ಬಿಸ್ಲೆರಿ – ಕುಡಿಯುವ ನೀರಿಗೆ ಮತ್ತೊಂದು ಹೆಸರು!
ಒಂದು ಬಿಸ್ಲೆರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತ್ತಿದ್ದದ್ದು, ಒಂದು ಬಿಸ್ಲೆರಿ ಕೊಡಿ ಅಂತ. ಆಗೆಲ್ಲ ಬಿಸ್ಲೆರಿ ಅನ್ನೋದು ಒಂದು ಬಾಟಲ್ ನೀರಿನ ಕಂಪೆನಿಯ ಹೆಸರು, ನೀರಿನ ಹೆಸರು ಅದಲ್ಲ ಅನ್ನೋದು ನಮಗೆ ಗೊತ್ತೇ ಇರಲಿಲ್ಲ. ಹೌದು ಒಂದು ವಿದದಲ್ಲಿ ನೀರಿಗೆ ಸಮಾನಾರ‍್ತಕ ಪದವಾಗಿತ್ತು ಬಿಸ್ಲೆರಿ. ಜನಮನವನ್ನು ಅಶ್ಟೊಂದು ಆವರಿಸಿದ್ದ ಬಿಸ್ಲೆರಿಗೆ ಸವಾಲೊಡ್ಡುವವರು ಆಗ ಮಾತ್ರ ಅಲ್ಲ, ಈಗಲೂ ಕೂಡ ಯಾರೂ ಇಲ್ಲ. ಯಾವಾಗಲೂ ನನಗೆ ಬಿಸ್ಲೆರಿಯ ಬಗ್ಗೆ ಕುತೂಹಲ! ಈ ಬಿಸ್ಲೆರಿ ಹೆಸರು ಹೇಗೆ ಬಂದಿರಬಹುದು? ಯಾರು ಇದರ ಮಾಲೀಕರು? ಮಾರುಕಟ್ಟೆಯನ್ನು ಈ ಬಿಸ್ಲೆರಿ ಬ್ರ್ಯಾಂಡ್ ಅಶ್ಟೊಂದು ಅವರಿಸಿಕೊಂಡದ್ದಾದರೂ ಹೇಗೆ? ನಿಮಗೂ ಕುತೂಹಲ ಇದೆಯೇ? ಹಾಗಾದರೆ ಇನ್ಯಾಕೆ ತಡ. ಬನ್ನಿ ಬಿಸ್ಲೆರಿ ಬಗ್ಗೆ ತಿಳಿದುಕೊಳ್ಳುವ ನಾವು.
ಬಿಸ್ಲೆರಿ ಹೆಸರಿನ ಹಿನ್ನೆಲೆ
“ಅಮಾರೊ” ಎನ್ನುವುದು ಒಂದು ಇಟಾಲಿಯನ್ ಮದ್ಯವಾಗಿದ್ದು ಗಿಡಮೂಲಿಕೆಗಳಿಂದ ಇದನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಊಟದ ನಂತರ ಪಚನ ಕ್ರಿಯೆ ಸರಿಯಾಗಿ ಆಗಲು ಇದನ್ನು ಸೇವಿಸಲಾಗುತ್ತದೆ. ಸಾಮಾನ್ಯವಾಗಿ ಇದು ಸಿಹಿ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಇದನ್ನು ಮಾರುಕಟ್ಟೆಗೆ ಮೊದಲು ಪರಿಚಯಿಸಿದವರು ಪೆಲಿಸ್ ಎನ್ನುವ ಇಟಾಲಿಯನ್ ಉದ್ಯಮಿ, ಸಂಶೋದಕ ಮತ್ತು ರಸಾಯನಶಾಸ್ತ್ರಜ್ನ. “ಅಮಾರೊ” ಜೊತೆಗೆ ಅವರು ಬಾಟಲಿ ನೀರನ್ನು (ಕನಿಜಯುಕ್ತ ಶುದ್ದ ಕುಡಿಯುವ ನೀರು / Purified Mineral Water) ಇಟಲಿಯ ಮಾರುಕಟ್ಟೆಗೆ ಪರಿಚಯ ಮಾಡುತ್ತಾರೆ. ಅಂದ ಹಾಗೆ ಇವರ ಸಂಪೂರ‍್ಣ ಹೆಸರು ಪೆಲಿಸ್ ಬಿಸ್ಲೆರಿ. ನಿಜ ಬಿಸ್ಲೆರಿ ಬ್ರ್ಯಾಂಡನ್ನು ಹುಟ್ಟು ಹಾಕಿದವರೇ ಪೆಲಿಸ್ ಬಿಸ್ಲೆರಿ.
ಬಾರತಕ್ಕೆ ಬಿಸ್ಲೆರಿ ಕಾಲಿಟ್ಟದ್ದು
ನಿಮಗೆ ಜಯಂತಿಲಾಲ್ ಚೌಹಾಣ್ ಯಾರು ಅಂತ ಗೊತ್ತೇ? ಬಹುಶ್ಯ ಹೆಸರು ಕೇಳಿಲ್ಲ ಅನ್ನುವ ಉತ್ತರ ನಿಮ್ಮಿಂದ ಬರಬಹುದು. ಪಾರ‍್ಲೆ ಗೊತ್ತೇ ಅಂದ್ರೆ, ತಿಳಿಯಬಹುದು. ಏಕೆಂದರೆ ಪಾರ‍್ಲೆ ಹೆಸರು ಕೇಳದವರು ವಿರಳ ಅಲ್ಲವೇ! ನಿಜ ಪಾರ‍್ಲೆ ಅನ್ನೊದು ಬಾರತದಲ್ಲಿ ತುಂಬಾ ಪ್ರಸಿದ್ದವಾದ ಬ್ರ್ಯಾಂಡ್. ಪಾರ‍್ಲೆ ಕಂಪೆನಿಯನ್ನು ಹುಟ್ಟು ಹಾಕಿದವರೇ ಈ ಜಯಂತಿಲಾಲ್ ಚೌಹಾಣ್. ಪಾರ‍್ಲೆ ಕಂಪೆನಿಯ ಗೋಲ್ಡ್ ಸ್ಪಾಟ್, ಲಿಮ್ಕಾ, ಮಾಜ ಯಾರಿಗೆ ತಾನೇ ಗೊತ್ತಿಲ್ಲ? ಅಶ್ಟಕ್ಕೂ ಈ ಇಟಲಿಯ ಬಿಸ್ಲೆರಿಗೂ, ಬಾರತದ ಪಾರ‍್ಲೆಗೂ ಎಲ್ಲಿಂದ ಸಂಬಂದ ಅಂತ ಕೇಳ್ತೀರ ? ಸಂಬಂದ ಇದೆ. ಬಿಸ್ಲೆರಿ ಕಂಪೆನಿಯ ಮಾಲೀಕ ಪೆಲಿಸ್ ಬಿಸ್ಲೆರಿಯ ಕುಟುಂಬ ವೈದ್ಯರಾಗಿದ್ದವರು ಡಾಕ್ಟರ್ ರೊಸ್ಸಿ. ಇವರು ವೈದ್ಯ ಮಾತ್ರರಲ್ಲದೆ, ಬಿಸ್ಲೆರಿಯವರ ಆಪ್ತ ಮಿತ್ರರಾಗಿದ್ರು. ಪೆಲಿಸ್ ಬಿಸ್ಲೆರಿಯವರ ಮರಣದ ನಂತರ ಡಾಕ್ಟರ್ ರೊಸ್ಸಿ ಬಿಸ್ಲೆರಿ ಕಂಪೆನಿಯ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಾರೆ. ಡಾಕ್ಟರ್ ರೊಸ್ಸಿಗೆ ಒಬ್ಬ ವಕೀಲ ಮಿತ್ರ ಇರುತ್ತಾರೆ. ಅವರು ಈ ಬಿಸ್ಲೆರಿ ಕಂಪೆನಿಯ ಕಾನೂನು ಸಲಹೆಗಾರ ಕೂಡ ಆಗಿರುತ್ತಾರೆ. ಆ ವಕೀಲರ ಮಗನೆ ಕುಶ್ರೂ ಸುಂಟೂಕ್. ಇವರು ಕೂಡ ವ್ರುತ್ತಿಯಲ್ಲಿ ವಕೀಲರಾಗಿರುತ್ತಾರೆ. ಬಿಸ್ಲೆರಿ ಕಂಪೆನಿ ಬಾರತದಲ್ಲಿ ಬದ್ರವಾಗಿ ತಳವೂರುವಲ್ಲಿ ಇವರು ತುಂಬಾ ಮಹತ್ವದ ಪಾತ್ರ ವಹಿಸುತ್ತಾರೆ. ಆಗ ತಾನೇ ಬಾರತಕ್ಕೆ ಸ್ವತಂತ್ರ ಲಬಿಸಿತ್ತು ಮತ್ತು ಹೊಸ ಉದ್ಯಮಗಳು ದೇಶದಲ್ಲಿ ಆರಂಬವಾಗತೊಡಗಿದ್ದವು. ಡಾಕ್ಟರ್ ರೊಸ್ಸಿಯವರ ವ್ಯವಹಾರಿಕ ಮನಸು ಬಾರತದಲ್ಲಿ ನೀರಿನ ವ್ಯಾಪಾರದ ಹೊಸ ಸಾದ್ಯತೆಯ ಬಗ್ಗೆ ಹೊಸ ಕಲ್ಪನೆಯನ್ನು ಹುಟ್ಟುಹಾಕಿತ್ತು. ಆಗ ನೀರು ದಾರಾಳವಾಗಿತ್ತು. ಇವರ ಆಲೋಚನೆ ಕೇಳಿ ಎಲ್ಲರೂ ನಕ್ಕು ಇದು ನಿಮ್ಮ ಹುಚ್ಚು ನಿರ‍್ದಾರ ಅಂತ ಹೀಯಾಳಿಸಿಬಿಟ್ಟರು. ಆದರೆ ಡಾಕ್ಟರ್ ರೊಸ್ಸಿ ಗೆ ತಮ್ಮ ಕನಸಿನ ಬಗ್ಗೆ ಆತ್ಮವಿಶ್ವಾಸ ಇತ್ತು. ಗೆಳೆಯನ ಮಗ ಕುಶ್ರೂ ಸುಂಟೂಕ್ ಕೂಡ ಇವರ ಜೊತೆಗೂಡುತ್ತಾರೆ. ಆಗ ನೀರೇನೋ ದಾರಾಳ ಸಿಗುತಿತ್ತು ನಿಜ. ಆದರೆ ಶುದ್ದ ನೀರು ಹಲವು ಪಟ್ಟಣಗಳಲ್ಲಿ ಕನಸಿನ ಮಾತಾಗಿತ್ತು. ಇದು ರೊಸ್ಸಿ ಗೆ ಚೆನ್ನಾಗಿ ತಿಳಿದಿತ್ತು.
ಮನೆಮಾತಾದ ಬಿಸ್ಲೆರಿ
1965 ರಲ್ಲಿ ಡಾಕ್ಟರ್ ರೊಸ್ಸಿಯವರ ಕನಸನ್ನು ನನಸು ಮಾಡುತ್ತ ಮುಂಬಯಿ ನಗರದ ತಾಣೆಯಲ್ಲಿ, ಕುಶ್ರೂ ಸುಂಟೂಕ್ ಬಿಸ್ಲೆರಿ ವಾಟರ್ ಪ್ಲಾಂಟ್ ಅನ್ನು ಸ್ತಾಪಿಸುತ್ತಾರೆ. ಯಾರಾದ್ರೂ ನೀರನ್ನು ಮಾರಾಟ ಮಾಡಲು ಸಾದ್ಯನಾ? ನೀರನ್ನು ದುಡ್ಡು ಕೊಟ್ಟು ಯಾರಾದ್ರೂ ಕುಡಿಯುತ್ತಾರೆಯೇ ಅಂತ ಜನ ನಗತೊಡಗಿದರು. ಆದರೆ ದೇಶದ ಆರ‍್ತಿಕ ರಾಜದಾನಿಯಾದ ಮುಂಬಯಿಯಲ್ಲಿ ಆಗ ಶುದ್ದ ಕುಡಿಯುವ ನೀರು ಸಿಗುತ್ತಿರಲಿಲ್ಲ. ಬಡವರು ಗತ್ಯಂತರವಿಲ್ಲದೆ ಆ ಕಲುಶಿತ ನೀರನ್ನು ಕುಡಿಯುತಿದ್ರು. ಆದರೆ ಶ್ರೀಮಂತರು, ಪ್ರವಾಸಿಗರು, ಶುದ್ದ ನೀರಿಗಾಗಿ ಹಣ ತೆರಲು ಸಿದ್ದವಾಗಿದ್ರು. ಇದನ್ನು ಚೆನ್ನಾಗಿಯೇ ಅರಿತಿದ್ದ ಡಾಕ್ಟರ್ ರೊಸ್ಸಿ ತಮ್ಮ ಬಿಸ್ಲೆರಿ ನೀರನ್ನು ಪಂಚತಾರಾ ಹೋಟೆಲ್ ಗಳಿಗೆ ಪೂರೈಸತೊಡಗಿದರು. ನೋಡು ನೋಡುತಿದ್ದಂತೆ ಬಿಸ್ಲೆರಿ ಇಡೀ ಮಾರುಕಟ್ಟೆಯನ್ನು ಆವರಿಸಿಕೊಂಡುಬಿಟ್ಟಿತು. ಆದರೆ ಈ ಶುದ್ದ ನೀರನ್ನು ಜನಸಾಮಾನ್ಯರಿಗೂ ತಲುಪಲಿಸಬೇಕೆಂಬುದು ರೊಸ್ಸಿ ಮತ್ತು ಕುಶ್ರೂ ಸುಂಟೂಕ್ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ಕಾರ‍್ಯಪ್ರವ್ರುತ್ತರಾದರು, ಆದರೆ ಸ್ತಳೀಯ ಜನರ ನಾಡಿಮಿಡಿತ ಅರ‍್ತಮಾಡಿಕೊಳ್ಳೋದು ಸುಲಬವಾಗಿರಲಿಲ್ಲ. ಕಂಪೆನಿಯನ್ನು ವಿಸ್ತಾರಮಾಡಬೇಕೆನ್ನುವ ಕನಸು, ಅವರು ವಿದೇಶೀಯರಾದುದರಿಂದ ಸುಲಬದಲ್ಲಿ ಸಾದ್ಯವಾಗುವುದು ಕನಸಿನ ಮಾತಾಗಿತ್ತು. ಹೀಗಾಗಿ ಕಂಪೆನಿ ಲಾಬದಲ್ಲಿರುವಾಗಲೇ, ಅದನ್ನು ಸಮರ‍್ತರಿಗೆ ಮಾರಾಟ ಮಾಡಿ ಇಟಲಿಗೆ ಮರಳಲು ನಿರ‍್ದಾರಮಾಡುತ್ತಾರೆ ಡಾಕ್ಟರ್ ರೊಸ್ಸಿ. ಈ ಸುದ್ದಿ ಕಾಡ್ಗಿಚ್ಚಿನಂತೆ ಬಾರತದ ವ್ಯವಹಾರಿಕ ಮಾರುಕಟ್ಟೆಯಲ್ಲಿ ಹಬ್ಬುತ್ತದೆ. ಸುದ್ದಿ ಕಿವಿಗೆ ಬಿದ್ದೊಡನೆ, ಪಾರ‍್ಲೆ ಕಂಪನಿಯ ಜಯಂತಿಲಾಲ್ ಚೌಹಾಣ್ ರವರು ಬಿಸ್ಲೆರಿಯೊಂದಿಗೆ ಮಾತುಕತೆ ನಡೆಸಿ 1969 ರಲ್ಲಿ 4 ಲಕ್ಶ ರೂಪಾಯಿಗಳಿಗೆ ಬಿಸ್ಲೆರಿ ಕಂಪೆನಿಯನ್ನು ಕರೀದಿಸುತ್ತಾರೆ. ಪಾರ‍್ಲೆ ಕಂಪೆನಿ ಬಿಸ್ಲೆರಿಯನ್ನು ಕರೀದಿಸಿದ ನಂತರ ಬಿಸ್ಲೆರಿಗೆ ಹೊಸ ಪ್ರಾಣವಾಯು ದೊರಕುತ್ತದೆ.
ತಮ್ಮ ವಿನೂತನ ಮಾರುಕಟ್ಟೆಯ ತಂತ್ರದಿಂದ ಬಿಸ್ಲೆರಿ ಬಾರತದಲ್ಲಿ ಮನೆ ಮಾತಾಗುವಂತೆ ಮಾಡುತ್ತಾರೆ ಪಾರ‍್ಲೆಯ ರಮೇಶ್ ಚೌಹಾಣ್. “ಬಿಸ್ಲೆರಿ ಈಸ್ ವೆರಿ ವೆರಿ ಎಕ್ಸ್ಟ್ರಾರ‍್ಡಿನರಿ” ಎನ್ನುತ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸ್ರಶ್ಟಿಸುವ ಬಿಸ್ಲೆರಿ, ಜನ ಕುಡಿಯುವ ನೀರಿಗೆ ಮತ್ತೊಂದು ಪರ‍್ಯಾಯ ಹೆಸರೇ ಬಿಸ್ಲೆರಿ ಅಂತ ನಂಬುವಂತೆ ಮಾಡುತ್ತಾರೆ. ಜನ ಮಿನರಲ್ ವಾಟರ್ ಕೊಡಿ ಅಂತ ಕೇಳುವ ಬದಲು ಬಿಸ್ಲೆರಿ ಕೊಡಿ ಅಂತ ಅಂಗಡಿಯವರಲ್ಲಿ ಕೇಳುವಶ್ಟು ಪ್ರಸಿದ್ದಿ ಪಡೆಯುತ್ತೆ ಬಿಸ್ಲೆರಿ. ಆಮೇಲೆ ಅದೆಶ್ಟೋ ಕಂಪೆನಿಗಳು ಹುಟ್ಟಿ ಕೊಂಡ್ರೂ ಯಾರಿಂದಲೂ ಬಿಸ್ಲೆರಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ಆಗ ಕೆಲವು ಕಂಪೆನಿಗಳು ಬಿಸ್ಲೆರಿ ಹೆಸರನ್ನೇ ಸಲ್ಪ ಬದಲಾಯಿಸ್ಕೊಂಡು, ಬಿಸ್ಲೆರಿಯಂತೆ ಪ್ಯಾಕಿಂಗ್ ಮಾಡಿಕೊಂಡು ಮಾರುಕಟ್ಟೆಗೆ ಲಗ್ಗೆ ಇಡುತ್ತಾರೆ. ಆದರೆ ಸಲ್ಪ ತನ್ನ ರೂಪ ಬದಲಿಯಿಸಿಕೊಂಡ ಬಿಸ್ಲೆರಿ “ಪ್ರತಿ ಬಾಟಲು ನೀರು ಬಿಸ್ಲೆರಿ ಅಲ್ಲ” ಅನ್ನುವ ಜಾಹೀರಾತಿನ ಮೂಲಕ, ಮಾರುಕಟ್ಟೆಯಿಂದ ತನ್ನ ಪ್ರತಿಸ್ಪರ‍್ದಿಗಳು ಓಡಿ ಹೋಗುವಂತೆ ಮಾಡುತ್ತೆ. ಹೌದು ಬಿಸ್ಲೆರಿ ಕೇವಲ ಬ್ರ್ಯಾಂಡ್ ಅಲ್ಲ. ಶುದ್ದ ಕುಡಿಯುವ ನೀರಿಗೆ ಅದು ಪರ‍್ಯಾಯ ಅಂತ ಆಗಿಬಿಟ್ಟಿದೆ ಎಂದರೆ ತಪ್ಪೇನಿಲ್ಲ ಅಂತ ನನ್ನ ಅನಿಸಿಕೆ. ಬಿಸ್ಲೆರಿ ಪ್ರಸ್ತುತ ಬಾರತದಲ್ಲಿ 103 ಉತ್ಪಾದನಾದ ಗಟಕಗಳೊಂದಿಗೆ ವಿದೇಶಕ್ಕೆ ಲಗ್ಗೆ ಇಟ್ಟಿರೋದು ಮಾತ್ರವಲ್ಲ, 60% ದಶ್ಟು ದೇಶದ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಬಹುಶಹ ಬೇರೆ ಯಾವುದೇ ಕಂಪೆನಿಗಳು ಅದರ ನಾಯಕತ್ವಕ್ಕೆ ಸವಾಲೊಡ್ಡುವುದು ಕನಸಿನ ಮಾತು.
(ಚಿತ್ರ ಸೆಲೆ : bisleri.com )
ಇತ್ತೀಚಿನ ಅನಿಸಿಕೆಗಳು