ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?
– ನಿತಿನ್ ಗೌಡ.
ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ ಅತವಾ 24 ಗಂಟೆ ಎನ್ನುತ್ತೇವೆ. ಹೀಗೆ ನಮ್ಮ ಬೂಮಿಯ ಮೇಲಿನ ಒಂದು ವರುಶ, ಇನ್ನೊಂದು ಸುತ್ತಗದಲ್ಲಿ(Planet) ಒಂದು ದಿನವಾಗಿರಬಹುದು,ಇಲ್ಲವೇ ಒಂದು ಗಳಿಗೆಯಾಗಿರಬಹುದು. ಹೀಗೆ ನಾವು ಒಮ್ಮೆ ನಮ್ಮ ಕಣ್ಣ ರೆಪ್ಪೆ ಬಡಿಯುವುದರೊಳಗೆ(ಅಂದಾಜು 0.25ಸೆಕೆಂಡು), ಈ ಹಿರಿದಾದ ಬ್ರಹ್ಮಾಂಡದಲ್ಲಿ ಏನೆಲ್ಲಾ ಆಗಬಹುದೆಂದು ನೋಡೋಣವೇ!
- ಜಗತ್ತಿನಾದ್ಯಂತ 15,000ಸಾವಿರಕ್ಕೂ ಹೆಚ್ಚು ಅರಿಲ್ಗಳು(Stars) ಹುಟ್ಟಿಕೊಳ್ಳುತ್ತವೆ.
- 300ಕ್ಕೂ ಹೆಚ್ಚು ಅರಿಲ್ಗಳು ಸಿಡಿಯಲ್ಪಡುತ್ತವೆ. ಅಂದರೆ ಈ ಅರಿಲ್ಗಳು ತಮ್ಮ ಜೀವನ ಚಕ್ರದ ಸೂಪರ್ ನೋವ ಹಂತ( ಅರಿಲ್ಸಿಡಿಕ ಹಂತ) ತಲುಪಿರುತ್ತವೆ.
- ಒಂದೂವರೆ ಕೋಟಿಯಶ್ಟು ಗೊತ್ತುಗುರಿಯಿಲ್ಲದ ಸುತ್ತುಗಗಳು(Rougue Planets) ಹುಟ್ಟಿಕೊಳ್ಳುತ್ತವೆ.
- ನಮ್ಮ ನೇಸರ 17.5ಕೋಟಿ ಟನ್ ಗಳಶ್ಟು ಹೈಡ್ರೋಜನ್ ಉರುವಲನ್ನು ಸುಡುತ್ತಾನೆ. ಇದು ನಮ್ಮ ಬೂಮಿಗೆ ಎಶ್ಟೋ ಲಕ್ಶ ವರುಶಗಳಿಗೆ ಬೇಕಾದಶ್ಟು ಶಕ್ತಿ ಕೊಡಬಹುದಲ್ಲವೇ
- ಮೂವತ್ತು ಕಪ್ಪುಕುಳಿಗಳು(Black holes) ಹುಟ್ಟಿಕೊಳ್ಳುತ್ತವೆ.
- ಪ್ರಪಂಚ 5,27,250km ಅಶ್ಟು ಅಗಲ ಹಿಗ್ಗುತ್ತದೆ. ಅಂದಾಜು ಕಾಶ್ಮೀರದಿಂದ ಕನ್ಯಾಕುಮಾರಿಗೆ 142 ಬಾರಿ ಪಯಣಿಸಿದಶ್ಟು ದೂರ!
- ನಮ್ಮ ಹಾಲ್ಗಡಲ ಅರಿಲ್ವಳಿ(Milkyway Galaxy) 250ಕಿ.ಮೀ ದೂರ ಸಾಗಿರುತ್ತದೆ ಮತ್ತು 125 ಮೀಟರ್‌ನಶ್ಟು ಬೆಳೆದಿರುತ್ತದೆ.
- ಆಂಡ್ರೋಮೇಡಾ ಅರಿಲ್ವಳಿಯು ನಮ್ಮ ಅರಿಲ್ವಳಿಗೆ 27ಕಿ.ಮೀ ಹತ್ತಿರವಾಗುತ್ತದೆ. ಮುಂದೊಂದು ದಿನ ನಮ್ಮ ಅರಿಲ್ವಳಿ ಮತ್ತು ಆಂಡ್ರೋಮೆಡಾ ಅರಿಲ್ವಳಿಯು ಗುದ್ದಿಕೊಳ್ಳುತ್ತವೆ.
- ಬೆಳಕು ಅಂದಾಜು 75,000ಕಿ.ಮೀ ಕ್ರಮಿಸಿರುತ್ತದೆ. ಅಂದಾಜು ನಮ್ಮ ಬೂಮಿಯ ಸುತ್ತಳತೆಯ ಎರಡೂವರೆ ಪಟ್ಟಶ್ಟು ದೂರ!
- ನಮ್ಮ ಒಂದು ರೆಪ್ಪೆಯ ಬಡಿತದೊಳಗೆ ಜಗತ್ತಿನ ಇನ್ಯಾವುದೋ ಬೂಮಿಯಂತಹ ಸುತ್ತುಗದಲ್ಲಿ, ಎಶ್ಟೋ ಜೀವಿಗಳ ಜೀವನವೇ ಸಾಗಿ ಮುಗಿದಿರಬಹುದು!
ಒಬ್ಬ ಮನುಶ್ಯ ತನ್ನ ಜೀವಿತಾವದಿಯಲ್ಲಿ 65ಕೋಟಿ ಬಾರಿ ಕಣ್ಣ ರೆಪ್ಪೆ ಬಡಿಯುತ್ತಾನೆ. ಅಲ್ಲಿಗೆ ಈ ಅನಂತ ಬ್ರಹ್ಮಾಂಡದಲ್ಲಿ ಏನೇನು ಜರುಗಬಲ್ಲದು ಎಂಬುದನ್ನು ಯೋಚಿಸಿದರೆ ಸೋಜಿಗವೆನಿಸುತ್ತದೆಯಲ್ಲವೇ!
(ಮಾಹಿತಿಸೆಲೆ ಮತ್ತು ಚಿತ್ರಸೆಲೆ: youtube.com, pixabay.xom )
ಉಪಯುಕ್ತ ಮಾಹಿತಿ..👌
ನನ್ನಿ 🙂