ವೈಟ್ ಸಾಸ್ ಪಾಸ್ತಾ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಪಾಸ್ತಾ – 2 ಕಪ್
ಉಪ್ಪು – 2 ಟೀ ಚಮಚ
ಎಣ್ಣೆ – 3 ಚಮಚ
ಬೆಳ್ಳುಳ್ಳಿ – 4 ಎಸಳು
ಈರುಳ್ಳಿ – 1
ದಪ್ಪ ಮೆಣಸಿನಕಾಯಿ – 1
ಗಜ್ಜರಿ – 1
ಸಿಹಿಜೋಳ (ಸ್ವೀಟ್ ಕಾರ್‍ನ್) – 4 ಚಮಚ
ಕಾಳುಮೆಣಸಿನ ಪುಡಿ – 1 ಚಮಚ
ಬೆಣ್ಣೆ – 2 ಚಮಚ
ಮೈದಾ – 2 ಚಮಚ
ಹಾಲು – 2 ಕಪ್
ಒಣ ಮೆಣಸಿನಕಾಯಿ – 1
ಓರೆಗಾನೋ – 1 ಚಮಚ
ಚೀಸ್ – 2 ಎಲೆ (ಸ್ಲೈಸ್)

ಮಾಡುವ ಬಗೆ

ಮೊದಲು 4-5 ಕಪ್ ನೀರು ಕುದಿಯಲು ಇಟ್ಟು, ಇದಕ್ಕೆ 1/2 ಚಮಚ ಉಪ್ಪು, 1/2 ಚಮಚ ಎಣ್ಣೆ ಸೇರಿಸಿ ಪಾಸ್ತಾ ಸೇರಿಸಿಕೊಳ್ಳಿ. ಪಾಸ್ತಾ ಪೂರ್‍ತಿ ಕುದಿಯುವ ಮೊದಲೇ ಒಲೆಯಿಂದ ಇಳಿಸಿ ನೀರನ್ನು ಸೋಸಿ, ಬೇರ್‍ಪಡಿಸಿ ಇಟ್ಟುಕೊಳ್ಳಿ. ಪಾಸ್ತಾ ಕುದಿಸಿದ ನೀರನ್ನು ಎಸೆಯಬೇಡಿ.

ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ತಿರುವಿಕೊಳ್ಳಿ. ಒಂದು ನಿಮಿಶದ ಬಳಿಕ ದಪ್ಪಗೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿ, ಗಜ್ಜರಿ, ಬಿಡಿಸಿದ ಸಿಹಿಜೋಳ ಸೇರಿಸಿ 2-3 ನಿಮಿಶ ಹುರಿದು ತೆಗೆದಿಟ್ಟುಕೊಳ್ಳಿ.

ಇನ್ನೊಂದು ಬಾಣಲೆ ಬಿಸಿಮಾಡಿ ಸಣ್ಣ ಉರಿಯಲ್ಲಿಟ್ಟು 2 ಚಮಚ ಬೆಣ್ಣೆ ಹಾಕಿ, ಬೆಣ್ಣೆ ಕರಗಿದ ಮೇಲೆ 2 ಚಮಚ ಮೈದಾ ಸೇರಿಸಿ ಕಲಸಿಕೊಳ್ಳಿ. ಮೈದಾ ಕೊಂಚ ಬಣ್ಣ ಬದಲಿಸಿದ ನಂತರ 1 ಕಪ್ ಹಾಲು ಸೇರಿಸಿ ಗಂಟಾಗದಂತೆ ಕಲಸುವುದನ್ನು ಮುಂದುವರೆಸಿ. ಮಿಶ್ರಣ ಗಟ್ಟಿಯಾದ ಮೇಲೆ ಕ್ರೀಮ್‌ನ ಹದಕ್ಕೆ ಬರುವಶ್ಟು ಹಾಲು ಸೇರಿಸಿ ಕಲಸಿಕೊಳ್ಳಿ. ಬೇಕಿದ್ದರೆ ಒಂದು ಸ್ಲೈಸ್ ಚೀಸ್ ಅನ್ನು ಹಾಕಿ ಕರಗಿಸಿ. ಒಣ ಮೆಣಸಿನಕಾಯಿಯನ್ನು ಸಣ್ಣಗೆ ಮುರಿದು ಸೇರಿಸಿ, ಕಾಳು ಮೆಣಸಿನ ಪುಡಿ, ಓರೆಗಾನೋ ಪುಡಿ,  ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮೊದಲೇ ಹುರಿದು ಇಟ್ಟುಕೊಂಡಿದ್ದ ತರಕಾರಿಗಳು ಮತ್ತು ಪಾಸ್ತಾವನ್ನು ಸೇರಿಸಿ ಕಲಸಿಕೊಳ್ಳಿ. ತುಂಬಾ ಗಟ್ಟಿಯೆನಿಸಿದರೆ, ಪಾಸ್ತಾ ಕುದಿಸಿದ ನೀರನ್ನು ಸೇರಿಸಿಕೊಳ್ಳಬಹುದು.

ಈಗ ವೈಟ್ ಸಾಸ್ ಪಾಸ್ತಾ ಸವಿಯಲು ತಯಾರು. ಪಾಸ್ತಾ ಬಿಸಿಯಾಗಿರುವಾಗಲೇ ಮೇಲೆ ಚೀಸ್ ತುರಿದು ಹಾಕಿ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: