ಅಮಾಲ್ಪಿ ಕರಾವಳಿಯ ವೈವಿದ್ಯಮಯ ಬಣ್ಣಗಳು

– .

ಅಮಾಲ್ಪಿ ಕರಾವಳಿಯು ದಕ್ಶಿಣ ಇಟಲಿಯ ಸೊರಂಟೈನ್ ಪೆನಿನ್ಸೂಲಾದ ಕರಾವಳಿಯಾಗಿದೆ. ಈ ಸವಿಸ್ತಾರವಾದ ಕರಾವಳಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ನೈಸರ‍್ಗಿಕ ದ್ರುಶ್ಯಾವಳಿಗಳು.

ಅಮಾಲ್ಪಿ ಕರಾವಳಿಯು ತನ್ನ ಬೂಪ್ರದೇಶದಲ್ಲಿ ಅನೇಕ ಅತ್ಯುತ್ತಮ ಬೆಳೆಗಳನ್ನು ಬೆಳೆದಿದೆ. ಇದಕ್ಕೆ ಅಲ್ಲಿನ ಹವಾಮಾನ, ಸಮುದ್ರದ ಪ್ರಯೋಜನಕಾರಿ ಪ್ರಬಾವ ಮತ್ತು ಅಲ್ಲಿನ ನಿವಾಸಿಗಳ ಕೆಲಸ ಮೂಲ ಕಾರಣ. ಈ ಬೌಗೋಳಿಕ ಪ್ರದೇಶದಿಂದ ಬರುವ ವರ‍್ಣರಂಜಿತ ಆಹಾರಗಳ ಕೆಲವು ಉದಾಹರಣೆ ಇಲ್ಲಿದೆ. ಇಲ್ಲಿನ ಪ್ರಮುಕ ಹಣ್ಣೆಂದರೆ ಅದು ಹಳದಿ ನಿಂಬೆ. ಇದು ಉದ್ದನೆಯ ಆಕಾರವನ್ನು ಹೊಂದಿದೆ. ಹಾಗಾಗಿ ಈ ಹಳದಿ ನಿಂಬೆಯನ್ನು ಸ್ಪುಸಾಟೊ ಎಂದು ಕರೆಯುತ್ತಾರೆ. ಇದಕ್ಕೆ 2001ರಲ್ಲಿ ಐಜಿಪಿ ನೀಡಲಾಗಿದೆ. ಐಜಿಪಿ ಉತ್ಕ್ರುಶ್ಟ ಗುಣಮಟ್ಟದ ಉತ್ಪನ್ನವನ್ನು ಕಾತರಿಪಡಿಸುತ್ತದೆ. ಈ ಹಳದಿ ನಿಂಬೆಯ ಮೇಲಿನ ಸಿಪ್ಪೆ ತೀವ್ರವಾದ ಪರಿಮಳ ಮತ್ತು ರುಚಿಯನ್ನು ಹೊಂದಿದ್ದು, ಇದನ್ನು ಹಾಗೆಯೇ ಸೇವಿಸಬಹುದು. ಇದರಲ್ಲಿ ಎಲ್ಲಾ ನಿಂಬೆಯಲ್ಲಿರುವಂತೆ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಪಾಸ್ಟಾ, ಸಾಲಡ್ ಗಳನ್ನು ಸುವಾಸನೆಗೊಳಿಸಲು, ಕೇಕ್, ಐಸ್ ಕ್ರೀಂ ಮತ್ತು ಪಾನಕಗಳ ತಯಾರಿಕೆಯಲ್ಲೂ ವ್ಯಾಪಕವಾಗಿ ಬಳಸಲಾಗುತ್ತದೆ. ಸುಪ್ರಸಿದ್ದ ಲಿಮೊನ್ಸೆಲ್ಲೂ ಉತ್ಪಾದನೆಯಲ್ಲೂ ಇದನ್ನು ಬಳಸಲಾಗುತ್ತದೆ. ಇದನ್ನು ಬೆಳೆಯುವ ಪ್ರದೇಶವೆಲ್ಲಾ ಕಣ್ಣಿಗೆ ಆಹ್ಲಾದಕರವಾದ ಅರಿಶಿಣ ಬಣ್ಣದಿಂದ ಕಂಗೊಳಿಸುತ್ತದೆ.

ಅಮಾಲ್ಪಿ ಕರಾವಳಿಯಲ್ಲಿ ಬೆಳೆಯುವ ಕೆಂಪು ಟೊಮೊಟೊಗಳು ವಿಟಮಿನ್ ಸಿ ಮತ್ತು ವಿಟಮಿನ್ ಎ ನಲ್ಲಿ ಸಮ್ರುದ್ದವಾಗಿದೆ. ಇವುಗಳನ್ನು ಕೋರ‍್ಬರಾ ಅತವಾ ಕಾರ‍್ಬರಿನೋ ಎಂದು ಕರೆಯುತ್ತಾರೆ. ಇದರ ರುಚಿ ಬಯಂಕರ ಕಹಿ. ಇದನ್ನು ಬೆಳೆಯುವ ಪ್ರದೇಶವೆಲ್ಲಾ ಕೆಂಪಾಗಿ ಕಂಡು ಬರುತ್ತದೆ. ಕೊನೆಯದಾಗಿ, ಅಮಾಲ್ಪಿ ಕರಾವಳಿಯಲ್ಲಿ ದ್ರಾಕ್ಶಿ ಸಹ ಬೆಳೆಯಲಾಗುತ್ತದೆ. ಇದರ ರುಚಿ ಸಿಹಿ ಮತ್ತು ಪರಿಮಳ ಸಹ ಆಹ್ಲಾದಕರವಾಗಿರುತ್ತದೆ. ಇದನ್ನು ಬೆಳೆಯುವ ಪ್ರದೇಶವೆಲ್ಲಾ ಹಸಿರಿನಿಂದ ತುಂಬಿದಂತೆ ಕಂಗೊಳಿಸುತ್ತದೆ. ಇಲ್ಲಿ ಬೆಳೆದ ಬಹಳಶ್ಟು ದ್ರಾಕ್ಶಿ ವೈನ್ ತಯಾರಿಕೆಯಲ್ಲಿ ಕೊನೆಗೊಳ್ಳುತ್ತದೆ. ದೂರಕ್ಕೆ ಬಣ್ಣ ಬಣ್ಣಗಳಿಂದ ಕಂಗೊಳಿಸುವ ಬೂ ಪ್ರದೇಶ ನಿಜಕ್ಕೂ ಕಣ್ಣುಗಳಿಗೆ ಹಬ್ಬ. ನಿಂಬೆಯ ಹಳದಿ, ದ್ರಾಕ್ಶಿಯ ಹಸಿರು, ಟೊಮೊಟೊದ ಕೆಂಪು ಬಣ್ಣ, ಬಿಳಿ ಗುಲಾಬಿ ಮತ್ತು ಇತರೆ ಬಣ್ಣಗಳಿಂದ ಅಲಂಕ್ರುತವಾದ ಮನೆಗಳು, ಬೆಳ್ಳಿ ಬೂದು ಬಣ್ಣದ ಮೀನುಗಳು ಹೀಗೆ ಬಿಳಿಯ ಕಿರಣದಲ್ಲಿ ಅಡಗಿರುವ ಎಲ್ಲಾ ಬಣ್ಣಗಳನ್ನು ಇಲ್ಲಿ ಕಾಣಬಹುದು. ಇದನ್ನು ನೆಲದ ಮೇಲಿನ ಸ್ವರ‍್ಗ ಎನ್ನಲು ಅಡ್ಡಿಯಿಲ್ಲ.

ಇಲ್ಲಿನ ಚಿಕ್ಕ ಪಟ್ಟಣಗಳ ಮೂಲಕ ವಾಹನ ಚಾಲನೆ ಮಾಡುವುದು ಒಂದು ರೀತಿಯ ಸಾಹಸ. ಒಂದು ಬದಿಯಲ್ಲಿ ಬಂಡೆಗಳು, ಮತ್ತೊಂದು ಬದಿಯಲ್ಲಿ ಸುಂದರವಾದ ಕಡಲು. ಹಾದು ಹೋಗುವ ರಸ್ತೆಯಲ್ಲಿ ಹತ್ತಾರು ಪರ‍್ವತಗಳಲ್ಲಿನ ಸುರಂಗಗಳು, ಮದ್ಯೆ ಮದ್ಯೆ ಕಿರಿದಾಗುವ ಮತ್ತು ಮತ್ತೆ ಅಗಲವಾಗುವ ರಸ್ತೆಗಳು, ಪರ‍್ವತಗಳ ಮತ್ತು ಕಡಲಿನ ವಿಹಂಗಮ ನೋಟವನ್ನು ಅನಂದಿಸಲು ಈ ಕರಾವಳಿಯ ರಸ್ತೆಯಲ್ಲಿ ಸಾಕಶ್ಟು ಸ್ತಳಗಳಿವೆ. ರಸ್ತೆ ಬದಿಯ ಹೋಟೆಲ್ಗಳಲ್ಲಿ ರುಚಿಕರವಾದ ಕಡಲಿನ ಆಹಾರ ಹಾಗು ಅಲ್ಲಿ ವಿಶೇಶ ವೈನ್ ಸಹ ಸಿಗುತ್ತದೆ. ಪ್ರವಾಸಿಗರಿಗೆ ಪ್ರಕ್ರುತಿಯನ್ನು ಸವಿಯಲು ಇದಕ್ಕಿಂತ ಮತ್ತೇನು ಬೇಕು?

(ಮಾಹಿತಿ ಮತ್ತು ಚಿತ್ರ ಸೆಲೆ: unsplash.com, sothebysrealty.com, unusualplaces.org, wevillas.com, ciaoamalfi.com, anikkabecker.com

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ನನ್ನ ಈ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *