ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ.children, ಮಕ್ಕಳು

ಬಾರೋ ಅಣ್ಣ ಆಡೋಣ
ಬುಗುರಿಯ ಆಟವಾ ಆಡೋಣ
ರಂಗು ರಂಗಿನ ಬಣ್ಣವ ಹೊದ್ದ
ಬುಗುರಿಯ ತಿರುಗಿಸಿ ಬೀಸೋಣ
ಗರಗರ ತಿರುಗುತ ಕಾಮನ ರಂಗನು
ಬೀರುವ ಬುಗುರಿಯ ನೋಡೋಣ

ಬಾರೋ ಅಣ್ಣ ಆಡೋಣ
ಚೆಂಡಿನ ಆಟವ ಆಡೋಣ
ಓಡಿ ಬಂದು ಚೆಂಡನು ಎಸೆವೆ
ಬ್ಯಾಟನು ಬೀಸುತ ಹೊಡೆಯಣ್ಣ
ಸುಯ್ಯನೆ ಮೇಲೆ ಹಾರುವ ಚೆಂಡನು
ಹಿಡಿಯಲು ಕುಶಿಯಲಿ ಓಡೋಣ

ಬಾರೋ ಅಣ್ಣ ಆಡೋಣ
ಗೋಲಿಯ ಆಟವ ಆಡೋಣ
ಹೊಳೆಯುವ ಬಣ್ಣದ ಗೋಲಿಯ ತಾರಣ್ಣ
ದಪ್ಪ ಗೋಲಿ ಸಣ್ಣ ಗೋಲಿ
ಗಾಜಿನ ಗೋಲಿಯ ಉರುಳಿ ಬಿಟ್ಟು
ಆಟವ ಆಡುವ ಬಾರಣ್ಣ

ಬಾರೋ ಅಣ್ಣ ಆಡೋಣ
ಕಣ್ಣಾ ಮುಚ್ಚಾಲೆ ಆಡೋಣ
ಒಂದು ಎರಡೂ ಎಣಿಸುವ ವೇಳೆಗೆ
ಮರೆಯಲಿ ಅವಿತುಕೊ ಹೋಗಣ್ಣ
ಬರುವೆನು ಹುಡುಕುತ ಹಿಡಿಯಲು ನಿನ್ನ
ನೋಡಿದ ಕೂಡಲೇ ಕುಣಿಯುವೆನಣ್ಣ

ಬಾರೋ ಅಣ್ಣ ಆಡೋಣ
ಚಿನ್ನಿ ದಾಂಡಿನ ಆಟವ ಆಡೋಣ
ದಾಂಡನು ಬೀಸುತ ಹೊಡೆಯುವೆ ನಾನು
ಚಿನ್ನಿಯು ಮೇಲಕೆ ಹಾರಿದೆ ಓಡಣ್ಣ
ತೇಲುತ ಬರುವ ಚಿನ್ನಿಯ ನೀನು
ಹಿಡಿದರೆ ಔಟು ನಾನಣ್ಣ

ಬಾರೋ ಅಣ್ಣ ಆಡೋಣ
ತರ ತರ ಆಟವ ಆಡೋಣ
ಮರಳಿ ಬಾರದ, ಕಾಸಿಗೆ ಸಿಗದ
ಬಾಲ್ಯದ ತುಂಟಾಟದಿ ಕುಣಿಯೋಣ
ಎಲ್ಲರೂ ಸೇರಿ ನಲಿಯುತ ಈಗ
ಬಾಲ್ಯದ ಸವಿಯನು ಸವಿಯೋಣ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications