ಬೊಗಳಲಾರದ ನಾಯಿ – ಬಸೆಂಜಿ

– .

ಎಲ್ಲಾ ಪ್ರಾಣಿಗಳಿಗೂ ತನ್ನದೇ ಆದ ವಿಶೇಶ ವೈಶಿಶ್ಟ್ಯಗಳಿರುತ್ತವೆ. ನಾಯಿ ಬೊಗಳುತ್ತದೆ, ಸಿಂಹ ಗರ‍್ಜಿಸುತ್ತದೆ, ಆನೆ ಗೀಳಿಡುತ್ತದೆ ಹೀಗೆ ಪ್ರತಿಯೊಂದು ಪ್ರಾಣಿಯೂ ತನ್ನದೇ ಆದ ವಿಶಿಶ್ಟ ಶಬ್ದದಿಂದ ತನ್ನ ಇರುವನ್ನು ಪ್ರಕಟಿಸುತ್ತದೆ. ಅದರಲ್ಲೂ ನಾಯಿ ಸಾಕು ಪ್ರಾಣಿ. ಮುದ್ದಿಗಾಗಿ ಕೆಲವರು ನಾಯಿಯನ್ನು ಸಾಕಿದರೆ, ಕೆಲವರು ಮನೆಯ ರಕ್ಶಣೆಗಾಗಿ ಅದನ್ನು ಸಾಕುತ್ತಾರೆ. ಮುದ್ದಿನ ನಾಯಿಗೂ, ಮನೆಯ ರಕ್ಶಣೆಯ ನಾಯಿಗೂ ಅಜಗಜಾಂತರ ವ್ಯತಾಸವಿದೆ. ಆ ನಾಯಿಯ ತಳಿಯೇ ಬೇರೆ, ಈ ನಾಯಿಯ ತಳಿಯೇ ಬೇರೆ. ನಾಯಿಯ ತಳಿಗಳು ಬೇರೆ ಬೇರೆ ಆದರೂ ಅವುಗಳಲ್ಲಿ ಒಂದು ಗುಣ ಮಾತ್ರ ಸಮಾನವಾದದ್ದು. ಅದೇ ಬೊಗಳುವಿಕೆ! ಬೊಗಳುವುದು ನಾಯಿಯ ಹುಟ್ಟು ಗುಣ. ಅದೇ ನಾಯಿಯನ್ನು ಬೇರೆ ಪ್ರಾಣಿಗಳಿಂದ ಪ್ರತ್ಯೇಕಿಸುವುದೂ ಸಹ. ಅದರಿಂದಲೇ ನಾಯಿಯನ್ನು ಗುರುತಿಸುವುದೂ ಕೂಡ. ಹೊಸಬರನ್ನು ಕಂಡರೆ ‘ಬೊಗಳುವುದು ತನ್ನ ಕರ‍್ತವ್ಯ’ ಎಂದು ನಾಯಿ ಬೊಗಳಲು ಶುರು ಮಾಡುತ್ತದೆ. ಈ ನಾಯಿಯ ಲಕ್ಶಣವನ್ನು ಬಳಸಿಕೊಂಡು ಸಾಕಶ್ಟು ಉಪಮೆಗಳು ಕನ್ನಡದಲ್ಲಿ ಲಬ್ಯವಿವೆ.

ಬಸೆಂಜಿ ನಾಯಿ ತಳಿ

ಜಗತ್ತಿನಲ್ಲಿ ವಿವಿದ ರೀತಿಯ ನಾಯಿ ತಳಿಗಳಿವೆ. ಇವೆಲ್ಲವೂ ತಮ್ಮದೇ ಆದ ವಿಶಿಶ್ಟ ಲಕ್ಶಣಗಳನ್ನು ಹೊಂದಿವೆ. ವಿಲಕ್ಶಣ ವೈಶಿಶ್ಟ್ಯವನ್ನು ಹೊಂದಿರುವ ನಾಯಿಯೊಂದಿದೆ. ಅದು ನಾಯಿಯ ವಂಶಕ್ಕೆ ಕಳಂಕ. ಅದೇ ಬಸೆಂಜಿ. ಬಸೆಂಜಿ ಮದ್ಯ ಆಪ್ರಿಕಾದಲ್ಲಿ ಕಂಡುಬರುವ ನಾಯಿಯ ತಳಿ. ಬೊಗಳದೇ ಇರುವುದೇ ಈ ತಳಿಯ ವೈಶಿಶ್ಟ್ಯ. ಇದರ ದ್ವನಿ ಪೆಟ್ಟಿಗೆ ಅಸಾಮಾನ್ಯ ರಚನೆಯನ್ನು ಹೊಂದಿದ್ದು, ಬಸೆಂಜಿ ನಾಯಿ ಬೊಗಳಲು ಪ್ರಯತ್ನಿಸಿದರೆ ಸಾಮಾನ್ಯ ದನಿಯಿಂದ, ಜೋರು ದನಿಯವರೆಗೂ ಕ್ಶಣಕ್ಶಣಕ್ಕೂ ಅದರ ದನಿ ಬದಲಾಗುತ್ತಿರುತ್ತದೆ. ಈ ಕಾರಣದಿಂದಾಗಿ ಈ ತಳಿಯನ್ನು “ಬಾರ‍್ಕ್ ಲೆಸ್ ಡಾಗ್ಸ್” (ಬೊಗಳಲಾರದ ನಾಯಿಗಳು) ಎಂದು ಗುರುತಿಸಲಾಗುತ್ತದೆ.

ಬೊಗಳುವಿಕೆಯೊಂದರಲ್ಲೇ ಅಲ್ಲ, ಇನ್ನೂ ಅನೇಕ ಗುಣಲಕ್ಶಣಗಳಲ್ಲಿ ಇದು ಸಾಮಾನ್ಯ ನಾಯಿಗಿಂತ ಬೇರೆಯದೇ ಆಗಿದೆ. ಇವುಗಳ ಸಂತಾನೋತ್ಪತ್ತಿ ಅವದಿ ವರ‍್ಶದಲ್ಲಿ ಒಮ್ಮೆ ಮಾತ್ರ. ಬೇರೆ ತಳಿಗಳು ಒಂದು ಅತವಾ ಒಂದಕ್ಕಿಂತಾ ಹೆಚ್ಚಿನ ಸಂತಾನೋತ್ಪತ್ತಿ ಅವದಿಯನ್ನು ಹೊಂದಿರಬಹುದು. ಈ ತಳಿಯ ನಾಯಿಯ ಮನಸ್ತಿತಿ ಸಹ, ಮಾನವನ ಮನಸ್ತಿತಿಯಂತೆ, ಕ್ಶಣ ಕ್ಶಣಕ್ಕೂ ಬದಲಾಗುತ್ತಿರುತ್ತದೆ. ಅದರ ಮನಸ್ತತಿ ಹೀಗೇ ಇರುತ್ತದೆ ಎಂದು ಯಾವ ಸಮಯದಲ್ಲೂ ಅಂದಾಜಿಸಲು ಸಾದ್ಯವೇ ಇಲ್ಲ. ಆಯಾ ಸಮಯದ ಮನಸ್ತಿತಿಗೆ ಅನುಗುಣವಾಗಿ ಬಸೆಂಜಿ ನಾಯಿಗಳು ಅರಚಾಡುತ್ತವೆ ಇಲ್ಲವೇ ಗುರುಗುಟ್ಟುತ್ತವೆ. ಬಸೆಂಜಿ ನಾಯಿಯ ದೇಹ ರಚನೆಯಲ್ಲೂ ವಿಬಿನ್ನವಾಗಿದೆ. ಇದು ಅತ್ಯುತ್ತಮ ಕ್ರೀಡಾಪಟುವಿನ ದೇಹಾದಾರ‍್ಡ್ಯ ಹೊಂದಿರುತ್ತದೆ. ತಲೆಯ ಬಾಗವನ್ನು ಗಮನಿಸಿದರೆ, ಹಣೆಯ ಸುತ್ತಾ ಚರ‍್ಮ ಸುಕ್ಕುಗಟ್ಟಿದಂತಿರುತ್ತದೆ. ಅದರ ಮೂತಿಯು ಅದರ ತಲೆಬುರುಡೆಗಿಂತಾ ಚಿಕ್ಕದಾಗಿರುತ್ತದೆ. ಬಾದಾಮಿ ಬೀಜದಾಕಾರದ ಕಣ್ಣುಗಳು, ಗಾಡ ಕಂದು ಮತ್ತು ಗಾಡ ನಸುಕಂದು ಬಣ್ಣವನ್ನು ಹೊಂದಿರುತ್ತದೆ. ಇದರ ಕಿವಿ ನೇರವಾಗಿರುತ್ತದೆ ಹಾಗೂ ಬಾಲ ಬೇರೆಲ್ಲಾ ನಾಯಿಗಳಂತೆಯೇ ಇರುತ್ತದೆ.

ಬಸೆಂಜಿ ನಾಯಿಯ ವಿಶೇಶತೆ

ಬಸೆಂಜಿ ನಾಯಿ ಬಹಳವಾಗಿ ತನ್ನ ಗಮನವನ್ನೂ ಕೇಂದ್ರೀಕರಿಸುತ್ತದೆ ಮತ್ತು ಸದಾಕಾಲ ಕುತೂಹಲದಿಂದ ಗಮನಿಸುತ್ತದೆ. ಮಕ್ಕಳೊಂದಿಗೆ ಬೆರೆತು ತಾನೂ ಆಡುವುದರೊಂದಿಗೆ, ಮಕ್ಕಳಿಗೂ ಮನರಂಜನೆ ನೀಡುತ್ತದೆ. ಬಸೆಂಜಿ ನಾಯಿ ಬಹಳ ವಿದೇಯ. ತರಬೇತುದಾರ ಹೇಳಿದಂತೆ ಕೇಳುತ್ತಿರುತ್ತದೆ. ಮನಸ್ತಿತಿ ಬದಲಾದರೆ, ತರಬೇತಿ ನೀರಸವಾದರೆ, ಹೇಳದೆ ಕೇಳದೆ ಆ ಜಾಗವನ್ನು ತೊರೆದು ಹೊರಟು ಬಿಡುತ್ತದೆ.

ಈ ತಳಿಯ ಮೂಲ ಅರಣ್ಯವಾದ ಹಿನ್ನೆಲೆಯಲ್ಲಿ ಈ ನಾಯಿ ಸ್ವತಂತ್ರವಾಗಿ ತಿರುಗಾಡಲು, ಸುತ್ತಾಡಲು, ಆಟವಾಡಲು ಇಶ್ಟ ಪಡುತ್ತದೆ. ಅರಣ್ಯದಲ್ಲಿ ಬದುಕಬೇಕಾದಲ್ಲಿ ತೀಕ್ಶ್ಣವಾದ ಇಂದ್ರಿಯಗಳಿರಬೇಕು. ಇಂದ್ರಿಯಗಳಿಂದ ಗ್ರಹಿಸಿದ ಆಪತ್ತಿನಿಂದ ಪಾರಾಗಲು ಸೂಕ್ಶ್ಮವಾದ ಬುದ್ದಿ ಸಹ ಅಶ್ಟೇ ಮುಕ್ಯ. ಇವರೆಡೂ ಬಸೆಂಜಿಯಲ್ಲಿ ಅದಿಕವಾಗಿದೆ. ಅಶ್ಟೇ ಅಲ್ಲದೆ ಇದು ಬೇಟೆಯಲ್ಲೂ ಪಳಗಿದ ನಾಯಿ. ಬಸೆಂಜಿಯ ಮತ್ತೊಂದು ವಿಶೇಶತೆಯೆಂದರೆ ಸಾಮಾನ್ಯ ನಾಯಿಯ ದೇಹದ ವಾಸನೆಯಂತೆ ಇದರ ದೇಹ ವಾಸನೆಯಿಂದ ಕೂಡಿರುವುದಿಲ್ಲ. ಏಕೆಂದರೆ ಬಸೆಂಜಿ ನಾಯಿ ತನ್ನ ದೇಹದ ಮೇಲೆ ಸಣ್ಣ ಸಣ್ಣ ಕೂದಲುಗಳನ್ನು ಹೊಂದಿದ್ದು, ಬೆಕ್ಕಿನಂತೆ ಇದೂ ಸಹ ಕೂದಲನ್ನು ಆಗಾಗ್ಗೆ ನಾಲಿಗೆಯಿಂದ ಸ್ವಚ್ಚಗೊಳಿಸುವ ಕಾರಣ, ಇದರ ದೇಹ ವಾಸನಾ ರಹಿತವಾಗಿರುತ್ತದೆ. ಕನ್ನಡದಲ್ಲಿ ಗಾದೆಯೊಂದಿದೆ. ‘ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ’ ಎಂದು. ಬಸೆಂಜಿ ನಾಯಿಗೆ ಬೊಗಳಲು ಸಾದ್ಯವಿಲ್ಲದ ಕಾರಣ ಇದು ಬರೀ ಕಚ್ಚುತ್ತದೆಯೇ? ಎಲ್ಲಾ ಗಾದೆಗಳು, ಎಲ್ಲಾ ಸಮಯದಲ್ಲೂ ಸರಿಯಾಗಿ ಹೊಂದುತ್ತವೆ ಎಂದೇನು ಇಲ್ಲ. ಬಹತೇಕ ಸರಿಯಿರುತ್ತವೆ. ಕೆಲವೊಮ್ಮೆ ಗಾದೆ ಸಹ ಸುಳ್ಳಾಗಬಹುದು. ಬಸೆಂಜಿ ನಾಯಿಯೂ ಸಾಮಾನ್ಯ ನಾಯಿಯಂತೆ ಆತ್ಮ ರಕ್ಶಣೆಗಾಗಿ ಮಾತ್ರ ಕಚ್ಚುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: mindblowing-facts.org, akc.org, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: