ಶ್ರೀನಾತ್ ಅರವಿಂದ್ – ದಣಿವರಿಯದ ಹೋರಾಟಗಾರ
2007 ರ ಬುಚ್ಚಿಬಾಬು ಪಂದ್ಯಾವಳಿಯಲ್ಲಿ ಕರ‍್ನಾಟಕ ತಂಡ ತಮಿಳುನಾಡು ಎದುರು ಚೆನ್ನೈನಲ್ಲಿ ಸೆಣೆಸುತ್ತಿತ್ತು. ಆಗ ಕರ‍್ನಾಟಕದ ವೇಗಿಯೊಬ್ಬರು ಕ್ಯಾಚ್ ಹಿಡಿಯಲು ಹೋಗಿ ತಂಡದ ವಿಕೆಟ್ ಕೀಪರ್ ಕೆ.ಬಿ. ಪವನ್ ರೊಂದಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡು ನೆಲಕ್ಕುರುಳುತ್ತಾರೆ. ಅವರ ಬಲ ಮೊಣಕಾಲಿನ ಲಿಗಮೆಂಟ್ ಹರಿದುದ್ದನ್ನ ಕಂಡು ವೈದ್ಯರು, ಇನ್ನು ಈ ಯುವ ವೇಗಿ ಕ್ರಿಕೆಟ್ ಆಡುವುದು ದೂರದ ಮಾತು ಎಂದು ನೇರವಾಗಿ ಹೇಳುತ್ತಾರೆ. ಈ ಅವಗಡದ ನಂತರ ಅವರಿಗೆ ಎದ್ದು ನಡೆಯುವುದಕ್ಕೇ ಆರು ತಿಂಗಳು ಹಿಡಿದರೂ ಕ್ರಿಕೆಟ್ ನಲ್ಲಿ ಸಾದಿಸುವ ದೊಡ್ಡ ಕನಸು ಹೊತ್ತಿದ್ದ ಆ ಬೌಲರ್ ತನ್ನಂಬಿಕೆಯಿಂದ ಚಲದಂಕಮಲ್ಲನಂತೆ ಹೋರಾಟ ಮುಂದುವರೆಸುತ್ತಾರೆ. ಅಲ್ಲಿಂದ ಕೇವಲ ಒಂದೇ ವರುಶದಲ್ಲಿ ಕರ‍್ನಾಟಕದ ಪರ ರಣಜಿ ಟೂರ‍್ನಿ ಆಡಿ, ಆ ಬಳಿಕ ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಕೂಡ ಆಡಿ ಪವಾಡ ಮಾಡಿದ ಗಟ್ಟಿಗರೇ ನಮ್ಮ ನಾಡಿನ ಹೆಮ್ಮೆಯ ಎಡಗೈ ವೇಗಿ ಶ್ರೀನಾತ್ ಅರವಿಂದ್.
ಹುಟ್ಟು – ಎಳವೆಯ ಕ್ರಿಕೆಟ್
8 ಏಪ್ರಿಲ್, 1984 ರಂದು ಅರವಿಂದ್ ಬೆಂಗಳೂರಿನಲ್ಲಿ ಹುಟ್ಟಿದರು. ಎಳವೆಯಿಂದಲೇ ಕ್ರಿಕೆಟ್ ಗೀಳು ಅಂಟಿಸಿಕೊಂಡ ಅರವಿಂದ್ ಓದಿನೊಟ್ಟಿಗೆ ಆಟದ ಪಟ್ಟುಗಳನ್ನೂ ಕಲಿಯುತ್ತಾ ಹೋದರು. ವಲ್ಚರ‍್ಸ್ ಕ್ಲಬ್ ತಂಡ ಸೇರಿದ ಅರವಿಂದ್ ವ್ರುತ್ತಿಪರ ಕ್ರಿಕೆಟರ್ ಆಗುವತ್ತಾ ಮೊದಲ ಹೆಜ್ಜೆ ಇಟ್ಟರು. ಮೊದಲಿಗೆ 2005/06 ರಲ್ಲಿ ಸಿ.ಕೆ ನಾಯ್ಡು ಟ್ರೋಪಿ ಹಾಗೂ ಆ ಬಳಿಕ 2006/07 ರಲ್ಲಿ ಪಿ.ಎಸ್ ರಾಮ್ ಮೋಹನ್ ರಾವ್ ಟ್ರೋಪಿಯಲ್ಲಿ ಆಡಿ ಯಶಸ್ಸು ಕಂಡರು. ಬೌಲರ್ ಆಗಿ ಇವರ ಎರಡು ವರುಶಗಳ ಬೆಳವಣಿಗೆಯನ್ನು ಕಂಡು 2007 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಎಮರ‍್ಜಿಂಗ್ ಟೂರ‍್ನಿಗೆ ಕೂಡ ಇವರನ್ನು ಆಯ್ಕೆ ಮಾಡಲಾಯಿತು. ಅರವಿಂದ್ ರ ಪ್ರತಿಬೆಯನ್ನು ಗುರುತಿಸಿ ಎಸ್.ಬಿ.ಎಮ್. (ಮೈಸೂರು ಬ್ಯಾಂಕ್) ಅವರಿಗೆ ಕೆಲಸ ನೀಡಿ ತಮ್ಮ ಕ್ರಿಕೆಟ್ ತಂಡವನ್ನು ಬಲಪಡಿಸಿಕೊಂಡಿತು. ನಂತರ ಅದೇ ಸಾಲಿನಲ್ಲಿ ಕರ‍್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆಯ ಇನ್ವಿಟೇಶನ್ ಟೂರ‍್ನಿ ಹಾಗೂ ಬುಚ್ಚಿ ಬಾಬು ಟೂರ‍್ನಿಯಲ್ಲಿ ಮತ್ತೊಮ್ಮೆ ಮಿಂಚಿದ ಅರವಿಂದ್ ರಿಗೆ 2007 ರ ದೇಸೀ ಟಿ-20 ಟೂರ‍್ನಿಗೆ ಕರ‍್ನಾಟಕ ರಾಜ್ಯ ತಂಡದಲ್ಲಿ ಎಡೆ ಮಾಡಿಕೊಡಲಾಯಿತು.
ಕರ‍್ನಾಟಕದ ಪರ ಪಾದಾರ‍್ಪಣೆ
2007 ರಲ್ಲಿ ಯರೇ ಗೌಡರ ಮುಂದಾಳ್ತನದಲ್ಲಿ ಕರ‍್ನಾಟಕದ ಪರ ಕೇರಳ ಎದುರು ವಿಶಾಕಪಟ್ಟಣದಲ್ಲಿ ಅರವಿಂದ್ ತಮ್ಮ ಚೊಚ್ಚಲ ಟಿ-20 ಪಂದ್ಯ ಆಡಿದರು. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯದೇ ಹೋದರೂ ಈ ಟೂರ‍್ನಿ ಉದ್ದಕ್ಕೂ ಶಿಸ್ತಿನ ದಾಳಿಯಿಂದ ವಿಕೆಟ್ ಬೇಟೆ ಮುಂದುವರಿಸಿದರು. ವೇಗ ತಮ್ಮ ಶಕ್ತಿಯಲ್ಲವೆಂದು ಅರಿತಿದ್ದ ಅವರು ಸರಾಸರಿ130 ಕಿ.ಮೀ ವೇಗದಲ್ಲಿ ಕರಾರುವಾಕ್ ಬೌಲಿಂಗ್ ಮಾಡುತ್ತಿದ್ದರು. ಚೆಂಡನ್ನು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡುವ ಚಳಕ ಹೊಂದಿದ್ದ ಅರವಿಂದ್ ರಾಜ್ಯದ ಪರ ಮೊದಲ ಟೂರ‍್ನಿಯಲ್ಲೇ ಅನುಬವಿ ವಿನಯ್ ರನ್ನು ಹಿಂದಿಕ್ಕಿ ಅತಿ ಹೆಚ್ಚು 13 ವಿಕೆಟ್ ಗಳನ್ನು ಕೆಡವಿ, ಗಮನ ಸೆಳೆದು, ರಣಜಿ ತಂಡದ ಹೊಸ್ತಿಲಲ್ಲಿ ಬಂದು ನಿಂತರು. ಆದರೆ ಬುಚ್ಚಿಬಾಬು ಪಂದ್ಯದ ವೇಳೆ ಆದ ಆಕಸ್ಮಿಕ ಅವಗಡದಿಂದ ಅರವಿಂದ್ ರಣಜಿ ಟೂರ‍್ನಿ ಆಡಲು ಇನ್ನೊಂದು ವರುಶ ಕಾಯಬೇಕಾಯಿತು.
ರಣಜಿ ಕ್ರಿಕೆಟ್ ಬದುಕು
2008/09 ರ ಸಾಲಿನ ಕ್ವಾರ‍್ಟರ್ ಪೈನಲ್ ನಲ್ಲಿ ರಾಬಿನ್ ಉತ್ತಪ್ಪರ ಮುಂದಾಳ್ತನದಲ್ಲಿ ಸೌರಾಶ್ಟ್ರ ಎದುರು ಮುಂಬೈನಲ್ಲಿ ಅರವಿಂದ್ ತಮ್ಮ ಮೊದಲ ರಣಜಿ ಪಂದ್ಯ ಆಡಿದರು. ರಾಜ್ಯ ತಂಡ ಸೋತರೂ ಮೊದಲ ಪ್ರಯತ್ನದಲ್ಲೇ, 2/31 ರ ಪ್ರದಶನದಿಂದ ಬರವಸೆ ಮೂಡಿಸಿದರು. ಬಳಿಕ 2009/10 ರ ಸಾಲಿನ ತಮ್ಮ ಮೊದಲ ಪಂದ್ಯದಲ್ಲೇ ದೆಹಲಿ ಎದುರು ಎರಡನೇ ಇನ್ನಿಂಗ್ಸ್ ನಲ್ಲಿ 5/49 ದಾಳಿಯಿಂದ ತಂಡದಲ್ಲಿ ತಮ್ಮ ಎಡೆಯನ್ನು ಬದ್ರ ಪಡಿಸಿಕೊಂಡರು. ಕರ‍್ನಾಟಕ ಹತ್ತು ವರುಶಗಳ ಬಳಿಕ ಪೈನಲ್ ಗೆ ಲಗ್ಗೆ ಇಟ್ಟ ಆ ವರುಶ ವಿನಯ್ ಹಾಗೂ ಮಿತುನ್ ರಿಗೆ ಸೂಕ್ತ ಬೆಂಬಲ ನೀಡುತ್ತಾ ಅರವಿಂದ್ ಕೂಡ 25ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದು ತಾವೇನು ಕಮ್ಮಿ ಇಲ್ಲ ಎಂದು ತಮ್ಮ ಇರುವಿಕೆಯನ್ನು ನೆನಪಿಸಿದರು. ಇದರ ಬೆನ್ನಲ್ಲೇ 2010/11 ರ ಸಾಲಿನಲ್ಲಿ ಕರ‍್ನಾಟಕದ ಪರ ವೇಗಿಗಳ ಪೈಕಿ ಅರವಿಂದ್ ಅತಿಹೆಚ್ಚು (26) ವಿಕೆಟ್ ಗಳನ್ನು ಪಡೆದು ತಮ್ಮ ಪ್ರದರ‍್ಶನದಲ್ಲಿ ನಿರಂತರತೆ ಕಾಪಾಡಿಕೊಂಡರು. ತಮ್ಮ 6’1 ಎತ್ತರ ಹಾಗೂ ಕ್ರೀಸ್ ನ ವಿವಿದ ಕೋಣೆಯನ್ನು ಬಳಸಿಕೊಂಡು ಅವರು ನಡೆಸುತ್ತಿದ್ದ ನಿಕರ ದಾಳಿಗೆ ಹಲವಾರು ಬ್ಯಾಟ್ಸ್ಮನ್ ಗಳು ತತ್ತರಿಸಿ ಹೋದದ್ದು ಸುಳ್ಳಲ್ಲ. ಮದ್ಯಮ ವೇಗದ ಅವರ ಎಸೆತಗಳು ಮೊದಲಿಗೆ ಅಪಾಯಕಾರಿ ಎನಿಸದೆ ಹೋದರೂ ಕೊನೇ ಗಳಿಗೆಯಲ್ಲಿ ಅಸಾದಾರಣ ಸ್ವಿಂಗ್ ಪಡೆದು ಬ್ಯಾಟ್ಸ್ಮನ್ ಗಳನ್ನು ಗೊಂದಲಕ್ಕೆ ಸಿಲುಕಿಸುತ್ತಿತ್ತು. ಒಮ್ಮೆ ಅರವಿಂದ್ ಲಯ ಕಂಡುಕೊಂಡು ಆಪ್ ಸ್ಟಂಪ್ ಲೈನ್ ಹಿಡಿದರೆಂದರೆ ಮುಗಿಯಿತು, ದಣಿಯದೆ ಒಂದು ಕೊನೆಯಿಂದ ಬ್ಯಾಟ್ಸ್ಮನ್ ಗಳಿಗೆ ರನ್ ಗಳಿಸಲು ಅವಕಾಶ ನೀಡದಂತೆ ಕಟ್ಟಿ ಹಾಕಿ ಸವಾಲು ಒಡ್ಡುತ್ತಿದ್ದರು. ಅಪ್ಪಿತಪ್ಪಿಯೂ ಅವರ ಎಸೆತಗಳು ಗುರಿ ತಪ್ಪುತ್ತಿರಲಿಲ್ಲ. ಈ ನಿಯಂತ್ರಣ ಹಾಗೂ ಶಿಸ್ತೇ ಅವರ ಶಕ್ತಿಯಾಗಿತ್ತು. ಹೀಗೇ ಬೌಲಿಂಗ್ ಮಾಡುತ್ತಾ ದುಲೀಪ್ ಟ್ರೋಪಿ ತಂಡದಲ್ಲೂ ಅವರು ಸ್ತಾನ ಪಡೆದು ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು.
ಐಪಿಎಲ್ ಕ್ರಿಕೆಟ್ ಬದುಕು
2011 ರಲ್ಲಿ ತಾವಾಡಿದ ಮೊದಲ ಐಪಿಎಲ್ ನಲ್ಲೇ ಅರವಿಂದ್ ಬೆಂಗಳೂರು ತಂಡದ ಪರ ಅತಿ ಹೆಚ್ಚು (21) ವಿಕೆಟ್ ಗಳನ್ನು ಪಡೆದರು. ಆ ಟೂರ‍್ನಿಯಲ್ಲಿ ಮಾಲಿಂಗ ಹಾಗೂ ಮುನಾಪ್ ಪಟೇಲ್ ಬಳಿಕ ಅತಿಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಕೂಡ ಕರ‍್ನಾಟಕದ ಈ ಎಡಗೈ ವೇಗಿಯ ಪಾಲಾಯಿತು. ಎಲ್ಲಾ ಬಗೆಯ ಕ್ರಿಕೆಟ್ ನಲ್ಲೂ ಪ್ರಾಬಲ್ಯ ಮೆರೆದು ವಿಕೆಟ್ ಗೊಂಚಲುಗಳಿಂದ ಅರವಿಂದ್ ಅಕ್ಶರಶಹ ತಮ್ಮ ಆಟದ ಉತ್ತುಂಗ ತಲುಪಿದರು. 2017 ರ ತನಕ ಒಟ್ಟು ಆರು ವರುಶಗಳ ಕಾಲ ಎಪಿಎಲ್ ನಲ್ಲಿ ಬೆಂಗಳೂರು ತಂಡದ ಪರ 38 ಪಂದ್ಯಗಳನ್ನಾಡಿ 4/14 ರ ಶ್ರೇಶ್ಟ ಸಾದನೆಯೊಂದಿಗೆ 17 ರ ಸರಾಸರಿಯಲ್ಲಿ ಒಟ್ಟು 45 ವಿಕೆಟ್ ಗಳನ್ನು ಪಡೆದಿರುವ ಅರವಿಂದ್ ಕೆಲವು ವರುಶಗಳ ಕಾಲ ನಾಯಕ ವಿರಾಟ್ ಕೊಹ್ಲಿಯ ಬರವಸೆಯ ಬೌಲರ್ ಆಗಿದ್ದು ದಿಟ. ಎಪಿಎಲ್ ನಲ್ಲಿ ಹಲವಾರು ಅಂತರಾಶ್ಟ್ರೀಯ ಬ್ಯಾಟ್ಸ್ಮನ್ ಗಳನ್ನೂ ಔಟ್ ಮಾಡಿದ ಅವರು ತನ್ನಂಬಿಕೆಯಿಂದ ಒಬ್ಬ ಬೌಲರ್ ಆಗಿ ಬೆಳೆಯುತ್ತಾ ಹೋದರು.
ಅಂತರಾಶ್ಟ್ರೀಯ ಕ್ರಿಕೆಟ್ ಬದುಕು
2011 ರ ದೇಸೀ ಟೂರ‍್ನಿಗಳು ಹಾಗೂ ಐಪಿಎಲ್ ನಲ್ಲಿ ಅರವಿಂದ್ ರ ಸ್ತಿರ ಪ್ರದರ‍್ಶನದಿಂದ ಪ್ರಬಾವಗೊಂಡ ಆಯ್ಕೆಗಾರರು 2011 ರಲ್ಲಿ ತವರಿನಲ್ಲಿ ನಡೆಯಲಿದ್ದ ಇಂಗ್ಲೆಂಡ್ ಎದುರಿನ ಒಂದು ದಿನದ ಪಂದ್ಯಗಳ ಸರಣಿಗೆ ಆಯ್ಕೆಮಾಡಿದರೂ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಲಾಗುವುದಿಲ್ಲ. ಆದರೂ ದ್ರುತಿಗೆಡದೆ ಅರವಿಂದ್ಮತ್ತೊಮ್ಮೆ ದೇಸೀ ಕ್ರಿಕೆಟ್ ನಲ್ಲಿ ತಮ್ಮ ಉತ್ಕ್ರುಶ್ಟ ಆಟವನ್ನು ಪ್ರತೀ ವರುಶ ಮುಂದುವರೆಸಿ 2015 ರಲ್ಲಿ ದಕ್ಶಿಣ ಆಪ್ರಿಕಾ ಎದುರು ಟಿ-20 ಸರಣಿಗೆ ಬಾರತ ತಂಡಕ್ಕೆ ಆಯ್ಕೆಯಾಗುತ್ತಾರೆ. ದರ‍್ಮಶಾಲಾದಲ್ಲಿ ತಮ್ಮ ಚೊಚ್ಚಲ ಅಂತರಾಶ್ಟ್ರೀಯಟಿ-20 ಪಂದ್ಯ ಆಡಿದ ಅವರು ಕೊಂಚ ದುಬಾರಿ ಎನಿಸಿ ಡುಪ್ಲೆಸಿಸ್ ರ ವಿಕೆಟ್ ಅನ್ನು ಪಡೆಯುತ್ತಾರೆ. ಆದರೆ ಈ ಪಂದ್ಯದ ಬಳಿಕ ಅರವಿಂದ್ ರಿಗೆ ಮತ್ತೊಂದು ಅವಕಾಶ ಸಿಗುವುದಿಲ್ಲ. ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ಬೆವರು ಹರಿಸಿ ಅಂತರಾಶ್ಟ್ರೀಯ ಮಟ್ಟ ತಲುಪಿದ ಒಬ್ಬ ಆಟಗಾರನಿಗೆ ತನ್ನನ್ನು ಸಾಬೀತು ಮಾಡಿಕೊಳ್ಳಲು ಕೇವಲ ಒಂದೇ ಒಂದು ಅವಕಾಶ ಸಿಕ್ಕಿದ್ದು ದುರಂತ ಎಂದೇ ಹೇಳಬೇಕು. ಬಾರತದಲ್ಲಿ ಇರುವ ತೀವ್ರ ಪೈಪೋಟಿಗೆ ಅರವಿಂದ್ ರಂತಹ ಪ್ರತಿಬಾನ್ವಿತ ಬೌಲರ್ ಗೆ ಸಿಕ್ಕ ಒಂದೇ ಒಂದು ಅವಕಾಶವೇ ಸಾಕ್ಶಿ.
ಕರ‍್ನಾಟಕ ತಂಡಕ್ಕೆ ಅರವಿಂದ್ ಕೊಡುಗೆ
ಹನ್ನೊಂದು ವರುಶಗಳ ಕಾಲ ರಾಜ್ಯ ತಂಡದ ಪರ ಆಡಿದ ಅರವಿಂದ್ ಒಟ್ಟು ಎರಡು ರಣಜಿ ಟೂರ‍್ನಿ, ಎರಡು ಇರಾನಿ ಕಪ್ ಹಾಗೂ ಮೂರು ವಿಜಯ್ ಹಜಾರೆ ಟೂರ‍್ನಿಗಳನ್ನು ಗೆದ್ದಿದ್ದಾರೆ. ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾದರೂ ಅರವಿಂದ್ ಹೋರಾಡಿ ಮೇಲಿದ್ದು ಬರುತ್ತಲೇ ಇದ್ದರು. 2014/15 ರ ವೇಳೆ ಇನ್ನೇನು ಅರವಿಂದ್ ರ ಆಟದ ದಿನಗಳುಮುಗಿದೇ ಹೋದವು ಎಂಬಂತಿರುವಾಗ ಅವರು ಮರಳುವುದು ಮಾತ್ರವಲ್ಲದೆ, ತಮ್ಮ ಬೌಲಿಂಗ್ ಕಸುವು ಇನ್ನೂಕುಂದಿಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿದರು. ಅದೇ ವರುಶ ಬೆಂಗಳೂರಿನಲ್ಲಿ ತಮಿಳುನಾಡು ಎದುರು ಅವರು ಪಡೆದ ಹ್ಯಾಟ್ರಿಕ್ ಅವರ ಕುಂದದ ಅಳವಿಗೆ ಎತ್ತುಗೆಯಾಯಿತು. ಅಲ್ಲಿಂದ 2018 ರ ತನಕ ಹಿಂತಿರುಗಿ ನೋಡದಅರವಿಂದ್ ಹೆಚ್ಚು ರನ್ ನೀಡದೆ ವಿಕೆಟ್ ಕೆಡವುತ್ತಲೇ ಇದ್ದರು. 2014/15 ರಲ್ಲಿ ಕರ‍್ನಾಟಕ ತನ್ನ ಎಂಟನೇ ರಣಜಿಕಿರೀಟವನ್ನು ಮುಡಿಗೇರಿಸಿಕೊಂಡಾಗ ಅರವಿಂದ್ ನಾಯಕ ವಿನಯ್ (48) ರ ಹಿಂದೆ ಕೇವಲ 17 ರ ಸರಾಸರಿಯಲ್ಲಿಅತಿಹೆಚ್ಚು (42) ವಿಕೆಟ್ ಗಳನ್ನು ಪಡೆದು ಚಾಪು ಮೂಡಿಸಿದರು. ತಮ್ಮ ಎಡಗೈ ಸ್ವಿಂಗ್ ಬೌಲಿಂಗ್ ನಿಂದ ಕರ‍್ನಾಟಕತಂಡದ ದಾಳಿಗೆ ಹೊಸ ಬಗೆಯ ಆಯಾಮವನ್ನು ನೀಡಿದ್ದ ಅರವಿಂದ್ ಎಶ್ಟೋ ಬಾರಿ ವಿನಯ್ ಹಾಗೂ ಮಿತುನ್ ರನ್ನೂ ಹಿಂದಿಕ್ಕಿದುಂಟು. 2016/17 ರ ರಣಜಿ ಟೂರ‍್ನಿಯಲ್ಲಿ ಕರ‍್ನಾಟಕದ ಪರ ಕೇವಲ 13.96 ರ ಸರಾಸರಿಯಲ್ಲಿಅತಿ ಹೆಚ್ಚು 30 ವಿಕೆಟ್ ಗಳನ್ನು ಪಡೆದು ತಮ್ಮ ಶ್ರೇಶ್ಟತೆಯನ್ನು ಸಾರಿ ಹೇಳಿದರು. ಹೊಸ ಚೆಂಡಿರಲಿ ಹಳೇ ಚೆಂಡಿರಲಿ, ಅರವಿಂದ್ ಸ್ವಿಂಗ್ ಮಾಡುವಲ್ಲಿ ನಿಪುಣರಾಗಿದ್ದರು. ಹಾಗಾಗಿ ಎದುರಾಳಿಗಳು ಎಂದಿಗೂ ಅವರನ್ನು ಹಗುರವಾಗಿ ಪರಿಗಣಿಸುತ್ತಿರಲಿಲ್ಲ. ಹೆಚ್ಚು ಬಾರಿ ಮೊದಲ ಬೌಲಿಂಗ್ ಬದಲಾವಣೆಯಾಗಿ ಬೌಲ್ ಮಾಡುತ್ತಿದ್ದ ಅರವಿಂದ್ ಬ್ಯಾಟ್ಸ್ಮನ್ ಗಳ ಮೇಲಿನ ಒತ್ತಡವನ್ನು ಕಡಿಮೆಯಾಗದಂತೆ ಕಾಪಾಡಿಕೊಂಡು ಸವಾಲೊಡ್ಡುತ್ತಿದ್ದರು. ಹಾಗೇ ಜೊತೆಯಾಟ ಮುರಿಯುವ ವಿಶೇಶ ಚಳಕ ಹೊಂದಿದ್ದ ಅವರು ದಿಟವಾಗಿಯೂ ತಂಡದ ಬೌಲಿಂಗ್ ಶಕ್ತಿಯಾಗಿದ್ದರು. ಮಿತುನ್ ಹಾಗೂ ವಿನಯ್ ರ ನಡುವೆ ಅರವಿಂದ್ ರ ಕೊಡುಗೆ ಎಲೆ ಮರೆಕಾಯಿಯಂತೆ ಅಬಿಮಾನಿಗಳಿಗೆ ಕಾಣದೆ ಹೋದರೂ ಅವರು ತಂಡದಲ್ಲಿ ತಮ್ಮದೇ ವಿಶಿಶ್ಟ ಸ್ತಾನ ಸಂಪಾದಿಸಿದದ್ದು ನಿಜ. ಹಾಗಾಗಿ ಸಹ ಆಟಗಾರರಿಗೂ ಅರವಿಂದ್ ರ ಮೇಲೆ ವಿಶೇಶ ಗೌರವ. 2014 ಹಾಗೂ 2015 ರ ನಡುವೆ ಎರಡು ವರುಶಗಳ ಕಾಲ ರಾಜ್ಯ ತಂಡ ಎಲ್ಲಾ ಟೂರ‍್ನಿಗಳನ್ನು ಗೆಲ್ಲುವಲ್ಲಿ ಅರವಿಂದ್ ರ ಕೊಡುಗೆಯನ್ನು ಮರೆಯುವಂತಿಲ್ಲ. ತಮ್ಮಲ್ಲಿ ಇನ್ನೂ ಆಡುವ ಅಳವು ಇರುವಾಗಲೇ ಪ್ರಸಿದ್, ಪ್ರತೀಕ್, ಕೌಶಿಕ್ ರಂತಹ ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಅರವಿಂದ್ 2018 ರ ವಿಜಯ್ ಹಜಾರೆ ಟೂರ‍್ನಿಯ ಪೈನಲ್ ಗೂ ಮುನ್ನ, ತಮ್ಮ 33ನೇ ವಯಸ್ಸಿನಲ್ಲಿ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸಿದರು. ಕರ‍್ನಾಟಕ ಗೆದ್ದ ಆ ಪೈನಲ್ ಪಂದ್ಯವೇ ಅವರ ವ್ರುತ್ತಿ ಬದುಕಿನ ಕಟ್ಟ ಕಡೇ ಪಂದ್ಯವಾಯಿತು. ಅವರ ಈ ಹಟಾತ್ ನಿವ್ರುತ್ತಿಯನ್ನು ಕಂಡಿತ ಯಾರೂ ಎದುರು ನೋಡಿರಲಿಲ್ಲ. ಆದರೆ ಈ ತೀರ‍್ಮಾನ ಅವರ ನಿಸ್ವಾರ‍್ತೆತೆಗೆ ಎತ್ತುಗೆ ಎಂದೇ ಹೇಳಬೇಕು. ಒಟ್ಟು 56 ಮೊದಲ ದರ‍್ಜೆ ಪಂದ್ಯಗಳನ್ನಾಡಿರುವ ಅರವಿಂದ್ ಕೇವಲ 24 ರ ಸರಾಸರಿಯಲ್ಲಿ 186 ವಿಕೆಟ್ ಗಳನ್ನು ಪಡೆದಿದ್ದಾರೆ. ಅದರಲ್ಲಿ 2 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದರೆ 10 ಬಾರಿ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದಿರುವುದು ವಿಶೇಶ. ಇನ್ನು 41 ಲಿಸ್ಟ್-ಎ ಪಂದ್ಯಗಳಲ್ಲಿ 2 ಬಾರಿ ನಾಲ್ಕು ವಿಕೆಟ್ ಗಳೊಂದಿಗೆ 25 ರ ಸರಾಸರಿಯಲ್ಲಿ 57 ವಿಕೆಟ್ ಗಳನ್ನು ಪಡೆದರೆ, 84 ಟಿ-20 ಪಂದ್ಯಗಳಲ್ಲಿ 5 ಬಾರಿ ನಾಲ್ಕು ವಿಕೆಟ್ ಗಳೊಂದಿಗೆ 16.6 ರಸರಾಸರಿಯಲ್ಲಿ ಒಟ್ಟು 103 ವಿಕೆಟ್ ಗಳನ್ನು ಕೆಡವಿದ್ದಾರೆ.
ನಿವ್ರುತ್ತಿ ನಂತರದ ಬದುಕು
2018 ರಿಂದ ಅರವಿಂದ್ ಕರ‍್ನಾಟಕ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಯುವ ಬೌಲರ್ ಗಳನ್ನು ತಿದ್ದಿ ತೀಡಿ ಮುಂದಿನ ಸವಾಲುಗಳಿಗೆ ಅಣಿ ಮಾಡುವ ಹೊಣೆ ಹೊತ್ತಿರುವ ಅವರು ಈ ಮೂರು ವರುಶಗಳಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿದ್ದಾರೆ. ಕೋಚ್ ಆಗಿ ಅವರು ರಾಜ್ಯ ತಂಡದೊಂದಿಗೆ ಎರಡು ಮುಶ್ತಾಕ್ ಅಲಿ ಟೂರ‍್ನಿ ಹಾಗೂ ಒಂದು ವಿಜಯ್ ಹಜಾರೆ ಟೂರ‍್ನಿಯನ್ನು ಗೆದ್ದಿರುವುದು ವಿಶೇಶ. ಪ್ರಸಿದ್ ಅಂತರಾಶ್ಟ್ರೀಯ ಮಟ್ಟಕ್ಕೆ ಏರಿದರೆ ಕೌಶಿಕ್, ಪ್ರತೀಕ್, ಮೋರೆ ಅವರಂತಹ ಬೌಲರ್ ಗಳು ಸಾಕಶ್ಟು ಬರವಸೆ ಮೂಡಿಸಿದ್ದಾರೆ. ಈ ಯುವ ವೇಗಿಗಳೆಲ್ಲಾ ಅರವಿಂದ್ ರ ಗರಡಿಯಲ್ಲಿ ಇನ್ನಶ್ಟು ಪಳಗಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂಬುದೇ ಕನ್ನಡಿಗರ ಹೆಬ್ಬಯಕೆ!
ತಮ್ಮ ವ್ರುತ್ತಿ ಬದುಕಿನಾದ್ಯಂತ ಸಾಕಶ್ಟು ಅಡೆತಡೆಗಳನ್ನು ಹಿಮ್ಮೆಟ್ಟಿ ಎದೆಗುಂದದೆ ಕೇವಲ ತನ್ನಂಬಿಕೆ, ಚಲಹಾಗೂ ಕಟಿಣ ಪರಿಶ್ರಮದಿಂದ ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆದ ಕನ್ನಡಿಗ ಅರವಿಂದ್ ಎಲ್ಲಾ ಆಟಗಾರರಿಗೂ ಮಾದರಿ. 2010 ರಲ್ಲಿ ಒಮ್ಮೆ ಮಂಗಳೂರು ತಂಡದೊಂದಿಗೆ ಹಾಗೂ 2017 ರಲ್ಲಿ ನಾಯಕನಾಗಿ ಬೆಳಗಾವಿ ತಂಡದೊಂದಿಗೆ ಅರವಿಂದ್ ಕೆ.ಪಿ.ಎಲ್ ಕೂಡ ಗೆದ್ದಿದ್ದಾರೆ. ಕರ‍್ನಾಟಕಕ್ಕೆ ಸೌಮ್ಯ ಸ್ವಬಾವದ ಈ ಎಡಗೈವೇಗಿಯ ಕೊಡುಗೆ ಅಪಾರ. ಅವರನ್ನು ಎಂದಿಗೂ ಮರೆಯದಿರೋಣ.
(ಚಿತ್ರ ಸೆಲೆ: timesofindia, dnaindia.com, sportskeeda.com)
ಇತ್ತೀಚಿನ ಅನಿಸಿಕೆಗಳು