ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿರಿಸೋಣ

– ಸಂಜೀವ್ ಹೆಚ್. ಎಸ್.

ಚಳಿಗಾಲ ಎಂದಾಗ ಸಾಮಾನ್ಯವಾಗಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುವುದು ಹಾಗೂ ದೇಹವನ್ನು ಆದಶ್ಟು ಬೆಚ್ಚಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಅತಿಯಾದ ಚಳಿಯನ್ನು ತಡೆಯಲು ಚಳಿಗಾಲದಲ್ಲಿ ಜನರು ಸಾಕಶ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಸಾಕಶ್ಟು ಜನರಿಗೆ ರಕ್ತದೊತ್ತಡ ಕಡಿಮೆ ಆಗುವ ಸಾದ್ಯತೆ ಇರುತ್ತದೆ. ಚಳಿಗಾಲಕ್ಕೆ ತಕ್ಕ ಬಟ್ಟೆಗಳ ಜೊತೆಗೆ ಸೂಕ್ತ ಆಹಾರವನ್ನು ತೆಗೆದುಕೊಳ್ಳುವುದು ಕೂಡ ಮುಕ್ಯ. ಚಳಿಗಾಲದಲ್ಲಿ ಜನರು ಹೆಚ್ಚು ಸ್ವೆಟರ್ ಗಳನ್ನು ಬಳಸಿ ಬೆಚ್ಚಗಿರಲು ಪ್ರಯತ್ನಿಸುತ್ತಾರೆ. ಆದರೆ ಕೇವಲ ಸ್ವೆಟರ್ ತೊಟ್ಟು ಬೆಚ್ಚಗಿರುವುದು ಪರಿಹಾರವಲ್ಲ. ಇಂತಹ ಸಂದರ‍್ಬದಲ್ಲಿ ದೇಹದ ಒಳಗಿನಿಂದಲೂ ಬಿಸಿಯಾಗಿರುವುದು ಅತಿಮುಕ್ಯ. ದೇಹದ ಒಳಗಿನಿಂದ ಕೂಡ ಬೆಚ್ಚಗಾಗುವಂತೆ ಮಾಡುವ ಆಹಾರವನ್ನು ಸೇವಿಸುವುದರಿಂದ ಚಳಿಗಾಲ ನಮಗೆ ಸುಕಕರವಾಗಬಹುದು. ಚಳಿಗಾಲದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದರಿಂದ ನಮಗೆ ಬೆಚ್ಚಗಿನ ಅನುಬವ ದೊರಕುತ್ತದೆ.

ಚಳಿಗಾಲಕ್ಕೆ ತಕ್ಕ ಆಹಾರ

ಚಳಿಗಾಲದಲ್ಲಿ ಸೂಕ್ಶ್ಮಾಣು ಹಾಗೂ ವೈರಸ್‌ಗಳು ವೇಗದಲ್ಲಿ ಬೆಳವಣಿಗೆಯನ್ನು ಕಾಣುತ್ತವೆ. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವಿರಬೇಕು. ಚಳಿಗಾಲದ ರುತುಮಾನಕ್ಕೆ ಸಂಬಂದಿಸಿದ ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ರುತುಮಾನದಲ್ಲಿ ದೊರೆಯುವ ಹಣ್ಣುಗಳು ಸಹ ಕೈಗೆಟಕುವ ಬೆಲೆಯಲ್ಲಿಯೇ ಲಬ್ಯವಿರುತ್ತದೆ. ಅಂತಹ ಹಣ್ಣುಗಳನ್ನು ತಪ್ಪದೆ ಸವಿಯಬೇಕು. ಅದರಲ್ಲೂ ಪರಂಗಿ, ಚಕ್ಕೋತ, ಕಿತ್ತಳೆ, ಕಿವಿ ಮತ್ತು ದಾಳಿಂಬೆ ಹಣ್ಣು ಚಳಿಗಾಲಕ್ಕೆ ಅತ್ಯುತ್ತಮವಾಗಿರುತ್ತದೆ. ಈ ಹಣ್ಣುಗಳಲ್ಲಿ ಸಾಕಶ್ಟು ಜೀವಸತ್ವಗಳಿರುತ್ತವೆ. ಅವು ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ವಿಶೇಶವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಸವಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವುದು.

ತರಕಾರಿಗಳು ದೇಹದ ಪ್ರತಿರಕ್ಶಣಾ ವ್ಯವಸ್ತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬ್ರೊಕೋಲಿ ಮತ್ತು ಶುಂಟಿಯು ಹೆಚ್ಚಿನ ಮಟ್ಟದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ತರಕಾರಿಗಳು. ಇವು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಜ್ವರವನ್ನು ತಡೆಯುತ್ತವೆ. ಜೊತೆಗೆ ವಾತಾವರಣದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳಿಂದ ಉಂಟಾಗುವ ರೋಗಗಳಿಂದ ರಕ್ಶಣೆ ನೀಡುವುದು. ಸೊಪ್ಪುಗಳಲ್ಲಿ ಪಾಲಕ್ ಮತ್ತು ಅರುಗುಲಾ ಉತ್ತಮ ಪೋಶಣೆ ನೀಡುವುದು. ಮೆಣಸು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ವಿಟಮಿನ್ ಸಿ ಅನ್ನು ದೇಹಕ್ಕೆ ನೀಡುವುದು.

ಕೆಲವು ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಮಸಾಲ ಪದಾರ‍್ತಗಳು ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ವಿಶೇಶವಾಗಿ ಕಾಡಾ, ಪುದೀನಾ, ತುಳಸಿ, ಮೆಣಸಿನ ಪುಡಿ ನಮ್ಮ ಆರೋಗ್ಯವನ್ನು ಉತ್ತಮ ಹಾಗೂ ಬೆಚ್ಚಗಿಡಲು ಸಹಾಯ ಮಾಡುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಚಳಿಗಾಲ ತೊಂದರೆಗಳಿಗೆ ಮನೆಮದ್ದು

ನಮಗೆ ಚಳಿಗಾಲದಲ್ಲಿ ಚಳಿ ಅತವಾ ಕೆಮ್ಮು ಶುರುವಾದರೆ, ಜೇನುತುಪ್ಪದ ಜೊತೆ ಕಾಳುಮೆಣಸುಪುಡಿ ಮಿಶ್ರ ಮಾಡಿ ಸವಿಯಲು ನಮ್ಮ ಅಜ್ಜಿ ಹೇಳುತ್ತಿದ್ದದ್ದು ನೆನಪಿದೆ. ಇದು ಕೆಮ್ಮನ್ನು ಹೋಗಲಾಡಿಸಲು ನೈಸರ‍್ಗಿಕ ವಿದಾನ. ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಬಳಸುವುದರಿಂದ ಬರಬಹುದಾದ ಸಣ್ಣ ಪುಟ್ಟ ರೋಗಗಳಿಂದ ದೂರವಿರಬಹುದು. ಸಕ್ಕರೆ ಆರೋಗ್ಯಕ್ಕೆ ಅಶ್ಟು ಒಳ್ಳೆಯದಲ್ಲ, ಚಳಿಗಾಲದಲ್ಲಿ ಸಕ್ಕರೆಯ ಬದಲು ಹೆಚ್ಚು ಜೇನುತುಪ್ಪ ಬಳಸುವುದರಿಂದ ಅರೋಗ್ಯಕರವಾಗಿ ಇರಬಹುದು. ಜೇನುತುಪ್ಪ ಬಳಸುವುದರಿಂದ ಹೆಚ್ಚಿನ ಕ್ಯಾಲೋರಿ ತಗ್ಗಿಸಬಹುದು ಮತ್ತು ಬೆಚ್ಚಗಿರಬಹುದು. ಅದೇ ರೀತಿ ಕೆಮ್ಮು, ಗಂಟಲು ಕಟ್ಟುವುದು ಇದ್ದಲ್ಲಿ ಬಿಸಿ ಹಾಲಿಗೆ ಅರಿಶಿನ ಪುಡಿ ಬೆರೆಸಿ ಸೇವಿಸುವುದರಿಂದ ಗಂಟಲು ಮತ್ತು ಅನ್ನನಾಳ ಕಟ್ಟುವಿಕೆಯಿಂದ ಮುಕ್ತಿ ಪಡೆಯಬಹುದು.

ಪಾನೀಯಗಳ ಸೇವನೆಗಿರಲಿ ಮಿತಿ

ಚಳಿ ಇರುವಾಗ ಬಿಸಿ ಬಿಸಿ ಕಾಪಿ ಕುಡಿಯುವ ಆಹ್ಲಾದತೆಯನ್ನು ವಿವರಿಸಲು ಸಾದ್ಯವಿಲ್ಲ. ಆದರೆ ಅತಿ ಹೆಚ್ಚು ಕೆಪೀನ್ ಸೇವನೆಯಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಮೂಳೆ ಸಂದುಗಳಲ್ಲಿ ನೋವು ಹಾಗೂ ಸ್ನಾಯುನೋವು ಉಂಟಾಗಲು ಕಾರಣವಾಗುತ್ತದೆ ಎಂದು ಅದ್ಯಯನಗಳು ತಿಳಿಸುತ್ತವೆ. ಆದ್ದರಿಂದ ಕೆಪೀನ್ ಅಂಶ ಹೆಚ್ಚಿರುವ ಕೋಲಾ, ಕಾಪಿ ಮೊದಲಾದವುಗಳನ್ನು ಅತಿಯಾಗಿ ಸೇವಿಸಬಾರದು. ಅತಿ ಪ್ರಮಾಣದ ಸೇವನೆಯಿಂದ ಕೆಲವರಲ್ಲಿ ಉರಿಯೂತವೂ ಹೆಚ್ಚಬಹುದು.

ಮದ್ಯವ್ಯಸನಿಗಳ ಗಮನಕ್ಕೆ

ಚಳಿಗಾಲದಲ್ಲಿ ಮದ್ಯ ಸೇವನೆಯಿಂದ ದೇಹ ಬಿಸಿಯಾಗುತ್ತದೆ ಎಂಬ ಬಾವನೆ ಹಲವರಲ್ಲಿದೆ. ಆದರೆ ಮದ್ಯ ಮೂಳೆಗಳನ್ನು ಶಿತಿಲಗೊಳಿಸುವ ಮತ್ತು ಸ್ನಾಯುಗಳ ಸೆಳೆತವನ್ನು ತಗ್ಗಿಸುವ ಗುಣ ಹೊಂದಿದೆ. ಅತಿಯಾದ ಪ್ರಮಾಣದ ಮದ್ಯದ ಸೇವನೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಶಮತೆಯನ್ನು ಕಳೆದುಕೊಳ್ಳುತ್ತದೆ. ಮದ್ಯ ಸೇವನೆ ಹೆಚ್ಚಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಅಂಶ ವಿಪರೀತವಾಗಿ ಕಡಿಮೆಯಾಗಿ ಮೂಳೆಗಳು ತಮ್ಮ ಸಾಮರ‍್ತ್ಯವನ್ನು ಕಳೆದುಕೊಳ್ಳುತ್ತವೆ ಹಾಗೂ ಸುಲಬವಾಗಿ ಮುರಿತಕ್ಕೆ ಒಳಗಾಗುತ್ತವೆ. ಆದ್ದರಿಂದ ಚಳಿಗಾಲದಲ್ಲಿ ಮದ್ಯವನ್ನು ಸೇವಿಸದೇ ಇರುವುದೇ ಜಾಣತನದ ಕ್ರಮವಾಗಿದೆ.

ನಮ್ಮ ಆರೋಗ್ಯ ನಮ್ಮ ಕಯ್ಯಲ್ಲೇ ಇದೆ

ಕಾಲಚಕ್ರಕ್ಕೆ ತಕ್ಕಂತೆ ಆಹಾರ ಪದ್ದತಿಯನ್ನು ಬದಲಾಯಿಸುವುದು ಮತ್ತು ಹಿತಮಿತವಾಗಿ ಬಳಸುವುದರಿಂದ ಅನೇಕ ಕಾಯಿಲೆಗಳ ಬಲೆಗೆ ಸಿಲುಕಿಕೊಳ್ಳುವುದರಿಂದ ಪಾರಾಗಬಹುದು. ಚಿಕ್ಕ ಪುಟ್ಟ ಆರೋಗ್ಯದ ಏರುಪೇರು ಕಂಡುಬಂದಲ್ಲಿ ವೈದ್ಯರನ್ನು ಬೇಟಿ ಮಾಡುವ ಬದಲು ನಮ್ಮ ಮನೆಯಲ್ಲಿಯೇ ಅಗತ್ಯ ಆಹಾರ ಪದಾರ‍್ತಗಳನ್ನು ಸೇವಿಸಿ ಆರೋಗ್ಯವಂತರಾಗಿರಬಹುದು. ದೇಹದ ಒಳ-ಹೊರಗನ್ನೂ ಬೆಚ್ಚಗಿಟ್ಟುಕೊಳ್ಳೋಣ. ಹೆಚ್ಚಿನ ಮಟ್ಟದಲ್ಲಿ ಮನೆಮದ್ದನ್ನು ಉಪಯೋಗಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: mentalfloss.com, ehealth.eletsonline.com, exportersindia.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.