ಸ್ಕೈ ಲಾಡ್ಜ್ ಹೋಟೆಲ್

– .

ಮಾನವನ ಆಸೆಗೆ ಕಡಿವಾಣವಿದೆಯೇ? ಕಂಡಿತಾ ಇಲ್ಲ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ನಂತರ ದೋಣಿಗಳನ್ನು ನಿರ‍್ಮಿಸಿ ನೀರಿನ ಮೇಲೆ ಚಲಿಸುವುದನ್ನು ಕಲಿತ. ಸಬ್ಮರಿನ್ಗಳನ್ನು ನಿರ‍್ಮಿಸಿ ನೀರಿನ ಒಳಗೆ ತೇಲುವುದನ್ನು ಕರಗತ ಮಾಡಿಕೊಂಡ. ಆಕಾಶದಲ್ಲಿ ಹಕ್ಕಿಗಳು ಹಾರುವಂತೆ ತಾನೂ ವಿಮಾನ, ಹೆಲಿಕಾಪ್ಟರ್ ತಯಾರಿಸಿ ಹಾರುವುದನ್ನು ಕಲಿತ. ಇವೆಲ್ಲವನ್ನೂ ಗಮನಿಸಿದರೆ ಮಾನವ ಯಾವುದನ್ನೂ ದಕ್ಕಿಸಿಕೊಳ್ಳದೆ ಬಿಡುವ ಜಾಯಮಾನದವನಲ್ಲ ಎನಿಸುತ್ತದೆ ಅಲ್ಲವೇ?

ಪರ‍್ವತಗಳಲ್ಲಿ, ಎತ್ತರದ ಪ್ರದೇಶದಲ್ಲಿ, ಮಾನವನ ದಾಳಿಯಿಂದ ಸುರಕ್ಶಿತವಾದ ಜಾಗದಲ್ಲಿ ಪಕ್ಶಿಗಳು ಗೂಡನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುವುದನ್ನು ಕಂಡ ಮಾವನ ಅಲ್ಲಿಗೂ ಲಗ್ಗೆ ಹಾಕಿದ. ಅದರ ಪರಿಣಾಮವೇ ಪೆರುವಿನ ಪವಿತ್ರ ಕಣಿವೆ ಕುಜ್ಕೋದಲ್ಲಿ ತಲೆಯೆತ್ತಿರುವ ವಿಶೇಶವಾದ ಸ್ಕೈ ಲಾಡ್ಜ್ ಅಡ್ವೆಂಚರ್ ಸೂಟ್ಸ್. ಈ ಹೋಟೆಲ್‍ನ ಒಂದೊಂದು ಕ್ಯಾಪ್ಸೂಲ್ ಸಹ ಪ್ರತ್ಯೇಕವಾಗಿದೆ. ಪಾರದರ‍್ಶಕ ವಸ್ತುವಿನಿಂದ ಐಶಾರಾಮಿಯಾಗಿ ತಯಾರಾಗಿರುವ ಇದು ಅಲ್ಲಿ ತಂಗುವವರಿಗೆ ವಿಶಿಶ್ಟ ಅನುಬವವನ್ನು ನೀಡುತ್ತದೆ. ಈ ನೇತಾಡುವ ಕೋಣೆಯಲ್ಲಿ ನಿದ್ರಿಸುವ ಅವಕಾಶವನ್ನು ಪಾರದರ‍್ಶಕ ಕ್ಯಾಪ್ಸೂಲ್ ನೀಡುತ್ತದೆ. ಮಲಗಿದ ನಂತರ ಎಚ್ಚರವಾದ ಕೂಡಲೇ ಕಂಡುಬರುವ ಮುಗಿಲು, ಸೂರ‍್ಯನ ಕಿರಣಗಳ ದ್ರುಶ್ಯ ಅತ್ಯಂತ ಅಪ್ಯಾಯಮಾನ. ಈ ಕಣಿವೆಯಲ್ಲಿನ ಮುಂಜಾನೆಯ ಅತೀಂದ್ರಿಯ ಮತ್ತು ಅನನ್ಯ ನೋಟ ನಿಮ್ಮ ಮನ ಸೂರೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಾವುದೇ ಸುಕ ಅನುಬವಿಸುವ ಮುನ್ನ ಕೊಂಚವಾದರೂ ಕಶ್ಟ ಅನುಬವಿಸಬೇಕಂತೆ. ಆಗಲೇ ಸುಕವನ್ನು ಇನ್ನೂ ಹೆಚ್ಚು ಅನುಬವಿಸಲು ಸಾದ್ಯ. ಈ ಸ್ಕೈ ಲಾಡ್ಜಿನಲ್ಲಿ ಮಲಗಲು ಸಹ ಕೊಂಚ ಕಶ್ಟ ಪಡಬೇಕು. ನಾಲ್ಕು ನೂರು ಮೀಟರ್ ಎತ್ತರದಲ್ಲಿರುವ ಇದನ್ನು ಏರಬೇಕಿದೆ. ಇಲ್ಲವೆ ಜಿಪ್ಲೈನ್ ಮೂಲಕ ತಲುಪಬಹುದು. ಇಲ್ಲಿ ಒಂದು ರಾತ್ರಿ ತಂಗಲು ಎರಡು ನೂರು ಪೌಂಡ್ ಹಣ ತೆರಬೇಕಾಗುತ್ತದೆ. ಅಶ್ಟು ಹಣ ತೆತ್ತಲ್ಲಿ ಉಪಹಾರದ ಜೊತೆಗೆ ಬೋಜನ ಮತ್ತು ವೈನ್ ಸಹ ಲಬ್ಯವಿರುತ್ತದೆ.

ಈ ನೇತಾಡುವ ಸ್ಕೈ ಲಾಡ್ಜ್ ಆರಂಬವಾಗಿದ್ದು 2013ರ ಜೂನ್ ತಿಂಗಳಿನಲ್ಲಿ. ಈ ಸ್ಕೈ ಲಾಡ್ಜಿನಲ್ಲಿ ಮೂರು ವಿಶೇಶ ಕ್ಯಾಪ್ಸೂಲ್ ಸೂಟ್ ಗಳಿವೆ. ಇವುಗಳು ಒಟ್ಟು ಎಂಟು ಜನ ಒಮ್ಮೆಲೆ ಇರುವಶ್ಟು ಸಾಮರ‍್ತ್ಯ ಹೊಂದಿವೆ. ಲಂಬವಾದ ನೇತಾಡುವ ಪಾರದರ‍್ಶಕ ಕ್ಯಾಪ್ಸೂಲ್ ಸೂಟುಗಳನ್ನು 1200 ಅಡಿ ಎತ್ತರದಲ್ಲಿ ನೆಲೆಗೊಳಿಸಲಾಗಿದೆ. ಇದರ ಪಾರದರ‍್ಶಕ ಹೊದಿಕೆಯ ಮೂಲಕ ಸೇಕ್ರೆಡ್ ವ್ಯಾಲಿಯ 300 ಡಿಗ್ರಿ ಕೋನದಶ್ಟು ವಿಶಾಲ ಪ್ರದೇಶ ನೋಡಲು ಸಿಗುತ್ತದೆ.

ಎಲ್ಲಾ ಕ್ಯಾಪ್ಸೂಲ್ಗಳು ಏರೋಸ್ಪೇಸ್ ಅಲ್ಯುಮಿನಿಯಮ್ ಹಾಗೂ ಹವಾಮಾನ ನಿರೋದಕ ಪಾಲಿ ಕಾರ‍್ಬೋನೇಟ್ ನಿಂದ ತಯಾರಿಸಲಾಗಿದೆ. ಉಳಿದಂತೆ ಪ್ರತಿ ಸೂಟ್ ಸಹ ನಾಲ್ಕು ಹಾಸಿಗೆಗಳು, ಊಟದ ಸ್ತಳ ಮತ್ತು ಕಾಸಗಿ ಸ್ನಾನದ ಮನೆಯಿಂದ ಸುಸಜ್ಜಿತವಾಗಿವೆ. 24ಅಡಿ ಉದ್ದ, 8 ಅಡಿ ಅಗಲ ಮತ್ತು 8 ಅಡಿ ಎತ್ತರದ ಈ ಕ್ಯಾಪ್ಸೂಲ್ ಸೂಟುಗಳಲ್ಲಿ ಆರು ಕಿಟಕಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ನಾಲ್ಕು ಎಸಿ ಡಕ್ ಗಳಿದ್ದು, ಕ್ಯಾಪ್ಸೂಲಿನೊಳಗೆ ಆರಾಮದಾಯಕ ವಾತಾವರಣವನ್ನು ಸ್ರುಶ್ಟಿಸುತ್ತವೆ. ಇಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಎರಡು ನೂರು ಪೌಂಡ್ ಪಾವತಿಸಿದ ಮೇಲೆ ಅದಕ್ಕೆ ತಕ್ಕುದಾದ ಅನುಕೂಲಗಳು ಇರಬೇಕಲ್ಲವೆ? ಇಲ್ಲಿನ ಪ್ರತಿ ಸೂಟ್ನ ವಿನ್ಯಾಸ ಮತ್ತು ವೈಶಿಶ್ಟ್ಯಗಳು ಗ್ರಾಹಕರಿಗೆ ಮೊದಲ ದರ‍್ಜೆಯ ಸೇವೆ ಮತ್ತು ಸಂಪೂರ‍್ಣ ಸೌಕರ‍್ಯ ಒದಗಿಸುವಂತೆ ನಿರ‍್ಮಿಸಲಾಗಿದೆ.

ಪ್ರತಿ ಕಾಸಗಿ ಸೂಟ್ನಲ್ಲಿ ಪ್ರತ್ಯೇಕ ಸ್ನಾನದ ಮನೆ, ಒಣ ಪರಿಸರದ ಶೌಚಾಲಯ ಮತ್ತು ಸಿಂಕ್ ಅಳವಡಿಸಲಾಗಿರುತ್ತದೆ. ಪ್ರತಿಯೊಂದು ಸೂಟಿನಲ್ಲೂ 1.8 ಮೀಟರ್ ವ್ಯಾಸದ ಪಾರದರ‍್ಶಕ ಗುಮ್ಮಟವಿದ್ದು, ಬವ್ಯವಾದ ದ್ರುಶ್ಯ ವಿಕ್ಶಣೆಯನ್ನು ಸಾದ್ಯವಾಗಿಸುತ್ತದೆ. ಕ್ಯಾಪ್ಸೂಲಿಗೆ ಹೋಗಿ ಬರುವುದೇ ಒಂದು ಸವಾಲಿನ ಕೆಲಸವಾದ್ದರಿಂದ, ಇದು ಸಾಹಸ ಪ್ರಿಯರಿಗೆ ಸ್ವರ‍್ಗ.

(ಮಾಹಿತಿ ಮತ್ತು ಚಿತ್ರಸೆಲೆ: naturavive.com, slate.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಈ ಬರಹವನ್ನು ಪ್ರಕಟಿಸಿದ ಹೊನಲು ಬಳಗಕ್ಕೆ ಧನ್ಯವಾದಗಳು 🙏

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *