ರವೀಂದ್ರನಾತ ಟ್ಯಾಗೋರರ ಕವನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ.

*** ಪೂಜೆ ***

ದೇವ ನಿನಗಾಗಿ ಬೇರೊಂದು ಪೂಜಾಗೃಹವ
ರಚಿಸಲಾರೆನು ನನ್ನ ಮನೆ ಚಿಕ್ಕದಿಹುದು
ನಮ್ಮ ಜೊತೆಯಲೆ ದೇವ ಹಗಲಿರುಳು ನೆಲೆಸಿದರೆ
ನೀನು ನಮ್ಮವನಾಗಿ ಮನಕೆ ಮುದವಹುದು

ನಿನಗೆ ವೈಭವದಿಂದ ಮಾಡಲಾರೆನು ಪೂಜೆ
ಆದರೂ ನೀ ನೆಲೆಸು ನಮ್ಮ ಬಳಿಯಲ್ಲೇ
ಪ್ರೀತಿಯೊಂದೇ ನನ್ನ ಬಳಿಯಿರುವ ಸಂಪದವು
ಒಲುಮೆ ಪೂಜೆಯನಷ್ಟೆ ನಾ ಮಾಡಬಲ್ಲೆ

ನಿನ್ನೊಲುಮೆ ಪೂಜೆಯನು ನಾನೆಸಗಿದರೆ ದೇವ
ಎಲ್ಲೆಲ್ಲು ಮಧುರ ಸಂಗೀತ ತುಂಬುವುದು
ಮಧುರ ಮುರಲಿಯ ನಾದ ತಂತಾನೆ ಹೊಮ್ಮುವುದು
ಕಾನನದ ತುಂಬೆಲ್ಲ ಹೂವು ಅರಳುವುದು.

ಸಹಮಾನವರೊಡನೆ ಒಲವು ನಲಿವು ನೆಮ್ಮದಿಯಿಂದ ಬಾಳುವಂತಹ ಒಳ್ಳೆಯ ನಡೆನುಡಿಯಲ್ಲಿ ದೇವರು ನೆಲೆಸಿದ್ದಾನೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಪೂಜೆ=ದೇವರ ವಿಗ್ರಹವನ್ನು ಹೂಹಣ್ಣುಕಾಯಿಗಳಿಂದ ಅಲಂಕರಿಸಿ, ದೂಪದೀಪಗಳನ್ನು ಬೆಳಗಿಸಿ ಮಾಡುವ ಆಚರಣೆ ; ದೇವ=ದೇವರು; ಬೇರೆ+ಒಂದು; ಗೃಹ=ಮನೆ/ಕೊಟಡಿ ; ಪೂಜಾಗೃಹ=ದೇವರ ಮನೆ; ರಚಿಸು=ಕಟ್ಟು; ಚಿಕ್ಕದು+ಇಹುದು; ಇಹುದು=ಇರುವುದು;

ದೇವ ನಿನಗಾಗಿ ಬೇರೊಂದು ಪೂಜಾಗೃಹವ ರಚಿಸಲಾರೆನು ನನ್ನ ಮನೆ ಚಿಕ್ಕದಿಹುದು=ವ್ಯಕ್ತಿಯು ತನ್ನ ಮನೆಯು ಚಿಕ್ಕದಾಗಿರುವುದರಿಂದ ದೇವರಿಗಾಗಿಯೇ ಪ್ರತ್ಯೇಕವಾದ ಒಂದು ಕೊಟಡಿಯನ್ನು ಕಟ್ಟಿಸುವುದಕ್ಕೆ ತನ್ನಿಂದ ಆಗುತ್ತಿಲ್ಲವೆಂದು ಹೇಳುತ್ತಿದ್ದಾನೆ. ಈ ನುಡಿಗಳ ಮೂಲಕ ದೇವರ ಬಗೆಗಿನ ಒಂದು ವಾಸ್ತವ ಸಂಗತಿಯು ನಮಗೆ ತಿಳಿದುಬರುತ್ತದೆ. “ತಮ್ಮ ಸಂಕಟಗಳನ್ನು ಪರಿಹರಿಸಿ ತಮಗೆ ಒಳಿತನ್ನು ಮಾಡಿ ಜೀವನದ ಉದ್ದಕ್ಕೂ ತಮ್ಮನ್ನು ಕಾಪಾಡಬಲ್ಲ ಒಂದು ಶಕ್ತಿಯನ್ನಾಗಿ ಇಲ್ಲವೇ ವ್ಯಕ್ತಿಯನ್ನಾಗಿ” ದೇವರನ್ನು ಮಾನವ ಸಮುದಾಯ ತನ್ನ ಮನದಲ್ಲಿ ಕಲ್ಪಿಸಿಕೊಂಡಿದೆ. ಆದ್ದರಿಂದಲೇ ದೇವರನ್ನು ಒಲಿಸಿಕೊಳ್ಳಲೆಂದು ಪೂಜಿಸುವ ರೀತಿಯು ನೂರೆಂಟು ಬಗೆಗಳಲ್ಲಿರುತ್ತದೆ. ಜಗತ್ತಿನ ಜನಸಮುದಾಯಕ್ಕೆ ಅಗತ್ಯವಾದುದೆಲ್ಲವನ್ನೂ ತಮ್ಮ ದುಡಿಮೆಯಿಂದ ಉತ್ಪಾದಿಸುವ ದುಡಿಯುವ ಶ್ರಮಜೀವಿಗಳಾದ ಬಡವರ ಕಿರಿದಾದ ಗುಡಿಸಲುಗಳಲ್ಲಿ ದೇವರಮನೆಗೆ ಜಾಗವಿಲ್ಲ. ಏಕೆಂದರೆ ಅಲ್ಲಿ ವಾಸಿಸುವ ಮಂದಿಗೆ ಸರಿಯಾಗಿ ಜಾಗವಿರುವುದಿಲ್ಲ.

ವ್ಯಕ್ತಿಗಳ ಹಣಕಾಸಿನ ಮಟ್ಟ ಉತ್ತಮಗೊಳ್ಳುತ್ತ ಸಾಗಿದಂತೆಲ್ಲಾ ದೇವರ ಬಗೆಗಿನ ಒಲವು ಹೆಚ್ಚಾಗ ತೊಡಗುತ್ತದೆ. ಏಕೆಂದರೆ ಸಂಪತ್ತು ಕೂಡಿದಂತೆಲ್ಲಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಪಡೆಯಬೇಕೆಂಬ ಆಸೆ ಮತ್ತು ಇರುವ ಸಂಪತ್ತು ಎಲ್ಲಿ ಕಳೆದುಹೋಗುವುದೋ ಎಂಬ ಆತಂಕ ವ್ಯಕ್ತಿಗೆ ಹೆಚ್ಚಾಗುತ್ತದೆ. ಆದ್ದರಿಂದಲೇ ವ್ಯಕ್ತಿಯ ಸಂಪಾದನೆಯು ಹೆಚ್ಚಾದಂತೆಲ್ಲ ದೇವರ ಪೂಜೆಯ ಆಚರಣೆಗಳ ಆಡಂಬರ ಹೆಚ್ಚಾಗುತ್ತದೆ. ಸಿರಿವಂತರು ಕಟ್ಟಿಸುವ ಮನೆಗಳಲ್ಲಿ ದೇವರಮನೆಯು ಬಹುದೊಡ್ಡದಾಗಿರುತ್ತದೆ ಮತ್ತು ಬೆಲೆ ಬಾಳುವ ಒಡವೆ ವಸ್ತುಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿರುತ್ತದೆ;

ಹಗಲು+ಇರುಳು; ಇರುಳು=ರಾತ್ರಿ; ನೆಲೆಸು=ವಾಸಿಸು/ತಂಗು/ಬಿಡಾರ ಹೂಡು; ಮುದ+ಅಹುದು; ಮುದ=ಆನಂದ; ಅಹುದು=ಆಗುವುದು;

ನಮ್ಮ ಜೊತೆಯಲೆ ದೇವ ಹಗಲಿರುಳು ನೆಲೆಸಿದರೆ ನೀನು ನಮ್ಮವನಾಗಿ ಮನಕೆ ಮುದವಹುದು=ನಮ್ಮ ಜತೆಜತೆಯಲ್ಲಿಯೇ ಅಂದರೆ ನಮ್ಮ ಮಯ್ ಮನದಲ್ಲಿಯೇ ದೇವರಾದ ನೀನು ನೆಲೆಸಿದರೆ, ನಾವು ಸದಾಕಾಲ ಆನಂದವಾಗಿರುತ್ತೇವೆ. ನಮ್ಮ ಮಯ್ ಮನದಲ್ಲಿ ನಿರಂತರವಾಗಿ ತುಡಿಯುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯ ನಡೆನುಡಿಯಿಂದ ಬಾಳುವುದಕ್ಕೆ ಅಗತ್ಯವಾದ ಅರಿವು ಮತ್ತು ಎಚ್ಚರವನ್ನು ನೀನು ನಮಗೆ ನೀಡುತ್ತಿರುತ್ತೀಯೆ;

ವೈಭವ+ಇಂದ; ವೈಭವ=ಆಡಂಬರ/ಸಿರಿಯಿಂದ ಕೂಡಿರುವುದು;

ನಿನಗೆ ವೈಭವದಿಂದ ಮಾಡಲಾರೆನು ಪೂಜೆ=ದೊಡ್ಡ ಪ್ರಮಾಣದಲ್ಲಿ ಹಣವನ್ನು ವೆಚ್ಚಮಾಡುತ್ತ ನಿನ್ನನ್ನು ಅದ್ದೂರಿಯಾಗಿ ಪೂಜೆ ಮಾಡುವ ಸಿರಿವಂತಿಕೆ ನನ್ನಲ್ಲಿಲ್ಲ;

ಆದರೂ ನೀ ನೆಲೆಸು ನಮ್ಮ ಬಳಿಯಲ್ಲೇ=ಸಿರಿಸಂಪದ ಇಲ್ಲವೆಂದು ನಮ್ಮನ್ನು ಕಡೆಗಣಿಸದೆ ನಮ್ಮ ಬಳಿಯಲ್ಲಿ ನೆಲೆಸು;

ಪ್ರೀತಿ+ಒಂದೇ; ಪ್ರೀತಿ=ಇತರರನ್ನು ತನ್ನಂತೆಯೇ ಕಾಣುತ್ತ, ತನ್ನ ಒಳಿತಿನ ಜತೆಗೆ ಇತರರಿಗೂ ಒಳಿತನ್ನು ಉಂಟುಮಾಡುವಂತಹ ಒಲವು, ನಲಿವು, ಕರುಣೆ ಮತ್ತು ಗೆಳೆತನದ ನಡೆನುಡಿ; ಸಂಪದ=ಸಂಪತ್ತು/ಒಡವೆವಸ್ತು; ಒಲುಮೆ=ಪ್ರೀತಿ/ಒಲವು; ಪೂಜೆಯನ್+ಅಷ್ಟೆ; ಅಷ್ಟೆ=ಮಾತ್ರ;

ಪ್ರೀತಿಯೊಂದೇ ನನ್ನ ಬಳಿಯಿರುವ ಸಂಪದವು ಒಲುಮೆ ಪೂಜೆಯನಷ್ಟೆ ನಾ ಮಾಡಬಲ್ಲೆ=ನನ್ನ ಬಳಿ ಪ್ರೀತಿಯೆಂಬ ಸಂಪತ್ತಿದೆ. ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುವುದೇ ದೇವರಾದ ನಿನಗೆ ಮಾಡುವ ಪೂಜೆಯೆಂದು ನಂಬಿ, ಅದರಂತೆಯೇ ಬಾಳಲು ಶಕ್ತನಾಗಿದ್ದೇನೆ;

ನಿನ್ನ+ಒಲುಮೆ; ನಾನ್+ಎಸಗಿದರೆ; ಎಸಗು=ಮಾಡು/ಆಚರಿಸು; ಎಲ್ಲ+ಎಲ್ಲು; ಎಲ್ಲೆಲ್ಲು=ಎಲ್ಲ ಕಡೆಗಳಲ್ಲಿಯೂ; ಮಧುರ=ಇಂಪಾದ/ಸವಿಯಾದ; ಸಂಗೀತ=ಹಾಡು/ಗೀತೆ;

ನಿನ್ನೊಲುಮೆ ಪೂಜೆಯನು ನಾನೆಸಗಿದರೆ ದೇವ ಎಲ್ಲೆಲ್ಲು ಮಧುರ ಸಂಗೀತ ತುಂಬುವುದು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಯು ಸಹಮಾನವರೊಡನೆ ಒಲುಮೆಯಿಂದ ನಡೆದುಕೊಂಡರೆ,ಎಲ್ಲರೂ ಜೀವನಕ್ಕೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆದು ಬಾಳಬಹುದು. ಆಗ ಎಲ್ಲರ ಬದುಕು ಒಲವು ನಲಿವು ನೆಮ್ಮದಿಯಿಂದ ಕೂಡಿರುತ್ತದೆ.;

ಮುರಲಿ=ಕೊಳಲು/ವೇಣು; ನಾದ=ದನಿ; ತಂತಾನೆ=ತಾನಾಗಿಯೇ; ಹೊಮ್ಮು=ಹೊರಸೂಸು/ಹರಡು; ಕಾನನ=ಕಾಡು/ಅರಣ್ಯ; ತುಂಬ+ಎಲ್ಲ; ಅರಳು=ವಿಕಾಸವಾಗು/ಬಿರಿಯುವುದು;

ಮಧುರ ಮುರಲಿಯ ನಾದ ತಂತಾನೆ ಹೊಮ್ಮುವುದು ಕಾನನದ ತುಂಬೆಲ್ಲ ಹೂವು ಅರಳುವುದು=ಕೊಳಲಿನ ಇಂಪಾದ ದನಿಯು ತಾನಾಗಿಯೇ ಹೊರಹೊಮ್ಮುತ್ತಿರಲು, ಅದರ ದನಿಗೆ ಕಾಡಿನ ಮರಗಿಡಬಳ್ಳಿಗಳಲ್ಲಿ ಹೂಗಳು ಅರಳುವುವು. ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ವ್ಯಕ್ತಿಗಳು ಪರಸ್ಪರ ಪ್ರೀತಿಯ ನಡೆನುಡಿಯಿಂದ ಬಾಳಲು ತೊಡಗಿದರೆ, ತಾನಾಗಿಯೇ ಮಾನವ ಸಮುದಾಯದಲ್ಲಿ ಆನಂದ ಮತ್ತು ನೆಮ್ಮದಿ ನೆಲೆಗೊಳ್ಳುತ್ತದೆ;

ಈ ಕವನವನ್ನು ಮತ್ತೊಂದು ನೆಲೆಯಿಂದಲೂ ವಿವರಿಸಿಕೊಳ್ಳಬಹುದು. ಸಾವಿರಾರು ಮಂದಿ ಪ್ರತಿನಿತ್ಯವೂ ತಮ್ಮ ಮನೆಗಳಲ್ಲಿ ಮತ್ತು ಊರ ದೇಗುಲಗಳಲ್ಲಿ ದೇವರನ್ನು ಬಹುಬಗೆಗಳಲ್ಲಿ ಪೂಜಿಸುತ್ತಿದ್ದಾರೆ. ಬಡವರು ಸರಳವಾದ ರೀತಿಯಲ್ಲಿ ಪೂಜಿಸಿದರೆ, ಉಳ್ಳವರು ಬೆಲೆಬಾಳುವ ಒಡವೆವಸ್ತುಗಳನ್ನು ದೇವರಿಗೆ ಕಾಣಿಕೆಯಾಗಿ ನೀಡಿ ಆಡಂಬರದಿಂದ ಪೂಜಿಸುತ್ತಾರೆ.

ಆಗಾಗ್ಗೆ ದೇವರ ಇಲ್ಲವೇ ದೇಗುಲದ ಹೆಸರಿನಲ್ಲಿ ಜಾತಿಜಾತಿಗಳ ನಡುವೆ ಕೋಮುಕೋಮುಗಳ ನಡುವೆ ಹೊಡೆದಾಟಗಳು ಉಂಟಾಗಿ ನೂರಾರು ಮಂದಿ ಸಾವುನೋವುಗಳಿಗೆ ಗುರಿಯಾಗುತ್ತಿರುತ್ತಾರೆ. ಮೇಲು ಜಾತಿ, ಮೇಲು ವರ್‍ಗ ಮತ್ತು ಆಡಳಿತದ ಉನ್ನತ ಗದ್ದುಗೆಯಲ್ಲಿ ಕುಳಿತವರು ತಮ್ಮ ಸಂಪತ್ತನ್ನು ಮತ್ತು ಆಡಳಿತದ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಬಗೆಯ ಸನ್ನಿವೇಶಗಳನ್ನು ಹುಟ್ಟುಹಾಕುತ್ತಾರೆ. ದೇವರು ಮತ್ತು ದೇಗುಲವನ್ನು ಒಂದು ನೆಪವನ್ನಾಗಿ ಮಾಡಿಕೊಂಡು ದುಡಿಯುವ ವರ್‍ಗದ ಶ್ರಮಜೀವಿಗಳ ಮನದಲ್ಲಿ ಒಡಕನ್ನು ಉಂಟುಮಾಡಿ, ಸದಾಕಾಲ ಜನಮನದಲ್ಲಿ ಪರಸ್ಪರ ಅನುಮಾನ, ಆತಂಕ, ಅಸೂಯೆ ಮತ್ತು ಹಗೆತನವಿರುವಂತೆ ಮಾಡುತ್ತಾರೆ. ಜಗತ್ತಿನ ಚರಿತ್ರೆಯ ಉದ್ದಕ್ಕೂ ದೇವರು ಮತ್ತು ದೇಗುಲದ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಹರಿದಿರುವ ಮತ್ತು ಹರಿಯುತ್ತಿರುವ ಮಾನವರ ನೆತ್ತರ ಪ್ರಮಾಣಕ್ಕೆ ಮಿತಿಯೇ ಇಲ್ಲವಾಗಿದೆ.

ಆದ್ದರಿಂದಲೇ ಮಾನವ ಸಮುದಾಯದ ಒಳಿತಿಗಾಗಿ ಚಿಂತಿಸುವ ವ್ಯಕ್ತಿಗಳೆಲ್ಲರೂ ಮಣ್ಣು/ಕಲ್ಲು/ಮರ/ಲೋಹದ ವಿಗ್ರಹರೂಪಿ ದೇವರನ್ನು ಮತ್ತು ಆಡಂಬರದ ಆಚರಣೆಗಳಿಂದ ಕೂಡಿರುವ ದೇಗುಲವನ್ನು ನಿರಾಕರಿಸಿ, ನಿತ್ಯ ಜೀವನದಲ್ಲಿ ಸಹಮಾನವರ ಜತೆಯಲ್ಲಿ ಒಳ್ಳೆಯ ನಡೆನುಡಿಗಳಿಂದ ದೇವರನ್ನು ಪೂಜಿಸುತ್ತಾರೆ. ಇಂತಹವರ ಪಾಲಿಗೆ ದೇವರ ಪೂಜೆ ಎಂದರೆ “ಪ್ರೀತಿ, ಕರುಣೆ ಮತ್ತು ಗೆಳೆತನದ ನಡೆನುಡಿ”.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *