ಬಡವರ ಸೇಬು – ಸೀಬೆಹಣ್ಣು

– ಶ್ಯಾಮಲಶ್ರೀ.ಕೆ.ಎಸ್.

ಬಡವರ ಸೇಬು ಎಂದರೆ ತಟ್ಟನೆ ನೆನಪಿಗೆ ಬರುವುದು ಸೀಬೆಹಣ್ಣು. ಹಣ್ಣುಗಳ ರಾಣಿ ಎಂತಲೂ ಸೀಬೆಹಣ್ಣನ್ನು ಕರೆಯುವುದುಂಟು. ಮಕ್ಕಳು, ಹಿರಿಯರು ಹೀಗೆ ಎಲ್ಲರಿಗೂ ಅಚ್ಚುಮೆಚ್ಚು ಈ ಸೀಬೆಹಣ್ಣು. ಮಕ್ಕಳು ಸಾಮಾನ್ಯವಾಗಿ ಇತರೆ ಹಣ್ಣುಗಳನ್ನು ತಿನ್ನಲು ನಿರಾಕರಿಸಿದರೂ ಸೀಬೆಹಣ್ಣನ್ನು ಮಾತ್ರ ಅಶ್ಟಾಗಿ ನಿರಾಕರಿಸುವುದಿಲ್ಲ. ಸೀಬೆ ಹಣ್ಣು ಹಸಿರಾಗಿ ಕಂಡರೂ ಹೆಚ್ಚಾಗಿ ಒಳಗಿನ ತಿರುಳು ಬಿಳಿಯದ್ದಾಗಿರಲಿದ್ದು, ಸಣ್ಣ ಸಣ್ಣ ಬೀಜಗಳನ್ನು ಒಳಗೊಂಡಿರುತ್ತದೆ. ಇದರ ಇನ್ನೊಂದು ತಳಿಯಾದ ಚಂದ್ರ ಸೀಬೆಯ ತಿರುಳು ಕೆಂಪಾಗಿರುತ್ತದೆ. ಈ ಎರಡು ಬಗೆಯ ಸೀಬೆಹಣ್ಣುಗಳ ರುಚಿ ತುಸು ಬಿನ್ನವಾಗಿರುವುದಶ್ಟೇ ಹೊರತು ಅದರಲ್ಲಿರುವ ಪೋಶಕಾಂಶಗಳು ಒಂದೇ ಆಗಿರುತ್ತದೆ. ಸೀಬೆಹಣ್ಣಿಗೆ ‘ಪೇರಲೆಹಣ್ಣು’ ಎಂಬ ಪರ‍್ಯಾಯ ಹೆಸರಿದೆ. ಗ್ರಾಮೀಣ ಬಾಗಗಳಲ್ಲಿ ಚೇಪೆಹಣ್ಣು, ಚೇಪೆಕಾಯಿ ಇಲ್ಲವೇ ಬಿಕ್ಕೆಹಣ್ಣು ಎಂದೆಲ್ಲಾ ಕರೆಯುವರು.

ಕೊಲಂಬಿಯಾ, ವೆನಿಜುಲಾ, ಮೆಕ್ಸಿಕೋ ಮತ್ತಿತರ ದೇಶಗಳ ಉಶ್ಣವಲಯದ ಬೆಳೆಯಾಗಿರುವ ಸೀಬೆ ಬಾರತದೆಲ್ಲೆಡೆ ಬಹಳ ಜನಪ್ರಿಯವಾದ ಹಣ್ಣು. ತುಂಬಾ ಮಂದಿ ಮನೆಯ ಮುಂದಿನ ಜಾಗಗಳಲ್ಲಿ ಇದನ್ನು ಇಶ್ಟ ಪಟ್ಟು ಬೆಳೆಸುತ್ತಾರೆ. ಹಾಗೆಯೇ ಹಳ್ಳಿಗಳ ಹೊಲ ತೋಟಗಳಲ್ಲಿಯೂ ಇದನ್ನು ಕಾಣಬಹುದು. ಕೆಲವೆಡೆ ಇದು ವಾಣಿಜ್ಯ ಬೆಳೆಯೂ ಆಗಿದೆ.

ಬಾರತಕ್ಕೆ ಈ ಹಣ್ಣನ್ನು ಪೋರ‍್ಚುಗೀಸರು ಪರಿಚಯಿಸಿದವರು. ಈ ಹಣ್ಣು ಪರದೇಶದಿಂದ ನಮಗೆ ಪರಿಚಿತವಾದರೂ, ಸೀಬೆಹಣ್ಣನ್ನು ಬೆಳೆಯುವಲ್ಲಿ ಬಾರತ ಅಗ್ರಸ್ತಾನ ಪಡೆದಿದೆ. ದಕ್ಶಿಣ ಬಾರತದ ಹಲವೆಡೆ ಇದರ ಪ್ರಾದಾನ್ಯತೆಯನ್ನು ಕಾಣಬಹುದು. ವರಮಹಾಲಕ್ಶ್ಮಿ ಹಬ್ಬದ ಸಮಯದಲ್ಲಿ ಇದರ ಬೇಡಿಕೆ ಹೆಚ್ಚೆಂದೇ ಹೇಳಬೇಕು. ರಸ್ತೆ ಬದಿಗಳಲ್ಲಿ ಸೀಬೆಹಣ್ಣುನ್ನು ಮಾರುವವರು, ಅದನ್ನು ಕತ್ತರಿಸಿ ಆ ಹೋಳುಗಳಿಗೆ ಉಪ್ಪು ಕಾರ ಸವರಿ ಕೊಡುವುದನ್ನು ನೋಡಿರಬಹುದು. ಇದನ್ನು ತಿನ್ನುವವರಿಗೂ ಎಲ್ಲಿಲ್ಲದ ಸಂಬ್ರಮ. ಶಾಲಾ ಕಾಲೇಜುಗಳ ಮುಂಬಾಗದಲ್ಲಿ, ಬಸ್ ನಿಲ್ದಾಣ ಹೀಗೆ ಇದನ್ನು ಕಾಣದವರಿಲ್ಲ. ಅಲ್ಲದೆ ಈಗೀಗ ರುಚಿಗಾಗಿ ಚಾಟ್ ಮಸಾಲೆ ಲೇಪಿಸಿಕೊಂಡು ಸವಿಯುವವರಿದ್ದಾರೆ. ಕೆಲವರಿಗೆ ಸೀಬೆಹಣ್ಣನ್ನು ತಿಂದರೆ ಗಂಟಲು ಅಲರ‍್ಜಿಯಾಗುವುದರಿಂದ ಉಪ್ಪನ್ನು ಸವರಿಕೊಂಡು ಸೇವಿಸುತ್ತಾರೆ. ಈ ಹಣ್ಣನ್ನು ತಿನ್ನುವುದರಿಂದ ಶೀತ, ಕೆಮ್ಮು, ನೆಗಡಿಗಳು ಆವರಿಸುವುದೆಂಬ ಅಬಿಪ್ರಾಯ ನಮ್ಮ ಹಿರಿಯರಿಗೆ ಇದೆ. ಆದರೆ ವೈಜ್ನಾನಿಕವಾಗಿ ಇದರ ಬಗ್ಗೆ ಎಲ್ಲಿಯೂ ನಿಕರವಾಗಿ ಹೇಳಿದಂತಿಲ್ಲ(ಆದರೂ ಅಸ್ತಮಾ, ಶೀತ ಪ್ರಕ್ರುತಿಯುಳ್ಳವರು ತಜ್ನರ ಸಲಹೆ ಮೇರೆಗೆ ಸೀಬೆಹಣ್ಣನ್ನು ತಿನ್ನಬೇಕಾಗಬಹುದು). ಸೀಬೆಹಣ್ಣು ಕಾಯಿ ಕಾಯಿಯಂತಿದ್ದರೆ ಅದರ ಒಗರಿನ ರುಚಿ ಬೇಸರ ಮೂಡಿಸುವುದು. ಸ್ವಲ್ಪ ಮಾಗಿದ ಹಣ್ಣಾದರೆ ಸಿಹಿಯಾಗಿ ತಿನ್ನಲು ಸೊಗಸಾಗಿರುತ್ತದೆ . ಸೀಬೆಹಣ್ಣು ತೀರಾ ಹಣ್ಣಾದಲ್ಲಿ, ಬಿಳಿ ಬಣ್ಣದ ಹುಳುಗಳನ್ನು ಅದರೊಳಗೆ ಕಾಣಬಹುದು.

ಬೇರೆ ಹಣ್ಣಿನ ಮರಗಳಂತೆಯೇ ಈ ಸೀಬೆ ಮರಗಳಿಗೂ, ಹಣ್ಣಿನ ಸೆಳೆತಕ್ಕೆ ಅಳಿಲು, ಗಿಳಿಯಂತ ಹಕ್ಕಿಗಳು, ಮಂಗಗಳು ಬೇಟಿ ನೀಡದೆ ಇರುವುದಿಲ್ಲ. ‘ಸೀಡಿಯಂ ಗ್ವಜಾವ'(Psedium Guajava) ಎಂಬ ವೈಜ್ನಾನಿಕ ಹೆಸರಿನಿಂದ ಕರೆಯಲಾಗುವ ಈ ಗಿಡ ಸುಮಾರು 20 ರಿಂದ 30 ಅಡಿಗಳಶ್ಟು ಎತ್ತರಕ್ಕೆ ಬೆಳೆಯಬಹುದು. ಇದರ ಎಲೆ ಸ್ವಲ್ಪ ದಪ್ಪನಾಗಿ ಮಾಸಲು ಹಸಿರು ಹಾಗೂ ಕಡು ಹಸಿರು ಬಣ್ಣ ಹೊಂದಿರಲಿದ್ದು ಕೊಂಚ ಸುವಾಸನೆಬರಿತವಾಗಿರುತ್ತದೆ. ಹೈಬ್ರಿಡ್ ತಳಿಗಳು ಅಶ್ಟು ಎತ್ತರ ಬೆಳೆಯದಿದ್ದರೂ ಗುಂಪು ಗುಂಪಾಗಿ ಬೆಳೆದು ಬೇಗನೇ ಹಣ್ಣುಗಳನ್ನು ಬಿಡಲಾರಂಬಿಸುತ್ತವೆ. ವರ‍್ಶಕ್ಕೆ ಎರಡು ಬಾರಿ ಇದರ ಪಸಲನ್ನು ಪಡೆಯಬಹುದು. ಸೀಬೆಹಣ್ಣನ್ನು ಪ್ರೂಟ್ ಸಲಾಡ್, ಸೀಬೆಕಾಯಿ ಗೊಜ್ಜು, ಚಟ್ನಿ, ಜಾಮ್ ಹೀಗೆ ವಿಬಿನ್ನ ಕಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸೀಬೆಹಣ್ಣಿನಲ್ಲಿ ಬೇರೆ ಸಿಟ್ರಿಕ್ ಹಣ್ಣುಗಳಿಗಿಂತ ಸಿಟ್ರಿಕ್ ಅಂಶ ದುಪ್ಪಟ್ಟಾಗಿ ಇರುತ್ತದೆಯಂತೆ. ಇದು ದೇಹಕ್ಕೆ ಅಗತ್ಯವಾದ ಹಾರ‍್ಮೋನ್ ಗಳನ್ನು ಒದಗಿಸುತ್ತದೆ. ನಾರಿನಂಶ, ಪೋಶಕಾಂಶಗಳ ಕಣಜವಾಗಿರುವ ಸೀಬೆಯನ್ನು ಕಡಿಮೆ ಕರ‍್ಚಿನಲ್ಲಿ ಅದಿಕ ಒಳಿತಿನ ಗುಣಗಳಿರುವ ಇರುವ ಹಣ್ಣೆಂದು ತಜ್ನರು ಸೂಚಿಸಿರುತ್ತಾರೆ.

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: