ಮೆಸಿಡೋನಿಯನ್ ಕೊಳ್ಳದ ಕಲ್ಲಿನ ಸ್ತಂಬಗೊಂಬೆಗಳು
– ಕೆ.ವಿ.ಶಶಿದರ.
ಮೆಸಿಡೋನಿಯನ್ ಕೊಳ್ಳದಲ್ಲಿನ ಗೊಂಬೆಗಳು ನೈಸರ‍್ಗಿಕವಾಗಿ ರೂಪುಗೊಂಡಿರುವ ಕಲ್ಲಿನ ಗೊಂಬೆಗಳು. ಇಲ್ಲಿ 120ಕ್ಕೂ ಹೆಚ್ಚು ಕಲ್ಲಿನ ಗೊಂಬೆಗಳಿವೆ. ಮೆಸಿಡೋನಿಯಾದ ಕ್ರಟೋವೋ ಬಳಿಯ ಕುಕ್ಲಿಕ ಹಳ್ಳಿಯಲ್ಲಿ ಇವುಗಳನ್ನು ಕಾಣಬಹುದು. ಕ್ರಟೋವೋದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 8 ಕಿಮಿ ದೂರ ಕ್ರಮಿಸಿದರೆ ಕುಕ್ಲಿಕಾ ತಲುಪಬಹುದು. ಕಲ್ಲುಗಳಿಂದ ರಚನೆಯಾದ ಈ ಗೊಂಬೆಗಳು ಕ್ರಿವಾ ನದಿಯ ಬಲದಂಡೆಯ ಮೇಲಿದೆ. 415ರಿಂದ 420 ಮೀಟರ್ ಎತ್ತರದಲ್ಲಿರುವ ಈ ಪ್ರದೇಶ 0.3 ಚದರಕಿಮಿ ವಿಸ್ತೀರ‍್ಣ ಹೊಂದಿದೆ.
ಈ ಕಲ್ಲಿನ ಸ್ತಂಬಗಳ ಬಗೆಗಿನ ದಂತಕತೆಗಳು
ಕುಕ್ಲಿಕಾದ ವಿಚಿತ್ರ ಕಲ್ಲಿನ ಸ್ತಂಬಗಳ ರಚನೆಯ ಸುತ್ತಾ ಎರಡು ಪ್ರಮುಕ ದಂತಕತೆಗಳಿವೆ. ಅತ್ಯಂತ ಪ್ರಸಿದ್ದ ದಂತ ಕತೆಯಂತೆ ಒಬ್ಬ ಗಾರೆ ಕೆಲಸದವನಿಗೆ ಇಬ್ಬರು ಪ್ರೇಯಸಿಯರಿದ್ದರಂತೆ. ಮೊದಲನೆಯ ಹುಡುಗಿ ಬಡತನದಲ್ಲಿದ್ದ ಸೌಂದರ‍್ಯವತಿ. ಈಕೆ ಗುಡ್ಡದ ಮೇಲೆ ವಾಸಿಸುತ್ತಿದ್ದಳು. ಎರಡನೆಯ ಹುಡುಗಿ ಐಶ್ವರ‍್ಯವಂತೆ ಆದರೆ ಮೊದಲನೆಯವಳಶ್ಟು ರೂಪವತಿಯಲ್ಲ. ಈಕೆಯ ವಾಸ ಗುಡ್ಡದ ಕೆಳಗೆ. ತನ್ನಿಬ್ಬರು ಪ್ರೇಯಸಿಯರಲ್ಲಿ ಯಾರನ್ನು ಮದುವೆಯಾಗಬೇಕು ಎಂಬ ಜಿಜ್ನಾಸೆಗೆ ಆತ ಸಿಲುಕಿದನಂತೆ. ಕೊನೆಗೆ ಒಂದು ತೀರ‍್ಮಾನಕ್ಕೆ ಬಂದು, ಆತ ಇಬ್ಬರು ಹುಡುಗಿಯರನ್ನೂ ಒಂದೇ ದಿನ ಬೇರೆ ಬೇರೆ ಮಹೂರ‍್ತದಲ್ಲಿ ಮದುವೆಯಾಗಲು ಯೋಜನೆ ಹಾಕಿದನಂತೆ. ಆತನ ಯೋಜನೆಯಂತೆ ಗುಡ್ಡದ ಕೆಳಗಿರುವ ಐಶ್ವರ‍್ಯವತಿಯನ್ನು ಮೊದಲ ಮಹೂರ‍್ತದಲ್ಲಿ ಮದುವೆಯಾಗಲು ಹವಣಿಸಿದ್ದ. ಅದರಂತೆ ವೈಬವದ ಮದುವೆ ಜೋರಾದ ವಾದ್ಯದೊಂದಿಗೆ ನಡೆಯುತ್ತಿದ್ದಾಗ, ತನ್ನವರಾಗಲಿ ಅತವಾ ಮದುವೆಯ ದಳ್ಳಾಳಿಯಾಗಲಿ, ಸುತ್ತ ಮುತ್ತ ಕಾಣದ ಕಾರಣ, ಯಾರ ಮದುವೆ ನಡೆಯುತ್ತಿದೆ ಎಂದು ನೋಡುವ ಕುತೂಹಲದಿಂದ ಸೌಂದರ‍್ಯವತಿಯಾದ ಇನ್ನೊಬ್ಬ ಪ್ರೇಯಸಿ ಮದುವೆಯನ್ನು ನೋಡಲು ಗುಡ್ಡದ ಕೆಳಗೆ ಇಳಿದು ಬರುತ್ತಾಳೆ. ಮದುವೆಯ ಮಂಟಪದಲ್ಲಿ ಕಾಲಿಟ್ಟಾಗ ತನ್ನ ಬಾವೀ ಪತಿ ಬೇರೊಬ್ಬ ಹೆಣ್ಣನ್ನು ವರಿಸುತ್ತಿರುವುದನ್ನು ನೋಡಿ ರೊಚ್ಚಿಗೆದ್ದ ಆಕೆ, ಮದುವೆಗೆ ಹಾಜರಿದ್ದ ಎಲ್ಲರ ಸಮ್ಮುಕದಲ್ಲೇ ಬಯಂಕರ ಶಾಪ ಕೊಡುತ್ತಾಳೆ. ವರ, ವದು, ದಳ್ಳಾಳಿ ಸಹಿತ ತಾನೂ ಶಾಪದಿಂದ ಶಿಲೆಯಾಗುತ್ತಾಳೆ. ಕೊಳ್ಳದಲ್ಲಿ ಕಂಡುಬರುವ ಕಲ್ಲಿನ ಗೊಂಬೆಗಳು ಇವೆ ಎನ್ನುತ್ತಾರೆ ಸ್ತಳೀಯರು.
ಮತ್ತೊಂದು ದಂತಕತೆ
ಮತ್ತೊಂದು ಜನಪ್ರಿಯ ದಂತಕತೆಯ ಪ್ರಕಾರ ಕುಕ್ಲಿಕಾ ಪ್ರದೇಶವು ಹಿಂದೊಮ್ಮೆ ಕಾಡಿನ ಪ್ರದೇಶವಾಗಿತ್ತು. ಯುದ್ದಗಳು ನಡೆದ ಕಾರಣ ಕಾಡೆಲ್ಲಾ ಹಾಳಾಗಿ ಮರಗಿಡಗಳೆಲ್ಲಾ ಸುಟ್ಟು ಬೂದಿಯಾದವು. ಹಾಗಾಗಿ ಕಾಡಿನ ಪ್ರದೇಶ ಬಂಜರು ಬೂಮಿಯಾಯಿತು. ಸೈನ್ಯವು ಈ ಪ್ರದೇಶದಲ್ಲಿ ಹಾದು ಹೋಗುವಾಗ ಅಲ್ಲಿನ ಅತಿ ಕಡಿಮೆ ಉಶ್ಣಾಂಶದಿಂದ ಸೈನಿಕರೆಲ್ಲಾ ಸಟೆದುಕೊಂಡು ಶಿಲೆಗಳಾದರು ಎನ್ನುತ್ತಾರೆ.
ಸ್ತಳೀಯ ಗ್ರಾಮಸ್ತರ ಪ್ರಕಾರ ಪ್ರತಿ ಐದಾರು ವರ‍್ಶಕ್ಕೆ ಒಂದು ಹೊಸ ಗೊಂಬೆ ಕಾಣುತ್ತದಂತೆ. ಇದು ಎಶ್ಟು ನಿಜವೋ ಎಶ್ಟು ಸುಳ್ಳೋ ದೇವರೇ ಬಲ್ಲ.
ಏನಿದು ಮೆರ‍್ರಿ ವೆಡ್ಡಿಂಗ್?
ಈ ಪ್ರದೇಶವನ್ನು ಸ್ತಳೀಯರು “ದ ಮೆರ‍್ರಿ ವೆಡ್ಡಿಂಗ್” ಎನ್ನುತ್ತಾರೆ. ಇದಕ್ಕೆ ಕಾರಣ ಕಲ್ಲಾಗಿರುವ ಮದುವೆಯ ದಳ್ಳಾಳಿ ನಗುಮುಕದಿಂದಿದ್ದು, ವದು ವರರೂ ಸಹ ಒಬ್ಬರನ್ನೊಬ್ಬರು ತಬ್ಬಿರುವುದು. ಸ್ತಳೀಯರು ಒಂದೊಂದು ಕಲ್ಲಿನ ಗೊಂಬೆಗೂ ಒಂದೊಂದು ಪಾತ್ರವನ್ನು ನೀಡಿದ್ದಾರೆ. ಮದುವೆಯಾಗುವ ವದು, ವರ, ಪಾದ್ರಿ ಹಾಗೂ ಸುತ್ತುವರೆದ ಅತಿತಿಗಳು ಇಲ್ಲಿದ್ದಾರೆ.
ಎಲ್ಲಾ ದಂತಕತೆಗಳನ್ನು ಬದಿಗಿರಿಸಿ ವಾಸ್ತವದತ್ತ ಗಮನ ಹರಿಸಿ ನೋಡಿದಲ್ಲಿ, ಈ ಕಲ್ಲಿನ ಸ್ತಂಬ ಗೊಂಬೆಗಳು ನೈಸರ‍್ಗಿಕ ಸವೆತದ ಪ್ರಕ್ರಿಯೆಗಳಿಂದ ರೂಪುಗೊಂಡಿವೆ. ಸಾವಿರ ವರ‍್ಶಗಳಿಂದ ಜ್ವಾಲಾಮುಕಿ, ಬಂಡೆಗಳ ಸವೆತ ಹಾಗೂ ಸವೆತದಲ್ಲಿನ ವ್ಯತ್ಯಾಸದಿಂದ ಈ ಕಲ್ಲಿನ ಸ್ತಂಬಗಳ ರಚನೆಯಾಗಿದೆ ಎನ್ನುತ್ತದೆ ವಿಜ್ನಾನ.
(ಮಾಹಿತಿ ಮತ್ತು ಚಿತ್ರಸೆಲೆ: exploringmacedonia.com, skyscrapercity.com, wikipedia.org, thevintagenews.com, wikimedia.org )
ಇತ್ತೀಚಿನ ಅನಿಸಿಕೆಗಳು