ಪುದೀನಾ ಅನ್ನ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ – 1 ಲೋಟ
- ಪುದೀನಾ ಎಲೆ – 1 ಬಟ್ಟಲು
- ಹಸಿ ಕೊಬ್ಬರಿ ತುರಿ – ಅರ‍್ದ ಬಟ್ಟಲು
- ಈರುಳ್ಳಿ – 1
- ಹಸಿ ಮೆಣಸಿನಕಾಯಿ – 2
- ಒಣ ಮೆಣಸಿನಕಾಯಿ – 3
- ಚಕ್ಕೆ – ಅರ‍್ದ ಇಂಚು
- ಏಲಕ್ಕಿ – 3
- ಲವಂಗ – 4
- ಗೋಡಂಬಿ – 6
- ಕಡಲೇ ಬೀಜ – 2 ಚಮಚ
- ಉದ್ದಿನ ಬೇಳೆ – 1 ಚಮಚ
- ಕಡಲೇ ಬೇಳೆ – 1 ಚಮಚ
- ಸಾಸಿವೆ – ಅರ‍್ದ ಚಮಚ
- ಜೀರಿಗೆ – ಅರ‍್ದ ಚಮಚ
- ಕರಿಬೇವು ಎಲೆ – 10
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಇಂಗು – ಕಾಲು ಚಮಚ
- ಸಾಂಬಾರ ಪುಡಿ – 1 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ ಸ್ವಲ್ಪ
- ಹಸಿ ಶುಂಟಿ – ಕಾಲು ಇಂಚು
- ಬೆಳ್ಳುಳ್ಳಿ ಎಸಳು – 6
- ಎಣ್ಣೆ ಅತವಾ ತುಪ್ಪ – 4 ಚಮಚ
ಮಾಡುವ ಬಗೆ
ಮೊದಲಿಗೆ ಅಕ್ಕಿ ತೊಳೆದು, ನೀರು ಹಾಕಿ ಅನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಕಡಲೆ ಬೀಜ ಮತ್ತು ಗೋಡಂಬಿ ಹುರಿದು ತೆಗೆಯಿರಿ. ಅದೇ ಬಾಣಲೆಗೆ ಚಕ್ಕೆ, ಲವಂಗ, ಏಲಕ್ಕಿ ಮತ್ತು ಒಣಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು ತೆಗೆದು ಮಿಕ್ಸರ್ ನಲ್ಲಿ ಪುಡಿ ಮಾಡಿಟ್ಟುಕೊಳ್ಳಿ . ನಂತರ ಕೊಬ್ಬರಿ ತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ಪುದೀನಾ, ಹಸಿಮೆಣಸಿನಕಾಯಿ, ಶುಂಟಿ ಮತ್ತು ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಕಡಲೇ ಬೇಳೆ ಮತ್ತು ಇಂಗು ಹಾಕಿ ಹುರಿಯಿರಿ. ಈರುಳ್ಳಿ ಸಣ್ಣದಾಗಿ ಕತ್ತರಿಸಿ ಹಾಕಿ ಜೊತೆಗೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ . ರುಚಿಗೆ ತಕ್ಕಶ್ಟು ಉಪ್ಪು, ಅರಿಶಿಣ ಪುಡಿ ಸ್ವಲ್ಪ ಹಾಕಿ ನಂತರ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ ಕೆಳಗೆ ಇಳಿಸಿ. ಅನ್ನ, ಒಗ್ಗರಣೆ, ಹುರಿದಿಟ್ಟ ಗೋಡಂಬಿ ಮತ್ತು ಕಡಲೇ ಬೀಜ ಹಾಕಿ ಚೆನ್ನಾಗಿ ಕಲಸಿ. ಈ ಮೊದಲು ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿ ಅಲಂಕಾರ ಮಾಡಿ. ಈಗ ತಟ್ಟೆಗೆ ಹಾಕಿಟ್ಟುಕೊಂಡು ಮೊಸರು ಬಜ್ಜಿ(ರಾಯತಾ), ಸಲಾಡ್ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು