ಜೊನಾತನ್ – ಜಗತ್ತಿನ ಹಿರಿಯ ಪ್ರಾಣಿ

– .

ಗಿನ್ನೆಸ್ ವರ‍್ಲ್ಡ್ ರೆಕಾರ‍್ಡ್ಸ್ ಪ್ರಕಾರ ಜಗತ್ತಿನ ಹಿರಿಯ ಪ್ರಾಣಿ ಈ ಜೊನಾತನ್. ಈ ಹಿರಿಯ ಆಮೆಗೆ ಈಗ 190 ವರ‍್ಶ. ಇದೇನಾ ಅತಿ ಹೆಚ್ಚು ವರ‍್ಶ ಬದುಕಿರುವುದು ಎಂದರೆ, ಕಂಡಿತ ಅಲ್ಲ. 1966ರಲ್ಲಿ ಟೊಂಗಾದಲ್ಲಿ ಸಾವನ್ನಪ್ಪಿದ ತುಯಿ ಮಲಿಲಾ ಎಂಬ ಆಮೆ 189 ವರ‍್ಶ ಬದುಕಿತ್ತು. ಅಂದಿಗೆ ಅದು ಅತ್ಯಂತ ಹೆಚ್ಚು ವಯೋಮಾನದ ಆಮೆ ಎಂದು ಪರಿಗಣಿಸಲಾಗಿತ್ತು. ಬಾರತದಲ್ಲಿನ ಕೋಲ್ಕತ್ತಾದ ಅಲೀಪೋರ್ ನಲ್ಲಿರುವ ಜೂಲಾಜಿಕಲ್ ಗಾರ‍್ಡನ್ ನಲ್ಲಿ 2006ರಲ್ಲಿ ಸಾವನ್ನಪ್ಪಿದ ಅದ್ವೈತ ಎಂಬ ಆಮೆ 255 ವರ‍್ಶಗಳ ಕಾಲ ಬದುಕಿತ್ತು ಎಂಬ ಮಾತುಗಳು ಕೇಳಿಬರುತ್ತವೆ. ಇದರ ಸಾವಿನ ದಿನದ ದಾಕಲೆ ಇದೆಯಾದರೂ, ಹುಟ್ಟಿದ ದಿನಕ್ಕೆ ಪೂರಕವಾದ ಯಾವುದೇ ದಾಕಲೆಗಳಿಲ್ಲ. ಹಾಗಾಗಿ ಇದರ ವಯಸ್ಸು ನಿಕರವಾಗಿ ದ್ರುಡೀಕರಿಸಲ್ಪಟ್ಟಿಲ್ಲ.

ಜೊನಾತನ್ ಮೊಟ್ಟೆಯಿಂದ ಹೊರಬಂದಿದ್ದು 1832ರಲ್ಲಿ ಎಂದು ಅನೇಕ ವೈಜ್ನಾನಿಕ ಪರೀಕ್ಶೆಗಳಿಂದ ದ್ರುಡಪಟ್ಟಿದೆ. ಹಾಗಾಗಿ ಇದು ಬೂಮಿಯ ಮೇಲಿರುವ ಅತ್ಯಂತ ಹಳೆಯ ಜೀವಂತ ಪ್ರಾಣಿಯಾಗಿದೆ. ಈ ಸೀಶೆಲ್ಸ್ ದೊಡ್ಡ ಆಮೆ, ಅಲ್ಡಾಬ್ರಾಚೆಲಿಸ್ ಗಿಗಾಂಟಿಯಾ ಹೊಲೊಲಿಸ್ಟಾದ ಉಪಜಾತಿಗೆ ಸೇರಿದೆ. ಈಗ ಇದು ದಕ್ಶಿಣ ಅಟ್ಲಾಂಟಿಕ್ ಸಾಗರದಲ್ಲಿರುವ ಬ್ರಿಟಿಶ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿದೆ. ಸರಿ ಸುಮಾರು ಐವತ್ತು ವರ‍್ಶದ ಜೊನಾತನ್ ಮತ್ತು ಮೂರು ಇತರೆ ಆಮೆಗಳನ್ನು ಹಿಂದೂ ಮಹಾಸಾಗರದ ಸೀಶೆಲ್ಸ್ ನಿಂದ 1882ರಲ್ಲಿ ಸೇಂಟ್ ಹೆಲೆನಾಗೆ ಕರೆತರಲಾಯಿತು. 1930ರಲ್ಲಿ, ಸೇಂಟ್ ಹೆಲೆನಾ ಗವರ‍್ನರ್ ಸರ್ ಸ್ಪೆನ್ಸರ್ ಡೇವೀಸ್ ಈ ಆಮೆಗೆ ಜೊನಾತನ್ ಎಂದು ಹೆಸರಿಟ್ಟರು. ಅಂದಿನಿಂದಲೂ ಜೊನಾತನ್ ಗವರ‍್ನರ್ ಅದಿಕ್ರುತ ನಿವಾಸದ ಪ್ಲಾಂಟೇಶನ್ ಹೌಸ್ ನ ಮೈದಾನದಲ್ಲೇ ಬಿಡಾರ ಹೂಡಿದೆ. ಇದರ ಯೋಗ ಕ್ಶೇಮದ ಜವಾಬ್ದಾರಿಯನ್ನು ಸೇಂಟ್ ಹೆಲೆನಾ ಸರ‍್ಕಾರ ವಹಿಸಿಕೊಂಡಿದೆ.

1882ರಲ್ಲಿ ಸೇಂಟ್ ಹೆಲೆನಾಗೆ ಕರೆತಂದಾಗಿನಿಂದ ಅದರ ವಯಸ್ಸನ್ನು ಅಂದಾಜಿಸುವ ಕೆಲಸ ಮೊದಲಾಯಿತು. 1882ರ ವೇಳೆಗೆ, ಜೊನಾತನ್ ಸಂಪೂರ‍್ಣವಾಗಿ ಪ್ರಬುದ್ದನಾಗಿದ್ದ ಎಂಬ ಅಂಶವನ್ನು ವೈಜ್ನಾನಿಕವಾಗಿ ಕಂಡುಹಿಡಿಯಲಾಯಿತು. ಸಂಪೂರ‍್ಣವಾಗಿ ಪ್ರಬುದ್ದ ಆಮೆ ಎಂದರೆ ಕಡಿಮೆ ಎಂದರೂ ಐವತ್ತು ವರ‍್ಶಗಳಾಗಿರಬೇಕು. ಹಾಗಾಗಿ ಜೊನಾತನ್ ಮೊಟ್ಟೆಯಿಂದ 1832ರಲ್ಲಿ ಹೊರಬಂದಿರಬೇಕು ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 2015ರಲ್ಲಿ ಜೊನಾತನ್ ಆಮೆಯನ್ನು ವೈದ್ಯಕೀಯ ಪರೀಕ್ಶೆಗೆ ಒಳಪಡಿಸಲಾಯಿತು. 180 ವರ‍್ಶ ದಾಟಿದ ಜೊನಾತನ್, ಕಣ್ಣಿನ ಪೊರೆಯಿಂದಾಗಿ ದ್ರುಶ್ಟಿ ಮಂಜಾಗಿರುವುದು ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡಿರುವುದು ತಿಳಿದುಬಂತು. ಇವೇ ಕಾರಣದಿಂದ ಜೊನಾತನ್ ತನ್ನ ಆಹಾರ ಇರುವ ಜಾಗವನ್ನು ಪತ್ತೆ ಹಚ್ಚಲು ಸಾದ್ಯವಾಗುತ್ತಿಲ್ಲ ಎಂದು ತಿಳಿದುಬಂದಿತು. ಆದರೆ ಜೊನಾತನ್‍ಗೆ ಕೇಳಿಸಿಕೊಳ್ಳಲು ಯಾವುದೇ ಕುಂದುಂಟಾಗಿಲ್ಲ ಎಂಬ ಅಂಶ ಸಹ ಬೆಳಕಿಗೆ ಬಂದಿತು.

2016ರ ಬಿಬಿಸಿ ವರದಿಯಂತೆ, ಜೊನಾತನ್ ಆಮೆಯನ್ನು ಇನ್ನೂ ಹೆಚ್ಚು ಕಾಲ ಜೀವಂತವಾಗಿಡಲು, ಅದರ ಆರೋಗ್ಯವನ್ನು ಕಾಪಾಡಲು ಹೊಸ ಆಹಾರ ಪದ್ದತಿಯನ್ನು ರೂಪಿಸಲಾಗಿದೆ. ಜೊನಾತನ್ ತನ್ನ ಜೀವಿತಾವದಿಯಲ್ಲಿ ಎರಡು ಮಹಾಯುದ್ದಗಳನ್ನು ಕಂಡಿದೆ. ಜೊತೆಗೆ ರಶ್ಯಾದ ಕ್ರಾಂತಿ, ಬ್ರಿಟೀಶ್ ಸಿಂಹಾಸನದ ಏಳು ರಾಜರುಗಳು ಹಾಗೂ ಮೂವತ್ತೊಂಬತ್ತು ಅಮೇರಿಕಾದ ಅದ್ಯಕ್ಶರನ್ನು ಕಂಡಿದೆ. ವಿಶ್ವದ ಹಿರಿಯ ಬೂ ಪ್ರಾಣಿಯಾಗಿರುವ ಜೊನಾತನ್‍ಗೆ ರಾಜ ಮರ‍್ಯಾದೆಯಿದೆ. ಅದು ತನ್ನನ್ನು ನೋಡ ಬಂದವರಿಗೆ ಸ್ನೇಹಪರ ರೀತಿಯಲ್ಲಿ ಸಂವಹನ ಮಾಡುತ್ತದೆ. ಹಾಗಾಗಿ ಜನರ ಮೆಚ್ಚುಗೆಯನ್ನು ಪಡೆದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: dnaindia.com; guinnessworldrecords.com; news18.com; indiatoday.in; commons.wikimedia.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಧನ್ಯವಾದಗಳು ಸರ್, ಇಂದು ಈ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *