ಪ್ಯಾರಡೈಸ್ ಗುಹೆ – ವಿಯೆಟ್ನಾಂ
– ಕೆ.ವಿ.ಶಶಿದರ.
‘ಬೂಗತ ಅರಮನೆ’ ಎಂದು ಕರೆಯಲ್ಪಡುವ ಪ್ಯಾರಡೈಸ್ ಗುಹೆಗಳು ಇರುವುದು ವಿಯಟ್ನಾಂನಲ್ಲಿ. ಅತ್ಯಂತ ಬವ್ಯವಾದ ಹಾಗೂ ವೀಕ್ಶಕರನ್ನು ಮಂತ್ರಮುಗ್ದರನ್ನಾಗಿಸುವ ಅದ್ಬುತ ಗುಹೆಗಳಲ್ಲಿ, ಮುಂಚೂಣಿಯಲ್ಲಿ ನಿಲ್ಲುವಂತಹುದು ಈ ಬೂಗತ ಅರಮನೆ. ವಿಶ್ವ ನೈಸರ‍್ಗಿಕ ಪರಂಪರೆಯ ತಾಣಗಳಲ್ಲಿ, ಈ ಬೂಗತ ಅರಮನೆ ಶಾಶ್ವತ ಸ್ತಾನ ಪಡೆದಿದೆ. ಇದಿರುವುದು ‘ಪೋಂಗ್ ನ್ಹಾ ಕೆ ಬ್ಯಾಂಗ್’ ರಾಶ್ಟ್ರೀಯ ಉದ್ಯಾನವನದಲ್ಲಿ. ಇದು ಕ್ವಾಂಗ್ ಬಿನ್ಹ್ ಪ್ರಾಂತ್ಯದ ಬೊ ಟ್ರಾಚ್ ಜಿಲ್ಲೆಯ ಸೋನ್ ಟ್ರಾಚ್ ಕಮ್ಮೂನ್‍ಗೆ ಸೇರಿದೆ. ಈ ಬೂಗತ ಅರಮನೆಯು ಡಾಂಗ್ ಹೋಯಿಯಿಂದ ವಾಯುವ್ಯಕ್ಕೆ ಸುಮಾರು 70 ಕಿಲೋಮೀಟರ್ ಹಾಗೂ ಪಾಂಗ್ ನ್ಹಾ ಗುಹೆಯಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿದೆ. 2005ರಲ್ಲಿ ಸ್ತಳೀಯ ವ್ಯಕ್ತಿ, ಹೋ ಕಾನ್, ಈ ಪ್ಯಾರಡೈಸ್ ಗುಹೆಗಳನ್ನು ಅನ್ವೇಶಿಸಿದ. ಪ್ಯಾರಡೈಸ್ ಗುಹೆಗಳ ಅನ್ವೇಶಣೆಯ ಹಲವು ವರ‍್ಶಗಳ ನಂತರ, ಸನ್ ಡೂಂಗ್ ಗುಹೆಗಳ ಇರುವಿಕೆಯನ್ನೂ ಸಹ ಈತನೇ ಕಂಡು ಹಿಡಿದು ಜಗತ್ತಿನ ಗಮನಕ್ಕೆ ತಂದಿದ್ದು ವಿಶೇಶ.
ಈ ಬೂಗತ ಅರಮನೆಯ ಇರುವಿಕೆಯ ಮಾಹಿತಿ ದೊರಕಿದ ತರುವಾಯ ಡಾ. ಹೊವಾರ‍್ಡ್ ಲಿಂಬರ‍್ಟ್ ನೇತ್ರುತ್ವದ ಬ್ರಿಟೀಶ್ ಕೇವ್ ರಿಸರ‍್ಚ್ ಅಸೋಸಿಯೇಶನ್ (ಬಿ.ಸಿ.ಆರ್.ಎ) ಇದರ ಸಮೀಕ್ಶೆ ನಡೆಸಿತು. ಈ ಸಮೀಕ್ಶೆಯಲ್ಲಿ ಅಚ್ಚರಿಯ ಪಲಿತಾಂಶಗಳು ಹೊರಬಿದ್ದವು. ಮಾನವನ ಕಲ್ಪನೆಗೆ ಮೀರಿದ ಈ ಪ್ಯಾರಡೈಸ್ ಗುಹೆಗಳು 31.4 ಕೀಮೀ ಉದ್ದವಿದ್ದು, ಏಶ್ಯಾದ ಅತಿ ಉದ್ದದ ಗುಹೆ ಎಂಬ ಕ್ಯಾತಿಗೆ ಪಾತ್ರವಾಯಿತು. ವಿಶೇಶವಾಗಿ ಗುಹೆಯಲ್ಲಿ ಕಂಡುಬಂದ ಹ್ರುನ್ಮನ ಸೆಳೆಯುವ, ಮಿಂಚಿನಂತಿರುವ ಆಕರ‍್ಶಕ ಸ್ಟಾಲಗ್‍ಮೈಟ್ ಹಾಗೂ ಸ್ಟಾಲಕ್‍ಟೈಟ್ಸ್ ಗಳು, ಇದರ ಸೌಂದರ‍್ಯವನ್ನು ದ್ವಿಗುಣಗೊಳಿಸಿವೆ. ಆದ್ದರಿಂದ, ಈ ಗುಹೆಯನ್ನು ‘ತೀಯನ್ ಡುವಾಂಗ್ ಕೇವ್’ – ಅಂದರೆ ‘ಪ್ಯಾರಡೈಸ್ ಗುಹೆಗಳು’ ಎಂದು ಹೆಸರಿಸಲಾಯಿತು.
ಈ ಗುಹೆ ಎಲ್ಲಾ ಗುಹೆಗಳಂತಿಲ್ಲ. ಪ್ಯಾರಡೈಸ್ ಗುಹೆಯಲ್ಲಿ ಒಣ ವಾತಾವರಣವಿರುತ್ತದೆ. ಪ್ಯಾರಡೈಸ್ ಗುಹೆಯ ಅಡಿಯಲ್ಲಿ ಯಾವುದೇ ಬೂಗತ ನದಿಯಿಲ್ಲದ ಕಾರಣ ಇಲ್ಲಿ ಶುಶ್ಕ ವಾತಾವರಣವಿದೆ. ಬ್ರಿಟೀಶ್ ಸಂಶೋದಕರ ಪ್ರಾತಮಿಕ ಸಂಶೋದನೆಯಂತೆ ಪೋಂಗ್ ನ್ಹಾ ಗುಹೆಗೆ ಹೋಲಿಸಿದರೆ, ಪ್ಯಾರಡೈಸ್ ಗುಹೆ ಬಹಳ ದೊಡ್ಡದಾಗಿದೆ ಹಾಗೂ ಅದಕ್ಕಿಂತ ಹೆಚ್ಚು ಸುಂದರವಾಗಿಯೂ, ಪ್ರಬಾವಶಾಲಿಯಾಗಿಯೂ ಇದೆ. ಬ್ರಿಟೀಶ್ ಕೇವ್ ರಿಸರ‍್ಚ್ ಅಸೋಸಿಯೇಶನ್ ಸಮೀಕ್ಶೆ ನಡೆಸಿದ ಅತ್ಯಂತ ಅದ್ಬುತ ಗುಹೆಗಳಲ್ಲಿ ಇದೂ ಕೂಡ ಒಂದು. ಇದರ ಒಳಗಡೆ ಕಂಡು ಬಂದ ದ್ರುಶ್ಯಗಳು, ಮಾನವನ ಕಲ್ಪನೆಯ ಸ್ವರ‍್ಗ ಲೋಕದ ಸುಂದರತೆಗೂ ಮಿಗಿಲಾಗಿದೆ ಎಂದಿದ್ದಾರೆ ಸಂಶೋದಕರು.
ಪ್ಯಾರಡೈಸ್ ಗುಹೆಯೊಳಗಿನ ಉಶ್ಣತೆ ಹೊರ ವಾತಾವರಣದ ಉಶ್ಣತೆಗಿಂತಲೂ ತುಂಬಾ ಕಡಿಮೆ. ಒಳಗಿನ ಉಶ್ಣತೆಯು ಹೊರಗಿಗಿಂತ ಸರಿಸುಮಾರು 16 ಡಿಗ್ರಿ ಸೆಲ್ಶಿಯಸ್ ಕಡಿಮೆ ಕಂಡುಬರುತ್ತದೆ. ಈ ಗುಹೆಯ ಪ್ರವೇಶ ದ್ವಾರ ಅತಿ ಕಿರಿದಾಗಿದೆ. ಒಂದು ಬಾರಿಗೆ ಒಬ್ಬ ವ್ಯಕ್ತಿ ಮಾತ್ರ ದೇಹವನ್ನು ನಿರುಕಿಸಿ, ಕಶ್ಟ ಪಟ್ಟು ಒಳಗೆ ನುಸುಳಬಹುದಾದಶ್ಟಿದೆ. ಪ್ರವೇಶ ದ್ವಾರವನ್ನು ದಾಟಿ ಒಳಹೊಕ್ಕರೆ, ಪ್ರವಾಸಿಗರಿಗೆ ಅಚ್ಚರಿ ಕಾದಿರುತ್ತದೆ. ಅಶ್ಟು ಕಿರಿದಾದ ಪ್ರವೇಶ ದ್ವಾರ ಹೊಂದಿರುವ ಈ ಗುಹೆಯ ಒಳಗೆ ಕಾಲಿಡುತ್ತಿದ್ದಂತೆ, ಅದರ ವಿರಾಟ್ ಸ್ವರೂಪ ತೆರೆದುಕೊಳ್ಳುತ್ತದೆ. ಒಳಬಾಗವು 30 ರಿಂದ 150 ಮೀಟರ‍್‍ನಶ್ಟು ಅಗಲವಿದ್ದು, ಎತ್ತರವೂ ಸಹ 60 ರಿಂದ 80 ಮೀಟರ‍್ಗಳಶ್ಟಿದೆ.
ಸ್ತಳೀಯ ವ್ಯಕ್ತಿ, ಹೋ ಕಾನ್ 2005ರಲ್ಲಿ ಈ ಗುಹೆಯ ಇರುವಿಕೆಯನ್ನು ಸಂಶೋದಿಸಿದನಾದರೂ, 2011ರವರೆವಿಗೂ ಇದು ಸಾರ‍್ವಜನಿಕರಿಂದ ದೂರವೇ ಉಳಿದಿತ್ತು. 2011ರಲ್ಲಿ ಇದನ್ನು ಪ್ರವಾಸಿಗರ ವೀಕ್ಶಣೆಗೆ ತೆರೆಯಲಾಯಿತು. ಪ್ರವಾಸಿಗರು ಇಲ್ಲಿಗೆ ತಲುಪಲು ಹತ್ತಿರದ ನಗರ ಡಾಂಗ್ ಹೋಯ್‍ನಿಂದ ಒಂದು ಗಂಟೆಯ ಪ್ರಯಾಣ ಮಾಡಬೇಕಾದ್ದು ಅನಿವಾರ‍್ಯ. ಚಾರಣ ಪ್ರಿಯರು ಕಾಡು ಮೇಡುಗಳಲ್ಲಿ ಹಾದು ಇಲ್ಲಿಗೆ ತಲುಪಲು ಅವಕಾಶವಿದೆ. ವಾಹನ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಪ್ಯಾರಡೈಸ್ ಗುಹೆಯ ಬಾಗಿಲಿನವರೆಗೂ ಕರೆದೊಯ್ಯಲು ವಿದ್ಯುತ್ ಚಾಲಿತ ವಾಹನಗಳಿವೆ. ಅವುಗಳಿಗೆ ಸುಮಾರು 60,000 ವಿ.ನ್.ಡಿ (VND) ಶುಲ್ಕ ನೀಡಬೇಕಾಗುತ್ತದೆ. ( ಇಂದಿಗೆ ಒಂದು ರುಪಾಯಿಗೆ 307 ವಿ.ನ್.ಡಿ ಆಗುತ್ತದೆ). ಪ್ಯಾರಡೈಸ್ ಗುಹೆಗಳನ್ನು ವೀಕ್ಶಿಸಲು, ಏಪ್ರಿಲ್‍ನಿಂದ ಆಗಸ್ಟ್ ಉತ್ತಮವಾದ ಕಾಲವಾಗಿದೆ. ಈ ಸಮಯದಲ್ಲಿ ಒಣ ಹವೆಯ ವಾತಾವರಣವಿರಲಿದ್ದು, ಮಳೆ ಬೀಳುವ ಸಾದ್ಯತೆ ಅತ್ಯಂತ ಕಡಿಮೆ ಇರುತ್ತದೆ.
( ಮಾಹಿತಿ ಮತ್ತು ಚಿತ್ರಸೆಲೆ: asiaopentours.net , wikipedia.org )
ಇತ್ತೀಚಿನ ಅನಿಸಿಕೆಗಳು