ಬಿಸಿಯ ನುಂಗಿ, ತಂಪೆರೆವ ಏರ್ ಕಂಡಿಶನಿಂಗ್ (ಏಸಿ)

– ಕಿಶೋರ್ ಕುಮಾರ್.

ಏಸಿ ಈ ಹೆಸರು ಕೇಳಿದಾಕ್ಶಣ ಹೆಚ್ಚಿನವರಿಗೆ ನೆನಪಿಗೆ ಬರುವುದು ತಂಪಾದ ಗಾಳಿ/ಆಹ್ಲಾದಕರ ವಾತವರಣ. ಯಾಕೆಂದರೆ ಎಲ್ಲರೂ ಅಹ್ಲಾದಕರ ವಾತಾವರಣವನ್ನು ಬಯಸುವವರೆ. ಆದರೆ ಏಸಿ ಎಲ್ಲರ ಕೈಗೆಟಕುವ ವಸ್ತುವಲ್ಲ, ಕಾರಣ ಅದರ ಬೆಲೆ ಹಾಗೂ ವಿದ್ಯುತ್ ಬಳಕೆ. ಪ್ಯಾನ್ ಎಲ್ಲಾ ವರ‍್ಗಗಳ ಬೇಸಿಗೆಯ ಸಂಗಾತಿ ಎನ್ನಲು ಅಡ್ಡಿಯಿಲ್ಲ, ಆದರೆ ಇತ್ತೀಚಿಗೆ ಬದಲಾವಣೆ ಗಾಳಿ ಬೀಸುತ್ತಿದ್ದು, ನಿದಾನವಾಗಿ ಪ್ಯಾನ್ ಗಳ ಜಾಗವನ್ನು ಇನ್ನೊಬ್ಬರು ಆಕ್ರಮಿಸಿಕೊಳ್ಳುತ್ತಿದ್ದಾರೆ, ಯಾರದು ಎಂದರೆ ಕೇಳಿ ಬರುವ ಹೆಸರೇ ಏರ್ ಕಂಡಿಶನಿಂಗ್ (ಏಸಿ). ಇದಕ್ಕೆ ಕಾರಣ ಏಸಿ ಪ್ಯಾನ್ ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುವುದು.

ಏನಿದು ಏಸಿ?

ಒಂದು ಮುಚ್ಚಿದ ಜಾಗ/ಕೋಣೆಯಲ್ಲಿರುವ ಕಾವನ್ನು ತೆಗೆದು, ಹಿತಕರ ವಾತಾವರಣನ್ನುಂಟುಮಾಡುವುದೇ ಏರ್ ಕಂಡಿಶನಿಂಗ್.

ಹಿನ್ನೆಲೆ

ಈಗಿನ ಸ್ಟಾಂಡರ‍್ಡ್ ಏಸಿ 20 ನೇ ಶತಮಾನದಲ್ಲಿ ಕಂಡುಹಿಡಿದದ್ದಾದರೂ, ಇದರ ಹಿನ್ನೆಲೆ ಹುಡುಕಲು ಹೊರಟರೆ 16 ನೇ ಶತಮಾನಕ್ಕೆ ಕರೆದೊಯ್ಯುತ್ತದೆ. 1558 ರಲ್ಲಿ ಇಟಾಲಿಯನ್ ಸ್ಕಾಲರ್ ಗಯಾಂಬಟಿಸ್ಟ ಡೆಲ್ಲಾ ಪೊರ‍್ಟಾ, ಪೊಟಾಸಿಯಂ ನೈಟ್ರೇಟ್ ಬಳಸಿ ಐಸ್ ಅನ್ನು ಮಂಜುಗಟ್ಟುವ ಮಟ್ಟಕ್ಕಿಂತಲೂ (freezing point) ಕೆಳಗಿನ ತಾಪಮಾನಕ್ಕೆ ತರುವ ಬಗ್ಗೆ ತಮ್ಮ ಅರಿಮೆ ಪುಸ್ತಕ ನ್ಯಾಚುರಲ್ ಮ್ಯಾಜಿಕ್ ನಲ್ಲಿ ಬರೆದಿದ್ದರು. 1620 ರಲ್ಲಿ ಡಚ್ ಎಂಜಿನಿಯರ್ ಕಾರ‍್ನೆಲಿಸ್ ಡ್ರೆಬೆಲ್ ಅವರು ಸ್ಕಾಟ್ಲೆಂಡ್ ದೊರೆ ಜೇಮ್ಸ್ I ರವರಿಗೆ ನಳಿಕೆಯನ್ನು ಬಳಸಿ, ಬಿಸಿ ವಾತಾವರಣವನ್ನು ತಂಪಾಗಿಸುವ ಬಗ್ಗೆ ತೋರಿಸಿದ್ದರು. ಮುಂದಿನ ದಿನಗಳಲ್ಲಿ ಹಲವಾರು ಮಂದಿ ತಮ್ಮದೇ ರೀತಿಯಲ್ಲಿ ಸಂಶೋದನೆಗಳನ್ನು ನಡೆಸಿದರು.

ಇಂದು ಸ್ಟಾಂಡರ‍್ಡ್ ಏಸಿ ಎಂದು ಪರಿಗಣಿಸಿರುವ ಏಸಿಯನ್ನು 1902ರಲ್ಲಿ ತಯಾರಿಸಿದ ಹೆಗ್ಗಳಿಕೆ ಅಮೇರಿಕಾದ ಎಂಜಿನಿಯರ್ ವಿಲ್ಸ್ ಹೆಚ್ ಕ್ಯಾರಿಯರ್ (ಕ್ಯಾರಿಯರ್ ಹೆಸರಿನ ಏಸಿಯನ್ನು ಇಂದಿಗೂ ಕಾಣಬಹುದು) ರವರಿಗೆ ಸಲ್ಲುತ್ತದೆ. ಮುಂದೆ 1945 ರಲ್ಲಿ ರಾಬರ‍್ಟ್ ಶೆರ‍್ಮನ್ ಅವರು ಪುಟ್ಟದಾದ (Portable) ಏಸಿ ಮಾದರಿಯನ್ನು ಕಂಡುಹಿಡಿದರು.

ಸೋಜಿಗ: ಮೊದಲ ಏಸಿ ಯನ್ನ ತಯಾರಿಸಿದ ಉದ್ದೇಶ ಹಿತಕರ ವಾತವಾಣಕ್ಕಾಗಲ್ಲ ಎಂದರೆ ನಂಬಲೇಬೇಕು. ವಿಲ್ಸ್ ಹೆಚ್ ಕ್ಯಾರಿಯರ್ ಅವರು ಪಬ್ಲಿಶಿಂಗ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾಗ ಬೇಸಿಗೆಕಾಲದಲ್ಲಿ ಕಾಗದ ಹಿಗ್ಗುವುದು ಹಾಗೂ ಇಂಕ್ ಬೇಗ ಮುಗಿದುಹೋಗುತ್ತಿದ್ದರಿಂದ ಹೊರಬರಲು ಏಸಿಯನ್ನು ತಯಾರಿಸಿದರು.

ಇದರ ಬಗೆಗಳು

ಸ್ಪ್ಲಿಟ್ ಏಸಿ: ಸಾಮಾನ್ಯವಾಗಿ ಮನೆಗಳಲ್ಲಿ ಬಳಕೆಯಲ್ಲಿರುವ ಈ ಬಗೆಯ ಏಸಿ ಗಳನ್ನು 1958-1968 ರಲ್ಲಿ ಮಿಟ್ಸುಬಿಶಿ ಎಲೆಕ್ಟ್ರಿಕ್ ನವರು ಮೊದಲ ಬಾರಿಗೆ ಮಾರಾಟಕ್ಕೆ ತಂದರು. ಮುಂದೆ 1978 ರಲ್ಲಿ ಡೈಕಿನ್ ಕಂಪನಿಯು ಡಕ್ ಇಲ್ಲದ ಮಲ್ಟಿಜೋನ್ ಸಿಸ್ಟಮ್ ಅನ್ನು ಪರಿಚಯಿಸಿತು.

ಸೆಂಟ್ರಲ್/ಡಕ್ಡ್ ಏಸಿ: ಈ ಬಗೆಯ ಏಸಿಗಳಲ್ಲಿ ಡಕ್ ಮೂಲಕ ಕಾವನ್ನು ಹೊರಹಾಕುವ ಹಾಗು ತಂಪು ಮಾಡುವ ಎರಡು ಸಿಸ್ಟಮ್ ಗಳಿರುತ್ತವೆ. ಇವುಗಳನ್ನು ಆಪೀಸ್ ಗಳು ಹಾಗೂ ಇತ್ತೀಚೆಗೆ ದೊಡ್ಡ ಮನೆಗಳಲ್ಲೂ ಸಹ ಬಳಸಲಾಗುತ್ತದೆ. ಇವುಗಳ ಮೇಂಟೇನೆನ್ಸ್ ಹಾಗೂ ಪವರ್ ಬಳಕೆ ದುಬಾರಿ.

ಸೆಂಟ್ರಲ್ ಪ್ಲಾಂಟ್ ಕೂಲಿಂಗ್: ಚಿಲ್ಲರ್ ಬಳಸಿಕೊಳ್ಳುವ ಈ ಬಗೆಯ ಏಸಿ ಗಳನ್ನು ದೊಡ್ಡ ಆಪೀಸ್/ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಇವುಗಳ ಮೇಂಟೇನೆನ್ಸ್ ಹಾಗೂ ಪವರ್ ಬಳಕೆ ಕೂಡ ತುಂಬಾ ದುಬಾರಿ. ಅತಿ ಹೆಚ್ಚು ಜನರು ಕೆಲಸಮಾಡುವ, ದೊಡ್ಡ ಕಟ್ಟಡಗಳು, ಇಲ್ಲವೆ ಹೆಚ್ಚು ಕಾವು ಉಂಟಾಗುವಲ್ಲಿ ಇವುಗಳ ಬಳಕೆ ಹೆಚ್ಚು.

2018 ರ ವರದಿಯ ಪ್ರಕಾರ ಪ್ರಪಂಚದಾದ್ಯಂತ ಅಂದಾಜು 1.6 ಬಿಲಿಯನ್ ಏಸಿ ಗಳನ್ನು ಅಳವಡಿಸಲಾಗಿದೆ, 2050 ರ ಒಳಗೆ ಇದು 5.6 ಬಿಲಿಯನ್ ಮುಟ್ಟಬಹುದೆಂದು ಅಂದಾಜಿಸಲಾಗಿದೆ. 2019 ರ ವರದಿಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾದ 90% ಮನೆಗಳಲ್ಲಿ ಏಸಿ ಬಳಕೆಯಲ್ಲಿದೆಯಂತೆ. ಇಂಡಿಯಾದಲ್ಲಿ ಇತ್ತೀಚೆಗೆ ಇದರ ಬಳಕೆ ಹೆಚ್ಚಾಗಿರುವುದನ್ನು ಕಾಣಬಹುದು.

ಅಡ್ಡಪರಿಣಾಮಗಳು

ಯಾವುದೇ ಆವಿಶ್ಕಾರವು ಒಳಿತನ್ನು ತರುವುದರೊಟ್ಟಿಗೆ, ತನ್ನದೇ ಆದ ಹೊಸ ಕೆಡುಕನ್ನೂ ಸಹ ಹೊತ್ತುತರಬಹುದು. ಅದಕ್ಕೆ ಈ ಏಸಿ ಕೂಡ ಹೊರತಾಗಿಲ್ಲ.

ವಾತಾವರಣ ಬದಲಾವಣೆ: ಏಸಿ ಇಂದ ನಮ್ಮ ಮನೆ/ಆಪೀಸ್ ವಾತಾವರಣವೇನೋ ತಂಪಾಗುತ್ತಿದೆಯಾದರೂ ಇದರ ಬಳಕೆಯಿಂದ ವಾತಾರಣದ ಬದಲಾವಣೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಏಸಿಯ ಬಳಕೆಯು ಹೆಚ್ಚಾದಂತೆ ಅದರಿಂದ ಉಂಟಾಗುವ ಅಡ್ಡಪರಿಣಾಮದ ಮಟ್ಟಕೂಡ ಹೆಚ್ಚಾಗಿ, ವಾತಾವರಣ ಬದಲಾವಣೆಗೆ ಒಂದು ಪ್ರಮುಕ ಕಾರಣವಾಗಿ ಮಾರ‍್ಪಟ್ಟಿದೆ. ಏಸಿಗಳು ಹೊರಸೂಸುವ ಹಸಿರುಮನೆ ಅನಿಲ (Greenhouse Gas) ಇದಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ ಅಂದಾಜು ಅರ‍್ದದಶ್ಟು ಹೊರಸೂಸುವಿಕೆ ಈ ಒಣಹವೆಯನ್ನು ನಿಯಂತ್ರಿಸುವಸಲುವಾಗಿಯೇ ಉಂಟಾಗುತ್ತಿದೆ.

ವಿದ್ಯುತ್ ಕೊರತೆ: ಏಸಿ ಹೆಚ್ಚು ಪವರ್ ಬಳಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಏಸಿ ಬಳಕೆ ಹೆಚ್ಚಾದಂತೆ, ವಿದ್ಯುತ್ ಕೊರತೆಯನ್ನು ಪೂರೈಸಲು ಮತ್ತಶ್ಟು ವಿದ್ಯುತ್ ಸ್ತಾವರಗಳು ತಲೆಯೆತ್ತಬಹುದು. ಇದು ವಾತಾವರಣದ ಮೇಲೆ ಬೀರುವ ಮತ್ತೊಂದು ದೊಡ್ಡ ಅಡ್ಡಪರಿಣಾಮ.

ಆರೋಗ್ಯದ ತೊಂದರೆಗಳು: ಹೆಚ್ಚಾಗಿ ಏಸಿ ಬಳಸುವುದರಿಂದ ಆರೋಗ್ಯದ ತೊಂದರೆಗಳು ಉಂಟಾಗಬಹುದು. ಆಲಸ್ಯ, ನೀರಿನ ಅಂಶ ಕಡಿಮೆಯಾಗುವುದು, ಒಣ ಚರ‍್ಮ, ಚರ‍್ಮದ ತುರಿಕೆ, ತಲೆನೋವು, ಉಸಿರಾಟದ ತೊಂದರೆಗಳು ಹೀಗೆ ಏಸಿಯ ಅತಿಯಾದಬಳಕೆ ಆರೋಗ್ಯದ ತೊಂದರೆಗಳನ್ನು ತಂದೊಡ್ಡಬಹುದು.

(ಮಾಹಿತಿ ಹಾಗೂ ಚಿತ್ರಸೆಲೆ: wikipedia.com, earth.com, everlastingairheatingcooling.com.au, mountainairutah.com/blog, renewableenergyworld.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: