ಮೋನಿಕಾ ಸೆಲಸ್ – ಟೆನ್ನಿಸ್‌ನ ಅಪರೂಪದ ತಾರೆ

– ರಾಮಚಂದ್ರ ಮಹಾರುದ್ರಪ್ಪ.

1990ರ ದಶಕದ ಆರಂಬದಲ್ಲಿ ಇನ್ನೂ ಸ್ಟೆಪಿ ಗ್ರಾಪ್ ಟೆನ್ನಿಸ್ ಜಗತ್ತನ್ನು ಆಳುತ್ತಿದ್ದ ಹೊತ್ತಿನಲ್ಲಿ, ತನ್ನ ಸೊಗಸಾದ ರಾಕೆಟ್ ಚಳಕದಿಂದ ಎಲ್ಲರೂ ಬೆಕ್ಕಸಬೆರಗಾಗುವಂತೆ ಆಡಿ ಕೆಲಕಾಲ ಸ್ಟೆಪಿ ಗ್ರಾಪ್ ರನ್ನೂ ಹಿಂದಿಕ್ಕಿದ್ದ ಅದ್ಬುತ ಪ್ರತಿಬೆಯೇ ಮೋನಿಕಾ ಸೆಲಸ್. ಎಡಗೈ ಆಟಗಾರ‍್ತಿಯಾಗಿದ್ದ ಸೆಲಸ್ ಕೋರ‍್ಟ್ ನ ತುಂಬೆಲ್ಲಾ ಪಾದರಸದಂತೆ ಸಂಚರಿಸಿ ಆಡುತ್ತಿದ್ದ ಪರಿ ನಿಜಕ್ಕೂ ನೋಡುಗರ ಮನಸೆಳೆಯುವುದರ ಜೊತೆಗೆ ಟೆನ್ನಿಸ್ ಪಂಡಿತರ ಮೆಚ್ಚುಗೆಯನ್ನೂ ಗಳಿಸಿತ್ತು. ದಿಗ್ಗಜೆ ಆಟಗಾರ‍್ತಿಯಾಗುವ ಅಳವು ಇದ್ದು ಎಲ್ಲಾ ಬಗೆಯಲ್ಲಿ ಪರಿಪಕ್ವ ಆಟವನ್ನು ಹೊಂದಿದ್ದ ಸೆಲಸ್ ಟೆನ್ನಿಸ್ ಅಂಗಳದಲ್ಲೇ ಜರುಗಿದ ಒಂದು ಬೀಕರ ಅವಗಡದಿಂದ ಕೆಲವೇ ವರ‍್ಶಗಳಲ್ಲಿ ನೇಪತ್ಯಕ್ಕೆ ಸರಿದದ್ದು ಮಾತ್ರ ಟೆನ್ನಿಸ್ ಇತಿಹಾಸದ ಅತ್ಯಂತ ಕರಾಳ ಅದ್ಯಾಯವೆಂದೇ ಟೆನ್ನಿಸ್ ಜಗತ್ತು ಇಂದಿಗೂ ಮರಗುತ್ತದೆ.

ಹುಟ್ಟು-ಆರಂಬದ ಟೆನ್ನಿಸ್ ಪಯಣ

ಡಿಸೆಂಬರ್ 2, 1973 ರಂದು ಯುಗೋಸ್ಲೋವಿಯಾದಲ್ಲಿ ಹಂಗೇರಿ ಮೂಲದ ಕುಟುಂಬದಲ್ಲಿ ಮೋನಿಕಾ ಸೆಲಸ್ ಹುಟ್ಟಿದರು. ಐದನೇ ವರುಶಕ್ಕೆ ಟೆನ್ನಿಸ್ ಆಡಲು ಮೊದಲು ಮಾಡಿದ ಮೋನಿಕಾರಿಗೆ ಅವರ ತಂದೆಯೇ ಕೋಚ್ ಆಗಿ ಟೆನ್ನಿಸ್ ಆಟದ ಮೊದಲ ಪಟ್ಟುಗಳನ್ನು ಕಲಿಸುತ್ತಾರೆ. ಎರಡು ಕೈಗಳ ಬ್ಯಾಕ್ ಹ್ಯಾಂಡ್ ಮತ್ತು ಪೋರ್ ಹ್ಯಾಂಡ್ ಹೊಡೆತಗಳನ್ನು ಎಳೆವಯಸ್ಸಿನಲ್ಲೇ ಮೋನಿಕಾ ಕರಗತ ಮಾಡಿಕೊಂಡಿದ್ದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರ ಮುಂದಿನ ಯಶಸ್ಸಿನ ಬಗೆಗೆ ತಂದೆಯಲ್ಲಿ ಆಶಾಬಾವನೆ ಮೂಡಿಸುತ್ತದೆ. ಬಳಿಕ ಅದಿಕ್ರುತವಾಗಿ ವ್ರುತ್ತಿಪರ ಕೋಚ್ ಜೆಲೆನಾ ಜೆನ್ಕಿಕ್ ರ ಗರಡಿಯಲ್ಲಿ ಪಳಗಿದ ಸೆಲಸ್ 1985ರಲ್ಲಿ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಪ್ಲೋರಿಡಾದ ಆರೆಂಜ್ ಬೌಲ್ ಟೂರ‍್ನಿ ಗೆದ್ದು ಅಮೆರಿಕಾದ ಕೋಚ್ ನಿಕ್ ಬೊಲ್ಲೆಟೆರ‍್ರಿರವರ ಗಮನ ಸೆಳೆಯುತ್ತಾರೆ. ಇದರ ಬೆನ್ನಲ್ಲೇ ಹೆಚ್ಚಿನ ತರಬೇತಿಗಾಗಿ ಅಮೇರಿಕಾಗೆ ತೆರಳಿದ ಸೆಲಸ್ ನಿಕ್ ಬೊಲ್ಲೆಟೆರ‍್ರಿ ಟೆನ್ನಿಸ್ ಅಕ್ಯಾಡೆಮಿ ಸೇರುತ್ತಾರೆ. ಅಲ್ಲಿ ವರುಶಗಳ ಕಟಿಣ ಪರಿಶ್ರಮದ ಮೂಲಕ ತಮ್ಮ ಆಟದ ಸಣ್ಣಪುಟ್ಟ ಕುಂದುಗಳನ್ನು ಸುದಾರಿಸಿಕೊಂಡು ವ್ರುತ್ತಿಪರ ಟೆನ್ನಿಸ್ ಗೆ ಅಣಿಯಾಗುತ್ತಾರೆ. ಒಂದು ಬಗೆಯಲ್ಲಿ ಕೋಚ್ ಬೊಲ್ಲೆಟೆರ‍್ರಿ ಸೆಲಸ್ ರ ಶಕ್ತಿಯ ಬಗೆಗೆ ಅರಿವು ಮೂಡಿಸಿ ಅವರ ಆಟವನ್ನು ಜಾಗ್ರತೆಯಿಂದ ಹದಮಾಡುತ್ತಾರೆ.

1989ರಲ್ಲಿ ಇನ್ನೂ ಹದಿನೈದರ ಪ್ರಾಯದಲ್ಲಿ ಹೂಸ್ಟನ್ ನಲ್ಲಿ ತಮ್ಮ ವ್ರುತ್ತಿಬದುಕಿನ ಮೊದಲ ಟೂರ‍್ನಿ ಗೆದ್ದು ಸೆಲಸ್ ಸುದ್ದಿ ಮಾಡುತ್ತಾರೆ. ಅದರಲ್ಲೂ ಪೈನಲ್ ನಲ್ಲಿ ಟೆನ್ನಿಸ್ ದಂತಕತೆ ಕ್ರಿಸ್ ಎವರ‍್ಟ್ ರನ್ನು ಸೆಲಸ್ ಮಣಿಸಿದ್ದು ಟೆನ್ನಿಸ್ ಜಗತ್ತು ಅವರನ್ನು ಬರವಸೆಯ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಇದಾದ ಒಂದು ತಿಂಗಳ ನಂತರ ತಮ್ಮ ಮೊದಲ ಗ್ರ್ಯಾಂಡ್ಸ್ಲಾಮ್ ಪ್ರೆಂಚ್ ಓಪನ್ ಆಡಿ ಸೆಮಿಪೈನಲ್ಸ್ ನಲ್ಲಿ ಅಗ್ರಶ್ರೇಯಾಂಕಿತ ಸ್ಟೆಪಿ ಗ್ರಾಪ್ ಎದುರು ಸೋಲುಣ್ಣುತ್ತಾರೆ. ಆದರೂ ಸೆಲಸ್ ರ ಆಟ ಹಾಗೂ ಬೆಳವಣಿಗೆಯನ್ನು ಕಂಡು ಬರುವ ದಿನಗಳಲ್ಲಿ ಸ್ಟೆಪಿ ಗ್ರಾಪ್ ರಿಗೆ ಇವರು ಸರಿಯಾದ ಪೈಪೋಟಿ ನೀಡಲಿದ್ದಾರೆಂದು ಪತ್ರಿಕೆಗೆಳು ವರದಿ ಮಾಡುತ್ತವೆ. ಟೆನ್ನಿಸ್ ವಿಮರ‍್ಶಕರೂ ಕೂಡ ಮುಂದಿನ ಕೆಲ ವರ‍್ಶಗಳ ಕಾಲ ಅಗ್ರಪಟ್ಟಕ್ಕೆ ಈ ಇಬ್ಬರು ನಡುವೆ ಹೆಂಗಸರ ಟೆನ್ನಿಸ್ ನ ದೊಡ್ಡ ಕದನ ನಡೆಯಲಿದೆ ಎಂದು ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಸೆಲಸ್ ರ ಟೆನ್ನಿಸ್ ವ್ರುತ್ತಿ ಬದುಕು

1990ರ ಆರಂಬದಿಂದ ಸತತ 36 ಪಂದ್ಯಗಳನ್ನು ಹಾಗೂ 6 WTA ಪಂದ್ಯಾವಳಿಗಳನ್ನು ಗೆದ್ದ ಸೆಲಸ್ ತಮ್ಮ ಬರುವಿಕೆಯನ್ನು ಟೆನ್ನಿಸ್ ಜಗತ್ತಿಗೆ ಸಾರಿ ಹೇಳುತ್ತಾರೆ. ಅದೇ ವರುಶದ ಪ್ರೆಂಚ್ ಓಪನ್ ನ ರೋಚಕ ಪೈನಲ್ ನಲ್ಲಿ ನಾಲ್ಕು ಸೆಟ್ ಪಾಯಿಂಟ್ ಗಳ ಹಿನ್ನಡೆಯಿಂದ ಪವಾಡದ ರೀತಿಯಲ್ಲಿ ಮೇಲೆದ್ದು ನೇರ ಸೆಟ್ ಗಳಿಂದ ಸ್ಟೆಪಿ ಗ್ರಾಪ್ ರನ್ನು ಸೋಲಿಸಿ ಸೆಲಸ್ ತಮ್ಮ ಚೊಚ್ಚಲ ಗ್ರ್ಯಾಂಡ್ಸ್ಲಾಮ್ ಅನ್ನು ಮುಡಿಗೇರಿಸಿಕೊಳ್ಳುತ್ತಾರೆ. ಹದಿನಾರನೇ ವಯಸ್ಸಿಗೆ ಗ್ರಾಂಡ್ಸ್ಲಾಮ್ ಗೆದ್ದು ಈ ಸಾದನೆ ಮಾಡಿದ ಅತ್ಯಂತ ಕಿರಿಯ ಆಟಗಾರ‍್ತಿ ಎಂಬ ಕೀರ‍್ತಿಗೂ ಪಾತ್ರರಾಗುತ್ತಾರೆ. ಬಳಿಕ 1991ರ ಲ್ಲಿ ಮೂರು ಗ್ರಾಂಡ್ಸ್ಲಾಮ್ ಗಳು: ಆಸ್ಟ್ರೇಲಿಯಾ ಓಪನ್, ಪ್ರೆಂಚ್ ಓಪನ್ ಮತ್ತು ಅಮೆರಿಕಾ ಓಪನ್ ಗಳನ್ನು ನಿರಾಯಾಸವಾಗಿ ಗೆದ್ದು ಅಗ್ರಶ್ರೇಯಾಂಕವನ್ನು ಸೆಲಸ್ ತಮ್ಮದಾಗಿಸಿಕೊಳ್ಳುತ್ತಾರೆ. ಅಮೆರಿಕಾ ಓಪನ್ ಪೈನಲ್ ನಲ್ಲಿ ದಿಗ್ಗಜ ಆಟಗಾರ‍್ತಿ ಮಾರ‍್ಟಿನಾ ನವ್ರಾಟಿಲೋವಾರನ್ನು ಸೆಲಸ್ ಮಣಿಸಿದ್ದ ಪರಿ ಅವರ ಆಟ ಆಗಿನ ಎಲ್ಲಾ ಸಮಕಾಲೀನರಗಿಂತ ಮೇಲಿನ ಮಟ್ಟದ್ದು ಎಂಬುದನ್ನು ಡಾಳಾಗಿ ತೋರಿಸುತ್ತದೆ. ನಂತರ 1992ರಲ್ಲೂ ಹಿಂದಿನ ವರುಶ ಗೆದ್ದ ಮೂರೂ ಗ್ರಾಂಡ್ಸ್ಲಾಮ್ ಗಳನ್ನು ಇನ್ನೊಮ್ಮೆ ಗೆದ್ದು ತಮ್ಮಲ್ಲೇ ಉಳಿಸಿಕೊಂಡ ಸೆಲಸ್ ವಿಂಬಲ್ಡನ್ ಪೈನಲ್ ನಲ್ಲಿ ಮಾತ್ರ ಸ್ಟೆಪಿ ಗ್ರಾಪ್ ಎದುರು ಎಡವುತ್ತಾರೆ. ಇದಲ್ಲದೆ ಇನ್ನಿತರ WTA ಟೂರ‍್ನಿಗಳು ಮತ್ತು ವರ‍್ಶದ ಸತತ ಮೂರು ಟೂರ‍್ನಿ ಪೈನಲ್ ಗಳನ್ನೂ ಪ್ರಬಾವಿ ಆಟದಿಂದ ಗೆದ್ದು ಸೆಲಸ್ ತಮ್ಮ ಅಗ್ರಪಟ್ಟವನ್ನು ಉಳಿಸಿಕೊಂಡು ಪ್ರಾಬಲ್ಯ ಮೆರೆಯುತ್ತಾರೆ. ನಂತರ 1993ರ ಆಸ್ಟ್ರೇಲಿಯಾ ಓಪನ್ ಪೈನಲ್ ನಲ್ಲೂ ಸ್ಟೆಪಿ ಗ್ರಾಪ್ ರಿಗೆ ಸೋಲುಣಿಸಿ 20ನೇ ವಯಸ್ಸಿಗೂ ಮುನ್ನ ತಮ್ಮ ವ್ರುತ್ತಿಬದುಕಿನ ಎಂಟನೇ ಗ್ರಾಂಡ್ಸ್ಲಾಮ್ ಗೆದ್ದು ಬೀಗುತ್ತಾರೆ. ಹುಲ್ಲು ಹಾಸಿನ ವಿಂಬಲ್ಡನ್ ಒಂದನ್ನು ಗೆದ್ದು ಎಲ್ಲಾ ಗ್ರಾಂಡ್ಸ್ಲಾಮ್ ಗಳನ್ನು ಮುಡಿಗೇರಿಸಿಕೊಂಡ ಹಿರಿಮೆ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಿದ್ದ ಸೆಲಸ್ ಮುಂದಿನ ಸವಾಲುಗಳಿಗೆ ಸಜ್ಜಾಗುತ್ತಿರುವಾಗಲೇ ಬದುಕು ಅನಿಶ್ಚಿತ ತಿರುವು ನೀಡುತ್ತದೆ.

1993: ಚೂರಿ ಚುಚ್ಚಿದ ಸ್ಟೆಪಿಯ ಹುಚ್ಚು ಅಬಿಮಾನಿ

ಏಪ್ರಿಲ್ 30, 1993 ರಂದು ಜರ‍್ಮನಿಯ ಹ್ಯಾಂಬರ‍್ಗ್ ನಲ್ಲಿ ಸಿಟಿಜನ್ ಕಪ್ ನ ಕ್ವಾರ‍್ಟರ್ ಪೈನಲ್ ಪಂದ್ಯದ ವೇಳೆ ಪ್ರಪಂಚವೇ ದಿಗ್ಬ್ರಮೆಗೊಳ್ಳುವಂತ ಗಟನೆಯೊಂದು ನಡೆಯುತ್ತದೆ. ಪಂದ್ಯದ ಎರಡನೇ ಸೆಟ್ ನ ಬಿಡುವಿನ ವೇಳೆ ಸೆಲಸ್ ವಿಶ್ರಾಂತಿ ಪಡೆಯುತ್ತಿರುವಾಗ ಗಂಟರ್ ಪಾರ‍್ಚ್ ಎಂಬ ಒಬ್ಬ ಸ್ಟೆಪಿ ಗ್ರಾಪ್ ರ ಹುಚ್ಚು ಅಬಿಮಾನಿ ಆರು ಸಾವಿರ ಮಂದಿ ಕಿಕ್ಕಿರಿದು ತುಂಬಿದ ಅಂಗಳದಲ್ಲಿ 9 ಇಂಚಿನ ಚೂರಿಯಿಂದ ಸೆಲಸ್ ರ ಬುಜದ ಬಳಿ ಬಲವಾಗಿ ಇರಿಯುತ್ತಾನೆ. ಸುಮಾರು 1.5 ಇಂಚು ಒಳನುಗ್ಗಿದ ಚೂರಿ ಅವರಿಗೆ ತೀವ್ರ ಪೆಟ್ಟು ಉಂಟುಮಾಡುತ್ತದೆ. ಚೂರಿ ಒಂದಿಂಚು ಅತ್ತಿತ್ತ ಹೋಗಿದ್ದರೂ ಅವರ ಪ್ರಾಣಕ್ಕೆ ಕುತ್ತು ಇತ್ತೆಂದು ಬಳಿಕ ಡಾಕ್ಟರ್ ಗಳು ಹೇಳಿಕೆ ನೀಡುತ್ತಾರೆ. ಅತ್ತ ಪಾರ‍್ಚ್ ಗೆ ಮಾನಸಿಕ ಸಮಸ್ಯೆ ಇರುವ ಮನುಶ್ಯ ಎಂದು ಅತ್ಯಂತ ಕಡಿಮೆ ಶಿಕ್ಶೆ ನೀಡಲಾದರೆ, ಇತ್ತ ಸೆಲಸ್ ದೈಹಿಕ ಪೆಟ್ಟುಗಳಿಂದ ತಿಂಗಳುಗಳ ಬಳಿಕ ಚೇತರಿಸಿಕೊಂಡರೂ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಹೆದರಿಕೆ, ತನ್ನಂಬಿಕೆಯ ಕೊರತೆಯಿಂದ ದ್ರುತಿಗೆಡುತ್ತಾರೆ.

1994ರಲ್ಲಿ ಅಮೇರಿಕಾದ ಪೌರತ್ವ ಪಡೆದ ಸೆಲಸ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಂಡು, ಎಲ್ಲಾ ಬಗೆಯ ತೊಡಕುಗಳನ್ನು ಹಿಮ್ಮೆಟ್ಟಿ 1995ರ ಆಗಸ್ಟ್ ನಲ್ಲಿ ವ್ರುತ್ತಿಪರ ಟೆನ್ನಿಸ್ ಗೆ ಹಿಂದಿರುಗುತ್ತಾರೆ. ಆಟದಲ್ಲಿ ಮೊದಲಿದ್ದ ಕಸುವು ಇಲ್ಲದಿದ್ದರೂ ವ್ರುತ್ತಿಪರ ಟೆನ್ನಿಸ್ ಆಡುವ ಮಟ್ಟಕ್ಕೆ ಅವರು ದೈಹಿಕವಾಗಿ ಸದ್ರುಡಗೊಂಡಿದ್ದು ಅಬಿಮಾನಿಗಳಲ್ಲಿ ನಲಿವು ತರುತ್ತದೆ. ಆ ಸಾಲಿನಲ್ಲಿ ಕೆಲ WTA ಟೂರ‍್ನಿಗಳನ್ನು ಗೆದ್ದ ಸೆಲಸ್ ಒಂದು ಮಟ್ಟಕ್ಕೆ ಒಳ್ಳೆ ಲಯದಲ್ಲಿ ಕಂಡುಬರುತ್ತಾರೆ. ಪೀನಿಕ್ಸ್ ನಂತೆ ಮೇಲೆದ್ದು 1996ರ ಆಸ್ಟ್ರೇಲಿಯಾ ಓಪನ್ ಗೆದ್ದು ತಮ್ಮ ಒಂಬತ್ತನೇ ಗ್ರಾಂಡ್ಸ್ಲಾಮ್ ತೆಕ್ಕೆಗೆ ಹಾಕಿಕೊಂಡ ಸೆಲಸ್ ಮತ್ತೊಮ್ಮೆ ತಮ್ಮ ಉತ್ತುಂಗಕ್ಕೆ ಮರಳಲಿದ್ದೇನೆ ಎಂಬ ಬರವಸೆ ನೀಡಿದರೂ ಸ್ತಿರ ಪ್ರದರ‍್ಶನ ನೀಡುವುದು ಅವರಿಂದಾಗುವುದಿಲ್ಲ. ದುರದ್ರುಶ್ಟವಶಾತ್ ಇದೇ ಅವರ ಕಟ್ಟ ಕಡೆಯ ಗ್ರಾಂಡ್ಸ್ಲಾಮ್ ಗೆಲುವಾಗಿ ಕೊನೆಗೊಳ್ಳುತ್ತದೆ. 1996ರ ಅಮೇರಿಕಾ ಓಪನ್ ಪೈನಲ್ ತಲುಪಿ ಸ್ಟೆಪಿ ಗ್ರಾಪ್ ಎದುರು ಮುಗ್ಗುರಿಸಿದ ಸೆಲಸ್ ಆ ಬಳಿಕ 1998ರ ಪ್ರೆಂಚ್ ಓಪನ್ ತಲುಪಿ ಮತ್ತೊಮ್ಮೆ ಸೋಲುಣ್ಣುತ್ತಾರೆ. ಆನಂತರ ಮತ್ತೆಂದೂ ಅವರು ಯಾವುದೇ ಗ್ರಾಂಡ್ಸ್ಲಾಮ್ ಪೈನಲ್ ತಲುಪದೇ ಮುನ್ನೆಲೆಯಿಂದ ದೂರ ಸರಿದರೂ ಆಗೊಮ್ಮೆ ಈಗೊಮ್ಮೆ ಬಲಾಡ್ಯ ಆಟಗಾರ‍್ತಿಯರಿಗೆ ಸವಾಲು ಒಡ್ಡುತ್ತಾ ಆಟ ಮುಂದುವರೆಸುತ್ತಾರೆ.

ಅವರು 1996, 1999 ಮತ್ತು 2000ದ ಪೆಡ್ ಕಪ್ ಗೆದ್ದ ಅಮೆರಿಕಾ ತಂಡದ ಮುಕ್ಯ ಆಟಗಾರ‍್ತಿಯಾಗಿದ್ದರೂ ಮತ್ತೆಂದೂ ಟೆನ್ನಿಸ್ ಅಂಗಳದಲ್ಲಿ ಹಳೇ ಸೆಲಸ್ ನ ಚಾಕಚಕ್ಯತೆ ನೋಡಲು ಸಿಗುವುದಿಲ್ಲ. 2000ದ ಸಿಡ್ನಿ ಒಲಂಪಿಕ್ಸ್ ನಲ್ಲಿ ಗೆದ್ದ ಕಂಚಿನ ಪದಕವೇ ಅವರ ಕೊನೆಯ ವಿಜಯದ ಗಳಿಗೆಯಾಗುತ್ತದೆ. ಕಡೇ ಬಾರಿ 2002ರಲ್ಲಿ ಪೂರ‍್ಣಪ್ರಮಾಣವಾಗಿ ಆಡಿದ ಮೋನಿಕಾ ಸೆಲಸ್ ಆ ವರುಶದ ನಾಲ್ಕೂ ಗ್ರಾಂಡ್ಸ್ಲಾಮ್ ಗಳ ಕ್ವಾರ‍್ಟರ್ ಪೈನಲ್ ತಲುಪಿ WTA ನ ಏಳನೇ ರಾಂಕ್ ಪಡೆಯುತ್ತಾರೆ. ಇದು ಬಹುಕಾಲದ ಬಳಿಕ ಅವರ ಶ್ರೇಶ್ಟ ಸಾದನೆಯಾಗಿರುತ್ತದೆ. ಅದಲ್ಲದೆ ಆಗಿನ ಗ್ರಾಂಡ್ಸ್ಲಾಮ್ ಪೈಪೋಟಿಯ ಮುಂಚೂಣಿಯಲ್ಲಿದ್ದ ವೀನಸ್ ವಿಲಿಯಮ್ಸ್, ಹೆನಿನ್ ಹಾರ‍್ಡಿನ್, ಮಾರ‍್ಟಿನಾ ಹಿಂಗೀಸ್, ಶರಾಪೋವಾ, ಕಿಮ್ ಕ್ಲೈಸ್ಟರ‍್ಸ್, ಡೆವನ್ಪೋರ‍್ಟ್ ರನ್ನು ಸೆಲಸ್ ಸೋಲಿಸಿದ್ದು ಅವರ ಆಟದಲ್ಲಿ ಇನ್ನೂ ಕೊಂಚ ಸತ್ವ ಇದೆ ಎನ್ನುವುದಕ್ಕೆ ಎತ್ತುಗೆಯಾಗಿರುತ್ತದೆ. ಆದರೂ ಕಾಲಕ್ರಮೇಣ ವ್ರುತ್ತಿಪರ ಟೆನ್ನಿಸ್ ನ ಒತ್ತಡ ಹಾಗೂ ಯುವ ಆಟಗಾರ‍್ತಿಯರ ಆಕ್ರಮಣಕಾರಿ ಆಟದ ಎದುರು ಸಪ್ಪೆಯಾಗುತ್ತಾ ಹೋದ ಸೆಲಸ್ ಕಡೆಗೆ 2008ರಲ್ಲಿ ಅದಿಕ್ರುತವಾಗಿ ಟೆನ್ನಿಸ್ ಆಟದಿಂದ ನಿವ್ರುತ್ತಿ ಗೋಶಿಸುತ್ತಾರೆ. ಅಲ್ಲಿಗೆ ಟೆನ್ನಿಸ್ ಅಂಗಳದಲ್ಲಿ ಕೆಲಹೊತ್ತು ಮಿಂಚಿ ಬಹಳ ನಿರೀಕ್ಶೆ ಮೂಡಿಸಿದ್ದ ಒಂದು ತಾರೆ ಕಣ್ಮರೆಯಾಗುತ್ತದೆ. ಬಳಿಕ 2009ರಲ್ಲಿ ಅಂತರಾಶ್ಟ್ರೀಯ ಟೆನ್ನಿಸ್ ಹಾಲ್ ಅಪ್ ಪೇಮ್ ಗೆ ಅವರನ್ನು ಸೇರಿಸಿ ಗೌರವಿಸಲಾಗುತ್ತದೆ.

ಸೆಲಸ್ ಆಟದ ಶೈಲಿ, ತಾಕತ್ತು

ಶಕ್ತಿಶಾಲಿ ಬೇಸ್ಲೈನ್ ಆಟಗಾರ‍್ತಿಯಾಗಿದ್ದ ಸೆಲಸ್ ತಮ್ಮ ಎರಡು ಕೈಗಳ ಬ್ಯಾಕ್ ಹ್ಯಾಂಡ್ ಹಾಗೂ ಪೋರ್ ಹ್ಯಾಂಡ್ ಹೊಡೆತಗಳಿಂದ ಊಹಿಸಲಾಗದ ಬಗೆಯಲ್ಲಿ ಹೆಚ್ಚು ವೇಗದಲ್ಲಿ ಕೋನೆಗಳನ್ನು ಸ್ರುಶ್ಟಿಸಿ ಪಾಯಿಂಟ್ಸ್ ಸಂಪಾದಿಸುತ್ತಿದ್ದರು. ತಮ್ಮ ಬುಜಬಲದಿಂದ ಬೇಕಾದಾಗ ನಿರಾಯಾಸವಾಗಿ ವಿನ್ನರ್ ಗಳನ್ನು ಗಳಿಸುತ್ತಿದ್ದದು ಅವರ ಬತ್ತಳಿಕೆಯಲ್ಲಿದ್ದ ಒಂದು ಮುಕ್ಯ ಅಸ್ತ್ರವಾಗಿತ್ತು. ಬಲವಾದ ಸೆರ‍್ವ್ ಮಾಡುವ ಅಳವು ಹೊಂದಿದ್ದ ಸೆಲಸ್ ಒಮ್ಮೆ ಗಂಟೆಗೆ 174 ಕಿಲೋ ಮೀಟರ್ ವೇಗದ ಸೆರ್‍ವ್ ಮಾಡಿದ್ದು ಅವರ ಶ್ರೇಶ್ಟ ದಾಕಲೆಯಾಗಿದೆ. ಅದಲ್ಲದೆ ಸೆರ‍್ವ್ ಹಿಂದಿರುಗಿಸುವದರಲ್ಲೂ ಅವರು ಸಕ್ಶಮರಾಗಿದ್ದರು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದ ಸೆಲಸ್ ಇಂದಿಗೂ ಯುವ ಆಟಗಾರ‍್ತಿಯರಿಗೆ ಮಾದರಿ. ತಮ್ಮ ಉತ್ತುಂಗದ ದಿನಗಳಾಗಿದ್ದ ಜನವರಿ 1991ರಿಂದ ಪೆಬ್ರವರಿ 1993 ರವರೆಗೂ ಸೆಲಸ್ ಒಟ್ಟು 34 ಟೂರ‍್ನಿಗಳ 33 ಪೈನಲ್ಗಳನ್ನು ತಲುಪಿ ಅವುಗಳಲ್ಲಿ 22 ಟೂರ‍್ನಿಗಳನ್ನು ಗೆದ್ದಿರುತ್ತಾರೆ. ಆ ಹೊತ್ತಿನಲ್ಲಿ 159 ಪಂದ್ಯಗಳನ್ನು ಗೆದ್ದು 12 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿರುತ್ತಾರೆ. ಅವರ ಈ ಬಗೆಯ ದಾಕಲೆಯನ್ನು ಇಂದು ಕಂಡಾಗ ಸೋಜಿಗದ ಜೊತೆಗೆ ಸೆಲಸ್ ರ ಆಟ ಹೇಗಿದ್ದಿರಬಹುದು ಎಂದು ಕುತೂಹಲ ಕೂಡ ಉಂಟಾಗದೇ ಇರದು! ಟೆನ್ನಿಸ್ ಅಂಗಳವನ್ನು ಸೆಲಸ್ ಆಳುತ್ತಿದ್ದಾಗ ಒಂದು ಚೂರಿ ಅವರ ಬದುಕನ್ನೇ ಬುಡಮೇಲು ಮಾಡಿದ್ದು ಸುಳ್ಳಲ್ಲ.

ಸೆಲಸ್ ಎಂಬ ದಿಗ್ಗಜ ಟೆನ್ನಿಸ್ ತಾರೆ

ದಿ ಗಾರ‍್ಡಿಯನ್ ಪತ್ರಿಕೆಯ ಟಿಮ್ ಆಡಮ್ಸ್ ಮೋನಿಕಾ ಸೆಲಸ್ ರನ್ನು “ಟೆನ್ನಿಸ್ ಜಗತ್ತು ಕಂಡ ಶ್ರೇಶ್ಟ ಆಟಗಾರ‍್ತಿ” ಎಂದು ಬಣ್ಣಿಸಿದ್ದು ಅವರ ಆಟದ ಗತ್ತನ್ನು ಸಾರಿ ಹೇಳುತ್ತದೆ. ಟೆನ್ನಿಸ್ ದಂತಕತೆ ಮಾರ‍್ಗರೇಟ್ ಕೋರ‍್ಟ್, ಸೆಲಸ್ ರ ಬದುಕಲ್ಲಿ ಆ ಅವಗಡ ನಡೆಯದೇ ಹೋಗಿದ್ದರೆ ಕಂಡಿತ ಅವರು ಅತ್ಯದಿಕ ಗ್ರಾಂಡ್ಸ್ಲಾಮ್ ಗೆದ್ದಿರುತ್ತಿದ್ದರು ಎಂದು ಹೇಳಿದರೆ ದಿಗ್ಗಜೆ ಮಾರ‍್ಟಿನಾ ನವ್ರಾಟಿಲೋವಾ ಕೂಡ ಸೆಲಸ್ ಟೆನ್ನಿಸ್ ನ ಎಲ್ಲಾ ಬಗೆಯ ದಾಕಲೆ ತಮ್ಮದಾಗಿಸಿಕೊಂಡಿರುತ್ತಿದ್ದರು ಎಂದು ಇಂದಿಗೂ ಹೇಳುವುದು ಸೆಲಸ್ ರ ಅಳವನ್ನು ನಮಗೆ ನೆನಪಿಸುತ್ತದೆ. ಮುಂದೇನಾಗಬಹುದು ಎಂದು ಯಾರೂ ಊಹಿಸಲಾಗದಿದ್ದಾರೂ ಸೆಲಸ್ ಇನ್ನೂ ಹೆಚ್ಚು ಗ್ರಾಂಡ್ಸ್ಲಾಮ್ ಗಳನ್ನು ಕಂಡಿತ ಗೆಲ್ಲುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಎರಡು ವರುಶಗಳ ಕಾಲ ಪ್ರಾಬಲ್ಯ ಮೆರೆದು ದಿಗ್ಗಜೆ ಸ್ಟೆಪಿ ಗ್ರಾಪ್ ರಿಗೆ ಸೆಡ್ಡು ಹೊಡೆದು ಅಗ್ರಪಟ್ಟಕ್ಕೆ ಮೋನಿಕಾ ಸೆಲಸ್ ಏರಿದ ಪರಿ ಅಕ್ಶರಶಹ ಅದ್ವಿತೀಯ. 83% ರ ಗೆಲುವಿನ ಸರಾಸರಿಯಿಂದ 9 ಗ್ರಾಂಡ್ ಸ್ಲಾಮ್ ಗಳೊಂದಿಗೆ ಒಟ್ಟು 59 ಟೂರ‍್ನಿಗಳನ್ನು ಗೆದ್ದಿರುವ ಸೆಲಸ್ ಟೆನ್ನಿಸ್ ಅಂಗಳದ ಅಪರೂಪದ ತಾರೆ. ಅತ್ಯಂತ ಕಡಿಮೆ ಅವದಿಯಲ್ಲಿ ಅವರು ಏರಿದ ಮಟ್ಟಕ್ಕೆ ಇಂದಿಗೂ ಯಾರು ಏರಿಲ್ಲ ಎಂದರೆ ಅವರ ಶ್ರೇಶ್ಟತೆ ಏನೆಂದು ಯಾರಾದರೂ ಊಹಿಸಬಹುದು. ಕೋರ‍್ಟ್ ನಲ್ಲಿ ಆ ದುರಂತ ನಡೆದಾಗ ಅವರಿಗಿನ್ನೂ 19ರ ಹರೆಯ. ಅವರ ಆಟದ ಹೆಚ್ಚು ಉತ್ತುಂಗದ ದಿನಗಳು ಇನ್ನೂ ಅವರ ಮುಂದಿದ್ದವು ಎಂದು ನೆನೆದಾಗ ಇಂದಿಗೂ ನೋವುಂಟಾಗುತ್ತದೆ. ಆದರೂ ಅವರು ವರುಶಗಳ ಬಳಿಕ ಅಂಗಳಕ್ಕೆ ಮರಳಿ ಗ್ರಾಂಡ್ ಸ್ಲಾಮ್ ಗೆದ್ದು ತಾವೆಂತಹ ಗಟ್ಟಿಗಟ್ಟಿ ಎಂದು ಸಾಬೀತು ಮಾಡಿದ್ದು ಟೆನ್ನಿಸ್ ನ ರೋಚಕ ಕತೆಗಳಲ್ಲೊಂದು. ಇಂತಹ ಒಂದು ದೈತ್ಯ ಪ್ರತಿಬೆಯ ಆಟದ ಸಂಪೂರ‍್ಣ ಚಳಕವನ್ನು ಹೆಚ್ಚು ಕಾಲ ಕಣ್ತುಂಬಿಸಿಕೊಳ್ಳಲಾಗದದ್ದು ಟೆನ್ನಿಸ್ ಅಬಿಮಾನಿಗಳ ಪಾಲಿನ ದೊಡ್ಡ ದುರಂತವೇ. ಏನೆಂದರೂ ಮೋನಿಕಾ ಸೆಲಸ್ ಟೆನ್ನಿಸ್ ಅಂಗಳದಲ್ಲಿ ತಮ್ಮದೇ ಬಗೆಯ ವಿಶಿಶ್ಟ ಚಾಪು ಮೂಡಿಸಿದ ದಿಗ್ಗಜ ಆಟಗಾರ‍್ತಿ. ಟೆನ್ನಿಸ್ ಆಟ ಇರುವ ತನಕ ಮೋನಿಕಾ ಸೆಲಸ್ ರ ಹೆಸರು ಅಜರಾಮರ ಅನ್ನೋದು ಮಾತ್ರ ಅಕ್ಶರಶಹ ದಿಟ. ಅವರನ್ನು ಅವರ ಸಾದನೆಗಳನ್ನು ಮರೆಯದೆ ಸದಾ ಗೌರವಿಸೋಣ.

(ಚಿತ್ರ ಸೆಲೆ: flickr.com, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ???

ಅನಿಸಿಕೆ ಬರೆಯಿರಿ: