ಮಾವಿನ ಕಾಯಿಯ ಕಾರದ ಗುಳಂಬ

– ವಿಜಯಮಹಾಂತೇಶ ಮುಜಗೊಂಡ.

ಈ ಹಿಂದೆ ಮಾವಿನ ಕಾಯಿಯ ಗುಳಂಬ ಸಿಹಿ ಮಾಡೋದು ಹೇಗೆ ಎಂದು ತಿಳಿಸಲಾಗಿತ್ತು. ಇದೀಗ ಕಾರದ ಗುಳಂಬ ಮಾಡುವುದು ಹೇಗೆ ಎಂಬ ಮಾಹಿತಿ ಈ ಬರಹದಲ್ಲಿ…

ಬೇಕಾಗುವ ಸಾಮಾನುಗಳು

  • ಮಾವಿನ ಕಾಯಿ – 2
  • ಬೆಲ್ಲ/ಸಕ್ಕರೆ – 2 ಚಮಚ
  • ಅರಿಶಿಣ – 1 ಚಿಟಿಕೆ
  • ಕಾರದ ಪುಡಿ – 2 ಚಮಚ
  • ಸಾಸಿವೆ – 1 ಚಮಚ
  • ಜೀರಿಗೆ – 1 ಚಮಚ
  • ಬೆಳ್ಳುಳ್ಳಿ – 4-5 ಎಸಳು
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಇಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿಕೊಳ್ಳಿ. ಬೆಲ್ಲ ಬಳಸುವುದಾದರೆ ಮೊದಲೇ ಪುಡಿ ಮಾಡಿಟ್ಟುಕೊಳ್ಳಿ.

ಕಡಿಮೆ ಉರಿಯಲ್ಲಿ ಬಾಣಲೆ ಬಿಸಿ ಮಾಡಿ 1/2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಚಿಟಿಕೆ ಅರಿಶಿಣ, ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಒಗ್ಗರಣೆ ಗಮ ಬಂದ ಮೇಲೆ ಜಜ್ಜಿದ ಬೆಳ್ಳುಳ್ಳಿ ಹಾಕಿ ತಿರುವಿ. ಒಂದೆರಡು ನಿಮಿಶದ ಬಳಿಕ ತುರಿದ ಮಾವಿನ ಕಾಯಿ, ಸಕ್ಕರೆ/ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ 2-3 ನಿಮಿಶ ಸಣ್ಣ ಉರಿಯಲ್ಲಿ ಬೇಯಿಸಿ. ಕೊಂಚ ಹೊತ್ತಿನ ಬಳಿಕ ಮಾವಿನ ತುರಿ ನೀರು ಬಿಡಲು ಶುರು ಮಾಡುತ್ತದೆ. ಇನ್ನಶ್ಟು ಹೊತ್ತು ಬೇಯಿಸಿದ ಬಳಿಕ ನೀರು ಆರಿ ಅಂಟು ಅಂಟಾಗಿ ಬರುತ್ತದೆ. ಒಲೆ ಆರಿಸಿ ತಣ್ಣಗಾಗಲು ಬಿಡಿ.

ತಣ್ಣಗಾದ ಬಳಿಕ ಮಾವಿನ ಕಾರದ ಗುಳಂಬ ಸವಿಯಲು ತಯಾರು. ಗಾಜಿನ ಜಾರಿನಲ್ಲಿ ತೆಗೆದಿಟ್ಟರೆ 2-3 ವಾರಗಳವರೆಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ. ಚಪಾತಿ ಇಲ್ಲವೇ ಅನ್ನದೊಂದಿಗೆ ಸವಿಯಬಹುದು. ಮಾವಿನಕಾಯಿಯ ಕಾರದ ಗುಳಂಬ ಮಕ್ಕಳಿಗೆ ತುಂಬಾ ಹಿಡಿಸುತ್ತದೆ. ಚಪಾತಿಯಲ್ಲಿ ಸುತ್ತಿ ಶಾಲೆಗೆ ಹೋಗುವ ಮಕ್ಕಳಿಗೆ ಪ್ಯಾಕ್ ಮಾಡಿ ಕೂಡ ಕೊಡಬಹುದು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: