ಗಟ್ಟಿವಾಳಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ಹೆಸರು: ಗಟ್ಟಿವಾಳಯ್ಯ
ಕಾಲ: ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: 147
ವಚನಗಳ ಅಂಕಿತನಾಮ: ಚಿಕ್ಕಯ್ಯಪ್ರಿಯ ಸಿದ್ಧಲಿಂಗ

ಒಡೆದ ಮಡಕೆಗೆ
ಸರಿಯಿಂದ ಸಂದು ಕೂಡುವುದೆ
ದಗ್ಧವಾದ ಪಟ
ಅಗಸರ ಕಲ್ಲಿಗೆ ಹೊದ್ದುವುದೆ
ಬದ್ಧ ಭವಿಗಳೆಂದು ಬಿಟ್ಟ ಮತ್ತೆ
ಸಮಯದ ಹೊದ್ದಿಗೆ ಏಕೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಎಂದೆ.

ಜಾತಿ ಪದ್ದತಿಯನ್ನು ಒಪ್ಪಿಕೊಂಡಿರುವ ಮತ್ತು ಕರ್‍ಮಸಿದ್ದಾಂತವನ್ನು ನಂಬಿಕೊಂಡಿರುವ ವ್ಯಕ್ತಿಗಳ ವರ್‍ತನೆಯಲ್ಲಿ ಸಹಮಾನವರ ಬಗ್ಗೆ ಪ್ರೀತಿ ಮತ್ತು ಕರುಣೆಯ ನಡೆನುಡಿಗಳು ಕಂಡುಬರುವುದಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಜಾತಿ ಪದ್ದತಿ=ಹನ್ನೆರಡನೆಯ ಶತಮಾನದಲ್ಲಿ ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ್‍ಣಗಳು ಮತ್ತು ಈ ವರ್‍ಣಗಳಿಂದ ಕವಲುಗೊಂಡ ನೂರಾರು ಜಾತಿ ಮತ್ತು ಉಪಜಾತಿಗಳಿಂದ ಕನ್ನಡ ಸಮಾಜ ರೂಪುಗೊಂಡಿತ್ತು. ಬ್ರಾಹ್ಮಣ-ಕ್ಶತ್ರಿಯ-ವೈಶ್ಯ ವರ್‍ಣದವರಿಗೆ ವಿದ್ಯೆಯನ್ನು ಕಲಿಯುವ, ನಾಡನ್ನು ಆಳುವ, ಸಂಪತ್ತಿಗೆ ಒಡೆಯರಾಗುವ ಅವಕಾಶ ಮತ್ತು ಹಕ್ಕುಗಳಿದ್ದವು. ಆದರೆ ಶೂದ್ರ ವರ್‍ಣದವರಿಗೆ ಮತ್ತು ಶೂದ್ರರಿಗಿಂತಲೂ ಕೆಳಸ್ತರದಲ್ಲಿದ್ದ ಹೊಲೆಯರು ಹಾಗೂ ಮಾದಿಗರಿಗೆ ಈ ಅವಕಾಶವಾಗಲಿ ಇಲ್ಲವೇ ಹಕ್ಕುಗಳಾಗಲಿ ಇರಲಿಲ್ಲ. ಇಂತಹ ಜಾತಿ ಪದ್ದತಿಯಿಂದಾಗಿ ಕೋಟಿಗಟ್ಟಲೆ ಜನರು “ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ” ದಿಂದ ವಂಚಿತರಾಗಿ ಹಸಿವು, ಬಡತನ ಮತ್ತು ಅಪಮಾನದಲ್ಲಿ ನರಳುತ್ತಿದ್ದರು.

ಕರ್‍ಮ ಸಿದ್ದಾಂತ=ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಪಡೆಯುತ್ತಿರುವ ನೋವು ನಲಿವುಗಳಿಗೆ ಆತ/ಆಕೆಯು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳೇ ಕಾರಣ. ಹಿಂದಿನ ಜನ್ಮದಲ್ಲಿ ಒಳ್ಳೆಯದನ್ನು ಮಾಡಿದವರು ಈ ಜನ್ಮದಲ್ಲಿ ಮೇಲು ವರ್‍ಣ/ಮೇಲು ಜಾತಿಯಲ್ಲಿ ಹುಟ್ಟಿ ವಿದ್ಯೆ ಸಂಪತ್ತು ಮತ್ತು ಉನ್ನತವಾದ ಗದ್ದುಗೆಯನ್ನು ಪಡೆದು ನೆಮ್ಮದಿಯಿಂದಿರುತ್ತಾರೆ. ಹಿಂದಿನ ಜನ್ಮದಲ್ಲಿ ಕೆಟ್ಟದ್ದನ್ನು ಮಾಡಿದವರು ಈ ಜನ್ಮದಲ್ಲಿ ಕೆಳ ವರ್‍ಣ/ಕೆಳ ಜಾತಿಯಲ್ಲಿ ಹುಟ್ಟಿ ಹಸಿವು, ಬಡತನ ಮತ್ತು ಅಪಮಾನದ ಬೇಗೆಯಲ್ಲಿ ಬೇಯುತ್ತಾರೆ. ಆದ್ದರಿಂದ ನಮ್ಮ ಕಣ್ಣ ಮುಂದಿನ ಸಮಾಜದಲ್ಲಿ ಹಸಿವು, ಬಡತನ, ರೋಗ, ಅಂಗಹೀನತೆ ಮತ್ತು ಅಪಮಾನದಿಂದ ಬಳಲುತ್ತಿರುವವರೆಲ್ಲರೂ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ತಕ್ಕ ದಂಡನೆಯನ್ನು ಈ ಜನ್ಮದಲ್ಲಿ ಪಡೆಯುತ್ತಿದ್ದಾರೆ ಎಂಬ ನಂಬಿಕೆ;

ಒಡೆ=ಸೀಳು/ಬಿರಿ ; ಮಡಕೆ=ಮಣ್ಣಿನ ಪಾತ್ರೆ ; ಸರಿ+ಇಂದ; ಸರಿ=ಅಂಟು/ಜಿಗುಟಾದ ವಸ್ತು; ಸಂದು=ಬಿರುಕುಬಿಟ್ಟಿರುವ ಎಡೆ; ಕೂಡು=ಸೇರು/ಜತೆಯಾಗು; ಕೂಡುವುದೆ=ಸೇರುವುದೆ. ಅಂದರೆ ಮೊದಲಿನಂತೆ ಇರುವುದಕ್ಕೆ ಆಗುವುದಿಲ್ಲ;

ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ=ಒಡೆದು ಹೋಗಿರುವ ಮಡಕೆಯೊಂದರ ಚೂರುಗಳನ್ನು ಗೋಂದಿನಿಂದ ಅಂಟಿಸಿದರೆ, ಅವು ಒಂದರೊಡನೆ ಮತ್ತೊಂದು ಕೂಡಿಕೊಂಡು ಮಡಕೆಯು ಮೊದಲಿನಂತಾಗುವುದೆ;

ದಗ್ಧ+ಆದ; ದಗ್ಧ=ಸುಟ್ಟ; ದಗ್ಧವಾದ=ಬೆಂಕಿಯಲ್ಲಿ ಸುಟ್ಟುಹೋಗಿರುವ ; ಪಟ=ಬಟ್ಟೆ; ಅಗಸ=ಕೊಳೆಯಾದ ಬಟ್ಟೆಗಳನ್ನು ಒಗೆದು ತೊಳೆದು ಮಡಿ ಮಾಡುವ ಕಸುಬಿನವನು; ಅಗಸರ ಕಲ್ಲು=ಅಗಸರು ಬಟ್ಟೆಯನ್ನು ಎತ್ತಿ ಒಗೆದು ಮಡಿ ಮಾಡಲು ಬಳಸುವ ಕಲ್ಲಿನ ಹಾಸು; ಹೊದ್ದು=ಸರಿಹೊಂದು; ಹೊದ್ದುವುದೆ=ಸರಿಹೊಂದುವುದೆ. ಅಂದರೆ ಸರಿಯಾಗುವುದಿಲ್ಲ ;

ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ=ಬೆಂಕಿಯಲ್ಲಿ ಸುಟ್ಟು ಅಲ್ಲಲ್ಲಿ ಕರಿಕಲಾಗಿರುವ ಹಾಗೂ ಚಿಂದಿಯಾಗಿರುವ ಬಟ್ಟೆಯನ್ನು ಅಗಸರವನು ಒಗೆದು ಮಡಿಮಾಡಲಾಗುವುದಿಲ್ಲ. ಏಕೆಂದರೆ ಕಲ್ಲಿನ ಮೇಲೆ ಬಟ್ಟೆಯನ್ನು ಒಗೆಯುತ್ತಿದ್ದಂತೆಯೇ ಇನ್ನುಳಿದ ಬಟ್ಟೆಯು ಹರಿದು ತುಂಡು ತುಂಡಾಗುತ್ತದೆ;

ಬದ್ಧ=ಕಟ್ಟಲೆ/ನಿಯಮ ; ಭವಿ+ಗಳ್+ಎಂದು; ಭವಿ=ಮೇಲು ಕೀಳಿನ ಜಾತಿ ಪದ್ದತಿಯನ್ನು ಒಪ್ಪಿಕೊಂಡವನು ಮತ್ತು ಕರ್‍ಮಸಿದ್ದಾಂತದಲ್ಲಿ ನಂಬಿಕೆಯಿರುವವನು; ಬಿಡು=ತೊರೆ/ತ್ಯಜಿಸು; ಮತ್ತೆ=ಆಮೇಲೆ/ನಂತರ/ಬಳಿಕ; ಸಮಯ=ಸತ್ಯ ನೀತಿ ನ್ಯಾಯದಿಂದ ಕೂಡಿದ ದರ್‍ಮ; ಹೊದ್ದಿಗೆ=ನಂಟು/ಸಹವಾಸ ; ಸಮಯದ ಹೊದ್ದಿಗೆ=ದರ್‍ಮದ/ ಒಳ್ಳೆಯ ನಡೆನುಡಿಯ ನಂಟು;

ಏಕೆ=ಯಾತಕ್ಕೆ; ಸಿದ್ಧಲಿಂಗ=ಶಿವನ ಮತ್ತೊಂದು ಹೆಸರು; ಚಿಕ್ಕಯ್ಯಪ್ರಿಯ ಸಿದ್ಧಲಿಂಗ=ಘಟ್ಟಿವಾಳಯ್ಯನವರ ವಚನಗಳ ಅಂಕಿತನಾಮ;

ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ… ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ=ಹೇಗೆ ಒಡೆದ ಮಡಕೆಯ ಚೂರುಗಳನ್ನು ಅಂಟಿಸಿ ಮಡಕೆಯನ್ನು ಮೊದಲಿನಂತೆ ಮಾಡಲಾಗುವುದಿಲ್ಲವೋ…ಬೆಂದುಹೋಗಿರುವ ಬಟ್ಟೆಯನ್ನು ಮತ್ತೆ ಒಗೆದು ಮಡಿಮಾಡಲಾಗುವುದಿಲ್ಲವೋ ಅಂತೆಯೇ ಜಾತಿ ಪದ್ದತಿ ಮತ್ತು ಕರ್‍ಮಸಿದ್ದಾಂತದಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿಯ ಮನದಲ್ಲಿ ಸಹಮಾನವರ ಬಗ್ಗೆ ಪ್ರೀತಿ ಮತ್ತು ಕರುಣೆಯನ್ನು ಕಾಣಲಾಗದು. ಏಕೆಂದರೆ ಬವಿಯು ಬಡವರನ್ನು, ರೋಗಿಗಳನ್ನು ಮತ್ತು ಅಂಗವಿಕಲರನ್ನು ಮತ್ತು ಬಡತನದಲ್ಲಿ ನರಳುತ್ತಿರುವವನ್ನು ಕಂಡಾಗ, ಅವರಿಗೆ ನೆರವನ್ನು ನೀಡುವ ಬದಲು “ಅದು ಅವರವರ ಕರ್‍ಮ; ಅನುಬವಿಸಿ ನರಳಲಿ… ಸಾಯಲಿ. ನನಗೇನು.” ಎಂದು ಸುಮ್ಮನಾಗುತ್ತಾನೆ;

ಹನ್ನೆರಡನೆಯ ಶತಮಾನದಲ್ಲಿ ರಚನೆಗೊಂಡ ವಚನಗಳಲ್ಲಿ ‘ಬಕ್ತ’ ಮತ್ತು ‘ಬವಿ’ ಎಂಬ ಪದಗಳು ಮತ್ತೆ ಮತ್ತೆ ಬಳಕೆಯಾಗುತ್ತವೆ.

ಶಿವಶರಣಶರಣೆಯರ ನಿಲುವಿನಲ್ಲಿ ಬಕ್ತ ಎಂದರೆ “ಜಾತಿ ವ್ಯವಸ್ತೆಯಿಂದ ಹೊರಬಂದು, ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕ ಒಳಿತನ್ನು ಬಯಸುವವನು.”

ಬವಿ ಎಂದರೆ “ಮೇಲು ಕೀಳಿನ ಜಾತಿ ವ್ಯವಸ್ತೆಯನ್ನು ಒಪ್ಪಿಕೊಂಡು, ಮಾನವರ ಬದುಕಿನ ನೋವು ನಲಿವುಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ ಪುಣ್ಯಗಳಿಂದ ಕೂಡಿದ ಕರ್‍ಮಸಿದ್ದಾಂತದಲ್ಲಿ ನಂಬಿಕೆಯಿರುವ ವ್ಯಕ್ತಿ.”

ಒಮ್ಮೆ ಜಾತಿಯ ಕಟ್ಟುಪಾಡುಗಳಿಂದ ಹೊರಬಂದು ಶಿವಶರಣರಾದ ವ್ಯಕ್ತಿಗಳು ಮತ್ತೆ ಯಾವುದೇ ಕಾರಣದಿಂದಲೂ ಬವಿಯ ಜತೆಯಲ್ಲಿ ನಂಟನ್ನು ಹೊಂದಬಾರದೆಂಬ ನಿಯಮವನ್ನು ವಚನಕಾರರು ಪಾಲಿಸುತ್ತಿದ್ದರು.

(ಚಿತ್ರ ಸೆಲೆ: sangaati.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: