ನಿಶೇದಿತ ಅಕ್ಕಿ

– .

ಬತ್ತ ಬೆಳೆಯುವ ಪ್ರದೇಶಗಳಲ್ಲಿ ಬಹು ಬೇಡಿಕೆಯ ದಾನ್ಯ ಅಕ್ಕಿ. ಅಂತಹುದರಲ್ಲಿ ಇದು ಯಾವುದು ನಿಶೇದಿತ ಅಕ್ಕಿ? ಇದೇನಾದರೂ ವಿಶಪೂರಿತವೇ? ಇದನ್ನು ಅರಗಿಸಿಕೊಳ್ಳಲಾಗದೇ? ಅತವಾ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನಾದರೂ ಆಗುತ್ತದೆಯೇ? ನಿಶೇದ ಎಂದಾಗ ಏಳಬಹುದಾದ ಹಲವು ಸಂಶಯಗಳು ಇವು.

ಪ್ರಾಚೀನ ಚೀನಾದಲ್ಲಿ ಕಪ್ಪು ಅಕ್ಕಿಯನ್ನು ನಿಶೇದಿತ ಅಕ್ಕಿ ಎಂದು ಕರೆಯುತ್ತಿದ್ದರು. ಏಕೆಂದರೆ ಇದನ್ನು ಕರೀದಿಸುವವರು ಮೇಲ್ವರ‍್ಗಕ್ಕೆ ಸೇರಿದವರಾಗಿರುತ್ತಿದ್ದರು. ಬಡಬಗ್ಗರಿಗೆ ಇದನ್ನು ಕೊಳ್ಳುವ ತಾಕತ್ತು ಇರಲಿಲ್ಲ. ಅಶ್ಟು ತುಟ್ಟಿ. ಹಣವಂತ ಚೀನೀಯರು ಕಪ್ಪು ಅಕ್ಕಿಯ ಪ್ರತಿಯೊಂದು ಕಾಳನ್ನು ತಾವುಗಳೇ ಕರೀದಿಸಿ, ಸಾರ‍್ವಜನಿಕರ ಬಳಕೆಗೆ ಲಬ್ಯವಿಲ್ಲದಂತೆ ತಡೆಹಿಡಿದಿದ್ದರು. ಇದಕ್ಕೆ ಮೂಲ ಕಾರಣ ಅವರ ಹಣ ಬಲ. ಆರೋಗ್ಯದ ದ್ರುಶ್ಟಿಯಿಂದ ಕಪ್ಪು ಅಕ್ಕಿ ಮೂತ್ರಪಿಂಡ, ಹೊಟ್ಟೆ, ಪಿತ್ತಜನಕಾಂಗದ ಸುದಾರಣೆಗೆ ಅತ್ಯುತ್ತಮ ದಾನ್ಯವೆಂದು ಅವರುಗಳು ಪರಿಗಣಿಸಿದ್ದರು. ಹಾಗಾಗಿ ಕಪ್ಪು ಅಕ್ಕಿ ಪ್ರಾಚೀನ ಚೀನಾದ ರಾಜರ ಮತ್ತು ಶ್ರೀಮಂತರ ಸ್ವಂತ ಆಸ್ತಿಯಾಗಿತ್ತು. ಚೀನಾದಲ್ಲಿ ಕಪ್ಪು ಅಕ್ಕಿಯ ಬೆಳೆ ತೆಗೆಯುವುದು ಮುಂದುವರೆದರೂ, ಅದನ್ನು ಗಣ್ಯ ವ್ಯಕ್ತಿಗಳಿಗಾಗಿ, ಕಟ್ಟು ನಿಟ್ಟಿನ ಕಣ್ಗಾವಲಿನಲ್ಲಿ ಮತ್ತು ಸೀಮಿತ ಪ್ರಮಾಣದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಜನ ಸಾಮಾನ್ಯರಿಗೆ ಇದರ ಸೇವನೆ ನಿಶೇದಿಸಲಾಗಿತ್ತು. ಇದು ಕಪ್ಪು ಅಕ್ಕಿಯನ್ನು ನಿಶೇದಿತ ಅಕ್ಕಿ ಎಂದು ಕರೆಯಲು ಕಾರಣವಾಯಿತು.

ಕಪ್ಪು ಅಕ್ಕಿಯ ಬಗೆಗಳು ಮತ್ತು ವಿಶೇಶತೆ

ಕಪ್ಪು ಅಕ್ಕಿಯು ‘ಓರಿಜಾ ಸಟಿವಾ’ ಜಾತಿಗೆ ಸೇರಿದ ಒಂದು ದಾನ್ಯ. ಇಂದು ವಿಶ್ವಾದ್ಯಂತ ಹಲವಾರು ಬಗೆಯ ಕಪ್ಪು ಅಕ್ಕಿಯ ತಳಿಗಗಳು ಸಿಗುತ್ತವೆ. ಇವುಗಳಲ್ಲಿ ಇಂಡೋನೇಶಿಯಾದ ಕಪ್ಪು ಅಕ್ಕಿ, ಪಿಲಿಪೈನ್ಸ್ ದೇಶದ ಹಯಲ್ರೂಮ್ ಬಲತಿನಾವ್ ಕಪ್ಪು ಅಕ್ಕಿ, ಪಿರುರುಟಾಂಗ್ ಕಪ್ಪು ಗ್ಲುಟಿನಸ್ ಅಕ್ಕಿ, ತಾಯ್ ಜಾಸ್ಮಿನ್ ಕಪ್ಪು ಅಕ್ಕಿ, ಬಾರತದ ಮಣಿಪುರದಲ್ಲಿ ಬೆಳೆಯುವ ಚಕಾವೊ ಎನ್ನುವ ಅಕ್ಕಿ ಸೇರಿವೆ. ಬಾರತದ ನೆರೆ ದೇಶ ಬಾಂಗ್ಲಾದಲ್ಲಿ ಇದನ್ನು ಕಾಲೊ ದನೇರ್ ಚಾಲ್ (ಕಪ್ಪು ಬತ್ತದ ಅಕ್ಕಿ) ಎನ್ನಲಾಗುತ್ತದೆ. ಇದರಿಂದ ತಯಾರಿಸಿದ ಪಲಾವ್ ಮತ್ತು ಅಕ್ಕಿ ಆದಾರಿತ ಸಿಹಿಬಕ್ಶ್ಯಗಳು ಅಲ್ಲಿ ಬಹಳ ಜನಪ್ರಿಯ.
ಕಪ್ಪು ಅಕ್ಕಿಯ ಬತ್ತದ ಹೊಟ್ಟಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಂತೋಸಯಾನಿನ್ ಅಂಶವಿರುವುದು ಕಂಡುಬಂದಿದೆ. ಬೇರಾವುದೇ ದಾನ್ಯದಲ್ಲಾಗಲಿ, ಆಹಾರ ಪದಾರ‍್ತದಲ್ಲಾಗಲಿ ಇಶ್ಟು ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಇದರಲ್ಲಿ ಬೇರೆ ಬಣ್ಣದ ಅಕ್ಕಿಯಲ್ಲಿರುವಶ್ಟೇ ಪ್ರಮಾಣದ ನಾರಿನಂಶ ಇರುವುದೂ ಸಹ ಸಾಬೀತಾಗಿದೆ. ಗಾಡವಾದ ಕಪ್ಪು ಬಣ್ಣ ಹೊಂದಿರುವ ಈ ಅಕ್ಕಿ, ಅಡುಗೆ ಮಾಡುವಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಕಪ್ಪು ಅಕ್ಕಿಯಲ್ಲಿ ಹೇರಳವಾಗಿರುವ ಆಂತೋಸಯಾನಿನ್ ಅಂಶ. ಕಪ್ಪು ಅಕ್ಕಿಯಿಂದ ಹತ್ತು ಹಲವು ಪದಾರ‍್ತಗಳನ್ನು ತಯಾರಿಸಬಹುದು. ಉದಾಹರಣೆಗೆ ಗಂಜಿ, ಬ್ರೆಡ್, ಅಕ್ಕಿಯ ಕೇಕ್, ನೂಡಲ್ಸ್ ಹಾಗೂ ಬೇರೆ ಇತರೆ ಅಕ್ಕಿಯಿಂದ ತಯಾರಿಸುವ ಎಲ್ಲಾ ಸಿಹಿ ಬಕ್ಶ್ಯಗಳನ್ನು ಇದರಿಂದಲೂ ತಯಾರಿಸಬಹುದು. ಹೀಗೆ ತಯಾರಿಸಿದ ಪದಾರ‍್ತಗಳ ಬಣ್ಣ ಮಾತ್ರ ಕಪ್ಪು ಮಿಶ್ರಿತ ನೇರಳೆ ಬಣ್ಣದಂತಿರುತ್ತದೆ.

ಈ ಅಕ್ಕಿಯ ಉಪಯೋಗಗಳು ಹಲವು

ಬೇರೆ ಅಕ್ಕಿಯ ತಳಿಗಳಿಗೆ ಹೋಲಿಕೆ ಮಾಡಿದಲ್ಲಿ, ಕಪ್ಪು ಅಕ್ಕಿ ಅನೇಕ ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿದೆ, ನೈಸರ‍್ಗಿಕ ಡಿಟಾಕ್ಸಿಪೈಯರ್ ಅಂಶವಿದೆ. ನಾರಿನ ಅಂಶವಿದ್ದು ಮದುಮೇಹದ ಅಪಾಯವನ್ನು ತಡೆಗಟ್ಟುವ ಶಕ್ತಿಯಿದೆ. ಸಾಕಶ್ಟು ಪ್ರೋಟೀನ್ ಅಂಶವಿರುವುದರಿಂದ ಸ್ತೂಲಕಾಯದ ಅಪಾಯವನ್ನು ತಡೆಗಟ್ಟುವ ಹಾಗೂ ಹ್ರುದಯ ಅರೋಗ್ಯವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.

ಕಪ್ಪು ಅಕ್ಕಿ ಅತವಾ ನಿಶೇದಿತ ಅಕ್ಕಿ ಅಪರೂಪದ ಮತ್ತು ಅತ್ಯಂತ ಹಳೆಯ ಅಕ್ಕಿಯಾಗಿದ್ದು, ಬಾರತದಲ್ಲೂ ಸಹ ಶತಮಾನಗಳ ಹಿಂದಿನಿಂದಲೂ ಬೆಳೆಯಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಕಪ್ಪು ಅಕ್ಕಿಯನ್ನು ಚಕಾವೊ ಎಂದರೆ, ತಮಿಳುನಾಡಿನಲ್ಲಿ ಕವುನಿ ಎನ್ನಲಾಗುತ್ತದೆ.
ಕಪ್ಪು ಅಕ್ಕಿ, ನಿಶೇದಿತ ಅಕ್ಕಿ, ನೇರಲೇ ಬಣ್ಣದ ಅಕ್ಕಿ ಹೀಗೆ ಹಲವಾರು ಹೆಸರುಗಳಿಂದ ಗುರುತಿಸಿಕೊಳ್ಳುವ ಈ ಅಕ್ಕಿಯಿಂದ ತಯಾರಿಸುವ ಆಹಾರ ಪದಾರ‍್ತಗಳು ಬಹಳ ಸ್ವಾದಿಶ್ಟ ಹಾಗೂ ಆರೋಗ್ಯಕರ. ಬೇರೆ ಅಕ್ಕಿಗಳಿಗೆ ಹೋಲಿಸಿದಲ್ಲಿ ಕಪ್ಪು ಅಕ್ಕಿಯನ್ನು ಬೆಳೆಯಲು ಸಾಕಶ್ಟು ಪೂರ‍್ವಬಾವಿ ತಯಾರಿಗಳ ಅವಶ್ಯವಿದೆ. ಈ ಎಲ್ಲಾ ತೊಡಕುಗಳಿಂದ ಇದರ ಉತ್ಪಾದನೆ ಕುಂಟಿತವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: healthline.com, food.ndtv.com, theprint.in, modernfarmer.com, verywellfit.com, theprint.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: