ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು
ಪ್ರಾಣಾಪಾಯದಿಂದ ಪಾರಾದ ನಾರಿ ಕಂಟ್ರಾಕ್ಟರ್
1961/62 ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಬಾರತದ ನಾಯಕ ನಾರಿ ಕಾಂಟ್ರಾಕ್ಟರ್ ರಿಗೆ ಪಂದ್ಯದ ವೇಳೆ ಬಿದ್ದ ದೊಡ್ಡ ಪೆಟ್ಟಿನಿಂದ ಮತ್ತೆಂದೂ ಕ್ರಿಕೆಟ್ ಆಡದಲಾಗದೆ ನೇಪತ್ಯಕ್ಕೆ ಸರಿದದ್ದು ನಮಗೆಲ್ಲಾ ತಿಳಿದೇ ಇದೆ. ಆದರೆ ಬಹಳ ಮಂದಿ ತಿಳಿದಂತೆ ಈ ಅವಗಡ ನಡೆದದ್ದು ಟೆಸ್ಟ್ ಪಂದ್ಯದಲ್ಲಲ್ಲ. ಬಾರ‍್ಬಡಾಸ್ ಎದುರಿನ ಅಬ್ಯಾಸ ಪಂದ್ಯದ ವೇಳೆ ಸೈಟ್ ಸ್ಕ್ರೀನ್ ನ ಬಳಿ ಆದ ಓಡಾಟದಿಂದ ಬ್ಯಾಟ್ಸ್ಮನ್ ನಾರಿ ಕಾಂಟ್ರಾಕ್ಟರ್ ರಿಗೆ ಚೆಂಡಿನ ಮೇಲಿನ ನೋಟ ಕ್ಶಣಕಾಲ ತಪ್ಪಿದಾಗ ವೇಗಿ ಗ್ರಿಪಿತ್ ರ ಬಿರುಸಿನ ಬೌನ್ಸರ್ ಅವರ ತಲೆಗೆ ಅಪ್ಪಳಿಸುತ್ತದೆ. ಪೆಟ್ಟು ತಿಂದು ನೆರಕ್ಕುರುಳಿದ ಕಾಂಟ್ರಾಕ್ಟರ್ ರಿಗೆ ಗಂಬೀರ ಗಾಯಗಳಾಗಿ ಅವರು ಉಳಿಯುವುದೇ ಅನುಮಾನವಾಗಿರುತ್ತದೆ. ಅದ್ರುಶ್ಟವಶಾತ್ ಶಸ್ತ್ರಚಿಕಿತ್ಸೆಯ ಬಳಿಕ ಪವಾಡವೆನ್ನುವ ರೀತಿಯಲ್ಲಿ ನಾಯಕ ಕಾಂಟ್ರಾಕ್ಟರ್ ರ ಜೀವ ಉಳಿಯುತ್ತದೆ. ಅವರ ಆ ಶಸ್ತ್ರಚಿಕಿತ್ಸೆಗೆ ಮೊದಲು ರಕ್ತದಾನ ಮಾಡಿದ್ದು ವೆಸ್ಟ್ ಇಂಡೀಸ್ ನ ದಂತಕತೆ ಸರ್ ಪ್ರಾಂಕ್ ವೋರೆಲ್ ಎನ್ನುವುದು ಕ್ರಿಕೆಟ್ ಬಾಶೆ, ದೇಶ, ದರ‍್ಮಗಳನ್ನೂ ಮೀರಿ ಬೆಸೆಯುವ ಒಂದು ದೊಡ್ಡ ಶಕ್ತಿ ಎಂಬುದನ್ನು ನೆನಪಿಸುತ್ತದೆ. ಮಾನವೀಯ ಮೌಲ್ಯಗಳನ್ನು ಸಾರುವ ಇಂತಹ ಅಪರೂಪದ ಎತ್ತುಗೆಗಳು ಕ್ರಿಕೆಟ್ ಆಟಕ್ಕೆ ಹೆಮ್ಮೆಯ ವಿಶಯ ಎಂಬುದುರಲ್ಲಿ ಎರಡು ಮಾತಿಲ್ಲ!
ಸುಬಾಶ್ ಗುಪ್ತೆರ ಕೈತಪ್ಪಿದ ಹತ್ತನೇ ವಿಕೆಟ್
1999ರ ಕೋಟ್ಲಾ ಟೆಸ್ಟ್ ನಲ್ಲಿ ಅನಿಲ್ ಕುಂಬ್ಳೆ ಇನ್ನಿಂಗ್ಸ್ ನ ಹತ್ತೂ ವಿಕೆಟ್ ಗಳನ್ನು ಪಡೆದು ಇಂಗ್ಲೆಂಡ್ ನ ಜಿಮ್ ಲೇಕರ್ ರ ಬಳಿಕ ಈ ವಿಶಿಶ್ಟ ದಾಕಲೆ ಮಾಡಿದ್ದು ಈಗ ಇತಿಹಾಸ. ಆದರೆ ಜಿಮ್ ಲೇಕರ್ ಈ ದಾಕಲೆ ಮಾಡಿದ ಎರಡೇ ವರ‍್ಶಗಳ ಬಳಿಕ ಬಾರತದ ಸ್ಪಿನ್ ದಿಗ್ಗಜ ಸುಬಾಶ್ ಗುಪ್ತೆ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಪಡೆದು ಕೂದಲೆಳೆಯಲ್ಲಿ ಈ ದಾಕಲೆಯಿಂದ ವಂಚಿತರಾಗಿದ್ದು ಇತಿಹಾಸದ ಪುಟಗಳಲ್ಲಿ ಕಳೆದುಹೋಗಿದೆ. 1958ರ ಕಾನ್ಪುರ್ ಟೆಸ್ಟ್ ನಲ್ಲಿ ಸುಬಾಶ್ ಗುಪ್ತೆರ ಲೆಗ್ ಸ್ಪಿನ್ ಮರ‍್ಮ ಅರಿಯದೆ ಸೋಬರ‍್ಸ್ ರ ಬಲಾಡ್ಯ ವೆಸ್ಟ್ ಇಂಡೀಸ್ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಕುಸಿಯುತ್ತದೆ. ಅಂದು ಗುಪ್ತೆರ 9/102 ದಾಳಿ ಇನ್ನಿಂಗ್ಸ್ ಒಂದರಲ್ಲಿ ಬಾರತದ ಬೌಲರ್ ಒಬ್ಬನ ಶ್ರೇಶ್ಟ ಪ್ರದರ‍್ಶನ ಎಂಬ ಹಿರಿಮೆ ಪಡೆದರೂ ಕೈಗೆ ಸಿಕ್ಕಿದ್ದ ಆ ಒಂದು ವಿಕೆಟ್ ಅವರಿಗೆ ದಕ್ಕದೇ ಹೋಗುತ್ತದೆ. ಗುಪ್ತೆರ ಬೌಲಿಂಗ್ ನಲ್ಲಿ ಲ್ಯಾನ್ಸ್ ಗಿಬ್ಸ್ ನೀಡಿದ ಅತೀ ಸುಳುವಾದ ಕ್ಯಾಚನ್ನು ವಿಕೆಟ್ ನ ಹಿಂದೆ ತಮ್ಮ ಚಾಕಚಕ್ಯತೆಗೆ ಹೆಸರುವಾಸಿಯಾಗಿದ್ದ ಬಾರತದ ಕೀಪರ್ ನರೇನ್ ತಮ್ಹಾನೆ ಕೈಚೆಲ್ಲುತ್ತಾರೆ. ಆ ಬಳಿಕ ಮುಂದಿನ ಓವರ್ ನಲ್ಲೇ ವೇಗಿ ವಸಂತ್ ರಂಜಾನೆರ ಬೌಲಿಂಗ್ ನಲ್ಲಿ ಗಿಬ್ಸ್ ಬೌಲ್ಡ್ ಆಗುತ್ತಾರೆ. ಈ ಇನ್ನಿಂಗ್ಸ್ ನಲ್ಲಿ ಗುಪ್ತೆರ ಕೈತಪ್ಪಿದ ಏಕೈಕ ವಿಕೆಟ್ ಗಿಬ್ಸ್ ರದ್ದು. ಕೊಂಚ ಆದ್ರುಶ್ಟದ ಬಲವಿದ್ದಿದ್ದರೆ ಅದೂ ಕೂಡ ಅವರ ಕೈವಶವಾಗುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ನಿವ್ರುತ್ತಿಯ ದಶಕಗಳ ನಂತರ ಒಮ್ಮೆ ಈ ಪ್ರಸಂಗವನ್ನು ನೆನೆಯುತ್ತಾ ಗುಪ್ತೆ, ‘ಆ ಪಂದ್ಯದಲ್ಲಿ ವಿನೂ ಮಂಕಡ್ ಇನ್ನೊಂದು ಬದಿಯಿಂದ ನನ್ನೊಂದಿಗೆ ಬೌಲಿಂಗ್ ಮಾಡಿದ್ದರೆ ನನ್ನ ಕೈತಪ್ಪಿದ ಆ ಒಂದು ವಿಕೆಟ್ ಕೂಡ ಕಂಡಿತ ಸಿಗುತ್ತಿತ್ತು, ಏಕೆಂದರೆ ಮಂಕಡ್ ವೈಡ್ ಮಾಡಿರುತ್ತಿದ್ದರು.’ ಎಂದು ಹೇಳಿದ್ದರು. ಇಂದು ಆ ಪಂದ್ಯದ ದಾಕಲೆಯ ಪುಟಗಳನ್ನು ತಿರುವಿ ನೋಡಿದಾಗ ಸುಬಾಶ್ ಗುಪ್ತೆರ ದುರಾದ್ರುಶ್ಟದ ಬಗೆಗೆ ಬೇಸರ ಆಗದೆ ಇರದು.
ಗುಪ್ತೆರ ವ್ರುತ್ತಿಬದುಕಿಗೆ ತೆರೆ ಎಳೆದ ಗೆಳೆಯನ ಪೋನ್ ಕರೆ
1961ರ ಇಂಗ್ಲೆಂಡ್ ಎದುರಿನ ಐದು ಟೆಸ್ಟ್ ಗಳ ಸರಣಿಯ ಮೂರನೇ ಟೆಸ್ಟ್ ಗೆ ಎರಡೂ ತಂಡಗಳು ದೆಹಲಿಯ ಇಂಪೀರಿಯಲ್ ಹೋಟೆಲ್ ನಲ್ಲಿ ಬೀಡು ಬಿಟ್ಟಿರುತ್ತವೆ. ಬಾರತದ ಸ್ಪಿನ್ ಶಕ್ತಿಯಾಗಿದ್ದ ಸುಬಾಶ್ ಗುಪ್ತೆ ಮತ್ತು ಆಲ್ರೌಂಡರ್ ಏ.ಜಿ ಕ್ರಿಪಾಲ್ ಸಿಂಗ್ ರಿಗೆ ಒಂದೇ ಕೋಣೆ ನಿಗದಿಯಾಗಿರುತ್ತದೆ. ಆ ಹೋಟೆಲ್ ನ ರಿಸೆಪ್ಶನಿಸ್ಟ್ ಳಿಗೆ ಮಾರುಹೋಗಿ ಕ್ರಿಪಾಲ್ ಸಿಂಗ್ ಕೋಣೆಯ ಪೋನ್ ನಿಂದ ‘ನನ್ನೊಂದಿಗೆ ಈ ಸಂಜೆ ಡ್ರಿಂಕ್ ಗೆ ಜೊತೆಯಾಗುತ್ತೀರಾ?’ ಎಂದು ತೀರಾ ಸಹಜವಾಗಿ ಕೇಳುತ್ತಾರೆ. ಈ ಆಹ್ವಾನ ಹಿಡಿಸದೆ, ಇದು ತನಗಾದ ಅವಮಾನ ಎಂದು ರಿಸೆಪ್ಶನಿಸ್ಟ್ ತನ್ನ ಮೇಲದಿಕಾರಿಗೆ ದೂರು ನೀಡಿ, ಬಾರತದ ಕ್ರಿಕೆಟ್ ಅದಿಕಾರಿಗಳವರೆಗೂ ಈ ವಿಶಯ ತಲುಪುವಂತೆ ಮಾಡುತ್ತಾರೆ. ಸುದ್ದಿ ತಿಳಿದು ಸಿಡಿಮಿಡಿಗೊಂಡ ಬಾರತದ ಕ್ರಿಕೆಟ್ ಮಂಡಳಿ ಈ ವಿಶಯವನ್ನು ತುಂಬಾ ಗಂಬೀರವಾಗಿ ಪರಿಗಣಿಸಿ ಕ್ರಿಪಾಲ್ ಸಿಂಗ್ ಮತ್ತು ಅವರೊಂದಿಗೆ ಕೋಣೆ ಹಂಚಿಕೊಂಡಿದ್ದ ಸುಬಾಶ್ ಗುಪ್ತೆರನ್ನೂ ವಿಚಾರಣೆಗೆ ಒಳಪಡಿಸುತ್ತದೆ. ವಿಚಾರಣೆ ವೇಳೆ ಗುಪ್ತೆರವರು, ಅಸಲಿಗೆ ಕ್ರಿಪಾಲ್ ಸಿಂಗ್ ಕೋಣೆಯಿಂದ ಪೋನ್ ಮಾಡಿದಾಗ ತಾವು ಅಲ್ಲಿರದೆ ತಂಡದ ಬೇರೆ ಸದಸ್ಯನ ಕೋಣೆಯಲ್ಲಿ ಇಸ್ಪೀಟು ಆಟ ಆಡುತ್ತಿದ್ದೆ. ಹಾಗಾಗಿ ನನಗೆ ಸಂಬಂದವಿಲ್ಲದ ಈ ಸಂಗತಿಯ ಬಗೆಗೆ ಏನೂ ತಿಳಿಯದು ಎಂದು ವಿವರಣೆ ನೀಡುತ್ತಾರೆ. ಗಂಟೆಗಳ ಹೊತ್ತು ನಡೆದ ಈ ವಿಚಾರಣೆ ಏನೂ ಅರಿಯದ ಗುಪ್ತೆರಿಗೆ ರೇಜಿಗೆ ಹುಟ್ಟಿಸುತ್ತದೆ. ಗುಪ್ತೆರ ಉತ್ತರದಿಂದ ಸಂತುಶ್ಟರಾಗದ ಕ್ರಿಕೆಟ್ ಮಂಡಳಿಯ ಅದಿಕಾರಿಗಳು, ‘ಕ್ರಿಪಾಲ್ ಸಿಂಗ್ ಪೋನ್ ಮಾಡದಂತೆ ನೀವು ತಡೆಯಬೇಕಿತ್ತು.’ ಎಂದು ಗುಪ್ತೆರಿಗೆ ಹೇಳಿದಾಗ ಅವರ ತಾಳ್ಮೆಯ ಕಟ್ಟೆ ಒಡೆದು, ‘ಹೌದೇ? ನಾ ಹೇಗೇ ತಡಿಯಲಿ ಅವರನ್ನ? ಅವರು ನನಗಿಂತ ಬಲವುಳ್ಳವರು.’ ಎಂದು ವ್ಯಂಗ್ಯದ ಉತ್ತರ ನೀಡಿ ವಿಚಾರಣೆಯಿಂದ ಹೊರನಡೆಯುತ್ತಾರೆ. ಈ ಪ್ರಹಸನ ತಮ್ಮ ಶಿಸ್ತು ಹಾಗೂ ನೇರ‍್ಮೆಗೆ ಆದ ಅವಮಾನ ಎಂದು ಬಾವಿಸಿ ಸುಬಾಶ್ ಗುಪ್ತೆ ಇನ್ನೆಂದೂ ಬಾರತದ ಪರ ಆಡಲೊಲ್ಲೆ ಎಂದು ದೇಶ ತೊರೆದು ವೆಸ್ಟ್ ಇಂಡೀಸ್ ನಲ್ಲಿ ನೆಲೆಸುತ್ತಾರೆ. ಹೀಗೆ ತಾವು ಮಾಡದ ತಪ್ಪಿಗೆ 36 ಟೆಸ್ಟ್ ಗಳಿಂದ 149 ವಿಕೆಟ್ ಗಳನ್ನು ಪಡೆದು ಇನ್ನೂ ಎತ್ತರಕ್ಕೆ ಏರುವ ಬರವಸೆ ಮೂಡಿಸಿದ್ದ ಸುಬಾಶ್ ಗುಪ್ತೆರ ಅಂತರಾಶ್ಟ್ರೀಯ ವ್ರುತ್ತಿ ಬದುಕು ದುರಂತಮಯವಾಗಿ ಹಟಾತ್ತನೆ ಕೊನೆಗೊಳ್ಳುತ್ತದೆ. ಆದರೆ ತಮಾಶೆ ಎಂದರೆ, ಅಸಲಿಗೆ ತಪ್ಪೆಸಗಿದ್ದ ಕ್ರಿಪಾಲ್ ಸಿಂಗ್ ಅಲ್ಲಿಂದ ಮೂರು ವರ‍್ಶಗಳ ಕಾಲ 1964 ರವರೆಗೂ ಬಾರತದ ಪರ ಆಡುತ್ತಾರೆ. ಒಬ್ಬ ಸ್ಪಿನ್ ದಿಗ್ಗಜನ ಕ್ರಿಕೆಟ್ ಬದುಕನ್ನು ಬಲಿ ತಗೆದುಕೊಂಡ ಈ ವಿಲಕ್ಶಣ ಪ್ರಹಸನ ಕಂಡಿತವಾಗಿಯೂ ಬಾರತದ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ಅದ್ಯಾಯ.
“ವೆಂಕಟ್, ನೀವಿನ್ನು ಬಾರತ ತಂಡದ ನಾಯಕರಲ್ಲ!”
1979ರ ಇಂಗ್ಲೆಂಡ್ ಪ್ರವಾಸಕ್ಕೆ ವೆಂಕಟರಾಗವನ್ ರವರ ಮುಂದಾಳ್ತನದಲ್ಲಿ ತೆರಳಿದ್ದ ಬಾರತ ತಂಡ 4 ಟೆಸ್ಟ್ ಗಳ ಸರಣಿಯಲ್ಲಿ 1-0 ರಿಂದ ಸೋಲುಂಡರೂ ಸರಣಿಯುದ್ದಕ್ಕೂ ಒಳ್ಳೆ ಪೈಪೋಟಿಯನ್ನೇ ನೀಡಿರುತ್ತದೆ. ಅದರಲ್ಲೂ ಓವಲ್ ನಲ್ಲಿ ನಡೆದ ಕಡೇ ಟೆಸ್ಟ್ ನಲ್ಲಿ 438 ರನ್ ಗಳ ಗುರಿ ಬೆನ್ನತ್ತಿ 429/8 ತಲುಪಿದ್ದ ರೀತಿ ಇಂಗ್ಲೆಂಡ್ ತಂಡಕ್ಕೆ ಬೀತಿ ಹುಟ್ಟಿಸಿರುತ್ತದೆ. ಇನ್ನೇನು ಗೆಲುವು ದಕ್ಕಲಿದೆ ಎಂತಿರುವಾಗ ಪಂದ್ಯ ಡ್ರಾನಲ್ಲಿ ಕೊನೆಗೊಂಡಿರುತ್ತದೆ. ಇಂತಹ ಸಮಾದಾನಕಾರ ಪ್ರದರ‍್ಶನದ ಬಳಿಕ ತಂಡ ತವರಿಗೆ ಹಿಂದಿರುಗುವಾಗ ವಿಮಾನದಲ್ಲಿ ನಡೆದ ಒಂದು ಗಟನೆ ಎಲ್ಲರನ್ನೂ ದಿಗ್ಬ್ರಮೆಗೊಳಿಸುತ್ತದೆ. ಬಾರತ ತಂಡ ಪಯಣಿಸುತ್ತಿದ್ದ ಏರ್ ಇಂಡಿಯಾದ ವಿಮಾನದ ಪೈಲಟ್ ಮುಕ್ಯ ಪ್ರಕಟಣೆ ಎಂದು ಪ್ರಯಾಣಿಕರನ್ನು ಉದ್ದೇಶಿಸಿ, ಬಾರತದ ನಾಯಕತ್ವವವನ್ನು ಆಯ್ಕೆ ಮಂಡಳಿ ವೆಂಕಟರಾಗವನ್ ರಿಂದ ಕಸಿದುಕೊಂಡು ಸುನಿಲ್ ಗವಾಸ್ಕರ್ ರಿಗೆ ನೀಡಿರುವುದಾಗಿ ಸುದ್ದಿ ಪ್ರಕಟಿಸುತ್ತಾರೆ. ಈ ವಿಶಯ ತಿಳಿದೊಡನೆ ತಂಡದ ಇತರೆ ಆಟಗಾರರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಮೌನಕ್ಕೆ ಶರಣಾದರೆ, ಒಟ್ಟಿಗೆ ಇದ್ದ ಗವಾಸ್ಕರ್ ಮತ್ತು ವೆಂಕಟ್ ಇಬ್ಬರಿಗೂ ಪಯಣದುದ್ದಕ್ಕೂ ತೀವ್ರ ಇರುಸುಮುರುಸು ಉಂಟಾಗಿ ಒಬ್ಬರೊಬ್ಬರನ್ನು ನೋಡಿ ಮಾತನಾಡಿಸುವುದೇ ದುಸ್ತರವಾಗುತ್ತದೆ. ಒಂದು ವ್ರುತ್ತಿಪರ ಕ್ರಿಕೆಟ್ ಸಂಸ್ತೆ ತನ್ನ ನಾಯಕನನ್ನು ಈ ರೀತಿ ಎಲ್ಲರೆದರು ಅವಮಾನ ಮಾಡಿದ್ದು ತರವಲ್ಲ, ಬಿಸಿಸಿಐ ಮಾಡಿದ್ದು ಅಕ್ಶಮ್ಯ ಅಪರಾದ ಎಂದು ಬಾರತದಲ್ಲಿ ಪತ್ರಿಕೆಗಳು ಟೀಕೆ ಮಾಡಿ ಮಾಜಿ ನಾಯಕನ ಬೆಂಬಲಕ್ಕೆ ನಿಂತರೂ, ವೆಂಕಟ್ ಈ ಗಾಸಿಯಿಂದ ಸುದಾರಿಸಿಕೊಳ್ಳಲು ತುಂಬಾ ಹೊತ್ತು ಹಿಡಿಯುತ್ತದೆ.
ಇಂತಹ ಗಟನೆಗಳು ಹೇಗೆ ನಡೆದಿರಲು ಸಾದ್ಯ ಎಂದು ನಮಗಿಂದು ಅನಿಸದೇ ಇರದು. ಏಕೆಂದರೆ ಆ ಮಟ್ಟಕ್ಕೆ ದೇಶದಲ್ಲಿ ಇಂದು ಕ್ರಿಕೆಟ್ ಆಡಳಿತ ಎಂಬುದು ಸುದಾರಿಸಿ ವ್ರುತ್ತಿಪರತೆಯನ್ನು ಮೈಗೂಡಿಸಿಕೊಂಡಿದೆ. ಈ ಗಟನೆ ನಡೆದು ಇಂದಿಗೆ ನಾಲ್ಕು ದಶಕ ಉರುಳಿದ್ದರೂ ಇಂತಹ ಅಚಾತುರ‍್ಯ ಹೇಗೆ ಮತ್ತು ಏಕೆ ನಡೆಯಿತು ಎನ್ನುವುದಕ್ಕೆ ಸೂಕ್ತ ಉತ್ತರ ಇನ್ನೂ ದೊರೆತಿಲ್ಲ. ಆದರೆ ಕ್ರಿಕೆಟ್ ಆಟವನ್ನು ಪ್ರೀತಿಸುವ, ಗೌರವಿಸುವ ಅಬಿಮಾನಿಗಳು ಈ ವಿಶಯದ ಕುರಿತು ಸಂಬಾವಿತ ವೆಂಕಟ್ ರ ಬಗೆಗೆ ಇಂದಿಗೂ ಕನಿಕರ ಹೊಂದಿದ್ದಾರೆ.
(ಚಿತ್ರಸೆಲೆ: sportskeeda.com)
ಕ್ರಿಕೆಟ್ ಆಟದ ಹೊರಗೆ ನಡೆಯುವ ವಿದ್ಯಮಾನದ ಬಗ್ಗೆ ಚೆಂದದ ಮಾಹಿತಿ