ಬೇಸಿಗೆಕಾಲದ ಗೆಳೆಯ – ಪ್ಯಾನ್

– ಕಿಶೋರ್ ಕುಮಾರ್

“ಆ ಚಳಿನ ಬೇಕಾದ್ರೆ ಹೇಗೋ ತಡ್ಕೋಬೋದು, ಆದ್ರೆ ಈ ಸೆಕೆನ ತಡ್ಕೋಳಕ್ಕಾಗಲ್ಲ, ಸ್ವಲ್ಪ ಆ ಪ್ಯಾನ್ ಹಾಕು” ಈ ಮಾತನ್ನ ನಾವೆಲ್ರೂ ಕೇಳೆ ಇರ‍್ತೀವಿ. ಇನ್ನೇನು ಬರಲಿರುವ ಸೆಕೆ ಕಾಲದಲ್ಲಂತೂ ಕೇಳ್ತಾನೆ ಇರ‍್ತೀವಿ. ಚಳಿಗಾಲದಲ್ಲಿ ಸ್ವೆಟರ್ ಹಾಗು ರಗ್ಗು ನಮ್ಮನ್ನ ಬೆಚ್ಚಗೆ ಇಟ್ರೆ, ಬೇಸಿಗೆಗಾಲದಲ್ಲಿ ನಮ್ಮನ್ನ ತಣ್ಣಗೆ ಇಡೋದು ಈ ಪ್ಯಾನ್ ಗಳೇ. ಹೈ ಕ್ಲಾಸ್ ಜನರಿಗೆ ಎ.ಸಿ ಇದೆ, ಆದ್ರೆ ಇಂದಿಗೂ ಹೆಚ್ಚಿನ ಜನರಿಗಿರುವ ಒಂದೇ ಆಯ್ಕೆ ಅದು ಪ್ಯಾನ್.

ಹಬೆ ಪ್ಯಾನ್ ಗಳು

18 ನೇ ಶತಮಾನದವರೆಗೂ ಬೇಸಿಗೆಕಾಲಕ್ಕೆ ಜನರಿಗಿದ್ದ ಅಯ್ಕೆಯೆಂದರೆ ಬೀಸಣಿಕೆಗಳು. 1849 ರಲ್ಲಿ ಸ್ಕಾಟಿಶ್ ಎಂಜಿನಿಯರ್ ವಿಲಿಯಂ ಬ್ರಂಟನ್ ಅವರು ಹಬೆಯಿಂದ (steam) ಓಡುವ 6 ಮೀಟರ್ ದುಂಡಿ (Radius) ಇರುವ ಪ್ಯಾನ್ ಅನ್ನು ರೂಪುಗೊಳಿಸಿದರು (ಕಟ್ಟುಬಗೆ/design). ಇದನ್ನು 1851 ರಲ್ಲಿ ಲಂಡನ್ ನಲ್ಲಿ ನಡೆದ ಗ್ರೇಟ್ ಎಕ್ಸಿಬಿಶನ್ ನಲ್ಲಿ ತೋರ‍್ಪಡಿಸಲಾಯಿತು. ಮುಂದೆ ಜೇಮ್ಸ್ ನ್ಯಾಸ್ಮಿತ್, ತಿಯೋಪಿಲ್ ಗ್ಯುಬಲ್ ಹಾಗೂ ಜೆ.ಆರ್. ವಾಡಲ್ ಅವರುಗಳು ಈ ಟೆಕ್ನಾಲಜಿಯನ್ನು ಇನ್ನೂ ಚೆನ್ನಾಗಿ ತಿದ್ದಿದರು.

ಎಲೆಕ್ಟ್ರಿಕ್ ಪ್ಯಾನ್ ಗಳು

1882 ರಲ್ಲಿ ಅಮೇರಿಕಾದ ಸ್ಕಯ್ಲರ್ ವೀಲರ್ ಎಂಬ ಎಲೆಕ್ಟ್ರಿಕಲ್ ಎಂಜಿನಿಯರ್ ಮಿಂಚಿನಿಂದ (electricity) ಓಡುವ ಪ್ಯಾನನ್ನು ಕಂಡುಹಿಡಿದರು. ಇದನ್ನು ಅಮೇರಿಕಾದ ಕ್ರಾಕರ್ & ಕರ‍್ಟಿಸ್ ಎಲೆಕ್ಟ್ರಿಕ್ ಮೋಟಾರ್ ಕಂಪನಿಯು ಮಾರಾಟ ಮಾಡುತಿತ್ತು. 1882 ರಲ್ಲೇ ಪಿಲಿಪ್ ಡೀಲ್ ಎಂಬ ಮೆಕ್ಯಾನಿಕಲ್ ಎಂಜಿನಿಯರ್ ಸೂರಿನ (ceiling) ಪ್ಯಾನನ್ನು ಕಂಡುಹಿಡಿದರು. 1885 ರಲ್ಲಿ ನ್ಯೂಯಾರ‍್ಕ್ ನ ಸ್ಟವ್ಟ್ ಮೆಡೋಕ್ರಾಪ್ಟ್ & ಕಂಪನಿಯು ಮೇಜಿನ ಮೇಲಿಡಬಹುದಾದ ಪ್ಯಾನನ್ನು ಮಾರುಕಟ್ಟೆಗೆ ತಂದಿತು.

ಹೆಚ್ಚೆಚ್ಚು ಹೊಸಹಮ್ಮುಗೆಗಳಿಗೆ (innovation) ತೆರೆದುಕೊಳ್ಳುತ್ತಿದ್ದ 20 ನೇ ಶತಮಾನದಲ್ಲಿ ಹೆಂಡ (alcohol), ಎಣ್ಣೆ & ಸೀಮೆಎಣ್ಣೆಯಿಂದ ಓಡುವ ಪ್ಯಾನ್ ಗಳು ಕೂಡ ಬಂದವು. 1909 ರಲ್ಲಿ ಜಪಾನ್ ನ ಕೆ.ಡಿ.ಕೆ ಕಂಪನಿಯು ಮನೆಬಳಕೆಯ ಪ್ಯಾನ್ ಗಳನ್ನು ಮುಂದಿಟ್ಟಿತು. 1920 ರಲ್ಲಿ ಉಕ್ಕಿನಿಂದ ಮಾಡಿದ ಪ್ಯಾನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದರಿಂದ ಕಡಿಮೆ ಬೆಲೆಗೆ ಮನೆಬಳಕೆಯ ಪ್ಯಾನುಗಳು ಸಿಗುವಂತಾದವು. 1940 ರಲ್ಲಿ ಇಂಡಿಯಾದ ಕ್ರಾಂಪ್ಟನ್ ಗ್ರೀವ್ಸ್ ಕಂಪನಿಯು ಪ್ರಪಂಚದಲ್ಲೇ ಹೆಚ್ಚು ಪ್ಯಾನ್ ಗಳನ್ನು ಅಣಿಗೊಳಿಸುವ (manufacture) ಕಂಪನಿಯಾಗಿತ್ತು. 1950 ರಲ್ಲಿ ಕಣ್ ಸೆಳೆಯುವ ಹಾಗೂ ಬಣ್ಣಬಣ್ಣದ ಪ್ಯಾನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.

ಎ.ಸಿ. ಯ ಹೊಡೆತ

1960 ಹೊತ್ತಿಗೆ ಹೆಚ್ಚು ಮುನ್ನೆಲೆಗೆ ಬಂದಿದ್ದ ಏರ್ ಕಂಡಿಶನರ್ ಗಳ ಪಯ್ಪೋಟಿಯಿಂದ ಪ್ಯಾನ್ ಗಳ ಮಾರಾಟಕ್ಕೆ ಹೊಡೆತ ಬಿತ್ತು. ಆದರೆ ಏರ್ ಕಂಡಿಶನರ್ ಬಳಕೆಯಿಂದ ಮಿಂಚಿಗೆ (electricity) ಹೆಚ್ಚು ಬೆಲೆ ತೆರಬೇಕಾಗಿ ಬಂದದ್ದರಿಂದ 1970 ರ ಹೊತ್ತಿಗೆ ಮತ್ತೆ ಪ್ಯಾನ್ ಗಳು ಮುನ್ನೆಲೆಗೆ ಬಂದವು. ಮುಂದೆ ಇನ್ನೂ ಚೆನ್ನಾದ (decorated) ಮತ್ತು ಕಡಿಮೆ ಕಸುವು ಬಳಸುವ ಪ್ಯಾನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ನಮ್ಮನ್ನು ತಂಪಾಗಿಡುವ ಪ್ಯಾನ್ ಗಳು ಹೀಗೆ ದಿನದಿಂದ ದಿನಕ್ಕೆ ಬದಲಾವಣೆಗೆ ಒಳಪಡುತ್ತಾ, ಇನ್ನೂ ಮನೆಬಳಕೆಯಲ್ಲಿ ಗಟ್ಟಿಯಾಗಿ ಉಳಿದುಕೊಂಡಿವೆ.

(ಮಾಹಿತಿ ಹಾಗೂ ಚಿತ್ರಸೆಲೆ: wikipedia.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: