟು.

ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು ಹೋಗಿಬಿಡುತ್ತವೆ. ನಾವು ಪ್ರತಿನಿತ್ಯ ಅಪರಿಚಿತರನ್ನು ಬೇಟಿ ಆಗೇ ಆಗುತ್ತೇವೆ. ಬಸ್ಸಿನಲ್ಲಿ, ಬಸ್ ನಿಲ್ದಾಣದಲ್ಲಿ ಇಲ್ಲವೇ ಮಾರುಕಟ್ಟೆಯಲ್ಲಿ ಹೀಗೆ. ಪರಸ್ಪರ ಮುಕ ಪರಿಚಯ ಕೂಡ ಇರಲ್ಲ. ಆದ್ರೆ ಕೆಲವೊಮ್ಮೆ ನಡೆಯಬಾರದ್ದು ನಡೆದು ಹೋಗಿ ಬಿಡುತ್ತೆ. ಆ ಅಪರಿಚಿತ ವ್ಯಕ್ತಿ ನಮಗೆ ಅವಮಾನ ಮಾಡಿಬಿಡುತ್ತಾನೆ. ಇಲ್ಲವೇ ನಾವೇ ಯಾರಿಗಾದ್ರು ಅವಮಾನ ಮಾಡಿಬಿಡುತ್ತೇವೆ. ಇಂತಹ ಗಟನೆಗಳು ಕೇವಲ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತ್ರವಲ್ಲದೆ, ಕೆಲವೊಮ್ಮೆ ಪರಿಚಿತರ ನಡುವೆಯೂ ನಡೆದು ಹೋಗಿಬಿಡುತ್ತವೆ. ಇಂತಹ ಗಟನೆಗಳು ಯಾಕೆ ನಡೆಯುತ್ತವೆ ಅಂದ್ರೆ, ನಮ್ಮ ಒಳಗಿರುವ ‘ನಾವೇ ಶ್ರೇಶ್ಟ’ ಎನ್ನುವ ಬಾವನೆಯಿಂದ. ಈ ಬಾವನೆ ಇತರರನ್ನು ನಿಶ್ಕ್ರುಶ್ಟವಾಗಿ ಕಾಣುವಂತೆ ನಮ್ಮನ್ನು ಪ್ರೇರೇಪಿಸಿಬಿಡುತ್ತೆ. ಆದರೆ ಆ ಸಂದರ‍್ಬಗಳಲ್ಲಿ ನಮ್ಮಅಹಂಕಾರಿ ಮನಸು, ‘ನಾವು ಮಾಡುತ್ತಿರುವುದು ಸರಿಯಲ್ಲ’ ಎನ್ನುವ ಬಾವನೆಯನ್ನು ನಮ್ಮಲ್ಲಿ ಸುಳಿಯಲು ಕೂಡ ಬಿಡೋದಿಲ್ಲ. ಯಾಕೆ ಹೀಗೆ?

ಪ್ರಜ್ನಾವಂತ ರಾಜಕಾರಣಿ ಎಂದು ಹೆಸರು ಮಾಡಿರುವ ಒಬ್ಬರು, ಒಬ್ಬ ಅದಿಕಾರಿಗೆ ತುಂಬಾ ಕೆಟ್ಟ ಮಾತುಗಳಲ್ಲಿ ಬೈದು ಬಿಟ್ರು. ಆ ಅದಿಕಾರಿ ಮಾಡಿದ್ದು ತಪ್ಪೇ ಇರಬಹುದು. ಹಾಗಂತ ಅವರ ಮೇಲೆ ಸಾರ‍್ವಜನಿಕವಾಗಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದು, ಅದೂ ಬೈಗುಳಗಳ ಮೂಲಕ ಎಶ್ಟರ ಮಟ್ಟಿಗೆ ಸರಿ? ಆ ಅದಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದಾದರೆ ತನಿಕೆಗೆ ಆದೇಶಿಸಬಹುದಿತ್ತು, ಅಮಾನತುಗೊಳಿಸಬಹುದಿತ್ತು, ನೋಟೀಸ್ ಕೊಡಬಹುದಿತ್ತು ಅತವಾ ಸಮರ‍್ತನೆಯನ್ನು ಲಿಕಿತವಾಗಿ ಬರೆದು ಕೊಡುವಂತೆ ಕೇಳಬಹುದಿತ್ತು. ಕಾನೂನಾತ್ಮಕವಾಗಿ ಏನೆಲ್ಲಾ ಮಾಡಲು ಸಾದ್ಯವೋ ಮಾಡಬಹುದಿತ್ತು. ಆದರೆ ಹೀಯಾಳಿಕೆಯ ಅಗತ್ಯ ಇರಲಿಲ್ಲ. ಕೆಲವೊಂದು ಸಂದರ‍್ಬಗಳು ಹೀಗೂ ಇರುತ್ತವೆ. ತುಂಬಾ ಸಜ್ಜನರಿರುತ್ತಾರೆ. ಜೀವಮಾನದಲ್ಲಿ ಎಂದೂ, ಯಾರ ಬಳಿಯೂ ನಾಲ್ಕು ಹೀಯಾಳಿಕೆಯ ಮಾತನ್ನು ಕೇಳಿದವರಲ್ಲ. ಆದರೆ ಆಕಸ್ಮಿಕವಾಗಿ ವಯಕ್ತಿಕವಾಗಿ ಪರಿಚಯವಿಲ್ಲದ ವ್ಯಕ್ತಿಯಿಂದ ಅವಮಾನ ಎದುರಿಸುತ್ತಾರೆ. ಅದಾದ ಮೇಲೆ ಅವರು ಚೇತರಿಸಿಕೊಳ್ಳುವುದೇ ಇಲ್ಲ. ಕಿನ್ನತೆಗೆ ಒಳಗಾಗಿಬಿಡುತ್ತಾರೆ. ಆದರೆ ಆ ಸಂದರ‍್ಬದಲ್ಲಿ, ಕೋಪದ ಬರದಲ್ಲಿ, ಇಲ್ಲ ತನ್ನ ಅಹಂ ತ್ರುಪ್ತಿಗಾಗಿಯೋ ,ತಮ್ಮ ಮನಸಿನ ಅಹಂಕಾರವನ್ನು ಹೊರಹಾಕುವ ವ್ಯಕ್ತಿ, ಅದು ಇತರರ ಜೀವನದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಯೋಚಿಸಲ್ಲ.

ಒಬ್ಬ ಹಿರಿಯ ವ್ಯಕ್ತಿ ಆಕಸ್ಮಿಕವಾಗಿ ಬೈಕಿಗೆ ಅಡ್ಡ ಬರುತ್ತಾರೆ. ವಯಸ್ಸಿನಲ್ಲಿ ಹಿರಿಯರು. ಬೈಕನ್ನು ಚಲಾಯಿಸುತ್ತಿದ್ದವ ಇನ್ನೂ ಮೀಸೆ ಕೂಡ ಮೂಡದ ತರುಣ. ಬೈಕಿನಿಂದ ಕೆಳಗಿಳಿದವನೇ, ಆ ಹಿರಿಯರ ಕಾಲರು ಪಟ್ಟಿ ಹಿಡಿದುಕೊಂಡು ದಬಾಯಿಸಲಾರಂಬಿಸುತ್ತಾನೆ . ಶಿಕ್ಶಕರಾಗಿ, ವಿದ್ಯಾರ‍್ತಿಗಳಿಂದ ಗೌರವ ಪಡೆದು ಸಮಾಜದಲ್ಲಿ ಒಳ್ಳೆ ಹೆಸರು ಮಾಡಿದ್ದ ವ್ಯಕ್ತಿ, ಒಮ್ಮೆಲೇ ಹೀಗೆ ಅವಮಾನಿತರಾದಾಗ ಹೇಗಾಗಬೇಡ? ಆ ಬೈಕಿನವನಿಗೆ ಮೊದಲೇ ಆ ಹಿರಿಯರ ಪರಿಚಯವಿದ್ದಿದ್ರೆ ಅವನು ಆ ವರ‍್ತನೆ ತೋರುತಿದ್ದನೇ? ಕೆಲವರಿಗೆ ಇತರರನ್ನು ಅವಮಾನ ಮಾಡದಿದ್ದರೆ ಸಮಾದಾನವೇ ಇರಲ್ಲ. ಹೆಚ್ಚಿನ ಬಾರಿ ಅವಮಾನಗಳಿಗೆ ನಾವು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಸೂಕ್ಶ್ಮ ಮನಸ್ಸಿನವರು ಹಾಗಲ್ಲ. ಒಂದು ಚಿಕ್ಕ ಅವಮಾನ ಕೂಡ ಅವರಿಗೆ ಸಹಿಸಲು ಆಗೋದಿಲ್ಲ. ನಮಗೆ ಇವೆಲ್ಲ ಸಣ್ಣ ಪುಟ್ಟ ವಿಶಯಗಳು ಅನಿಸಬಹುದು. ಆದರೆ ವಾಸ್ತವದಲ್ಲಿ ಇದು ಇನ್ನೊಬ್ಬರ ಜೀವನದಲ್ಲಿ ಉಂಟು ಮಾಡುವ ಪರಿಣಾಮಗಳನ್ನು ನಾವು ಊಹೆ ಕೂಡ ಮಾಡಲು ಸಾದ್ಯವಿಲ್ಲ. ಪ್ರಾಣಕ್ಕೆ ಅಪಾಯ ತಂದುಕೊಂಡ ಸಂದರ‍್ಬಗಳೂ ಕೂಡ ಇವೆ.

ಸುಮಾರು 22 ವರುಶಗಳ ಹಿಂದೆ ಪಾಸ್ಪೋರ‍್ಟ್ ಮಾಡಿಸಿಕೊಳ್ಳಲು ಅರ‍್ಜಿ ಹಾಕಿದ್ದೆ. ಪೊಲೀಸ್ ವೆರಿಪಿಕೇಶನ್ ಬಂತು. ಸರಿ ಟಾಣೆಗೆ ಬೇಟಿಕೊಟ್ಟೆ. ಅಲ್ಲಿ ಒಬ್ಬರು ಪೊಲೀಸ್ ಕೇಳಿದ್ರು “ಏನಪ್ಪಾ ಯಾರು ನೀನು?”. “ಸರ್ ಪಾಸ್ಪೋರ‍್ಟ್ ವೆರಿಪಿಕೇಶನ್ಗೆ ಟಾಣೆಯಿಂದ ಕರೆ ಬಂದಿತ್ತು” ಎಂದೆ. “ಓಹೋ, ಸರಿ.. ಸಾಹೇಬ್ರು ಇಲ್ಲ, ಒಂದು ಅರ‍್ದ ಗಂಟೆಯಲ್ಲಿ ಬರುತ್ತಾರೆ. ಕಾಯುತ್ತೀಯಾ” ಅಂತ ಕೇಳಿದ್ರು. ಆಯಿತು ಸರ್ ಅಂತ ಹೇಳಿದೆ. ಅಶ್ಟರಲ್ಲಿ ಮತ್ತೊಬ್ಬರು ಪೊಲೀಸ್, ಕಿಸೆಗೆ ಕೈ ಹಾಕಿ 20 ರೂಪಾಯಿ ತೆಗೆದು, ನನ್ನ ಕೈಗೆ ಕೊಟ್ರು, ಅರ‍್ದ ಪ್ಯಾಕೆಟ್ ಸಿಗರೇಟ್ ತೆಗೆದುಕೊಂಡು ಬಾ ಅಂದ್ರು. ಇದು ಇನ್ನೊಂದು ಬಗೆಯ ಅಹಂಕಾರ. ಮೊದಲಿಗೆ ಅದು ಅವರ ವ್ಯಯಕ್ತಿಕ ಅಗತ್ಯ. ಒಬ್ಬ ವಿದ್ಯಾರ‍್ತಿಗೆ, ಅದೂ ಕೂಡ ಸಿಗರೇಟನ್ನು ತರಲು ಅವರು ಹೇಳಬಾರದಿತ್ತು. ಆದರೆ ತಾನು ಪೊಲೀಸ್ ಎನ್ನುವ ಅಹಂ. ತಾನೇ ಶ್ರೇಶ್ಟ ಎನ್ನುವ ಬಾವನೆ. ವಿದ್ಯಾರ‍್ತಿಗಳ ಎದುರಿಗೆ ಜವಾಬ್ದಾರಿಯಿಂದ ವರ‍್ತಿಸಬೇಕಾಗಿದ್ದ ಹಿರಿಯರು, ಒಬ್ಬ ವಿದ್ಯಾರ‍್ತಿಯ ಬಳಿ ಸಿಗರೇಟ್ ತರಿಸಿಕೊಂಡು ಸೇದುತ್ತಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ವ್ಯಕ್ತಿಗಳೇ ಹೀಗೆ ಮಾಡಿದ್ರೆ ಹೇಗೆ? ನಾನು ಹೋದದ್ದು ನನ್ನ ಪಾಸ್ಪೋರ‍್ಟ್ ವೆರಿಪಿಕೇಶನ್ ಕಾರ‍್ಯಕ್ಕಾಗಿ. ಅವರ ಸೇವೆ ಮಾಡಲು ಅಲ್ಲ, ಅಲ್ವೇ?

ಇನ್ನೊಂದು ಗಟನೆ, ಕಳೆದ ವರುಶ ಒಂದು ಸಣ್ಣ ತಿದ್ದುಪಡಿಗಾಗಿ 9 ವರುಶಗಳಿಂದ ದೂಳು ತಿನ್ನುತ್ತಾ ಬಿದ್ದಿದ್ದ ಅರ‍್ಜಿಯ ಬಗ್ಗೆ ವಿಚಾರಿಸಲು ತಾಲೂಕ್ ಕಚೇರಿಗೆ ಹೋಗಿದ್ದೆ. ಅಲ್ಲಿ ಒಬ್ಬ ಯುವಕ ಕೆಲಸ ನಿರ‍್ವಹಿಸುತ್ತಿದ್ದ. ನನಗಿಂತ ಹತ್ತು ವರುಶ ಕಿರಿಯ. ಅವರ ಹುದ್ದೆ ಯಾವುದೆಂದು ನನಗೀಗ ನೆನಪಿಲ್ಲ. ಆದರೆ ನಮ್ಮ ಪೈಲ್ ಅವರ ಬಳಿ ಇದ್ದದ್ದು ಗೊತ್ತು. ಅವರ ಮೇಜಿನ ಸುತ್ತ ಜನ. ಎಲ್ಲರು ಹಿರಿಯರೇ. 60 ವರುಶದ ಮುದುಕರು ಮತ್ತು ಮಹಿಳೆಯರೂ ಇದ್ರು. ಇವರದ್ದು ಸರಕಾರಿ ಹುದ್ದೆ ಅಲ್ಲವೇ. ಅಶ್ಟು ಜನ ನೆರೆದಿದ್ರೂ, ಮೊದಲು ಬಂದವರನ್ನು ಮಾತನಾಡಿಸಿ ಅವರ ಸಮಸ್ಯೆ ಕೇಳುವುದನ್ನು ಬಿಟ್ಟು, ಇವರು ಪೈಲುಗಳನ್ನು ನೋಡೋದ್ರಲ್ಲೇ ವ್ಯಸ್ತ. ಒಂದು 15 ನಿಮಿಶ ಕಾದ ಮೇಲೆ, ಒಮ್ಮೆ ಕತ್ತೆತ್ತಿ ನನ್ನನ್ನು ನೋಡಿದ್ರು. ಆಮೇಲೆ ಒಂದು 5 ನಿಮಿಶ ಕಳೆದಾದ ಮೇಲೆ ‘ಬನ್ನಿ ನನ್ನ ಜೊತೆ’ ಅಂತ ಇನ್ನೊಂದು ಕಂಪ್ಯೂಟರ್ ಇರುವ ಕೋಣೆಗೆ ಕರೆದು ಕೊಂಡು ಹೋದ್ರು. ಆದ್ರೆ ಮೊಬೈಲ್ ಈ ಕೋಣೆಯಲ್ಲೇ ಮರೆತು ಬಿಟ್ಟೋದ್ರು. ಯಾರಿಗೋ ಕರೆಮಾಡಬೇಕೆಂದು ಕಿಸೆಗೆ ಕೈ ಹಾಕಿದಾಗ ಮೊಬೈಲ್ ಆ ಕೋಣೆಯಲ್ಲಿ ಬಿಟ್ಟಿರೋದು ನೆನಪು ಬಂತು. ‘ಹೋಗಿ ಆ ಮೊಬೈಲ್ ತೆಗೆದುಕೊಂಡು ಬನ್ನಿ’ ಅಂತ ನನ್ನ ಬಳಿ ಹೇಳಿದ್ರು. ಒಮ್ಮೆಲೇ ಅವಾಕ್ಕಾದ ನಾನು ಆಮೇಲೆ ಸುದಾರಿಸಿಕೊಂಡು ಹೋಗಿ ಅವರ ಮೊಬೈಲ್ ತಂದು ಕೊಟ್ಟೆ. ಅವರ ಮೊಬೈಲ್ ತಂದು ಕೊಟ್ಟಿದ್ದಕ್ಕೆ ನಾನೇನು ಚಿಕ್ಕವನಾಗಲಿಲ್ಲ. ಹಾಗೇ, ನನ್ನೊಡನೆ ಮೊಬೈಲ್ ತರಿಸಿದ ತಕ್ಶಣ ಅವರೇನು ದೊಡ್ಡ ವ್ಯಕ್ತಿ ಆಗಲ್ಲ. ಆದರೆ ಇಲ್ಲಿ ಪ್ರಶ್ನೆ ಇರೋದು ಅವರ ವರ‍್ತನೆ ಬಗ್ಗೆ. ಮನಸ್ತಿತಿಯ ಬಗ್ಗೆ. ತಾನು ಸರ‍್ಕಾರಿ ಹುದ್ದೆಯಲ್ಲಿದ್ದೇನೆ. ನನಗೆ ಸಲಾಂ ಹೊಡೆದರೆ ಮಾತ್ರ ನಿಮ್ಮ ಕೆಲಸ ಆಗುತ್ತೆ ಎನ್ನುವ ಅಹಂ. ನೀವು ನಿಮ್ಮ ಕಾಸಗಿ ಜೀವನದಲ್ಲಿ ಏನೇ ಸಾದನೆ ಮಾಡಿರಲಿ, ಹೊರಗೆ ಒಂದು 10 ಜನ ನಮಸ್ಕಾರ ಹಾಕುವವರು ಇರಲಿ, ಅದು ಇವರಿಗೆ ಪರಿಣಾಮ ಬೀರಲ್ಲ. ಇಲ್ಲಿ ನಿಮ್ಮ ಕೆಲಸ ಮಾಡಿಸಿಕೊಳ್ಳಲು ಬಂದಿದ್ದೀರಾ, ನೀವು ನನ್ನ ಮರ‍್ಜಿಗೆ ಕಾಯಬೇಕು ಎನ್ನುವ ಮನೋಬಾವ . ತನಗೆ ಸರ‍್ಕಾರ ಕೆಲಸ ಕೊಟ್ಟು ಸಂಬಳ ಕೊಡುತ್ತಿರುವುದು ಜನರಿಗೆ ಸೇವೆ ದೊರಕಿಸಿ ಕೊಡಲು ಎನ್ನುವುದು ಇವರಿಗೆ ತಿಳಿದಿರಬೇಕಲ್ಲವೇ?

ನಮ್ಮಿಂದ ಯಾರನ್ನು ಸುದಾರಿಸಲು ಸಾದ್ಯವಿಲ್ಲ ಬಿಡಿ. ಆದರೂ, ನಮ್ಮಲ್ಲೇ ಸುದಾರಣೆಗಳಾಗಬೇಕು. ಎಶ್ಟೋ ಬಾರಿ ನಾವು ಇತರರಿಗೆ ಅವಮಾನ ಮಾಡಿಬಿಡುತ್ತೇವೆ. ಅದು ಅವರ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಯೋಚನೇನೆ ಮಾಡೋಲ್ಲ. ಇನ್ನೊಬ್ಬರಿಗೆ ಅವಮಾನ ಮಾಡುವ ಮೊದಲು ನಾವು ಕೂಡ ಎಂದಾದರೊಮ್ಮೆ ಅವಮಾನಕ್ಕೆ ಬಲಿಪಶು ಅಗುತ್ತೇವೆ ಎನ್ನುವುದು ನೆನಪಿರಲಿ. ಪ್ರತಿಯೊಬ್ಬನಿಗೂ ಅವನ ವಯಕ್ತಿಕ ಬದುಕಿನಲ್ಲಿ, ಅವನ ಸುತ್ತಲ ಸಮಾಜದಲ್ಲಿ ಅವನನದ್ದೇ ಆದ ಸ್ತಾನ, ಗೌರವ ಎಲ್ಲ ಇದೆ ಅನ್ನುವುದನ್ನು ನಾವು ಮರೆಯಬಾರದು. ಅವರು ನಮಗೆ ಅಪರಿಚಿತರು ಅಂತ ಅವಮಾನ ಮಾಡುವುದು ತರವಲ್ಲ. ಇಂದು ಅವರಿಗೆ ಆಗುವ ಅವಮಾನ ನಾಳೆ ಮತ್ತೊಬ್ಬರಿಂದ ನಮಗೆ ಆಗುತ್ತೆ. ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡಲು ನಾವು ಕಲಿಯಬೇಕು.

(ಚಿತ್ರ ಸೆಲೆ: credera.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: