ಅಂಟಿಕೆ-ಪಂಟಿಕೆ: ಮಲೆನಾಡ ಜಾನಪದ ಕಲೆ
ಮಲೆನಾಡಿನಲ್ಲಿ ದೊಡ್ಡಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯನ್ನು ಅತ್ಯಂತ ಸಡಗರ, ಸಂಬ್ರಮ ಮತ್ತು ಕೆಲವು ವಿಬಿನ್ನ ಆಚರಣೆಗಳಿಂದ ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಮಲೆನಾಡಿಗರು ಗದ್ದೆಗೆ ಮುಂಡುಗ ಹಾಕುವುದು, ಬೂರೆ ಹಾಯುವುದು, ಬಲೀಂದ್ರನ ಪೂಜೆ, ಎಮ್ಮೆ-ದನಗಳ ಮೈ ತೊಳೆದು ಪೂಜೆ ಮಾಡುವುದು, ಗದ್ದೆ-ತೋಟ, ಊರ ದೇವರುಗಳಿಗೆ ಕೋಲುದೀಪ ಹಚ್ಚುವುದು ಹೀಗೆ ಬಗೆಬಗೆಯಲ್ಲಿ ಆಚರಿಸುತ್ತಾರೆ. ಈ ಆಚರಣೆಗಳ ಪಟ್ಟಿಗೆ ಸೇರುವ ಇನ್ನೊಂದು ಆಚರಣೆ ಅತವಾ ಜಾನಪದ ಕಲೆಯೇ ಅಂಟಿಕೆ-ಪಂಟಿಕೆ.
ಏನಿದು ಅಂಟಿಕೆ-ಪಂಟಿಕೆ?
ಊರಿನವರು ಸೇರಿ ಒಂದು ಗುಂಪು ಕಟ್ಟಿಕೊಂಡು ಜ್ಯೋತಿಯನ್ನು ಹಚ್ಚಿಸಿ ಅದನ್ನು ತೆಗೆದುಕೊಂಡು ಜಾನಪದ ಹಾಡುಗಳನ್ನು ಹಾಡುತ್ತ ಎಲ್ಲರ ಮನೆಗೆ ಹೋಗಿ ಜ್ಯೋತಿಯನ್ನು ಕೊಟ್ಟು, ಅವರು ನೀಡುವ ದಾನ್ಯ-ದುಡ್ಡನ್ನು ಪಡೆದುಕೊಂಡು ಬರುವ ಆಚರಣೆಯೇ ಅಂಟಿಕೆ-ಪಂಟಿಕೆ. ಇದಕ್ಕೆ ಅಂಟಿಕೆ-ಪಂಟಿಕೆ ಕಟ್ಟುವುದು ಎಂದೂ ಹೇಳುತ್ತಾರೆ. ಇದರಲ್ಲಿ ಇಬ್ಬರು ಮುಕ್ಯ ಹಾಡುಗಾರರು ಒಬ್ಬರಿಗೊಬ್ಬರು ಅಂಟಿಕೊಂಡು ಹಾಡುಗಳನ್ನು ಹೇಳುತ್ತಾರೆ. ಹಿಮ್ಮೇಳದಲ್ಲಿರುವ ಸಹ ಹಾಡುಗಾರರು ಅವರು ಮುಗಿಸುವ ಮುನ್ನವೇ ಪುನರಾವರ‍್ತಿಸುತ್ತಾರೆ. ಇವರ ಜೊತೆ ಒಬ್ಬರು ಜ್ಯೋತಿ ಹಿಡಿಯುವವರು ಇರುತ್ತಾರೆ, ಇವರು ಹಾಡು ಹೇಳುವುದಿಲ್ಲ. ಇವರೆಲ್ಲ ಸೇರಿ ದೀಪಾವಳಿಯ ಮೂರು ರಾತ್ರಿ ನಿದ್ದೆ ಬಿಟ್ಟು ಮನೆಮನೆಗೆ ಹೋಗಿ ಹಾಡು ಹೇಳುತ್ತಾರೆ.
ಹಾಲೆ ಮರದ ಕೆಳಗೆ ಸಂಜೆ ಕತ್ತಲಾದ ಬಳಿಕ ಜ್ಯೋತಿಯನ್ನು ಹಚ್ಚಿದರೆ ಬೆಳಿಗ್ಗಿನವರೆಗೂ ಜ್ಯೋತಿಯನ್ನು ಆರಲು ಬಿಡುವುದಿಲ್ಲ. ಜ್ಯೋತಿಯನ್ನು ಹಚ್ಚುವಾಗ ‘ಜ್ಯೋತಿ ಪದ’ಗಳನ್ನು ಹಾಡುತ್ತಾರೆ. ನಂತರ ಮನೆಗಳಿಗೆ ಹೋಗಲು ದಾರಿಯಲ್ಲಿ ಸಾಗುವಾಗ ‘ದಾರಿ ಪದ’ಗಳನ್ನು ಹಾಡುತ್ತಾರೆ. ದಾರಿಯಲ್ಲಿ ಸಿಗುವ ಊರ ದೇವರುಗಳಿಗೆ ಹಾಡಿನಲ್ಲಿಯೇ ಅರ‍್ಪಣೆಯನ್ನು ಸಲ್ಲಿಸುತ್ತಾರೆ. ನಂತರ ಸಿಗುವ ಮನೆಗೆ ಹೋಗಿ ಮಲಗಿರುವ ಅವರು ಎಚ್ಚರಗೊಳ್ಳಲಿ ‘ದೀಪ-ದೀಪೋಳ್ಗೆ ‘ ಎಂದು ಗಟ್ಟಿಯಾಗಿ ಕೂಗು ಹಾಕುತ್ತ ‘ಬಾಗಿಲ ಪದ’ ಹಾಡುತ್ತಾರೆ. ಮನೆಯವರು ಬಾಗಿಲು ತೆಗಯುವವರೆಗೂ ಹಾಡುವುದು-ಕೂಗುವುದು ಮುಂದುವರೆಯುತ್ತದೆ. ಕೆಲ ಮನೆಯವರು ಇನ್ನೂ ಹೆಚ್ಚು ಪದ ಹಾಡಲಿ ಎಂದು ಬಾಗಿಲು ತೆಗೆಯಲು ಸತಾಯಿಸುತ್ತಾರೆ. ಆಗ ಹಾಡುಗಾರರು ಮನೆಯವರನ್ನು ಇನ್ನೂ ಹೊಗಳಿ ಹಾಡುತ್ತಾರೆ. ನಂತರ ಮನೆಯ ಒಳಗೆ ಹೋದಾಗ ಮನೆಯವರು ಜ್ಯೋತಿ ಹಿಡಿದವರನ್ನು ಒಂದು ಮಣೆಯ ಮೇಲೆ ಕೂರಿಸಿ, ಜ್ಯೋತಿ ಇಡಲು ಇನ್ನೊಂದು ಮಣೆಯನ್ನಿಟ್ಟು ದೀಪಕ್ಕೆ ಎಣ್ಣೆ ಎರೆದು ಪೂಜೆ ಮಾಡುತ್ತಾರೆ. ತಮ್ಮ ಮನೆಯ ದೀಪವನ್ನು ಈ ಜ್ಯೋತಿಯಿಂದ ಹಚ್ಚಿಸಿಕೊಂಡು ದೇವರ ಮನೆಯಲ್ಲಿ ಇಡುತ್ತಾರೆ. ಎಣ್ಣೆ ಎರೆಯುವಾಗ ಹಾಡುಗಾರರು ಎಣ್ಣೆ ಎರೆಯುವ ಪದಗಳನ್ನು ಹಾಡುತ್ತಾರೆ. ನಂತರ ಮನೆಯವರು ಹಾಡುಗಾರರಿಗೆ ಅಕ್ಕಿ, ಬತ್ತ, ಅಡಿಕೆ, ವೀಳ್ಯದೆಲೆ ಮತ್ತು ದುಡ್ಡು ಕೊಡುತ್ತಾರೆ. ಆಗ ಹಾಡುಗಾರರು ಅಕ್ಕಿ ಬತ್ತದ ಪದಗಳನ್ನು ಹಾಡುತ್ತಾರೆ. ಕೆಲವೊಮ್ಮೆ ಮನೆಯವರು ಕೊಟ್ಟದ್ದು ಸಾಕಾಗಿಲ್ಲವೆಂದರೆ ಹಾಡುಗಾರರು ಅಲ್ಲಿಂದ ಕದಲುವುದಿಲ್ಲ! ಹಾಡು ಹೇಳುತ್ತಲೇ ಇರುತ್ತಾರೆ. ನಂತರ ಹೊಸ್ತಿಲು ದಾಟುವಾಗ ‘ಹೊರಡುವ ಪದ’ಗಳನ್ನು ಹಾಡುತ್ತ ಮನೆಯಿಂದ ಇನ್ನೊಂದು ಮನೆಗೆ ಹೊರಡುತ್ತಾರೆ. ಬೆಳಿಗ್ಗಿನವರೆಗೂ ಮನೆ ಮನೆ ಸುತ್ತುವ ಹಾಡುಗರರ ತಂಡ ಮತ್ತೆ ಹಾಲೆ ಮರದ ಕೆಳಗೆ ಹೋಗಿ ಜ್ಯೋತಿಯನ್ನು ಆರಿಸುತ್ತಾರೆ. ಆಗ ‘ಜ್ಯೋತಿ ಕಳಿಸುವ ಪದ’ಗಳನ್ನು ಹಾಡುತ್ತಾರೆ.
ಹಾಡುಗಾರರು ಕೆಲವು ಸಾಂದರ‍್ಬಿಕ ಪದಗಳನ್ನು ಹೇಳುತ್ತಾರೆ ಉದಾಹರಣೆಗೆ ಯಾರೊಬ್ಬರ ಮನೆಯಲ್ಲಿ ಹೊಸದಾಗಿ ಮದುವೆಯಾದ ಮದುಮಕ್ಕಳು ಇದ್ದರೆ ಅವರ ಮೇಲೆ ‘ಮದುಮಕ್ಕಳ ಪದ’ ಹಾಡುತ್ತಾರೆ. ಇನ್ನೂ ಯಾರಾದರೂ ತಿರುಪತಿ ಯಾತ್ರೆ ಮಾಡಿ ಬಂದವರು ಇದ್ದರೆ ‘ತಿರುಪತಿ ಪದ’, ಮಲೆನಾಡಿನ ಬೇಟೆ ಸಂಪ್ರದಾಯದ ಮೇಲೆ ‘ಹುಲಿ ಪದ’, ಶ್ರೀಮಂತರ ಮನೆಯ ವೈಬೋಗದ ತೂಗುಮಂಚವನ್ನು ವರ‍್ಣಿಸುವ ‘ಮಂಚ ಕುಂಚದ ಪದ’, ದೀಪಾವಳಿಯಲ್ಲಿ ಎಮ್ಮೆ-ದನಗಳ ಮೈ ತೊಳಿಯುವುದರ ಮೇಲೆ ‘ಬಸವನ ಮೈ ತೊಳಿಯುವ ಪದ’, ಚೆಂಡಾಟದ ಮೇಲೆ ‘ಚೆಂಡಿನ ಪದ’ ಹೀಗೆ ಇನ್ನೂ ಅನೇಕ ಪದಗಳಿವೆ. ಈ ಎಲ್ಲಾ ಹಾಡುಗಳನ್ನು ಕಲೆಹಾಕಿ ಡಾ|| ಜೆ.ಕೆ ರಮೇಶ ಇವರು ‘ನಿತ್ಯುಳ್ಳ ಜ್ಯೋತಿ ನಡೆಮುಂದೆ’ ಎಂಬ ಪುಸ್ತಕವನ್ನು ಹೊರ ತಂದಿದ್ದಾರೆ. ಈ ಪುಸ್ತಕ ಅಂಟಿಕೆ-ಪಂಟಿಕೆ ಕಲೆಯನ್ನು ಪರಿಚಯಿಸಲು ಮತ್ತು ಹೊಸ ಹಾಡುಗಾರರಿಗೆ ಕಲಿಯಲು ಸಹಕಾರಿಯಾಗಿದೆ.
ಸಾಂದರ‍್ಬಿಕ ಪದಗಳಲ್ಲದೇ ಅಂಟಿಕೆ-ಪಂಟಿಕೆ ಪದಗಳಲ್ಲಿ ಜಾತಿ ಬೆಡಗುಗಳು ಇವೆ. ಅಂದರೆ ಆಯಾ ಜಾತಿಯವರ ಮನೆಗೆ ಹೋದಾಗ ಅವರ ಮೇಲೆ ಹೊಗಳಿ ಹಾಡುವ ಪದಗಳು. ಉದಾಹರಣೆಗೆ ಶಿವಬಕ್ತರ ಮೇಲೆ ಪದ, ನಾಮದಾರಿ ಗೌಡರ ಮೇಲೆ ಪದ, ಸಾಹೇಬರ(ಮುಸ್ಲಿಮರು) ಮೇಲೆ ಪದ, ಅಕ್ಕಸಾಲೆಯರ ಮೇಲೆ ಪದ, ಬ್ರಾಹ್ಮಣರ ಮೇಲೆ ಪದ, ಆಚಾರ‍್ಯರ ಮೇಲೆ ಪದ, ಸೆಟ್ಟರ ಮೇಲೆ ಪದ, ಕ್ಶೌರಿಕರ ಮೇಲೆ ಪದ ಹೀಗೆ ಮುಂತಾದವುಗಳು. ಅಂಟಿಕೆ-ಪಂಟಿಕೆಗೆ ಜಾತಿಯ ಕರಿಚಾಯೆಯೂ ಇತ್ತು. ಮೇಲ್ಜಾತಿಯವರು ಕೆಳಜಾತಿಯವರ ಮನೆಗೆ ಜ್ಯೋತಿಯನ್ನು ತೆಗೆದುಕೊಂಡು ಹೋಗಬಾರದು ಎಂಬ ಮೌಡ್ಯದಿಂದ ಕೆಳಜಾತಿಯವರ ಮನೆಗೆ ಹಾಡುಗಾರರು ಹೋಗುತ್ತಿರಲಿಲ್ಲ. ಆದರೆ ಕೆಲ ದಶಕಗಳ ಹಿಂದೆ ಪ್ರಗತಿಪರ ಮಲೆನಾಡಿನ ಯುವಕರು ಇದನ್ನು ಮೀರಿ ಎಲ್ಲರ ಮನೆಗೂ ಜ್ಯೋತಿಯನ್ನು ತೆಗೆದುಕೊಂಡು ಹೋಗುವ ಮೂಲಕ ಅಂಟಿಕೆ-ಪಂಟಿಕೆ ಎಲ್ಲರಿಗೂ ಸಲ್ಲುವಂತದ್ದು ಎಂಬುದನ್ನು ಸಾರಿದ್ದಾರೆ.
ಹಿಂದೆ ಎಲ್ಲರೂ ಸೇರಿ ಅಂಟಿಕೆ-ಪಂಟಿಕೆಯಿಂದ ಸಂಗ್ರಹಿಸಿದ ದುಡ್ಡು ಮತ್ತು ದಾನ್ಯಗಳಿಂದ ಒಂದು ಔತಣಕೂಟ ಮಾಡುತ್ತಿದ್ದರು, ಇತ್ತೀಚೆಗೆ ಸಮಾಜಕ್ಕೆ ಒಳಿತಾಗುವ ಹಾಗೆ ಸರ‍್ಕಾರಿ ಶಾಲೆಗಳ ಅಬಿವ್ರುದ್ದಿ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ‍್ಮಾಣ, ಆಟದ ಬಯಲಿನ ನಿರ‍್ಮಾಣ, ಆಸ್ಪತ್ರೆಗೆ ವಿನಿಯೋಗ ಹೀಗೆ ಮುಂತಾದ ಸದುದ್ದೇಶಗಳನ್ನು ಇಟ್ಟುಕೊಂಡು ಅಂಟಿಕೆ-ಪಂಟಿಕೆ ಕಟ್ಟುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅಂಟಿಕೆ-ಪಂಟಿಕೆ ಕಟ್ಟುವವರು ಕಡಿಮೆಯಾಗುತ್ತಿದ್ದಾರೆ. ನಮ್ಮ ಸಂಸ್ಕ್ರುತಿಯ ಜೊತೆಗೆ ಹಿನ್ನಲೆಯ ಮೇಲೂ ಬೆಳಕು ಚೆಲ್ಲಿ ಅಂದಿನ ಕಾಲದ ಜನಜೀವನ ಹೇಗಿದ್ದಿರಬೇಕು ಎಂಬುದನ್ನು ಹಾಡುಗಳ ಮೂಲಕ ಸಾರುವ ಈ ಕಲೆಯು ಉಳಿಯಬೇಕು. ಮಲೆನಾಡಿನ ಯುವ ಮನಸ್ಸುಗಳು ಈ ಕಲೆಯ ಬಗ್ಗೆ ಹಿರಿಯರಿಂದ ತಿಳಿದುಕೊಂಡು ಹಾಡುಗಳನ್ನು ಕಲಿಯಬೇಕು. ಈ ಮೂಲಕ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು.
ಜ್ಯೋತಿ ಪದದ ತುಣುಕು
ಕತ್ತಲೆ ಸಮಯಕ್ಕೆ ಸತ್ತುಳ್ಳಾ ಜೋತಮ್ಮ
ಮತ್ತೇಳು ಲೋಕೇ ಬೆಳಕಾದೂ
ಮತ್ತೇಳು ಲೋಕೇ ಬೆಳಕಾದೂ ಮಾನವರಿಗೆ
ಅಡಿಗೆ ಊಟಗಳೇ ಹಸನಾದೂಅಡಿಗೆ ಊಟಗಳೇ ಹಸನಾದೂ ಜೋತಮ್ಮ
ಕೊಡುನುಡಿಯಾ ನಮಗೇ ಪದನಾವಾ
ಗುಡು ಗುಡು ಗುಟ್ಟಾವೂ ಸಿಡಿಲೇಳೂ ಹೊಡೆದಾವು
ಒಡನೇ ಕುಡಿಮಿಂಚೂ ಹೊಳೆದಾವೂಒಡನೇ ಕುಡಿಮಿಂಚೂ ಹೊಳೆದಾವೂ ಜೋತಮ್ಮ
ಮಿಂಚಿನಲಿ ಜೋತಮ್ಮ ಉದೆಯಾಗೀ
ಮಿಂಚಿನಲಿ ಜೋತಮ್ಮ ಉದೆಯಾಗೀ ಜೋತಮ್ಮ
ಕೊಡುನುಡಿಯಾ ನಮಗೆ ಜ್ನಾನಾವಾ||
( ಚಿತ್ರಸೆಲೆ: kanasu-kanasu.blogspot.in )
ಇತ್ತೀಚಿನ ಅನಿಸಿಕೆಗಳು