ಚೆನ್ನಬಸವಣ್ಣನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.ಚೆನ್ನಬಸವಣ್ಣ, Chenna Basavanna

ಭಕ್ತ ಶಾಂತನಾಗಿರಬೇಕು
ತನ್ನ ಕುರಿತು ಬಂದ ಠಾವಿನಲ್ಲಿ
ಸತ್ಯನಾಗಿರಬೇಕು
ಭೂತಹಿತವಹ ವಚನವ
ನುಡಿಯಬೇಕು
ಗುರು ಲಿಂಗ ಜಂಗಮದಲ್ಲಿ
ನಿಂದೆಯಿಲ್ಲದಿರಬೇಕು
ಸಕಲ ಪ್ರಾಣಿಗಳ
ತನ್ನಂತೆ ಭಾವಿಸೂದು ಮಾಡಬೇಕು
ತನು ಮನ ಧನವ
ಗುರು ಲಿಂಗ ಜಂಗಮಕ್ಕೆ
ಸವೆಸಲೇಬೇಕು
ಅಪಾತ್ರ ದಾನವ
ಮಾಡಲಾಗದು
ಸಕಲೇಂದ್ರಿಯಗಳ
ತನ್ನ ವಶವ ಮಾಡಬೇಕು
ಇದೇ ಮೊದಲಲ್ಲಿ ಬೇಹ
ಶೌಚ ನೋಡಾ
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ
ಕೂಡಲ ಚೆನ್ನಸಂಗಮದೇವಾ.

ದೇವರನ್ನು ಪೂಜಿಸಿ ಪ್ರಸಾದವನ್ನು ಪಡೆಯಬೇಕಾದರೆ ವ್ಯಕ್ತಿಯ ನಡೆನುಡಿಗಳು ನಿತ್ಯ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಭಕ್ತ=ಒಳ್ಳೆಯ ನಡೆನುಡಿಗಳಿಂದ ಬಾಳುವುದೇ ದೇವರಿಗೆ ಮಾಡುವ ಪೂಜೆಯೆಂದು ತಿಳಿದಿರುವವನು; ಶಾಂತನ್+ಆಗಿರಬೇಕು; ಶಾಂತ=ಮಾನಸಿಕವಾಗಿ ತಾಳ್ಮೆ ಮತ್ತು ನೆಮ್ಮದಿಯಿಂದ ಇರುವವನು;

ಭಕ್ತ ಶಾಂತನಾಗಿರಬೇಕು=ದೇವರನ್ನು ನಂಬಿರುವ ವ್ಯಕ್ತಿಯು ಮಾನಸಿಕವಾಗಿ ಯಾವುದೇ ಬಗೆಯ ಉದ್ವೇಗ, ಕೋಪ ತಾಪಕ್ಕೆ ಒಳಗಾಗದೆ ಎಲ್ಲರೊಡನೆ ಪ್ರೀತಿ ಮತ್ತು ಕರುಣೆಯಿಂದ ನಡೆದುಕೊಳ್ಳಬೇಕು;

ತನ್ನ=ತನ್ನನ್ನು/ವ್ಯಕ್ತಿಯನ್ನು; ಕುರಿತು=ಗಮನಿಸಿ/ಉದೇಶಿಸಿ; ಠಾವು+ಅಲ್ಲಿ; ಠಾವು=ಜಾಗ/ನೆಲೆ;

ತನ್ನ ಕುರಿತು ಬಂದ ಠಾವು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಪ್ರತಿಯೊಬ್ಬ ವ್ಯಕ್ತಿಯು ಕುಟುಂಬದ ನೆಲೆ-ದುಡಿಮೆಯ ನೆಲೆ-ಸಾರ್‍ವಜನಿಕ ನೆಲೆ ಎಂಬ ಮೂರು ನೆಲೆಗಳಲ್ಲಿ ಸಹಮಾನವರೊಡನೆ ಪ್ರತಿನಿತ್ಯ ವ್ಯವಹರಿಸುತ್ತಾನೆ; ಸತ್ಯನ್+ಆಗಿರಬೇಕು;

ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು=ವ್ಯಕ್ತಿಯು ತಾನು ಬಾಳುತ್ತಿರುವ ಮೂರು ನೆಲೆಗಳಲ್ಲೂ ಪ್ರಾಮಾಣಿಕತನದ ನಡೆನುಡಿಗಳಿಂದ ಬಾಳುತ್ತಿರಬೇಕು;

ಭೂತ+ಹಿತ+ಅಹ; ಭೂತ=ಮಾನವ ಜೀವಿಯನ್ನು ಒಳಗೊಂಡಂತೆ ಪ್ರಪಂಚದಲ್ಲಿರುವ ಎಲ್ಲಾ ಬಗೆಯ ಕ್ರಿಮಿ ಕೀಟ ಹಕ್ಕಿ ಪ್ರಾಣಿಗಳು; ಹಿತ=ಒಳ್ಳೆಯದು; ಅಹ=ಆಗಿರುವ; ವಚನ=ನುಡಿ/ಮಾತು;

ಭೂತಹಿತವಹ ವಚನವ ನುಡಿಯಬೇಕು=ಸಕಲ ಜೀವರಾಶಿಗಳಿಗೂ ಒಳಿತನ್ನುಂಟುಮಾಡುವಂತಹ ಒಲವು, ಕರುಣೆ ಮತ್ತು ಗೆಳೆತನದ ನುಡಿಗಳನ್ನಾಡಬೇಕು. ಯಾವೊಂದು ಜೀವಿಗೂ ಕೇಡನ್ನು ಬಯಸುವಂತಹ ನುಡಿಗಳನ್ನಾಡಬಾರದು;

ಗುರು=ತನ್ನ ಬಳಿ ಬಂದವರಿಗೆ ಅರಿವನ್ನು ನೀಡಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ನಡೆನುಡಿಗಳಿಂದ ರೂಪಿಸುವ ವ್ಯಕ್ತಿ; ಲಿಂಗ=ಶಿವನ ಸಂಕೇತವಾಗಿರುವ ವಿಗ್ರಹ/ದೇವರು; ಜಂಗಮ=ಒಳ್ಳೆಯ ನಡೆನುಡಿಯಲ್ಲಿ ಶಿವನನ್ನು ಕಾಣುತ್ತ, ಜನಸಮುದಾಯದ ಮನದಲ್ಲಿ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುತ್ತ, ನಿತ್ಯ ಸಂಚಾರಿಯಾಗಿರುವ ವ್ಯಕ್ತಿ; ನಿಂದೆ+ಇಲ್ಲದಿರಬೇಕು; ನಿಂದೆ=ತೆಗಳಿಕೆ/ಬಯ್ಯುವಿಕೆ;

ಗುರು ಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು=ಗುರು ಲಿಂಗ ಜಂಗಮವನ್ನು ತೆಗಳಬಾರದು/ಕಡೆಗಣಿಸಬಾರದು;

ತನ್ನ+ಅಂತೆ; ಅಂತೆ=ಹಾಗೆ/ಅದೇ ರೀತಿ; ಭಾವಿಸು=ತಿಳಿ/ಆಲೋಚಿಸು;

ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು=ವ್ಯಕ್ತಿಯು ಜೀವನದಲ್ಲಿ ಯಾವ ರೀತಿ ತನ್ನ ಮಾನ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತು ನಲಿವು ನೆಮ್ಮದಿಯನ್ನು ಪಡೆಯುವುದಕ್ಕಾಗಿ ಹಂಬಲಿಸುತ್ತಾನೆಯೋ ಅದೇ ರೀತಿ ಇತರ ಜೀವಿಗಳಿಗೂ ಒಳಿತಾಗಲಿ ಎಂಬುದನ್ನು ಅರಿತುಕೊಂಡು ಬಾಳಬೇಕು;

ತನು=ದೇಹ/ಶರೀರ; ಮನ=ಮನಸ್ಸು; ಧನ=ಹಣ/ಒಡವೆ ವಸ್ತು; ಸವೆಸು=ವಿನಿಯೋಗಿಸು/ನೀಡು;

ತನು ಮನ ಧನವ ಗುರು ಲಿಂಗ ಜಂಗಮಕ್ಕೆ ಸವೆಸಲೇಬೇಕು=ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ. ವ್ಯಕ್ತಿಯು ತನ್ನ ದೇಹ ಮತ್ತು ಮನಸ್ಸನ್ನು ಒಗ್ಗೂಡಿಸಿ ಮಾಡಿದ ಒಳ್ಳೆಯ ಕಾಯಕದಿಂದ ಬಂದ ಸಂಪತ್ತಿನಲ್ಲಿ ಸ್ವಲ್ಪ ಪಾಲನ್ನು ಆಸ್ತಿಪಾಸ್ತಿಗಳಿಲ್ಲದೆ ಮತ್ತು ಒಡವೆ ವಸ್ತುಗಳಿಲ್ಲದೆ ಹಸಿವಿನಿಂದ ನರಳುತ್ತಿರುವ ದುಡಿಯುವ ವರ್‍ಗದ ಕಡುಬಡವರಾದ ಜನರಿಗೆ ನೀಡಬೇಕು;

ಪಾತ್ರ=ಯೋಗ್ಯವಾದುದು/ಸರಿಯಾಗಿರುವುದು; ಅಪಾತ್ರ=ಯೋಗ್ಯವಲ್ಲದ್ದು/ಕೆಟ್ಟರೀತಿಯಲ್ಲಿರುವುದು; ದಾನ=ಕೊಡುಗೆ/ಕಾಣಿಕೆ; ಮಾಡಲ್+ಆಗದು;

ಅಪಾತ್ರ ದಾನವ ಮಾಡಲಾಗದು=ಯೋಗ್ಯರಲ್ಲದ ವ್ಯಕ್ತಿಗಳಿಗೆ ಅಂದರೆ ಯಾವುದೇ ದುಡಿಮೆಯನ್ನು ಮಾಡದೆ, ಸೋಂಬೇರಿಯಾಗಿ ಇಲ್ಲವೇ ಕೆಟ್ಟ ನಡೆನುಡಿಯಿಂದ ಇತರರಿಗೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಗಳಿಗೆ ದಾನವನ್ನು ನೀಡಬಾರದು;

ಸಕಲ+ಇಂದ್ರಿಯಗಳ; ಇಂದ್ರಿಯ=ಕೇಳುವ ಕಿವಿ-ನೋಡುವ ಕಣ್ಣು-ವಾಸಿಸುವ ಮೂಗು-ರುಚಿಯನ್ನು ತಿಳಿಯುವ ನಾಲಗೆ-ಸೋಕುವಿಕೆಯ ಅರಿವನ್ನು ಪಡೆಯುವ ತೊಗಲು ಎಂಬ ಅಯ್ದು ಬಗೆಯ ಅಂಗಾಂಗಗಳು; ವಶ=ಹತೋಟಿ;

ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು=ವ್ಯಕ್ತಿಯ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಮೂಡುವುದಕ್ಕೆ ಕಾರಣವಾಗಿರುವ ಕಣ್ಣು, ಕಿವಿ, ಮೂಗು, ನಾಲಗೆ, ತೊಗಲಿನ ಸಂವೇದನೆಗಳನ್ನು ಹತೋಟಿಯಲ್ಲಿಟ್ಟುಕೊಂಡು, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಅನುಸರಿಸಿ ಬಾಳಬೇಕು;

ಬೇಹ=ಅಗತ್ಯವಾಗಿರುವದು/ಬೇಕಾಗಿರುವುದು; ಶೌಚ=ಶುಚಿಯಾಗಿರುವುದು/ಕೊಳಕಿಲ್ಲದಿರುವುದು; ಶೌಚ ಎಂಬ ಪದಕ್ಕೆ ‘ ಒಳ್ಳೆಯ ನಡೆನುಡಿಯಿಂದ ಕೂಡಿದ ವ್ಯಕ್ತಿತ್ವ’ ಎಂಬ ರೂಪಕದ ತಿರುಳಿದೆ; ಬೇಹ ಶೌಚ=ಅಗತ್ಯವಾಗಿ ಇರಲೇಬೇಕಾದ ಒಳ್ಳೆಯ ವ್ಯಕ್ತಿತ್ವ; ನೋಡಾ=ತಿಳಿದು ನೋಡು/ಒರೆಹಚ್ಚಿ ನೋಡು;

ಇದೇ ಮೊದಲಲ್ಲಿ ಬೇಹ ಶೌಚ ನೋಡಾ=ವ್ಯಕ್ತಿಗೆ ಜೀವನದಲ್ಲಿ ಮೊಟ್ಟಮೊದಲು ಬೇಕಾಗಿರುವುದು ಒಳ್ಳೆಯ ನಡೆನುಡಿ ಎಂಬುದನ್ನು ಅರಿತುಕೊಳ್ಳಬೇಕು;

ಪ್ರಸಾದ=ದೇವರ ವಿಗ್ರಹವನ್ನು ಹೂವು, ಹಣ್ಣು, ಒಡವೆ, ವಸ್ತುಗಳಿಂದ ಸಿಂಗರಿಸಿ, ವಿಗ್ರಹದ ಮುಂದೆ ರುಚಿಕರವಾದ ಉಣಿಸು ತಿನಸುಗಳನ್ನು ಇಟ್ಟು, ದೂಪದೀಪಗಳನ್ನು ಬೆಳಗಿದ ನಂತರ, ದೇವರಿಗೆ ಮುಡಿಸಿದ್ದ ಹೂವು ಹಣ್ಣುಗಳನ್ನು, ದೇವರ ಮುಂದೆ ಇಟ್ಟಿದ್ದ ನೀರು ಮತ್ತು ಉಣಿಸು ತಿನಿಸನ್ನು ಪೂಜಾರಿಯು ವ್ಯಕ್ತಿಗಳಿಗೆ ನೀಡುತ್ತಾನೆ ಇಲ್ಲವೇ ದೇವರನ್ನು ಪೂಜಿಸಿದ ವ್ಯಕ್ತಿಯು ತಾನೇ ತೆಗೆದುಕೊಳ್ಳುತ್ತಾನೆ. ಇದನ್ನು ಪ್ರಸಾದವೆಂದು ಕರೆಯುತ್ತಾರೆ; ಪಡೆ=ಹೊಂದು/ಸ್ವೀಕರಿಸು;

ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ=ಲಿಂಗವನ್ನು ಪೂಜಿಸಿ ಪ್ರಸಾದವನ್ನು ಪಡೆಯಬೇಕಾದರೆ;

ಎನಗೆ+ಇದೇ; ಎನಗೆ=ನನಗೆ/ವ್ಯಕ್ತಿಗೆ; ಸಾಧನ=ಉಪಕರಣ/ಸಲಕರಣೆ; ಕೂಡಲ ಚೆನ್ನಸಂಗಮದೇವ=ಶಿವನ ಹೆಸರು/ಚೆನ್ನಬಸವಣ್ಣನವರ ವಚನಗಳ ಅಂಕಿತನಾಮ;

ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ ಕೂಡಲ ಚೆನ್ನಸಂಗಮದೇವಾ=ಶಿವನ ಅನುಗ್ರಹಕ್ಕೆ ವ್ಯಕ್ತಿಯು ಪಾತ್ರನಾಗಲು ಇರುವ ಒಂದೇ ಒಂದು ದಾರಿಯೆಂದರೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವುದು. ಅಂದರೆ ಜೀವನದ ಉದ್ದಕ್ಕೂ ಒಳ್ಳೆಯ ನಡೆನುಡಿಯಿಂದ ಬಾಳುವುದು;

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರ ಪಾಲಿಗೆ ‘ಪ್ರಸಾದ’ ಎಂದರೆ ದೇವರನ್ನು ಪೂಜಿಸಿದ ನಂತರ ಪಡೆಯುವ ಹೂವು ಹಣ್ಣುಗಳಲ್ಲ/ತಿನಸು ಉಣಿಸುಗಳಲ್ಲ/ಒಡವೆ ವಸ್ತುಗಳಲ್ಲ. ನಿತ್ಯ ಜೀವನದಲ್ಲಿ ಆಡುವ ಒಳ್ಳೆಯ ನುಡಿ ಮತ್ತು ಮಾಡುವ ಒಳ್ಳೆಯ ಕೆಲಸದಿಂದ ದೊರೆಯುವ ಒಲವು ನಲಿವು ನೆಮ್ಮದಿಯ ಜೀವನವೇ ಪ್ರಸಾದವಾಗಿತ್ತು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks