ಬಾಳೆ ಎಲೆಯ ಬಳಕೆಯ ಸುತ್ತ

 –ಶ್ಯಾಮಲಶ್ರೀ.ಕೆ.ಎಸ್.

ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ರುಚಿ-ಶುಚಿ ಎರಡೂ ಇದ್ದರೆ ಮನಸ್ಸು ತ್ರುಪ್ತಿದಾಯಕವಾಗಿರುತ್ತದೆ ಮತ್ತು ಮಾಡುವ ಕೆಲಸದಲ್ಲೂ ಆಸಕ್ತಿ ಇರುತ್ತದೆ. ಇಂತಹ ರುಚಿ ಶುಚಿಬರಿತ ಬೋಜನವನ್ನು ಹಸಿರಸಿರಾದ ತಾಜಾ ಬಾಳೆಲೆಯ ಮೇಲೆ ಬಡಿಸಿಕೊಂಡು ಸವಿದರೆ ಬೋಜನಪ್ರಿಯರ ಕುಶಿ ಇಮ್ಮಡಿಯಾಗುವುದು.

ನಮ್ಮ ಪೂರ‍್ವಜರು ಬಹಳ ಹಿಂದಿನಿಂದಲೂ ಬಾಳೆಲೆಯಲ್ಲಿ ಪ್ರತಿ ದಿನವು ಊಟವನ್ನು ಮಾಡುವ ಪದ್ದತಿಯನ್ನು ರೂಡಿಸಿಕೊಂಡಿದ್ದರು . ಆಗಿನ ಕಾಲದಲ್ಲಿ ಅಡಿಕೆಹಾಳೆ, ಇಸ್ತ್ರಿ ಎಲೆ ಅತವಾ ಮುತ್ತುಗದ ಎಲೆ ಹಾಳೆಗಳು ಬಳಕೆಯಲ್ಲಿದ್ದವು. ದಿನ ಕಳೆದಂತೆ ನಾಗರೀಕತೆಯು ಮುಂದುವರಿದು ಹಿತ್ತಾಳೆ, ತಾಮ್ರ, ಅಲ್ಯುಮಿನಿಯಂ, ಬೆಳ್ಳಿ, ಉಕ್ಕು ಹೀಗೆ ನಾನಾ ಬಗೆಯ ಲೋಹದ ತಟ್ಟೆಗಳಿಗೆ ಜನರು ಮೊರೆ ಹೋಗಿದ್ದಾರೆ. ದಿನ ಬಳಕೆಗಾಗಿ ಸ್ಟೀಲ್ ಅತವಾ ಉಕ್ಕಿನ ತಟ್ಟೆಗಳು ‌ಈಗ ಮನೆಗಳಲ್ಲಿ, ಹೋಟೆಲ್‍‍ಗಳಲ್ಲಿ ಸರ‍್ವೇಸಾಮಾನ್ಯವಾಗಿ ರೂಡಿಯಲ್ಲಿವೆ. ಅಲ್ಲಲ್ಲಿ ಉತ್ತರ ಬಾರತ ಶೈಲಿಯ ಉಪಹಾರ ಮಂದಿರಗಳಲ್ಲಿ ಮಾತ್ರ ತಾಮ್ರದ ತಟ್ಟೆಗಳು ಬಳಕೆಯಲ್ಲಿವೆ. ಈಗ ಪ್ಯಾಶನ್ ಹೆಸರಿನಲ್ಲಿ ಪಿಂಗಾಣಿ ತಟ್ಟೆಗಳು ಬೆಳಕಿಗೆ ಬಂದಿವೆ. ಇನ್ನೂ ಮುಂದುವರೆದು ಪ್ಲಾಸ್ಟಿಕ್ ತಟ್ಟೆ, ಲೋಟಗಳು ರಾರಾಜಿಸಿ, ತಜ್ನರ ಅಬಿಪ್ರಾಯದಂತೆ ಅವುಗಳಿಂದಾಗುವ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚು ಎಂದು ಸಾಬೀತಾಗಿ ಪ್ಲಾಸ್ಟಿಕ್ ತಟ್ಟೆಗಳು ಮೂಲೆಗುಂಪಾಗಿರುವುದು ಎಲ್ಲರಿಗೂ ತಿಳಿದಿರುವ ವಿಶಯ. ಇದನ್ನೆಲ್ಲ ಗಮನಿಸಿದರೆ, ಬಾಳೆಲೆಗಳು ಎಶ್ಟು ಅಮೂಲ್ಯವೆನಿಸುತ್ತವೆ.

ಮದುವೆ ಮತ್ತು ಕೆಲವು ಸಮಾರಂಬ‍‍ಗಳಲ್ಲಿ, ಅಲ್ಲಲ್ಲಿ ಕೆಲವು ದೇವಸ್ತಾನಗಳಲ್ಲಿ ಮಾತ್ರ ಬಾಳೆಲೆಗಳು ಬಳಕೆಯಲ್ಲಿವೆ. ಕೆಲವು ಹೋಟೆಲ್ಗಳಲ್ಲಿಯೂ ಬಾಳೆಲೆಗಳು ಬಳಕೆಯಲ್ಲಿರುವುದನ್ನು ಕಾಣಬಹುದು. ಇತ್ತೀಚೆಗೆ ಅಲ್ಲಿಂದಲೂ ಮಾಯವಾಗುತ್ತಾ ಬರುವುದನ್ನು ಕಾಣಬಹುದಾದರೂ, ಬಾಳೆಲೆಪ್ರಿಯರಿಗಾಗಿಯೇ ಕೆಲವು ಹೋಟೆಲ್ಗಳಲ್ಲಿ ಬಾಳೆಲೆಯ ಊಟ ಲಬ್ಯವಿರುವುದು ತಿಳಿದು ಬಂದಿದೆ. ಬಾಳೆಲೆಗಳು ದಕ್ಶಿಣ ಬಾರತದಲ್ಲಿ ಹೆಚ್ಚು ಚಿರಪರಿಚಿತವಾಗಿವೆ. ಇಂದು ಹಬ್ಬ ಹರಿದಿನಗಳಲ್ಲಿ ಮಾತ್ರವೇ ಮನೆಗಳಲ್ಲಿ ಬಾಳೆಲೆಗಳು ಸೀಮಿತವಾಗಿವೆ. ಕೆಲವು ದಾರ‍್ಮಿಕ ಕಾರ‍್ಯಗಳಲ್ಲಿಯೂ ಬಾಳೆಲೆಗಳನ್ನು ಬಳಸಲಾಗುತ್ತದೆ. ತುಳುನಾಡು ಮತ್ತು ಮಲೆನಾಡುಗಳಲ್ಲಿ ಬಾಳೆಲೆಯನ್ನು ಉಪಯೋಗಿಸಿ ಕೆಲವು ವಿಶೇಶ ಕಾದ್ಯಗಳನ್ನು ತಯಾರಿಸುತ್ತಾರೆ. ಹಿಂದೆ ಹೋಳಿಗೆಗಳನ್ನು ತಟ್ಟಲು, ಬಾಳೆಲೆಯನ್ನು ಚೌಕಾಕಾರವಾಗಿ ಕತ್ತರಿಸಿ ಅದರ ಮೇಲ್ಮೈನ್ನು ಹಗುರವಾಗಿ ಬಿಸಿ ಮಾಡಿ(ಬಾಡಿಸಿ) ಹೆಚ್ಚಿನ ಹೊತ್ತು ಬಾಳಿಕೆ ಬರುವಂತೆ ಸಿದ್ದಪಡಿಸುತ್ತಿದ್ದರು. ಈಗೆಲ್ಲ ಹಳೇ ಪದ್ದತಿಯ ಅರಿವಿಲ್ಲದಿರುವುದರಿಂದ ಹೋಳಿಗೆ ತಟ್ಟಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವಂತಾಗಿದೆ.

ಆರೋಗ್ಯದ ಹಿತ ದ್ರುಶ್ಟಿಯಿಂದಲೂ ಬಾಳೆಲೆಯಲ್ಲಿ ಊಟ ಮಾಡುವ ಪದ್ದತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ತುಂಬಾ ಒಳಿತಾಗುತ್ತದೆಯೆಂಬುದು ತಜ್ನರ ಅಬಿಪ್ರಾಯ. ಬಾಳೆ ಎಲೆ‌ಗಳಲ್ಲಿ ಪಾಲಿಪೀನಾಲ್‍‍ಗಳೆಂಬ ಅಂಶವಿದ್ದು ಅನೇಕ ಬ್ಯಾಕ್ಟೀರಿಯಾ‍‍ಗಳನ್ನು ಹತ್ತಿರ ಸುಳಿಯಲು ಬಿಡುವುದಿಲ್ಲ ಅಲ್ಲದೇ ಕ್ಯಾನ್ಸರ‍್‍‍ನಂತಹ ರೋಗಗಳನ್ನು ದೂರವಿಡುತ್ತವೆ. ಬಾಳೆಲೆಯ ಊಟ ಜೀರ‍್ಣಕ್ರಿಯೆಗೂ ಸಹಕಾರಿಯಾಗಿದ್ದು ರೋಗ ನಿರೋದಕ ಶಕ್ತಿಯನ್ನು ನೀಡುತ್ತದೆ. ಬಾಳೆಲೆಗಳನ್ನು ಯಾವುದೇ ಸಾಬೂನು ಬಳಸದೇ ಹಾಗೆಯೇ ಶುದ್ದ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಬಹುದಾಗಿದೆ. ಊಟದ ನಂತರವೂ ಬಾಳೆಲೆಗಳನ್ನು ಯಾವುದಾದರೂ ಗಿಡ ಇಲ್ಲವೇ ಮರದ ಬುಡಕ್ಕೆ ಹಾಕಿದರೆ ಅದು ಅಲ್ಲಿಯೇ ಕೊಳೆತು ಗೊಬ್ಬರ‍‍ವಾಗುತ್ತದೆ. ಜೊತೆಗೆ ಪ್ಲಾಸ್ಟಿಕ್‍‍ಗಳ ತರಹ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಇದು ತೆಳುವಾಗಿದ್ದು ಮರುಬಳಕೆಗೆ ಸೂಕ್ತವಿಲ್ಲವಾದರೂ, ಪರಿಸರ‍‍ಸ್ನೇಹಿ ಗುಣ ಹೊಂದಿರುವುದು ಒಳ್ಳೆಯ ವಿಚಾರ. ಇದರ ಬೆಲೆ ಅಗ್ಗವಾಗಿದೆಯಾದರೂ, ನಗರವಾಸಿಗಳಿಗೆ ಇವು ದೊರೆಯುವುದು ಕೊಂಚ ಕಶ್ಟವಾಗಬಹುದು ಆದರೆ ಹಳ್ಳಿಗಳಲ್ಲಾದರೆ ಬಾಳೆಲೆಗಳು ಬಾಳೆತೋಟಗಳಲ್ಲಿ ಸುಲಬವಾಗಿ ಸಿಗುತ್ತವೆ. ಇವುಗಳನ್ನು ಹಬ್ಬದ ಸಮಯದಲ್ಲಾದರೂ ತಂದು ಆಗಾಗ ಬಳಸಿದರೆ ತಕ್ಕ ಮಟ್ಟಿಗೆ ಉಪಯೋಗವಾಗುವುದು.

ಹಸಿರಾದ ಅಗಲವಾದ ಬಾಳೆಲೆಗಳ ಮೇಲೆ ಉಪ್ಪು, ಉಪ್ಪಿನಕಾಯಿ, ಪಲ್ಯೆ, ಹಪ್ಪಳ, ಸಂಡಿಗೆ, ಅನ್ನ ಸಾಂಬಾರ್ ಮತ್ತು ರಸಂ ಹೀಗೆ ಬಗೆ ಬಗೆಯ ಕಾದ್ಯಗಳನ್ನು ಒಮ್ಮೆಲೆ ಬಡಿಸಿಕೊಂಡು ಬಿಸಿ ಬಿಸಿಯಾಗಿ ತಿನ್ನಲು ಅನುಕೂಲವಾಗುವುದರ ಜೊತೆಗೆ ರುಚಿಯೂ ಅದ್ಬುತವಾಗಿರುತ್ತದೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: