ಅಬಿಮನ್ಯು ಮಿತುನ್ – ಕರ‍್ನಾಟಕದ ಪ್ರತಿಬಾನ್ವಿತ ವೇಗಿ

– ರಾಮಚಂದ್ರ ಮಹಾರುದ್ರಪ್ಪ.

ಒಬ್ಬ ಆಟಗಾರ ತನ್ನ ಹದಿನೇಳನೇ ವಯಸ್ಸಿನವರೆಗೂ ಲೆದರ್ ಬಾಲ್ ನಲ್ಲಿ ಒಮ್ಮೆಯೂ ಬೌಲ್ ಮಾಡದೆ, ಅಲ್ಲಿಂದ ತನ್ನ ಇಪ್ಪತ್ತನೇ ವಯಸ್ಸಿಗೇ ಬಾರತದ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾನೆ ಎಂದರೆ ಯಾರೂ ನಂಬಲಾರರು. ಹೌದು! ಕಡಿಮೆ ಹೊತ್ತಿನಲ್ಲಿ ಇಂತಹ ಅಸಾದ್ಯ ಏಳಿಗೆ ಕಂಡು ಅಂತರಾಶ್ಟ್ರೀಯ ಮಟ್ಟ ತಲುಪಿದ ವೇಗಿಯೇ ಕರ‍್ನಾಟಕದ ನಂಬಿಕಸ್ತ ಬಲಗೈ ಬೌಲರ್ ಅಬಿಮನ್ಯು ಮಿತುನ್.

ಹುಟ್ಟು – ಎಳವೆಯ ದಿನಗಳು

25 ಅಕ್ಟೋಬರ್, 1989 ರಂದು ಬೆಂಗಳೂರಿನಲ್ಲಿ ಮಿತುನ್ ಹುಟ್ಟಿದರು. ಜಿಮ್ ನಡೆಸುತ್ತಿದ್ದ ತಂದೆಯಿಂದ ಪುಟ್ಟ ಮಿತುನ್ ಗೆ ಎಳವೆಯಿಂದಲೇ ಆಟೋಟಗಳ ಬಗೆಗೆ ಪ್ರೋತ್ಸಾಹ ದೊರೆಯಿತು. ಪೀಣ್ಯದ ಸ್ಟ್ಯಾಂಡರ‍್ಡ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಮಿತುನ್ ಅತ್ಲೆಟಿಕ್ಸ್ ನಲ್ಲಿ ಮುಂಚೂಣಿಯಲ್ಲಿದ್ದರು. ಡಿಸ್ಕಸ್ ತ್ರೋ, ಜಾವೆಲಿನ್ ತ್ರೋ ನಲ್ಲಿ ವ್ರುತ್ತಿಪರರಾಗುವತ್ತ ಸಾಗುತ್ತಿದ್ದರು. ಆದರೆ ಹಟಾತ್ತನೆ ಕ್ರಿಕೆಟ್ ಮೋಹ ಅವರನ್ನು ಸೆಳೆಯಿತು. ಮೊದಲಿಗೆ ಟೆನ್ನಿಸ್ ಬಾಲ್ ನಿಂದ ವೇಗದ ಬೌಲರ್ ಆಗಿ ಬೌಲ್ ಮಾಡಿದ ಅವರು ಕ್ರಮೇಣ ಲೆದರ್ ಬಾಲ್ ಆಟಕ್ಕೆ ಹೊಂದಿಕೊಂಡು ವಲ್ಚರ‍್ಸ್ ಕ್ಲಬ್ ಸೇರಿ ವ್ರುತ್ತಿಪರ ಕ್ರಿಕೆಟರ್ ಆಗುವತ್ತ ಮೊದಲ ಹೆಜ್ಜೆ ಇಟ್ಟರು. 2007 ರಿಂದ 2009 ರ ವರೆಗೆ ಸಿ.ಕೆ. ನಾಯ್ಡು ಟ್ರೋಪಿ, ವಿನೂ ಮಂಕಡ್ ಟ್ರೋಪಿ, ಕೂಚ್ ಬೆಹಾರ್ ಮತ್ತು ಬುಚ್ಚಿ ಬಾಬು ಟೂರ‍್ನಿಗಳಲ್ಲಿ ಒಳ್ಳೆಯ ಪ್ರದರ‍್ಶನ ನೀಡುತ್ತಾ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ಸಣ್ಣ ವಯಸ್ಸಿಗೇ ಸತತವಾಗಿ ಸುಮಾರು 140 ಕಿ.ಮೀ. ವೇಗದಲ್ಲಿ ಬೌಲ್ ಮಾಡುತ್ತಿದ್ದ ಮಿತುನ್ ಕೂಚ್ ಬೆಹಾರ್ ಟ್ರೋಪಿಯಲ್ಲಿ 37 ವಿಕೆಟ್ ಗಳನ್ನು ಪಡೆದು 2008 ರಲ್ಲಿ ವಿರಾಟ್ ಕೊಹ್ಲಿ ಮುಂದಾಳ್ತನದ ಬಾರತದ ಕಿರಿಯರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಹೊಸ್ತಿಲಲ್ಲಿ ಬಂದು ನಿಂತರೂ, ಕಡೇ ಗಳಿಗೆಯಲ್ಲಿ ಅವರಿಗೆ ಅದ್ರುಶ್ಟ ಕೈಗೂಡುವುದಿಲ್ಲ. ಆದರೆ ಅವರ ಅಳವನ್ನು ಅರಿತಿದ್ದ ಕರ‍್ನಾಟಕ ರಾಜ್ಯದ ಆಯ್ಕೆಗಾರರು 2008 ರ ವಿಜಯ್ ಹಜಾರೆ ಟೂರ‍್ನಿಗೆ ಅವರನ್ನು ಆಯ್ಕೆ ಮಾಡುತ್ತಾರೆ. ತಮಿಳು ನಾಡು ಎದುರು ಚೊಚ್ಚಲ ಒಂದು ದಿನದ ಪಂದ್ಯವಾಡಿದ ಮಿತುನ್ ವಿಕೆಟ್ ಪಡೆಯದೇ ನಿರಾಸೆ ಮೂಡಿಸುತ್ತಾರೆ. ಆ ಬಳಿಕ 2009 ರಲ್ಲಿ ಐಪಿಎಲ್ ನ ಬೆಂಗಳೂರು ತಂಡದ ಕೋಚ್ ರೇ ಜೆನ್ನಿಂಗ್ಸ್ ಕಣ್ಣಿಗೆ ಬಿದ್ದ ಮಿತುನ್, ಆ ವರುಶ ಐ.ಪಿ.ಎಲ್ ನಲ್ಲಿ ಒಂದೂ ಪಂದ್ಯ ಆಡದಿದ್ದರೂ ಅವರ ಗರಡಿಯಲ್ಲಿ ಇನ್ನಶ್ಟು ಬೌಲಿಂಗ್ ಪಟ್ಟುಗಳನ್ನು ಕಲಿತು ಪಕ್ವವಾಗುತ್ತಾರೆ. ಅದಲ್ಲದೆ ಬೆಂಗಳೂರಿನ ಎನ್.ಸಿ.ಎ. ನಲ್ಲೂ ಸಾಕಶ್ಟು ಬೆವರು ಹರಿಸಿದ ಮಿತುನ್ ಆ ಸಾಲಿನ ಕೆ.ಎಸ್.ಸಿ.ಎ ಲೀಗ್ ಗಳಲ್ಲಿ ಮತ್ತೊಮ್ಮೆ ಶಿಸ್ತಿನ ಬೌಲಿಂಗ್ ನಿಂದ ಮಿಂಚಿ, ಕರ‍್ನಾಟಕ ರಣಜಿ ತಂಡದ ಕದ ತಟ್ಟಲಾರಂಬಿಸುತ್ತಾರೆ.

ರಣಜಿ ಪಾದಾರ‍್ಪಣೆ

2009 ರಲ್ಲಿ ಮೀರಟ್ ನಲ್ಲಿ ಉತ್ತರ ಪ್ರದೇಶದ ಎದುರು ರಾಹುಲ್ ದ್ರಾವಿಡ್ ರ ಮುಂದಾಳ್ತನದಲ್ಲಿ ಮಿತುನ್ ಕರ‍್ನಾಟಕದ ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿ ಸೈ ಎನಿಸಿಕೊಂಡರು. ಮೊದಲ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಗಳೊಂದಿಗೆ(6/86; 5/95) ಹ್ಯಾಟ್ರಿಕ್ ಕೂಡ ಪಡೆದು ತಂಡದ ಗೆಲುವಿಗೆ ಮುನ್ನುಡಿ ಬರೆದರು. ಜಾವಗಲ್ ಶ್ರೀನಾತ್ ರ ಬಳಿಕ ಪಾದಾರ‍್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ಕರ‍್ನಾಟಕದ ಬೌಲರ್ ಎಂಬ ಹೆಗ್ಗಳಿಕೆ ಕೂಡ ಮಿತುನ್ ರ ಪಾಲಾಯಿತು. ಒಳ್ಳೆಯ ವೇಗದಲ್ಲಿ ಹೆಚ್ಚು ಇನ್ ಸ್ವಿಂಗ್ ಎಸೆತಗಳಿಂದ ಬ್ಯಾಟ್ಸ್ಮನ್ ಗಳನ್ನು ಇನ್ನಿಲ್ಲದಂತೆ ಕಾಡಿದ ಅವರು ಪಂದ್ಯದಿಂದ ಪಂದ್ಯಕ್ಕೆ ಬಲಗೊಳ್ಳುತ್ತಾ ಹೋದರು. ಬೌನ್ಸರ್, ಯಾರ‍್ಕರ್ ಎಸೆತಗಳೂ ತಮ್ಮ ಬತ್ತಳಿಕೆಯಲ್ಲಿವೆ ಎಂದು ಟೂರ‍್ನಿಯುದ್ದಕ್ಕೂ ತೋರಿಸಿದರು. ಮೊದಲ ರಣಜಿ ರುತುವಿನಲ್ಲೇ ಅನುಬವಿ ವೇಗಿ ವಿನಯ್ ಕುಮಾರ್ ರನ್ನು ಹಿಂದಿಕ್ಕಿ ಅತಿ ಹೆಚ್ಚು 47 ವಿಕೆಟ್ ಗಳನ್ನು ಕೆಡವಿ ಸಂಚಲನ ಮೂಡಿಸಿದರು. ಪಾದಾರ‍್ಪಣೆ ಸಾಲಿನಲ್ಲೇ ಅತಿ ಹೆಚ್ಚು ವಿಕೆಟ್ ಗಳ ಈ ದಾಕಲೆ ಒಂದು ದಶಕ ಕಳೆದರೂ ಇನ್ನೂ ಮಿತುನ್ ರ ಹೆಸರಲ್ಲೇ ಇದೆ. ಇವರ ಅಸಾದರಣ ಪ್ರತಿಬೆಯನ್ನುಹಾಗೂ ಪ್ರದರ‍್ಶನವನ್ನು ಗಮನಿಸಿ ರಾಶ್ಟ್ರೀಯ ಆಯ್ಕೆಗಾರರು ತಡ ಮಾಡದೆ ತವರಲ್ಲಿ ನಡೆಯಲಿದ್ದ 2010 ರ ದಕ್ಶಿಣ ಆಪ್ರಿಕಾ ಸರಣಿಗೆ ಕರ‍್ನಾಟಕದ ಹೊಸ ವೇಗಿ ಮಿತುನ್ ರನ್ನು ಆಯ್ಕೆ ಮಾಡಿದರು. ಚೊಚ್ಚಲ ರಣಜಿ ಪಂದ್ಯ ಆಡಿದ ನಾಲ್ಕೇ ತಿಂಗಳಲ್ಲಿ ಬಾರತ ತಂಡದಲ್ಲಿ ಎಡೆ ಪಡೆದ ಮಿತುನ್ ಇಡೀ ದೇಶವೇ ಬರವಸೆಯ ಕಣ್ಣುಗಳಿಂದ ತಮ್ಮತ್ತ ನೋಡುವಂತೆ ಮಾಡಿದ್ದು ಸುಳ್ಳಲ್ಲ.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ದಕ್ಶಿಣ ಆಪ್ರಿಕಾ ಎದುರು ಟೆಸ್ಟ್ ಆಡಲು ಅವಕಾಶ ದೊರಕದೆ ಹೋದರೂ ಅದೇ ಪ್ರವಾಸದದಲ್ಲಿ ಮಿತುನ್ ತಮ್ಮ ಚೊಚ್ಚಲ ಒಂದು ದಿನದ ಪಂದ್ಯವನ್ನಾಡಿ ಅಂತರಾಶ್ಟ್ರೀಯ ಕ್ರಿಕೆಟಿಗರಾದರು. ಅಹ್ಮದಾಬಾದ್ ನಲ್ಲಿ ನಡೆದ ಈ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ದುಬಾರಿ ಎನಿಸಿ ವಿಕೆಟ್ ಪಡೆಯದೇ ಹೋದರೂ ಅವರು ಬ್ಯಾಟಿಂಗ್ ನಲ್ಲಿ ಎರಡು ಸಿಕ್ಸರ್ ಸಿಡಿಸಿ 24 ರನ್ ಕಲೆ ಹಾಕಿ ತಕ್ಕ ಮಟ್ಟಿಗೆ ತಮ್ಮ ಬ್ಯಾಟಿಂಗ್ ಅಳವನ್ನು ಪ್ರದರ‍್ಶಿಸಿದರು. ಆ ಬಳಿಕ ಅದೇ ವರುಶ ಗಾಲ್ ನಲ್ಲಿ ಟೆಸ್ಟ್ ರಂಗಕ್ಕೂ ಕಾಲಿಟ್ಟ ಮಿತುನ್ ಅಲ್ಲಿನ ನಿರ‍್ಜೀವ ಪಿಚ್ ಮೇಲೆ ಮೊದಲ ಪ್ರಯತ್ನದಲ್ಲೇ (4/105) ದಾಳಿಯಿಂದ ಗಮನ ಸೆಳೆದರು. ತಮ್ಮ 6′ 2” ಎತ್ತರವನ್ನು ಬಳಸಿಕೊಂಡು ವೇಗಿಗಳಿಗೆ ಅಂತಹ ನೆರವಿಲ್ಲದ ಶ್ರೀಲಂಕಾದ ಪಿಚ್ ಗಳಲ್ಲೂ ತಮ್ಮ ಎಸೆತಗಳು ಮಾತಾಡುವಂತೆ ಮಾಡಿದರು. ಮೊನಚಾದ ಅವರ ಎಸೆತಗಳು ವಿಮರ‍್ಶಕರು ಹಾಗೂ ನೇರುಲಿಗರಿಂದ ಮೆಚ್ಚುಗೆ ಗಳಿಸಿದ್ದವು. 3 ಟೆಸ್ಟ್ ಗಳಲ್ಲಿ ಒಟ್ಟು 6 ವಿಕೆಟ್ ಗಳನ್ನು ಪಡೆದ ಅವರು ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಲ್ಲೂ ಪ್ರಾಬಲ್ಯ ಮೆರೆದರು. 46 ರ ಅತಿ ಹೆಚ್ಚು ಸ್ಕೋರ್ ನೊಂದಿಗೆ ಸರಣಿಯಲ್ಲಿ ಒಟ್ಟು 120 ರನ್ ಗಳಿಸಿ ಬರವಸೆ ಮೂಡಿಸಿದರು. ನಂತರ ಅವರನ್ನು ತಂಡದಿಂದ ಕೈಬಿಟ್ಟಾಗ ಎದೆಗುಂದದೆ ದೇಸೀ ಕ್ರಿಕೆಟ್ ನಲ್ಲಿ ವಿಕೆಟ್ ಬೇಟೆ ಮುಂದುವರೆಸುತ್ತಾ 2011 ರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮರು ಆಯ್ಕೆಯಾದರು. ಬಾರ‍್ಬಾಡಾಸ್ ಟೆಸ್ಟ್ ನಲ್ಲಿ ಒಳ್ಳೆ ಲಯದಲ್ಲಿ ಬೌಲ್ ಮಾಡಿ ಬ್ರಾವೊ ಮತ್ತು ಚಂದರ‍್ಪಾಲ್ ರ ಅತ್ಯಮೂಲ್ಯ ವಿಕೆಟ್ ಗಳೊಂದಿಗೆ ಒಟ್ಟು 3 ವಿಕೆಟ್ ಪಡೆದರೂ ಮಿತುನ್ ರಿಗೆ ಮುಂದಿನ ಟೆಸ್ಟ್ ನಲ್ಲಿ ಅವಕಾಶ ನೀಡಲಾಗುವುದಿಲ್ಲ. ಅದೇ ಅವರ ಬದುಕಿನ ಕಟ್ಟ ಕಡೆಯ ಟೆಸ್ಟ್ ಆದದ್ದು ದುರಂತ. ಆ ಬಳಿಕ 2011/12 ರ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದಲ್ಲಿ ಎಡೆ ಪಡೆದರೂ ಆಡುವ ಹನ್ನೊಂದರಲ್ಲಿ ಅವರಿಗೆ ಮಣೆ ಹಾಕಲಾಗುವುದಿಲ್ಲ. ತಮ್ಮ ಅಂತರಾಶ್ಟ್ರೀಯ ವ್ರುತ್ತಿ ಬದುಕಿನಲ್ಲಿ ಒಟ್ಟು 4 ಟೆಸ್ಟ್ ಗಳನ್ನಾಡಿ 9 ವಿಕೆಟ್ ಗಳನ್ನು ಪಡೆದಿರುವ ಈ ಕರ‍್ನಾಟಕದ ವೇಗಿ, 5 ಒಂದು ದಿಂದ ಪಂದ್ಯಗಳಿಂದ 3 ವಿಕೆಟ್ ಗಳನ್ನುಕೂಡ ಪಡೆದ್ದಿದ್ದಾರೆ. ಕೇವಲ 22ನೇ ವಯಸ್ಸಿಗೆ ತಮ್ಮ ಕಡೇ ಅಂತರಾಶ್ಟ್ರೀಯ ಪಂದ್ಯವಾಡಿದ ಮಿತುನ್ ರಿಗೆ ಅದ್ರುಶ್ಟದ ಬಲವಿರಲಿಲ್ಲ ಅನ್ನುವುದು ಮಾತ್ರ ಸುಳ್ಳಲ್ಲ.

ಕರ‍್ನಾಟಕದ ಬರವಸೆ ಮಿತುನ್

ಬಾರತ ತಂಡದಿಂದ ಮರಳಿದ ಬಳಿಕ ಬಾರ‍್ಡರ್-ಗಾವಸ್ಕರ್ ಸ್ಕಾಲರ‍್ಶಿಪ್ ಯೋಜನೆ ಅಡಿಯಲ್ಲಿ ಕೆಲ ಕಾಲ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆದು ಬಂದ ಮಿತುನ್ ತಮ್ಮ ಬೌಲಿಂಗ್ ಅನ್ನು ಇನ್ನಶ್ಟು ಮೊನಚು ಮಾಡಿಕೊಂಡು ಕ್ರಮೇಣವಾಗಿ ನಿದಾನ ಗತಿಯ ಬೌನ್ಸರ್, ಕರಾರುವಾಕ್ ಯಾರ‍್ಕರ್ ಹಾಗೂ ಹೊರ ಹೋಗುವ ಎಸೆತಗಳನ್ನು (ಔಟ್ ಸ್ವಿಂಗ್) ತಮ್ಮ ಬತ್ತಳಿಕೆಗೆ ಸೇರಿಸಿಕೊಂಡು ಬೌಲರ್ ಆಗಿ ಇನ್ನಶ್ಟು ಪಕ್ವವಾದರು. ಕಡೆಗೆ 14 ವರುಶಗಳ ಬಳಿಕ 2013/14 ರಲ್ಲಿ ಕರ‍್ನಾಟಕ ತನ್ನ ಏಳನೇ ರಣಜಿ ಕಿರೀಟ ಮುಡಿಗೇರಿಸಿಕೊಂಡಾಗ ಮಿತುನ್ ರಾಜ್ಯ ತಂಡದ ಪರ ಅತಿಹೆಚ್ಚು 40 ವಿಕೆಟ್ ಗಳನ್ನು ಪಡೆದು ತಮ್ಮ ಬೌಲಿಂಗ್ ಕಸುವನ್ನು ಮತ್ತೊಮ್ಮೆ ಸಾಬೀತು ಮಾಡಿದರು. 2014/15 ರಲ್ಲಿ ಮತ್ತೊಮ್ಮೆ39 ವಿಕೆಟ್ ಗಳ ಕೊಡುಗೆ ನೀಡಿ ಕನ್ನಡಿಗರಿಗೆ ಎಂಟನೇ ರಣಜಿ ಗೆಲುವು ತಂದು ಕೊಡುವಲ್ಲಿ ಪ್ರಮುಕ ಪಾತ್ರವಹಿಸಿದರು. ಈ ಸಾಲಿನ ಸೆಮಿಪೈನಲ್ ನಲ್ಲಿ ಮುಂಬೈ ಎದುರು ಎರಡನೇ ಇನ್ನಿಂಗ್ಸ್ ನಲ್ಲಿ 89 ರನ್ ಗಳನ್ನು ಗಳಿಸಿ ಬ್ಯಾಟ್ ನಿಂದಲೂ ತಂಡಕ್ಕೆ ನೆರವಾದರು. ಕರ‍್ನಾಟಕ ಅದೇ ಸಾಲಿನಲ್ಲಿ ಒಂದು ದಿನದ ಪಂದ್ಯಗಳ ಆವ್ರುತ್ತಿ ವಿಜಯ್ ಹಜಾರೆ ಟೂರ‍್ನಿಯನ್ನೂ ಸತತವಾಗಿ ಎರಡು ಬಾರಿ ಗೆದ್ದಾಗ (2013/15; 2014/15) ಮಿತುನ್ 13 ಹಾಗೂ 18 ವಿಕೆಟ್ ಗಳನ್ನು ಕೆಡವಿ ಈ ಮಾದರಿಯಲ್ಲೂ ತಮ್ಮ ಅಳವು ತೋರಿದರು. ಅಲ್ಲಿಂದ ಪ್ರತೀ ವರುಶ ಎಡಬಿಡದೆ ವಿಕೆಟ್ ಪಡೆಯುತ್ತಾ ರನ್ ಗಳಿಸುತ್ತಾ ಒಂದು ಮಟ್ಟಕ್ಕೆ ಆಲ್ ರೌಂಡ್ ಆಟ ಪ್ರದರ‍್ಶಿಸಿದರೂ ರಾಶ್ಟ್ರೀಯ ಆಯ್ಕೆಗಾರರ ಮನ ಒಲಿಯುವುದೇ ಇಲ್ಲ. ಪ್ರವಾಸಿ ತಂಡಗಳೆದುರು ಅಬ್ಯಾಸ ಪಂದ್ಯಗಳು, ವಲಯವಾರು ಪಂದ್ಯಾವಳಿಗಳಾದ ದುಲೀಪ್ ಟ್ರೋಪಿ ಹಾಗೂ ದೇವದರ್ ಟ್ರೋಪಿಗಳಲ್ಲಿ ಮಾತ್ರ ಅವರಿಗೆ ಎಡೆ ಸಿಗುತ್ತದೆ. 2014 ರಿಂದಾಚೆಗೆ ಮಿತುನ್ ಒಬ್ಬ ಪರಿಪೂರ‍್ಣ ಬೌಲರ್ ಆಗಿ ವಿನಯ್ ಹಾಗೂ ಅರವಿಂದ್ ರೊಂದಿಗೆ ದೇಸೀ ಕ್ರಿಕೆಟ್ ನ ಒಂದು ಸಶಕ್ತ ವೇಗದ ದಾಳಿಯಾಗಿ ಹೊರಹೊಮ್ಮಿ ಹಲವಾರು ದಾಕಲೆಗಳನ್ನು ಮುರಿದು, ಟೂರ‍್ನಿಗಳನ್ನು ಗೆಲ್ಲಿಸಿದ್ದು ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಸುವರ‍್ಣಾಕ್ಶರಗಳಲ್ಲಿ ಬರೆದಿಡಬೇಕಾದ ಸಂಗತಿ.

ರಾಜ್ಯ ತಂಡದ ವೇಗದ ಪಡೆಯನ್ನು ಕಂಡು ಬೇರೆ ತಂಡಗಳು ಸೋಜಿಗದಿಂದ ಅಸೂಯೆ ಪಟ್ಟದ್ದೂ ಉಂಟು. ಅಲ್ಲದೇ ಮಿತುನ್ ಬ್ಯಾಟಿಂಗ್ ನಲ್ಲಿ ಬಿರುಸಾಗಿ ರನ್ ಗಳಿಸುವ ಅಳವನ್ನು ಕೂಡ ಹೊಂದಿದ್ದರು. ಎಶ್ಟೋ ಪಂದ್ಯಗಳಲ್ಲಿ ಅವರು ಬ್ಯಾಟಿಂಗ್ ನಿಂದಲೂ ತಂಡವನ್ನು ಕಾಪಾಡಿರುವ ಎತ್ತುಗೆಗಳಿವೆ. ದೊಡ್ಡ ಹೊಡೆತಗಳನ್ನು ನಿರಾಯಾಸವಾಗಿ ನಿಂತ ಎಡೆಯಿಂದಲೇ ಬಾರಿಸುತ್ತಿದ್ದ ಅವರು ಕೆಳಗಿನ ಕ್ರಮಾಂಕದಲ್ಲಿ ಬರವಸೆಯ ಆಟಗಾರ ಆಗಿದ್ದರು. ಹೊಸ ಚೆಂಡಿನಿಂದ ಸಾಂಪ್ರದಾಯಿಕ ಸ್ವಿಂಗ್ ಹಾಗೂ ಹಳೆ ಚೆಂಡಿನಿಂದ ರಿವರ‍್ಸ್ ಸ್ವಿಂಗ್ ಮಾಡುವುದನ್ನು ರೂಡಿಸಿಕೊಂಡಿದ್ದ ಮಿತುನ್, ದೇಸೀ ಟೂರ‍್ನಿಗಳಲ್ಲಿ ಹಲವಾರು ಬೆಂಕಿ ಉಗುಳುವ ಸ್ಪೆಲ್ ಗಳಿಂದ ಕನ್ನಡಿಗರ ಮೈನವಿರೇಳಿಸುವಂತೆ ಮಾಡಿದ್ದು ಈಗ ಇತಿಹಾಸ. ಉತ್ತುಂಗದಲ್ಲಿರುವಾಗ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾದರೂ ಅವರು ಪೀನಿಕ್ಸ್ ನಂತೆ ಮೇಲೆದ್ದು ಬಂದರು. ಬಳಿಕ ಅವರ ಎಸೆತಗಳಲ್ಲಿ ಮೊದಲಿನಶ್ಟು ವೇಗ ಇಲ್ಲದಿದ್ದರೂ ಮೊನಚಿನೊಂದಿಗೆ ಶಿಸ್ತಿನ ದಾಳಿಯಿಂದ ಸತತವಾಗಿ ಎದುರಾಳಿಗಳಿಗೆ ಸವಾಲೊಡ್ಡಿದರು. ಹಾಗೂ ಬಾರತದ ದೇಸೀ ಕ್ರಿಕೆಟ್ ಇತಿಹಾಸದ ಮೂರೂ ಮಾದರಿಗಳಲ್ಲಿ (ಮೊದಲ ದರ‍್ಜೆ, ಲಿಸ್ಟ್-ಎ ಹಾಗೂ ಟಿ-20) ಹ್ಯಾಟ್ರಿಕ್ ಪಡೆದಿರುವ ಏಕೈಕ ಬೌಲರ್ ನಮ್ಮ ನಾಡಿನ ಅಬಿಮನ್ಯು ಮಿತುನ್! ಈ ಸಾದನೆ ಅವರನ್ನು ವಿಶಿಶ್ಟ ಸಾಲಿನಲ್ಲಿ ನಿಲ್ಲಿಸುತ್ತದೆ. ಕರ‍್ನಾಟಕ ತಂಡದೊಂದಿಗೆ ಅವರು ಒಟ್ಟು ಎರಡು ರಣಜಿ ಟೂರ‍್ನಿ, ಎರಡು ಇರಾನಿ ಕಪ್, ನಾಲ್ಕು ವಿಜಯ್ ಹಜಾರೆ ಟೂರ‍್ನಿ ಹಾಗೂ ಎರಡು ಸಯ್ಯದ್ ಮುಶ್ತಾಕ್ ಅಲಿ ಟೂರ‍್ನಿಗಳನ್ನು ಗೆದ್ದಿದ್ದಾರೆ. ಇದು 87 ವರುಶಗಳ ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಆಟಗಾರನೊಬ್ಬ ಗೆದ್ದಿರುವ ಅತಿಹೆಚ್ಚು ಟೂರ‍್ನಿಗಳ ದಾಕಲೆ! ಒಟ್ಟು 103 ಮೊದಲ ದರ‍್ಜೆ ಪಂದ್ಯಗಳನ್ನಾಡಿರುವ ಮಿತುನ್ 26 ರ ಸರಾಸರಿಯಲ್ಲಿ 338 ವಿಕೆಟ್ ಗಳನ್ನುಪಡೆದ್ದಿದ್ದಾರೆ. ಅದರಲ್ಲಿ 12 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದರೆ 2 ಬಾರಿ ಪಂದ್ಯದಲ್ಲಿ ಹತ್ತು ವಿಕೆಟ್ ಪಡೆದ್ದಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲಿ 4 ಅರ‍್ದಶತಕಗಳೊಂದಿಗೆ 1,937 ರನ್ ಕಲೆ ಹಾಕಿದ್ದಾರೆ. 96 ಲಿಸ್ಟ್-ಎಪಂದ್ಯಗಳಲ್ಲಿ 2 ಬಾರಿ ಐದು ವಿಕೆಟ್ ಗಳೊಂದಿಗೆ 136 ವಿಕೆಟ್ ಗಳನ್ನು ಪಡೆದರೆ 74 ಟಿ-20 ಪಂದ್ಯಗಳಲ್ಲಿ ಕೂಡ 2 ಬಾರಿ ಐದು ವಿಕೆಟ್ ಗಳೊಂದಿಗೆ 69 ವಿಕೆಟ್ ಗಳನ್ನು ಕೆಡವಿದ್ದಾರೆ. ಇದು ದೇಸೀ ಕ್ರಿಕೆಟ್ ನಲ್ಲಿ ಮಿತುನ್ ರ ಒಟ್ಟಾರೆ ಸಾದನೆ.

ಅನಿರೀಕ್ಶಿತ ನಿವ್ರುತ್ತಿ

31 ರ ಹರೆಯದ ಮಿತುನ್ ಏಕಾಏಕಿ ಕಳೆದ ವಾರ ದೇಸೀ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸಿ ಕರ‍್ನಾಟಕ ತಂಡದೊಂದಿಗಿನ ತಮ್ಮ ನಂಟನ್ನು ಕಡೆದುಕೊಂಡರು. ವಿನಯ್ ರ ನಿರ‍್ಗಮನದ ಬಳಿಕ ಬೌಲಿಂಗ್ ಮುಂದಾಳಾಗಿ ಮಿತುನ್ ಐನ್ನೂ ಕೆಲಕಾಲ ಕರ‍್ನಾಟಕದ ನೊಗ ಹೊರಲಿದ್ದಾರೆ ಎಂಬ ಬರವಸೆಯಲ್ಲಿದ್ದ ಅಬಿಮಾನಿಗಳಿಗೆ ನಿರಾಸೆ ಉಂಟಾಗಿದ್ದು ದಿಟ. ಕನಿಶ್ಟಇನ್ನೂ ಮೂರ‍್ನಾಲ್ಕು ವರುಶಗಳ ಕಾಲ ದೇಸೀ ಕ್ರಿಕೆಟ್ ಆಡುವ ಅಳವು ಅವರಲ್ಲಿತ್ತು. ಹಾಗೂ ಮುಂಬರುವ ಯುವ ಬೌಲರ್ ಗಳಿಗೆ ಮಿತುನ್ ರ ಮಾರ‍್ಗದರ‍್ಶನದ ಅಗತ್ಯತೆ ಕಂಡಿತ ಇತ್ತು. ಆದರೆ ಇನ್ನು ಬಾರತದ ಪರ ಅವಕಾಶಸಿಗುವುದು ಅಸಾದ್ಯವೆಂಬಂತಿರುವಾಗ ದೇಸೀ ಕ್ರಿಕೆಟ್ ನಲ್ಲಿ ಯುವ ಬೌಲರ್ ಗಳ ಅವಕಾಶ ಕಸಿದುಕೊಳ್ಳುವುದು ತರವಲ್ಲ ಎಂಬುದು ಮಿತುನ್ ರ ನಂಬಿಕೆ. ಹಾಗಾಗಿ ಅವರ ನಿರ‍್ಣಯವನ್ನು ಗೌರವಿಸಲೇಬೇಕು. ದುಬೈ ನ ಟಿ-10 ಪಂದ್ಯಾವಳಿಯಲ್ಲಿ ಅವರು ನಾರ‍್ದರನ್ ವಾರಿಯರ‍್ಸ್ ಪರ ಆಡಲಿರುವ ಸುದ್ದಿ ಕೇಳಿ ಬರುತ್ತಿದ್ದರೂ ಮಿತುನ್ ಇನ್ನೂಇದರ ಬಗ್ಗೆ ಅದಿಕ್ರುತವಾಗಿ ಸ್ಪಶ್ಟೀಕರಣ ನೀಡಿಲ್ಲ. ಐಪಿಎಲ್ ನಲ್ಲಿ ಬೆಂಗಳೂರು ತಂಡದ ಪರ 16 ಪಂದ್ಯಗಳನ್ನಾಡಿ, ಕೆಪಿಎಲ್ ನಲ್ಲಿ ಶಿವಮೊಗ್ಗ, ಬಿಜಾಪುರ ಹಾಗೂ ಮಲ್ನಾಡ್ ತಂಡಗಳ ಪರ ಆಡಿರುವ ಅನುಬವ ಹೊಂದಿರುವ ಮಿತುನ್ ರಿಗೆ ಲೀಗ್ ಕ್ರಿಕೆಟ್ ಹೊಸತೇನೂ ಅಲ್ಲ! ಅವರ ಮುಂದಿನ ಬದುಕಿಗೆ ಒಳ್ಳೆಯದನ್ನು ಹರಸುತ್ತಾ ಕರ‍್ನಾಟಕ ತಂಡಕ್ಕೆ ಅಪಾರ ಕೊಡುಗೆ ನೀಡಿದ ಈ ವಿಶಿಶ್ಟ ಪ್ರತಿಬೆಯನ್ನು ನೆನೆಯೋಣ. ಕನ್ನಡಿಗರ ಪಡೆಯನ್ನು ಪ್ರತಿನಿದಿಸುವುದು ಹೆಮ್ಮೆಯ ವಿಶಯ ಎಂದು ಹೇಳಿಕೊಳ್ಳುತ್ತಾ ಸದಾ ಕಿಚ್ಚಿನೊಂದಿಗೆ ಆಡಿ, ಗಂಡಬೇರುಂಡ ಲಾಂಚನದ ಗೌರವವನ್ನು ನೂರ‍್ಮಡಿ ಮಾಡಿದ ಮಿತುನ್ ಮುಂಬರುವ ಆಟಗಾರರಿಗೆ ಮಾದರಿ.

(ಚಿತ್ರ ಸೆಲೆ: espncricinfo.com, circleofcricket.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: