ನಿದಿವನ – ಏನಿದರ ನಿಗೂಡತೆ?

– .


ನಿದಿವನ ಬಗವಾನ್ ಶ್ರೀ ಕ್ರಿಶ್ಣನ ಜನ್ಮ ಸ್ತಳವಾದ ಬ್ರುಂದಾವನದಲ್ಲಿರುವ ದೇವಾಲಯ. ಇದರೊಂದಿಗೆ ರಹಸ್ಯ ಮತ್ತು ನಿಗೂಡತೆಯು ಮಿಳಿತವಾಗಿದೆ. ಈ ದೇವಾಲಯಕ್ಕೆ ಬಗವಾನ್ ಶ್ರೀ ಕ್ರಿಶ್ಣ ಪ್ರತಿ ರಾತ್ರಿಯೂ ಬೇಟಿ ನೀಡುತ್ತಾನೆ ಹಾಗೂ ರಾತ್ರಿ ರಾಸಲೀಲೆಯಲ್ಲಿ ತೊಡಗಿರುತ್ತಾನೆ ಎಂಬ ಮಾತುಗಳೂ ಕೇಳಿಬರುತ್ತವೆ. ದೇಶದ ಅತ್ಯಂತ ಪವಿತ್ರ ಸ್ತಳವಾದ ಶ್ರೀ ಕ್ರಿಶ್ಣನ ಜನ್ಮಸ್ತಳದಲ್ಲಿ ಇಂತಹ ವಿಚಾರಗಳು ವೈಚಾರಿಕರನ್ನು ನಿಗೂಡತೆಗೆ ತಳ್ಳುತ್ತವೆ. ಈ ರೀತಿಯ ಊಹೆಗಳನ್ನು ಸಂಪೂರ‍್ಣವಾಗಿ ತಳ್ಳಿಹಾಕುವಂತಿಲ್ಲ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಅಲ್ಲವೇ?

ಇಲ್ಲಿನ ನೀತಿ ನಿಯಮಗಳಂತೆ, ಸಂಜೆಯ ಆರತಿ ಏಳು ಗಂಟೆಯ ವೇಳೆಗೆ ನಡೆಯುತ್ತದೆ. ಅದಾದ ನಂತರ ಪುರೋಹಿತರನ್ನು ಒಳಗೊಂಡಂತೆ ಬಕ್ತರನ್ನೂ ಸಹ ದೇವಾಲಯದಿಂದ ಹೊರಗೆ ಕಳುಹಿಸಲಾಗುತ್ತದೆ. ನಂತರ ಆವರಣದೊಳಗೆ ಕಾಲಿಡಲು ಯಾರಿಗೂ ಅನುಮತಿಯಿಲ್ಲ. ಇದಕ್ಕೆ ಪೂರಕವಾಗಿ ಪ್ರಾಣಿ, ಪಕ್ಶಿಗಳೂ ಸಹ ಸುತ್ತ ಮುತ್ತ ಎಲ್ಲೂ ಕಾಣುವುದಿಲ್ಲ. ನಿದಿವನ ಅಸಾಮಾನ್ಯ ಪರಿಸರದಿಂದ ಸುತ್ತುವರೆದಿದೆ. ಈ ವಿಶಿಶ್ಟ ಪರಿಸರದಲ್ಲಿರುವ ಮರಗಳ ಕಾಂಡ ಟೊಳ್ಳು ಹಾಗೂ ಗಿಡ್ಡವಾಗಿದೆ. ಈ ಗಿಡ್ಡ ಮರಗಳ ರೆಂಬೆ ಕೊಂಬೆಗಳು ನೆಲಕ್ಕೆ ಮುಕಮಾಡಿರುತ್ತವೆ ಮತ್ತು ಒಂದರೊಳಗೊಂದು ಬಳಸಿಕೊಂಡು ಹಾಸುಹೊಕ್ಕಾಗಿವೆ. ತುಳಸಿ ಗಿಡಗಳು ಜೋಡಿಯಾಗಿಯೇ ಇರುವುದನ್ನು ಇಲ್ಲಿ ಕಾಣಬಹುದು.

ಈ ಎಲ್ಲಾ ನಿಗೂಡತೆಯ ಹಿಂದಿರುವ ಕಾರಣವೇನು?

ಈ ದೇವಾಲಯದಲ್ಲಿ ವಿಶೇಶವಾದ ಮೂಲೆಯೊಂದಿದೆ. ರಂಗ ಮಹಲ್ ಎಂದು ಗುರುತಿಸುವ ಈ ಮೂಲೆಯನ್ನು ಪ್ರತಿದಿನ ಅಲಂಕರಿಸಲಾಗುತ್ತದೆ. ಶ್ರೀಗಂದದ ಹಾಸಿಗೆಯನ್ನು ನಾಜೂಕಾಗಿ ಹಾಸಿ, ಒಂದು ತಟ್ಟೆಯಲ್ಲಿ ನೀರಿನ ಪಾತ್ರೆ ಇಡುತ್ತಾರೆ. ಪ್ರತಿ ಸಂಜೆ ಬಕ್ತಾದಿಗಳು ಈ ಕಾರ‍್ಯವನ್ನು ನೆರವೇರಿಸಿ ಮನೆಗಳಿಗೆ ತೆರಳುತ್ತಾರೆ. ಇಶ್ಟೇ ಆಗಿದ್ದಲ್ಲಿ ಇದರಲ್ಲಿ ಯಾವುದೇ ರಹಸ್ಯವಿರುತ್ತಿರಲಿಲ್ಲ. ಇಲ್ಲಿನ ನಿಗೂಡತೆಯನ್ನು ಬಲಪಡಿಸುವ ವಿಶೇಶವೇನೆಂದರೆ, ಮುಂಜಾನೆ ದೇವಾಲಯವನ್ನು ತೆರೆದಾಗ ಹಾಸಿಗೆ ಮತ್ತು ತಟ್ಟೆಯನ್ನು ಗಮನಿಸಿದರೆ, ಅದು ಬಳಸಿದಂತೆ ಕಾಣುವುದರ ಜೊತೆಗೆ, ನೀರನ್ನು ಸ್ವೀಕರಿಸಿದಂತೆ ತೋರುತ್ತದೆ. ಇದು ಶ್ರೀ ಕ್ರಿಶ್ಣನ ಕೆಲಸವೇ ಎಂದು ಅಲ್ಲಿನ ಸ್ತಳೀಯರು ಹೇಳುತ್ತಾರೆ. ಬಕ್ತಾದಿಗಳು, ರಾದಾ ಮತ್ತು ಶ್ರೀ ಕ್ರಿಶ್ಣರ ರಾಸ ಲೀಲೆಯ ನಂತರ, ಬೂರಿ ಬೋಜನಕ್ಕಾಗಿ ರಂಗ ಮಹಲಿನಾದ್ಯಂತ, ತಮ್ಮಿಶ್ಟದ ಪದಾರ‍್ತಗಳನ್ನು ಹರಡಿರುತ್ತಾರೆ. ಯತಾಪ್ರಕಾರ ರಾತ್ರಿ ಏಳರ ನಂತರ ಬಾಗಿಲು ಕಿಟಕಿಗಳನ್ನು ಮುಚ್ಚಿ ಹೊರಡುತ್ತಾರೆ. ಮುಂಜಾನೆ ಗಮನಿಸಿದಾಗ, ಬಕ್ತರು ಅರ‍್ಪಿಸಿದ್ದ ಪದಾರ‍್ತಗಳು ಚದುರಿದಂತೆ ಕಾಣುತ್ತವೆ. ಬಾಗಿಲು ಕಿಟಕಿ ಮುಚ್ಚಿದ್ದ ಕಾರಣ, ಇದು ಆ ಬಗವಂತನ ಲೀಲೆಯೇ ಎಂಬ ನಂಬಿಕೆ ಬಲವಾಗಿದೆ. ಬಗವಂತ ಆ ದೇವಾಲಯಕ್ಕೆ ರಾತ್ರಿಯಲ್ಲಿ ಬಂದಾಗ, ಆವರಣದಲ್ಲಿನ ತುಳಿಸಿ ಗಿಡಗಳು ಗೋಪಿಗಳಾಗಿ ಮಾರ‍್ಪಟ್ಟು, ಶ್ರೀ ಕ್ರಿಶ್ಣ ರಾಸಲೀಲೆಯನ್ನು ಪ್ರದರ‍್ಶಿಸುವಾಗ ಸುತ್ತಲೂ ನ್ರುತ್ಯ ಮಾಡುತ್ತವೆ ಎನ್ನುತ್ತಾರೆ ಅಲ್ಲಿನವರು. ರಾತ್ರಿಯಲ್ಲಿ ಶ್ರೀ ಕ್ರಿಶ್ಣನನ್ನು ಸ್ವಾಗತಿಸಲು, ದೇವಾಲಯದ ಪರಿಸರದಲ್ಲಿರುವ ಟೊಳ್ಳು, ಗಿಡ್ಡ ಮರಗಳು ಬೆಳಗಿ ಕ್ರಿಶ್ಣ ಪರಮಾತ್ಮನು ಹಾದು ಹೋಗಲು ದಾರಿದೀಪವಾಗುತ್ತವೆ ಎಂದು ಹೇಳಲಾಗುತ್ತದೆ.

ನಿದಿವನದ ಹತ್ತಿರದಲ್ಲಿ ಒಂದು ಬಾವಿಯಿದೆ. ಶ್ರೀಕ್ರಿಶ್ಣ ತನ್ನ ಕೊಳಲಿನ ನಾದದಿಂದ ಈ ಬಾವಿಯನ್ನು, ರಾದೆಯ ಬಾಯಾರಿಕೆಯನ್ನು ನೀಗಿಸಲು ನಿರ‍್ಮಿಸಿದ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಇಲ್ಲಿಂದ ಗೆಜ್ಜೆಯ ನಾದ ಹೊರಬರುವುದನ್ನು ಕೇಳಿರುವುದಾಗಿ ಕೆಲವರು ಹೇಳುತ್ತಾರೆ. ಈ ಎಲ್ಲಾ ಊಹಾಪೋಹಗಳಿಗೂ ಯಾವುದಾದರೂ ಪುರಾವೆಯಿದೆಯೇ? ಯಾರಾದರೂ ನೇರವಾಗಿ ನೋಡಿದವರು ಇದ್ದಾರೆಯೇ ಎಂದರೆ? ಉತ್ತರವಿಲ್ಲ. ಪುರಾವೆಯನ್ನು ಸಂಗ್ರಹಿಸಲು ರಾತ್ರಿ ಏಳರ ನಂತರ ಆ ಪ್ರದೇಶದೊಳಗೆ ಹೋಗಿ ಇಣುಕಿದವರು, ಹಾನಿಗೆ ಒಳಗಾಗಿದ್ದಾರೆ, ದ್ರುಶ್ಟಿ ಕಳೆದುಕೊಂಡಿದ್ದಾರೆ, ಮಾನಸಿಕವಾಗಿ ಅಸ್ವಸ್ತಗೊಂಡವರಿದ್ದಾರೆ ಎಂದು ಹೇಳಲಾಗುತ್ತದೆ.

ಯಾವುದೇ ಪುರಾವೆಗಳು ಸಿಗದ ಹಿನ್ನೆಲೆಯಲ್ಲಿ ಇವೆನ್ನೆಲ್ಲಾ ನಂಬುವುದು ಕಶ್ಟಸಾದ್ಯ. ಇವುಗಳನ್ನು ನಂಬಿಕೆಗಳು ಎಂದಶ್ಟೇ ವರ‍್ಗೀಕರಿಸಬಹುದು. ಇಲ್ಲಿ ವಾಸಿಸುವ ಜನರೂ ಅಶ್ಟೇ, ಸಂಜೆಯ ಆರತಿ ನಂತರ ತಮ್ಮ ತಮ್ಮ ಮನೆ ಬಾಗಿಲು ಕಿಟಕಿಗಳನ್ನು ಬದ್ರಪಡಿಸಿ ಮುಚ್ಚಿಬಿಡುತ್ತಾರೆ. ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಮತ್ತೊಂದು ರಹಸ್ಯವೆಂದರೆ, ರಾಕ್ ಗಾರ‍್ಡನ್. ಇಲ್ಲಿ ಎಳೆಯ ಕ್ರಿಶ್ಣನ ಮತ್ತು ಅವನ ಜೊತೆಗಿದ್ದ ಕರುವಿನ ಹೆಜ್ಜೆಗುರುತುಗಳನ್ನು ಈ ಕಲ್ಲಿನ ಉದ್ಯಾನವನದಲ್ಲಿ ಕಾಣಬಹುದು. ಶ್ರೀಕ್ರಿಶ್ಣನ ಕೊಳಲ ದನಿಯನ್ನು ಕೇಳಿದ ದೊಡ್ಡ ಗಾತ್ರದ ಗುಂಡುಗಳು ಕರಗಿ, ಸಣ್ಣ ಸಣ್ಣ ಬಂಡೆಗಳಾದವು ಎಂಬ ಪ್ರತೀತಿ ಸಹ ಇಲ್ಲಿ ಪ್ರಚಲಿತದಲ್ಲಿದೆ. ಇವೆಲ್ಲಾ ನಿಜವೋ ಇಲ್ಲ ಸುಳ್ಳೋ, ಪವಾಡವೋ ಇಲ್ಲ ರಹಸ್ಯವೋ ಬಲ್ಲವರಿಲ್ಲ. ಇಲ್ಲಿನ ಕತೆಗಳನ್ನು ನಂಬುವುದು ಬಿಡುವುದು ಅವರವರ ನಂಬಿಕೆಯ ಮೇಲೆ ನಿಂತಿದೆ. ಈ ಎಲ್ಲಾ ನಂಬಿಕೆಗಳನ್ನು ನಂಬಿದ ಶ್ರೀ ಕ್ರಿಶ್ಣನ ಬಕ್ತರು ಹಾಗೂ ಈ ನಂಬಿಕೆಗಳನ್ನು ಪರೀಕ್ಶಕ ದ್ರುಶ್ಟಿಕೋನದಲ್ಲಿ ಗಮನಿಸುವವರೂ ಪ್ರವಾಸಿಗರಾಗಿ ನಿದಿವನಕ್ಕೆ ಬೇಟಿ ನೀಡುತ್ತಾರೆ. ಇದೊಂದು ಪ್ರವಾಸಿಗರ ತಾಣವಾಗಿ ಪರಿವರ‍್ತಿತವಾಗಿರುವ ಕಾರಣ, ಇಲ್ಲಿನ ಪ್ರವಾಸೋದ್ಯಮವೂ ಬೆಳವಣಿಗೆ ಹೊಂದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: holidify.com, tusktravel.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: