ಹೀಗೂ ಇರಬಹುದಾ ?

– ನಿತಿನ್ ಗೌಡ.

ನಮ್ಮ ಜಗತ್ತಿನಲ್ಲಿ ಹಲವು ಸಂಗತಿಗಳು ನಡೆಯುತ್ತಿರುತ್ತವೆ. ಅದರಲ್ಲಿ ಹಲವು ಸಂಗತಿಗಳು ಏಕೆ‌ ಹೀಗೆ, ಹೀಗೂ ಇರಬಹುದೇ! ಎನ್ನುವ ಗೋಜಿಗೆ ಹಲವರು‌ ಹೋಗುವುದಿಲ್ಲ. ಅವು‌ ಇರುವುದೇ ಹಾಗೆ ಅನ್ನುವ ನಂಬಿಕೆಯಲ್ಲಿ ಸಾಗುತ್ತೇವೆ. ಅಂತಹುದೇ ಕೆಲವು‌ ಸಂಗಂತಿಗಳನ್ನು ನೋಡೋಣ.

1.ಬಾರತ ಇತ್ತೀಚೆಗೆ ತನ್ನ ಚಂದ್ರಯಾನ-3 ನ್ನು ಯಶಸ್ವಿಗಾಗಿ ನಡೆಸಿದೆ. ಬಾರತಕ್ಕಿಂತಲೂ ಮೊದಲು ರಶ್ಯ,ಅಮೇರಿಕ, ಚೀನಾ ಈ ಸಾದನೆ ಮಾಡಿದ್ದರೂ, ಬಾರತಕ್ಕೆ ಹೆಚ್ಚು ಹೆಗ್ಗಳಿಕೆ. ಇದಕ್ಕೆ ಕಾರಣ; ಬಾರತ ಚಂದ್ರನ ತೆಂಕಣ ತುದಿಯಲ್ಲಿ(south Pole ) ಲಗ್ಗೆಯಿಟ್ಟ ಜಗತ್ತಿನ ಮೊದಲ ರಾಶ್ಟ್ರವಾಗಿದೆ. ಚಂದ್ರನ ತೆಂಕಣ ತುದಿಯಲ್ಲಿ ನೀರು ಇರಬಹುದು ಎಂಬ ಊಹೆಯಿದ್ದು; ಒಂದು ವೇಳೆ ನೀರಿರುವ ಕುರುಹು ದೊರೆತಲ್ಲಿ, ಇದು ಜಗತ್ತಿಗೇ ಸಂತಸದ ಸಂಗತಿಯಾಗಲಿದೆ. ಒಂದು ವೇಳೆ ನೀರು ದೊರೆತಲ್ಲಿ, ಈ ನೀರನ್ನು ಬಳಸಿ, ಬಾನಬಂಡಿಗಳಿಗೆ ಉರುವಲನ್ನು ತಯಾರಿಸಿಕೊಳ್ಳಬಹುದು. ಚಂದ್ರನ ತಲುಪಲು ಉರುವಲು ಒಯ್ದರೆ ಸಾಕು; ಬರುವಾಗ ಅಲ್ಲಿನ ನೀರಿನಿಂದ ಉರುವಲನ್ನು ತಯಾರಿಸಿ ಬಳಸಿಕೊಳ್ಳಬಹುದು. ಚಂದ್ರನಲ್ಲಿ ಹೋಗುವ ಬಾನೋಡಿಗರಿಗೆ / ಬಾನಪಯಣಿಗರಿಗೆ (Astronauts) ನೀರು ಒದಗಿಸಬಹುದು. ಬಾನಲ್ಲಿ, ಬಾನಬಂಡಿಗಳು ಬೇರೆಯೆಡೆಗೆ ಹೋಗುವ ಮುನ್ನ, ಚಂದ್ರನಲ್ಲಿ ನಿಲುಗಡೆ ಸ್ತಾಪಿಸಿ, ಅಲ್ಲಿ ಉರುವಲನ್ನು ಮರುತುಂಬಿಸಿಕೊಳ್ಳಬಹುದು. ಇಶ್ಟೇ ಅಲ್ಲ ಚಂದ್ರಯಾನ-3 ರ ಒಟ್ಟೂ ಕರ್‍ಚು/ಬಜೆಟ್ಚು ಕೇವಲ 750 ಕೋಟಿ. ಇದು ಹಾಲಿವುಡ್ ನ ಇಂಟರ್ ಸ್ಟೆಲ್ಲರ್ ಸಿನಿಮಾ ಅರ್‍ದ ಬಜೆಟ್ ಗಿಂತ ಕಡಿಮೆ($165 ಮಿಲಿಯನ್- ಅಂದಾಜು 1400 ಕೋಟಿ) . ಇದೇ ಕಾರಣಕ್ಕೆ ಚಂದ್ರಯಾನ-3 ಎಲ್ಲರ ಹುಬ್ಬೇರುವಂತೆ ಮಾಡಿದೆ.

2. ಚಂದ್ರ ಒಂದು ಬಗೆಯ ಸುತ್ತಗ. ಇದು ತನ್ನದೇ ಆದ ಬೆಳಕನ್ನು ಹೊಂದಿಲ್ಲ‌. ಇದು ನೇಸರನ ಬೆಳಕನ್ನು ಮರುಹೊಳೆಸುವ(reflect) ಮೂಲಕ ಹೊಳೆಯುವಂತೆ ಕಾಣುತ್ತದೆ.

3. ತುಂಬು ಹುಣ್ಣಿಮೆಯ ದಿನ, ಬೂಮಿಯಿಂದ ನೋಡಿದಾಗ ಚಂದ್ರ ಜಗಮಗನೆ ಹೊಳೆಯುತ್ತಿರುತ್ತಾನೆ. ಆದರೆ, ಸೋಜಿಗದ ಸಂಗಂತಿಯೆಂದರೆ, ತುಂಬು ಇಳೆಯನ್ನು ಚಂದಿರನಿಂದ ನೋಡಿದಲ್ಲಿ, ಚಂದಿರನಿಗಿಂತಲೂ ನಮ್ಮ‌ ಇಳೆ ಇನ್ನೂ ಹೆಚ್ಚಾಗಿ ಮಿನುಗುತ್ತದೆ. ಇದಕ್ಕೆ ಕಾರಣ,ನೇಸರನ ಬೆಳಕಿನ ಕದಿರುಗಳನ್ನು ಮರುಕಳಿಸುವ ಗುಣ(reflectivity) ಚಂದ್ರನಿಗೆ(11%) ಹೋಲಿಸಿದಲ್ಲಿ ನಮ್ಮ‌ ಇಳೆಯದು ಹೆಚ್ಚಿದೆ(37%). ಇದಕ್ಕೆ‌ ಒಂದು ಮುಕ್ಯ ಕಾರಣ ಚಂದ್ರನ ಮೇಲ್ಮೈ ಹೆಚ್ಚಾಗಿ ಇದ್ದಿಲ ಬಣ್ಣ ಹೊಂದಿದೆ. ಬೂಮಿಯ ಮೇಲಿನ ಕಡಲ ನೀರು, ಹಸಿರು ಮರಗಿಡಗಳು ಬೆಳಕನ್ನು ಇನ್ನೂ ಚೆನ್ನಾಗಿ ಮರುಕಳಿಸಬಲ್ಲವು.

4. ಹಿಮನದಿ, ಗುಡ್ಡಗಾಡು ಮತ್ತು ಗಟ್ಟಗಳಿಂದ ಹರಿದು ಬರುವ ಕುಡಿಯಲು ಯೋಗ್ಯವಿರುವ ಬಹುಪಾಲು ನೀರು, ಕಡಲಿನ‌ ಉಪ್ಪು ನೀರನ್ನು ಸೇರುತ್ತದೆ. ಹೀಗೆ ಸೇರುವ ನೀರು‌ ಪೋಲಾಗುತ್ತಿದೆ ಎಂಬ ನಿಲುವು ಯಾರಲ್ಲಾದರು ಇದ್ದರೆ, ಅದು ತಪ್ಪು. ಹೀಗೆ ನೀರು ಕಡಲ ಸೇರುವುದರಿಂದ, ಅದರಲ್ಲಿರುವ ಉಪ್ಪು,ಲವಣಾಂಶ ಒಂದು ಸಮತೋಲನಕ್ಕೆ ಬರುತ್ತದೆ. ಇದರಿಂದ ಅಲ್ಲಿ ಬದುಕುವ ಜೀವಸಂಕುಲಕ್ಕೆ‌ ನೆರವಾಗುತ್ತದೆ. ಅಲ್ಲದೇ ಇದು ನಮ್ಮ ಸುತ್ತಣ ಹವಾಮಾನದ ಮೇಲೂ ಪರಿಣಾಮ ಹೊಂದಿರುತ್ತದೆ. ಹೀಗಾಗದೇ ಹೋದಲ್ಲಿ, ಹವಾಮಾನದಲ್ಲಿ ತಳಮಳ ಕೂಡಾ ಉಂಟಾಗಬಹುದು. ಆದ್ದರಿಂದ ಈ ಒಂದು ಪ್ರಕ್ರಿಯೆ, ನಮ್ಮ‌ ಸುತ್ತಣಕ್ಕೆ ಸಹಜ ಮತ್ತು ಅವಶ್ಯಕವಾಗಿದೆ.

5.ನಾವು ಬದುಕುತ್ತಿರುವುದು 3D( ಮೂರು ಆಯವುಳ್ಳ) ಜಗತ್ತಿನಲ್ಲಿ. ಎತ್ತುಗೆಗೆ ಈ ಜಗತ್ತಿನಲ್ಲಿ ಉದ್ದ,ಅಗಲ,ಆಳ ಈ‌ ಮೂರು ಆಯಗಳನ್ನು ನಾವು ಕಾಣಬಹುದು. ಆದರೆ ಸೋಜಿಗದ ಸಂಗತಿಯೆಂದರೆ, ನಮ್ಮ ಕಣ್ಣುಗಳಿಗೆ ಕೇವಲ ಎರಡು ಆಯಗಳನ್ನು(2D) ಗುರುತಿಸುವ ಕಸುವು ಮಾತ್ರವಿದ್ದು, ಇದು ಆಳವನ್ನು ಗುರುತಿಸಲಾಗದು. ಆದರೂ ನಾವು ಒಂದು ವಸ್ತುವಿನ ಆಳವನ್ನು‌ ನೋಡಲು ಸಾದ್ಯವಾಗುತ್ತಿದೆ ಹೇಗೆ? ಇದಕ್ಕೆ ಕಾರಣ ನಮ್ಮ ಮೆದುಳು ನಮ್ಮ ಮೇಲೆ ಮಾಡುತ್ತಿರುವ ಒಂದು ಚಳಕ. ಒಂದು ಬಗೆಯಲ್ಲಿ ನಮ್ಮನ್ನು ಮೂರ‌್ಕರನ್ನಾಗಿ‌ ಮಾಡುತ್ತಿದೆ. ಇದನ್ನು ಸ್ಟೀರಿಯೋ ಸ್ಕೋಪಿಕ್ ನೋಟ (Stereoscopic vision) ಎನ್ನುವರು. ನಾವು ಏನನ್ನಾದರೂ ನೋಡಿದ ತಕ್ಶಣ, ಆ ವಸ್ತುವಿನ ಎರಡು ಬಗೆಯ ತಿಟ್ಟಗಳು(2D images) ನಮ್ಮ ಮೆದುಳಿಗೆ ಕಳುಹಿಸಲ್ಪಡುತ್ತದೆ. ಈ ಎರಡು ತಿಟ್ಟಗಳನ್ನು ಬಳಸಿ, ಒರೆ ಹಚ್ಚಿ ನಮ್ಮ ಮೆದುಳು ಆ ವಸ್ತುವಿಗೆ ಆಳವನ್ನೂ ಸೇರಿಸಿ ದಿಟವಾದ ತಿಟ್ಟವನ್ನು ಕಟ್ಟುತ್ತದೆ ಮತ್ತು ಮುಂದೆ ಸಮಯ ಬಂದಾಗ ಬಳಸಿಕೊಳ್ಳುವ ಸಲುವಾಗಿ ಈ ಮಾಹಿತಿಯನ್ನು ತನ್ನಳೊಗೆ ಕೂಡಿಟ್ಟುಕೊಂಡಿರುತ್ತದೆ.

ಇಂತಹುದೇ ಕೆಲವು‌ ಸಂಗತಿಗಳನ್ನು‌ ಮುಂದಿನ ಕಂತಲ್ಲಿ‌ ನೋಡೋಣ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications