ಪಮದಿಹಾನಾ: ಮಡಗಾಸ್ಕರ್ ನಲ್ಲಿ ಆಚರಿಸುವ ‘ಸತ್ತವರ ದಿನ’

– .

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕುಟುಂಬ ಸದಸ್ಯರುಗಳೆಲ್ಲಾ ಒಂದೆಡೆ ಸೇರುವುದು ಯಾವುದಾದರೂ ಶುಬ ಸಮಾರಂಬವಿದ್ದಲ್ಲಿ ಮಾತ್ರ. ಸತ್ತವರನ್ನು ನೆನೆಯುವುದಕ್ಕಾಗಿ ಅಲ್ಲವೇ ಅಲ್ಲ. ಆದರೆ ಮಡಗಾಸ್ಕರ್ ನ ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ. ಈ ಪ್ರದೇಶದಲ್ಲಿ ಕುಟುಂಬದ ಪುನರ‍್ಮಿಲನವಾಗುವುದು ಮರಣಿಸಿದ ಕುಟುಂಬದ ಹಿರಿಯರ ದೇಹವನ್ನು ಹೊರ ತೆಗೆಯಲು ಅಂದರೆ ಆಶ್ಚರ‍್ಯವಾಗುತ್ತದಲ್ಲವೆ? ಹೌದು. ಇದು ಸತ್ಯ. ಅಲ್ಲಿನ ಜನ ಅದನ್ನು ಪಮದಿಹಾನಾ ಎನ್ನುತ್ತಾರೆ. ಅಂದರೆ ‘ಸತ್ತ ಪೂರ‍್ವಜರ ದೇಹಗಳನ್ನು ತಿರುಗಿಸುವುದು’ ಎಂದರ‍್ತ. ಏನು ಹೀಗೆಂದರೆ? ಮಡಗಾಸ್ಕರ‍್ನಲ್ಲಿನ ಮಲಗಾಸಿ ಸಮುದಾಯದವರ ಪ್ರಮುಕ ಹಬ್ಬ ಪಮದಿಹಾನಾ. ಅಂದು ಮಲಗಾಸಿ ಸಮುದಾಯದವರು ತಮ್ಮ ಪ್ರೀತಿಪಾತ್ರರೊಡನೆ ಸಮಯವನ್ನು ಕಳೆಯುತ್ತಾರೆ. ಪ್ರೀತಿಪಾತ್ರರಲ್ಲಿ ಹಿರಿಯರು ಮತ್ತು ಸತ್ತವರೂ ಸೇರಿರುತ್ತಾರೆ. ಈ ಪಮದಿಹಾನಾ ಹಬ್ಬದಲ್ಲಿ ಕುಟುಂಬದ ಕಿರಿಯ ಹಾಗೂ ಹೊಸ ಸದಸ್ಯರಿಗೆ ತಮ್ಮ ಪೂರ‍್ವಜರನ್ನು ಬೇಟಿಯಾಗಿ, ಅವರ ಕಳೇಬರವನ್ನು ನೋಡುವ ಸೌಬಾಗ್ಯದ ಜೊತೆಗೆ ಎಂದಿಗೂ ಮರೆಯದಂತಿರುವ ನೆನೆಪುಗಳನ್ನು ಹಂಚಿಕೊಳ್ಳುಲು ಆಸ್ಪದವಿರುತ್ತದೆ.

ಹಿನ್ನೆಲೆ

ಮಡಗಾಸ್ಕರ್ ನ ಮಲಗಾಸಿ ಸಮುದಾಯದಲ್ಲಿ ಈ ಎರಡನೇ ಸಮಾದಿಯ ಅಬ್ಯಾಸ ರೂಡಿಯಾಗಲು ಕಾರಣ 1820ರಲ್ಲಿನ ಯುದ್ದದಲ್ಲಿ ಸಾವನ್ನಪ್ಪಿದ ಸಿಪಾಯಿಗಳ ಕಳೇಬರವನ್ನು ಹಿಂದಿರುಗಿಸಿದ್ದು. ತಮ್ಮ ಆತ್ಮೀಯರ ಕಳೇಬರವನ್ನು ಸ್ವೀಕರಿಸಿದ ಮಲಗಾಸಿ ಸಮುದಾಯದವರು, ಮತ್ತೆ ವಿದಿವತ್ತಾಗಿ ತಮ್ಮ ಸಂಪ್ರದಾಯಕ್ಕನುಗುಣವಾಗಿ ಕಳೇಬರವನ್ನು ಸಮಾದಿ ಮಾಡಿದ್ದು ಇದಕ್ಕೆ ಮೂಲ ಕಾರಣ.

ಪಮದಿಹಾನಾಗೆ ಪೂರ‍್ವ ತಯಾರಿ

ಪಮದಿಹಾನಾ ದಿನದ ಆಯೋಜನೆಗೆ ಅನೇಕ ಪೂರ‍್ವ ತಯಾರಿ ಇರುತ್ತದೆ. ಕುಟುಂಬದ ಒಂದೇ ಸಮಾದಿ ಸ್ತಳವನ್ನು ಹಂಚಿಕೊಂಡಿರುವ, ಸಾವನ್ನಪ್ಪಿದ ಹಿರಿಯರ ಸಂಬಂದಿಕರು, ಮೊದಲು ವರ‍್ಶದ ಮುಂಚಿತವಾಗಿ ಚರ‍್ಚಿಸಲು ಒಂದೆಡೆ ಸೇರುತ್ತಾರೆ. ಚರ‍್ಚೆಯಲ್ಲಿ ನಡೆಸಲು ಉದ್ದೇಶಿಸಿರುವ ಪಮದಿಹಾನಾದ ದಿನದ ನಿಶ್ಚಯವಾಗುತ್ತದೆ. ಕುಟುಂಬದ ಸುದೀರ‍್ಗ ಚರ‍್ಚೆಯಲ್ಲಿ ಪಮದಿಹಾನಾದ ಸಮಯದೊಂದಿಗೆ ಅದಕ್ಕೆ ತಗಲುವ ವೆಚ್ಚಗಳು, ಆಹ್ವಾನಿಸಬೇಕಿರುವ ಅತಿತಿಗಳ ಪಟ್ಟಿ ಎಲ್ಲವನ್ನೂ ತಯಾರುಮಾಡಲಾಗುತ್ತದೆ. ಈ ಹಬ್ಬದಂದು ನೆರೆಹೊರೆಯವರಿಂದ ಹಾಗೂ ಸುತ್ತಮುತ್ತಲಿನವರಿಂದ ‘ವೇರಿಬೆಮೆನೆಕಾ’ ಎಂದು ಕರೆಯಲ್ಪಡುವ ಅಕ್ಕಿ ಮತ್ತು ಹಂದಿ ಮಾಂಸ ಅತವಾ ಗೋಮಾಂಸದಿಂದ ತಯಾರಾದ ಪಮಹನಾನವನ್ನು ಹಂಚಿಕೊಳ್ಳಲು ಆಹ್ವಾನಿಸಲಾಗುತ್ತದೆ. ಪಮದಿಹಾನಾದ ದಿನಾಂಕವನ್ನು ಸಾಮಾನ್ಯವಾಗಿ ಜುಲೈ ಮತ್ತು ಸೆಪ್ಟಂಬರ್ ನಡುವೆ ನಿಗದಿ ಪಡಿಸಲಾಗುತ್ತದೆ. ನಿಕರವಾದ ದಿನ ನಿಗದಿ ಪಡಿಸುವ ಕಾರ‍್ಯದ ಜವಾಬ್ದಾರಿ ಸ್ತಳೀಯ ಜ್ಯೋತಿಶಿಗಳದ್ದು. ಆ ನಿಗದಿತ ಎರಡು ಮೂರು ದಿನಗಳ ಸಮಯದಲ್ಲಿ ಕುಟುಂಬದ ಗೋರಿಗಳನ್ನು ತೆರೆಯಬಹುದು. ಮೊದಲ ದಿನವನ್ನು ‘ಪಿದಿರಾನಾ’ ಅತವಾ ‘ಪ್ರವೇಶದ ದಿನ’ ಅಂತಲೂ, ಎರಡನೆಯ ದಿನವನ್ನು ‘ಪಮೊನೊಸಾನಾ’ ಅತವಾ ‘ಕಳೇಬರವನ್ನು ಸುತ್ತುವುದು’ ಎಂದು ಕರೆಯಲಾಗುತ್ತದೆ.

ಕುಟುಂಬಗಳ ನಂಟು

ಸಮಾರಂಬದ ಹಿಂದಿನ ದಿನ ಸಂಬಂದಿಕರು ಮತ್ತು ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರುತ್ತಾರೆ. ಅವರುಗಳಲ್ಲಿ ಬಹಳಶ್ಟು ಮಂದಿ ಹಿಂದಿನ ಪಮದಿಹಾನಾಕ್ಕೆ ಸೇರಿದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಮುಕತಹ ಬೇಟಿಯೇ ಇರುವುದಿಲ್ಲ. ಈ ಕುಟುಂಬಗಳಲ್ಲಿ ಹೊಸಬರೆಂದರೆ, ಹೊಸದಾಗಿ ಕುಟುಂಬಕ್ಕೆ ಸೇರ‍್ಪಡೆಯಾದ ಸೊಸೆಯಂದಿರು ಮತ್ತು ನಂತರದ ದಿನಗಳಲ್ಲಿ ಜನಿಸಿದ ಮಕ್ಕಳು. ಬಹಳಶ್ಟು ಕುಟುಂಬಗಳಿಗೆ ತಮ್ಮ ಸಂಬಂದಿಕರನ್ನು ನೋಡುವ ಏಕೈಕ ಸದಾವಕಾಶವೆಂದರೆ ಪಮದಿಹಾನಾ ಹಬ್ಬ. ಈ ಆಚರಣೆ ಕುಟುಂಬಗಳ ನಡುವೆ ಬಾಂದವ್ಯವನ್ನು ಗಟ್ಟಿಗೊಳಿಸುವತ್ತ ಇಡುವ ಹೊಸ ಹೆಜ್ಜೆಯಾಗಿದೆ.

ಹಿಂದಿನ ದಿನದ ತಯಾರಿಗಳು

ಪಮದಿಹಾನಾದ ಹಿಂದಿನ ರಾತ್ರಿ ಚರ‍್ಚೆ, ಸಂಗೀತ, ಪಾನೀಯ ಮತ್ತು ಮರುದಿನದ ಊಟದ ತಯಾರಿಕೆಗೆ ಅವಶ್ಯವಿರುವ ಕಚ್ಚಾವಸ್ತುಗಳನ್ನು ಸಿದ್ದ ಪಡಿಸುವಲ್ಲಿ ಕಳೆಯುತ್ತದೆ. ಕುಟುಂಬದ ಪುರುಶರ ಕೆಲಸ ಪ್ರಾಣಿಗಳನ್ನು ಕೊಂದು ಅವುಗಳಿಂದ ಮಾಂಸವನ್ನು ಬೇರ‍್ಪಡಿಸುವುದು. ಕುಟುಂಬದ ಸದಸ್ಯರಿಗೆ ‘ಆಪಲ್’ನ್ನು ತಯಾರಿಸಿ ಅನ್ನದೊಂದಿಗೆ ನೀಡಲಾಗುತ್ತದೆ. ‘ಆಪಲ್’ ಎಂದರೆ ಪ್ರಾಣಿಯ ದೇಹದಲ್ಲಿನ ಲಿವರ್ ಹಾಗೂ ಶ್ವಾಸಕೋಶ ತೆಗೆದ ನಂತರ ಉಳಿಯುವುದು. ಲಿವರ್ ಹಾಗೂ ಶ್ವಾಸಕೋಶ ಕುಟುಂಬದ ಅಳಿಯಂದರಿಗೆ ಮಾತ್ರ ಮೀಸಲು.

ಸೌಹಾರ‍್ದತೆಯ ಹಾಗೂ ಸಹಕಾರದ ಕುರುಹು

ಅತಿತಿಗಳು ಪಮದಿಹಾನಾಗೆ ಬಂದಾಗ, ಅವರುಗಳು ಆಯೋಜಕರಿಗೆ ಅಕ್ಕಿ ಮತ್ತು ಹಣವನ್ನು ನೀಡುತ್ತಾರೆ. ಇದನ್ನು ಸ್ತಳೀಯ ಬಾಶೆಯಲ್ಲಿ ‘ಟಾಂಪೊನ್-ದ್ರಹರಾಹ’ ಎನ್ನುತ್ತಾರೆ. ಹೀಗೆ ಅತಿತಿಗಳು ನೀಡಿದ ಹಣ ಮತ್ತು ಅಕ್ಕಿಯ ಪ್ರಮಾಣನ್ನು ‘ಅಟೆರೊ ಕಾ ಅಲಾವೋ’ ಎಂಬುದರಲ್ಲಿ ದಾಕಲು ಮಾಡುತ್ತಾರೆ. ಅಕ್ಶರಶಹ ಇದು ‘ಏನನ್ನಾದರೂ ನೀಡಿ, ನಂತರದ ದಿನಗಳಲ್ಲಿ ವಾಪಸ್ಸು ಪಡೆಯಿರಿ’ ಎಂಬುದಾಗಿದೆ. ಇದು ಸೌಹಾರ‍್ದತೆಯ ಹಾಗೂ ಸಹಕಾರದ ಕುರುಹು. ಇದರಿಂದ ಅತಿತಿಗಳು ತಾವೇನಾದರೂ ಪಮದಿಹಾನಾ ಅಯೋಜಿಸಿದರೆ ಅವರಿಗೆ ಅಶ್ಟು ಹಣ ಮತ್ತು ಅಕ್ಕಿಯನ್ನು ಮರುಪಾವತಿಸಿ, ಬೆಂಬಲವನ್ನು ನೀಡಲಾಗುವುದು. ಈ ರೀತಿಯಲ್ಲಿ ಕರ‍್ಚನ್ನು ಎಲ್ಲರೂ ಹಂಚಿಕೊಳ್ಳುವುದರಿಂದ, ಸಂಗ್ರಹಣೆಯಲ್ಲಿ ಉಳಿದ ಅಕ್ಕಿ ಮತ್ತು ಹಣವನ್ನೂ ಸಹ ಕೊನೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

ಆಚರಣೆ

ಅತಿತಿಗಳ ಸತ್ಕಾರವಾದ ನಂತರ ಕುಟುಂಬವು ಸಮಾದಿಸ್ತಳಕ್ಕೆ ಬೇಟಿ ನೀಡಲು ಒಂದು ಗುಂಪನ್ನು ಸಿದ್ದಪಡಿಸುತ್ತದೆ. ಅಲ್ಲಿಗೆ ಹೋಗುವ ಗುಂಪಿನವರು ಹೊಸ ಹಾಗೂ ಉತ್ತಮ ಬಟ್ಟೆಗಳನ್ನು ದರಿಸುತ್ತಾರೆ. ಕಹಳೆಯಂತಹ ವಾದ್ಯ, ಡ್ರಮ್ಸ್ ಮತ್ತು ‘ಸೋಡಿನಾ’ ಎನ್ನಲಾಗುವ ಮಲಗಾಸಿ ಜನಾಂಗದ ಕೊಳಲನ್ನು ನುಡಿಸುವ ಸಂಗೀತಗಾರರ ಗುಂಪಿನ ಜೊತೆ ಎಲ್ಲರೂ ಹಳ್ಳಿಯಿಂದ ಸಮಾದಿ ಸ್ತಳಕ್ಕೆ ಹೊರಡುತ್ತಾರೆ. ಅಲ್ಲಿಗೆ ಬಂದ ನಂತರ ಸಮಾದಿಯಲ್ಲಿದ್ದ ದೇಹವನ್ನು ಹೊರ ತೆಗೆದು, ಜೊಂಡಿನ ಚಾಪೆಯ ಮೇಲಿಡುತ್ತಾರೆ. ಅತಿತೇಯ ಕುಟುಂಬದ ಸದಸ್ಯರು ಆ ದೇಹಗಳನ್ನು ಹೊಸ ಹೊದಿಕೆಗಳಿಂದ ಸುತ್ತುತ್ತಾರೆ. ಹೊಸ ಹೊದಿಕೆಗಳನ್ನು ಹೊದೆಸುವುದರ ಜೊತೆಗೆ, ಮ್ರುತ ವ್ಯಕ್ತಿ ಜೀವಂತವಿದ್ದಾಗ ಇಶ್ಟಪಡುತ್ತಿದ್ದ ವಸ್ತುಗಳನ್ನು ಅದರೊಡನೆ ಇಡುತ್ತಾರೆ. ಸಾಮಾನ್ಯವಾಗಿ ಪುರುಶರಿಗೆ ಸಿಗರೇಟ್ ಹಾಗೂ ಮದ್ಯ. ಮಹಿಳೆಯರಿಗೆ ಸುಗಂದ ದ್ರವ್ಯ, ಲಿಪ್ಸ್ಟಿಕ್ಗಳು, ಮಕ್ಕಳಾದಲ್ಲಿ ಸಿಹಿ ತಿಂಡಿಗಳನ್ನು ಇರಿಸುತ್ತಾರೆ. ಹೊಸ ಹೊದಿಕೆಯಲ್ಲಿ ಸುತ್ತಿದ ದೇಹವನ್ನು ಕುಟುಂಬದ ಹಳಬರು ಹೊತ್ತು ನ್ರುತ್ಯ ಮಾಡುತ್ತಾ ಕುಟುಂಬಕ್ಕೆ ಹೊಸದಾಗಿ ಸೇರ‍್ಪಡೆಯಾದ ಹೊಸ ಸದಸ್ಯರುಗಳಿಗೆ ಹಸ್ತಾಂತರಿಸುತ್ತಾರೆ. ಹೊಸ ಹೊದಿಕೆಯಲ್ಲಿ ಹಳ್ಳಿಗೆ ತಂದು, ಅದಕ್ಕೆ ಕುಟುಂಬದ ಹೊಸ ಸದಸ್ಯರನ್ನು ಪರಿಚಯ ಮಾಡಿಸಿ ಎಲ್ಲರೂ ಸಹ ಬೋಜನ ಮಾಡುತ್ತಾರೆ. ಸಮಾದಿಯಿಂದ ಹೊರ ತೆಗೆದ ಕಳೇಬರವನ್ನು ಸ್ವಚ್ಚಗೊಳಸಿ, ಅದಕ್ಕೆ ಹೊಸ ವಸ್ತ್ರಗಳನ್ನು ತೊಡಿಸಿ, ಎರೆಡನೆಯ ದಿನ ಕಳೇಬರವನ್ನು ಮತ್ತೆ ಸಮಾದಿ ಸ್ತಳಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ದು, ಮೊದಲಿನಂತೆಯೇ ಅವರವರ ಸಮಾದಿ ಸ್ತಳದಲ್ಲಿಟ್ಟು, ಅವರ ಸ್ವರ‍್ಗಾರೋಹಣ ಪಯಣ ಸುಕಕರವಾಗಿರಲಿ ಎಂದು ಅವರಿಶ್ಟದ ವಸ್ತು, ಹಣ ಎಲ್ಲವನ್ನೂ ಅದರೊಡನೆ ಇಟ್ಟು ವಾಪಸ್ಸಾಗುತ್ತಾರೆ.

ವಿರೋದಗಳು

ಪಮದಿಹಾನಾ ಇಶ್ಟೇ ವರ‍್ಶಗಳ ಅಂತರದಲ್ಲಿ ನಡೆಯಬೇಕೆಂಬ ಯಾವುದೇ ಕಟ್ಟು ಪಾಡಿಲ್ಲ. ಕಳೇಬರವನ್ನು ಸಮಾದಿಯಿಂದ ಹೊರ ತೆಗೆಯುವ ಈ ಸಂಪ್ರದಾಯಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಶ್ಟು ವಿರೋದಗಳು ವ್ಯಕ್ತವಾಗಿವೆ. ಪಮದಿಹಾನಾವನ್ನು ನಿಶೇದಿಸಬೇಕು ಎಂಬ ಕೂಗು ಸಹ ಪ್ರಬಲವಾಗಿದೆ. ಮುಂದೊಂದು ದಿನ ಮಡಗಾಸ್ಕರ‍್ನ ಈ ಸಂಪ್ರದಾಯ ಇತಿಹಾಸದ ಪುಟ ಸೇರಬಹುದು.

(ಮಾಹಿತಿ ಮತ್ತು ಚಿತ್ರಸೆಲೆ: theculturetrip.com, funeralguide.co.uk, thecrowdedplanet.com, deadandaliveproject.com, livescience.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. C.P.Nagaraja says:

    ಕಳೇಬರ ಕೊಳೆತು ಹಾಳಾಗಿರುವುದಿಲ್ಲವೆ . ತಿಳಿಸಿ.

  2. K.V Shashidhara says:

    ಸರ್ ತಮ್ಮ ಅನಿಸಿಕೆ ಸರಿಯಿದೆ. ಕೆಲವೊಂದು ಮೂಲಿಕೆಗಳಿಂದ ಅದನ್ನು ಕಾಪಾಡುವ ಕಾರ್ಯ ಮಾಡುತ್ತಾರೆ. ಆದರೂ ಸಹ ಅದು ಹಾಳಾಗುತ್ತದೆ. ಅದನ್ನು ತಂದು ತೊಳೆದು ಹೊಸ ಬಟ್ಟೆ ಹಾಕಿ ಮತ್ತೆ ಸ್ವಸ್ಥಾನದಲ್ಲಿ ಇರಿಸುತ್ತಾರೆ. ಇದಕ್ಕಿಂತ ಹೆಚ್ಚಿನ ವಿವರ ಎಲ್ಲೂ ದೊರಕಲಿಲ್ಲ. ಧನ್ಯವಾದಗಳು ಸರ್

ಅನಿಸಿಕೆ ಬರೆಯಿರಿ: