ನಿಸ್ಸಾರ್ ಟ್ರೋಪಿ – ಬಾರತ ಪಾಕ್ ನ ಕಳೆದುಹೋದ ಕ್ರಿಕೆಟ್ ನಂಟು

– ರಾಮಚಂದ್ರ ಮಹಾರುದ್ರಪ್ಪ.

ಸಾಂಪ್ರದಾಯಿಕ ಎದುರಾಳಿಗಳಾದ ಬಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ನಂಟು 1950 ರ ದಶಕದಿಂದಲೂ ಆಟದ ಜೊತೆಗೆ ಹಲವಾರು ಆಟೇತರ ಚಟುವಟಿಕೆಗಳಿಂದಲೂ ಸದಾ ಸುದ್ದಿಯಲ್ಲಿರುವುದು ವಿಶೇಶ. 1952 ರಲ್ಲಿ ಟೆಸ್ಟ್ ಮಾನ್ಯತೆ ಪಡೆದು ದೆಹಲಿಯ ಪಿರೋಜ್ ಶಾಹ್ ಕೋಟ್ಲಾ ಅಂಗಳದಲ್ಲಿ ಬಾರತದ ಎದುರು ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಪಾಕಿಸ್ತಾನ ಆ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿತ್ತು. ಆದರೆ ಆ ಬಳಿಕ ಒಂದು ಸದ್ರುಡ ಅಂತರಾಶ್ಟ್ರೀಯ ಕ್ರಿಕೆಟ್ ತಂಡವಾಗಿ ಬೆಳೆದ ಪಾಕಿಸ್ತಾನ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳೆಡರಲ್ಲೂ ತನ್ನ ಕ್ರಿಕೆಟ್ ಹಿರಿಯಣ್ಣ ಬಾರತದ ಎದುರು ಐತಿಹಾಸಿಕವಾಗಿ ಮೇಲುಗೈ ಸಾದಿಸಿರುವುದು ಆ ದೇಶದ ಕ್ರಿಕೆಟ್ ಪ್ರತಿಬೆಗೆ ಹಿಡಿದ ಕನ್ನಡಿ ಎನ್ನಲೇಬೇಕು. ಕಳೆದ 70 ವರ‍್ಶಗಳ ಸುದೀರ‍್ಗ ಕ್ರಿಕೆಟ್ ಪಯಣದಲ್ಲಿ ನೆರೆಯ ಈ ಎರಡು ದೇಶಗಳು ರಾಜಕೀಯ ಕಾರಣಗಳಿಂದ ಹಲವಾರು ಬಾರಿ ತಮ್ಮ ಕ್ರಿಕೆಟ್ ನಂಟನ್ನು ಕಡಿದುಕೊಂಡಿದ್ದೂ ಇದೆ. ಹಾಗೂ ಅಂಗಳದಲ್ಲೇ ಅನೇಕ ವಿವಾದಗಳಿಗೆ ಸಾಕ್ಶಿಯಾದ ಕುಕ್ಯಾತಿ ಸಹ ಈ ಕಡು-ಎದುರಾಳಿಗಳ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ಅದ್ಯಾಯವಾಗಿ ಸೇರ‍್ಪಡೆಗೊಂಡಿದೆ. ಕಡೆಯ ಬಾರಿ ಬಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಒಂದು ಪೂರ‍್ಣಪ್ರಮಾಣದ (ಟೆಸ್ಟ್ ಸರಣಿ ಒಳಗೊಂಡ) ಪ್ರವಾಸ ಕೈಗೊಂಡಿದ್ದು 2006 ರಲ್ಲಾದರೆ ಪಾಕಿಸ್ತಾನ ಬಾರತಕ್ಕೆ ಪೂರ‍್ಣಪ್ರಮಾಣದ ಪ್ರವಾಸಕ್ಕೆಂದು ಬಂದದ್ದು 2007 ರಲ್ಲಿ. ಆ ಪ್ರವಾಸದ ಮೂರನೇ ಬೆಂಗಳೂರು ಟೆಸ್ಟ್ ಬಳಿಕ ಬಾರತ-ಪಾಕಿಸ್ತಾನ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ. ಹಾಗೂ 2012/13 ರಲ್ಲಿ ಮೂರು ಟಿ-20 ಮತ್ತು ಮೂರು ಒಂದು-ದಿನದ ಪಂದ್ಯಗಳ ಸರಣಿಗಾಗಿ ಪಾಕಿಸ್ತಾನ ತಂಡ ಬಾರತಕ್ಕೆ ಬಂದದ್ದು ಬಿಟ್ಟರೆ ಕಳೆದ ದಶಕದಲ್ಲಿ ಈ ಎರಡು ತಂಡಗಳು ಏಶಿಯಾ ಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಕಾಮುಕಿಯಾಗಿವೆ. ಬಾರತ-ಪಾಕ್ ಕ್ರಿಕೆಟ್ ಸಂಬಂದ ಕೇವಲ ಅಂತರಾಶ್ಟ್ರೀಯ ಪಂದ್ಯಗಳಿಗಶ್ಟೇ ಸೀಮಿತವಾಗದೆ ಮೊದಲ ದರ‍್ಜೆ ಪಂದ್ಯಗಳಲ್ಲೂ ಚಾಪು ಮೂಡಿಸಿದ್ದು ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ಹದಗೆಟ್ಟ ರಾಜಕೀಯ ಸಂಬಂದಗಳಿಂದ ನೇಪತ್ಯಕ್ಕೆ ಸರಿದ ಆ ಮೊದಲ ದರ‍್ಜೆ ಪಂದ್ಯಾವಳಿಯೇ ‘ನಿಸ್ಸಾರ್ ಟ್ರೋಪಿ’.

ನಿಸ್ಸಾರ್ ಟ್ರೋಪಿ – ಹುಟ್ಟು ಹಾಗೂ ಇತಿಹಾಸ

ಬಾರತ-ಪಾಕಿಸ್ತಾನ ಎರಡು ಪ್ರತ್ಯೇಕ ದೇಶಗಳಾಗಿ ಹೊರಹೊಮ್ಮುವುದಕ್ಕೂ ಮೊದಲು ಬಾರತದ (ಪಾಕಿಸ್ತಾನವೂ ಒಳಗೊಂಡಿದ್ದ) ಪರ 1932 ರಿಂದ 1936 ರ ತನಕ ಆರು ಟೆಸ್ಟ್ ಪಂದ್ಯಗಳನ್ನಾಡಿ 25 ವಿಕೆಟ್ ಗಳನ್ನು ಪಡೆದಿದ್ದ ವೇಗದ ಬೌಲರ್ ಮೊಹಮ್ಮದ್ ನಿಸ್ಸಾರ್ ರ ಹೆಸರಿನಲ್ಲಿ 2006 ರಲ್ಲಿ ‘ನಿಸ್ಸಾರ್ ಟ್ರೋಪಿ’ ಯನ್ನು ಹುಟ್ಟುಹಾಕಲಾಯಿತು. ಬಾರತದ ಪಂಜಾಬ್ ನ ಹೋಶಿಯಾರ‍್ಪುರ್ ನಲ್ಲಿ 1910 ರ ಆಗಸ್ಟ್ 1 ರಂದು ಹುಟ್ಟಿ 1947 ರಲ್ಲಿ ಪಾಕಿಸ್ತಾನದ ಉಗಮವಾದಾಗ ನಿಸ್ಸಾರ್ ಪಾಕಿಸ್ತಾನಕ್ಕೆ ತೆರಳಿ ಬದುಕು ಕಟ್ಟಿಕೊಂಡರು. ಆ ಕಾಲಕ್ಕೆ ಅತೀ ವೇಗದ ಬೌಲರ್ ಎಂದು ಕ್ರಿಕೆಟ್ ವಲಯದಲ್ಲಿ ಹೆಸರುಮಾಡಿದ್ದ ನಿಸ್ಸಾರ್ ದಿಟವಾಗಿಯೂ ಅದ್ಬುತ ಪ್ರತಿಬೆಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಬಾರತದ ಮೊದಲ ಇಂಗ್ಲೆಂಡ್ ಪ್ರವಾಸದಲ್ಲಿ ಅಲ್ಲಿನ ಶ್ರೇಶ್ಟ ವ್ರುತ್ತಿಪರ ಕ್ರಿಕೆಟಿಗರಿಗೂ ನಿಸ್ಸಾರ್ ರ ವೇಗದ ಬೌಲಿಂಗ್ ದೊಡ್ಡ ಸವಾಲೊಡ್ಡಿದ್ದು ಇತಿಹಾಸದ ಪುಟಗಳಲ್ಲಿ ದಾಕಲಾಗಿದೆ. ಬಾರತವನ್ನು ತೊರೆದು ಪಾಕಿಸ್ತಾನದಲ್ಲಿ ನೆಲೆ ಕಂಡುಕೊಂಡ ಮೇಲೆ 1953/54 ರ ತನಕ ಅಲ್ಲಿ ದೇಸೀ ಕ್ರಿಕೆಟ್ ಆಡಿದ ನಿಸ್ಸಾರ್ ಮಾರ‍್ಚ್ 11, 1963 ರಂದು ಪಾಕಿಸ್ತಾನದ ಲಾಹೋರ್ ನಲ್ಲಿ ಸಾವನ್ನಪ್ಪಿದರು. ಹಾಗಾಗಿ ಎರಡೂ ದೇಶಗಳ ಕ್ರಿಕೆಟ್ ಅನ್ನು ಬೆಸೆಯುವ ಕೊಂಡಿಯಾಗಿ ಮೊಹಮ್ಮದ್ ನಿಸ್ಸಾರ್ ಗುರುತಿಸಿಕೊಂಡರು. ಕ್ರಿಕೆಟ್ ಇತಿಹಾಸದ ಈ ಅಪರೂಪಕ್ಕೆ ಮನ್ನಣೆ ನೀಡಿ ಎರಡೂ ದೇಶಗಳ ಕ್ರಿಕೆಟ್ ಸಂಸ್ತೆಗಳು ಪರಸ್ಪರ ಒಪ್ಪಿಗೆಯಿಂದ ಆಟದ ನಂಟಿಗೆ ‘ನಿಸ್ಸಾರ್ ಟ್ರೋಪಿ’ ಮೂಲಕ ಹೊಸ ಆಯಾಮ ನೀಡಿದ್ದು ಮೆಚ್ಚುವ ಸಂಗತಿಯಾಗಿತ್ತು. ಬಾರತದ ಪ್ರತಿಶ್ಟಿತ ದೇಸೀ ಪಂದ್ಯಾವಳಿ ರಣಜಿ ಟ್ರೋಪಿಯನ್ನು ಗೆದ್ದ ತಂಡ ಹಾಗೂ ಪಾಕಿಸ್ತಾನದ ಕೈದ್-ಏ-ಆಜಮ್ ಟೂರ‍್ನಿಯ ವಿಜೇತರು ಪ್ರತೀ ವರ‍್ಶ ಸೆಣಸುವ ನಾಲ್ಕು ದಿನಗಳ ಮೊದಲ ದರ‍್ಜೆ ಪಂದ್ಯ ‘ನಿಸ್ಸಾರ್ ಟ್ರೋಪಿ’ ಆಗಿತ್ತು. ಇಲ್ಲಿ ತನಕ ನಡೆದಿರುವ ಮೂರು ನಿಸ್ಸಾರ್ ಟ್ರೋಪಿ ಪಂದ್ಯಗಳಲ್ಲಿ ಎರಡು ಬಾರಿ ಬಾರತದ ತಂಡ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದ್ದರೆ ಒಂದು ಬಾರಿ ಪಾಕಿಸ್ತಾನದ ತಂಡ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಉತ್ತರ ಪ್ರದೇಶ ಮತ್ತು ಸಿಯಾಲ್ಕೋಟ್, 2006

ಆ ವರ‍್ಶ ತನ್ನ ಮೊದಲ ರಣಜಿ ಟೂರ‍್ನಿ ಗೆದ್ದು ಬೀಗಿದ್ದ ಉತ್ತರ ಪ್ರದೇಶ ನಿಸ್ಸಾರ್ ಟ್ರೋಪಿಯನ್ನೂ ಗೆದ್ದು ವಿಶಿಶ್ಟ ಸಾದನೆ ಮಾಡಿತು. ಸುರೇಶ್ ರೈನಾ ಮುಂದಾಳ್ತನದ ಉತ್ತರ ಪ್ರದೇಶಕ್ಕೆ ಪಿಯೂಶ್ ಚಾವ್ಲಾ, ಆರ್.ಪಿ ಸಿಂಗ್ ಮತ್ತು ಪ್ರವೀಣ್ ಕುಮಾರ್ ರಂತಹ ಆಟಗಾರರ ಬಲವಿದ್ದರೆ ಇಮ್ರಾನ್ ನಜೀರ್ ರ ಸಿಯಾಲ್ಕೋಟ್ ತಂಡದಲ್ಲೂ ಮೊಹಮ್ಮದ್ ಆಸಿಪ್, ಶೋಯಬ್ ಮಲಿಕ್ ಮತ್ತು ಅಬ್ದುರ್ ರಹಮಾನ್ ರಂತಹ ಅಂತರಾಶ್ಟ್ರೀಯ ಆಟಗಾರರಿದ್ದರು. ಬಾರತದ ದರಂಶಾಲಾದಲ್ಲಿ ನಡೆದ ಪಂದ್ಯದಲ್ಲಿ ರಿಜ್ವಾನ್ ಶಂಶಾದ್ ರ (84 ಮತ್ತು 88) ರನ್ ಗಳು ಮತ್ತು ಆರ್.ಪಿ ಸಿಂಗ್ ರ 6 ವಿಕೆಟ್ ಮತ್ತು ಪ್ರವೀಣ್ ಕುಮಾರ್ ರ 4 ವಿಕೆಟ್ ಗಳ ನೆರವಿನಿಂದ ಉತ್ತರ ಪ್ರದೇಶ ಬರ‍್ಜರಿ 316 ರನ್ ಗಳ ಗೆಲುವು ಸಾದಿಸಿ ಚೊಚ್ಚಲ ನಿಸ್ಸಾರ್ ಕಪ್ ಅನ್ನು ತನ್ನದಾಗಿಸಿಕೊಂಡಿತು.

ಕರಾಚಿ ಅರ‍್ಬನ್ ಮತ್ತು ಮುಂಬೈ, 2007

ಕರಾಚಿಯ ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನಡೆದ ಎರಡನೇ ನಿಸ್ಸಾರ್ ಟ್ರೋಪಿ ಪಂದ್ಯದಲ್ಲಿ ರನ್ ಹೊಳೆಯೇ ಹರಿಯಿತು. ವಿನಾಯಕ್ ಮಾನೆ ನಾಯಕತ್ವದ ಮುಂಬೈ ತಂಡ ಪ್ರಮುಕ ಆಟಗಾರರೆಲ್ಲರ ಸೇವೆ ಸಿಗದೆ ಸೊರಗಿದ್ದರೂ ಯುವ ಆಟಗಾರರ ಬಲದ ಮೇಲೆ ಕಣಕ್ಕಿಳಿಯಿತು. ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ತಮ್ಮ ಮೊದಲ ದರ‍್ಜೆ ಪಾದಾರ‍್ಪಣೆ ಮಾಡಿದರು. ರಣಜಿ ಪಂದ್ಯಾವಳಿಯಲ್ಲಿ ಆಡುವುದಕ್ಕೂ ಮುನ್ನ ಈ ಬಗೆಯಲ್ಲಿ ಅವರು ಮೊದಲ ದರ‍್ಜೆ ಕ್ರಿಕೆಟಿಗ ಆಗಿದ್ದು ವಿಶೇಶ. ಮೊದಲು ಬ್ಯಾಟ್ ಮಾಡಿದ ಮುಂಬೈ ರಹಾನೆರ 143, ಕುಕ್ರೇಜಾರ 110, ಪ್ರಶಾಂತ್ ನಾಯಕ್ ರ 118 ಮತ್ತು ಅಬಿಶೇಕ್ ನಾಯರ್ ರ 152 ರನ್ ಗಳ ನೆರವಿನಿಂದ 623/6 ತಲುಪಿ ಇನ್ನಿಂಗ್ಸ್ ಗೋಶಿಸಿತು. ಇದರ ಬೆನ್ನತ್ತಿ ಹೊರಟ ಹಸನ್ ರಾಜಾರ ಕರಾಚಿ ತಂಡ ಕುರಾಮ್ ಮಂಜೂರ್ ರ 200 ರನ್ ಗಳ ಹೊರತಾಗಿಯೂ 389 ರನ್ ಗಳಿಗೆ ಕುಸಿದು ಪಾಲೋ-ಆನ್ ಸುಳಿಗೆ ಸಿಲುಕಿತು. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ತಾಳ್ಮೆಯ ಆಟ ಆಡಿ ಕರಾಚಿ ಸೋಲು ತಪ್ಪಿಸಿಕೊಂಡರೂ ಮೊದಲ ಇನ್ನಿಂಗ್ಸ್ ನ ದೊಡ್ಡ ಮುನ್ನಡೆಯ ಬಲದ ಮೇಲೆ ಎರಡನೇ ನಿಸ್ಸಾರ್ ಟ್ರೋಪಿ ಮುಂಬೈನ ಪಾಲಾಯಿತು.

ದೆಹಲಿ ಮತ್ತು ಸುಯಿ ನಾರ‍್ತ್ರನ್ ಗ್ಯಾಸ್ ಪೈಪ್ಲೈನ್ಸ್, 2008

ಅತೀ ಹೆಚ್ಚು ಅಂತರಾಶ್ಟ್ರೀಯ ಆಟಗಾರರು ಪಾಲ್ಗೊಂಡ ನಿಸ್ಸಾರ್ ಟ್ರೋಪಿ ಪಂದ್ಯ ಎಂಬ ಹೆಗ್ಗಳಿಕೆಗೆ ಈ ಮೂರನೇ ಸೊಗಸಾದ ಕ್ರಿಕೆಟ್ ಕದನ ಪಾತ್ರವಾಯಿತು. ವಿರೆಂದರ್ ಸೆಹ್ವಾಗ್ ನಾಯಕತ್ವದ ದೆಹಲಿ ತಂಡದ ಪರ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿ, ಆಶೀಶ್ ನೆಹ್ರಾ ಮತ್ತು ಇಶಾಂತ್ ಶರ‍್ಮಾ ಕಣಕ್ಕಿಳಿದರೆ ಮೊಹಮ್ಮದ್ ಹಪೀಜ್ ರ ಸುಯಿ ನಾರ‍್ತ್ರನ್ ತಂಡಕ್ಕೆ ಮಿಸ್ಬಾ-ಉಲ್-ಹಕ್ ಮತ್ತು ಉಮರ್ ಅಕ್ಮಲ್ ಆಸರೆಯಾದರು. ದೆಹಲಿಯ ಪಿರೋಜ್ ಶಾಹ್ ಕೋಟ್ಲಾ ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಕೊಹ್ಲಿರ 52 ರನ್ ಗಳ ಹೊರತಾಗಿಯೂ ದೆಹಲಿ ಹ್ಯಾಟ್ರಿಕ್ ಪಡೆದ ಇಮ್ರಾನ್ ಅಲಿರ ವೇಗದ ದಾಳಿಗೆ (6/52) ಗೆ ತತ್ತರಿಸಿ ಕೇವಲ 134 ರನ್ ಗಳಿಗೆ ಸರ‍್ವಪತನ ಕಂಡಿತು. ಸಮಯೋಚಿತ ಬೌಲಿಂಗ್ ನಿಂದ ಎದುರಾಳಿಯನ್ನು 266 ರನ್ ಗಳಿಗೆ ಕಟ್ಟಿಹಾಕಿದರೂ 132 ರನ್ ಗಳ ಹಿನ್ನಡೆ ಅನುಬವಿಸಿತು. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಸೊಗಸಾದ ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಆಕಾಶ್ ಚೋಪ್ರಾರ 182 ಮತ್ತು ಕೊಹ್ಲಿರ 197 ರನ್ ಗಳ ಕೊಡುಗೆಯಿಂದ 516/4 ಪೇರಿಸಿದರೂ ನಾಲ್ಕನೇ ದಿನ ಮಂದಬೆಳಕು ಹಾಗೂ ಮಳೆಯಿಂದ ಆಟ ನಡೆಯದೆ ಪಂದ್ಯ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಹಾಗಾಗಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆದಾರದ ಮೇಲೆ ಸುಯಿ ನಾರ‍್ತ್ರನ್ ಮೂರನೇ ನಿಸ್ಸಾರ್ ಟ್ರೋಪಿಯನ್ನು ತನ್ನದಾಗಿಸಿಕೊಂಡು ಈ ಸಾದನೆ ಮಾಡಿದ ಮೊದಲ ಪಾಕಿಸ್ತಾನೀ ತಂಡ ಎಂಬ ಹಿರಿಮೆ ಪಡೆಯಿತು.

ಈ ಪಂದ್ಯದ ಕೆಲವೇ ತಿಂಗಳ ಬಳಿಕ ಮುಂಬೈ ದಾಳಿ ನಡೆದು ಬಾರತ-ಪಾಕಿಸ್ತಾನದ ಸಂಬಂದಗಳು ಹದಗೆಟ್ಟು ಅಂತರಾಶ್ಟ್ರೀಯ ಪ್ರವಾಸಗಳಂತೆಯೇ ಮೊದಲ ದರ‍್ಜೆಯ ‘ನಿಸ್ಸಾರ್ ಟ್ರೋಪಿ’ ಕೂಡ ಇತಿಹಾಸದ ಪುಟ ಸೇರಿತು! ಆದರೂ ಈ ಬಗೆಯ ಅಪರೂಪದ ಮತ್ತು ವಿಶಿಶ್ಟ ಟ್ರೋಪಿಯನ್ನು ಹುಟ್ಟುಹಾಕಿ ಹೆಚ್ಚು ದೇಸೀ ಆಟಗಾರರನ್ನು ಮುನ್ನೆಲೆಗೆ ತರುವಂತಹ ಪ್ರಯೋಗ ಮಾಡಿದ ಎರಡೂ ದೇಶಗಳ ಕ್ರಿಕೆಟ್ ಸಂಸ್ತೆಗಳಿಗೆ ದನ್ಯವಾದ ಹೇಳಲೇಬೇಕು! ಬವಿಶ್ಯದಲ್ಲಿ ಬಾರತ-ಪಾಕ್ ಕ್ರಿಕೆಟ್ ನಂಟು ಮತ್ತೊಮ್ಮೆ ಬೆಸೆದುಕೊಂಡರೆ ಅಂತರಾಶ್ಟ್ರೀಯ ಪಂದ್ಯಗಳೊಟ್ಟಿಗೆ ‘ನಿಸ್ಸಾರ್ ಟ್ರೋಪಿ’ ಕೂಡ ತಪ್ಪದೇ ಮರುಕಳಿಸಲಿ ಎಂದು ಬಯಸೋಣ.

(ಚಿತ್ರ ಸೆಲೆ: wisden.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: