ನಾವೇಕೆ ಬಯ್ಯುತ್ತೇವೆ? – 10ನೆಯ ಕಂತು

– ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

ಕನ್ನಡ ನುಡಿ ಸಮುದಾಯಕ್ಕೆ ಸೇರಿದ ಕುಟುಂಬದ ನೆಲೆ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಯಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಬಳಕೆಯಾಗುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳು ರೂಪುಗೊಳ್ಳುವುದಕ್ಕೆ ಕಾರಣವಾಗುವ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸಂಗತಿಗಳನ್ನು ಮೊದಲು ಮನದಟ್ಟು ಮಾಡಿಕೊಂಡರೆ, ಅನಂತರ ಬಯ್ಗುಳಗಳಲ್ಲಿ ಯಾವ ಯಾವ ಬಗೆಗಳಿವೆ ಎಂಬುದನ್ನು ವಿವರಿಸಿಕೊಳ್ಳಬಹುದು.

ಕನ್ನಡ ನುಡಿ ಸಮುದಾಯದಲ್ಲಿ ಜಾತಿ, ಮತ, ಲಿಂಗ ಮತ್ತು ವರ‍್ಗ ತಾರತಮ್ಯ ಇರುವುದರಿಂದ ಪ್ರತಿಯೊಂದು ಜಾತಿ, ಮತ, ಲಿಂಗ, ವರ‍್ಗಕ್ಕೆ ಸೇರಿದ ಗುಂಪಿನ ಜನರು ಮತ್ತೊಂದು ಗುಂಪಿನ ಜನರೊಡನೆ ಒಂದಲ್ಲ ಒಂದು ಬಗೆಯ ಅಸಹನೆ, ಆಕ್ರೋಶ, ತಿರಸ್ಕಾರ ಮತ್ತು ಹಗೆತನದ ಒಳಮಿಡಿತಗಳನ್ನು ಹೊಂದಿರುತ್ತಾರೆ. ಆದ್ದರಿಂದ ಜನರ ಮಾತುಕತೆಯಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಬಯ್ಗುಳಗಳು ಬಳಕೆಯಾಗುತ್ತಿವೆ. ಇದರ ಜತೆಜತೆಗೆ ಜಾತಿ, ಮತ ಮತ್ತು ಹೆಣ್ಣು ಗಂಡಿನ ಕಾಮದ ನಂಟಿನ ಬಗ್ಗೆ ಪ್ರತಿಯೊಂದು ಗುಂಪಿನ ನಡೆನುಡಿಗಳು ತಮ್ಮದೇ ಆದ ಸಂಪ್ರದಾಯ, ನಂಬಿಕೆ ಮತ್ತು ಕಟ್ಟುಪಾಡುಗಳನ್ನು ಹೊಂದಿರುತ್ತವೆ. ಇದರಿಂದಾಗಿ ಇತರರ ನಡೆನುಡಿಗಳನ್ನು ಅಣಕಿಸುವ, ತೆಗಳುವ, ಕಡೆಗಣಿಸುವ ನುಡಿಗಟ್ಟುಗಳು ರೂಪುಗೊಂಡಿವೆ. ಕೆಲವು ಬಗೆಯ ವಸ್ತುಗಳನ್ನು, ಪ್ರಾಣಿಗಳನ್ನು ಮತ್ತು ವ್ಯಕ್ತಿಗಳ ಸಮಾಜ ಒಪ್ಪಿತವಲ್ಲದ ನಡೆನುಡಿಗಳನ್ನು ಕುರಿತು ಜನಸಮುದಾಯಗಳಲ್ಲಿ ಹಲವು ಬಗೆಯ ನಿಲುವುಗಳಿರುತ್ತವೆ. ನುಡಿ ಸಮುದಾಯವು ಸಾಂಸ್ಕ್ರುತಿಕವಾಗಿ ಹಾಗೂ ಸಾಮಾಜಿಕವಾಗಿ ಕಳಂಕವೆಂದು ಪರಿಗಣಿಸಿರುವ ವಸ್ತುಗಳು, ಜೀವಿಗಳು, ವ್ಯಕ್ತಿಗಳು ಮತ್ತು ವ್ಯಕ್ತಿಗಳ ಕೆಟ್ಟ ನಡೆನುಡಿಗಳೆಲ್ಲವೂ ಬಯ್ಗುಳದ ನುಡಿ ಸಾಮಗ್ರಿಗಳಾಗಿ ರೂಪುಗೊಂಡಿರುತ್ತವೆ.

ಕನ್ನಡ ನುಡಿ ಸಮುದಾಯದಲ್ಲಿ ಬಳಕೆಯಾಗುತ್ತಿರುವ ಬಯ್ಗುಳಗಳಲ್ಲಿ ಈ ಕೆಳಕಂಡ ಮೂರು ಬಗೆಗಳನ್ನು ನಾವು ಗುರುತಿಸಬಹುದು.

1. ಆರೋಪದ ಬಯ್ಗುಳ
2. ಶಾಪ ರೂಪದ ಬಯ್ಗುಳ
3. ಕಾಮದ ನಂಟಿನ ಬಯ್ಗುಳ

ಇನ್ನು ಮುಂದೆ ಬಯ್ಗುಳಗಳ ಬಗೆಗಳನ್ನು ನಾನು ವಿವರಿಸುವಾಗ ಉದಾಹರಣೆಯಾಗಿ ನೀಡುತ್ತಿರುವ ಬಯ್ಗುಳಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು, ಮಳವಳ್ಳಿ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನೂರಾರು ಹಳ್ಳಿಗಳ ಪರಿಸರದಲ್ಲಿ ಇಂದಿಗೆ ಮೂವತ್ತು ವರುಶಗಳ ಹಿಂದೆ ಸಂಗ್ರಹಿಸಿದ್ದೇನೆ. ಕರ‍್ನಾಟಕದ ಉದ್ದಗಲದಲ್ಲಿ ಬಳಕೆಯಾಗುತ್ತಿರುವ ಕನ್ನಡ ನುಡಿಯಲ್ಲಿ ಹತ್ತಾರು ಬಗೆಯ ಪ್ರಾದೇಶಿಕ ಒಳನುಡಿಗಳು ಮತ್ತು ನೂರಾರು ಬಗೆಯ ಸಾಮಾಜಿಕ ಒಳನುಡಿಗಳಿವೆ. ಈ ಒಳನುಡಿಗಳಲ್ಲಿ ಬಳಕೆಯಾಗುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳು ಅಂದರೆ ಬಳಸುತ್ತಿರುವ ಪದಗಳು, ನುಡಿಗಟ್ಟುಗಳು ಮತ್ತು ವಾಕ್ಯಗಳು ಬೇರೆ ಬೇರೆ ರೀತಿಯಲ್ಲಿವೆ. ಸಾಮಾಜಿಕ ನುಡಿ ವಿಜ್ನಾನಿಗಳು ಕರ‍್ನಾಟಕ ರಾಜ್ಯದಲ್ಲಿ ಪ್ರತಿ ಹತ್ತು ಇಲ್ಲವೇ ಹದಿನಯ್ದು ಕಿಲೊ ಮೀಟರ್ ಗಳ ಅಂತರದ ಬಳಕೆಯ ಕನ್ನಡ ನುಡಿಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಆದ್ದರಿಂದ ಬಯ್ಗುಳದ ಬಗೆಗಳನ್ನು ನಾನು ವಿವರಿಸುವಾಗ, ಓದುಗರು ತಾವು ಹುಟ್ಟಿ ಬೆಳೆದು ಬಾಳುತ್ತಿರುವ ಪರಿಸರದಲ್ಲಿ ಕೇಳಿ ತಿಳಿದಿರುವ ಕನ್ನಡದ ಬಯ್ಗುಳಗಳನ್ನು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ.

1. ಆರೋಪದ ಬಯ್ಗುಳ

ಯಾವುದೇ ಒಬ್ಬ ವ್ಯಕ್ತಿಯನ್ನು ಒಂದು ವಸ್ತು, ಪ್ರಾಣಿ ಇಲ್ಲವೇ ವ್ಯಕ್ತಿಯ ಹೆಸರಿನೊಡನೆ ತಗುಳ್ಚಿ ಅಂದರೆ ಸೇರಿಸಿ “ನೀನು ಇಂತಹವನು/ನೀನು ಇಂತಹವಳು” ಎಂದು ನಿಂದಿಸುವ ಬಯ್ಗುಳ ನುಡಿಯನ್ನು ಆರೋಪದ ಬಯ್ಗುಳವೆಂದು ಕರೆಯುತ್ತಾರೆ. ‘ಆರೋಪ’ ಎಂದರೆ ಸಾಮಾಜಿಕ ಕಳಂಕವನ್ನು ಹೊತ್ತಿರುವ ಗುಣವನ್ನು ಸೂಚಿಸುವುದು ಇಲ್ಲವೇ ಹೊರಿಸುವುದು.

ಉದಾಹರಣೆ:

1. ನೀನೊಬ್ಬ ಕಳ್ಳ
2. ನೀನೊಬ್ಬಳು ಸೂಳೆ
3. ತೂ… ನಾಯಿ ನನ್ಮಗ್ನೆ
4. ಮುಳ್ಗಳ್ಳಿ ನನ್ ಸವ್ತಿ

1. ಕಳ್ಳ=ಇತರರ ಒಡವೆ ವಸ್ತುಗಳನ್ನು ಕದ್ದು ಜೀವನವನ್ನು ನಡೆಸುವ ವ್ಯಕ್ತಿಯನ್ನು ಕಳ್ಳನೆಂದು ಕರೆಯುತ್ತಾರೆ. ಇಂತಹ ವ್ಯಕ್ತಿಗೆ ಸಮಾಜದಲ್ಲಿ ಯಾವುದೇ ಬೆಲೆಯಿಲ್ಲ. ಜನರ ಕಣ್ಣಿನಲ್ಲಿ ‘ಕಳ್ಳ’ ಒಬ್ಬ ಕಳಂಕಿತ ವ್ಯಕ್ತಿ. ಈ ರೀತಿ ಸಾಮಾಜಿಕ ಕಳಂಕವನ್ನು ಹೊತ್ತಿರುವ ‘ಕಳ್ಳ ’ಎಂಬ ಪದ ಬಯ್ಗುಳವಾಗಿ ಬಳಕೆಯಾಗಿದೆ.

“ನೀನೊಬ್ಬ ಕಳ್ಳ.” ಎಂಬ ಮಾತು ಬಳಕೆಯಾದ ಸನ್ನಿವೇಶದಲ್ಲಿ ಬಯ್ಯಿಸಿಕೊಂಡ ವ್ಯಕ್ತಿಯು ಕಳ್ಳನೇ ಆಗಿರಬೇಕಿಲ್ಲ. ತನ್ನ ಪಾಲಿಗೆ ಬಂದ ಕೆಲಸವನ್ನು ಸರಿಯಾಗಿ ಮಾಡದವನು ಇಲ್ಲವೇ ನಂಬಿಕೆಗೆ ಯೋಗ್ಯನಲ್ಲದವನು ಎಂಬ ರೂಪಕದ ತಿರುಳಿನಲ್ಲಿಯೂ ಬಳಕೆಯಾಗುತ್ತದೆ.

2. ಸೂಳೆ=ಜೀವನವನ್ನು ನಡೆಸುವುದಕ್ಕಾಗಿ ಹಣವನ್ನು ಸಂಪಾದಿಸಲು ಗಂಡಸರೊಡನೆ ಕಾಮದ ನಂಟನ್ನು ಪಡೆಯುವುದನ್ನು ಕಸುಬನ್ನಾಗಿ ಮಾಡಿಕೊಂಡಿರುವವಳು. ಸೂಳೆಯಾದ ಹೆಣ್ಣಿಗೆ ಸಮಾಜದಲ್ಲಿ ಯಾವುದೇ ಬೆಲೆಯಿಲ್ಲ. ಆಕೆಯು ಜನರ ಕಣ್ಣಿನಲ್ಲಿ ಅತ್ಯಂತ ಕೆಳಮಟ್ಟದ ವ್ಯಕ್ತಿಯಾಗಿರುತ್ತಾಳೆ. ಸಮಾಜವು ಸೂಳೆತನದ ಕಸುಬನ್ನು ಕಳಂಕಿತವೆಂದು ಪರಿಗಣಿಸಿದೆ. ಈ ರೀತಿ ಸಾಮಾಜಿಕ ಕಳಂಕವನ್ನು ಹೊತ್ತಿರುವ ‘ಸೂಳೆ’ ಎಂಬ ಪದ ಬಯ್ಗುಳವಾಗಿ ಬಳಕೆಯಾಗುತ್ತದೆ.

‘ಸೂಳೆ’ ಎಂದು ಬಯ್ಯಸಿಕೊಂಡ ವ್ಯಕ್ತಿಯು ಸೂಳೆಯೇ ಆಗಿರುತ್ತಾಳೆ ಎಂದೇನಿಲ್ಲ. ಬಯ್ಯುವವರ ಉದ್ದೇಶ ಮತ್ತು ಬಳಕೆಗೊಂಡ ಮಾತಿನ ಸನ್ನಿವೇಶಕ್ಕೆ ತಕ್ಕಂತೆ “ಕೆಟ್ಟ ನಡೆನುಡಿಯುಳ್ಳ ಹೆಂಗಸು” ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗುತ್ತದೆ.

3. ನಾಯಿ=ಇದೊಂದು ಸಾಕು ಪ್ರಾಣಿ ಮತ್ತು ಮಾನವ ಸಮುದಾಯವಿರುವ ಕಡೆಗಳಲ್ಲಿ ಬೀದಿಯಲ್ಲಿಯೂ ಬಾಳುವ ಜೀವಿ. ತನ್ನನ್ನು ಸಾಕಿದ ಒಡೆಯನಿಗೆ ಅಪಾರವಾದ ಪ್ರೀತಿಯನ್ನು ತೋರಿಸುವ ಈ ಪ್ರಾಣಿಯ ಒಳಿತಿನ ಗುಣಕ್ಕಿಂತಲೂ, ಬೀದಿ ನಾಯಿಯು ಹೇಲು ಕಂಡ ಕಡೆಗೆ ನೆಗೆದು ಹೊಲಸನ್ನು ತಿನ್ನುವ ಬಗೆಯನ್ನು ಗಮನದಲ್ಲಿಟ್ಟುಕೊಂಡು ನಾಯಿಯ ಬಗ್ಗೆ ಕೀಳಾದ ಒಂದು ನಿಲುವು ಜನಮನದಲ್ಲಿದೆ. ಈ ನಿಟ್ಟಿನಲ್ಲಿ ‘ನಾಯಿ’ ಎಂಬ ಪದ ಒಂದು ಬಯ್ಗುಳವಾಗಿ ಬಳಕೆಯಾಗುತ್ತಿದೆ.

ವ್ಯಕ್ತಿಯನ್ನು ‘ನಾಯಿ’ ಎಂದು ಕರೆದಾಗ, ಅವನ ಇಲ್ಲವೇ ಅವಳ ವ್ಯಕ್ತಿತ್ವವನ್ನೇ ಅಲ್ಲಗಳೆದು, ಮಾನವ ಜೀವಿಯಾದ ವ್ಯಕ್ತಿಯನ್ನು ಪ್ರಾಣಿಯ ಹಂತಕ್ಕೆ ಇಳಿಸುವ ತಿರಸ್ಕಾರದ ಬಾವನೆಯಿದೆ. ಬಳಕೆಗೊಂಡ ಸನ್ನಿವೇಶಕ್ಕೆ ತಕ್ಕಂತೆ ‘ನಾಯಿ’ ಎಂಬ ಬಯ್ಗುಳ ಪದವು “ಯಾವ ಕಡೆಯಲ್ಲಿ ತನಗೆ ಅನುಕೂಲ ದೊರಕುವುದೋ ಅತ್ತ ಹೋಗುವ ಕೀಳು ವ್ಯಕ್ತಿ” ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗುತ್ತದೆ.

4. ಮುಳ್ಗಳ್ಳಿ=ಇದೊಂದು ಬಗೆಯ ಗಿಡ. ಕಾಂಡದ ಉದ್ದಕ್ಕೂ ಹರಿತವಾದ ಮೊನೆಯುಳ್ಳ ಮುಳ್ಳುಗಳಿಂದ ಕೂಡಿರುವ ಈ ಗಿಡವನ್ನು ‘ಮುಳ್ಗಳ್ಳಿ’ ಎಂದು ಕರೆಯುತ್ತಾರೆ. ಹಳ್ಳಿಗಾಡಿನ ಹೊಲ-ಗದ್ದೆ ತೋಟಗಳ ಬೇಲಿಯಲ್ಲಿ ಈ ಬಗೆಯ ಕಳ್ಳಿಗಿಡಗಳು ಇರುತ್ತವೆ. ಈ ಗಿಡದ ಆಕಾರ ಹಾಗೂ ಅದರ ಬಳಿ ಬಂದವರು ಮುಳ್ಳಿನಿಂದ ಚುಚ್ಚಿಸಿಕೊಂಡಾಗ ಹೊಂದುವ ನೋವನ್ನು ಒಂದು ರೂಪಕವನ್ನಾಗಿ ಮಾಡಿಕೊಂಡು ‘ಮುಳ್ಗಳ್ಳಿ’ ಎಂಬ ಪದವನ್ನು ಒಂದು ಬಯ್ಗುಳವನ್ನಾಗಿ ಬಳಸಲಾಗುತ್ತಿದೆ.

‘ಮುಳ್ಗಳ್ಳಿ ನನ್ ಸವ್ತಿ’ ಎಂಬ ಬಯ್ಗುಳವು “ಇತರರಿಗೆ ತೊಂದರೆಯನ್ನು ಮಾಡುವ, ಕಿರುಕುಳವನ್ನು ನೀಡುವ ಮತ್ತು ಚುಚ್ಚು ಮಾತಿನ ಮೂಲಕ ಇತರರ ಮನಸ್ಸನ್ನು ಗಾಸಿಗೊಳಿಸುವ ಹೆಂಗಸು.” ಎಂಬ ತಿರುಳಿನಲ್ಲಿ ಬಳಕೆಯಾಗುತ್ತಿದೆ.

ಬಯ್ಯುವಿಕೆಯನ್ನು ಮೊನಚನ್ನು ಹೆಚ್ಚಿಸಲೆಂದು “ನನ್ ಸವ್ತಿ” ಇಲ್ಲವೇ “ನನ್ ಮಗ” ಎಂಬ ಬಯ್ಗುಳದ ಪದಗಳನ್ನು ಜತೆಯಾಗಿ ಉಚ್ಚರಿಸುತ್ತಾರೆ. ಒಬ್ಬ ಗಂಡಸಿಗೆ ಇಬ್ಬರು ಹೆಂಡತಿಯರಿದ್ದರೆ, ಅವರಿಬ್ಬರು ಪರಸ್ಪರ ಸವತಿಯರು ಎನಿಸಿಕೊಳ್ಳುತ್ತಾರೆ. ‘ನನ್ಮಗ್ನೆ’ ಎಂಬುದು ಒಂದು ಬಯ್ಗುಳದ ಪದವಾಗಿ ಬಳಕೆಯಲ್ಲಿದೆ. “ನೀನು ನನಗೆ ಹುಟ್ಟಿದವನು” ಎಂಬ ತಿರುಳನ್ನು ಹೊಂದಿರುವ ಈ ಪದ ಬಯ್ಯಿಸಿಕೊಂಡ ವ್ಯಕ್ತಿಯ ಹುಟ್ಟಿನ ಮೂಲವನ್ನೇ ಕೆಣಕುವಂತಿರುತ್ತದೆ.

ವ್ಯಕ್ತಿಯ ಮಯ್ ಬಣ್ಣದಿಂದ ಹಿಡಿದು, ವ್ಯಕ್ತಿಯ ದೇಹದ ಆಕಾರ, ವ್ಯಕ್ತಿಯ ಜಾತಿ ಮತ, ವ್ಯಕ್ತಿಯ ನಡೆನುಡಿಯಲ್ಲಿ ಕಂಡು ಬರುವ ತಪ್ಪುಗಳು , ವ್ಯಕ್ತಿಯು ಸಾಮಾಜಿಕವಾಗಿ ಮತ್ತು ಒಡವೆ ವಸ್ತು ಸಂಪತ್ತಿನಲ್ಲಿ ಹೊಂದಿರುವ ಅಂತಸ್ತು ಮತ್ತು ಅಕ್ರಮ ಕಾಮದ ನಂಟನ್ನು ಕುರಿತು ನಿಂದಿಸುವ ಬಗೆಯಲ್ಲಿ ಆರೋಪದ ಬಯ್ಗುಳಗಳು ರೂಪುಗೊಂಡಿರುತ್ತವೆ.

ಉದಾಹರಣೆ:

1. ಮಯ್ಯ ಅರೆಕೊರೆಗಳನ್ನು ಕುರಿತ ಬಯ್ಗುಳ:

ಆ) ಮಯ್ ಬಣ್ಣ: ಕರಿಯ, ಕೆಂಚ, ಕರಿಮುಂಡೆ

ಅ) ಅಂಗಹೀನತೆ: ಕುಂಟ, ಕುರುಡ, ಎಡಚ, ಮೆಡ್ಡಗಣ್ಣ, ಹಲ್ಲುಬ್ಬ, ಹೆಳವ

ಇ) ಸಂತಾನೋತ್ಪತ್ತಿಯಲ್ಲಿನ ಕೊರತೆ: ಗಂಡಸಿಗೆ: ಕ್ವಾಜ, ಕೂಮ, ಶಂಡ.

ಮಕ್ಕಳನ್ನು ಪಡೆಯಲಾಗದ ಗಂಡಸಿನ ದೇಹದ ಕೊರತೆಯನ್ನು ಹೇಳುವುದರ ಜತೆಗೆ ಗಂಡಸಿನ ಹೇಡಿತನದ ಇಲ್ಲವೇ ಹಿಂಜರಿಕೆಯ ನಡೆನುಡಿಗಳನ್ನು ಈ ಬಗೆಯ ಬಯ್ಗುಳಗಳು ಸೂಚಿಸುತ್ತವೆ.

ಹೆಂಗಸಿಗೆ: ಬಂಜೆ, ಗೊಡ್ ನನ್ಸವ್ತಿ, ಸುಳಿಯಿಲ್ಲದ ಮುಂಡೆ.

ಸಮಾಜದಲ್ಲಿ ಮಕ್ಕಳನ್ನು ಪಡೆಯಲಾಗದ ಹೆಂಗಸನ್ನು ಅತ್ಯಂತ ಹೀನವಾಗಿ ಕಾಣುತ್ತಾರೆ.

2. ಜಾತಿ ನಿಂದನೆಯ ಬಯ್ಗುಳ:

ಕಮ್ಜಾತಿಗೆ ಹುಟ್ದೋನು: ಕೀಳು ಜಾತಿಗೆ ಹುಟ್ಟಿದವನು.

‘ಕಮ್ಜಾತಿ’ ಎಂಬ ಜೋಡುಪದದಲ್ಲಿ ‘ಕಡಿಮೆಯ ಜಾತಿ’ ಎಂಬ ಎರಡು ಪದಗಳಿವೆ. ಕನ್ನಡ ನುಡಿ ಸಮುದಾಯದಲ್ಲಿ ಹತ್ತಾರು ಬಗೆಯ ಜಾತಿಗಳು ಮತ್ತು ನೂರೆಂಟು ಬಗೆಯ ಉಪಜಾತಿಗಳು ಮೇಲು-ಕೀಳಿನ ಮೆಟ್ಟಿಲುಗಳಿಂದ ಕೂಡಿವೆ. ಜಾತಿ ಮೆಟ್ಟಲಿನ ತುತ್ತ ತುದಿಯಲ್ಲಿರುವ ಜನರ ಮನದಲ್ಲಿ “ತಮ್ಮದೇ ಉತ್ತಮ ಜಾತಿ” ಎಂಬ ಮೇಲರಿಮೆಯಿದ್ದರೆ, ಕೆಳಗಿನ ತುದಿಯಲ್ಲಿರುವ ಜನರ ಮನದಲ್ಲಿ “ತಮ್ಮದೇ ಕಟ್ಟಕಡೆಯದು” ಎಂಬ ಕೀಳರಿಮೆಯಿದೆ. ನಡುವಣ ಜಾತಿಗಳಿಗೆ ಸೇರಿದ ಜನಮನದಲ್ಲಿ ಮೇಲರಿಮೆ ಮತ್ತು ಕೀಳರಿಮೆಗಳೆರಡೂ ನೆಲೆಗೊಂಡಿವೆ. ಒಬ್ಬ ವ್ಯಕ್ತಿಯು ತನಗಿಂತ ಕೆಳಜಾತಿಯವರೊಡನೆ ವ್ಯವಹರಿಸುವಾಗ ಮೇಲರಿಮೆಯ ಅಹಂಕಾರದಿಂದ ಕೂಡಿದ್ದರೆ, ತನಗಿಂತ ಮೇಲು ಜಾತಿಯವರೊಡನೆ ವ್ಯವಹರಿಸುವಾಗ ಕೀಳರಿಮೆಯಿಂದ ಕುಗ್ಗಿರುತ್ತಾನೆ. ಸಮಾಜದಲ್ಲಿ ಬೇರೆ ಬೇರೆ ಜಾತಿಗುಂಪುಗಳಾಗಿ ಒಡೆದು , ಮಾನಸಿಕವಾಗಿ ದೂರವಾಗಿದ್ದುಕೊಂಡು ಬಾಳುತ್ತಿರುವ ಜನರ ತಿಂಡಿತಿನಸುಗಳಲ್ಲಿ, ಹುಟ್ಟು,ಮದುವೆ,ಸಾವು ಮತ್ತು ಹಬ್ಬಗಳ ಆಚರಣೆಯ ಮಾತಿನ ಸನ್ನಿವೇಶಗಳಲ್ಲಿ ಜಾತಿಯ ಬಗೆಗಿನ ನಿಲುವುಗಳು ಎದ್ದು ಕಾಣುತ್ತಿರುತ್ತವೆ. ಇತರರನ್ನು ಕಡೆಗಣಿಸಿ ನುಡಿಯುವಾಗ “ವ್ಯಕ್ತಿಯ ಜಾತಿಯ ಹೆಸರನ್ನು” ಒಂದು ಬಯ್ಗುಳವನ್ನಾಗಿ ಬಳಸುತ್ತಾರೆ.

3. ಕೆಟ್ಟ ಚಟಗಳನ್ನು ಕುರಿತ ಬಯ್ಗುಳ:

ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹಾನಿಯನ್ನು ಉಂಟುಮಾಡುವ ಯಾವುದೇ ಬಗೆಯ ಕೆಟ್ಟಚಟವುಳ್ಳವರನ್ನು ತೀವ್ರವಾಗಿ ನಿಂದಿಸುವ ಬಯ್ಗುಳಗಳು.

ಗಂಡಸಿಗೆ: ಕುಡುಕ, ಕಚ್ಗಳ್ಳ, ಜೂಜುಕೋರ, ಲಂಚ್ಕೋರ

ಹೆಂಗಸಿಗೆ: ತೀಟೆ ಮುಂಡೆ. ಮಿಟುಕಲಾಡಿ

ಕಚ್ಗಳ್ಳ: ಅನೇಕ ಹೆಂಗಸರೊಡನೆ ಕಾಮದ ನಂಟನ್ನು ಹೊಂದಿರುವವನು ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಳ್ಳುತ್ತದೆ. ‘ಕಚ್ಚೆ’ ಮತ್ತು ‘ಕಳ್ಳ’ ಎಂಬ ಎರಡು ಪದಗಳು ಜತೆಗೂಡಿ ‘ಕಚ್ಗಳ್ಳ’ ಪದ ರೂಪುಗೊಂಡಿದೆ. ಪಂಚೆಯನ್ನು ತೊಡೆಯ ಎಡೆಯಿಂದ ಹಾಯಿಸಿ ನಡುವಿಗೆ ಕಟ್ಟಿಕೊಂಡಾಗ, ಅದು ಕಚ್ಚೆ ಎನಿಸಿಕೊಳ್ಳುತ್ತದೆ.

ತೀಟೆಮುಂಡೆ: ಕಂಡಕಂಡವರೊಡನೆ ಇಲ್ಲಸಲ್ಲದ ತಂಟೆತಕರಾರನ್ನು ತೆಗೆದು ಜಗಳವಾಡುವ ಚಟವುಳ್ಳ ಹೆಂಗಸು. ನವೆ/ಕಡಿತ/ತುರಿಕೆ ಎಂಬ ತಿರುಳಿನ ‘ತೀಟೆ’ ಎಂಬ ಪದವು ಕನ್ನಡಿಗರ ಮಾತುಕತೆಯ ಸನ್ನಿವೇಶದಲ್ಲಿ ‘ಜಗಳಿಗಂಟಿತನದ ನಡೆನುಡಿಗಳಿಗೆ’ ಒಂದು ರೂಪಕವಾಗಿ ಬಳಕೆಯಾಗುತ್ತದೆ. ಬಯ್ಯುವಿಕೆಯ ಮೊನಚನ್ನು ಹೆಚ್ಚಿಸಲೆಂದು ‘ಮುಂಡೆ’ ಎಂಬ ಮತ್ತೊಂದು ಬಯ್ಗುಳವನ್ನು ಜತೆಯಲ್ಲಿ ಸೇರಿಸಿ ಉಚ್ಚರಿಸುತ್ತಾರೆ.

ಮಿಟುಕಲಾಡಿ: ತಳುಕುಬಳುಕಿನ ಉಡುಗೆ ತೊಡುಗೆಗಳನ್ನು ತೊಟ್ಟು ಮತ್ತು ನಯಗಾರಿಕೆಯ ನಡೆನುಡಿಗಳಿಂದ ಎಲ್ಲರನ್ನೂ ತನ್ನತ್ತ ಸೆಳೆದು ಜನರನ್ನು ವಂಚಿಸುವ ಹೆಂಗಸು ಎಂಬ ತಿರುಳಿನಲ್ಲಿ ಈ ಬಯ್ಗುಳದ ಪದ ಬಳಕೆಯಲ್ಲಿದೆ.

4. ವಂಚಕತನವನ್ನು ಕುರಿತ ಬಯ್ಗುಳ:

ಅ) ಯಾವುದೇ ವ್ಯಕ್ತಿಯ ಕೆಟ್ಟ ಗುಣಗಳಲ್ಲಿ ಬಹಳ ಹಾನಿಕಾರಕವಾದುದು ಯಾವುದೆಂದರೆ ಅವನ ವಂಚಕತನದ ಇಲ್ಲವೇ ದ್ರೋಹದ ನಡೆನುಡಿ. ಅದರಲ್ಲಿಯೂ ಉಪಕಾರವನ್ನು ಪಡೆದ ಎಡೆಯಲ್ಲಿಯೇ ವಂಚಿಸುವುದನ್ನು ಈ ಕೆಳಕಂಡ ಬಯ್ಗುಳದ ನುಡಿ ಸಾಮಗ್ರಿಗಳು ಸೂಚಿಸುತ್ತವೆ.

ಉದಾಹರಣೆ: ಅನ್ನ ತಿಂದ್ ಮನೆ ಗಳ ಎಣ್ಸು ಸೂಳೆಮಕ್ಳು, ಅನ್ನ ಹಾಕ್ದೋಳ್ನೆ ಹೆಂಡ್ತಿ ಅಂತ ಹಿಡ್ಕೊಳೊ ಬಡ್ಡಿಹೈಕ್ಳು, ನಡು ನೀರಲ್ಲಿ ಬುಂಡೆ ಕುಯ್ಯೋ ನನ್ಮಕ್ಳು.

ಆ) ಸಿರಿವಂತಿಕೆ ಮತ್ತು ಆಡಳಿತದ ಗದ್ದುಗೆಯು ಇರುವ ಕಡೆಗಳಲ್ಲಿ ತಮ್ಮ ಇರುವಿಕೆಯನ್ನು ಕಂಡುಕೊಳ್ಳುತ್ತ, ಅಲ್ಲಿ ನಾನಾ ಬಗೆಯ ತಳುಕಿನ ಆಟಗಳನ್ನು ಆಡುತ್ತ, ತಾವು ಸಂಪತ್ತನ್ನು ಗಳಿಸುವುದಕ್ಕಾಗಿ ಅನ್ಯರನ್ನು ವಂಚಿಸುವ ವ್ಯಕ್ತಿಗಳನ್ನು ಕುರಿತ ಬಯ್ಗುಳಗಳು ಈ ರೀತಿಯಲ್ಲಿವೆ.

ತಳುಕುಗಾರ, ತಟವಟಗಾರ, ತಟವಟಗಾತಿ, ಚತ್ರಿ ಬಡ್ಡಿಮಗ, ಕುತಂತ್ರಿ, ಆಟಕೋಟೆ ನನ್ಮಕ್ಳು.

5. ದುರಹಂಕಾರದ ವರ‍್ತನೆಗಳನ್ನು ಕುರಿತ ಬಯ್ಗುಳ:

ಗುರುಹಿರಿಯರನ್ನು ಒಲವಿನಿಂದ ಕಾಣದೆ, ಅವರ ಸಂಗಡ ಬಹಳ ಒರಟುತನದಿಂದ ನಡೆದುಕೊಳ್ಳುವ ಅಹಂಕಾರದ ನಡೆನುಡಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸೂಚಿಸುವ ಬಯ್ಗುಳ.

ಅರ‍್ಮೆಡ್ಡೆ ಬಡ್ಡಿಹೈದ, ತಲ್ಸಿಡ್ಕ, ತಿರ‍್ಕೆ ಜಂಬದ ನನ್ಮಗ, ಉರ‍್ಸಿಂಗಿ, ತಲೇಲೆ ನಡೀತನೆ ಸೂಳೆಮಗ.

6. ದಾರಿದ್ರ್ಯವನ್ನು ಕುರಿತ ಬಯ್ಗುಳ:

ಬಡತನವೆಂಬುದು ಎಲ್ಲಾ ಕಾಲದಲ್ಲಿಯೂ ಸಮಾಜದ ನೋಟದಲ್ಲಿ ಕೀಳು ಎನಿಸಿಕೊಂಡಿದೆ. ಬಡತನದಲ್ಲಿ ಬೇಯುತ್ತಿರುವ ವ್ಯಕ್ತಿಗಳನ್ನು ಕುರಿತು ಬಹಳ ಹೀನವಾಗಿ ನಿಂದಿಸುವಂತಹ ಬಯ್ಗುಳಗಳು ಈ ಕೆಳಕಂಡಂತಿವೆ.

ದರಿದ್ರದ ನನ್ಮಗ, ದಿಕ್ಕೆಟ್ಟ ನನ್ಮಗ, ಪುಟಗೋಸಿ ನನ್ಮಗ, ಪರ‍್ದೇಸಿ ನನ್ಮಗ, ಪಾಪರ್ ನನ್ಮಗ, ಇಟ್ಟಾಡ್ಕೊಂಡು ಚೊಟ್ಟೆ ಎತ್ಕೊಂಡು ಬಿದ್ದಿರೋ ನನ್ಮಗ.

7. ಹೆಸರುಗಳನ್ನು ಸಂಕೇತವನ್ನಾಗಿ ಮಾಡಿಕೊಂಡು ನಿಂದಿಸುವ ಬಯ್ಗುಳ:

ಅ) ಪ್ರಾಣಿಗಳ ಹೆಸರನ್ನು ನೇರವಾಗಿ ಸಮೀಕರಿಸಿ ನಿಂದಿಸಿರುವ ಬಯ್ಗುಳ:

ಹಂದಿ ನನ್ಮಗ, ಹೆಣ್ ಹ್ಯಾಟೆ ನನ್ಮಗ, ರಣ್ಕಾಟಿ ನನ್ಸವ್ತಿ , ಕಪಿ ಬಡ್ಡತ್ತದ್ದು, ನರಿ ಬಡ್ಡಿಮಗ

ಆ) ಮುಳ್ಳುಗಳಿಂದ ಕೂಡಿ ವಿಕ್ರುತವಾಗಿರುವ ಕೆಲವು ಸಸ್ಯಗಳ ಹೆಸರಿನ ಬಯ್ಗುಳ:

ಮುಂಡ್ಗಳ್ಳಿ ನನ್ಸವ್ತಿ, ಪಾಪಾಸ್ ಕಳ್ಳಿ ನನ್ಸವ್ತಿ.

ಇ) ಪುರಾಣಗಳಲ್ಲಿ ಕೆಟ್ಟ ನಡೆನುಡಿಯುಳ್ಳವರೆಂದು ನಿರೂಪಣೆಗೊಂಡಿರುವ ವ್ಯಕ್ತಿಗಳ ಹೆಸರು:

ಕೀಚಕ, ಮಂತ್ರೆ, ಹಿಡಂಬಿ, ಶಕುನಿ, ಶಿಕಂಡಿ, ತಾಟ್ಗಿತ್ತಿ, ಪೂತನಿ

ಈ ಬಯ್ಗುಳ ಪದಗಳೆಲ್ಲವೂ ಮಾತಿನ ಸನ್ನಿವೇಶಕ್ಕೆ ಅನುಗುಣವಾಗಿ “ವ್ಯಕ್ತಿಯ ಕಾಮುಕತನ, ಕ್ರೂರತನ, ವಂಚಕತನ, ಹೇಡಿತನದ ಗುಣಗಳನ್ನು” ಸೂಚಿಸುವ ರೂಪಕಗಳಾಗಿ ಬಳಕೆಗೊಳ್ಳುತ್ತವೆ.

ಈ) ಐತಿಹಾಸಿಕ ವ್ಯಕ್ತಿಗಳಲ್ಲಿ ‘ಮೀರ್ ಸಾದಕ್’ ಎಂಬ ವ್ಯಕ್ತಿಯ ಹೆಸರು ನಂಬಕೆ ದ್ರೋಹಕ್ಕೆ ಒಂದು ಸಂಕೇತವಾಗಿದೆ.

ಉ) ಹಳ್ಳಿಗಾಡಿನ ಜನರು ತಾವು ಬಹಳ ಬಯಬಕ್ತಿಯಿಂದ ಪೂಜಿಸುವ ದೇವತೆಗಳ ಹೆಸರನ್ನೇ ಬಯ್ಗಳವಾಗಿ ಬಳಸುತ್ತಾರೆ.

ಉರ‍್ಮಾರಿ, ಮಾರ‍್ಮುಂಡೆ, ಶನಿ.

8. ಯಾವುದೇ ಕೆಲಸವನ್ನು ಮಾಡದೆ ಇಲ್ಲವೇ ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸದ ವ್ಯಕ್ತಿಗಳನ್ನು ಕುರಿತ ಬಯ್ಗುಳ:

ಏತ್ಲಾಂಡಿ, ಎಡವಟ್ ನನ್ಮಗ, ಅನ್ನಾಡಿ, ಅಡ್ಜಂಬ್ರದ ಬಡ್ಡತ್ತದ್ದೆ.

9. ವ್ಯಕ್ತಿಗಳಲ್ಲಿರುವ ಕೇಡಿಗತನ, ದಡ್ಡತನ, ಆಲಸ್ಯ ಮುಂತಾದ ವರ‍್ತನೆಗಳನ್ನು ಕಟುವಾಗಿ ಟೀಕಿಸುವಂತಹ ಬಯ್ಗುಳ:

ಕೇಡ್ಗ, ಅನ್ನೇಕಾರ, ಅನ್ನೇಕಾತಿ, ಗಾಂಪ, ಹೆಡ್ಡ, ಮೈಗಳ್ಳ, ಸೋಂಬೇರಿ.

10. ವ್ಯಕ್ತಿಗಳ ಹುಟ್ಟಿನ ಹಿನ್ನೆಲೆಯಲ್ಲಿ ಕಂಡುಬರುವ ಲೋಪಗಳನ್ನು ಮತ್ತು ಅಕ್ರಮ ಕಾಮದ ನಂಟನ್ನು ಕುರಿತು ನಿಂದಿಸುವ ಬಯ್ಗುಳ:

ಅಡ್ನಾಡಿಗೆ ಹುಟ್ದೋನು, ಅಪ್ಪಿಲ್ದೆ ಹುಟ್ದೋನು, ಮಿಂಡರ‍್ಗೆ ಹುಟ್ದೋನು, ಹಲವು ಬೆರ‍್ಕೆಗೆ ಹುಟ್ದೋನು, ಹಾದರಕ್ಕೆ ಹುಟ್ದೋನು, ಇಪ್ಪತ್ತೆಂಟ್ ಜನಕ್ಕೆ ಹುಟ್ದೋನು.

ಈ ರೀತಿಯಲ್ಲಿ ಸಾಮಾಜಿಕ ಕಳಂಕ , ಅಸಹ್ಯ ಮತ್ತು ತಿರಸ್ಕಾರಕ್ಕೆ ಗುರಿಯಾಗಿರುವ ವಸ್ತುಗಳು, ಜೀವಿಗಳು ಮತ್ತು ವ್ಯಕ್ತಿಗಳ ಕೆಟ್ಟ ನಡೆನುಡಿಗಳು ಆರೋಪದ ಬಯ್ಗುಳಗಳಾಗಿ ರೂಪುಗೊಂಡು ಜನಸಮುದಾಯದ ಮಾತುಕತೆಗಳಲ್ಲಿ ಬಳಕೆಗೊಳ್ಳಲು ಕಾರಣವಾಗಿವೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: