ಕಣ್ಣಿಗೆ ಹಬ್ಬ ಈ ಬಟರ್ ಪ್ಲೈ ಹೌಸ್

– .

ಪತಂಗಗಳು ಕಣ್ಣಿಗೆ ಹಬ್ಬ. ಅವುಗಳನ್ನು ನೋಡುತ್ತಿದ್ದರೆ, ಅವುಗಳ ರೆಕ್ಕೆಯ ಮೇಲಿರುವ ಚಿತ್ತಾರ ಎಂತಹ ರಸಿಕರಲ್ಲದವರನ್ನೂ ಆಕರ‍್ಶಿಸುತ್ತದೆ. ಪತಂಗಗಳನ್ನು ಸೂಕ್ಶ್ಮವಾಗಿ ಲಕ್ಶ್ಯವಿಟ್ಟು ಗಮನಿಸಿದರೆ, ಅದರ ಎರಡೂ ರೆಕ್ಕೆಯ ಮೇಲಿರುವ ಚಿತ್ತಾರವು, ಒಂದರ ದರ‍್ಪಣದ ಬಿಂಬದಂತೆ ಮತ್ತೊಂದು ಕಾಣುತ್ತದೆ. ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ, ಮಕ್ಕಳಿಗಂತೂ ಅಚ್ಚು ಮೆಚ್ಚು. ಪುಟ್ಟ ಪುಟ್ಟ ಮಕ್ಕಳು ಚಿಟ್ಟೆಗಳನ್ನು ಹಿಡಿಯಲು, ಅವು ಹಾರಿ ಹೋದತ್ತ ಅವುಗಳ ಹಿಂದೆಯೇ ಓಡಿ ಹೋಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

“ಬಟರ್ ಪ್ಲೈ ಟೌನ್”, ಯು.ಎಸ್.ಎ ಇರುವುದು ಪೆಸಿಪಿಕ್ ಕರಾವಳಿಯ ಸುಂದರವಾದ ಉಪವನದಲ್ಲಿ. ಮೋನಾರ‍್ಕ್ ಚಿಟ್ಟೆಗಳ ಹಿಂಡುಗಳು ಇಲ್ಲಿಗೆ ವಲಸೆ ಬರುವುದರಿಂದ, ಈ ಪ್ರದೇಶಕ್ಕೆ ಬಟರ್ ಪ್ಲೈ ಟೌನ್ ಎಂದು ಹೆಸರು ಬಂದಿದೆ. ಈ ಮೋನಾರ‍್ಕ್ ಚಿಟ್ಟೆಗಳು ಬಹು ದೂರ ವಲಸೆ ಹೋಗುವುದಕ್ಕೆ ಪ್ರಕ್ಯಾತ. ಹಲವು ಹಕ್ಕಿಗಳಂತೆ ಇದೂ ಸಹ ನಾಲ್ಕೈದು ಸಾವಿರ ಕಿಲೋಮೀಟರ್ ವರೆವಿಗೂ ವಲಸೆ ಹೋಗುತ್ತವೆ. ಶರತ್ಕಾಲದ ಕೊನೆಯಲ್ಲಿ ಮತ್ತು ಚಳಿಗಾಲದಲ್ಲಿ ಸ್ತಳೀಯ ಮರದಲ್ಲಿನ ಸತ್ತ ಎಲೆಗಳಂತೆ ಇವು ತೂಗಾಡುತ್ತಿರುತ್ತವೆ. ಈ ಸಮಯದಲ್ಲಿ ಪ್ರತಿದಿನ ಹೂವಿನ ಮಕರಂದ ಹುಡುಕಾಟದಲ್ಲಿರುತ್ತವೆ. ಇಲ್ಲಿನ ಜನ, ಈ ಕಾಲೋಚಿತ ಅತಿತಿಯನ್ನು ಪೋಶಿಸಲು ತಮ್ಮದೇ ಸ್ವಂತ ದುಡಿಮೆ ಹಣದಿಂದ ಅಬಯಾರಣ್ಯವನ್ನು ನಿರ‍್ಮಿಸಿದ್ದಾರೆ.

ಈ ಪ್ರದೇಶದಲ್ಲಿರುವ ಬಟರ್ ಪ್ಲೈ ಹೌಸ್, ಕಾಸಗಿ ನಿವಾಸವಾಗಿದೆ. ಈ ನಿವಾಸ ಪೂರ‍್ಣವಾಗಿ ವರ‍್ಣರಂಜಿತ ಚಿಟ್ಟೆಗಳ/ಪತಂಗಗಳ ಕಲೆಯಿಂದ ಅಲಂಕರಿಸಲ್ಪಟ್ಟಿದೆ. ಈ ಕಾಸಗಿ ನಿವಾಸವನ್ನು ಬಟರ್ ಪ್ಲೈ ನಿವಾಸವಾಗಿ ಬದಲಾಯಿಸಿದ್ದು ಸ್ರುಜನ ಶೀಲ ಕಲೆಗಾರ ಜೆ.ಜಾಕ್ಸನ್. ಇದು ಅವರ ಕನಸಿನ ಕೂಸು. ಬಟರ್ ಪ್ಲೈ ಹೌಸನ್ನು ಜಾಕ್ಸನ್ ತಮ್ಮ ಪತ್ನಿ ಸೋಂಜಾಗೆ ಸಮರ‍್ಪಿಸಿದ್ದಾರೆ.

ಜೆ. ಜಾಕ್ಸನ್ ಈ ನಿವಾಸವನ್ನು ಬಟರ್ ಪ್ಲೈ ನಿವಾಸವಾಗಿ ಬದಲಾಯಿಸುವುದರ ಹಿಂದೆ, ಮನಮಿಡಿಯುವ ಕತೆಯಿದೆ. ಜಾಕ್ಸನ್ 1976ರಲ್ಲಿ ಸೋಂಜಾಳರನ್ನು ವಿವಾಹವಾಗುತ್ತಾರೆ. 1977 ರಲ್ಲಿ ಪೆಸಿಪಿಕ್ ಕರಾವಳಿಯಲ್ಲಿ ಈ ಕಾಟೇಜನ್ನು ಕರೀದಿಸುತ್ತಾರೆ. ಇಪ್ಪತ್ತು ವರ‍್ಶಗಳ ಬಳಿಕ ಸೋಂಜಾರಿಗೆ ತನ್ನ ಕಣ್ಣಿನ ಕಾಯಿಲೆಯಿಂದ ದ್ರುಶ್ಟಿ ದುರ‍್ಬಲವಾಗುತ್ತದೆ. ದ್ರುಶ್ಟಿ ಕ್ಶೀಣಿಸಿದರೂ ಗಾಡವಾದ ಬಣ್ಣಗಳನ್ನು ಗುರುತಿಸುವಶ್ಟು ಶಕ್ತವಾಗಿದ್ದ ಕಾರಣ, ಆಕೆ ಗಾಡ ಬಣ್ಣದ ಚಿಟ್ಟೆಗಳ ಕಲಾಕ್ರುತಿಗಳನ್ನು ತರಲು ಪ್ರಾರಂಬಿಸಿದಳು. 1990ರ ದಶಕದಲ್ಲಿ ಮನೆಯ ಮುಂಬಾಗದಲ್ಲಿ ಜೋಡಿಸಲು ಪ್ರಾರಂಬಿಸಿದರು. ನೆರೆಹೊರೆಯವರ ಪ್ರಕಾರ ಸೋಂಜಾ ಅವರು ಪ್ರತಿದಿನ ಸಂಜೆಯ ವೇಳಿ ವಾಕಿಂಗ್ ಹೋಗಿ, ಹಿಂದಿರುಗಿದಾಗ ತನ್ನ ಮನೆಯನ್ನು ಸುಲಬವಾಗಿ ಗುರುತಿಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿತ್ತು.

ಈ ಬಟರ್ ಪ್ಲೈ ಹೌಸ್, ಅದರ ಜನಕ ಜಾಕ್ಸನ್ ಅವರಿಂದ ನಿರಂತರ ಬೆಳವಣಿಗೆ ಹೊಂದುತ್ತಿದೆ. ಮನೆಯ ಗೋಡೆಗಳನ್ನು ಅಲಂಕರಿಸಿರುವ ಪತಂಗಗಳಲ್ಲಿ ಯಾವುದು ಉತ್ತಮ? ಯಾವುದರ ಬಣ್ಣ ಸೊಗಸಾಗಿದೆ? ಕರಕುಶಲತೆಯಲ್ಲಿ ಯಾವುದು ಅದ್ಬುತ? ಇವುಗಳನ್ನು ಮೌಲ್ಯಮಾಪನ ಮಾಡುವುದು ಸಾದ್ಯವೇ ಇಲ್ಲ. ಏಕೆಂದರೆ ಅವುಗಳಲ್ಲಿ ಒಂದನ್ನು ಒಂದು ಮೀರಿಸುವಂತಿದೆ.

ಈ ಬಟರ್ ಪ್ಲೈ ಹೌಸ್ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ರೂಪಾಂತರಗೊಂಡಿದೆ. ಎರಡು ಬಾರಿಯೂ ಅದನ್ನು ತನ್ನ ಪ್ರೇಯಸಿಗಾಗಿ ಮತ್ತೂ ಕಲಾತ್ಮಕವಾಗಿ ಜಾಕ್ಸನ್ ಮರು ಸ್ರುಶ್ಟಿ ಮಾಡಿದ್ದಾರೆ. ಇದು ಸಂಪೂರ‍್ಣವಾಗಿ ಸೋಂಜಾರವರ ಗೌರವಾರ‍್ತ ಕಾರಣಕ್ಕಾಗಿ ಮಾತ್ರ.

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: atlasobscura.com, montereycountyweekly.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks