ಕವಿತೆ: ಸುಗ್ಗಿಯ ಹಿಗ್ಗು

ಶ್ಯಾಮಲಶ್ರೀ.ಕೆ.ಎಸ್.

ವರುಶಕ್ಕೊಮ್ಮೆ ಹರುಶವ ತರುವುದು
ಸಂಬ್ರಮದ ಮಕರ ಸಂಕ್ರಮಣ
ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ
ನೇಸರನ ಪತ ಸಂಚಲನ

ಮನೆಯಂಗಳದಿ ನಗುತಿಹ ರಂಗೋಲಿಗೆ
ತೋರಣದ ಒಲವಿನ ಆಹ್ವಾನ
ಪೂಜೆಯ ಸ್ವೀಕರಿಸುವ ಪರಮಾತ್ಮನಿಗೆ
ಕುಂಕುಮ, ಗಂದದ ಲೇಪನ
ಪಲ ಪುಶ್ಪ, ನೈವೇದ್ಯದೊಂದಿಗೆ ಬಕ್ತಿಯ ನಮನ

ಸಂಕ್ರಾಂತಿಯ ಸಡಗರದ ಆಚರಣೆಗೆ
ಹಸಿರಿನ ಸಿರಿಯ ಸವಿ ಆಮಂತ್ರಣ
ತೆನೆ ಬಿಟ್ಟ ಪೈರುಗಳ ಬಳುಕುವ ಪರಿಗೆ
ಬೂದೇವಿಯ ನಲಿವಿನ ನರ‍್ತನ
ಕಬ್ಬಿನ ಜಲ್ಲೆಯ ಜಗಿಯುವ
ಚಿಣ್ಣರಿಗೆ ಸಿಹಿಯ ರಸದೌತಣ

ದಾನ್ಯಗಳ ರಾಶಿಯ ಸೊಬಗಿಗೆ
ರೈತನ ಶ್ರಮದ ಬೆವರ ಹನಿಯ ಸಿಂಚನ
ಕಿಚ್ಚು ಹಾಯಿಸುವ ರಾಸುಗಳಿಗೆ
ಗೆಜ್ಜೆ ಗಂಟೆಗಳಿಂದ ಸಿಂಗರಿಸಿದ ಆಬರಣ
ಜನಪದ ಸಿರಿಗೆ ಕನ್ನಡಿ ಹಿಡಿದಿದೆ
ನೆಲದ ಸೊಗಡಿನ ಗಾಯನ

ಹಿಗ್ಗುತ ಬರುವ ಸುಗ್ಗಿಯ ಹಬ್ಬದಂದು
ಹುಗ್ಗಿಯ ಸವಿ ಸವಿಯೋಣ
ಸಂತಸದಿ ಎಳ್ಳು ಬೆಲ್ಲವ ಹಂಚುತಾ
ಎಲ್ಲರಿಗೂ ಒಳಿತನ್ನು ಬಯಸೋಣ

(ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: