ಮಲೆನಾಡಿನ ಬಗೆ ಬಗೆಯ ಅಣಬೆಗಳು
ಮಲೆನಾಡಿನಲ್ಲಿ ಮುಂಗಾರು ಮಳೆ ಅತವ ಮುಂಗಾರಿನ ಮುಂಚಿನ ಬೇಸಿಗೆಯ ಮಳೆ ಬಿದ್ದೊಡನೆ ಸಾಕಶ್ಟು ಬಗೆಬಗೆಯ ಅಣಬೆಗಳು ಕಾಣಸಿಗುತ್ತವೆ. ಕೆಲವು ನೆಲದಲ್ಲಿ ಕಂಡರೆ, ಇನ್ನೂ ಕೆಲವು ಮರಗಳಲ್ಲಿ, ನೆಲದಲ್ಲಿ ಬಿದ್ದಿರುವ ಒಣ ಮರಗಳ ಮೇಲೆ ಏಳುತ್ತವೆ. ಜಗತ್ತಿನಲ್ಲಿ ಸಿಗುವ ಹಲವಾರು ಬಗೆಯ ಅಣಬೆಗಳು ಸಾಮಾನ್ಯವಾಗಿ ವಿಶಕಾರಿಯಾಗಿರುತ್ತವೆ. ಆದರೆ ಮಾನವ ಹಳೆಯ ತಲೆಮಾರುಗಳಿಂದ ತಿನ್ನಬಹುದಾದ ಅಣಬೆಗಳನ್ನು ಗುರುತಿಸುವ ಕಲೆಯನ್ನು(Trial and error methodology) ಸಿದ್ದಿಸಿಕೊಂಡು ಮುಂದಿನ ತಲೆಮಾರುಗಳಿಗೆ ಈ ಅರಿವನ್ನು ದಾಟಿಸುತ್ತಾ ಬಂದಿದ್ದಾನೆ. ಮಲೆನಾಡಿನಲ್ಲಿ ಜನರು ಹಲವಾರು ಬಗೆಯ ತಿನ್ನಬಹುದಾದ ಅಣಬೆಗಳನ್ನು ತಮ್ಮ ಆಹಾರ ಸಂಸ್ಕ್ರುತಿಯ ಬಾಗವಾಗಿಸಿಕೊಂಡಿದ್ದಾರೆ. ಈ ಅಣಬೆಗಳನ್ನು ಗುರುತಿಸುವ ಕಲೆ ಬಹುತೇಕ ಮಲೆನಾಡಿಗರಿಗೆ ಗೊತ್ತಿರುತ್ತದೆ.
ಅಣಬೆಗಳನ್ನು ಮಲೆನಾಡಿನ ಅಡುನುಡಿಯಲ್ಲಿ ‘ಅಳಬಿ’ ಅತವಾ ‘ಅಳಬು’ ಎಂದು ಕರೆಯುತ್ತಾರೆ ಮತ್ತು ಈ ಅಳಬಿಗಳು ಏಳುವ ಜಾಗದ ಮೇಲೆ, ಅವುಗಳ ಬಣ್ಣ-ಆಕಾರದ ಮೇಲೆ ಸ್ತಳೀಯ ಜನರು ಅವುಗಳನ್ನು ಹೆಸರಿಸಿದ್ದಾರೆ. ಮಲೆನಾಡಿನಲ್ಲಿ ಹೆಕ್ಕಿ ತಂದ ಅಣಬೆಗಳನ್ನು ಸೋಸಿ(ಸ್ವಚ್ಚ ಮಾಡಿ) ಬರಿ ಉಪ್ಪು-ಕಾರ ಹಾಕಿ ಎಣ್ಣೆಯಲ್ಲಿ ಹುರಿದು, ತರಕಾರಿ ಸಾರಿಗೆ ಕಾಳುಗಳ ರೀತಿ ಬಳಸಿ, ಅತವಾ ಮಾಂಸದ ಸಾರಿಗೆ ಮಾಡುವ ಹಾಗೆ ಮಸಾಲೆ ಸಿದ್ದಪಡಿಸಿ ಸಾರು ಮಾಡಿ ತಿನ್ನುತ್ತಾರೆ. ಈ ಕೆಳಗಿನ ಪಟ್ಟಿಯಲ್ಲಿ ಮಲೆನಾಡಿನಲ್ಲಿ ಸಿಗುವ ಕೆಲವು ಬಗೆಯ ತಿನ್ನಬಹುದಾದ ಕಾಡು ಅಳಬಿಗಳನ್ನು ನೋಡಬಹುದು.
ಚುಳ್ಳಳಬಿ:
ಇವುಗಳು ಗದ್ದೆಯ ಅಂಚಿನಲ್ಲಿ, ತೋಟದ ಬದಿಯಲ್ಲಿ, ಮನೆಯ ಸುತ್ತಮುತ್ತಲಿನ ಜಾಗಗಳಲ್ಲಿ ಏಳುತ್ತವೆ. ಇದು ತುಂಬಾ ಸಾಮಾನ್ಯವಾಗಿ ಸಿಗುವ ಅಳಬಿಯಾಗಿದ್ದು, ಇದಕ್ಕೆ ಎಣ್ಣೆ ಅಳಬಿ ಎಂದು ಕೂಡ ಕರೆಯುತ್ತಾರೆ. ಇವು ಹೆಚ್ಚಾಗಿ ಒಂದೆರಡು ಅತವಾ ಮೂರ‍್‍ನಾಲ್ಕು ಸಿಗುತ್ತವೆ. ಹಾಗಾಗಿ ಇವನ್ನು ಹುರಿದು ತಿನ್ನುವುದೇ ಹೆಚ್ಚು.
ಹೆಗ್ಗಲಳಬಿ:
ಈ ಅಳಬನ್ನು ಅಳಬುಗಳ ರಾಜ ಎಂದೇ ಕರೆಯಬಹುದು. ಇವುಗಳ ಉದ್ದನೆಯ ಬೇರು ನೆಲದಿಂದ ಒಂದೆರಡು ಅಡಿಗಳಶ್ಟು ಆಳಕ್ಕೆ ಇಳಿಯುತ್ತವೆ. ಹೆಗ್ಗಲಳಬಿ ಮಳೆಗಾಲದಲ್ಲಿ ಗುಡುಗು ಬಂದಾಗ ಏಳುತ್ತವೆ ಎನ್ನುವ ಸ್ತಳೀಯ ನಂಬಿಕೆ ಇದೆ. ಗುಡುಗು ಬಂದ ಮರುದಿನ ಎಲ್ಲರೂ ಕಾಡಿಗೆ ಹೋಗಿ ಹೆಗ್ಗಲಳಬಿ ಹುಡುಕುತ್ತಾರೆ. ಇದನ್ನು ಮಾಂಸದ ಸಾರಿನ ಹಾಗೆ ಮಾಡಿ ತಿನ್ನುತ್ತಾರೆ ಮತ್ತು ಈ ಅಳಬು ಬಹಳ ರುಚಿಕರ ಕೂಡ!
ಕೂಳೆ ಅಳಬಿ:
ಹಳದಿ ಬಣ್ಣದ ಈ ಅಳಬಿನ ಒಳಗೆ ಕಪ್ಪು ಬಾಗವಿರುತ್ತದೆ. ಹಳದಿ ಬಾಗವನ್ನು ಸಿಪ್ಪೆಯ ಹಾಗೆ ತೆಗೆದು ಸೋಸಿ ಒಳಗಿನ ಕಪ್ಪು ಬಾಗವನ್ನು ಸಾರು ಮಾಡಿ ತಿನ್ನುತ್ತಾರೆ.
ಅಡಕೆ ಅಳಬು:
ಮಲೆನಾಡಿನಲ್ಲಿ ಅಡಿಕೆ ಸುಲಿತ ಮಾಡಿದ ನಂತರ ಉಳಿಯುವ ಸಿಪ್ಪೆಯನ್ನು ಒಂದ್ಕಡೆ ರಾಶಿ ಹಾಕಲಾಗುತ್ತದೆ ಆ ಅಡಿಕೆ ಸಿಪ್ಪೆಯ ರಾಶಿಯಲ್ಲಿ ಒಂದೆರಡು ತಿಂಗಳ ನಂತರ (ಬಹುಶ ಒಂದು ಹದ ಮಳೆ ಬಿದ್ದಮೇಲೆ) ಏಳುವ ಅಳಬೆಗೆ ‘ಅಡಿಕೆ ಅಳಬು’ ಎನ್ನುವರು.
ಅಕ್ಕಿ ಅಳಬು:
ಕಾಡಿನ ದರಗಿನ(ಎಲೆ-ಕಡ್ಡಿ) ನೆಲದ ಮೇಲೆ ಅಕ್ಕಿ/ನುಚ್ಚು ಚೆಲ್ಲಿದಂತೆ ರಾಶಿ ರಾಶಿಯಾಗಿ ಇವು ಏಳುತ್ತವೆ ಹಾಗಾಗಿ ಬಿಳಿ ಬಣ್ಣದ ಇವನ್ನು ಅಕ್ಕಿ ಅಳಬು ಎಂದು ಕರೆಯುತ್ತಾರೆ. ಈ ಅಕ್ಕಿ ಅಳಬಿಗೆ ನುಚ್ಚಳಬು/ದರಗಿನ ಅಳಬು ಎಂದು ಕೂಡ ಕರೆಯುತ್ತಾರೆ. ಇವು ಸಿಗುವುದು ರಾಶಿ ಆದರೂ ಸಾರು ಅತವಾ ಹುರುಕಲು ಮಾಡಿದ ನಂತರ ಬಹಳ ಕಡಿಮೆಯಾಗಿ ಕಾಣಿಸುತ್ತವೆ. ಅಂದರೆ ಒಂದು ಬುಟ್ಟಿ ಅಳಬು ಸಿಕ್ಕರೂ ಹುರುಕಲು ಮಾಡಿದ ಮೇಲೆ ಸಿಗುವುದು ಒಂದು ಕಯ್ ಹಿಡಿಯಶ್ಟೆ!
ಹಯ್ಗನ ಅಳಬಿ:
ಇವು ಕಾಡಿನಲ್ಲಿ ಒಂದು ಜಾತಿಯ ಮರದ ಕೆಳಗೆ ಕಾಣಸಿಗುತ್ತವೆ. ಇವನ್ನು ಸಾರು ಮಾಡಿ ತಿನ್ನುತ್ತಾರೆ.
ಬೋಗಿ ಅಳಬು:
ಕಾಡಿನ ಬೋಗಿ ಮರಗಳ ಬುಡಬಾಗದಲ್ಲಿ ಇವು ಹೆಚ್ಚಾಗಿ ಏಳುತ್ತವೆ.
ಹುಲ್ಲಳಬು:
ಎಲ್ಲಾದರೂ ಹುಲ್ಲು ರಾಶಿ ಇದ್ದರೆ ಅವುಗಳ ಮೇಲೆ ಏಳುವ ಈ ಬಗೆಯ ಅಳಬೆಗೆ ಹುಲ್ಲಳಬು ಎನ್ನುವರು. ಇವು ನೋಡಲು ಕೊಂಚ ಚಿಕ್ಕದಾಗಿ ಚುಳ್ಳಳಬಿಯ ಹಾಗೆ ಕಾಣುತ್ತವೆ ಮತ್ತು ಇವು ಗುಡ್ಡೆಯಾಗಿ ಏಳುತ್ತವೆ.
ಕುಕುಡಿ ಅಳಬಿ:
ಮೂಡಿಗೆರೆ-ಸಕಲೇಶಪುರ ಬಾಗದಲ್ಲಿ ಈ ಅಳಬುಗಳು ಹೆಚ್ಚಾಗಿ ಕಾಣಸಿಗುತ್ತವೆ.
ಹಂದಿ ಅಣಬೆ:
ಗಾತ್ರದಲ್ಲಿ ಸ್ವಲ್ಪ ದೊಡ್ಡ, ಬಣ್ಣದಿಂದಾಗಿ ಇವನ್ನು ಹಂದಿ ಅಳಬಿ ಎಂದು ಕರೆದಿರಬಹುದು.
ಈ ರೀತಿಯಾಗಿ ಇಂತಹ ಬಗೆ ಬಗೆಯ ಅಣಬೆಗಳು ಮಲೆನಾಡ ಆಹಾರ ಸಂಸ್ಕ್ರುತಿಯಲ್ಲಿ ತನ್ನದೇ ಆದ ಸ್ತಾನ ಪಡೆದುಕೊಂಡಿವೆ.
ಅತ್ಯುತ್ತಮ ಸಂಗ್ರಹ. ಚಿತ್ರ ಸಮೇತ ಮಾಹಿತಿ ಸಂಗ್ರಹ ಪ್ರಶಂಸನಾರ್ಹ. ಇಷ್ಟೊಂದು ವೈವಿಧ್ಯಮಯ ಅಣಬೆಗಳ ಬಗ್ಗೆ ಮಾಹಿತಿ ಇರಲಿಲ್ಲ. ಮಲೆನಾಡಿನ ಪ್ರಕೃತಿಯಷ್ಟೇ, ಅಲ್ಲಿನ ಆಹಾರ ಸಂಸ್ಕೃತಿಯು ಸ್ವಾರಸ್ಯಕರ ಎನಿಸುತ್ತದೆ. ಮತ್ತು ಅಷ್ಟೇ ಚೆಂದ ಕೂಡ.