ಮೆಮಾಂಡ್ – ಪುರಾತನ ಗುಹೆಯುಳ್ಳ ಹಳ್ಳಿ
– ಕೆ.ವಿ.ಶಶಿದರ.
ಇರಾನ್ ದೇಶದ ಕೆರ್ಮನ್ನಿನ ಶಹ್ರೆಬಾಬಾಕ್ನಲ್ಲಿರುವ ಮೆಮಾಂಡ್ ಗುಹೆಯನ್ನು ಹೊಂದಿರುವ ಗ್ರಾಮವು ಹನ್ನೆರೆಡು ಸಾವಿರ ವರ್ಶಗಳಶ್ಟು ಪುರಾತನವಾದದ್ದು ಎಂದು ಗುರುತಿಸಲ್ಪಟ್ಟಿದೆ. ವಿಶ್ವದಲ್ಲೇ ಜನವಸತಿ ಹೊಂದಿರುವ ಅತ್ಯಂತ ಹಳೆಯ ಹಳ್ಳಿಗಳಲ್ಲಿ ಇದು ಒಂದಾಗಿದೆ. 2006ರಲ್ಲಿ ನಡೆಸಿದ ಜನಗಣತಿಯಂತೆ ಈ ಹಳ್ಳಿಯ ಜನಸಂಕ್ಯೆ 673 ಆಗಿದ್ದು, ಒಟ್ಟಾರೆ 181 ಕುಟುಂಬಗಳು ವಾಸವಾಗಿವೆ. ಈ ಕುಟುಂಬಗಳಲ್ಲಿ ಕೆಲವು, ತಲೆತಲಾಂತರದಿಂದ ಇಲ್ಲಿ ವಾಸಿಸುತ್ತಿವೆ. ಕೆಲವು ಕುಟುಂಬಗಳಂತೂ 3000 ವರ್ಶಗಳಿಂದ ನಿರಂತರವಾಗಿ ಇಲ್ಲೇ ತಮ್ಮ ಜೀವನವನ್ನು ಕಂಡುಕೊಂಡಿವೆ.
ಮೆಮಾಂಡ್ ಗ್ರಾಮದ ಮನೆಗಳನ್ನು ಗಮನಿಸಿದರೆ, ಅವು ಪರ್ವತದಲ್ಲಿ ಕೆತ್ತಲಾದ ಗುಹೆಯತೆ ಕಂಡುಬರುತ್ತವೆ. ಗುಹೆಯ ಒಳಗಡೆಯ ಪ್ರದೇಶವು ವಿಶಾಲವಾಗಿದ್ದು ಚಾವಣಿಗೆ ಕಂಬಗಳು ಆಸರೆಯಾಗಿವೆ. ಇರಾನಿನ ಗ್ರಾಮೀಣ ವಾಸ್ತುಶಿಲ್ಪವನ್ನು ಈ ಗುಹೆ ಮನೆಗಳು ಪ್ರತಿನಿದಿಸುತ್ತವೆ. ಪರ್ವತದ ಇಳಿಜಾರಿನಲ್ಲಿ ಈ ಗುಹೆಗಳನ್ನು ಕಡೆದಿರುವುದರಿಂದ, ಒಂದು ಮನೆಯ ಮೇಲೆ ಮತ್ತೊಂದು ಮನೆ ಇರುವಂತೆ ಕಾಣುತ್ತದೆ. ವಾಸ್ತವವಾಗಿ ಇದು ಸತ್ಯವೂ ಹೌದು. ಪ್ರತಿ ಮನೆಯಲ್ಲೂ ಆಹಾರ ಪದಾರ್ತಗಳನ್ನು ಬೇಯಿಸಲು ಮತ್ತು ಕಾಯಿಸಲು ಒಲೆಗಳನ್ನು ಉಪಯೋಗಿಸಲಾಗುತ್ತದೆ. ಈ ಒಲೆಗಳಿಂದ ಹೊರ ಹೊಮ್ಮುವ ದಟ್ಟವಾದ ಕಪ್ಪು ಹೊಗೆಯಿಂದಾಗಿ, ಗುಹೆಯ ಒಳಬಾಗದ ಗೋಡೆಯು ಕಪ್ಪು ಬಣ್ಣಕ್ಕೆ ತಿರುಗಿವೆ. ಇದೇ ಗ್ರಾಮದಲ್ಲಿ ಹದಿನೈದು ವ್ರುತ್ತಾಕಾರದ ಕಲ್ಲಿನ ಕೊಟಡಿಗಳು ಕಂಡು ಬಂದಿವೆ. ಇವುಗಳೆಲ್ಲವೂ ನಾಲ್ಕು ನೂರು ಚದರ ಮೀಟರ್ ಪ್ರದೇಶದಲ್ಲಿದ್ದು, ಕೊಟಡಿಗಳನ್ನು ಪರಿಶೀಲಿಸಿದಾಗ, ಇದರಲ್ಲಿ ಮೂಳೆಗಳು ಮತ್ತು ಇನ್ನಿತರೆ ವಸ್ತುಗಳು ಪತ್ತೆಯಾಗಿದ್ದವು. ಈ ಆದಾರದ ಮೇಲೆ ಈ ವ್ರುತ್ತಾಕಾರದ ಕೊಟಡಿಗಳು ಸತ್ತವರ ಹೆಣವನ್ನಿಡುವ ಸ್ತಳವಿರಬಹುದು ಎಂಬ ಅಬಿಪ್ರಾಯ ಮೂಡಿ ಬಂದಿದೆ.
ಪರ್ವತಗಳ ಇಳಿಜಾರಿನಲ್ಲಿ ಕೆತ್ತಲಾಗಿರುವ ಈ ಗುಹೆ ಮನೆಗಳು ತಾತ್ಕಾಲಿಕವಾದುದಲ್ಲ; ಬದಲಿಗೆ ಇವು ಶಾಶ್ವತ ಮನೆಗಳಾಗಿವೆ. ಇಲ್ಲಿರುವ ಕಲ್ಲಿನ ಕೆತ್ತನೆಗಳನ್ನು ಗಮನಿಸಿದರೆ, ಅವು ಬಹುಶಹ ಹತ್ತು ಸಾವಿರ ವರ್ಶಗಳಶ್ಟು ಹಳೆಯದಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿ ದೊರಕಿರುವ ಪಳೆಯುಳಿಕೆಯ ಮಡಕೆಗಳು ಇಲ್ಲಿನವರಿಗೆ ಆರು ಸಾವಿರ ವರ್ಶಗಳ ಹಿಂದಿನಿಂದಲೂ ಕುಂಬಾರಿಕೆ ಬಗ್ಗೆ ಅರಿವಿತ್ತು ಎಂದು ಸಾಬೀತು ಮಾಡುತ್ತದೆ. ಕಲ್ಲಿನ ಮೇಲಿನ ಕೆತ್ತನೆಗೆ ಇಲ್ಲಿನ ಗ್ರಾಮಸ್ತರು ಸುತ್ತಿಗೆ ಮತ್ತು ಉಳಿಯನ್ನು ಬಳಸಿದಂತೆ ಕಾಣುವುದಿಲ್ಲ. ಬದಲಿಗೆ ಚೂಪಾದ ಗಟ್ಟಿ ಕಲ್ಲುಗಳಿಂದ ಕೆತ್ತನೆ ಕೆಲಸವನ್ನು ಮಾಡಲಾಗಿದೆ.
ಮೆಮಾಂಡ್ ಗ್ರಾಮದ ನಿವಾಸಿಗಳು ಅಲೆಮಾರಿ ಕುರುಬರಾಗಿದ್ದಾರೆ. ಕೆಲವರು ಈ ಹಳ್ಳಿಯ ಸುತ್ತಮುತ್ತಲಿನ ಜಮೀನನ್ನು ಚಳಿಗಾಲದಲ್ಲಿ ಆಕ್ರಮಿಸಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಹೆಚ್ಚಿನ ಜನಸಂಕ್ಯೆ ಹುಲ್ಲುಗಾವಲಿನ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಇಲ್ಲಿನ ಸ್ತಳೀಯ ಬಾಶೆಯಲ್ಲಿ ಪ್ರಾಚೀನ ಸಾಸಾನಿಡ್ ಮತ್ತು ಪಹ್ಲವಿ ಬಾಶೆಯ ಅನೇಕ ಪದಗಳು ಸೇರಿ ಹೋಗಿವೆ. ಗ್ರಾಮಸ್ತರ ಉದ್ಯೋಗ ಪಶುಸಂಗೋಪನೆ ಮತ್ತು ಕ್ರುಶಿ. ಇದೇ ಅವರ ಆರ್ತಿಕತೆಯ ಮೂಲ. ಕೆಲವರು ನೇಯ್ಗೆಯ ಕೆಲಸವನ್ನು ಅವಲಂಬಿಸಿದ್ದಾರೆ. ಮೇಮಾಂಡಿನ ಕಾರ್ಪೆಟ್ಟುಗಳು (ಜಮಕಾನಾಗಳು) ವಿಶ್ವವಿಕ್ಯಾತಿಯನ್ನು ಪಡೆದಿವೆ. ಈ ಪ್ರದೇಶದಲ್ಲಿ ಕಾರ್ಪೆಟ್ ಹಣೆಯುವುದು ಬಹಳ ಕಾಲದಿಂದಲೂ ನಡೆದು ಬಂದಿರುವುದರಿಂದ ಅದರ ಉಪ ಉದ್ಯೋಗಗಳಾದ ಡೈಯಿಂಗ್ನಂತಹ ಕೆಲಸಗಳು ಮತ್ತು ಇದಕ್ಕೆ ಸಂಬಂದಿಸಿದ ಇನ್ನಿತರೆ ಕೆಲಸಗಳ ಮೇಲೆ ಅವಲಂಬಿತ ಕುಟುಂಬಗಳೂ ಇಲ್ಲ ಹೆಚ್ಚಿವೆ.
ಇಲ್ಲಿಗೆ ಬರುವ ಪ್ರವಾಸಿಗಳಿಗಾಗಿಯೇ ಮೆಮಾಂಡ್ ಗ್ರಾಮದಲ್ಲಿ ಒಂದು ದೊಡ್ಡ ಹೋಟೆಲ್ ಇದೆ. ಅತ್ಯಂತ ಉತ್ತಮ ಆತಿತ್ಯ ಇಲ್ಲಿ ಪ್ರವಾಸಿಗಳಿಗೆ ಲಬ್ಯವಿದೆ. 2005ರಲ್ಲಿ ಪ್ರಪಂಚದ ಏಳನೇ ಸಾಂಸ್ಕ್ರುತಿಕ, ನೈಸರ್ಗಿಕ ಮತ್ತು ಐತಿಹಾಸಿಕ ದ್ರುಶ್ಯವೆಂದು ಇದಕ್ಕೆ “ರಿವಾರ್ಡ್ ಆಪ್ ಮಕ್ರ್ಯೂರಿ’ ಪುರಸ್ಕಾರವನ್ನು ನೀಡಲಾಯಿತು. ಈ ಪುರಸ್ಕಾರವನ್ನು ಗ್ರೀಕ್ ಸರ್ಕಾರವು, ಯುನೆಸ್ಕೋ ಸಹಯೋಗದೊಂದಿಗೆ, ಈ ಪುರಾತನ ಗುಹೆಯ ಹಳ್ಳಿಗೆ ನೀಡಿದೆ.
( ಮಾಹಿತಿ ಮತ್ತು ಚಿತ್ರಸೆಲೆ: atlasobscura.com, www.flickr.com )
ಇತ್ತೀಚಿನ ಅನಿಸಿಕೆಗಳು