ಗಂದದಗುಡಿ: ಒಂದು ಸುಂದರ ಪಯಣ

– ವಿಜಯಮಹಾಂತೇಶ ಮುಜಗೊಂಡ.

ಕನ್ನಡಿಗರಿಗೆ ಐಕಾನ್ ಆಗಿದ್ದ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಒಂದು ವರುಶ ಕಳೆದಿದೆ. ವರುಶ ಕಳೆದರೂ ಅವರು ನಮ್ಮಿಂದ ದೂರವಾದ ಸುದ್ದಿಯನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನೆನಪುಗಳು, ಅವರ ಸರಳತೆ ಎಂದಿಗೂ ನಮ್ಮ ಜೊತೆಯಲ್ಲಿರುತ್ತವೆ. ಅಪ್ಪು ಅವರ ಸರಳತೆಯಶ್ಟೇ ಸುಂದರವಾದ ಅವರ ಕೊನೆಯ ಸಿನೆಮಾ ಗಂದದಗುಡಿ ಬಿಡುಗಡೆಯಾಗಿದೆ.

ಗಂದದಗುಡಿ ಹಾಗೆ ನೋಡಿದರೆ ಸಿನೆಮಾ ಅಲ್ಲ ಎನ್ನುವುದೇ ನನ್ನ ಅನಿಸಿಕೆ. ಇಲ್ಲಿ ಬೇರೆ ಸಿನೆಮಾಗಳಂತೆ ಕತೆಯಿಲ್ಲ, ಕರ್‍ನಾಟಕದ ಕಡಲು-ಕಾಡುಗಳನ್ನು, ನದಿ-ನೀರು, ಜೀವವೈವಿದ್ಯತೆ, ಬುಡಕಟ್ಟುಗಳನ್ನು ಅರಸುತ್ತಾಹೋಗುವ ಅಪ್ಪು, ಹೀರೋ ಆಗಿದ್ದ ಅಪ್ಪು ಅವರನ್ನು ಅರಸುತ್ತಾ ಹೋಗುವ ನಿರ್‍ದೇಶಕ ಅಮೋಗವರ್‍ಶ ಅವರ ಒಂದು ಸುಂದರ ಪಯಣ ‘ಗಂದದಗುಡಿ’.

ಅಮೋಗವರ್‍ಶ ಅವರು ಈ ಹಿಂದೆ ವೈಲ್ಡ್ ಕರ್‍ನಾಟಕ ಎನ್ನುವ ಡಾಕುಮೆಂಟರಿಯನ್ನು ಮಾಡಿ ಹೆಸರಾಗಿದ್ದರು. ಸುಮಾರು 20 ಕ್ಕೂ ಹೆಚ್ಚು ವರುಶಗಳಿಂದ ಕಾಡು-ಮೇಡುಗಳಲ್ಲಿ ಓಡಾಡುತ್ತಾ, ಕರ್‍ನಾಟಕದ ಜೀವವೈವಿದ್ಯತೆಯ ಕುರಿತು ಹಲವು ಡಾಕ್ಯುಮೆಂಟರಿ ಬಗೆಯ ವಿಡಿಯೋಗಳನ್ನು ಅವರು ಮಾಡಿದ್ದಾರೆ. ಅವರು ಕಾಡುಗಳ ಬಗ್ಗೆ, ಕಾಡುಪ್ರಾಣಿಗಳ ಜೀವನದ ಬಗ್ಗೆ ತಿಳಿದಿರುವುದು ನಿಜವಾಗಿಯೂ ಅಮೋಗ. ಇದರಿಂದಾಗಿಯೇ (ಅದರಲ್ಲೂ ಪುನೀತ್ ಅವರನ್ನು ಜೊತೆಯಾಗಿಸಿಕೊಂಡು) ಈ ಪ್ರಾಜೆಕ್ಟ್ ಮಾಡಲು ಹೊರಟಿದ್ದಾರೆ ಎಂದಾಗ ಸಹಜವಾಗಿಯೇ ಅಚ್ಚರಿ ಮತ್ತು ಕುತೂಹಲ ಹೆಚ್ಚಾಗಿತ್ತು. ಕಾಡುಗಳ ಕುರಿತ ಅಮೋಗ್ ಅವರಿಗಿರುವ ಅಪಾರವಾದ ತಿಳುವಳಿಕೆ ‘ಗಂದದಗುಡಿ’ಯಲ್ಲಿ ಎದ್ದುಕಾಣುತ್ತದೆ. ಮಕ್ಕಳಂತೆ ಮುಗ್ದ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಅಪ್ಪು ಅವರನ್ನು, ಅಮೋಗ್ ಕಾಡು ಮತ್ತು ಕಾಡಿನ ಪ್ರಾಣಿಗಳ ಜೀವಿನವಿದಾನವನ್ನು ವಿವರಿಸುತ್ತ, ಅಪ್ಪು ಅವರಿಗೆ ತೋರಿಸುತ್ತಾ ಪಯಣಿಸುತ್ತಾರೆ. ಅಂತಹುದೊಂದು ಸುಂದರ ಅನುಬವವನ್ನು ನೋಡುಗರಿಗೂ ಉಣಬಡಿಸುತ್ತಾರೆ.

ಡಾ|| ರಾಜ್‌ಕುಮಾರ್ ಅವರು ಹುಟ್ಟಿದ ಊರು ಗಾಜನೂರಿನ ಹಳೆಯ ಮನೆಗೆ ಮೊದಲು ತಲುಪುವ ಇಬ್ಬರ ಪಯಣ ನಾಗರಹೊಳೆ, ಮಲೆನಾಡಿನ ಮಳೆಕಾಡುಗಳು, ತೆಂಕಣದ ಕುರುಚಲು ಕಾಡುಗಳನ್ನೆಲ್ಲ ಸುತ್ತುತ್ತದೆ. ಹುಲಿ-ಆನೆಗಳನ್ನು ನೋಡಬೇಕೆಂಬ ಹೆಬ್ಬಯಕೆ ಹೊತ್ತು ಹೊರಟ ಜೋಡಿ, ಕಾಡುಗಳಲ್ಲೇ ಹುಟ್ಟಿ ಬೆಳೆದು ಇಂದು ನಮ್ಮ ನಾಡಿನ ಕಾಡುಗಳನ್ನು ಕಾಪಾಡಬೇಕೆಂದ ಮಹದಾಸೆಯಿಂದ ಅರಣ್ಯ ಇಲಾಕೆಯಲ್ಲಿ ಕೆಲಸ ಮಾಡುತ್ತಿರುವವರ ಜೊತೆ ಒಂದು ರಾತ್ರಿ ಕಳೆಯುತ್ತಾರೆ. ಒಬ್ಬ ಸ್ಟಾರ್ ನಟನಾಗಿದ್ದೂ ಪುನೀತ್ ಜನರೊಡನೆ ಸರಳವಾಗಿ ಬೆರೆಯುವ ಬಗೆ, ನಿಜವಾಗಿಯೂ ಅವರಲ್ಲಿದ್ದ ಮುಗ್ದತೆ ಇಡೀ ಚಿತ್ರದುದ್ದಕ್ಕೂ ತೆರೆದುಕೊಳ್ಳುತ್ತದೆ. ಇದು ನೋಡುರನ್ನು ಕಾಡದೇ ಬಿಡದು. ಕಾಡುಗಳ ನಾಶ, ಪ್ರಾಣಿಗಳ ಬೇಟೆಯಿಂದ ಆಗುತ್ತಿರುವ ಅನಾಹುತಗಳನ್ನು ‘ಗಂದದಗುಡಿ’ ನಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತದೆ. ಸ್ಕೂಬಾ ಡೈವಿಂಗ್ ಮಾಡಲೆಂದು ಕಡಲಿನಾಳಕ್ಕೆ ಹೋದರೆ ಅಲ್ಲೊಂದು ಚೆಂದದ ಬಣ್ಣದ ಲೋಕ, ಬಗೆಬಗೆಯ ನೀರಿನಾಳದ ಜೀವಿಗಳ ನಡುವೆ ಕಾಣುವ ಪ್ಲಾಸ್ಟಿಕ್ ನೋಡುಗರನ್ನು ಕಾಡದೇ ಇರುವುದಿಲ್ಲ.

ಕಾಡುಗಳ ಮತ್ತು ಕಾಡಿನಾಚೆಯ ಬುಡಕಟ್ಟುಗಳ ಮಂದಿಯ ಆಚರಣೆ, ನಂಬಿಕೆಗಳು, ದೇವರ ಕುರಿತ ಹೊಸದೊಂದು ಆಯಾಮವನ್ನೇ ತೋರುತ್ತದೆ. ಜೀವನೋಪಾಯಕ್ಕೆಂದು ತಾವು ಸಾಕಿದ ಕುರಿಗಳನ್ನು ಕೊಂದು ತಿನ್ನುವ ತೋಳಗಳನ್ನು ತಮ್ಮ ಅಣ್ಣ-ತಮ್ಮಂದಿರೆಂದು ಕಾಣುವ ಕುರುಬ ಸಮುದಾಯದ ನಂಬಿಕೆ ಮನುಶ್ಯ-ಪ್ರಾಣಿಗಳ ನಡುವಿನ ತಿಕ್ಕಾಟಕ್ಕೆ ಹೊಸ ದ್ರುಶ್ಟಿಕೋನವನ್ನೇ ತೆರೆದಿಡುತ್ತದೆ. ಪ್ರಾಣಿಗಳಿಂದ ಎಶ್ಟೊಂದು ತೊಂದರೆಗಳಿಗೆ ಒಳಗಾದರೂ ಅವು ತಮ್ಮ ಬದುಕಿನ ಬಾಗವೇ ಎಂದು ತಿಳಿದು ಬದುಕುತ್ತಿರುವ ಮುಗ್ದ ಮಂದಿಯನ್ನು ಕಂಡರೆ ನಮಗೆ ನಿಜಕ್ಕೂ ನಮ್ಮ ಬಗ್ಗೆಯೇ ಅಸಹ್ಯವೆನಿಸದೇ ಇರದು.

ಕಾಳಿ ನದಿಯ ಸುತ್ತ ಇರುವ ಒಂದು ಪುಟ್ಟ ಊರು, ಹೊರ ಜಗತ್ತಿಗೆ ತೆರೆದುಕೊಳ್ಳದೇ ಇದ್ದ ಕಾಡಿನ ಮಂದಿ. ಕೆಲವೇ ವರುಶಗಳ ಹಿಂದೆ ಕರೆಂಟು ಕಂಡ ಊರಿನಲ್ಲಿ ಮನರಂಜನಗೆ ಟಿವಿ ಕೂಡ ಇಲ್ಲ. ಅಲ್ಲಿನ ಸುಂದರ ಬದುಕು, ಮಂದಿಯ ಸರಳತೆಗೆ ಮಾರಹೋಗದೇ ಇರಲಾಗದು. ಅಲ್ಲೊಂದು ಶಾಲೆ. ಅಲ್ಲಿಗೆ ಬೇಟಿ ನೀಡಿದಾಗ ಮಕ್ಕಳ್ಯಾರೂ ಪುನೀತ್ ಅವರನ್ನು ಗುರುತಿಸುವುದೇ ಇಲ್ಲ. ಇದೊಂತರಾ ಅಚ್ಚರಿಯಾಗಿ ಕಂಡರೂ ಅದನ್ನು ಹಾಗೆಯೇ ತೋರಿಸುವ ಮೂಲಕ ಗಂದದಗುಡಿ ಸರಳತೆಯನ್ನು ಮೈಗೂಡಿಸಿಕೊಂಡಿದೆ. ಇದೊಂದು ಬಗೆಯ ಸೀರಿಯಸ್ ಡಾಕುಮೆಂಟರಿ ಆದರೂ ಅಲ್ಲಲ್ಲಿ ಪುನೀತ್ ಅವರ ನಗೆಚಟಾಕಿಗಳು ನೋಡುಗರ ಮೊಗದಲ್ಲಿ ಮಂದಹಾಸ ಮೂಡಿಸದೇ ಇರುವುದಿಲ್ಲ. ಅದರಲ್ಲೂ ಹಾವುಗಳ ಕುರಿತಾಗಿ ಪುನೀತ್ ತಮಗಿರುವ ಅಂಜಿಕೆಯನ್ನು ಹೊರಹಾಕುವ ರೀತಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಸುತ್ತಾಟ ಎಂದರೆ ಕ್ಯಾಮರಾ ಜೊತೆಗಿರಲೇಬೇಕೆಂಬ ನಂಬಿಕೆ ನಮ್ಮಲ್ಲಿದೆ. ಗಂದದಗುಡಿಯ ಕ್ಯಾಮರಾ ಕೈಚಳಕದ ಬಗ್ಗೆ ಮಾತಾಡದೇ ಹೋದರೆ ಅದು ನಮ್ಮ ನಂಬಿಕೆಗೆ ದ್ರೋಹ ಬಗೆದಂತೆ. ಪ್ರತೀಕ್ ಶೆಟ್ಟಿ ಕರುನಾಡಿನ ಚಿತ್ರಣವನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಅದ್ಬುತವಾಗಿ ಸೆರೆಹಿಡಿದಿದ್ದಾರೆ. ಕೆಲ ಡ್ರೋನ್ ದ್ರುಶ್ಯಗಳಂತೂ ಕಣ್ಣಿಗೆ ಕಟ್ಟುವಂತಿವೆ. ಸಂಗೀತದಲ್ಲಿ ಅಜನೀಶ್ ಲೋಕನಾತ್ ಎಂದಿನಂತೆ ತಮ್ಮ ಚಳಕವನ್ನು ತೋರಿಸಿದ್ದಾರೆ. ಚಿತ್ರದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಡಾ|| ರಾಜ್‌ಕುಮಾರ್ ಮತ್ತು ಪುನೀತ್ ಅವರ ಹಳೆಯ ಸಿನೆಮಾ ಗೀತೆಗಳು ಮತ್ತು ವಿಡಿಯೋ ಬೈಟ್‌ಗಳು ಮತ್ತೆ ನಮ್ಮನ್ನು ದಶಕಗಳಶ್ಟು ಹಿಂದಕ್ಕೆ ಸೆಳೆದೊಯ್ಯುತ್ತವೆ. ನೀವು ಡಾ|| ರಾಜ್‌ಕುಮಾರ್ ಅತವಾ ಪುನೀತ್ ಅವರ ಅಬಿಮಾನಿಯಾಗಿರಲಿ ಇಲ್ಲದಿರಲಿ, ಕರುನಾಡ ಕಾಡುಗಳೊಳಗೆ ಸುತ್ತುವ ಸುಂದರ ಪಯಣದ ಅನುಬವ ಮತ್ತು ನಮ್ಮ ಕಾಡುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನಂತೂ ತಪ್ಪಿಸಿಕೊಳ್ಳಲೇಬಾರದು. ಮಕ್ಕಳಿಗಂತೂ ಇದೊಂದು ಒಳ್ಳೆಯ ಕಲಿಕೆ ನೀಡುವುದರಲ್ಲಿ ಅನುಮಾನವೇ ಇಲ್ಲ.

(ಚಿತ್ರ ಸೆಲೆ: twitter.com/Ashwini_PRK)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: