ಮಾಡಿನೋಡಿ ಬಾದುಶಾ

ಸುಹಾಸಿನಿ ಎಸ್

ಬಾದುಶಾ/ಬಾಲುಶಾ ಬಾಯಿಯಲ್ಲಿ ನೀರು ಬರಿಸುವ ಒಂದು ಸಿಹಿ ತಿನಿಸು. ನೋಡಲು ಸಣ್ಣ ಉದ್ದಿನವಡೆಯಂತೆ ಕಾಣುವ ‌ಸ್ವಾದಿಶ್ಟ ಸಿಹಿ ಕಾದ್ಯ. ಇದರ ಹಿತ ಮಿತವಾದ ರುಚಿಯು ಒಂದು ತಿಂದರೆ ಮತ್ತೂಂದು ತಿನ್ನಬೇಕೆನ್ನಿಸುವಂತೆ ಮಾಡುವುದು. ಬಾದುಶಾವನ್ನ ಮಾಡುವುದು ತುಂಬಾ ಸರಳ ಮತ್ತು ಇದು ಬೇಗನೇ ಮಾಡಬಹುದಾದಂತ ಸಿಹಿಯೂ ಕೂಡ ಆಗಿದೆ.

ಬೇಕಾಗುವ ಸಾಮಾನುಗಳು:

  • ಮೈದಾ ಹಿಟ್ಟು – 1.5 ಕಪ್
  • ಬೇಕಿಂಗ್ ಪೌಡರ‍್ – 1/2 ಚಮಚ
  • ತುಪ್ಪ – 1/4 ಕಪ್
  • ಹಾಲು/ನೀರು – ಸ್ವಲ್ಪ

ಸಕ್ಕರೆ ಪಾಕ ಮಾಡಲು :

  • ಸಕ್ಕರೆ -2 ಕಪ್
  • ನೀರು – 1 ಕಪ್
  • ಏಲಕ್ಕಿ – 2-3

ಮಾಡುವ ಬಗೆ:

1. ಮೈದಾ ಹಿಟ್ಟು ಮತ್ತು ಬೇಕಿಂಗ್ ಪೌಡರನ್ನು ಒಂದು ಪಾತ್ರೆಯಲ್ಲಿ ಜರಡಿ ಹಿಡಿದು, ಅದಕ್ಕೆ ತುಪ್ಪ ಕರಗಿಸಿ ಸ್ವಲ್ಪ ಸ್ವಲ್ಪ ಹಾಕುತ್ತಾ, ಕೈಯಿಂದ ನಿದಾನವಾಗಿ ಕಲಸಿ. ಮುಶ್ಟಿ ಮಾಡಿದರೆ ಹಿಟ್ಟು ಹಿಡಿಯಬೇಕು ( ಪುಡಿ ಉದುರದಂತೆ )
2. ಈ ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಹಾಲು/ನೀರು ಹಾಕಿ ಕಲೆಸಿ (ನಾದಬೇಡಿ).
3. ಹಿಟ್ಟು ಕಲೆಸಿದ ಬಳಿಕ ಅದನ್ನ ಒಂದು ಹಸಿ ಬಟ್ಟೆಯಿಂದ ಮುಚ್ಚಿ, ಸುಮಾರು 30 ನಿಮಿಶಗಳ ಕಾಲ ನೆನೆಯಲು ಬಿಡಿ.
4. ಅರ‍್ದ ತಾಸಿನ ನಂತರ ಸಕ್ಕರೆ ಪಾಕ ತಯಾರಿ ಮಾಡಬೇಕು (ಮೊದಲೇ ಮಾಡಿಟ್ಟುಕೊಂಡರೆ ಪಾಕ ಗಟ್ಟಿಯಾಗಬಹುದು).
ಸಕ್ಕರೆ ಪಾಕ ಮಾಡಲು ಸಕ್ಕರೆ ಮತ್ತು ನೀರು ಕಾಯಿಸಿ. ಇದಕ್ಕೆ ಒಂದು ಎಳೆ ಪಾಕ ಬರಬೇಕಂತೇನಿಲ್ಲ, ಕೈಗೆ ಅಂಟು ಅಂಟಾಗಿ ಸ್ವಲ್ಪ ಎಳೆ ಕಾಣುವಂತಾದರೆ ಸಾಕು. ಈಗ ಪಾಕಕ್ಕೆ ಏಲಕ್ಕಿ ಪುಡಿ ಮಾಡಿ ಹಾಕಿ ಕಲೆಸಿ.
5. ಮೈದಾಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅವುಗಳನ್ನ ಕೈಯಿಂದ ಒತ್ತಿ ಸ್ವಲ್ಪ ಚಪ್ಪಟೆ ಮಾಡಿ ಉದ್ದಿನವಡೆ ತರ ನಡುವೆ ತೂತು ಮಾಡಿಟ್ಟುಕೊಳ್ಳಿ.
6. ಇದನ್ನ ಒಂದು ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿ ಒಂದೊಂದಾಗಿ ಹಾಕಿ, ಎರಡೂ ಬದಿಯಲ್ಲಿ ಕಂದು ಬಣ್ಣ ಬರುವ ತನಕ ಕರೆಯಿರಿ. ನಂತರ ಅದನ್ನು ತೆಗೆದು, ಸ್ವಲ್ಪ ಆರಿದಮೇಲೆ ಸಕ್ಕರೆ ಪಾಕಕ್ಕೆ ಹಾಕಿ (ಪಾಕವು ಕೂಡಾ ಉಗುರುಬೆಚ್ಚಗಿರಲಿ). ಸ್ವಲ್ಪ ಹೊತ್ತು ಬಿಟ್ಟು ಪಾಕದಲ್ಲಿ ಹೊರಳಾಡಿಸಿ.

ಪಾಕ ಹೀರಿಕೂಂಡ ನಂತರ ಬಾದುಶಾಗಳನ್ನ ಒಂದು ಪ್ಲೇಟ್ ಗೆ ಹಾಕಿ, ಬದಾಮಿ ಅತವಾ ಪಿಸ್ತಾ ಚೂರುಗಳಿಂದ ಅಲಂಕರಿಸಿ. ಈಗ ಬಾದುಶಾ ಸವಿಯಲು ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: