ಜೇಡರ ದಾಸಿಮಯ್ಯ ವಚನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ.

ಸತಿಯರ ಸಂಗವನು
ಅತಿಶಯ ಗ್ರಾಸವನು
ಪೃಥ್ವಿಗೀಶ್ವರನ ಪೂಜೆಯನು
ಅರಿವುಳ್ಳಡೆ
ಹೆರರ ಕೈಯಿಂದ ಮಾಡಿಸುವರೆ
ರಾಮನಾಥ.

ವ್ಯಕ್ತಿಯು ದೇವರ ಪೂಜೆಯನ್ನು ತಾನು ಮಾಡಬೇಕೆ ಹೊರತು, ಪೂಜಾರಿಯಿಂದ ಮಾಡಿಸಬಾರದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಪೂಜಾರಿ=ದೇಗುಲದ ಗರ್‍ಬಗುಡಿಯಲ್ಲಿ ನೆಲೆಗೊಂಡಿರುವ ವಿಗ್ರಹರೂಪಿಯಾದ ದೇವರನ್ನು ಬಹುಬಗೆಯಲ್ಲಿ ಸಿಂಗರಿಸಿ, ದೂಪ ದೀಪಗಳನ್ನು ಬೆಳಗಿ, ಮಂಗಳಾರತಿಯನ್ನು ಎತ್ತಿ, ಅನಂತರ ಗರ್‍ಬಗುಡಿಯ ಹೊಸ್ತಿಲಿನಿಂದಾಚೆ ನಿಂತಿರುವ ವ್ಯಕ್ತಿಗಳ ಮುಂದೆ ಮಂಗಳಾರತಿಯ ತಟ್ಟೆಯನ್ನು ಒಡ್ಡುವ ಮತ್ತು ತೀರ್‍ತ ಹೂವು ಹಣ್ಣು ಉಣಿಸು ತಿನಸುಗಳನ್ನು ದೇವರ ಪ್ರಸಾದವೆಂದು ಜನರಿಗೆ ನೀಡುವವನು;

ಸತಿ=ಹೆಂಡತಿ; ಸಂಗ=ಒಡನಾಟ/ಕೂಟ/ಕಾಮದ ನಂಟು;

ಸತಿಯರ ಸಂಗವನು=ವ್ಯಕ್ತಿಯು ತನ್ನ ಹೆಂಡತಿಯ ದೇಹದೊಡನೆ ಪಡೆಯುವ ಕಾಮದ ನಂಟನ್ನು;

ಅತಿಶಯ=ಹೆಚ್ಚಳ/ತುಂಬಾ ಅಗತ್ಯವಾದ; ಗ್ರಾಸ=ಅನ್ನ/ಆಹಾರ/ಊಟ;

ಅತಿಶಯ ಗ್ರಾಸವನು=ವ್ಯಕ್ತಿಯು ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುವಾಗ ತುಂಬಾ ಅಗತ್ಯವಾಗಿ ಅನ್ನ ಉಣ್ಣುವುದನ್ನು/ಊಟ ಮಾಡುವುದನ್ನು/ಆಹಾರ ಸೇವಿಸುವುದನ್ನು;

ಪೃಥ್ವಿಗೆ+ಈಶ್ವರನ; ಪೃಥ್ವಿ=ಬೂಮಿ; ಈಶ್ವರ=ಒಡೆಯ; ಪೃಥ್ವಿಗೀಶ್ವರ=ಶಿವ; ಪೂಜೆ=ದೇವರ ವಿಗ್ರಹವನ್ನು ಹೂವು ಹಣ್ಣು ಉಡುಗೆ ತೊಡುಗೆಗಳಿಂದ ಸಿಂಗರಿಸಿ ದೂಪ ದೀಪಗಳಿಂದ ಆರತಿಯನ್ನು ಬೆಳಗುವುದು/ದೇವರನ್ನು ಒಲಿಸಿಕೊಳ್ಳಲು ಮಾಡುವ ಬಹುಬಗೆಯ ಆಚರಣೆಗಳು;

ಪೃಥ್ವಿಗೀಶ್ವರನ ಪೂಜೆಯನು=ವ್ಯಕ್ತಿಯು ಬೂಮಿಗೆ ಒಡೆಯನಾದ ಶಿವನ ಪೂಜೆ ಮಾಡುವುದನ್ನು;

ಅರಿವು+ಉಳ್ಳಡೆ; ಅರಿವು=“ಜೀವನದಲ್ಲಿ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ಎಚ್ಚರ ಮತ್ತು ತನಗೆ , ತನ್ನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ಬಯಸುವಂತೆಯೇ ಸಹಮಾನವರ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ತಿಳುವಳಿಕೆ; ಉಳ್ಳಡೆ=ಇದ್ದರೆ;

ಅರಿವುಳ್ಳಡೆ=ವ್ಯಕ್ತಿಯು ಅರಿವನ್ನು ಹೊಂದಿದ್ದರೆ;

ಹೆರರ=ಇತರರ/ಬೇರೆಯವರ/ಅನ್ಯರ; ರಾಮನಾಥ=ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನವರ ವಚನಗಳ ಅಂಕಿತನಾಮ;

ಹೆರರ ಕೈಯಿಂದ ಮಾಡಿಸುವರೆ=ಬೇರೆಯವರಿಂದ ಮಾಡಿಸುತ್ತಾರೆಯೆ; ಈ ನುಡಿಗಳು ವ್ಯಕ್ತಿ ಮತ್ತು ದೇವರ ನಡುವೆ ಪೂಜಾರಿಯು ಇರುವುದನ್ನು ಬಹಳ ಕಟುವಾಗಿ ಟೀಕಿಸುತ್ತಿವೆ.

ವ್ಯಕ್ತಿಯು ತನ್ನ ಹೊಟ್ಟೆ ಹಸಿದಾಗ ತಾನು ಮಾಡಬೇಕಾದ ಊಟವನ್ನು ಮತ್ತು ತನ್ನ ದೇಹದಲ್ಲಿ ಉಂಟಾಗುವ ಕಾಮದ ಬಯಕೆಯನ್ನು ಈಡೇರಿಸಿಕೊಳ್ಳಲು ತನ್ನ ಹೆಂಡತಿಯೊಡನೆ ಕೂಡುವುದನ್ನು ತಾನಾಗಿ ಮಾಡದೆ, ಈ ಎರಡು ಬಗೆಯ ಕ್ರಿಯೆಗಳನ್ನು ಬೇರೆಯವರಿಂದ ಮಾಡಿಸುತ್ತಾರೆಯೆ?. ಹಾಗೆ ಮಾಡಿಸುವುದರಿಂದ ವ್ಯಕ್ತಿಯ ಹಸಿವು ಮತ್ತು ಕಾಮ ಹಿಂಗುವುದೆ?.

ಈ ಬಗೆಯ ಪ್ರಶ್ನೆಯನ್ನು ಕೇಳುವುದರ ಮೂಲಕ “ಹೊಟ್ಟೆಯ ಹಸಿವು ಮತ್ತು ದೇಹದ ಕಾಮ” ಎಂಬುವು ಹೇಗೆ ವ್ಯಕ್ತಿಯ ಮಯ್ ಮನಕ್ಕೆ ಸೇರಿದ ಸಂಗತಿಗಳೋ ಅಂತೆಯೇ ಶಿವಪೂಜೆಯೂ ವ್ಯಕ್ತಿಗತವಾದುದು. ಆದ್ದರಿಂದ ದೇವರು ಮತ್ತು ವ್ಯಕ್ತಿಯ ನಡುವೆ ಪೂಜಾರಿ ಇರುವುದು ತಿಳಿಗೇಡಿತನದ ಸಂಗತಿ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣ ಶರಣೆಯರ ಪಾಲಿಗೆ ‘ದೇವರು’ ಎಂದರೆ “ವ್ಯಕ್ತಿಗೆ ಜೀವನದಲ್ಲಿ ನೋವನ್ನು ಪರಿಹರಿಸಿ, ನಲಿವನ್ನು ಅನುಗ್ರಹಿಸುವ ವ್ಯಕ್ತಿ/ಶಕ್ತಿಯಾಗಿರಲಿಲ್ಲ.” ವಚನಕಾರರ ಪಾಲಿಗೆ ‘ದೇವರು’ ಎಂದರೆ “ಜೀವನದ ಉದ್ದಕ್ಕೂ ವ್ಯಕ್ತಿಯ ಮಯ್ ಮನದಲ್ಲಿ ಮೂಡುವ ಕೆಟ್ಟ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯ ನಡೆನುಡಿಯಿಂದ ಬಾಳಲು ಪ್ರೇರಣೆಯನ್ನು ನೀಡುವ ಅರಿವಿನ ಸಂಕೇತವಾಗಿತ್ತು.”

ಆದ್ದರಿಂದಲೇ ವಚನಕಾರರು ದೇಗುಲದಲ್ಲಿ ನೆಲೆಗೊಂಡಿರುವ ವಿಗ್ರಹಿರೂಪಿಯಾದ ಶಿವನನ್ನು ನಿರಾಕರಿಸುವುದರ ಜತೆಗೆ ಶಿವನಿಗೂ ಮತ್ತು ವ್ಯಕ್ತಿಗೂ ನಡುವೆ ಬರುವ ಪೂಜಾರಿಯನ್ನು ನಿರಾಕರಿಸಿ, ತಮ್ಮ ಅಂಗಯ್ ಮೇಲೆ ಚಿಕ್ಕದಾದ ಶಿವಲಿಂಗವನ್ನು ಇಟ್ಟುಕೊಂಡು ತಾವೇ ನೇರವಾಗಿ ಪೂಜಿಸುತ್ತಿದ್ದರು.

ದೇವರು ಮತ್ತು ವ್ಯಕ್ತಿಗಳ ನಡುವೆ ಪೂಜಾರಿಯ ಇರುವಿಕೆಯನ್ನು ವಚನಕಾರರು ನಿರಾಕರಿಸಲು ಮತ್ತೊಂದು ಕಾರಣವೆಂದರೆ —

ಪೂಜಾರಿಯನ್ನು ಹೊರತುಪಡಿಸಿ ಇನ್ನುಳಿದ ವ್ಯಕ್ತಿಗಳು ಗರ್‍ಬಗುಡಿಯ ಒಳಕ್ಕೆ ಹೋಗಲು ಅನುಮತಿಯಿಲ್ಲ. ದೇವರ ಮುಂದೆಯೇ ಪೂಜಾರಿಯು ಇನ್ನಿತರ ವ್ಯಕ್ತಿಗಳಿಗಿಂತ ಮೇಲುಸ್ತರದಲ್ಲಿರುತ್ತಾನೆ. ದೇಗುಲದಲ್ಲಿ ವ್ಯಕ್ತಿಗಳ ನಡುವೆ ಈ ಬಗೆಯ ಮೇಲುಕೀಳಿನ ತಾರತಮ್ಯವಿರುತ್ತದೆ .“ತಾನು ದೇವರ ಪ್ರತಿನಿದಿ” ಎಂಬಂತೆ ಪೂಜಾರಿಯ ನಡೆನುಡಿಗಳಿರುತ್ತವೆ. ಆದ್ದರಿಂದಲೇ ಪೂಜಾರಿಯು ಆಡುವ ಮಾತುಗಳನ್ನು ವೇದವಾಕ್ಯವೆಂದು ನಂಬಿ, ಅವನು ಹೇಳುವ ಎಲ್ಲ ಬಗೆಯ ಆಚರಣೆಗಳನ್ನು ವ್ಯಕ್ತಿಗಳು ಚಾಚು ತಪ್ಪದೆ ಮಾಡುತ್ತಾರೆ.

ಪೂಜಾರಿಯು ದೇವರನ್ನು ಪೂಜಿಸಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ವೆಚ್ಚಮಾಡುವಂತಹ ಅನೇಕ ಬಗೆಯ ಆಚರಣೆಗಳನ್ನು ಹೇಳುತ್ತಾನೆಯೇ ಹೊರತು, ಯಾವುದೇ ವ್ಯಕ್ತಿಗೆ “ನಿನ್ನ ಮಯ್ ಮನದಲ್ಲಿರುವ ಕೆಟ್ಟ ನಡೆನುಡಿಗಳನ್ನು ಬಿಟ್ಟು, ಒಳ್ಳೆಯ ನಡೆನುಡಿಯಿಂದ ಬಾಳಿದರೆ ನಿನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಒಳ್ಳೆಯದಾಗುತ್ತದೆಯೆಂಬ ಸಾಮಾಜಿಕ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಮೂಡಿಸುವುದಿಲ್ಲ.”

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: